"ಬ್ರಾಮರ ಮನೆಲಿ ಇದರ ಪಲ್ಯ ಮಾಡಕಂದು ತಿಂತರೆ ಕನೆ, ದ್ವಾಸೆ ಕುಟೆ"

ಆಲೂರಿಗೆ ಆಲೂಗೆಡ್ಡೆ ತಂದ ಗೌಡ್ರು

h r sujatha2

ಹೆಚ್.ಆರ್.ಸುಜಾತಾ

ಹೊಸ ಹೊಸ ಬೆಳೆ ತಂದು ಬೆಳೆಯೋದ್ರಲ್ಲಿ ಅವರದ್ದು ಎತ್ತಿದ್ ಕೈ.
ಕೆಂಬತ್ತಿ, ಆಲೂರುಸಣ್ಣ, ದಪ್ಪ ಭತ್ತ ಮಾತ್ರ ಬೆಳಿತಿದ್ದ ಗದ್ದೆ ಸೀಮಿಗೆ ಜಯ ಭತ್ತ, ರತ್ನಚೂಡಿ, ರಾಜಮುಡಿ, ಬಂಗಾರ ಸಣ್ಣ ಇಂಥ ತಳಿನೆಲ್ಲಾ ಪರಿಚಯಿಸಿದ ಖ್ಯಾತಿ ಇವರಿಗೆ ಸಲ್ಲುವಂಥದ್ದಾಗಿತ್ತು.
ಮಕ್ಕಳನ್ನ ಹಾಸನದ ಕೋಟೆಗೆ ಓದಕ್ಕೆ ಬಿಟ್ಕಂದು, ಛೇರ್ಮನ್ಗಿರಿ ಮಾಡಕಂದು, ಯಾವಾಗ್ ನೋಡುದ್ರು ಬೆನ್ನ ಹಿಂದೆ ಜನಗಳ ದಂಡು ಕಟ್ಕಂದು ಅವ್ರು ಓಡಾಡರು. ಹಾಸನದ ಲಾಯ್ರಿಗಳು, ಗೌರ್ಮೆಂಟ್ ಆಸ್ಪತ್ರೆ ಡಾಕ್ಟರಗಳು, ತಾಲೂಕು ಆಫೀಸನೋರು, potatoಬ್ಯಾಂಕಿನ ಮೇನೇಜರ್ರು, ಅಂಗಡಿ ಮುಂಗಟ್ಟನೋರು, ಆಲೂರು ಸಾಬರು, ಸಿಂಗಪುರದ ಅಯ್ಯ್ನೋರು, ಸುತ್ತೂರ ಗೌಡರು, ಹೋಟ್ಲು ಇಟ್ಕಂಡೋರು, ಹಿಂಗೆ ಅವರಗಳನ್ನ ಭೇಟಿ ಮಾಡತಾ ಜಗದೋದ್ಧಾರದ ಕೆಲ್ಸ ಮಾಡತಾ ಅವರು ಕಷ್ಟದಲ್ಲಿರೋವರ ಸಮಯಕ್ಕೆ ಶ್ರೀ ಕ್ರಿಷ್ಣನಂಗೆ ಒದಗಿ ಬರೋರು.
ಇಂಗ್ ಬಂದು ಸಹಾಯ ಮಾಡೋರ್ನ ಊರು ಸುಮ್ಮನೆ ಬುಟ್ಟಾದ ನೀವೆ ಹೇಳಿ? ಭದ್ರಾಗಿ ಅಂಗೇ ಹಿಡ್ಕಳದು. ಹಿಂದ್ ಬಂದೋರ ಜನ್ರ ಕೈಲೂ ದುಡ್ಡಿಲ್ಲ. ಇವ್ರ ಕೈಲೂ ಇಲ್ಲ. ಎಂಗೋ ಎಲ್ಲೋದ್ರು ಅವರ ಒಳ್ಳೆತನ, ಹಚ್ಚಿಕೊಳ್ಳೋ ಗುಣ, ಮನೆ ಭತ್ತ ಮಾರಾದ್ರೂ ಊರ ಕಷ್ಟಕ್ಕಾಗೊ ಅವರ ಜವಾಬ್ದಾರಿ ಕಂಡು ಜನ ಅವರ ನಂಬಿಕಂದು ಅವರ ಹಿಂದಹಿಂದೆ ಕುರಿಮಂದೆ ಅಂಗೆ ಹೋಗೋರು. ಊರಗೂ ಒಬ್ಬರು ಇಂಥೋರು ಬೇಕೆಬೇಕಲ್ಲಾ? ಯಾರೆದ್ರುಗಾರು ನಿಂತ್ಕಂಡು ಗಟ್ಟಿಯಾಗಿ ಮಾತಾಡಿ, ಕೆಲ್ಸ ಜಯಸಕೊಂಡು ಬರೋರು. ಹಿಂಗೆ ಅವರು ಜನಪ್ರಿಯ ಚೇರ್ಮನ್ರಾದರು. ಊರ್ನೋರು ಮುಂದೆ ಗೌಡರಾದರು.
