ಬೋಳುಗುಡ್ಡದ ಹಳದೀ ಮಣ್ಣು

ಎಸ್.ಬಿ. ಜೋಗುರ ಚಿತ್ರ ಕೃಪೆ : ಅ೦ತರ್ಜಾಲ ಅದೊಂದು ಮಣ್ಣ ಗೋಡೆಯ ಮನೆ. ಇಡೀ ಮನೆಯನ್ನ ಯುಗಾದಿ ಹಬ್ಬದ ಮುನ್ನಾ ದಿನ ಸಗಣಿಯಿಂದ ಸಾರಿಸಿದಂಗಿತ್ತು. ಆ ಸಗಣಿಯ ಗಮಲು ಇನ್ನೂ ಆರಿರಲಿಲ್ಲ. ಆ ಮನೆಯ ಮುಂದೆ ಅವತ್ತು ಬೆಳ್ಳಂಬೆಳಿಗ್ಗೆ ಹೀರೋ ಹೊಂಡಾ ಬೈಕೊಂದು ಬಂದು ನಿಂತಿರುವದಿತ್ತು. ಆ ಬೈಕ್ ಹಿಂದೆ ರೆಡ್ ಕ್ರಾಸ್ ಚಿಹ್ನೆಯ ಚಿತ್ರ ಹಾಗೂ ಅದರ ಕೆಳಬದಿ ಶುಷ್ಮಾ ಹಾಗೂ ರವಿ ಎಂಬ ಎರಡು ಹೆಸರು ನಿಚ್ಚಳವಾಗಿ ಎದ್ದು ಕಾಣುತ್ತಿತ್ತು. ಆ ಬೈಕ್ ಡಾ ಶ್ರೀಕಾಂತ ಅವರದು ಅಂತ ಇಡೀ ಊರಿಗೇ ಗೊತ್ತು. ಈಗೀಗ ಡಾ ಶ್ರೀಕಾಂತ ಈ ಮುಗದಳ್ಳಿಗೆ ಭೇಟಿ ಕೊಡುವದು ತುಸು ಹೆಚ್ಚೇ ಆಗಿತ್ತು. ಡಾಕ್ಟರ್ ಬಂದವರೇ ಅಲ್ಲೇ ಅಂಗಳದ ಹೊರಸಿನಲ್ಲಿ ಬರೀ ಮೈಯಲ್ಲಿ ಅಂಗಾತ ಶವದಂತೆ ಮಲಗಿದ ತಿಪ್ಪಣ್ಣನ ಬಳಿ ಬಂದು ನಿಂತು, ಅವನನ್ನು ಒಂದು ಸುತ್ತು ದಿಟ್ಟಿಸಿದರು. ಆ ಒಣಗಿದ ಶರೀರ ತುಂಬಾ ಕಷ್ಟ ಪಟ್ಟು ಉಸಿರನ್ನು ಹಿಡಿದು ಮೇಲೆ ಕೆಳಗೆ ಜಗ್ಗಾಡುತ್ತಿತ್ತು. ಹಾಗೆ ಎಳೆದಾಡುವಾಗ ಸೊಂಯ್.. ಸೊಂಯ್ ಗುಡುರ್.. ಗುಡುರ್.. ಅನ್ನೋ ಅವಾಜು ಬೇರೆ. ಶ್ರೀಕಾಂತ ನಿಟ್ಟುಸಿರು ಬಿಟ್ಟು ‘ತಿಪ್ಪಣ್ಣವರೇ ಮಲಗಿದಿರಾ..?’ ಎಂದಾಗ ಹಗೂರಕ ಕಣ್ಣು ಬಿಟ್ಟ ತಿಪ್ಪಣ್ಣ ಮಾತಾಡಲಿಕ್ಕೇ ಶುರು ಮಾಡಿದ. ಅವನ ಧ್ವನಿ ಮಾತ್ರ ಇನ್ನೂ ತ್ರಾಣ ಕಳಕೊಂಡಿರಲಿಲ್ಲ. ‘ಹಿಂಗೆಲ್ಲಾ ಆಗತೈತಿ ಅಂತ ನಮಗರೇ ಎಲ್ಲಿ ಗೊತ್ತಿತ್ತರೀ ಡಾಕ್ಟರ ಸೈಬರ..? ಬರ ಬಿದ್ದಿದ್ದೇ ಮಂದಿ ಗುಳೆ ಹೋಗತಿದ್ದರು ಅಂತದರೊಳಗ ನಮ್ಮ ಊರಾಗೇ ಒಂದು ಫ಼್ಯಾಕ್ಟ್ರಿ ಆಗತೈತಿ ಅಂದ್ರ ನಾವರೇ ಯಾಕ ಬ್ಯಾಡ ಅನ್ನೂಣು..ಕೂಸ.. ಕುನ್ನಿ ಕಟಗೊಂಡು ರತ್ನಾಗಿರಿ, ಗೋವಾಕ ಅಂತ ದುಡಿಲಾಕ ಹೋಗೂ ಬದ್ಲೀ ಇಲ್ಲೇ ಮನಿ ಮುಂದೇ ಕೆಲಸಾ ಸಿಗೂವಂಗ ಆದರ ಹೊಟ್ಟೀ ತಿಪಲಕ ದೂರಾವರಿ ಹೋಗೂದು ತಪ್ಪತೈತಿ ಅಂತ ನನ್ನಂಥಾ ನೂರಾರು ಮಂದಿ ಆ ಮುಂಬೈ ಸಾಹೇಬನ ಕಾಗದಕ ಸಹಿ ಮಾಡಿದ್ದಿವಿ ಅದರ ಫಲಾನೆ ಇದು’ ಅಂತ ಕಣ್ಣ ಚಿವುಟಿದ ಮೇಲೂ ಅವು ತೇವಾಗಲಿಲ್ಲ. ‘ಸಹಿ ಮಾಡೊ ಮುಂದ ಅದು ಏನು.. ಎಂಥ ಅಂತ ಓದಲಿಲ್ಲನೂ..?’ ‘ನಮ್ಮ ಮನಿತನದೊಳಗ ಯಾರಿಗೂ ಓದಲಿಕ್ಕ ಬರತಿರಲಿಲ್ಲರೀ.. ಅದೂ ಅಲ್ಲದೇ ಅದು ಇಂಗ್ಲಿಸನ್ಯಾಗಿತ್ತು. ಈಗ ನನ್ನ ಮಕ್ಕಳು, ಮೊಮ್ಮಕ್ಕಳು ಈಗ ಇಂಗ್ಲಿಸ ಓದೂದು ಕಲತಾವ’ ಅನ್ಕೊಂತ ಒಂದು ಸವನ ತಿಪ್ಪಣ್ಣ ಉಹಕ್..ಉಹಕ್.ಅಂತ ಕೆಮ್ಮಕೊಂತ ಅಲ್ಲೇ ಹೊರಸದ ಬಾಜೂ ಒಡಕ ಬುಟ್ಟೀಯೊಳಗಿನ ಬೂದಿಯ್೦ಳಗ ಕ್ಯಾ..ಥೂ.. ಅಂತ ಕ್ಯಾಕರಸಿ ಉಗಳದ. ಡಾಕ್ಟರ್ ಶ್ರೀಕಾಂತ ಅವನ ನಾಡಿ ಪರೀಕ್ಷೆ ಮಾಡಿ, ತನ್ನ ಬ್ಯಾಗಿನೊಳಗಿಂದು ಒಂದು ಗುಳಗೀ ಪಾಕೀಟ್ ತಗದು ‘ಇವನ್ನ ಮುಂಜಾನಿ ಒಂದು ಸಂಜೀಕೊಂದು ಊಟ ಆದ ಮ್ಯಾಲ ಕೊಡು.’ ಅಂತ ಮಗ ಲಚ್ಚಪ್ಪಗ ಹೇಳದ ‘ ನೋಡು ತಿಪ್ಪಣ್ಣ, ಕರದಿದ್ದು ತಿನಬ್ಯಾಡ ಮೊಸರ ಮೊಜ್ಜಗಿ ಏನೂ ಊಣಬ್ಯಾಡ ಸರೀ ಪತ್ತೆ ಮಾಡು’ ಮತ್ತ ಮುಂದಿನ ವಾರ ಬರ್ತೀನಿ ಅನ್ಕೊಂತ ಡಾಕ್ಟರ್ ನಡದ. ಡಾಕ್ಟರ್ ಬ್ಯಾಗ ಹಿಡಕೊಂಡು ಅವನ ಹಿಂದಿಂದೇ ನಡದ ತಿಪ್ಪಣ್ಣನ ಹಿರಿ ಮಗ ಲಚ್ಚಪ್ಪ ‘ಸಾಯೇಬ್ರ, ಅಪ್ಪಗ ಈಗ ಹ್ಯಾಂಗ ಐತಿ..? ನಸುಕಿನೊಳಗ ಬಾಳ ತ್ರಾಸ್ ಆಗಿತ್ತು ಅದ್ಕೆ ನಿಮ್ಮ ಹತ್ಯಾಕ ಓಡಿ ಬಂದೆ’ ‘ ಖರೆ ಹೇಳಬೇಕಂದರ ಅಂವಾ ಇನ್ನೇನು ಬಾಳ ದಿನಾ ಉಳಿಯುವಂಗಿಲ್ಲ ಪುಪ್ಪಸ ಅನ್ನೂದು ಹೊಗಿ ಸುತ್ತಿ ಇಲಣ ಹಿಡದ ಮನಿ ಜಂತಿ ಆದಂಗ ಆಗ್ಯಾದ. ಒಂದು ದೊಡ್ದ ಮನಿಯೊಳಗಿನ ಒಂದೊಂದು.. ಒಂದೊಂದು.. ಲೈಟ್ ಆರ್ಕೊತ ಬರಾಕತ್ತಾವ ಇನ್ನೊಂದೈದಾರು ಲೈಟ್ ಉಳದಾವ ಅಷ್ಟೇ..’ ‘ ನನಗ ತಿಳಿಲಿಲ್ಲರೀ..’ ‘ ಏನಿಲ್ಲ ಅವನ ಕಥೀ ಮುಗೀಲಕ ಬಂದೈತಿ ಅಂತ’ ‘ಎಲ್ಲೆರೆ ದೊಡ್ಡ ದವಾಖಾನಿಗಿ ತೋರಸದರ’ ‘ ಏನೂ ಪ್ರಯೋಜನ ಇಲ್ಲ.. ಎರಡು ದಿನ ಹೆಚ್ಚೂ ಕಡಿಮಿ ಅಷ್ಟೇ’ ‘ ಡಾಕ್ಟರ ಸಾಯೇಬರ.. ನನಗೂ ಈಗೀಗ ಕೆಮ್ಮ ಅನ್ನೂದು ಬಾಳ ತ್ರಾಸ್ ಮಾಡಾಕತೈತಿ’ ‘ ನೀನೂ ಆ ಹಳದೀ ಕೇಕಿನ ಪ್ಯಾಕ್ಟರಿ ಒಳಗ ಕೆಲಸಾ ಮಾಡತಿ ಹೌದಿಲ್ಲೊ..?’ ‘ ಅದನ್ನ ಬಿಟ್ಟರ ಮತ್ತ ಇಲ್ಲಿ ಬ್ಯಾರೆ ಯಾವ ಪ್ಯಾಕ್ಟರಿ ಅದಾವರೀ..?’ ‘ ನಿಮ್ಮ ಹೊಲದಾಗ ದುಡಿಬೇಕಿಲ್ಲೋ..?’ ‘ ಹೊಲಾ ಎಲ್ಲಿ ಐತಿರೀ..? ಇದ್ದ ಜಮೀನ ಆ ಪ್ಯಾಕ್ಟರಿಗಿ ನೌಕರಿ ಕೊಡ್ತಾರಂತ ಬಿಟ್ಟುಕೊಟ್ಟಿವಿ’ ‘ನಿಮ್ಮ ಊರಿನವರು ಹೆಚ್ಚು ಕಮ್ಮಿ ಎಷ್ಟು ಮಂದಿ ಅಲ್ಲಿ ಕೆಲಸಾ ಮಾಡ್ತಾರ.?’ ‘ಮನಿಗಿ ಒಬ್ಬರು.. ಇಬ್ಬರು.. ಅಲ್ಲಿ ಕೆಲಸಕ್ಕ ಹೋಗ್ತಾರ’ ‘ ಅಂದರ..?’ ‘ಯಾರು ಹೆಚ್ಚಿಗಿ ಹೊಲಾ ಕೊಟ್ಟಾರ ಅವರ ಮನ್ಯಾಗ ಇಬ್ಬರಿಗಿ, 0ಾರು ಕಡಿಮಿ ಕೊಟ್ಟಾರ ಅವರ ಮನ್ಯಾಗ ಒಬ್ಬರಂಗ ಹಿಡದು ಕೆಲಸಾ ಕೊಟ್ಟಾರ’ ‘ ಹೊಲಾ ಕೊಡದೇ ಇದ್ದವರಗಿ..?’ ‘ ಅವರಿಗಿ ಆ ಪ್ಯಾಕ್ಟರಿಯೊಳಗ ಕೆಲಸಾ ಸಿಕ್ಕಿಲ್ಲರಿ’ ‘ಆಯಿತು ಆ ಬ್ಯಾಗ ತಾ ಇಲ್ಲಿ’ ಎಂದು ಡಾಕ್ಟರ್ ಅದನ್ನ ತನ್ನ ಬೈಕ್ ಸೈಡಿರೋ ಬ್ಯಾಗಲ್ಲಿಟ್ಟು ಕಿಕ್ ಹೊಡದು ‘ ಆಯಿತು ನಾ ಮತ್ತ ಮುಂದಿನ ವಾರ ಬರ್ತಿನಿ’ ಅಂತ ಬೈಕ್ ಎಕ್ಸಿಲೀಟರ್ ತಿರವಿದ್ದ. *************************** ಸಿಂದಗಿ ತಾಲೂಕಿನೊಳಗ ಮಲಘಾಣ ರೋಡಲ್ಲಿರೋ ಬೋಳ ಗುಡ್ಡದ ನಳಲೊಳಗ ಇರೋ ಊರು ಮುಗದಳ್ಳಿ. ನೂರಾರು ವರ್ಷಗಳಿಂದಲೂ ನಾಗರಿಕತೆಯ ಯಾವ ಡೌಲೂ ಇಲ್ಲದೇ ಪಕ್ಕಾ ಹಳ್ಳಿ ಥರಾನೇ ಇದ್ದ ಈ ಮುಗದಳ್ಳಿಗೆ ಅವತ್ತೊಂದಿನ ಮುಂಜಮುಂಜಾನೆ ಒಂದೆರಡು ಜೀಪಗಳು ಬಂವ್ ಅಂತ ಬೊಳಗುಡ್ದದ ಕಡಿ ಹೋದವು. ಅದರೊಳಗಿರೋ ಅಧಿಕಾರಿಗಳು ಕೆಳಗಿಳಿದು ಮಣ್ಣ ಪರೀಕ್ಷೆ ಮಾಡಿ ಒಂದು ಪೇಪರದೊಳಗ ಪೊಟ್ಟಣ ಕಟಗೊಂಡು ಹೋದವರು ಮುಂದ ತಿಂಗಳ ಒಪ್ಪತ್ತಿನೊಳಗ ಮುಂಬೈನ ಶರ್ಮ ಅನ್ನೋ ಉದ್ಯಮಿ ಒಬ್ಬನನ್ನ ಕರಕೊಂಡು ಬಂದರು. ಆ ಶರ್ಮ ಕರೀ ಕೊಟ ಹಾಕೊಂಡು, ಆ ಭಾಗದ ಶಾಸಕನ ಜೋಡಿ ಇಂಗ್ಲಿಷಿನೊಳಗ ಅದೇನೋ ಮಾತಾಡಿ ವ್ಯವಹಾರ ಕುದರಸಿದ್ದ. ಶಾಸಕ ಗುರಸಿದ್ದಪ್ಪ ಮರುದಿನ ಮುಗದಳ್ಳಗಿ ಬಂದು ಬಸರೀಗಿಡದ ಕೆಳಗ ಪಂಚಾಯತಿಕಿ ಸೇರಸಿದ್ದ. ಆವಾಗ ಈಗ ಹಾಸಿಗೆ ಹಿಡದಿರೋ ತಿಪ್ಪಣ್ಣ ಪಂಚಾಯತಿ ಮೆಂಬರ್ ಆಗಿದ್ದ. ಪಂಚಾಯತಿ ಅಧ್ಯಕ್ಷ ಮಾದೇವಪ್ಪಗೌಡ ಊರಾನ ಎಲ್ಲಾ ಜನರ ಸೇರಿಸಿ ‘ನಮ್ಮ ಶಾಸಕರು ಊರಿನ ಸಲಾಗಿ ಬಾಳ ಚುಲೋ ಒಂದು ಯೋಜನೆ ತಂದಾರ, ಸುತ್ತ ಇಪ್ಪತ್ತು ಹಳ್ಳೀ ಬಿಟ್ಟು ನಮ್ಮ ಮುಗದಳ್ಳೀಗೇ ಆ ಪ್ಯಾಟ್ಟ್ಟರಿ ಬರೂವಂಗ ಮಾಡ್ರಿ ಅಂತ ನಾವೆಲ್ಲರೂ ಸೈ ಮಾಡದರ ಮುಂದಿನ ತಿಂಗಳೇ ನಮ್ಮ ಊರಿಗೆ ಒಂದು ಪ್ಯಾಟ್ಟರಿ ಬರತೈತಿ. ನಮ್ಮ ಮಕ್ಕಳಿಗಿ ಉದ್ಯೋಗ ಸಿಗತೈತಿ. ಅದೇ ಕಂಡೀಶನ್ ಮ್ಯಾಲ ನಾವು ಜಾಗಾ ಕೂಡೂದು ಅಂತ ಮಾತೂ ಆಗೈತಿ. ಈಗೇನಿಲ್ಲ ನೀವು ಮಾಡಬೇಕಾಗಿದ್ದು ಬರೀ ಒಂದು ಸೈ ಅಟ್ಟೇ’ ಅಂತ ಮಾತು ಮುಗಿಸಿ ಎಲ್ಲಾರ ಕಡಿಂದ ಸೈ ತಗೊಂಡಿದ್ದರು. ಹಿಂಗ ಮುಂದ ಆಗಿ ಸೈ ತಗೊಂಡ ಅಧ್ಯಕ್ಷ ಮಾದೇವಪ್ಪಗೌಡ ಮಣ್ಣಾಗಿ ಅದಾಗಲೇ ವರ್ಷ ಮ್ಯಾಲಾಯ್ತು, ಹಿಂಗೆಲ್ಲಾ ಊರ ಮಂದಿ ಸೈ ಕೊಟ್ಟು ಪ್ಯಾಕ್ಟರಿಯೊಳಗ ತಮ್ಮ ಮನಿಯೊಳಗಿನ ಯಾರನ್ನ ಕೆಲಸಕ್ಕ ಸೇರಸಬೇಕು ಅನ್ನೋ ಯೋಚನೆಯೊಳಗ ಇದ್ದಾಗಲೇ ಹಿರೇಮಠದ ಮಲ್ಲಿಕಾರ್ಜುನ ಸ್ವಾಮಿಗೋಳು ‘ಸೈ ಕೊಡಬ್ಯಾಡ್ರಿ.. ನಿಮ್ಮ ಜಾಗಾ ಬಿಡಬ್ಯಾಡ್ರಿ.. ಭೂಮಿತಾಯಿ ನಮ್ಮ ಹೆತ್ತಮ್ಮ ಇದ್ದಂಗ. ಯಾವದೋ ಒಬ್ಬ ಮಾರವಾಡಿ ಒಡ್ಡೊ ಆಸೇಕ ಬಿದ್ದು ನಿಮ್ಮ ಜಮೀನ ಬಿಡಬ್ಯಾಡ್ರಿ ಅದೂ ಅಲ್ಲದೇ ಅದು ಚುಲೋ ಪ್ಯಾಕ್ಟರಿ ಅಲ್ಲ. ಆ ಬೋಳುಗುಡ್ಡ್ದದೊಳಗ ಅದೇನೋ ಹಳದೀ ಪೌಡರ್ ಸಿಗತೈತಿ ಅಂತ ಅದನ್ನ ಬಳಸಿಕೊಂಡು ಯುರೇನಿಯ೦  ತಯಾರಿಸ್ತಾರಂತ. ಆ ಹಳದೀ ಪೌಡರನಿಂದ ಪರಿಸರ ಹಾಳಾಗತೈತಿ ನಾವು ಉಸಿರಾಡೊ ಗಾಳಿ, ನೀರು ಎಲ್ಲಾ ಹೊಲಸ ಆಗತೈತಿ’ ಅಂತ ಆ ಸ್ವಾಮಿ ಊರಾಗಿನ ಮನಿ ಮನಿಗಿ ಹೋಗಿ ಹೇಳದರೂ ಜನರ ಮನಸು ಬದಲಾಗಲಿಲ್ಲ. ಅವತ್ತೊಂದಿನ ಶಾಸಕ ಗುರುಸಿದ್ದಪ್ಪ ಮಲಕಣ್ಣದೇವರ ಗುಡಿಯೊಳಗ ‘ಸ್ವಾಮೀಗಿ ಹಿಂದಿಲ್ಲ..ಮುಂದಿಲ್ಲ. ಮೊದಲೇ ಸನ್ಯಾಸಿ. ಅಂವಾ ಹಂಗೇ ಹೇಳ್ತಾನ. ಅವನ ಮಾತ ಕೇಳದರ ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಕರಕೊಂಡು ಬಂದು ಮಠಕ್ಕ ಬಿಡ್ರಿ ಅಂತಾನ. ಮೊದಲೇ ಎಲ್ಲೂ ನೌಕರಿ ಸಿಗುವಂಗಿಲ್ಲ ನಾನು ನಮ್ಮ ಶರ್ಮಾ ಸಾಹೆಬರಗಿ ಹೇಳಿ ಮುಗದಳ್ಳಿ ಬಾಳ ಹಿಂದ ಉಳಿದ ಹಳ್ಳಿ ಅದು ಏನರೇ ಆಗಲಿ ನೀವು ಪ್ಯಾಕ್ಟರಿ ಇದೇ ಊರಾಗ ಹಾಕರಿ ಅಂತ ಹೇಳಿ ಅವರನ್ನ ಕರಕೊಂಡು ಬಂದೀನಿ. ನಿಮ್ಮ ಊರಾಗ ಹಿರೇರು ಮಾಡಿದ ಪುಣ್ಯಕ್ಕ ಈ ಊರಾಗಿನ ಬೋಳು ಗುಡ್ಡದ ನೆತ್ತೀಯೊಳಗ ಅದೇನೋ ಹಳದೀ ಪೌಡರ್ ಐತೆಂತ. ಅದರಿಂದ ನಿಮ್ಮ ಊರ ನಸೀಬೇ ಹಿಂಗದಂಗ ಆಯಿತು ಯಾರ ಮಾತೂ ಕೇಳಬ್ಯಾಡ್ರಿ. ಮನಿಗಿ ಒಂದು ನೌಕರಿ ಅಂದ್ರ ಸುಮ್ಮ ಆಗಲಿಲ್ಲ. ನಾ ಅಂತೂ ಇಟ್ಟು ಹೇಳೀನಿ ನಾಳೆ ಏನಾದರೂ ಈ ಪ್ಯಾಕ್ಟರಿ ಬ್ಯಾರೇ ಊರಿಗಿ ಹೋಯ್ತು ಅಂದರ ನನಗ ಕೇಳಬ್ಯಾಡ್ರಿ’ ಅನ್ಕೊಂತ ಶಾಸಕ ತುಸು ಸಿಟ್ಟೀಲೇ ಮಾತ ಮುಗಸದಂಗ ಇತ್ತು. ಅಲ್ಲಿ ಸೇರಿರೋ ಮಂದಿ ಅಲ್ಲೇ ಗುರ್ ಗುರ್ ಅಂದಂಗ ಮಾಡಿ ಕಡಿಗಿ ಮೇಂಬರ್ ತಿಪ್ಪಣ್ಣನ್ನ ಎದ್ದು ನಿಲ್ಲಿಸಿದ್ದರು. ‘ನಾವು ಹೊಲಾ ಬಿಟ್ಟು ಕೊಡೂದು ಬಂದಿಲ್ಲ, ನಾಳೆ ಏನಾದರೂ ಅವರು ನಮ್ಮ ಹೊಲಾ ತಗೊಂಡು ಅಪರಾತಪರಾ ಮಾಡಿ ನಮ್ಮ ಮಕ್ಕಳನ್ನ ನೌಕರಿಗಿ ತಗೊಳಿಲ್ಲ ಅಂದರ ಹ್ಯಾಂಗ..? ಅಂತ ಎಲ್ಲಾರೂ ಕೇಳಾಕತ್ತಾರ’ ಅಂದಾಗ ಶಾಸಕ ಗುರುಸಿದ್ದ ಎದ್ದು ನಿಂತು ‘ ತಿಪ್ಪಣ್ಣ ನೀ ಹೇಳೂದು ಬರೊಬ್ಬರಿ ಅದ, ಅದ್ಕೇ ನಾ ಶರ್ಮಾ ಸಾಹೇಬಗ ಮೊದಲೇ ಹೇಳಿ ಇಟ್ಟೀನಿ ಆ ಊರನವರು ತಮ್ಮ ಮಕ್ಕಳಗಿ ನೌಕರಿ ಆರ್ಡರ್ ಕೊಡೂ ಮಟಾ ಅವರು ತಮ್ಮ ಹೊಲಾ ಬಿಡಂಗಿಲ್ಲ ಅಂತ. ಕೈಯಾಗ ಆರ್ಡರ್ ತಗೊಂಡೇ ಹೊಲ ಕೊಡ್ರಿ’ ಅಂದಾಗ ಎಲ್ಲರೂ ಆಯ್ತು ಆಯ್ತು ಎಂದು ದನಿಗೂಡಸದರು. ಮುಗದಳ್ಳಿಯ ಬೋಳು ಗುಡ್ಡದ ಮ್ಯಾಲ ಎಂಟತ್ತು ಜೆ.ಸಿ.ಬಿ. ಹಗಲು ರಾತ್ರಿ ಅನ್ನದೇ ಗುಡ್ಡದ ನೆತ್ತೀನ್ನ ಹಡ್ಡಾಕತ್ತದ್ವು. ಗುಡ್ಡದ ಮ್ಯಾಲಿನ ಮಣ್ಣಿನ ಪದರ ತಗೀತಾ ಹೋದಂಗ ಒಳಗ ಹಳದೀ ಬಣ್ಣದ ಮಣ್ಣಿನ ಪದರ ಕಾಣಾಕ ಶುರು ಆಯ್ತು. ಇನ್ನೇನು ಹಳದೀ ಕೇಕು ಅಲ್ಲಿಂದ ತಗದು ರವಾನೆ ಆಗಬೇಕು ಅನ್ನೂ ಹಂತದೊಳಗ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರನ್ನ ಕರಸಿ ಶರ್ಮ ಆ ಪ್ಯಾಕ್ಟರಿನ್ನ ಉದ್ಘಾಟನೆ ಮಾಡಿದ್ದೂ ಆಯ್ತು. ಮುಗದಳ್ಳಿ ಗ್ರಾಮ ಪಂಚಾಯತದ ಅಧ್ಯಕ್ಷ ಮಾದೇವಪ್ಪಗೌಡ ತಮ್ಮ ಊರಿನ ಹುಡುಗರನ್ನ ಬಿಟ್ಟರ ಬ್ಯಾರೆ ಯಾವದೇ ಊರಿನವರನ್ನ ಕೆಲಸಕ್ಕ ತಗೊಬಾರದು ಅನ್ನೋ ಕರಾರನ್ನ ಜಿಲ್ಲಾ ಉಸ್ತುವಾರಿ ಸಚಿವರ ಎದುರೊಳಗೇ ಇಟ್ಟಿದ್ದ. ಅವರು ನಕ್ಕೋಂತ ‘ಆಯ್ತು ಹಾಗೇ ಆಗಲಿ’ ಅಂತ ಶರ್ಮರ ಕಡಿಂದ ಮಾತು ಸೈತ ಕೊಡಿಸಿದ್ದರು. ಹೆಚ್ಚೂ ಕಮ್ಮಿ ಮುಗದಳ್ಳಿಯ ಮುನ್ನೂರು ಯುವಕರಿಗಿ ಇಲ್ಲಿ ನೌಕರಿ ಸಿಕ್ಕಿತ್ತು. ಶರ್ಮಾ ತನಗ ಬೇಕಾಗಿರೋ ಟೆಕ್ನಿಶಿಯನ್ ಗಳನ್ನ ಮುಂಬೈಯಿಂದಲೇ ಕರಕೊಂಡು ಬಂದಿದ್ದ. ಬೋಳಗುಡ್ಡಾ ಹಡ್ಡವರು, ಲೋಡ್ ಮಾಡವರು, ಲೋಡ್ ಲೆಕ್ಕಾ ಇಡವರೆಲ್ಲಾ ಮುಗದಳ್ಳಿಯವರೇ.. ಇಲ್ಲಿ ಕೆಲ್ಸಾ ಮಾಡವರಿಗೆಲ್ಲಾ ಚುಲೋ ಸಂಬಳ ಇತ್ತು. ತೀರಾ ಕಡಿಮೆ ಅಂದರೂ ಐದು ಸಾವಿರ ರೂಪಾಯಿ. ಕೆಲವರಂತೂ ರಾತ್ರಿ ಪಾಳಿ ಮಾಡಿ ಹತ್ತು ಸಾವಿರ ರೂಪಾಯಿಮಟ ದುಡಿತಿದ್ದರು. ಮುಗದಳ್ಳಿಯ೦ಥಾ ಹಳ್ಳಿಯೊಳಗ ಐದು ಸಾವಿರ ಅಂದರೂ ಅದು ದೊಡ್ಡ ಸಂಬಳಾನೇ. ಎಷ್ಟೋ ರಿಕಾಮಿ ಹುಡುಗರು ನೌಕರಿಗಿ ಹತ್ತದರು. ಇದೇ ಕಾರಣದಿಂದ ಕೆಲವರದು ಲಗ್ನಾನೂ ಐತು. ಆದರ ಪ್ಯಾಕ್ಟರಿ ಸುರು ಆಗಿದ್ದೇ ತಡ ಹಿರೇಮಠದ ಸ್ವಾಮಿ ಮಾತ್ರ ಮಠಾ ಖಾಲಿ ಮಾಡಿದ್ದ. ಮುಗದಳ್ಳಿಯ ಬೋಳಗುಡ್ಡದ ಬಾಜೂನೇ ಈ ಮಠ ಇತ್ತು ಬೆಳ್ಳ ಬೆಳತನಕ ಅಲ್ಲಿ ನಡಿಯೋ ಪ್ಯಾಕ್ಟರಿ ಕಾಮಗಾರಿ ಗದ್ದಲ, ಧೂಳ ಸ್ವಾಮಿ ಅಲ್ಲಿಂದ ಕಾಲು ಕೀಳುವಂಗ ಮಾಡಿತ್ತು. ಈ ಬೋಳುಗುಡ್ಡದ ಹಳದೀ ಕೇಕಿನ ಪ್ಯಾಕ್ಟರಿಯೊಳಗ ಕೆಲ್ಸಾ ಮಾಡೊ ಕಾರ್ಮಿಕರಿಗೆ ಒಂದು ಯೂನಿಫ಼ಾರ್ಮಿತ್ತು. ಒಂದು ದಪ್ಪನೆಯ ಪ್ಲಾಸ್ಟಿಕಿನ ನೀಲಿ ಶರ್ಟ್ ಮತ್ತು ಪ್ಯಾಂಟ್, ತಲೆಗೆ ಅದೇ ಬಣ್ಣದ ಒಂದು ಹೆಲ್ಮೆಟ್. ಕೈಗೆ ಎರಡು ಅದೇ ಬಣ್ಣದ ಗ್ಲೌಜು. ಮೊದಮೊದಲು ಈ ಯುವಕರು ಕೆಲಸಕ್ಕೆ ಹೋಗುವಾಗ, ಬರೋವಾಗ ಊರಿನ ಜನರೆಲ್ಲಾ ನಿಂತು ನೋಡುತ್ತಿದ್ದುದೂ ಇತ್ತು. ಕ್ರಮೇಣವಾಗಿ ಆ ಕುತೂಹಲ ಕಡಿಮೆಯಾಗಿತ್ತು. ಅಲ್ಲಿ ಕೆಲಸ ಮಾಡುವವರು ಕೂಡಾ ತಾವೇನೋ ಒಂದು ವಿಶೇಷ ನೌಕರಿ ಮಾಡಾಕತ್ತೀವಿ ಅನ್ನೋ ಧಿಮಾಕಿನಿಂದ ತೆರಳುವದಿತ್ತು. ಅಂತೂ ಈ ಬೊಳಗುಡ್ಡ್ದದ ಫ಼್ಯಾಕ್ಟರಿ ಮಹಿಮೆ ಸುತ್ತಮುತ್ತಲಿನ ಹಳ್ಳಿಗಳಿಗೆಲ್ಲಾ ಚಿರಪರಿಚಿತವಾಯಿತು. ಊರಲ್ಲಿ ನಾಗರಿಕತೆಯ ಡೌಲು ಜೋರಾಯಿತು. ಪ್ರತಿ ಮನೆಯಲ್ಲೂ ಕಲರ್ ಟಿ.ವಿ. ರೆಫರಿಜಿರೇಟರ್, ಅಡುಗೆ ಗ್ಯಾಸ್ ಮುಂತಾದ ಸಲಕರಣೆಗಳೆಲ್ಲಾ ಬರತೊಡಗಿದವು. ಊರ ಜನರೆಲ್ಲಾ ತಮ್ಮ ಈ ಬಗೆಯ ಸುಖಕ್ಕೆ ಆ ಹಿರೇಮಠದ ಸ್ವಾಮಿ ಕಲ್ಲ ಹಾಕತಿದ್ದ ಅಂತ ಆಡಿಕೊಳ್ಳುತ್ತಿದ್ದರು. ಸಿಂದಗಿಯ ಒಂದು ಪುಟ್ಟ ಹಳ್ಳಿ ಆ ಬೋಳುಗುಡ್ಡದಲ್ಲಿ ಸಿಗುವ ಹಳದೀ ಕೇಕಿನಿಂದಾಗಿ ವಿಶ್ವವಿಖ್ಯಾತವಾಯಿತು. ಅಲ್ಲಿಯ ಆ ಹಳದೀ ಪೌಡರ್ ವಿದೇಶಕ್ಕೆ ರಪ್ತಾಗುವ ಬಗ್ಗೆ ಪತ್ರಿಕೆಯೊಂದರಲ್ಲಿ ಲೇಖನ ಬಂದಾಗ ಅಲ್ಲಿ ನೌಕರಿ ಮಾಡುವವರ ಠೀವಿ ಇನ್ನಷ್ಟು ಬದಲಾಯಿತು. ತಮ್ಮ ಕೈಯಾರೆ ಲೋಡ್ ಆದ ಗಾಡಿಗಳಲ್ಲಿಯ ಹಳದೀ ಪೌಡರ್ ಫ಼ಾರಿನ್ ಗೆ ಹೋಗುತ್ತದೆ ಅಂತ ತಿಪ್ಪಣ್ಣನ ಮಗ ಲಚ್ಚಪ್ಪ ಕಥೆ ಮಾಡಿ ಹೇಳಿದ್ದ. ತಿಪ್ಪಣ್ಣ ತನ್ನ ಜಮೀನು ಹೋದರೂ ಚಿಂತಿಲ್ಲ ಮಗಾ ಅಂಥಾ ಪ್ಯಾಟ್ಟರಿಯೊಳಗ ನೌಕರಿ ಮಾಡೂವಂಗ ಆಯ್ತು ಅಂತ ಸಮಾಧಾನ ಪಟ್ಟಿದ್ದ. ಅದು ಯುಗಾದಿಯ ಸಂದರ್ಭ. ಮಲಕಣ್ಣ ದೇವರ ಗುಡಿಯೊಳಗೆ ಹಿರೇಮಠದ ಮಲ್ಲಿಕಾರ್ಜುನ ಸ್ವಾಮಿಗೋಳು ಬಂದಾರ ಅದೇನೋ ಸಭೆ ನಡಸವರದಾರಂತ ಅನ್ನೋ ಸುದ್ದಿ ಊರ ತುಂಬಾ ಹಬ್ಬಿದ್ದೇ ಪ೦ಚಾಯ್ತ ಅಧ್ಯಕ್ಷ, ಉಪಾಧ್ಯಕ್ಷರು ತಿಪ್ಪಣ್ಣ ಮತ್ತ ಊರಿನ ಕೆಲ ಹಿರೇರು ಕೂಡಿ ಗುಡಿಕಡಿ ನಡದರು. ಹಿರೇಮಠದ ಸ್ವಾಮಿ ಜೋಡಿ ಪರಿಸರವಾದಿ ಮುತ್ತುರಾಜನೂ ಬಂದಿರುವದಿತ್ತು. ಸಭೆ ಆರಂಭವಾಗುತ್ತಿದ್ದ ಹಾಗೆ ಮುತ್ತುರಾಜ ತನ್ನ ಕೈಯಲ್ಲಿರುವ ಮ್ಯಾಗಜಿನ್ ಒಂದರಲ್ಲಿಯ ಪೋಟೊಗಳನ್ನು ಊರವರಿಗೆ ತೋರಿಸಿ ‘ಸೂಕ್ಷ್ಮವಾಗಿ ನೋಡಿ, ಇದು ಬಿಹಾರದ ಒಂದು ಹಳ್ಳಿ. ಚಿತ್ರದಲ್ಲಿ ಕಾಣುವ ಹಸಿರು, ನದಿ, ಬೆಳೆ, ದನಕರುಗಳು ಇಲ್ಲಿಯ ಜನಜೀವನ ಇವೆಲ್ಲವೂ ಒಂದು ಕಾಲದಲ್ಲಿ ನೀವೇನು ಈಗ ಇಲ್ಲಿ ಚಿತ್ರದಲ್ಲಿ ನೋಡುತ್ತಿದ್ದಿರೆಲ್ಲಾ ಹಾಗೇ ಇದ್ದವು. ಯಾವಾಗ ಆ ಊರಲ್ಲಿ ಇದೇ ರೀತಿಯ ಹಳದೀ ಪೌಡರಿನ ಪ್ಯಾಕ್ಟರಿ ಒಂದು ಆರಂಭವಾಯಿತೋ ಆಗ ಶುರುವಾಯ್ತು ನೋಡಿ ಆ ಊರಿಗೆ ನರಕ ದರ್ಶನ. ಇಲ್ಲಿ ಕಾಣುವ ಈ ಚಿತ್ರಗಳನ್ನು ನೋಡಿ ಕೊಳೆಯಾದ ನೀರು, ಸತ್ತು ಬಿದ್ದ ಮೀನು, ಚರ್ಮರೋಗ ಇವೆಲ್ಲವೂ ನಾನು ಮೊದಲು ತೋರಿಸಿದ ಅದೇ ಹಸಿರಾದ ಹಳ್ಳಿಯ ನಂತರದ ಚಿತ್ರಣ. ನಿಮ್ಮ ಹಳ್ಳಿಯ ಹೆಸರು ಮುಗದಳ್ಳಿಯಲ್ಲ ಅದು ಮುಗ್ದ ಹಳ್ಳಿ. ಪಾಪ ನಿಮಗೆಲ್ಲಾ ಈ ಹಳದೀ ಪೌಡರಿನ ಅಪಾಯಗಳು ಗೊತ್ತಿಲ್ಲ. ಅದನ್ನು ಯಾರೂ ನಿಮ್ಮ ಮುಂದೆ ಹೇಳಲೂ ಇಲ್ಲ. ಈಚೆಗೆ ನಿಮ್ಮ ಸ್ವಾಮಿಗಳು ಬೆಂಗಳೂರಿನ ನನ್ನ ಕಚೇರಿಗೆ ಬಂದು ವಸ್ತು ಸ್ಥಿತಿ ಹೇಳಿದ ಮೇಲೆ ನಡೆಯಿರಿ ನಾನೂ ಖದ್ದಾಗಿ ನಿಮ್ಮ ಊರಿಗೆ ಬರುತ್ತೇನೆ ಎಂದು ಮಾತು ಕೊಟ್ಟಿದ್ದಕ್ಕೆ ಈಗ ನಿಮ್ಮ ಎದುರಲ್ಲಿರುವೆ. ಈಗಲೂ ಕಾಲ ಮಿಂಚಿಲ್ಲ ನಿಮ್ಮ ಹಳ್ಳಿ ಬಿಹಾರದ ಆ ಹಳ್ಳಿಯ೦ತೆ ಆಗಬಾರದು ಎಂತಾದರೆ ನಿಮ್ಮ ಮಕ್ಕಳನ್ನು ತಕ್ಷಣದಿಂದಲೇ ಅಲ್ಲಿ ಕೆಲಸಕ್ಕೆ ಹೋಗುವದನ್ನು ನಿಲ್ಲಿಸಿ. ಆ ಪ್ಯಾಕ್ಟರಿಯನ್ನು ಬಂದ್ ಮಾಡಲು ಹೋರಾಟ ಮಾಡಿ ನಾನೂ ನಿಮ್ಮ ಜೊತೆಗಿದ್ದೇನೆ’ ಎಂದೆಲ್ಲಾ ಹೇಳಿ ಹೋದ ಮೇಲೆ ಮುಗದಳ್ಳಿಯ ಜನ ಮತ್ತೆ ಎಂದಿನಂತೆ ತಮ್ಮ ಬದುಕಿನ ಜಂಜಡದೊಂದಿಗೆ ಬ್ಯುಜಿಯಾದರು. ಮುಗದಳ್ಳಿಗೆ ಅದ್ಯಾರ ಕಣ್ಣು ಬಿತ್ತೋ ಏನೋ.. ಯಾವ ಬೆಳೀನೂ ಚುಲೋತನೆಗೆ ಬರ್ತಾ ಇರಲಿಲ್ಲ. ಬಿಳಿ ಜೋಳ ಅನ್ನೂದು ಕಾಡಿಗಿ ಹಿಡದು ಕರ್ರಗ ಆಗ್ತಾ ಇದ್ವು. ತರಕಾರಿ ಅನ್ನೂದು ಒಂಥರಾ ಸುಟ್ಟಂಗ ಆಗಿ, ದನಾ ಸೈತಾ ಮೂಸಿ ನೋಡುವಂಗಿರಲಿಲ್ಲ. ಕಟಬರ ರುದ್ರಪ್ಪನ ತೋಟದೊಳಗ ಭರ್ಚಕ್ ಹೂವು ಹಿಡದ ಬದನೀಪಡವೊಂದು ಇದ್ದಕಿದ್ದಂಗ ಕರ್ಲ ಆಗಿ ಒಣಗಿ ಹೋಯಿತು. ಲಮಾಣಗೇರ ಬಾಳೂನ ನಿಂಬೀ ಗಿಡಗೋಳೆಲ್ಲಾ ಬೀಳ ಬಿದ್ದಂಗ ಆಗಿದ್ವು. ಚುಲೊ ಎತಗೋಳು ಬಾಯಿ ಬ್ಯಾನಿ ಬಂದು ಮೇವ ತಿಲ್ಲಾರದಕ ಒಣಗಿಹೋದಂಗ ಆಗಿದ್ವು. ಊರಾಗಿನ ಯಾವ ಮಾವಿನ ಗಿಡಕ್ಕೂ ಹೂವು ಆಗಿರಲಿಲ್ಲ. ಇದು ಯಾರೋ ತಮ್ಮ ಹಳ್ಳೀಗಿ ಮಾಟಾ ಮಾಡಸ್ಯಾರ ಅಂತ ಹೇಳಿ ಪಂಚಾಯತಿ ಉಪಾಧ್ಯಕ್ಷ ನಿಜಲಿಂಗಪ್ಪ ಮೋರಟಗಿಯೊಳಗಿನ ಮಾಟಾ ತಗಿಯೋ ಶಿವಬಸವಯ್ಯಗ ಬೆಟ್ಟಿ ಆಗಿ ಅವರು ಮಂತ್ರಿಸಿ ಕೊಟ್ಟ ತೆಂಗಿನಕಾಯಿನ್ನ ತಗೊಂಡು ಬಂದು ಪೂರ್ವ ದಿಕ್ಕಿಗಿ ಊರ ಹೊರಗಿರೋ ಹುಣಸೀ ಗಿಡದ ಎಡಕಿನ ಟೊಂಗೆಕ ಬಿಗಿದ ಮ್ಯಾಲೂ ಊರಿನ ನಸೀಬ ಹಿಂಗಿರಲಿಲ್ಲ. ಇದು ಯಾಕ ಹೀಂಗ ಅನ್ನೂದು ಯಾರಿಗೂ ತಿಳಿಲಾರದಂಗ ಆಯಿತು. ಊರಾಗ ನಾಕುನೂರು ಮನಿ ಇದ್ವು. ಮೊದಲ ಜಡ್ಡು ಜಾಪತ್ರಿ ಅಂತ ದವಾಖಾನಿಗಿ ಹೋಗೂದು ಬಾಳ ಅಪರೂಪ ಆಗಿತ್ತು. ಈಗ ಹಂಗಲ್ಲ ದಿನ್ನಾ ಒಬ್ಬಿರಿಲ್ಲಾ ಒಬ್ಬರು ಸಿಂದಗಿಗಿ ದವಾಖಾನಿಗಿ ಹೋಗವರು ಸಿಕ್ಕೇ ಸಿಗತಿದ್ದರು. ಹೋಳಿ ಹುಣ್ಣವಿ ದಿನಾನೇ ಹಣಮಂತ ದೇವರ ಗುಡಿ ಬಾಜೂಮನಿ ಉಳ್ಳಾಗಡ್ಡಿ ಬಸನಿಂಗನ ಹೆಂಡತಿ ಯಮನವ್ವ ಅದೇನೋ ಮೈಮೇಲೆಲ್ಲಾ ಗಡ್ಡಿ ಆದಂಗ ಆಗಿ ಬೆಳ್ಳ ಬೆಳತನಕ ಜ್ವರ ಹಿಡದು ಬೆಳಕ ಹರಿಯೋದರೊಳಗ ಖಾಲಿ ಆಗಿದ್ದು ಊರ ಮಂದಿಗಿ ಗಾಭರಿ ಮಾಡಿತ್ತು. ಅಕಿ ಎಂದೂ ಹಾಸಗಿ ಹಿಡದ ಹೆಣಮಗಳಲ್ಲ. ಹುಣ್ಣವಿ ಇನ್ನೂ ನಾಕೈದು ದಿನ ಐತಿ ಅನ್ನೂವಾಗಲೇ ಅಕಿ ಮೈ ಮ್ಯಾಲ ಸಣ್ಣ ಸಣ್ಣ ಗದುವ ಎದ್ದು, ಬಿಸಿ ನೀರಿನ ಶಾಕಾ ಮಾಡಿದರ ಕಡಿಮಿ ಆಗ್ತಾವ ಅಂತ ನೋಡದರ ಅವು ಮತ್ತಷ್ಟು ದಿನದಿಂದ ದಿನಕ್ಕ ದೊಡ್ಡೂನೇ ಆದ್ವು ಇವತ್ತು ಕಡಿಮಿ ಆಗ್ತಾವ, ನಾಳೆ ಕಡಿಮಿ ಆಗ್ತಾವ ಅನ್ನೂ ಲೆಕ್ಕದೊಳಗ ಅಕಿನೇ ಕಡಿಮಿ ಆಗಿದ್ದಳು. ಯಮನವ್ವ ಮಣ್ಣ ಆಗಿ ಹದಿನೈದು ದಿನದೊಳಗ ಪಂಚಾಯತಿ ಅಧ್ಯಕ್ಷ ಮಾದೇವಪ್ಪಗೌಡ ಅವತ್ತೊಂದಿನ ರಾತ್ರಿ ಅಮವಾಶೆ ಮುಂದ ಮಲಗದಾಗ ರಾತ್ರಿ ಮ್ಯಾಲಿನ ಉಸಿರು ಮ್ಯಾಲ, ಕೆಳಗಿನ ಉಸಿರು ಕೆಳಗ ಆಗಿ ಬಾಳ ತ್ರಾಸ್ ಆಗಾಕತೈತಿ ಅನ್ಕೋಂತೇ ಕಣ್ಣ ಮುಚ್ಚದ ಅಂತ ಅವನ ಹೆಂಡತಿ ಹೇಳೂದು ಕೇಳಿ, ಇದು ಬಹುಷ: ಆ ಬಸನಿಂಗನ ಹೆಂಡತಿ ಯಮನವ್ವ ದೆವ್ವ ಆಗಿರಬೇಕು ಅಂತ ಕತಿ ಕಟ್ಟಿ ಒಂದೆರಡು ನಿಂಬೂ ಮತ್ರಿಸಿ ಊರ ಸುಡ್ಗಾಡದೊಳಗ ಯುಮನವ್ವಳ ಗೋರಿ ಮ್ಯಾಲ ಇಟ್ಟು ಹಗರ ಆಗಿದ್ದರು. ಮುಂದ ತಿಂಗಳ ಒಪ್ಪತ್ತಿನೊಳಗ ಕುರುಬರ ಪೈಲವಾನ್ ಭೀಮಣ್ಣಗ ಲಕ್ವಾ ಹೊಡದು ದೊಡ್ಡ ಆಳ ಹಾಸಿಗಿಗಿ ಬಿದ್ದಿದ್ದು ನೋಡಿ ಊರಾನ ಮಂದಿ ಮಮ್ಮಲ ಮರಗಿದ್ದೇ ಮರಗಿದ್ದು. ಇದೆಲ್ಲಕ್ಕಿಂತಾ ಬಾಳ ದೊಡ್ಡ ಸುದ್ದಿ ಅಂದ್ರ ಊರ ಮುಂದಿನ ಜಾಮದಾರ ನರಸಿಂಗನ ಬಾವೀ ನೀರ ಹಾಳಾಗೈತಿ ಅನ್ನೂದು. ಬರಗಾಲ ಬಿದ್ದಾಗ ಇಡೀ ಊರಿಗೂರೇ ಕುಡಿಯೋ ನೀರಿಗಿ ಆಸರ ಆಗೋ ಈ ನರಸಿಂಗನ ಬಾವಿಯೊಳಗಿನ ನೀರ ಅದ್ಯಾಕೋ ಇಕಾಡಿದಿಕಾಡಿ ಹಚ್ಚಗ ಆಗಲಿಕ್ಕ ಶುರು ಮಾಡಿದ್ವು. ಅದು ತಿಳಿ ಅಂದ್ರ ತಿಳಿ ನೀರಿನ ಬಾವಿ. ಆ ಬಾವ್ಯಾನ ನೀರ ಅಂದ್ರ ಎಳೆನೀರ ಇದ್ದಂಗ ಅಂತ ಊರ ಮಂದಿ ಮಾತಾಡಕೋತಿದ್ದರು. ಅಂತಾ ಬಾವಿ ನೀರ ಈಗ ಹಾಳಾಗಿ ಗಬ್ಬನ್ನೋ ವಾಸನೆ ಇಡೀ ಊರ ತುಂಬಾ ಹಬ್ಬಿಸಿದ್ದಿತ್ತು. ಆ ಬಾವಿ ನೀರ ಹಂಗ ಆಯ್ತಲ್ಲ ಅಂತ ನರಸಿಂಗ ಹಾಸಿಗೆ ಹಿಡದು ಮತ್ತ ಮ್ಯಾಲ ಏಳಲಾರದಂಗೇ ಆಯಿತು. ಚುಲೊ ತರಕಾರಿ, ಕುಡಿಯೋ ನೀರ ಸಿಗಲಾರದೇ ಮುಗದಳ್ಳಿ ಮಂದಿ ಗಾಡಿಯೊಳಗ ಬ್ಯಾರಲ್ ಇಟಗೊಂಡು ಆಜೂ ಬಾಜೂ ಹಳ್ಳೀಗಿ ಹೋಗಿ ನೀರ ತಗೊಂಡು ಬರಾಕ ಸುರು ಮಾಡದರು. ಡಾಕ್ಟರ್ ಶ್ರೀಕಾಂತ ಹೇಳದಂಗೇ ಆಗಿತ್ತು. ಐತವಾರ ದಿವಸ ನಸುಕಿನೊಳಗ ತಿಪ್ಪಣ್ಣ ಈ ಲೋಕ ಬಿಟ್ಟು ನಡದಿದ್ದ. ಡಾಕ್ಟರ್ ಮಗ ಲಚ್ಚಪ್ಪನ ಮುಂದ ಬಾಳ ಅಂದ್ರ ನಿಮ್ಮ ಅಪ್ಪ ಇನ್ನೊಂದೆರಡು ದಿನ ಅಂದದ್ದು ಹಂಗೇ ಆಗಿತ್ತು. ಡಾಕ್ಟರ್ ಶ್ರೀಕಾಂತಗೂ ಈ ಮುಗದಳ್ಳಿ ಜನರಿಗಿ ಅದೇನು ರೋಗ ಅನ್ನೂದು ಪತ್ತೆ ಮಾಡಲಿಕ್ಕ ಆಗಿರಲಿಲ್ಲ. ಇಡೀ ಊರ ತುಂಬಾ ಅರ್ಧ ಮಂದಿ ಚರ್ಮರೋಗ, ಇನ್ನರ್ಧ ಮಂದಿ ಏದುಸಿರು ಬಿಡೂದನ್ನ ನೋಡಿ ಶ್ರೀಕಾಂತಗೂ ಇದಕ್ಕ ಕಾರಣ ಏನಂತ ಗೊತ್ತಾಗಿರಲಿಲ್ಲ. ಬೋಳುಗೂಡ್ದದ ಹಳದೀ ಕೇಕಿನ ಫ಼್ಯಾಕ್ಟರಿಯೊಳಗ ಕೆಲಸಾ ಮಾಡೊ ಮುಕ್ಕಾಲು ಮಂದಿಗಿ ಚಿತ್ರ ವಿಚಿತ್ರ ಬಗೆಯ ಚರ್ಮರೊಗಗಳು ಅಂಟಿಕೊಂಡಿದ್ದವು. ಒಂದು ಸಾರಿ ಸುರುವಾದ ಕೆಮ್ಮು ಅವರನ್ನ ನುಂಗೇ ಸೈಲೆಂಟ್ ಆಗತಿತ್ತು. ಅವರ ಆಸ್ಪತ್ರೆಗೆ ತಿಂಗಳ ಕೊನೆಗೆ ವಿಜಿಟ್ ಮಾಡೊ ಸೋಲಾಪುರದ ಡಾಕ್ಟರ್ ಶ್ರೀನಿವಾಸರನ್ನ ಕರಕೊಂಡು ಈ ಹಳ್ಳಿಗಿ ಬಂದು ಅಲ್ಲಿರುವ ರೋಗಿಗಳನ್ನು ತೋರಿಸಿ ಕಾರಣ ಕೇಳಿದ್ದ ಡಾ ಶ್ರೀಕಾಂತನಿಗೆ ಸಮಾಧಾನಕರ ಉತ್ತರ ಸಿಕ್ಕಿರಲಿಲ್ಲ. ನೀರನ್ನ ಟೆಸ್ಟ್ ಮಾಡಲಿಕ್ಕಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಅಲ್ಲಿಯ ನೀರಲ್ಲಿ ವಿಷ ಮಿಶ್ರಿತ ಅಂಶಗಳಿವೆ ಎನ್ನುವ ವಿಷಯ ಬಯಲಾದದ್ದೇ ಡಾ ಶ್ರೀಕಾಂತ ಆ ಊರಿನ ರೊಗಗಳಿಗೆಲ್ಲಾ ಕಾರಣ ಸಿಕ್ಕುಬಿಟ್ತು ಎನ್ನುವ ಖುಷಿಯಿಂದ ವಿಷಪೂರಿತ ನೀರು ಇದಕ್ಕೆಲ್ಲಾ ಕಾರಣ ಎನ್ನುವಾಗಲೇ ಮುಗದಳ್ಳಿಯ ನೆರೆಹೊರೆಯ ಗ್ರಾಮಗಳಿಂದಲೂ ಈ ಬಗೆಯ ರೋಗರುಜಿನುಗಳು ಗೋಚರವಾಗತೊಡಗಿದ್ದು ಶ್ರೀಕಾಂತನ ಆ ಹೆಳಿಕೆ ಒಂದು ಬಗೆಯ ನಿರಾಶೆಯನ್ನು ಹುಟ್ಟುಹಾಕಿತ್ತು. ಬೋಳು ಗುಡ್ಡದ ಹಳದೀ ಕೇಕಿನ ಫ಼್ಯಾಕ್ಟರಿಯಲ್ಲಿ ಕೆಲಸ ಮಾಡುವ ಯಾರೂ ಆರೋಗ್ಯದಿಂದಿರಲಿಲ್ಲ. ಎಲ್ಲರದೂ ಒಂದಿಲ್ಲಾ ಒಂದು ಸಮಸ್ಯೆ. ಬಹುತೇಕರದು ಉಸಿರಾಟದ ತೊಂದರೆ ಮತ್ತು ಚರ್ಮರೋಗದ ಸಮಸ್ಯೆ. ಈಗೀಗ ಅವರ ಯೂನಿಫ಼ಾರ್ಮ ಜೊತೆಗೆ ಬಾಯಿಗೂ ಒಂದು ಮೌಥ್ ಕವರ್ ಬಂದಿದೆ. ಹಾಗಿದ್ದರೂ ಅವರ ಬಳಲುವಿಕೆ ಕಡಿಮೆಯಾಗಿರಲಿಲ್ಲ. ತಮ್ಮ ಊರು ಮಾತ್ರವಲ್ಲ ಸುತ್ತಮುತ್ತಲ್ಲಿನ ಹಳ್ಲಿಗಳಲ್ಲೂ ಈ ಬಗೆಯ ತೊಂದರೆ ತಾಪತ್ರಯಗಳು ಕಾಣಿಸಿಕೊಳ್ಳ್ಳತೊಡಗಿದ ಮೇಲೆ ಮುಗದಳ್ಳಿಯ ಜನರು ಈ ಸಮಸ್ಯೆಗೆ ಆ ಹಳದೀ ಪೌಡರು ಕಾರಣವಲ್ಲ ಅಂತ ನಿಟ್ಟುಸಿರು ಬಿಟ್ಟಿದ್ದರು. ಪ್ಯಾಕ್ಟರಿಯಲ್ಲಿ ಕೆಲಸ ಮಾಡುವ ತಮಗಾದರೆ ಸರಿ, ಮನೆಯಲ್ಲಿರುವ ತಮ್ಮ ಸಹೋದರ ಸಹೋದರಿಯರಿಗ, ಹೆಂಡತಿಗೆ ಯಾಕೆ ಚಿತ್ರ ವಿಚಿತ್ರ ರೋಗಗಳು ಬೆನ್ನಿಗೆ ಬಿದ್ದಿವೆ ಎನ್ನುವದು ಅವರಿಗೂ ತಿಳಿದಿರಲಿಲ್ಲ. ಆದಾಗ್ಯೂ ಈ ಪ್ಯಾಕ್ಟರಿಯಲ್ಲಿ ಕೆಲಸ ಮಾಡುವವರಿಗೆ ಅಲ್ಲಿಯ ಆ ಹಳದೀ ಪೌಡರಿನ ವಾಸನೆ ಮತ್ತು ಅದರ ಧೂಳು ಖಂಡಿತಾ ಇಂದಲ್ಲ ನಾಳೆಯಾದರೂ ತಮ್ಮ ಉಸಿರಾಟದ ತೊಂದರೆಗೆ ಕಾರಣವಾಗುವದಂತೂ ಹೌದು ಅನಿಸಿರುವದಿತ್ತು. ಕೆಲಸಕ್ಕೆ ಸೇರುವ ಮೊದಲು ಅತ್ಯಂತ ಆರೋಗ್ಯದಿಂದ ಇದ್ದ ತಮಗೆ ಆರೇ ತಿಂಗಳಲ್ಲಿ ಮೈಮೆಲೆ ಚಿತ್ರ ವಿಚಿತ್ರ ಬಗೆಯ ಕಂದು ಬಣ್ಣದ ಪ್ಯಾಚುಗಳು ಕಾಣಿಸಿಕೊಳ್ಳತೊಡಗಿದ್ದು, ರಾತ್ರಿ ಮಲಗಿರುವಾಗ ಉಸಿರು ಕಟ್ಟಿದಂತಾಗಿ ತಕ್ಷಣವೇ ಎದ್ದು ಕುಳಿತು ಏದುಸಿರು ಬಿಡುವದನ್ನು ನೆನೆದು ಅವರಿಗೆ ಈ ಹಳದೀ ಪೌಡರಿನಲ್ಲಿ ಅಂಥಾ ಒಂದು ಅಪಾಯವಿದೆ ಎನಿಸತೊಡಗಿತ್ತು. ಮುಗದಳ್ಳಿ ತಾನೇ ಮುಂದಾಗಿ ಈ ಪ್ಯಾಕ್ಟರಿಯನ್ನು ಸ್ಥಾಪನೆ ಮಾಡಲಿಕ್ಕೆ ಜಾಗ ನೀಡಿರುವದಿತ್ತು. ಹಾಗಾಗಿ ಆ ಬೋಳುಗುಡ್ದದ ಹಳದೀ ಪೌಡರ್ ಆ ಊರ ಜನರ ಪಾಲಿಗೆ ಶಾಪವಾಗಿದೆ ಅನ್ನೋಣ, ಯಾವ ತಪ್ಪನ್ನೂ ಮಾಡದೇ ಈ ಹಳದೀ ಪೌಡರ್ ಎಂದರೇನು.. ಅದನ್ನು ಹೇಗೆ ತಗೀತಾರೆ ಇವುಗಳ ಬಗ್ಗೆ ಯಾವದೇ ತಿಳುವಳಿಕೆಯಿಲ್ಲದ ಮುಗದಳ್ಳಿ0ು ಸುತ್ತಮುತ್ತಲಿನ ಹತ್ತಿಪ್ಪತ್ತು ಹಳ್ಳಿಗಳು ಇದೇ ಬಗೆಯ ರೋಗ, ಸಾವು ತೊಂದರೆಯಿಂದ ಬಳಲುವಂತಾದದ್ದು ದೊಡ್ಡ ದುರ೦ತವೇ ಸರಿ. ಆ ದಿನ ಬೆಂಗಳೂರಿನಿಂದ ಎನ್.ಜಿ.ಒ ಒಂದರ ಸಹಯೋಗದಲ್ಲಿ ಒಂದು ದೊಡ್ಡ ಬಸ್ಸು ಮುಗದಳ್ಳಿಯ ಪಂಚಾಯತ ಕಟ್ಟಡದ ಎದುರಲ್ಲಿ ಬಂದು ನಿಂತಿರುವದಿತ್ತು. ಅದರಲ್ಲಿ ಕೆಲವು ವೈದ್ಯರು, ಪತ್ರಿಕೆಯವರು, ಟಿ.ವಿ.ಯವರು ಈ ಮುಗದಳ್ಳಿಯ ಅಧ್ಯಯನಕ್ಕೆ ಬಂದಿರುವದಿತ್ತು. ವೈದ್ಯರು ಇಡೀ ಊರಿನ ಜನರನ್ನು ತಪಾಷಣೆ ಮಾಡಿದರು. ಅವರೆಲ್ಲರೂ ಎರಡೇ ಬಗೆಯ ರೋಗದಿಂದ ಬಳಲುತ್ತಿರುವದಿತ್ತು. ಒಂದು ಚರ್ಮರೋಗ, ಇನ್ನೊಂದು ಉಸಿರಾಟದ ತೊಂದರೆ. ಕೆಲವರಂತೂ ಈಗಲೋ ಆಗಲೋ ಅನ್ನುವ ಸ್ಥಿತಿ0ುಲ್ಲಿದ್ದರು. ಪ್ಯಾಕ್ಟರಿಗೆ ಭೇಟಿ ನೀಡಿ ಅಲ್ಲಿ ಕೆಲಸ ಮಾಡುವವರನ್ನೂ ತಪಾಸಣೆ ಮಾಡಿದರು. ಇವೆಲ್ಲ ರೋಗಗಳಿಗೆ ನೇರ ಕಾರಣ ಆ ಹಳದೀ ಪೌಡರ್ ಎನ್ನುವದು ಆ ವೈದ್ಯರ ಹೇಳಿಕೆಯಾಗಿತ್ತು. ಆದರೆ ಫ಼್ಯಾಕ್ಟರಿಯಲ್ಲಿ ಕೆಲಸ ಮಾಡುವವರಾರೂ ಇದನ್ನು ನಂಬಲಿಕ್ಕೇ ತಯಾರಿಲ್ಲ. ಅಷ್ಟಾಗಿಯೂ ಲಚ್ಚಪ್ಪ ಡಾಕ್ಟರಿಗೆ ಕೇಳಿಯೇ ಬಿಟ್ಟ. ‘ ನಾವು ಇಲ್ಲಿ ಕೆಲಸ ಮಾಡ್ತೀವಿ ನಮಗಾಗಬಹುದು, ನಮ್ಮ ಹೆಂಡ್ರು, ಮಕ್ಕಳಿಗೆ ಯಾಕ ಆ ಥರಾ ಆಗಬೇಕು’ ಅಂತ ಕೇಳದಾಗ ವೈದ್ಯರ ತಂಡದ ಜೊತೆಗಿದ್ದ ಪರಿಸರವಾದಿ ಮುತ್ತುರಾಜ ‘ ಅಪ್ಪಾ ಮುಗದಳ್ಳಿಯ ಮುಗುದ ಇಲ್ಲಿ ಕೇಳು, ನಿನ್ನ ಯೂನಿಫ಼ಾರ್ಮನ್ನು ಮನಿಗಿ ತಗೊಂಡು ಹೋಗ್ತಿಯೋ ಇಲ್ಲಾ ಇಲ್ಲೇ ಪ್ಯಾಕ್ಟರಿಯಲ್ಲಿ ಬಿಟ್ಟು ಹೋಗ್ತಿಯೋ.?’ ಅಂದಾಗ ಲಚ್ಚಪ್ಪ ತಟ್ಟನೇ ‘ಎಲ್ಲರೂ ತಗೊಂಡು ಹೋಗ್ತೀವಿ’ ‘ ಹಾಂ ತಪ್ಪಿದ್ದು ಇಲ್ಲಿಯೇ..’ ‘ ನನಗ ತಿಳೀಲಿಲ್ಲ’ ‘ ನಿನ್ನ ಯೂನಿಫ಼ಾರ್ಮ ದಪ್ಪ ಪ್ಲಾಸ್ಟಿಕ್ದು’ ‘ ಹೌದು’ ‘ಅದಕ್ಕೆ ಮೆತ್ತಿರೋ ಧೂಳು ಕಡಿಮೆ ಇರತೈತಾ..? ಪ್ರತಿ ದಿನ ನೀನು ಅಷ್ಟು ಧೂಳು ಮನಿಗೆ ತಗೊಂಡು ಹೋದರೆ ಯಾವ ಕುಟುಂಬದ ಹೆ೦ಡತಿ, ಮಕ್ಕಳು ಅರಾಮ ಇರಲಿಕ್ಕೆ ಸಾಧ್ಯ ಐತಿ..?’ ಅಲ್ಲಿ ಸೈಲೆಂಟಾಗಿ ನಿಂತು ಕೇಳುತ್ತಿದ್ದ ಆ ಕಾರ್ಮಿಕರಿಗೆಲ್ಲಾ ಪರಿಸರವಾದಿ ಮುತ್ತುರಾಜನ ಮಾತಿನ ಮೇಲೆ ಈಗೀಗ ನಂಬುಗೆ ಮೂಡತೊಡಗಿತ್ತು. ಆದರೆ ಅದಾಗಲೇ ತುಂಬಾ ತಡವಾಗಿತ್ತು. ಎಲ್ಲ ಕಾರ್ಮಿಕರ ಮುಖವನ್ನೊಮ್ಮೆ ಮುತ್ತುರಾಜ ದಿಟ್ಟಿಸಿದ. ಎಲ್ಲರ ಮುಖದಲ್ಲಿ ಸೋಲಿನ ಅನುಭವವಿತ್ತು. ಮುತ್ತುರಾಜನಿಗೂ ಈಗ ಅವರಿಗೆ ಪರಿಹಾರ ಸೂಚಿಸುವದಾದರೂ ಏನು..? ಎನ್ನುವ ಗೊಂದಲವಿತ್ತು. ಒಂದು ದೀರ್ಘವಾದ ನಿಟ್ಟುಸಿರಿನೊಂದಿಗೆ ಆತ ಅಲ್ಲಿಂದ ಹೊರಟ. ಅದು ಸಾಯ೦ಕಾಲದ ಸಮಯ. ಮುಗದಳ್ಳಿಯ ಬೋಳುಗುಡ್ಡದ ಮೇಲೆ ಹಳದೀ ಬಣ್ಣದ ಧೂಳು ಅಗಾಧವಾಗಿ ಅಡರಿತ್ತು. ಕಾರ್ಮಿಕರೆಲ್ಲಾ ತಮ್ಮ ಕೆಲಸವನ್ನು ಮುಗಿಸಿ ಆ ಉದ್ಯಮಿ ಕೊಟ್ಟ ಯೂನಿಫ಼ಾರ್ಮನ್ನುನೊಂದಿಗೆ ಮನೆಗೆ ನಡೆದಿದ್ದರು. ಅವರ ನಡಿಗೆಯಲ್ಲೀಗ ಮೊದಲಿನ ಗತ್ತಿಲ್ಲ. ಅವರನ್ನು ಈಗ ಮೊದಲಿನಂಗ ಯಾರೂ ನಿಂತು ನೋಡುವವರಿಲ್ಲ. ಅವರೀಗ ನೋಡುವಂತೆಯೂ ಉಳಿದಿಲ್ಲ. ತಿಪ್ಪಣ್ಣನ ಮಗ ಲಚ್ಚಪ್ಪನಂತೂ ಈಗ ತುಂಬಾ ಸೋತು ಹೋಗಿದ್ದಾನೆ. ಅವನಿಗೀಗ ಒಂದು ವಿಚಿತ್ರ ಬಗೆಯ ಕೆಮ್ಮು ಸೇರಿದೆ. ಅತ್ಯಂತ ನಿತ್ರಾಣನಾಗಿ ಮನೆಗೆ ಬರುತ್ತಿರುವ ಲಚ್ಚಪ್ಪ ಮನೆಯ ಹೊರಗಿನ ಅಂಗಳದಲ್ಲಿ ತುಸು ಹೊತ್ತು ಕುಳಿತು ಏದುಸಿರನ್ನು ಸರಿಪಡಿಸಿಕೊಂಡು, ಒಳಗೆ ಬಂದವನೇ ತನ್ನ ಯೂನಿಫ಼ಾರ್ಮನ್ನು ಕಳಚಿ ಝಾಡಿಸಿದ. ಒಂದು ಕ್ಷಣ ಮುತ್ತುರಾಜು ಮಾತು ನೆನಪಾಗಿ ಗಲಿಬಿಲಿಗೊಂಡ. ತನ್ನ ಯೂನಿಫ಼ಾರ್ಮನ್ನು ಗಿಳಿ ಗೂಟಕ್ಕೆ ಸಿಗಿಸುತ್ತಿರುವಂತೆ ಅಲ್ಲೇ ಹತ್ತಿರದಲ್ಲಿದ್ದ ಅವನ ಮಗಳು ರೇಣುಕಾ ಒಂದೇ ಸವನೇ ವಿಚಿತ್ರವಾಗಿ ಕೆಮ್ಮತೊಡಗಿದಳು. ಅಡುಗೆ ಮನೆಯಲ್ಲಿರುವ ಹೆಂಡತಿಯ ಕೆಮ್ಮೂ ಅದರೊಂದಿಗೆ ಸಾಥ ನೀಡಿತ್ತು. ಅವರೊಂದಿಗೆ ತಾನೂ ಕೆಮ್ಮುತ್ತಲೇ ಒಂದು ಕ್ಷಣ ಯೂನಿಫ಼ಾರ್ಮನ್ನು ದಿಟ್ಟಿಸಿದ. ಅಲ್ಲಿಂದ ಹಳದೀ ಧೂಳು ಪ್ರಶಾಂತವಾಗಿ ಕೆಳಗಿಳಿಯುತ್ತಾ ತಣ್ಣಗೆ ಮನೆ ತುಂಬುತ್ತಿತ್ತು.]]>

‍ಲೇಖಕರು G

May 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಡಲಂತರಾಳವ ಬಲ್ಲವರಾರು?

ಕಡಲಂತರಾಳವ ಬಲ್ಲವರಾರು?

ಶಿವಲೀಲಾ ಹುಣಸಗಿ ಯಲ್ಲಾಪುರ ಪ್ರತಿ ದಿನವೂ ಪ್ರೀತಿಯ ಹುಚ್ಚ ಹಿಡಿಸಿದವ ಒಮ್ಮಿಂದೊ ಮ್ಮೆಲೆ ಮೌನವಾಗಿದ್ದು, ಕೊನೆಗವನು ನನಗರಿವಿಲ್ಲದೆ ಮಂಪರು...

ಆರನೇ ಬೆರಳು

ಆರನೇ ಬೆರಳು

ಬಸವಣ್ಣೆಪ್ಪ ಕಂಬಾರ ಸುಂಕದ ಕಟ್ಟೇಲಿ ಚಿನ್ನವ್ವ ತುಂಬ ಅದೃಷ್ಟದ ಹೆಂಗಸು ಎಂದು ಮನೆಮಾತಾಗಿದ್ದಳು. ಮನೆ ಗುದ್ದಲಿ ಪೂಜೆ, ಬಾಣಂತನಕ್ಕೆ, ಮಗಳನ್ನು...

ಹಬ್ಬಿದಾ ಬಲೆ ಮಧ್ಯದೊಳಗೆ…

ಹಬ್ಬಿದಾ ಬಲೆ ಮಧ್ಯದೊಳಗೆ…

ರಾಜು ಎಂ ಎಸ್ ಸಾಲಿಗುಡಿ ಬಿಟ್ ಕೂಡ್ಲೇ ನಿಂಗಿ, ಗುಡ್ಲು ಕಡಿಕ್ ಹೊಂಟವ್ಳು... ತಾರ್ಸಿ ಮನೆ ಗುರ್ಲಿಂಗಪ್ಪನ್  ಮಗ್ಳು ಪರಿಮಳ ತನ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This