ಬೊಳುವಾರರಿಗೆ ಒ೦ದು ಪತ್ರ

ನಾನು ಓದಿದ ’ಸ್ವಾತ೦ತ್ರ್ಯದ ಓಟ’…

– ವಿ ಎನ್ ಲಕ್ಷ್ಮಿನಾರಾಯಣ

ಪ್ರಿಯ ಬೋಳುವಾರ್   ನನ್ನದೇ ಕಾರಣಗಳಿಂದಾಗಿ ತುಂಬಾ ನಿಧಾನವಾಗಿ,ಇಂದು ನಿಮ್ಮ ಕಾದಂಬರಿಯನ್ನು ಓದಿ ಮುಗಿಸಿದೆ. ನೀವು ಒಂದೊಂದು ಅಕ್ಷರವನ್ನೂ ಕೆತ್ತಿದಂತೆ ನಾನು ಒಂದೊಂದು ಅಕ್ಷರವನ್ನೂ ಕಾಗುಣಿತದ ಪಲ್ಲಟಗಳೊಂದಿಗೆ ಓದಿದ್ದೇನೆ. ಪ್ರಾರಂಭದ ಐನೂರು ಪುಟಗಳನ್ನು (ನನಗೆ ಗೊತ್ತಿಲ್ಲದ)ಹೊಸ ಪದಗಳ ಗುರುತು, ಮುದ್ರಣ ದೋಷ, ತೇಪೆ, ಪುನರುಕ್ತಿ, ಸೂಚ್ಯತೆಯ ಅವಗಣನೆ, ರಾಚನಿಕ ಶಿಥಿಲತೆ ಮುಂತಾದ ‘ದೋಷ’ ಗಳನ್ನು ಗೆರೆ ಎಳೆದು ಗುರುತಿಸುತ್ತಲೇ ನನ್ನ ಪೆನ್ನಿಗೆ ದಕ್ಕದ ಕಣ್ಣೀರನ್ನು ಹತ್ತಿಕ್ಕುತ್ತಲೇ ಓದಿದೆ. ಮುಂದಿನ ಪುಟಗಳು ನನ್ನ ಯತ್ನವನ್ನು ನಿರರ್ಥಕವೆನಿಸುವಂತೆ ಮಾಡಿದ್ದರಿಂದ ಕೈಬಿಟ್ಟು ಸುಮ್ಮನೆ ಓದಿಕೊಂಡು ಹೋದೆ. ತುಂಬಾ ಆಕಸ್ಮಿಕಗಳು ಕತೆಯ ಹೆಣಿಗೆಯಲ್ಲಿ ಇರುವುದು ನಿಜ. ಸ್ವಲ್ಪ ಎಡಿಟ್ ಮಾಡಿದರೆ ಬಹಳಷ್ಟು ತೇಪೆಗಳು ಇಲ್ಲವಾಗಬಹುದು. ಓದುಗನ ಸಂವೇದನೆಯ ಮೇಲೆ ಪೂರ್ಣ ನಂಬಿಕೆಯಿರಿಸಿದರೆ ‘ಸಕಾರಣ ವಿವರಣೆ’ಯೂ ನಿವಾರಣೆಯಾಗಬಹುದು. ಇಷ್ಟಾದರೂ ನಿಮ್ಮ ಪಾತ್ರಗಳ ತಿಳುವಳಿಕೆ, ಜ್ಞಾನ, ಜಾಣ್ಮೆ, ನಿಮ್ಮ ಪಾತ್ರಗಾರಿಕೆ, ಸಂಬಂಧಗಳ ಜೋಡಣೆ, ಘಟನೆಗಳ ಹೆಣಿಗೆಯ ಮುಂದೆ ಅವೆಲ್ಲಾ ನಗಣ್ಯವಾಗುತ್ತವೆ. ‘ನಿಮ್ಮ ದೇವರಿಗೆ ಹೆಂಡತಿ ಇದ್ದಿದ್ದರೆ … ‘ಧಾಟಿಯಲ್ಲಿ ಹೇಳುವುದಾದರೆ ವ್ಯಾಸ, ವಾಲ್ಮೀಕಿ ನಮ್ಮ ಮಧ್ಯೆ ಇದ್ದಿದ್ದರೆ ಅವರು ನಿಮ್ಮ ಹಾಗೆಯೇ ಇರುತ್ತಿದ್ದರೇನೋ ಅನ್ನಿಸುತ್ತದೆ. ನಿಮ್ಮ ಕಾದಂಬರಿಯನ್ನು ಅದರ ಎಲ್ಲ ಓರೆ-ಕೋರೆಗಳೊಂದಿಗೆ ಪೂರ್ಣವಾಗಿ ಅನುಭವಿಸಬೇಕಿದ್ದರೆ ತುಂಬಾ ವ್ಯಾಪಕವಾದ, ಆಳವಾದ ತಿಳುವಳಿಕೆ ಬೇಕಾಗುತ್ತದೆ. ಹಾಗೆಂದು ಅದಿಲ್ಲದ ಓದುಗರಿಗೆ ನಿಲುಕುವುದಿಲ್ಲ ಎಂದು ಹೇಳಲಾಗದು. ಅವರವರಿಗೆ ದಕ್ಕುವಷ್ಟು ಸಿಗಬಲ್ಲ ಪಾತಳಿಗಳು ನಿಮ್ಮ ಕಾದಂಬರಿಯಲ್ಲಿ ಇವೆ. ಒಟ್ಟಿಗೆ ತಾತ್ವಿಕ-ಜನಪ್ರಿಯ ಬರಹ ಇದು. ಈಚೆಗೆ ಲೇಖನವೊಂದರಲ್ಲಿ, ‘ಜೀವನನಿಷ್ಠರಾದ’ ಕಾರಂತರ ಬರವಣಿಗೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಡವರ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಎಡರಾಜಕಾರಣಕ್ಕೆ ಸ್ಥಳಾವಕಾಶ ಸಿಗದ ‘ಆಯ್ದ ಮರೆವು’ ಅಥವಾ ‘ಬಲಪಕ್ಷಪಾತ’ವನ್ನು ಕಮ್ಯೂನಿಸಂ ಕುರಿತಾದ ಅವಜ್ಞೆಯ ಪ್ರಶ್ನೆಯ ಸಂದರ್ಭದಲ್ಲಿ ಗುರುತಿಸಲಾಗಿತ್ತು. ನಿಮ್ಮ ಕಾದಂಬರಿಯಲ್ಲಿ ಮಹಮದೀಯ ಮತ್ತು ಮನುವಾದಿ ಪಾತ್ರಗಳ ಜೊತೆ/ಎದುರುನಿಲ್ಲಬಹುದಾದ ಎಡಪಂಥೀಯ ಮನಸ್ಸುಗಳಿಗೆ ಜಾಗಸಿಕ್ಕಿಲ್ಲ ಎಂಬುದು ಗಮನಕ್ಕೆ ಬರುತ್ತದೆ. ಇದು ಎಡ-ಬಲಗಳ ‘ಕೋಟಾ’ ದ ಪ್ರಶ್ನೆಯಲ್ಲ. ಬೀಡಿ ಸುತ್ತುವ ಬಡವರ ಜೀವನವನ್ನು ಚಿತ್ರಿಸುವಾಗ ದಕ್ಷಿಣ ಕನ್ನಡದ ಜನಜೀವನದ ಈ ಆಯಾಮ ಹೇಗೆ ಹೊರಗುಳಿಯಿತು ಎಂಬ ಪ್ರಶ್ನೆ ಕಾಡುತ್ತದೆ. ಮತ-ಧರ್ಮ-ಮಾನವತೆಯ ಕೇಂದ್ರಬಿಂದುವಿನ ಜೀವನಭಾಗ ಇದೂ ಅಲ್ಲವೆ? ನಿಮ್ಮ ಆಲೋಚನಾಕ್ರಮದಲ್ಲಿ ಇದಕ್ಕೆ ಕಾರಣ ಸಿಗುತ್ತದೆಯೆ? ತೆಲುಗು ಭಾಷಿಕರು ಮಾತನಾಡುವಾಗ ಕನ್ನಡಕ್ಕೆ ಹೋಲಿಸಿದರೆ ತಲೆಕೆಳಗೆನ್ನಿಸುವ ವಾಕ್ಯ ರಚನೆಯನ್ನು ಬಳಸುವುದನ್ನು ಗಮನಿಸಿದ್ದೇನೆ. ಸಂಸ್ಕೃತದ ವಾಕ್ಯರಚನೆಗೆ ಮೊದಲು-ಕೊನೆಯೆಂಬುದಿಲ್ಲ. ‘ಸಾಬಿ’ ವಾಕ್ಯರಚನೆ ಯಾವಾಗಲೂ ಹೀಗಿದೆಯೋ ಇಲ್ಲವೋ ನನಗೆ ತಿಳಿಯದು. ಆದರೆ ನಿಮ್ಮ ನಿರೂಪಣೆ ಮಾತ್ರ ಮೊದಲಿಂದ ಕೊನೆಯ ಕಡೆ ಹರಿಯದೆ ಕೊನೆಯಿಂದ ಮೊದಲಿಗೆ,ಮುಂದಿನಿಂದ ಹಿಂದಕ್ಕೆ ಅಥವಾ ಎಲ್ಲಿಂದ ಎಲ್ಲಿಗೆ ಬೇಕಾದರೂ ಹರಿಯುತ್ತದೆ. ತೊಂದರೆಯೇನಿಲ್ಲ. ನಾನು ನಿರೂಪಣಾ ತಂತ್ರಗಳ ಬಗ್ಗೆ ಹೇಳುತ್ತಿಲ್ಲ. ಜಯಂತಕಾಯ್ಕಿಣಿಯ ಕತೆಗಳಲ್ಲಿ ಹಿಂದಿ ಸಿನಿಮಾ ಕತೆಯಂತೆ ಎಲ್ಲಿ ಯಾವಾಗ ಏನು ಬೇಕೋ ಅದು ಸಿದ್ಧವಾಗಿ ಸಿಕ್ಕಿಬಿಡುತ್ತದೆ. ‘ಹಾಂ ಹೇಳಲು ಮರೆತಿದ್ದೆ’ ಎಂದು ಜೋಡಿಸಿಕೊಳ್ಳುವ ವಿವರಗಳು ಓದುಗನಿಂದ ರಿಯಾಯತಿಯನ್ನು ಬೇಡುತ್ತವೆ. ಇಲ್ಲವೇ ಯಾಮಾರಿಸಲು ನೋಡುತ್ತವೆ. ನಿಮ್ಮ ಬರವಣಿಗೆಗೆ ಈ ಗುಣ/ದೋಷವೂ ಇದೆ. ಕನ್ನಡದಲ್ಲಿ ಸ್ವಮೋಹವನ್ನು ಸಮುದಾಯದ ಪ್ರೀತಿಯಾಗಿ ವಿಸ್ತರಿಸಿಕೊಂಡು ಬರೆದ ಲೇಖಕರು ಬಹಳ ವಿರಳ. ಇಷ್ಟು ದೊಡ್ಡ ಭಿತ್ತಿಯನ್ನು ನಿರ್ಮಿಸಿಕೊಂಡು ಪ್ರಾರಂಭ-ಮಧ್ಯೆ-ಕೊನೆಗಳನ್ನು ನಿಮ್ಮದೇ ಆದ ವಿನ್ಯಾಸದಲ್ಲಿ ನಿಭಾಯಿಸಿರುವ ನಿಮ್ಮ ಕಥನ ಸಾಮರ್ಥ್ಯದ ಬಗ್ಗೆ ಹೆಮ್ಮೆಯಾಗುತ್ತದೆ. ಹಣಕ್ಕಾಗಿ ಬರೆದದ್ದಲ್ಲ ಎಂಬ ನಿಮ್ಮ ಮಾತಿನಲ್ಲಿ ಅಪ್ರಾಮಾಣಿಕತೆ ಕಾಣಿಸುವುದಿಲ್ಲ. ಇಂಥ ಇನ್ನಷ್ಟು ಕಾದಂಬರಿಗಳನ್ನು ಕೊಡಿ ಎಂದು ಕೇಳಲಾರೆ. ಈ ಕಾದಂಬರಿಯನ್ನು ಕೊಟ್ಟ ನಿಮ್ಮ ಬಗ್ಗೆ ಪ್ರೀತಿ-ಮೆಚ್ಚುಗೆಗಳಿವೆ. ವಂದನೆಗಳೊಂದಿಗೆ ವಿ.ಎನ್.ಲಕ್ಷ್ಮೀನಾರಾಯಣ ಮೈಸೂರು.  ]]>

‍ಲೇಖಕರು G

August 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

ಅಭಿನವ ನಾಗರಾಜ ನವೀಮನೆ ಅವರ ಆನೆ ಕಥೆ ಕೃತಿಯನ್ನು ಹೊರತಂದಿದೆ. ಈ ಕೃತಿಯನ್ನು ಲೇಖಕರಿಗೆ ತಲುಪಿಸಿದ ಬಗ್ಗೆ ಅಭಿನವದ ಕೃಷ್ಣ ಚೆಂಗಡಿ ಅವರು...

ಟೀಕೆ ಮಾಡುವಾಗ ಸಂಯಮವಿರಲಿ..

ಟೀಕೆ ಮಾಡುವಾಗ ಸಂಯಮವಿರಲಿ..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು...

ಇದು ಯಾರೋ ಬೇಕೆಂದಲೇ ಬರೆಸಿದ್ದು..

ಇದು ಯಾರೋ ಬೇಕೆಂದಲೇ ಬರೆಸಿದ್ದು..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು...

2 ಪ್ರತಿಕ್ರಿಯೆಗಳು

 1. shantha kumari

  ಬೊಳುವಾರರ ಕಾದಂಬರಿಯನ್ನು ಓದಬೇಕೆಂಬ ಬಹಳ ದಿನದ ಅನಿಸಿಕೆಗೆ ಶ್ರೀಯುತ ವಿ.ಎನ್. ಲಕ್ಷೀನಾರಾಯಣರ ಪ್ರತಿಕ್ರಿಯೆ ಮತ್ತಷ್ಟು ತೀವ್ರತೆಯನ್ನು ತಂದಿದೆ. ಬಹುಶಃ ವಿ.ಎನ್.ಎಲ್.ರವರು ಕಮಲಾನೆಹರು ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿದ್ದವರು ಎಂದು ಭಾವಿಸುತ್ತೇನೆ. ಅವರೇ ಆಗಿದ್ದರೆ ನಾನು ಅವರ ವಿದ್ಯಾರ್ಥಿನಿ ಶಾಂತಾಕುಮಾರಿ. ಬರಹ ನೋಡಿದರೆ ಅವರೇ ಎಂದು ಅನಿಸುತ್ತಿದೆ. ತುಂಬಾ ಸಂತಸವಾಯಿತು. ಕಾಲೇಜು ದಿನಗಳಲ್ಲಿ ಅವರ ಚಿಂತನೆಗಳು ನಮ್ಮನ್ನು ಹೊಸರೀತಿಯಲ್ಲಿ ಬದುಕನ್ನು ನೋಡುವ ಹಾಗೆ ಮಾಡಿತು. ಈ ದಿನ ನಾನೇನಾಗಿದ್ದೇನೋ ಅದಕ್ಕೆ ಅವರ ಪ್ರಭಾವವೂ ಕಾರಣ ಎಂದುಕೊಳ್ಳಲು ಹೆಮ್ಮೆ ಅನಿಸುತ್ತಿದೆ. ಅವರಿಗೆ ನನ್ನ ನಮನಗಳನ್ನು ಈ ಮೂಲಕ ತಿಳಿಸಲು ಸಾಧ್ಯವಾಗಿದ್ದಕ್ಕೆ ಅವಧಿಗೆ ಧನ್ಯವಾದಗಳು.

  ಪ್ರತಿಕ್ರಿಯೆ
  • ವಿ.ಎನ್.ಲಕ್ಷ್ಮೀನಾರಾಯಣ

   ಮಾನ್ಯರೆ,
   ನಮ್ಮ ಕಾಲದ ಎಪಿಕ್ ಎನ್ನಬಹುದಾದ ಕಾದಂಬರಿ ಇದು ಎಂದು ನನ್ನ ಭಾವನೆ.ನೀವು ಓದಿದಮೇಲೆ ಕಾದಂಬರಿಯ ಬಗ್ಗೆ ವಿವರವಾಗಿ ಬರೆಯಿರಿ. ಈಗ ನೀವು ಏನುಮಾಡುತ್ತಿದ್ದೀರೋ ತಿಳಿಯದು. ಆದರೆ ನಿಮ್ಮಂಥ ವಿದ್ಯಾರ್ಥಿನಿಯರಿದ್ದ,ಇರುವ, ಕಮಲಾ ನೆಹರು ಕಾಲೇಜಿನಲ್ಲಿ ಈ ಪುಸ್ತಕವನ್ನು ಬಿಡುಗಡೆ ಮಾಡಿಸಬೇಕೆಂದು ಬೊಳುವಾರರನ್ನು ವಿನಂತಿಸಿದ್ದೇನೆ.ನಿಮ್ಮ ಸದ್ಭಾವನೆಗೆ,ಅವಧಿಗೆ, ಕೃತಜ್ಞ.ನನ್ನ ಇಮೇಲ್ ವಿಳಾಸ:[email protected]

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: