ಬೊಳುವಾರು ನೇರನುಡಿ

ಸಾಹಿತ್ಯವು ಸಮಾಜವನ್ನು ರೂಪಿಸುತ್ತಲೇ ಇರುತ್ತದೆ

– ಎಂ.ಎನ್. ಅಹೋಬಳಪತಿ

ಕೃಪೆ : ದ ಸ೦ಡೆ ಇ೦ಡಿಯನ್

  ಬಂಡಾಯ ಚಳವಳಿ ಜೊತೆಗೆ ನಿಮ್ಮ ಒಡನಾಟವನ್ನು ವಿವರಿಸುತ್ತೀರಾ? ನನ್ನ ಯೋಚನೆಯ ದಾರಿಯನ್ನು ರೂಪಿಸಿದವರು ’ಬಂಡಾಯ’ ಮತ್ತು ’ಸಮುದಾಯ’ ಸಂಘಟನೆಗಳ ಸಂಗಾತಿಗಳು. ಪ್ರಸನ್ನ ಮತ್ತು ಸಿಜಿಕೆಯವರ ನಂತರ ಏಳು ವರ್ಷಗಳ ಕಾಲ ನಾನು ಕರ್ನಾಟಕ ರಾಜ್ಯ ಸಮುದಾಯ ಸಂಘಟನೆಯ ರಾಜ್ಯ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. ಕೆಲವು ವರ್ಷಗಳ ಕಾಲ ಕರ್ನಾಟಕ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕ ಆಗಿ ಕೆಲಸ ಮಾಡಿದ್ದೆ. ಇವತ್ತಿಗೂ ಅವರ ಜೊತೆಗೆ ನಾನು, ನನ್ನ ಜೊತೆಗೆ ಅವರು ಇದ್ದಾರೆ. ನನ್ನ ಈ ಕಾದಂಬರಿಯನ್ನು ಬಿಡುಗಡೆ ಮಾಡಿಸುತ್ತಿರುವವರೂ ಇದೇ ಸಮುದಾಯದ ಗೆಳೆಯರು. ಸಾಹಿತ್ಯ ಓದುವುದರಿಂದ ಜನಸಾಮಾನ್ಯರಿಗೆ ಆಗುವ ಲಾಭ ಏನು? ಸಾಹಿತ್ಯದಿಂದ ಸಮಾಜದ ಬದಲಾವಣೆ ಸಾಧ್ಯವೇ? ಸಾಹಿತ್ಯದಿಂದ ಸಮಾಜ ಬದಲಾವಣೆ ಸಾಧ್ಯವೇ ಇಲ್ಲ ಅಂತ ಕೆಲವರು ಆಗಾಗ ತೀರ್ಮಾನ ಕೊಡುತ್ತಿದ್ದಾರೆ. ಹಾಗಾದರೆ ಭಗವದ್ಗೀತೆ, ಬೈಬಲ್, ಕುರಾನ್, ರಾಮಾಯಣ, ಮಹಾಭಾರತ ಮೊದಲಾದ ಸಾಹಿತ್ಯ ಕೃತಿಗಳು ನಮ್ಮ ಸಮಾಜದ ಮೇಲೆ ಪ್ರಭಾವ ಬೀರಿಲ್ಲವೇ? ಸಾಹಿತ್ಯದಿಂದಲೇ ಸಮಾಜದಲ್ಲಿ ಬದಲಾವಣೆಗಳಾಗಿರುತ್ತವೆ. ಮಾರ್ಕ್ಸವಾದ ಬಂದಾಗ ಜಾಗತಿಕ ಮಟ್ಟದಲ್ಲಿ ಒಂದು ಬಗೆಯ ಬದಲಾವಣೆ ಆಯ್ತು. ಲೋಹಿಯಾವಾದ ಬಂದಾಗ ನಮ್ಮ ದೇಶದಲ್ಲಿ ಇನ್ನೊಂದು ಬಗೆಯ ಬದಲಾವಣೆ ಆಯ್ತು. ಕೋಮುವಾದ ಕಾಲಿಟ್ಟಾಗಲೂ ಸಮಾಜದಲ್ಲಿ ಬದಲಾವಣೆ ಆಗಿದೆ; ಸಾಹಿತ್ಯ ಕ್ಷೇತ್ರವೂ ಅದರಿಂದ ಹೊರತಾದುದಲ್ಲ. ಪೂರ್ಣಚಂದ್ರ ತೇಜಸ್ವಿಯವರು ಯಾವಾಗ ’ಅಬಚೂರಿನ ಪೋಸ್ಟಾಫೀಸು’ ಕತೆ ಬರೆದಾಗ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬಹಳ ದೊಡ್ಡ ಬದಲಾವಣೆಯೊಂದು ಮೊದಲಿಟ್ಟಿತು. ಆನಂತರ ಬಂಡಾಯ ಸಾಹಿತ್ಯ ಸಂಘಟನೆ ಗಟ್ಟಿಯಾಯಿತು. ಸಾಹಿತ್ಯವು ಜನಪರವಾಗಿರಲೇಬೇಕು ಎಂಬ ಕೂಗು ಹೊಸ ಬರಹಗಾರರ ಮಂತ್ರವಾಯಿತು. ಖಡ್ಗವಾಗಲಿ ಕಾವ್ಯ, ಜನರ ನೋವಿನ ಪ್ರಾಣಮಿತ್ರ ಇತ್ಯಾದಿ ಘೋಷಣೆಗಳು ಕೇಳಿಬಂದವು. ನಾಳೆ ಬೆಳಗ್ಗೆ ಹನ್ನೊಂದು ಗಂಟೆಯ ಮೊದಲೇ ಕ್ರಾಂತಿ ಆಗುತ್ತದೆ ಅಂತ ಉತ್ಸಾಹದಿಂದ ಬರೆದುಕೊಂಡೆವು. ನಮಗೆಲ್ಲಾ ಆಗ ಬಹಳ ಗ್ಯಾರಂಟಿ ಇತ್ತು. ಅದು ತಪ್ಪೂ ಅಲ್ಲ. ಇವತ್ತಿಗೂ ಆ ಆಸೆ ಇದೆ. ಆ ಆಸೆಯಿಂದಲೇ ಬದುಕುತ್ತಾ ಇದ್ದೇವೆ. ಮುಸ್ಲಿಂ ಸಮುದಾಯದಿಂದ ಬಂದ ಕನ್ನಡದ ಲೇಖಕರು, ಬೇರೆ ಸಮುದಾಯದಿಂದ ಬಂದ ಲೇಖಕರಿಗಿಲ್ಲದ ಪ್ರತ್ಯೇಕವಾದ ಸವಾಲನ್ನು ಎದುರಿಸಬೇಕಾಗಿದೆಯಾ? ಯಾವುದೇ ಸಮುದಾಯದಿಂದ ಬಂದ ಲೇಖಕನಿಗೂ ಈ ಸವಾಲು ಇದ್ದದ್ದೇ. ಅದುವರೆಗೆ ಚಾಲ್ತಿಯಲ್ಲಿಲ್ಲದ ಸಂಗತಿಗಳನ್ನು ಹೊಸಬನೊಬ್ಬ ಹೇಳಲು ಶುರು ಮಾಡಿದರೆ, ಅದನ್ನು ಸಹಿಸಲೊಲ್ಲದ ಸಂಪ್ರದಾಯವಾದಿಗಳಿಂದ ವಿರೋಧವನ್ನು ಎದುರಿಸಲೇಬೇಕಾಗುತ್ತದೆ. ಸಾವಿರಕ್ಕೂ ಮಿಕ್ಕಿದ ಇತಿಹಾಸವುಳ್ಳ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಾಹಿತಿಗಳು ಇನ್ನೂ ಪ್ರೀ-ನರ್ಸರಿ ವಿದ್ಯಾರ್ಥಿಗಳು. ಹಾಗಾಗಿ ಅವರ ತೊದಲು ನುಡಿಗಳನ್ನು ಅವರದೆ ಹಿರಿಯರು ತಿದ್ದಲು ಹಟ ಹಿಡಿಯುವುದು ಸಹಜವೆ. ಅವರ ವಿರೋಧವೂ ಸಹಜವೇ. ಇನ್ನೊಂದು ನೂರು ವರ್ಷದ ಬಳಿಕ ಈ ಸವಾಲುಗಳ ತೀವ್ರತೆ ಕಡಿಮೆಯಾಗಬಹುದು. ಈಗ ಕನ್ನಡದಲ್ಲಿ ಬರೆಯುತ್ತಿರುವ ಮುಸ್ಲಿಮರನ್ನು ಇನ್ನೊಂದು ಸಮಸ್ಯೆಯೂ ಕಾಡುತ್ತಿದೆ. ಧಾರ್ಮಿಕ ನಂಬಿಕೆಯ ಪ್ರಕಾರ ಒಬ್ಬ ಮುಸ್ಲಿಮನಿಗೆ ದಿನಕ್ಕೆ ಐದು ಬಾರಿ ನಮಾಜು ಮಾಡದೇ ಇದ್ದರೆ ಪರಲೋಕದಲ್ಲಿ ಜಾಗ ಸಿಗುವುದಿಲ್ಲವಂತೆ. ಆದರೆ ಇಂಡಿಯಾದಲ್ಲಿ ಹುಟ್ಟಿದ ಮುಸ್ಲಿಮನೊಬ್ಬ ದಿನಕ್ಕೆ ಐದು ಬಾರಿ ಸಾರ್ವಜನಿಕವಾಗಿ ತನ್ನ ನಿಷ್ಠೆ ಹಿಂದೂಸ್ತಾನಕ್ಕೆ ಅಂತ ಹೇಳದೇ ಇದ್ದರೆ ಅವನಿಗೆ ಇಹ ಲೋಕದಲ್ಲೇ ಜಾಗವಿಲ್ಲ. ನಮಾಜು ಮಾಡದೇ ಇದ್ದರೆ ಸ್ವರ್ಗದಲ್ಲಿ ಜಾಗವಿಲ್ಲ. ತನ್ನ ಮಾತೃ ಭೂಮಿ ಹಿಂದೂಸ್ತಾನ ಅಂತ ಮತ್ತೆ ಮತ್ತೆ ಸಾಬೀತು ಮಾಡದೇ ಇದ್ದರೆ ಇಹಲೋಕದಲ್ಲಿ ಜಾಗವಿಲ್ಲ. ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಮುಸ್ಲಿಮರು ಇಳಿಯುವಾಗ ಅರ್ಧಗಂಟೆ ಚೆಕ್ಕಿಂಗ್ ಹೆಚ್ಚು ಇರುತ್ತದೆ. ತಮಿಳು ಚಿತ್ರನಟ ಕಮಲ್ ಹಾಸನ್ ಮುಸ್ಲಿಮನಿರಬಹುದು ಅಂತ [ಹಸನ್?] ಆತನಿಗೂ ಕಿರಿಕಿರಿ ಮಾಡಿದರಂತೆ. ಇಸ್ಲಾಂ ಬಗ್ಗೆ ನಾವೆಲ್ಲ ಒಂದು ಪರದೆ ಎಳೆದು ಹಾಕಿಬಿಟ್ಟಿದ್ದೇವೆ. ಈಗ ನೋಡಿ, [ಪಕ್ಕದಲ್ಲಿ ಓಡಾಡುತ್ತಿದ್ದ ಮೂರು ವರ್ಷದ ಮೊಮ್ಮಗನನ್ನು ತೋರಿಸಿ] ಆ ಮಗು ಈಗ ದೇವರ ಹಾಗೆ; ಅದಕ್ಕೇನೂ ಗೊತ್ತಿಲ್ಲ. ಅದಕ್ಕೆ ನಮಸ್ಕಾರ ಅಂದರೆ ಏನು, ಅದನ್ನು ಯಾಕೆ ಮಾಡಬೇಕು ಅಂತ ಗೊತ್ತಿಲ್ಲ. ನಾವು ಹೇಳಿದ ಹಾಗೆ ಕೇಳುತ್ತದೆ. ಅದಕ್ಕೆ ಅದೊಂದು ಆಟ. ಏನನ್ನು ತೋರಿಸಿ ನಮಸ್ಕರಿಸು ಅಂತ ಹೇಳಿದರೂ ಅದು ಹಾಗೆಯೇ ಮಾಡುತ್ತದೆ. ಆದರೆ ಯಾವಾಗ ಅದಕ್ಕೆ ನಾವು ಮತ್ಯಾವುದೋ ಒಂದನ್ನು ತೋರಿಸಿ ’ಅದಕ್ಕೆ ನಮಸ್ಕಾರ ಮಾಡಬೇಡ’ ಅಂತ ಹೇಳಲಿಕ್ಕೆ ಶುರು ಮಾಡುತ್ತೇವೆಯೋ, ಆ ದಿನದಿಂದ ಆ ದೇವರಂತಹ ಮಗು ದಾನವನಂತಹ ಮನುಷ್ಯ ಆಗಿಬಿಡುತ್ತದೆ. ದಾನವರಂತಹ ಮನುಷ್ಯರಿಂದ ದೇವರಂತಹ ಮಾತುಗಳನ್ನು ನಿರೀಕ್ಷೆ ಮಾಡುವುದು ದಡ್ಡತನವಾಗುತ್ತದೆ. ದೇಶವಿಭಜನೆಯ ಫಲವಾದ ಐ.ಎಸ್.ಐ ಮುದ್ರೆ ಎಲ್ಲ ಮುಸ್ಲಿಂ ಲೇಖಕರ ನೆತ್ತಿಯ ಮೇಲೆ ಇದ್ದೇ ಇದೆ. ನಾಲ್ಕೈದು ವರ್ಷಗಳ ಕೆಳಗೆ, ಕಾಮಧೇನು ಪ್ರಕಾಶನದವರ ’ಕುಮಾರವ್ಯಾಸ ಭಾರತ’ ಬೃಹತ್ ಗ್ರಂಥಕ್ಕೆ ಪುಸ್ತಕ ವಿನ್ಯಾಸ ಮಾಡಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ’ಪುಸ್ತಕ ಸೊಗಸು’ ಬಹುಮಾನ ಗಿಟ್ಟಿಸಿಕೊಂಡಾಗ, ನನ್ನೂರಿನ ಒಬ್ಬರು ಹಿರಿಯ ಸಜ್ಜನ ನನ್ನನ್ನು ಅಭಿನಂದಿಸುತ್ತಾ ಹೃದಯತುಂಬಿ ಹೇಳಿದ್ದು, “ನಿನ್ನನ್ನು ಮುಸ್ಲಿಮ ಎಂದವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು” ಅಂತ. ನನಗೆ ಆಗ ಏನು ಹೇಳಬೇಕೆಂದೇ ತೋಚಲಿಲ್ಲ. ಪಾಪ ಅವರು ನನ್ನ ಹೊಗಳೋದು. ಆ ಭಟ್ಟರು, ಪಾಪದವರು. ಅವರೇನೂ ಕೋಮುವಾದಿಯಲ್ಲ. ಅವರ ಸ್ಟೇಟ್‌ಮೆಂಟ್ ಹೀಗೆ. ಇಂಡಿಯಾದಲ್ಲಿ ಒಳ್ಳೆಯವನು ಆಗುವುದು ಅಂದರೆ ಮುಸ್ಲಿಮ ಆಗದಿರುವುದು ಎಂದು ಪ್ರಾಮಾಣಿಕವಾಗಿ ನಂಬಿದ ದಡ್ಡ ಆ ಭಟ್ಟರು. ನಾನು ದಿನಕ್ಕೆ ಐದು ಸರ್ತಿ ನಮಾಜು ಮಾಡುವುದಿಲ್ಲ ಅಂತ ಬಹಳ ಸಂತೋಷ ಪಡುವ ಕೆಲವು ಗೆಳೆಯರು, ಕಚೇರಿಯಲ್ಲಿ ಪ್ರತಿ ಶುಕ್ರವಾರ ನಡೆಸುವ ಪೂಜೆಯ ಸಿಹಿ ಪ್ರಸಾದ ತಂದಾಗ ಬೇಡ ಅಂದರೆ ’ಇವನ ಬ್ಯಾರಿ ಬುದ್ಧಿ ಬಿಡಲಿಕ್ಕಿಲ್ಲ’ ಅಂತಾರೆ. ಇದು ಕಷ್ಟ ನೋಡಿ. ಅವರಿಂದ ಅಂತಹ ಮಾತು ಕೇಳುವುದು ಬೇಡ ಅಂತ ಅವರು ಕೊಟ್ಟ ಸಿಹಿ ತಿಂದೂ ತಿಂದೂ ’ಧರ್ಮ’ಕ್ಕೆ ಡಯಾಬಿಟೀಸ್ ಬಂದಿದೆ. ಇದು ನನ್ನಂತಹ ಮುಸ್ಲಿಮ್ ಹೆಸರಿನ ಲೇಖಕರ ಸ್ಥಿತಿ. ಇತ್ತೀಚೆಗೆ ಮುಸ್ಲಿಂ ಹೆಣ್ಣುಮಕ್ಕಳು ಹೆಚ್ಚಾಗಿ ಬುರ್ಖಾ ಹಾಕುತ್ತಾರೆ ಎಂದು ಕೆಲವರು ಬೊಬ್ಬಿಡುತ್ತಾರಲ್ಲಾ? ಇದು ನಿಜ. ೯೨ರ ’ಡಾಂಚಾ ಗಿರ್ಜಾನೇಕಾ ಬಾದ್’ ಬುರ್ಖಾ ವ್ಯಾಪಾರಿಗಳಿಗೆ ಸುಗ್ಗಿಯೇ ಸುಗ್ಗಿ. ಇಲ್ಲೊಂದು ತಮಾಷೆ ಹೇಳಬೇಕು. ಸುಮಾರು ಮೂವತ್ತು ವರ್ಷಗಳ ಕೆಳಗೆ ನನ್ನ ಚಡ್ಡಿ ದೋಸ್ತ್‌ಗಳು ’ಅದೆಲ್ಲಾ ಸರಿ ಬೋಳವಾರು. ನಿಮ್ಮ ಹೆಣ್ಣು ಮಕ್ಕಳೇಕೆ ಶಾಲೆಗೆ ಬರೋದಿಲ್ಲ? ಮತ್ತೆ ನೀನು ಬದಲಾವಣೆಯ ಬಗ್ಗೆಯೆಲ್ಲಾ ಮಾತಾಡ್ತೀಯಲ್ಲ?’ ಅಂತ ಕಿಚಾಯಿಸುತ್ತಿದ್ದರು. ಈಗ ಮುಸ್ಲಿಂ ಹುಡುಗೀರು ಹೆಗಲ ಮೇಲೆ ಲ್ಯಾಪ್‌ಟಾಪ್ ತೂಗಾಡಿಸಿಕೊಂಡು ವಿಮಾನದಲ್ಲಿ ಹಾರಾಡ್ತಾ ಇದ್ದಾರೆ. ದಕ್ಷಿಣ ಕನ್ನಡದಲ್ಲಿ ಕಾಲೇಜುಗಳ ರ‍್ಯಾಂಕಿಂಗ್ ಪಟ್ಟಿ ಪ್ರಕಟವಾದಾಗ ಅವರದೇ ಹೆಸರುಗಳು ಎಲ್ಲರಿಗಿಂತ ಮೇಲೆ ಇರಲಿಕ್ಕೆ ಶುರುವಾಗಿದೆ. ಈಗ ಆಕ್ಷೇಪಿಸುವವರು ಪ್ಲೇಟು ತಿರುಗಿಸಿದ್ದಾರೆ. ಶಾಲಾ ಕಾಲೇಜುಗಳಿಗೆ ಬುರ್ಖಾ ಹಾಕ್ಕೊಂಡು ಬರಬಾರದೆಂದು ಆಕ್ಷೇಪಿಸುತ್ತಿದ್ದಾರೆ. ಯಾಕೇ? ರ‍್ಯಾಂಕಿಂಗ್ ಪಟ್ಟಿಯಲ್ಲಿ ತಮ್ಮ ಹೆಸರು ಕೆಳಕ್ಕೆ ಜಾರುತ್ತಿದೆಯೆಂದೇ? ಮೊನ್ನೆ ತನಕ ಮುಸ್ಲಿಂ ಹೆಣ್ಣು ಮಕ್ಕಳಿಗೆ ಮನೆಯಿಂದ ಹೊರಗೆ ಹೋಗಲು ಅನುಮತಿ ಸಿಗುತ್ತಿದ್ದದ್ದು ಒಂದೋ ಉರೂಸ್ ಕಾರ್ಯಕ್ರಮಕ್ಕೆ ಅಥವಾ ಆಸ್ಪತ್ರೆಗೆ ಹೋಗುವಾಗ ಮಾತ್ರ. ಈಗ ಸ್ವಲ್ಪ ಬದಲಾಗಿದೆ. ಬುರ್ಖಾ ಅಭ್ಯಾಸವಾಗಿತ್ತು; ಒಮ್ಮಿಂದೊಮ್ಮೆಗೆ ಬಿಡಲು ಧೈರ್ಯ ಸಾಕಾಗುವುದಿಲ್ಲ. ಆರಂಭದಲ್ಲಿ ಇಂಥಾ ನಿರ್ಬಂಧಗಳು ಇದ್ದದ್ದೇ. ಬ್ಯಾರಿ ಜನಾಂಗದ ಬಡವರಲ್ಲಿ ಮೊಟ್ಟ ಮೊದಲು ಐದನೇ ಕ್ಲಾಸ್ ಪಾಸಾದವಳು ನನ್ನಕ್ಕ. ಬ್ಯಾಂಕಲ್ಲಿ ಕೆಲಸ ಗಿಟ್ಟಿಸಿಕೊಂಡವಳು ನನ್ನ ತಂಗಿ. ಲಂಡನ್, ಅಮೆರಿಕಗಳಲ್ಲಿ ದುಡಿದು ಲಕ್ಷಗಟ್ಟಲೆ ಸಂಪಾದಿಸುತ್ತಿರುವವರು ನನ್ನಿಬ್ಬರು ಹೆಣ್ಣು ಮಕ್ಕಳು. ಬದಲಾವಣೆ ಅಂದರೆ ಇದೇ ಅಲ್ಲವೇ? ’ಬ್ಯಾರಿ’ ಸಿನಿಮಾಗೆ ಸ್ವರ್ಣಕಮಲ ಪ್ರಶಸ್ತಿ ಲಭಿಸಿದೆ. ಈ ಕುರಿತು ಏನು ಹೇಳ್ತೀರಿ? ’ಬ್ಯಾರಿ’ ಚಿತ್ರಕ್ಕೆ ಸ್ವರ್ಣಕಮಲ ಬಂದದ್ದು ಬಹಳ ಸಂತೋಷದ ಸುದ್ದಿ. ಮೂವತ್ತು ನಲವತ್ತು ವರ್ಷಗಳ ಹಿಂದೆ ಬ್ಯಾರಿ ಅಂತ ಕರೆದರೆ ಅವಮಾನ ಆಗ್ತಾ ಇತ್ತು. ಬೇವರ್ಸಿ ಅಂದ್ರೂ ಅಷ್ಟು ಬೇಜಾರು ಆಗ್ತಾ ಇರಲಿಲ್ಲ. ಈಗ ಬ್ಯಾರಿ ಅಂತ ಹೇಳಿಕೊಳ್ಳುವುದು ಒಂದು ಗೌರವ ಆಗಿದೆ. ಒಂದು ಬ್ಯಾರಿ ಅಕಾಡೆಮಿ ಆಗಿದೆ. ಬ್ಯಾರಿ ಸಿನಿಮಾ ಮಾಡಿದವರು ವ್ಯಾವಹಾರಿಕವಾಗಿ ಏನೇನೂ ಗೊತ್ತಿಲ್ಲದ ಕೆಲವು ದಡ್ಡ ಬ್ಯಾರಿ ಹುಡುಗರು. ಮಾಡಿದ್ದು ಮಾತ್ರ ಅದ್ಭುತ ಸಿನಿಮಾ. ಅವರಿಗೆ ಮಾರ್ಕೆಟಿಂಗ್, ಪ್ರಚಾರ ಏನೂ ಗೊತ್ತಿಲ್ಲ. ಮೊದಲ ಪ್ರಯತ್ನದಲ್ಲೇ ಸ್ವರ್ಣ ಕಮಲ ಪಡೆದುಕೊಳ್ಳುವುದು ಸಾಮಾನ್ಯ ಸಂಗತಿಯೇನೂ ಅಲ್ಲ. ಅವರಿಗೆ ನನ್ನ ಅಭಿನಂದನೆಗಳುಂಟು. ಚಳವಳಿಗಳ ಪ್ರಭಾವ ಇಲ್ಲದೇ ಸಾಹಿತ್ಯ ಸೃಷ್ಟಿ ಮಾಡುತ್ತಿರುವ ಹೊಸ ತಲೆಮಾರಿನ ಬರಹಗಾರರ ಕುರಿತು ಏನನ್ನಿಸುತ್ತೆ? ಈಗ ಬರೀತಾ ಇರೋರು ಯಾರು ಗೊತ್ತುಂಟಾ? ಕನ್ನಡ ಎಂ.ಎ ಓದಿದವರು ಮತ್ತೆ ಹಳ್ಳಿ ಕನ್ನಡ ಶಾಲೆಯಿಂದ ಬರ‍್ತಾ ಇರೋರು ಮಾತ್ರ. ಚಳವಳಿ ಇಲ್ಲದೆ ಸಾಹಿತ್ಯ ಸೃಷ್ಟಿ ಮಾಡುತ್ತಿರುವ ಸಾಫ್ಟ್‌ವೇರ್ ಕತೆಗಾರರದ್ದು ಒಂದು ಬೇರೆಯೇ ಲೋಕ; ಅವರಿಗೂ ಅವರದ್ದೇ ಆದ ವೇದಿಕೆಯಿಲ್ಲ. ಬರೆಯೋದನ್ನ ಮಾತ್ರ ಚೆನ್ನಾಗೇ ಬರೀತಾ ಇದಾರೆ. ಅವರಿಗಾರಿಗೂ ಚಳವಳಿಯ ಒತ್ತಡವಿಲ್ಲ. ಯಾವುದೇ ಚಳವಳಿ ಹುಟ್ಟಿಕೋಳ್ಳೋದು ಅದರ ಅಗತ್ಯ ಇದ್ದಾಗ ಮಾತ್ರ. ಅಂದು ತುರ್ತು ಪರಿಸ್ಥಿತಿ ಬಂದಾಗ ಸಮುದಾಯ, ಬಂಡಾಯ ಇತ್ಯಾದಿ ಎಲ್ಲ ಹುಟ್ಟಿಕೊಂಡವು. ನೀವು ಏನಕ್ಕೆ ಪ್ರತಿಭಟನೆ ಮಾಡ್ತೀರಾ? ನಿಮಗೆ ಶತ್ರುಗಳು ಯಾರು ಹೇಳಿ ಈಗ? ಅವತ್ತು ಜಾತಿ, ಸರ್ವಾಧಿಕಾರ ಶತ್ರುಗಳಾಗಿದ್ದವು. ಇವತ್ತು ಎಲ್ಲರಿಗೂ ಜಾತಿ ಬೇಕಾಗಿದೆ. ನನಗೆ ಇವತ್ತಿಗೂ ನೆನಪಿದೆ. ಸುಮಾರು ೩೦ ವರ್ಷಗಳ ಹಿಂದೆ ಗುಂಡೂರಾವ್ ಅವರು ದೇವಸ್ಥಾನಕ್ಕೆ ಹೋಗಿದ್ದ ವಿಷಯವೇ ಒಂದು ದೊಡ್ಡ ಸುದ್ದಿಯಾಯಿತು. ’ಗುಂಡೂರಾಯರು ದೇವಸ್ಥಾನದಲ್ಲಿ’ ಅಂತ. ಇವತ್ತು ಅಧಿಕಾರಸ್ಥರು ವಿಧಾನಸೌಧಕ್ಕಿಂತ ದೇವಸ್ಥಾನಗಳಲ್ಲೇ ಹೆಚ್ಚಾಗಿರ‍್ತಾರೆ. ನಿಮ್ಮ ಬದುಕಿನಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಿದ ಸಾಹಿತಿಗಳ್ಯಾರು? ನನಗೆ ಬೀಚಿಯವರು ತುಂಬಾ ಇಷ್ಟ. ಅವರ ಹಾಸ್ಯ ಲೇಖನಗಳ ಒಂದೊಂದು ಸಾಲುಗಳನ್ನೂ ಕಣ್ಣೀರು ಹಾಕಿಕೊಂಡು ಓದಿದವನು ನಾನು. ಅವರ ಎಲ್ಲ ಪುಸ್ತಕಗಳನ್ನೂ ಓದಿದ್ದೇನೆ. ಅವರು ನನಗೆ ಗುರು ಇದ್ದ ಹಾಗೆ. ಅಂತೆಯೇ ಕನ್ನಡದಲ್ಲಿ ನನಗಿಂತ ಮೊದಲು ಬರೆದ, ನಂತರ ಬರೆದ ಎಲ್ಲ ಲೇಖಕರ ಪ್ರಭಾವವೂ ನನ್ನ ಮೇಲೆ ಇದೆ. ಹೆಸರು ಹೇಳುತ್ತಾ ಹೋದರೆ ಅದು ಮುಗಿಯುವಂತದ್ದಲ್ಲ. ನಿಮ್ಮ ಸಾಹಿತ್ಯ ಕೃಷಿ ಆರಂಭಿಸಲು ನಿಮಗಿದ್ದ ಪ್ರೇರಣೆ ಏನು? ನಾನು ಬರೆಯಲು ಶುರು ಮಾಡಿದ್ದು ಬ್ಯಾಂಕಿಗೆ ಸೇರಿದ ನಂತರ. ಅದೂ ಒಂದು ತಮಾಷೆ. ಆರೂರು ಲಕ್ಷ್ಮಣ ಶೇಠ್ ಅಂತ ಒಬ್ಬರು ಕಥೆಗಾರರು ಇದ್ದರು. ಆಗ ನಾನು ಗುಲ್ಬರ್ಗದಲ್ಲಿ ಬ್ಯಾಂಕ್ ಉದ್ಯೋಗಿ. ಶನಿವಾರ ಮಧ್ಯಾಹ್ನ ನಾವೆಲ್ಲಾ ಸೇರಿ ಕೇರಂ ಆಡುತ್ತಿದ್ದೆವು. ಆಗ ಲಕ್ಷ್ಮಣ ಶೇಠ್‌ರಿಗೆ ಪೋಸ್ಟ್‌ಮ್ಯಾನ್ ಒಂದು ಸುಧಾ ತಂದುಕೊಟ್ಟ. ಅದರಲ್ಲಿ ಲಕ್ಷ್ಮಣ ಶೇಠರ ಕತೆ ಪ್ರಕಟವಾಗಿತ್ತು. ನಾನು ಶೇಠ್‌ರಿಗೆ ಕೇಳಿದೆ. ಕಥೆ ಬರಿಯೋದು ಹೇಗೆ? ಅಂತ. ನಿನಗೆಲ್ಲಾ ಗೊತ್ತಾಗೊಲ್ಲ, ನೀವು ಸುಮ್ಮನೆ ಆಡ್ರೀ ಅಂದ್ರು. ಸಿಟ್ಟು ಬಂದು ಕೇರಂ ಬೋರ್ಡ್‌ನ್ನು ಎತ್ತಿ ಬಿಸಾಡಿದೆ. ನಾನು ಕತೆ ಬರೆಯದೆ ಆಫೀಸಿಗೆ ಬರೊಲ್ಲ ಅಂತ ಹೇಳಿದೆ. ಆಗ ನಾನು ೨೨ ವರ್ಷದ ಹುಡುಗ. ನಾಲ್ಕು ದಿನ ಬ್ಯಾಂಕಿಗೆ ಹೋಗಲಿಲ್ಲ. ಮನೇಲಿ ಕೂತು ಕತೆ ಬರೆದೆ. ಅದನ್ನು ’ನವಭಾರತ’ಕ್ಕೆ ಕಳುಹಿಸಿಯೇ ಬ್ಯಾಂಕಿಗೆ ಹೋದದ್ದು. ಅದಾದ ಹದಿನೈದು ಇಪ್ಪತ್ತು ದಿನದ ನಂತರ ಒಂದು ಕಾಗದ ಬಂತು, ’ನಿಮ್ಮ ಕಥೆ ಬಹಳ ಚೆನ್ನಾಗಿದೆ. ಇನ್ನೂ ಇದ್ದರೆ ಕಳುಹಿಸಿ’ ಅಂತ. ಆ ದಿನ ಸಾಯಂಕಾಲ ದಾರೀಲಿ ಹೋಗ್ತಾ ಇದ್ದರೆ ಯಾರೋ ಬೊಳುವಾರು… ಬೊಳುವಾರು ಅಂತ ಕರೆದ ಹಾಗೆ ಆಗುತ್ತಿತ್ತು. ಏಕೆಂದರೆ ನಾನು ಕಥೆಗಾರ ಅಂತ ಅಷ್ಟು ಪ್ರಚಾರ ಆಗಿದ್ದೆ ಅಂತ. ಮತ್ತೆ ಕಥೆ ಬರೀಬೇಕಲ್ಲ. ಓದಲಿಕ್ಕೆ ಶುರು ಮಾಡಿದೆ. ಓದಿ ಓದಿ ಕದ್ದು ಕದ್ದು ಸೆಂಟೆನ್ಸ್ ಬರಿದಿಡೋದು, ಹಾಗೆಲ್ಲಾ ಮಾಡಿದೆ. ಕಾಮಾ ಎಲ್ಲಿ, ಫುಲ್ ಸ್ಟಾಪ್ ಎಲ್ಲಿ ಅಂತ ಅಬ್ಸರ್ವ ಮಾಡಿದೆ. ಹೀಗೆ ಮಾಡ್ತ ಮಾಡ್ತ ನನಗೆ ಎಂತದೋ ಅನ್ನಿಸ್ತು. ನಾನು ಎಷ್ಟೋ ಮಂದಿಗಿಂತ ಚೆನ್ನಾಗಿ ಬರೆಯಬಲ್ಲೆ ಅಂತ ಅನ್ನಿಸ್ತು. ಹಾಗೆ ಬರೆಯಲಿಕ್ಕೆ ಆರಂಭಿಸಿದೆ. ಅದರಲ್ಲೂ ಒಂದು ಸ್ವಾರ್ಥ. ಮುಸ್ಲಿಂ ಹುಡುಗಿಯರು ಓದುವುದು ಕಡಿಮೆ. ಹಾಗಾಗಿ ನನ್ನ ಯಾವುದೇ ಕಾದಂಬರಿ, ಕತೆಯಲ್ಲಿ ಎಂಟನೇ ತರಗತಿ ಕನ್ನಡದ ಪಠ್ಯದ ಹಂತದ ಭಾಷೆಗಿಂತ ಮೇಲೆ ಇರದಂತೆ ಹಟ ಹಿಡಿದೆ. ತಂತ್ರಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಪತ್ರಿಕೆಗಳಂತೂ ನನ್ನನ್ನು ಅಗತ್ಯಕ್ಕಿಂತ ಹೆಚ್ಚಾಗಿಯೇ ಬೆಂಬಲಿಸಿವೆ]]>

‍ಲೇಖಕರು G

April 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

ನನ್ನ ’ಎದೆಗೆ ಬಿದ್ದ ಅಕ್ಷರ’

ನನ್ನ ’ಎದೆಗೆ ಬಿದ್ದ ಅಕ್ಷರ’

ಡಾ.ಬಿ.ಆರ್.ಸತ್ಯನಾರಾಯಣ ಮೊನ್ನೆ ರಾತ್ರಿ ನನ್ನ ತೋಟದ ಮನೆಯಲ್ಲಿದ್ದೆ. ತುಂತುರು ಮಳೆ ಬೀಳುತ್ತಿತ್ತು. ಕರೆಂಟು ಮಾಯವಾಗಿತ್ತು. ಮರು ಓದಿಗೆಂದು...

3 ಪ್ರತಿಕ್ರಿಯೆಗಳು

 1. RJ

  ಸಂದರ್ಶನಗಳೆಂದರೆ ಕೇವಲ ‘ಸ್ವಯಂ ದರ್ಶನ’ ಆಗಿರುವ ಈ ದಿನಗಳಲ್ಲಿ ಇದೊಂದು ಮಾತ್ರ ಅಪವಾದದಂತಿದೆ.
  ಬೊಳುವಾರರ ಮಾತುಗಳು ಖುಷಿ ಕೊಟ್ಟವು.ನಮ್ಮಲ್ಲಿನ ಅನೇಕ ಸಾಹಿತಿಗಳೂ ಯಾಕೆ ಇಷ್ಟೇ ಸರಳವಾಗಿ ಅರ್ಥವಾಗುವಂತೆ ಮಾತನಾಡುವದಿಲ್ಲ?
  -RJ

  ಪ್ರತಿಕ್ರಿಯೆ
 2. venkatesh

  Nice (inter)view… Bolavaru sir spoken so candidly and yet authorative .. Nice to have such interview some more..

  ಪ್ರತಿಕ್ರಿಯೆ
 3. ನಾದಾ

  ಸೊಗಸಾಗಿದೆ ಬೊಳುವಾರರ ಸಂದರ್ಶನ. ಆದರೆ ಬುರ್ಖಾ ಮಾತ್ರ ಈಚೆಗೆ ಸಿಕ್ಕಾಬಟ್ಟೆ ಅತಿಯಾಗಿದೆ..ಪುಟ್ಟ ಕೂಸುಗಳು ಮದ್ರಸಕ್ಕೆ ಹೋಗುವಾಗಲೂ ಬುರ್ಖಾ ಹಾಕಬೇಕು. ಮೊದಲಾದರೆ ತುಸು ಮುಖ ಬಿಡುತ್ತಿದ್ದರು. ಈಗ ಕಣ್ಣುಹೊರತು ಪೂರ್ತಿಮುಚ್ಚಬೇಕು.ಕಣ್ಣಿಗೂ ಒಂದು ಬಗೆಯ ಬಲೆ ಬರತೊಡಗಿದೆ.
  ಕೆಲವು ಮುಸ್ಲಿಂ ಮನೆತನದವರು ಬಾಡಿ ಶೇಪ್ ಗೆ ಬುರ್ಖಾವನ್ನು ರೀ ಶೇಪ್ ಮಾಡುತ್ತಾರೆ.ಇದೊಂದು ವಿಚಿತ್ರ ಬೆಳವಣಿಗೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: