ಬ್ಯಾಚುಲರ್ ಕಿಚನ್ ನಲ್ಲಿ “ಬೆಳ್ಳುಳ್ಳಿ ಅನ್ನ”

-ಅರವಿಂದ ನಾವಡ

ಪಾಕಚಂದ್ರಿಕೆ

ಬೆಳ್ಳುಳ್ಳಿ ಎಂದ ಕೂಡಲೇ ಮೂಗು ಮುರಿಯಬೇಡಿ. ಅದರ ವಾಸನೆ ಅಥವಾ ಪರಿಮಳ ಸ್ವಲ್ಪ ಘಾಟಿರಬಹುದು. ಆದರೆ ಅದು ಬ್ರಹ್ಮಚಾರಿಗಳ ಗಡಿಬಿಡಿಗೆ ಅನುಕೂಲವಾದಷ್ಟು ಇನ್ಯಾವುದಕ್ಕೂ ಪ್ರಯೋಜನಕ್ಕೆ ಬಾರದು.
ಸಾಮಾನ್ಯವಾಗಿ, ಬ್ರಹ್ಮಚಾರಿಗಳ ರೂಮುಗಳಲ್ಲಿ ಏನೆಂದರೆ…ಅನ್ನ ಮಾಡೋದೇ ಹೆಚ್ಚು. ಇನ್ನು ಅದಕ್ಕೆ ಸಾರು, ಹುಳಿ, ಪಲ್ಯ ಅಂತ ಎಲ್ಲಿ ಮಾಡ್ತಾರೆ. ಹಾಗಂತ ದಿನವೂ ಚಿತ್ರಾನ್ನ ಮಾಡಿ ಮಾಡಿಯೂ ಬೇಜಾರು.
ಆಗ ಬೆಳ್ಳುಳ್ಳಿ ಅನ್ನ ಮಾಡಿ.
ಹತ್ತು ನಿಮಿಷದ ಕೆಲಸವಷ್ಟೇ. ಹಾಗೆ ಹೋಗಿ, ಹೀಗೆ ಬರೋದ್ರೊಳಗೆ ಮಾಡಿಬಿಡಬಹುದು. ಇದಕ್ಕೆ ಹೆಚ್ಚು ಸಾಮಾನುಗಳೂ ಬೇಕಿಲ್ಲ.

garlic_tight[1]

ಎರಡು ಗೆಡ್ಡೆ ಬೆಳ್ಳುಳ್ಳಿ
ಸ್ವಲ್ಪ ಕರಿಬೇವಿನ ಎಲೆ
ಸಾಸಿವೆ
ಉದ್ದಿನಬೇಳೆ
ಕಡ್ಲೆಬೇಳೆ
ಹಸಿಮೆಣಸು
ಒಣಮೆಣಸು
ಉಪ್ಪು

ಮೊದಲು ಮಾಡಿದ ಅನ್ನವನ್ನು ಬಟ್ಟಲಿಗೆ ಹಾಕಿ ತಣ್ಣಗಾಗಲು ಬಿಡಿ. ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಸಿದ್ಧಪಡಿಸಿಟ್ಟುಕೊಳ್ಳಿ. ನಾಲ್ಕು ಹಸಿ ಮೆಣಸು ಸೀಳಿಕೊಳ್ಳಿ.

ಒಗ್ಗರಣೆಗೆ ಎರಡು ಒಣಮೆಣಸು ತುಂಡು ಮಾಡಿಕೊಂಡು, ಒಲೆ ಹಚ್ಚಿ ಬಾಣಲಿ ಇಡಿ (ಪಾತ್ರೆಯೂ ಆದೀತು). ಕಾವು ಸಣ್ಣಗಿರಲಿ. ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ಕೂಡಲೇ ಅರ್ಧ ಟೀ ಸ್ಪೂನ್ ಸಾಸಿವೆ ಹಾಕಿ, ಪಟ್ ಪಟ್ ಎಂಬ ಸದ್ದು ಕೇಳುತ್ತಿದ್ದಂತೆ ಬೆಳ್ಳುಳ್ಳಿ ಹಾಕಿ. ಬಂಗಾರದ ಬಣ್ಣಕ್ಕೆ ಬರುತ್ತಿದ್ದಂತೆ ಸ್ವಲ್ಪ ಉದ್ದಿನಬೇಳೆ, ಕಡ್ಲೆಬೇಳೆ, ಒಣಮೆಣಸು ಹಾಕಿ. ಕೆಂಪಗಾಗುವಷ್ಟು ಹುರಿಯಿರಿ. ಕೆಂಪಗಾಗುತ್ತಿದ್ದಂತೆ ಹಸಿಮೆಣಸು, ಕರಿಬೇವಿನ ಎಲೆ ಹಾಕಿ ಹುರಿಯಿರಿ. ಆಮೇಲೆ ಉಪ್ಪು ಹಾಕಿ ಅನ್ನವನ್ನು ಹಾಕಿ ಕಲಸಿ. ಅಲ್ಲಿಗೆ ಬೆಳ್ಳುಳ್ಳಿ ಅನ್ನ ಸಿದ್ಧ.

ಇದಕ್ಕೆ ಬೇಕಾದವರು ಲಿಂಬೆಹಣ್ಣಿನ ರಸ ಬೆರೆಸಬಹುದು, ತೆಂಗಿನಕಾಯಿಯ ತುರಿ ಹಾಕಬಹುದು. ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಬಹುದು.

ಮತ್ತೊಂದು ಪ್ರಮುಖ ಸಂಗತಿಯೆಂದರೆ, ಬ್ರಹ್ಮಚಾರಿಗಳ ಮನೆಯಲ್ಲಿ ಅನ್ನ ಉಳಿಯುವುದು ಹೆಚ್ಚು. ಇಂದಿನ ಅನ್ನ ನಾಳೆಗೆ ಉಳಿದಾಗ ತಂಗಳನ್ನ ತಿನ್ನಬೇಕು ಎಂದು ಬೇಸರವಿರುತ್ತದೆ. ಆ ದುಃಖವನ್ನು ಇದು ಹೋಗಲಾಡಿಸುತ್ತದೆ. ಅದಕ್ಕೆ ಅನ್ನ ಉಳಿದರೆ, ಅದಕ್ಕೆ ನೀರು ಹಾಕಿಡಿ. ಅದು ಕೆಟ್ಟು ಹೋಗುವುದಿಲ್ಲ. ಅದೇ ಅನ್ನವನ್ನು ಹಿಂಡಿ ಹಿಂಡಿ ನೀರಿನಾಂಶ ತೆಗೆದು ಬೆಳ್ಳುಳ್ಳಿ ಅನ್ನ ಮಾಡಬಹುದು. ಅದೇ ಹೆಚ್ಚು ರುಚಿ.

ಗಮನವಿಡಬೇಕಾದ ಅಂಶ
ಅನ್ನ ಬಟ್ಟಲಿಗೆ ಹಾಕಿ ತಣ್ಣಗೆ ಮಾಡಿದರೆ ಬೆಳ್ಳುಳ್ಳಿ ಅನ್ನ ಮುದ್ದೆಯಾಗುವುದಿಲ್ಲ.
ಇದಕ್ಕೆ ಶುಂಠಿ ಇತ್ಯಾದಿ ಹಾಕಬೇಡಿ. ಬೆಳ್ಳುಳ್ಳಿ ಮತ್ತು ಶುಂಠಿ ಎರಡರ ಘಾಟು ರುಚಿಯನ್ನೇ ಕೆಡಿಸುತ್ತದೆ.
ತಂಗಳನ್ನ ಎಂದು ಹೀಗಳೆಯಬೇಡಿ, ಬೆಳ್ಳುಳ್ಳಿ ಅನ್ನ ಮಾಡಿ.
ಬಹಳ ಸುಲಭ ಮತ್ತು ಕಡಿಮೆ ಸಮಯ ಹಿಡಿಯುವ ತಿಂಡಿ.

‍ಲೇಖಕರು avadhi

September 13, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

6 ಪ್ರತಿಕ್ರಿಯೆಗಳು

 1. srinivasagowda

  ಬೆಳ್ಳುಳ್ಳಿ ಅನ್ನಕ್ಕೆ ನನ್ನದೊಂದು ರೆಸಿಪಿ ಸೇರಿಸುತ್ತೇನೆ, ಎಣ್ಣೆ ಬದಲು ತುಪ್ಪ ಬಳಸಿದರಂತೂ ಸಿಕ್ಕಾಪಟ್ಟೆ ರುಚಿಯಾಗಿರುತ್ತೆ.
  ಅದಕ್ಕೆ ನಮ್ಮ ಕೋಲಾರದ ಕಡೆ ತುಪ್ಪದ ಅನ್ನ ಅಂತಾರೆ. ಯಾರಿಗಾದರೂ ಜ್ವರ ಬಂದು ನಾಲಿಗೆ ರುಚಿ ಕಳೆದುಕೊಂಡರೆ ತುಪ್ಪದ ಅನ್ನ ಬೆಸ್ಟ್ ನೋಡ್ರಪ್ಪಾ….

  ಪ್ರತಿಕ್ರಿಯೆ
 2. ಸುಪ್ತದೀಪ್ತಿ

  ಹ್ಮ್, ನಾನು ಚಿಕ್ಕವಳಿದ್ದಾಗ ನಮ್ಮನೆಯಲ್ಲಿ ರಾತ್ರಿ ಉಳಿದ ಅನ್ನಕ್ಕೆ (ಬಹಳಷ್ಟು ಪಾಲು ಕುಚ್ಚಲನ್ನವೇ) ನೀರು ಹಾಕಿಟ್ಟು, ಮರು ಬೆಳಗ್ಗೆ ಅಮ್ಮ ಇದನ್ನೇ ಮಾಡ್ತಿದ್ದದ್ದು. ಒಗ್ಗರಣೆಯ ಬಾಣಲೆಗೆ ನೀರು ಹಿಂಡಿ ತೆಗೆದ ಪಸೆ-ಪಸೆ ಅನ್ನ ಬಿದ್ದಾಗ “ಝುಂಯ್” ಶಬ್ದ ಮಾಡ್ತದಾದ್ದರಿಂದ ಎಳೆ ನಾಲಗೆಯ ಮೇಲೆ ಅದು “ಝುಂಯ್ ಮಾಮ್” ಆಗಿಯೇ ಇದ್ದ ರುಚಿಯಾದ ನೆನಪು ಮರುಕಳಿಸಿತು.

  ಪ್ರತಿಕ್ರಿಯೆ
 3. Berlinder

  ಅರವಿಂದ ನಾವಡ
  ಪಾಕಚಂದ್ರಿಕೆಯಲೆ
  ಆನಂದ ಪವಾಡ
  ತಯಾರಿಕೆಯ ಕಲೆ!
  ಈಗೋದುವಾಗಲೆ
  ಬಾಯಲಿ ರುಚಿರಸ
  ಮನ್ನಿಸು (ಪಾಕ) ಅರಸ
  ನಾನೋಡುವೆ ರಭಸ
  ಅಡುಗೆಮನೆಗೆ ಇದೇ ನಿಮಿಷ!
  ವಿಶೀ.

  ಪ್ರತಿಕ್ರಿಯೆ
 4. Berlinder

  “ಇದನ್ನು ಓದಿ ಮಾಡಿ ತಿಂದು ತೇಗಿ ಆಯ್ತು”!
  ಹೊಸ ನಳಪಾಕ ವಿಧಾನ ಬೇಕಾಗಿದೆ ತುರ್ತು
  “ಒಂದು ಕಾಲಲಿ ನಡೆಯಲಾಗದು” – ಗಾದೆ;
  ತಿಳಿಯದಿರೆ ಮಾಡೆವುದೆನ್ನ ನಾಲಿಗೆ ತಗಾದೆ!
  *
  ’ಮಿಂಚುಳ್ಳಿ’ಯ
  ಮಾತುಗಳಲಿ ತುಂಬಿದೆ ಒಂದು ಪರ್ಯಾಯ;
  ಚಿನಕುರಳಿಯ
  ಚಟಪಟ ನಾದಸೇರಿ ಅಡುಗೆ ಮನೆಯ!
  ಅನಿಸಿಕೆ ಒಂದು ಸಾಲಿನ ಕವಿತೆಯ ರಚನೆ,
  ದಾಳಿಮಾಡಿ ಬಂದಿತ್ತೊಂದು ಯೋಚನೆ.
  ಬಗೆಬಗೆ ನಳಪಾಕ ಮಾಡಲು ಅಂದ
  ತಳಮಳಿಸಿ ಆಶಿಸುವುದು ಉದರದಾನಂದ!
  *
  ವಿಶೀ.
  *

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: