"ಬ್ಯಾರಿ'' ಎನ್ನುವ ಬ್ಯಾರಿ ಭಾಷೆಯ ಚಿತ್ರ – ಬಿ ಎ೦ ಬಶೀರ್

– ಬಿ ಎ೦ ಬಶೀರ್

“ಬ್ಯಾರಿ” ಎನ್ನುವ ಬ್ಯಾರಿ ಭಾಷೆಯ ಚಿತ್ರವೊಂದು ಸ್ವರ್ಣ ಕಮಲ ಪ್ರಶಸ್ತಿ ಪಡೆದಿದೆ. ಆ ಕುರಿತಂತೆ ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಗುರುವಾರ ಪ್ರಕಟವಾದ ಸಂಪಾದಕೀಯ.

ಪ್ರಾದೇಶಿಕ ಹೆಗ್ಗಳಿಕೆಯನ್ನು ಎತ್ತಿ ಹಿಡಿದ ಬ್ಯಾರಿ ಚಿತ್ರ

‘ಬ್ಯಾರಿ’ ಎನ್ನುವ ಬ್ಯಾರಿ ಭಾಷೆಯ ಚಿತ್ರವೊಂದು ಸ್ವರ್ಣ ಕಮಲ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬ್ಯಾರಿ ಭಾಷೆ ಕನ್ನಡದ ಪ್ರಾದೇಶಿಕ ವೈವಿಧ್ಯತೆಗಳಲ್ಲಿ ಒಂದಾಗಿರುವುದರಿಂದ ಸಕಲ ಕನ್ನಡಿಗರೂ ಈ ಚಿತ್ರದ ಗೆಲುವಿನಲ್ಲಿ ಭಾಗಿಯಾಗಬೇಕಾಗಿದೆ. ಈ ಬಾರಿಯೂ ರಾಷ್ಟ್ರ ಪ್ರಶಸ್ತಿಯನ್ನು ಪಡೆಯುವಾಗ ಪ್ರಾದೇಶಿಕ ಭಾಷೆಗಳು ವಿಜೃಂಭಿಸಿದ್ದು ಗಮನಾರ್ಹ. ‘ಬ್ಯಾರಿ’ ಚಿತ್ರದ ಜೊತೆಗೆ ‘ದೇವೂಲ್’ ಎನ್ನುವ ಮರಾಠಿ ಚಿತ್ರವೂ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಹಂಚಿಕೊಂಡಿದೆ. ಜೊತೆಗೆ ಗಿರೀಶ್ ಕಾಸರವಳ್ಳಿ ಅವರ ಕೂರ್ಮಾವತಾರ ಕನ್ನಡದ ಅತ್ಯುತ್ತಮ ಚಿತ್ರವಾಗಿ ಗುರುತಿಸಲ್ಪಟ್ಟಿದೆ. ಒಂದು ರೀತಿಯಲ್ಲಿ ರಾಷ್ಟ್ರೀಯ ಭಾಷಿಗರೆನ್ನುವ ಹಿಂದಿ ಭಾಷೆಯ ಜನರ ದುರಹಂಕಾರಕ್ಕೆ ಈ ಪ್ರಾದೇಶಿಕ ಭಾಷೆಗಳು ಸಡ್ಡು ಹೊಡೆದಿವೆ. ಇಂದು ಅತ್ತುತ್ತಮ ನಟರು, ಅತ್ಯುತ್ತಮ ಸಂಗೀತ ನಿರ್ದೇಶಕರು ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರತಿಭೆಯನ್ನು ಮೆರೆಯುತ್ತಿರುವವರು ಮತ್ತು ರಾಷ್ಟ್ರ ಗೌರವವನ್ನು ಪಡೆಯುತ್ತಿರುವವರು ಪ್ರಾದೇಶಿಕ ಪ್ರತಿಭೆಗಳು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ತಮಿಳು ಭಾಷೆಯಿಂದ ಹೊರಹೊಮ್ಮಿದ ಎ. ಆರ್. ರೆಹಮಾನ್ ಹಾಗೆಯೇ ಮಲಯಾಳಂನಿಂದ ಹೊರ ಹೊಮ್ಮಿದ ರಸೂಲ್ ಪೂಕುಟ್ಟಿ ಅತ್ಯುತ್ತಮ ಉದಾಹರಣೆ ನಮ್ಮ ಮುಂದಿದ್ದಾರೆ. ಪ್ರಾದೇಶಿಕತೆಯನ್ನು, ಈ ದೇಶದ ಬಹುಸಂಸ್ಕೃತಿಯನ್ನು ತಿರಸ್ಕರಿಸುವ ಮಂದಿಗೆ ಪ್ರಾದೇಶಿಕ ಭಾಷೆಗಳು ಬೇರೆ ಬೇರೆ ರೂಪದಲ್ಲಿ ಸವಾಲುಗಳನ್ನು ಹಾಕುತ್ತಲೇ ಇವೆ. ಅಂತಹ ಸವಾಲನ್ನು, ಮಂಗಳೂರು ಭಾಗದ ಮುಸ್ಲಿಮರ ಒಂದು ಸಣ್ಣ ಸಮುದಾಯ ಆಡುವ ಭಾಷೆಯಾಗಿರುವ ಬ್ಯಾರಿ ಭಾಷೆ ಹಾಕಿದೆ. ನಿಜಕ್ಕೂ ಇದು ಕನ್ನಡಕ್ಕೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಚಿತ್ರಕ್ಕೆ ಪ್ರಶಸ್ತಿ ದೊರಕಿರುವುದಕ್ಕಾಗಿ ಸಂತೋಷ ಪಡಲು ಇನ್ನೂ ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು, ಇದು ಬರೇ ಪ್ರಾದೇಶಿಕ ಭಾಷೆಯಲ್ಲ. ದಕ್ಷಿಣ ಕನ್ನಡದ ಮುಸ್ಲಿಮರಲ್ಲೂ ಒಂದು ಸಣ್ಣ ಸಮುದಾಯ ಆಡುವ ಭಾಷೆಗೆ ಬ್ಯಾರಿ ಎಂದು ಹೆಸರು. ಇದಕ್ಕೆ ತುಳು, ಕೊಂಕಣೆಗಳಷ್ಟು ಆಳ ಹಾಗೂ ಒಳ ಹರಿವುಗಳಿಲ್ಲ. ಎಲ್ಲಕ್ಕಿಂತ ಈ ಭಾಷೆಗೆ ಲಿಪಿಯಿಲ್ಲ. ಹತ್ತು-ಹದಿನೈದು ವರ್ಷಗಳ ಹಿಂದೆ ಈ ಭಾಷೆಯ ಜನರು ತಮ್ಮನ್ನು ತಾವೇ ಬ್ಯಾರಿ ಎಂದು ಕರೆಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಬ್ಯಾರಿ ಎಂದರೆ ಒಂದು ಸ್ವತಂತ್ರ ಭಾಷೆಯೆನ್ನುವುದು ಸ್ವತಃ ಅದನ್ನಾಡುವ ಆ ಸಮುದಾಯದ ಮಂದಿಗೇ ಗೊತ್ತಿರಲಿಲ್ಲ. ಅಷ್ಟೇ ಅಲ್ಲ, ಬ್ಯಾರಿ ಎನ್ನುವ ಶಬ್ದವನ್ನು ನಿಂದನೆಯ ರೂಪವಾಗಿ ಇಲ್ಲಿನ ಮೇಲ್ವರ್ಗದ ಜನರು ಬಳಸುತ್ತಿದ್ದರು. ಇದು ಆ ಭಾಷೆಯನ್ನಾಡುವ ಜನರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಎಷ್ಟರ ಮಟ್ಟಿಗೆ ಹಿಂದುಳಿದಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ಕಳೆದ ಒಂದು ದಶಕದಿಂದ ಬ್ಯಾರಿ ಭಾಷೆಯ ಕುರಿತಂತೆ ಬ್ಯಾರಿಗಳಲ್ಲಿ ಜಾಗೃತಿ ಮೂಡಿತು. ಕವಿ ದಿ.ಬಿ. ಎಂ. ಇದಿನಬ್ಬ, ಮಾಜಿ ಸಚಿವ ಬಿ. ಎ. ಮೊಹಿದಿನ್, ಲೇಖಕ ಅಹ್ಮದ್ ನೂರಿ, ಮಾಜಿ ಶಾಸಕ ಬಿ. ಎ. ಉಮ್ಮರಬ್ಬ ಮೊದಲಾದ ವ್ಯಕ್ತಿತ್ವಗಳು ಬ್ಯಾರಿ ಸಮುದಾಯದಿಂದ ಹೊರಹೊಮ್ಮುತ್ತಿದ್ದಂತೆಯೇ, ಆ ಭಾಷೆಯನ್ನಾಡುವ ಜನರಲ್ಲೂ ಆತ್ಮವಿಶ್ವಾಸ ಮೂಡತೊಡಗಿತು. ಇದಕ್ಕೆ ಪೂರಕವಾಗಿ ಬೊಳುವಾರು ಮೊಹಮ್ಮದ್ ಕುಂಞ, ಸಾರಾ ಅಬೂಬಕರ್, ಫಕೀರ್ ಮುಹಮ್ಮದ್ ಕಟ್ಪಾಡಿಯವರಂತಹ ಈ ಸಮುದಾಯದ ಲೇಖಕರು ಕನ್ನಡದ ಮುಖ್ಯ ವಾಹಿನಿಯಲ್ಲಿ ಗುರುತಿಸಲ್ಪಡತೊಡಗಿದರು. ನಿಧಾನಕ್ಕೆ ಬ್ಯಾರಿ ಭಾಷೆ ಒಂದು ಆಂದೋಲನದ ರೂಪವನ್ನು ಪಡೆಯಿತು. ಬ್ಯಾರಿ ಭಾಷೆ, ಸಾಹಿತ್ಯದ ಹೆಸರಿನಲ್ಲಿ ಇಲ್ಲಿನ ಜನರು ಒಂದಾಗತೊಡಗಿದರು. ಒಂದರ ಹಿಂದೆ ಒಂದರಂತೆ ಅಪರೂಪದ ಸಮ್ಮೇಳನಗಳನ್ನು ಮಾಡಿ ಕರ್ನಾಟಕವನ್ನು ಬೆಕ್ಕಸಬೆರಗಾಗಿಸಿದರು. ಅವರ ಹೋರಾಟದ ಫಲವಾಗಿ ಮೂರು ವರ್ಷಗಳ ಹಿಂದೆ ಬ್ಯಾರಿ ಸಾಹಿತ್ಯ ಅಕಾಡೆಮಿ ರಚನೆಯಾಯಿತು. ಇದರ ಬಳಿಕ, ಇಲ್ಲಿ ನಡೆದ ಅತಿ ದೊಡ್ಡ ಸಾಹಸವೆಂದರೆ ಬ್ಯಾರಿ ಭಾಷೆಯಲ್ಲಿ ಮೂಡಿ ಬಂದ ‘ಬ್ಯಾರಿ’ ಚಿತ್ರ. ಈ ಭಾಷೆ ಕನ್ನಡದ ಜನರಿಗೇ ಅಪರಿಚಿತ. ಇಂತಹ ಸಂದರ್ಭದಲ್ಲಿ ಅಲ್ತಾಫ್ ಹುಸೈನ್ ಎಂಬ ಸಾಮಾನ್ಯ ತರುಣ ಈ ಭಾಷೆಯಲ್ಲಿ ಚಿತ್ರ ತೆಗೆಯಲು ಮುಂದಾದುದು ಸಣ್ಣ ಸಾಹಸವೇನೂ ಅಲ್ಲ. ವಿಶೇಷವೆಂದರೆ, ಈ ಚಿತ್ರ ಬಿಡುಗಡೆಯಾದಾಗ ಬ್ಯಾರಿ ಭಾಷಿಗರೇ ಚಿತ್ರವನ್ನು ನೋಡಿದ್ದು ಕಡಿಮೆ. ನಷ್ಟವಾಗುತ್ತದೆ ಎಂದು ಗೊತ್ತಿದ್ದೂ ಒಂದು ಭಾಷೆಯ ಮೇಲಿನ ಪ್ರೀತಿಯನ್ನು ನೆಚ್ಚಿಕೊಂಡು ಅವರು ತೆಗೆದ ಈ ಚಿತ್ರ ಇದೀಗ ರಾಷ್ಟ್ರಮಟ್ಟದಲ್ಲಿ ‘ಸ್ವರ್ಣಕಮಲ’ ಪ್ರಶಸ್ತಿಯನ್ನು ಪಡೆದುದು ನಿಜಕ್ಕೂ ತುಳುವರಿಗೆ, ಕನ್ನಡಗರಿಗೆ ಹೆಮ್ಮೆ ಪಡುವಂತಹ ವಿಶಿಷ್ಟ ಸನ್ನಿವೇಶ. ಪ್ರಾದೇಶಿಕತೆಯ ಸೊಗಡು, ಅದರ ಚೈತನ್ಯಕ್ಕೆ ಸಿಕ್ಕ ಗೆಲುವು ಇದು. ಅಲ್ತಾಫ್ ಒಂದು ಚಿತ್ರವನ್ನಷ್ಟೇ ಅಲ್ಲ, ಒಂದು ಭಾಷೆಯನ್ನು ಜೊತೆಗೆ ಒಂದು ಸಮುದಾಯವನ್ನು ಇಡೀ ರಾಷ್ಟ್ರಕ್ಕೆ ಪರಿಚಯಿಸಿದ್ದಾರೆ. ವಿಷಾದನೀಯವೆಂದರೆ ‘ಬ್ಯಾರಿ’ ಚಿತ್ರ ನಿಜಕ್ಕೂ ಕನ್ನಡದ ಚಿತ್ರವಾಗಿದ್ದರೂ, ಅದನ್ನು ಮಲಯಾಳಿಗಳು ತಮ್ಮ ಪ್ರಾದೇಶಿಕ ಭಾಷೆಯ ಚಿತ್ರವೆಂದು ಕರೆದುಕೊಳ್ಳುತ್ತಿದ್ದಾರೆ. ಈ ಬ್ಯಾರಿ ಚಿತ್ರವನ್ನು ನಿರ್ಮಿಸಿದ್ದು ಕನ್ನಡದ ಬ್ಯಾರಿಯಾಗಿದ್ದರೂ, ನಿರ್ದೇಶಿಸಿರುವುದು ಮಲಯಾಳಿ ಮಾತನಾಡುವ ಸುವೀರನ್ ಎಂಬವರು. ಆದರೆ ಇದರ ಸಂಪೂರ್ಣ ಹೆಗ್ಗಳಿಗೆ ಕರ್ನಾಟಕಕ್ಕೇ ಸಲ್ಲಬೇಕು. ಬ್ಯಾರಿ ಭಾಷೆ, ಅದರ ವೈವಿಧ್ಯ ಸಂಸ್ಕೃತಿ ಕನ್ನಡ ತಾಯಿಯ ಕರುಳ ಬಳ್ಳಿಯೊಂದಿಗೆ ಸಂಬಂಧವನ್ನು ಹೊಂದಿದೆ. ಇದೇ ಸಂದರ್ಭದಲ್ಲಿ ಈ ಚಿತ್ರ ಒಂದು ಸಣ್ಣ ವಿವಾದಕ್ಕೂ ಸಿಲುಕಿಕೊಂಡಿತ್ತು. ಈ ಚಿತ್ರದ ಕತೆಯನ್ನು ಸಾರಾ ಅಬೂಬಕ್ಕರ್ ಅವರ ‘ಚಂದ್ರಗಿರಿಯ ತೀರ’ದಲ್ಲಿ ಕೃತಿಯಿಂದ ಕದಿಯಲಾಗಿದೆ ಎಂಬ ಆರೋಪ ಲೇಖಕಿಯಿಂದ ಬಂದಿತ್ತು. ಬ್ಯಾರಿ ಭಾಷೆಯಲ್ಲಿ ಪ್ರಪ್ರಥಮವಾಗಿ ಬರುವ ಚಿತ್ರ ಇಂತಹ ಕಳಂಕದೊಂದಿಗೆ ಹೊರಬಂದುದು ಮಾತ್ರ ಖೇದಕರ. ಇದನ್ನು ತಪ್ಪಿಸಲು ಲೇಖಕರಿಗೂ, ನಿರ್ಮಾಪಕರಿಗೂ ಸಾಧ್ಯತೆಯಿತ್ತೇನೋ. ಇದನ್ನು ಯಾವನೋ ಇನ್ನೊಬ್ಬ ಲೇಖಕ ತನ್ನ ಕತೆಯೆನ್ನುತ್ತಿದ್ದರೂ, ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಓದಿದವರಿಗೆ ಸಾರಾ ಅಬೂಬಕರ್ ಮಾತಿನಲ್ಲಿರುವ ಸತ್ಯ ಎದ್ದು ಕಾಣುತ್ತದೆ. ಇನ್ನೊಬ್ಬರ ಕತೆಯನ್ನು ಕಳ್ಳತನ ಮಾಡುವುದು, ತನ್ನದೆಂದು ಹೇಳಿಕೊಳ್ಳುವುದು ಸೃಜನಶೀಲತೆಗೆ ಅವಮಾನ ಮಾಡಿದಂತೆ. ಇದನ್ನು ಪರಿಹರಿಸಲು ಇನ್ನೂ ದಾರಿ ತೆರೆದೇ ಇದೆ. ಅದೇನೇ ಇರಲಿ, ಕನ್ನಡದ ವೈವಿಧ್ಯ ಹಾಗೂ ಬಹು ಪರಂಪರೆಯನ್ನೂ ಈ ಚಿತ್ರ ಎತ್ತಿ ಹಿಡಿದಿದೆ. ಈ ಸ್ವರ್ಣ ಕಮಲ ಕನ್ನಡದ ಅಖಂಡ ಕನ್ನಡಕೋಟಿಗೆ ಸಲ್ಲಬೇಕಾದುದು.]]>

‍ಲೇಖಕರು G

March 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಇನ್ನೂ ಎಷ್ಟು ದಿನ?

ಇನ್ನೂ ಎಷ್ಟು ದಿನ?

ಚೈತ್ರಾ ಶಿವಯೋಗಿಮಠ ತಣ್ಣಗೆ ಸಣ್ಣಗೆ ಇನ್ನೂ ಹಾಡುತ್ತಲೇ ಇದ್ದಾಳೆ ಸೋಗೆಯ ನಡುವೆ ಹಣಿಕುವ ಸೂರ್ಯರಶ್ಮಿಯ ಸ್ನಾನ, ಇಬ್ಬನಿಯ ಪಾನ. ಅಲಂಕಾರಕ್ಕೆ...

ಅಪ್ಪನ ಪದಕೋಶದಲಿ..

ಅಪ್ಪನ ಪದಕೋಶದಲಿ..

ಪ್ರವೀಣ ಹಿರೇಮಠ / ಬೋಡನಾಯಕದಿನ್ನಿ ಅಪ್ಪನ ಏಟುಗಳನ್ನು ಲೆಕ್ಕವಿಡುವ ಅಗತ್ಯವೇ ಇಲ್ಲ ಒಂದು ಏಟೂ ಕೊಟ್ಟ ಚಿಕ್ಕ ನೆನಪೂ ನನಗಿಲ್ಲ ಆದರೆ...

ಅವ್ಯಕ್ತ‘ದೇಶ ದೇಹ ಮನಸ್ಸುಗಳ’ ಕತೆ

ಅವ್ಯಕ್ತ‘ದೇಶ ದೇಹ ಮನಸ್ಸುಗಳ’ ಕತೆ

ಅವ್ಯಕ್ತ - ನಿಮ್ಮ ನಿರೀಕ್ಷೆ ಯಲ್ಲಿ ಮಾಳವಿಕ ಸಂಚಾರಿ ವಿಜಯ್ ಅಭಿನಯದ ಕಿರುಚಿತ್ರ. ಇದೊಂದು ' ದೇಶ- ದೇಹ- ಮನಸ್ಸುಗಳ' ಕತೆ . ನಿಮ್ಮ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This