ಬೊಳುವಾರು ‘ನುಡಿಸಿರಿ’ಯಲ್ಲಿ

ಡಿ ಎಸ್ ಶ್ರೀನಿಧಿ -ನುಡಿಸಿರಿಯ ಸಭಾಂಗಣದಿಂದ

 

bolwarಮುಸ್ಲಿಂ ಬರಹಗಾರನೊಬ್ಬನ ಮನದ ಸಂವೇದನೆಗಳನ್ನು ಆಳ್ವಾಸ್ ನುಡಿಸಿರಿಯ ಕೊನೆಯ ದಿನದ ಬೆಳಗಿನ ಕಥಾಸಮಯದ ಬಗ್ಗೆ ಮಾತನಾಡಿದ ಬೊಳುವಾರು ಮಹಮದ್ ಕುಂಞ್ ಅತ್ಯಂತ ಸಮರ್ಥವಾಗಿ ನಮ್ಮೆದುರು ಬಿಡಿಸಿಟ್ಟರು. ತಾನು ಏನು- ತನ್ನ ಬರವಣಿಗೆಯ ಉದ್ದೇಶಗಳೇನು ಎಂಬುದನ್ನು ವಿವರಿಸುತ್ತಲೇ ತನ್ನ ಸುತ್ತಲ ಸಮಾಜ ತನ್ನ ಮೇಲೆ ಬೀರಿದ ಪರಿಣಾಮಗಳನ್ನು ಬೊಳುವಾರು ಚಿತ್ರಿಸಿದ ರೀತಿ ಅನನ್ಯ.

ಬೊಳುವಾರು, ಮಾತಿಗೆ ಆರಂಭಿಸುತ್ತಲೇ, ನನ್ನ ಹೆಸರಲ್ಲಿ ಮಹಮದ್ ಎಂಬ ಪದ ಇರುವುದರಿಂದ, ಮತ್ತು ನನ್ನ ಅಪ್ಪ ಅಥವ ಅಜ್ಜ ಒಂದು ಕಾಲದಲ್ಲಿ ಪಾಕಿಸ್ಥಾನದ ನಿರ್ಮಾಣಕ್ಕೆ ಕಾರಣಕರ್ತರಾಗಿರುವುದರಿಂದ ನಿಮಗೆಲ್ಲ ನನ್ನ ದೇಶಪ್ರೇಮದ ಬಗ್ಗೆ ಅನುಮಾನವಿರುತ್ತದೆ. ಮತ್ತು ಹಾಗಿಲ್ಲದೇ ಹೋದರೇ, ನಿಮ್ಮ ದೇಶ ಪ್ರೇಮದ ಬಗ್ಗೆ ನನಗೆ ಅನುಮಾನ ಬರುತ್ತದೆ ಅಂತ ಚಟಾಕಿ ಹಾರಿಸಿದರು.

ಆದರೆ ನಾನು ಕೂಡ ನಿಮ್ಮ ಹಾಗೆ ನಮ್ಮ ದೇಶವನ್ನು ಅತಿಯಾಗಿ ಪ್ರೀತಿಸುವವನು, ಮತ್ತು ಪಾಕಿಸ್ತಾನವನ್ನು ದ್ವೇಷಿಸಿವವನು, ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ಮ್ಯಾಚುಗಳನ್ನು ಪಾಕಿಸ್ತಾನದ ವಿರುದ್ಧ ಗೆದ್ದಾಗ ಪಟಾಕಿಗಳನ್ನು ಹಚ್ಚುತ್ತಿದ್ದವನು, ಆದ್ರೆ ಈಗ ಐ ಪಿ ಎಲ್  ಬಂದು, ಯಾರು ಯಾರು ಯಾವ ದೇಶಕ್ಕೆ ಸೇರಿದವರು ಎಂಬುದೇ ಕನ್ಫ್ಯೂಸ್ ಆಗಿ ಪಟಾಕಿ ಹೊಡೆಯುವುದು ಬಿಟ್ಟಿದ್ದೇನೆ ಎಂದರು ಬೊಳುವಾರು.

ನನಗೆ ಹುಟ್ಟುವ ಮೊದಲೇ ಅಜರ್ ಹಾಕುವ ಸೌಲಭ್ಯ ಇದ್ದಿದ್ದರೆ, ದಶರಥನ ಮಗ ರಾಮನಾಗಿಯೋ, ವಸುದೇವನ ಮಗನಾದ ಕೃಷ್ಣನಾಗಿಯೋ, ಶುಧ್ದೋದನನ ಮಗ ಬುದ್ಧನಾಗಿಯೋ ಹುಟ್ಟಿಸುವಂತೆ, ಕಡೇ ಪಕ್ಷ ಕರಮಚಂದನ ಮಗ ಮೋಹನದಾಸನಾಗುವಂತೆ ಅಜರ್ ಹಾಕುತ್ತಿದ್ದೆ, ಆದರೆ ಆ ಸೌಲಭ್ಯ ಇರಲಿಲ್ಲ. ಹೀಗಾಗಿ ಪುತ್ತೂರಿನ, ಬೀಡಿ ಕಟ್ಟುವ ಅಬ್ಬಾಸ್ ಬ್ಯಾರಿಯ ಮಗನಾಗಿ ಹುಟ್ಟಬೇಕಾಯಿತು. ಹಾಗೆ ಹುಟ್ಟಿದ ಮೇಲೆ, ಅಬ್ಬಾಸ್ ಬ್ಯಾರಿಯ ನಿಲುವಿಗೆ ನಾನೂ ಬದ್ಧನಾಗಬೇಕಾಯಿತು, ಆತನ ಸಂಪ್ರದಾಯಗಳೇ ನನ್ನ ಸಂಪ್ರದಾಯಗಳಾಗಬೇಕಾಯಿತು.

ನಾನು ಬರೆಯಲು ಆರಂಭಿಸುವಾಗ ನನ್ನಲ್ಲಿ ಎರಡು ತೆರನಾದ ಯೋಚನೆಗಳಿದ್ದವು. ಒಂದು, ಅಷ್ಟಾಗಿ ಕನ್ನಡದ ಮುಖ್ಯ ಓದುಗ ವಾಹಿನಿಗೆ ಪರಿಚಯವಿಲ್ಲದ ನನ್ನ ಸಮುದಾಯವನ್ನು ಓದುಗರಿಗೆ ಪರಿಚಯಿಸುವುದು ಮತ್ತು ಓದುವ ಆಸಕ್ತಿಯೇ ಇಲ್ಲದ ನನ್ನ ಸಮುದಾಯದ ಜನರನ್ನು ಓದಲು ಪ್ರೇರೇಪಿಸುವುದು. ಜೊತೆಗೆ, ಮುಸ್ಲಿಮರಲ್ಲೂ ಒಳ್ಳೆಯವವರು ಇರುತ್ತಾರಾ ಅನ್ನುವ ಯೋಚನೆಯನ್ನು ಇತರರಿಗೆ ಮೂಡಿಸುವುದು, ಅದರೊಂದಿಗೆ, ತಮ್ಮ ಸಮುದಾಯದ ಕಂದಾಚಾರಗಳನ್ನು ಎಂದಿನಿಂದಲೂ ಪಾಲಿಸುತ್ತ ಬಂದಿರುವ ನನ್ನ ಸಮುದಾಯದ ಜನರನ್ನು ಮುಟ್ಟಿ ನೋಡಿಕೊಳ್ಳುವಂತೆ ಮಾಡುವುದು ನನ್ನ ಉದ್ದೇಶವಾಗಿತ್ತು ಅಂದರು ಬೊಳುವಾರು.

ಹೇಗೆ ಬರೆಯಬೇಕು, ಏನು ಬರೆಯಬೇಕು ಎಂದು ಯೋಚಿಸಿದಾಗ ಹೊಳೆದದ್ದು ನನ್ನದೇ ಊರಿನ ಕಲ್ಪನೆ. ಹೀಗಾಗಿ ನಾನು ಮುತ್ತುಪ್ಪಾಡಿ ಎಂಬ ನನ್ನದೇ ಊರೊಂದನ್ನು ಸೃಷ್ಟಿಸಿದೆ, ಅದರಲ್ಲಿ ಹಳ್ಳಿಗಿರಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟೆ. ಓದಲು ಶಾಲೆ, ಈಜಲು ನದಿ, ಅಂಗಡಿ ಬೀದಿ, ರೋಗ ಬಂದರೆ ಆಸ್ಪತ್ರೆ, ಸತ್ತರೆ ಸ್ಮಶಾನ, ಬೇರೆ ಬೇರೆ ಜಾತಿಗಳ ಜನ- ಹೀಗೆ ಎಲ್ಲವನ್ನು ಹುಟ್ಟಿಸಿದ ಮೇಲೆ, ಅವರುಗಳನ್ನು ಅವರ ಪಾಡಿಗೆ ಏನು ಬೇಕಾದರೂ ಮಾಡಿಕೊಳ್ಳಿ ಅಂತ ಬಿಟ್ಟು, ನಾನು ನನ್ನ ಪಾಡಿಗೆ ಕಥೆ ಬರೆದುಕೊಂಡು ಹೋದೆ ಎಂದು ತಾನು ಬರಹಗಾರನಾದ ಬಗೆ ವಿವರಿಸಿದರು ಬೊಳುವಾರು ಮಹಮದ್ ಕುಂಞ

ನಾನು ಕುಮಾರವ್ಯಾಸ ಭಾರತ ಗ್ರಂಥಕ್ಕಾಗಿ ವಿನ್ಯಾಸ ಮಾಡಿದ್ದೆ. ಆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಲ್ಲಿ ಜರುಗಿತು. ಆ ಸಮಾರಂಭದಲ್ಲಿ ಭಾಗವಹಿಸಿ ವಾಪಸು ಊರಿಗೆ ಬಂದೆ, ಅಂದು ದಕ್ಷಿಣ ಕನ್ನಡದ- ನಾನು ಹೆಸರು ಹೇಳಲು ಬಯಸದ ಸಾಹಿತಿ ಮಿತ್ರರೊಬ್ಬರು ಫೋನ್ ಮಾಡಿ, – ನೀವು ಮುಸ್ಲಿಮ್ ಅಂದವರಿಗೆ ಮೆಟ್ಟಲ್ಲಿ ಹೋಡೀಬೇಕು ಸ್ವಾಮೀ, ಬೊಳುವಾರು ಕುಂಞ್ ಅಲ್ಲ ನೀವು ಬೊಳುವಾರು ಆಚಾರ್ರು ಎಂದು ಹೇಳಿದ್ರು. ನನಗೆ ಏನು ಹೇಳಬೇಕು ಅಂತ ತೋಚದೇ ಥ್ಯಾಂಕ್ಸ್ ಅಂದೆ!

ಒಬ್ಬ ಮುಸ್ಲಿಂ ಬರಹಗಾರನ ಮನಸ್ಥಿತಿ ಮತ್ತು ಪರಿಸ್ಥಿತಿಗಳನ್ನು ಬಹಳ ಸಮರ್ಥವಾಗಿ ನಿರೂಪಿಸಿದರು ಬೊಳುವಾರು. ಇಂದಿನ ಭಯೋತ್ಪಾದನೆಯ ತಲ್ಲಣದ ಸಂದರ್ಭದಲ್ಲಿ, ಬೊಳುವಾರು ಅವರ ಮಾತುಗಳು ಯಾಕೋ ಆಪ್ತ ಅಂತ ಅನ್ನಿಸಿತು.

ಚಿತ್ರ: ‘ಕನ್ನಡವೇ ನಿತ್ಯ’ ಬ್ಲಾಗ್ ನಿಂದ

‍ಲೇಖಕರು avadhi

November 30, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

5 ಪ್ರತಿಕ್ರಿಯೆಗಳು

 1. ಗುರು ಬಾಳಿಗ

  ಬೊಳುವಾರು ತಮ್ಮ ಮಾತು ಹಾಗು ಕ್ರಿಯೆಗಳಿಂದ ಸಭಿಕರನ್ನು ಬೆಚ್ಚಿಸಿ ಎಚ್ಚರಿಸುವಲ್ಲಿ ಬಹಳ ಪರಿಣಾಮಕಾರಿ ತಂತ್ರಗಳನ್ನು ಉಪಯೋಗಿಸುತ್ತಾರೆ. ಇದಕ್ಕೆ ಎರಡು ಉದಾಹರಣೆಗಳು ನನ್ನ ನೆನಪಲ್ಲಿವೆ.

  ೧. ಇತ್ತೀಚಿನ ಕನ್ನಡ ಸಾಹಿತ್ಯ ಸಮ್ಮೇಳನವೊಂದರಲ್ಲಿ, ಮಕ್ಕಳ ಸಾಹಿತ್ಯ ಕಮ್ಮಟದಲ್ಲಿ ಸಿಸು ಸಂಗಮೆಸರಂತಹ ಅನೇಕ ಹಿರಿಯ ಸಾಹಿತಿಗಳನ್ನು ಗುರುತಿಸಲಿಲ್ಲ ಎಂಬ ಕಾರಣಕ್ಕಾಗಿ ಆ ಕಮ್ಮಟದಲ್ಲಿ ಒಂದು ಚಿಕ್ಕ ಗಲಾಟೆ ಎಬ್ಬಿಸಿದ್ದರು. ಆ ಚಿಕ್ಕ ಗಲಾಟೆ ಅತ್ಯದ್ಭುತವಾಗಿ ಸಭಿಕರನ್ನು ಬೆಚ್ಚುವಂತೆ ಮಾಡಿತು.

  ೨. ಇದು ನಾನು ಬಹಳ ಹಿಂದೆ ಭಾಗವಹಿಸಿದ ಸಣ್ಣ ಕತೆಗಳ ಕಮ್ಮಟವೊನ್ದರಲ್ಲಿ ನಡೆದದ್ದು. ಮಧ್ಯಾಹ್ನದ ಸೆಶನ್ ತೆಗೆದುಕೊಂಡ ಬೊಳುವಾರು ನಿಜವೋ ಎಂಬಂತೆ ನೀರಿಗಾಗಿ ಚಡಪಡಿಕೆಯನ್ನು ವ್ಯಕ್ತಪಡಿಸುತ್ತಾ, ಸಮಾಜಿಕ ನ್ಯಾಯದ ಬಗ್ಗೆ ಒಂದು ಅನೌಪಚಾರಿಕ ಚರ್ಚೆಯನ್ನೇ ಎಬ್ಬಿಸಿಬಿಟ್ಟರು. ಕೊನೆಗೆ ಒಂದು ವಾಕ್ಯದಲ್ಲಿ ಸಣ್ಣ ಕತೆಯ ಚೌಕಟ್ಟಿಗೆ ಬೇಕಾದ ತಂತ್ರವನ್ನು ವಿವರಿಸಿ, ಕತೆಯ ರಚನೆಗೆ ಚೌಕಟ್ಟಿಗಿಂತ ವಿಷಯ ಮುಖ್ಯ, ಹಾಗಾಗಿ ನಾನೊಂದು ಸಣ್ಣ ನಾಟಕ ಮಾಡಬೇಕಾಯಿತು ಎಂದು ವಿವರಿಸಿದರು.

  ಸಭೆಯನ್ನು ಒಮ್ಮೆಲೇ ಜೀವಂತ ಗೊಳಿಸುವ ಕಲೆ ಬೊಳುವಾರು ಅವರಲ್ಲಿದೆ.

  ಪ್ರತಿಕ್ರಿಯೆ
 2. ಆನಂದ

  ನಿಮ್ಮ ನುಡಿ ಸಿರಿವಂತವಾಗಿತ್ತು ಮಾರಾಯರೆ? ತುಂಬಾ ಥ್ಯಾಂಕ್ಸ್.
  ಆನಂದ

  ಪ್ರತಿಕ್ರಿಯೆ
 3. Siri

  ನಾನು ಅಲ್ಲೇ ಇದ್ದೆನಲ್ಲಾ ಶ್ರೀನಿಧಿ,ಯಾಕೋ ಹಿಂಸೆಯಾಗುತ್ತಿತ್ತು. ಅವರು ಮಾತಾಡುವ ಮೊದಲು ಹಿಂಗೆಲ್ಲಾ ಹೇಳಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆಯಲ್ಲಾ ಅಂತ.

  “ನನಗೆ ಹುಟ್ಟುವ ಮೊದಲೇ ಅಜರ್ ಹಾಕುವ ಸೌಲಭ್ಯ ಇದ್ದಿದ್ದರೆ,ದಶರಥನ ಮಗ ರಾಮನಾಗಿಯೋ, ವಸುದೇವನ ಮಗನಾದ ಕೃಷ್ಣನಾಗಿಯೋ, ಶುಧ್ದೋದನನ ಮಗ ಬುದ್ಧನಾಗಿಯೋ ಹುಟ್ಟಿಸುವಂತೆ, ಕಡೇ ಪಕ್ಷ ಕರಮಚಂದನ ಮಗ ಮೋಹನದಾಸನಾಗುವಂತೆ ಅಜರ್ ಹಾಕುತ್ತಿದ್ದೆ, ಯಾವ ಕಾರಣಕ್ಕೂ ಪುತ್ತೂರಿನ, ಬೀಡಿ ಕಟ್ಟುವ ಅಬ್ಬಾಸ್ ಬ್ಯಾರಿಯ ಮಗನಾಗಿ ಹುಟ್ಟಿಸು ಅಂತ ಅಜರ್ ಹಾಕುತ್ತಿರಲಿಲ್ಲ”

  ಅಂದರಲ್ಲ ನಿಜಕ್ಕೂ ಈ ಮಾತುಗಳು ಆಪ್ತವಾಗಿರಲಿಲ್ಲ ಬದಲಾಗಿ ಬೇಜಾರಾಗುತ್ತಿತ್ತು.

  ಅವರು ಓದಿದ ಕಥಾ ಭಾಗ ಇಷ್ಟವಾಯಿತು.

  ಪ್ರತಿಕ್ರಿಯೆ
 4. rgbellal

  ನೆನಕೆಗಳು
  ಶ್ರೀನಿಧಿಯವರೇ
  ಎಲ್ಲದಕ್ಕೂ ನೋಡುವ , ಆಡುವ ಮಾತು, ಯೋಚಿಸುವ ಮನಸ್ಸು ಶುದ್ಧವಾಗಿರಬೇಕು

  ಜಾತಿ ಧರ್ಮ ಮನುಷ್ಯ ಮಾಡಿರೋದೇ ಅಲ್ವಾ?ಮನುಷ್ಯ ದೊಡ್ಡವನಾಗೋದು ತನ್ನ ಕಾರ್ಯದಿಂದ ಅಲ್ವಾ
  ಅದನ್ನೇ ಬೋಳುವಾರು ತೋರಿಸಿದರು.

  ಪ್ರತಿಕ್ರಿಯೆ
 5. tumkurnaveed

  ಒಬ್ಬ ಮುಸ್ಲಿಂ ಬರಹಗಾರನ ಮನಸ್ಥಿತಿ ಮತ್ತು ಪರಿಸ್ಥಿತಿಗಳನ್ನು ಬಹಳ ಸಮರ್ಥವಾಗಿ ನಿರೂಪಿಸಿದರು ಬೊಳುವಾರು. ಇಂದಿನ ಭಯೋತ್ಪಾದನೆಯ ತಲ್ಲಣದ ಸಂದರ್ಭದಲ್ಲಿ, ಬೊಳುವಾರು ಅವರ ಮಾತುಗಳು ಯಾಕೋ ಆಪ್ತ ಅಂತ ಅನ್ನಿಸಿತು.
  – boluvaararige padagalive,vedikeyide avara mans-
  sthithiyannu bahala chennagi vivarisaballaru.
  Aadare obba saamanya muslimana manasthithiya
  nivedanege avakaashave illa. Mounavaagi rodhisuvde
  avana karma aagide.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: