ಬೇಡವೇ ಬೇಡ!

ಕೊಳ್ಳುಬಾಕ ಸಂಸ್ಕೃತಿ. ಇದೊಂದು ದೈತ್ಯ ಪಿಶಾಚಿ. ಎಲ್ಲೆಲ್ಲೂ ಇದರ ವಿರಾಟ್ ಅವತಾರವನ್ನು ಕಾಣುತ್ತಿದ್ದೇವೆ. ಆಸೆಯ ಗಾಲಿಗಳ ಮೇಲೆ ಸಾಗಿದ್ದೇವೆ. “ಬೇಕು” ಎಂಬುದು ಸರ್ವತ್ರ ಮಂತ್ರವಾಗಿದೆ. ಈ ಕೊಳ್ಳುವ ಸಂಸ್ಕೃತಿಯ ಮೈನೇವರಿಸಲು ಕಲಿಸಿದ ಅಮೆರಿಕೆಯಲ್ಲೂ ಇದರ ಹಾವಳಿ ಈಗ ಕಡಿಮೆಯಿಲ್ಲ. ಅದರ ವಿರುದ್ಧ ಆಂದೋಲನವೇ ಶುರುವಾಗಿದೆ. ಎಷ್ಟೆಲ್ಲಾ ಕೊಳ್ಳುವ ದಿನಗಳ ನಡುವೆ ಏನನ್ನೂ ಕೊಳ್ಳದಿರುವ ಒಂದು ದಿನವೂ ಅಲ್ಲಿ ಆಚರಿಸಲ್ಪಡುತ್ತಿದೆ. 
…………………………..  
ವಸಂತರಾಜ ಎನ್ ಕೆ

vasantrajnew.jpgಮೆರಿಕೆಯಲ್ಲಿ  “ಬಕಾಸುರ” ಸಂಸ್ಕೃತಿ (ಕೊಳ್ಳುಬಾಕತನ) ಎಷ್ಟು ತೀವ್ರವಾಗಿದೆಯೆಂದರೆ ಇಲ್ಲಿ ಅದರ ವಿರುದ್ಧ ಚಳುವಳಿ ಹುಟ್ಟಿಕೊಂಡಿದೆ. ಹಲವು ಗ್ರಾಹಕ ಚಳುವಳಿಗಳು, ಪರಿಸರವಾದಿ ಚಳುವಳಿಗಳು ಈ “ಬಕಾಸುರ ಸಂಸ್ಕೃತಿ”ಯನ್ನು ಕಿತ್ತೊಗೆಯಲು ಹೆಣಗುತ್ತಿವೆ. ಜಾಹೀರಾತುಗಳ ಭರಾಟೆ, ಅನಗತ್ಯ ವಸ್ತುಗಳ ಶಾಪಿಂಗ್ ರೋಗ, ಕ್ರೆಡಿಟ್ ಕಾರ್ಡು ಮಹಾಪೂರ, ವರ್ಷಕ್ಕೊಂದು ಮಾಡೆಲ್ ಹಿಂದೆ ಹೋಗುವ ಹುಚ್ಚು “ಬಕಾಸುರ ಸಂಸ್ಕೃತಿ”ಯ ಈ ಎಲ್ಲಾ ಅನಗತ್ಯಗಳ ವಿರುದ್ಧ ಹೆಣಗುತ್ತಿವೆ. “ಆಡ್-ಬಸ್ಟರ್ಸ್”(ಜಾಹೀರಾತು ಭಂಜಕರು) ಎಂಬ ಸಂಘಟನೆಯೊಂದು ಪ್ರತಿವರ್ಷ ನವೆಂಬರ್ ೨೭ನ್ನು Buy Nothing Day (ಇಂದು ಏನನ್ನೂ ಕೊಳ್ಳಬೇಡಿ) ದಿವಸವಾಗಿ ಆಚರಿಸುತ್ತದೆ. ಈ ಸಂಘಟನೆಯ ಅಮೆರಿಕನ್ ಹಾಗೂ ಯುರೋಪಿನ ಹಲವು ದೇಶಗಳ ಪಟ್ಟಣಗಳಲ್ಲಿರುವ ಕಾರ್ಯಕರ್ತರು ಆ ದಿನ ಪ್ರಮುಖ “ಮಾಲ್”ಗಳಿಗೆ ಹೋಗಿ “ಅನಗತ್ಯ ವಸ್ತುಗಳನ್ನು ಖರೀದಿ ಮಾಡಬೇಡಿ” ಎಂದು “ಬಕಾಸುರ ಸಂಸ್ಕೃತಿ”ಯ “ವಿಕಾರ ಮುಖ”ಗಳ ಬಗ್ಗೆ ಪ್ರಚಾರ ಮಾಡುತ್ತಾರೆ.

buy.jpgಆ ದಿನ ಪ್ರಮುಖ ಟಿವಿ ಸ್ಟೇಶನ್ ಗಳಲ್ಲಿ “ಏನನ್ನೂ ಕೊಳ್ಳಬೇಡಿ-ಇಂದು” ಅಂತ ೬೦ ಸೆಕೆಂಡಿನ ಜಾಹೀರಾತು ಸಹ ಹಾಕಿತ್ತು. ಈ ಜಾಹೀರಾತು ಒಂದು ಸಿಕ್ಕಿದ್ದೆಲ್ಲಾ ಮುಕ್ಕುತ್ತಿರುವ ಹಂದಿಯ ಚಿತ್ರ ತೋರಿಸುತ್ತಾ ಈ ದೇಶದ ಸರಾಸರಿ ಮನುಷ್ಯ ಮೆಕ್ಸಿಕನ್ ಗಿಂತ ಐದು ಪಟ್ಟು ಹೆಚ್ಚು, ಚೀನಿಯರಿಗಿಂತ ಹತ್ತು ಪಟ್ಟು ಹೆಚ್ಚು, ಭಾರತೀಯರಿಗಿಂತ ಮೂವತ್ತು ಪಟ್ಟು ಹೆಚ್ಚು ವಸ್ತುಗಳನ್ನು ಉಪಭೋಗಿಸುತ್ತಾನೆ. ಇದೇ ರೀತಿಯಲ್ಲಿ ಎಲ್ಲಾ ಜನ ಉಪಭೋಗಿಸಿದರೆ ಇಡೀ ಜಗತ್ತು ಇಲ್ಲವಾಗಬಹುದು ಅಂತ ಎಚ್ಚರಿಸುತ್ತದೆ. “ಜಾಹೀರಾತು-ಭಯಂಕರ ವಿವರಗಳನ್ನು ಕೊಡುತ್ತದೆ. ಜಗತ್ತಿನ ಕೇವಲ ಶೇಕಡಾ ೬ ಜನಸಂಖ್ಯೆ ಇರುವ ಈ ದೇಶದ ಶಕ್ತಿಯ ಬಳಕೆ ಜಗತ್ತಿನ ಶೇಕಡಾ ೩೦ರಷ್ಟು ಮಾತ್ರವಲ್ಲ ಎಲ್ಲಾ ದೇಶಗಳ ಶೇಕಡಾ ೨೦ರಷ್ಟು ಶ್ರೀಮಂತರು (ಇವರು ಅಮೆರಿಕಾ, ಯುರೋಪು, ಜಪಾನ್ ಆಸ್ಟ್ರೇಲಿಯಾಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ) ಜಗತ್ತಿನ ಶೇಕಡಾ ೭೦ ಭೌತಿಕ ಸಾಮಗ್ರಿಗಳನ್ನು ಉಪಭೋಗಿಸುತ್ತಾರೆ ಎನ್ನುತ್ತದೆ. ಜಗತ್ತಿನ ಸಾಮಾನ್ಯ ಪರಿಸರ ಸಮಸ್ಯೆ “ಓಝೋನ್ ಪದರದಲ್ಲಿ ರಂಧ್ರ”, “ಆಸಿಡ್-ಮಳೆ” ಇತ್ಯಾದಿ ಅಪಾಯಗಳಿಗೆ ಅರ್ಧಕ್ಕಿಂತಲೂ ಹೆಚ್ಚು ಕಾರಣ “ಅಮೆರಿಕನ್ ಲೈಫ್ ಸ್ಟೈಲ್” ಎನ್ನುತ್ತದೆ. ಆದರೆ ಅದರ ಪರಿಣಾಮ ಇಡೀ ಜಗತ್ತಿನ ಮೇಲೆ.

ಈ ಬಕಾಸುರ ಸಂಸ್ಕೃತಿಯ ವಿರಾಟ್ ದರ್ಶನವಾಗಬೇಕಾದರೆ “ಮಾಕ್ ಡೋನಲ್ಡ್”ಗೆ ಹೋಗಬೇಕು ಅಂತಾರೆ ನಮ್ಮ ಮಿತ್ರರು. ಮ್ಯಾಕ್ ಡೊನಾಲ್ಡ್ ಇಲ್ಲಿನ ಫಾಸ್ಟ್ ಫುಡ್ ಚೈನ್ – ನಮ್ಮ ಉಡುಪಿ ಹೋಟೆಲುಗಳ ಹಾಗೆ. ಇದು ಅಮೆರಿಕನ್ (ಬಕಾಸುರ) ಸಂಸ್ಕೃತಿಯ ಸಂಕೇತ. (ಉದಾಹರಣೆಗೆ, ಪೂರ್ವ ಯುರೋಪ್, ಮಾಜಿ ಸೋವಿಯತ್ ಒಕ್ಕೂಟದ ದೇಶಗಳಲ್ಲಿ ಅಮೆರಿಕನ್ ಪ್ರಭಾವ ಹೆಚ್ಚುತ್ತಿದೆ ಎನ್ನಲು, ಎಲ್ಲಾ ನಗರಗಳಲ್ಲಿ “ಮಾಕ್ ಡೋನಾಲ್ಡ್” ಕಾಣಸಿಗುತ್ತದೆ ಎನ್ನುತ್ತಾರೆ. ನಮ್ಮ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಒಂದು ಮ್ಯಾಕ್ ಡೊನಾಲ್ಡ್ ತೆರೆದಿದೆಯಲ್ಲ!) ಅಲ್ಲಿ ಕೆಲವರು ಕೂತು ಇಡೀ ದಿನ ತಿನ್ನುತ್ತಲೇ ಇರುತ್ತಾರಂತೆ. ಮಾಲ್ ಗಳಲ್ಲಿ ಕೆಲವರು ಇಡೀ ದಿನ “ಶಾಪಿಂಗ್” ಮಾಡುವಂತೆ. ಇಂತಹ ಬಕಾಸುರರಿಗೆ ಸಹಾಯ ಮಾಡಲು ಇನ್ನೂ ಹೆಚ್ಚು ತಿನ್ನಲು ಹೊಟ್ಟೆ ಖಾಲಿ ಮಾಡಲು, ಈಗಾಗಲೇ ತಿಂದದ್ದು ವಾಂತಿ ಮಾಡಲು ಔಷಧಿ ಇಟ್ಟಿರುತ್ತಾರಂತೆ. ನಾನಾಗಿ ನೋಡಿಲ್ಲ. ಆದರೂ ನನ್ನ ಮಿತ್ರರನ್ನು ನಂಬಬಹುದು. ಇಲ್ಲಿನ ಬಕಾಸುರ ಸಂಸ್ಕೃತಿಯ ಪರಾಕಾಷ್ಠೆ ಇದಾಗಿರಬಹುದು.

‍ಲೇಖಕರು avadhi

August 27, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This