ಹಿರೀಕರಿಗೆ ಪಟೇಲ. ಚಿಕ್ಕೋರಿಗೆ ಪಟೇಲಣ್ಣ. ಅವರ ಮನೇರೇನು ಪಟೇಲಕೆ ಮಾಡತಿರ್ನಿಲ್ಲ. ಸಣ್ಣದರಲ್ಲೆ ಅವ್ವನ್ನ ತಿನ್ನಕಂಡು ದೊಡ್ಡವ್ವ ಚಿಕ್ಕವ್ವದೀರ್ಗೆಲ್ಲಾ ಮಗನಂಗೆ ಬೆಳೆದರು ಗೌಡ್ರು. ಸಣ್ಣ ಹುಡುಗ ಆಗಿದ್ದಾಗ ಹಿಂದಕ್ಕೆ ಕೈಕಟ್ಟೆ ಹಾಕಂಡೂ ತಿರಗಾಡೊ ಮಗಿನ ಅವರವ್ವದೀರು ಪಟೇಲ ಅಂದ್ರು. ಆಗಿಂದ ಅವರು ಊರಿಗೆ ಪಟೇಲಣ್ಣ ಆದರು.
ಆಗಿನ ಕಾಲ್ದಲ್ಲಿ ದುಡ್ಡಿಗೆ ಎಲ್ರಿಗೂ ಕಷ್ಟವೆ ಆಗಿತ್ತು. ನಿಮಗೆ ಗೊತ್ತಲ್ಲಾ? ಆದ್ರೂ ಸಾಲಸೋಲ ಮಾಡಿ, ಧೈರ್ಯ ಮಾಡಿ ಈ ಥರಕ್ಕೆ ಊರ ಹೊರಗಿಂದ  ಬರೊ ಬೆರಗಿನ ಒಂದೋಂದು ಬೆಳೆನೂವೆ ತಂದು, ಆಗಾಗ ಊರ ವಳಿಕೆ ಪರಿಚಯ ಮಾಡೋರು. ಹಿಂಗೆ ಅವರು ಆಸೆಯಿಂದ ಊರಿಗೆ ತಂದ ಆಲೂಗೆಡ್ಡೆ ಬೆಳೆ ಅನ್ನದು ನಮ್ಮ ತಾಲೂಕಿನ ಜನದ ಜೊತೆ ಸುಮಾರು ಅರವತ್ತು ಎಪ್ಪತ್ತು ವರ್ಶದಿಂದಲೂ ಇವತ್ತಿನ ತನಕ ಜೂಜಾಡತಾನೆ ಈತೆ ಅನ್ನಿ.
ಆಲೂರು ತಾಲೂಕಲ್ಲಿ ಆಗಿನ ಕಾಲಕ್ಕೆ ಭಾರೀ ಮಳೆ ಬೀಳೊದು. ಮಲೆನಾಡ ಸೆರಗಲ್ಲೇ ವರಿಕ್ಕಂದು ಕುಂತಿದ್ದ ಊರಲ್ಲಿ ತಾರಾಮಾರ ಮಳೆ ಬೀಳೊ ಜಾಗದಲ್ಲಿ, ಆಲೂಗೆಡ್ಡೆ ಬೀಜ ಬಂದು ಏಪ್ರಿಲ್ ಮೇನಲ್ಲಿ ಬಿತ್ತನೆ ಆಗೋದು. ಮಳೆ ಅಲ್ಲಲ್ಲಿಗೆ ಹದವಾಗಿ ಬಿದ್ದರೆ, ಜಡಿ ಬೀಳೊ ಅಷ್ಟ್ರಲ್ಲಿ ಭೂಮಿಯಿಂದ potato-loveಆಲೂಗೆಡ್ದೆ ಆಚೆಗೆ ಹಾಕಿ ಊರ್ನೋರು, ಉಸುರ ನಿಸೂರಾಗಿ ಬುಡೋರು. ಒಳ್ಳೆ ರೇಟೂ ಅಂಥ ಬೆಂಗಳೂರು ಬಾಂಬೆ ಲಾರಿ ಹತ್ತಿ ಹೋಗಿ ಪಂಜಾಬಿನ ರೈತರ ಜೊತೆಲಿ ಸ್ನೇಹನೂ ಬೆಳಸ್ಕಂಬರರು. ಒಂದೊಂದು ಸಲ ಲಾಟ್ರಿ ಹೊಡದಂಗೆ ಬೆಳೆ ಕೈಗ್ ಹತ್ತಿ ದುಡ್ಡ ಝಣಝಣ ಅಂತೂ ಅಂದ್ರೆ, ಆ ವರ್ಷದಲ್ಲಿ ಅವ್ರು ತಲೆ ಎತ್ಕಂಡು ಓಡಾಡರು.
ಅಲ್ಲಿಂದ ಅವರನ್ನ ಪ್ರತಿ ವರ್ಷಲೂವೆ ಆಲೂಗೆಡ್ದೆ ಹಾಕೋ ಚಟಕ್ಕೆ ಅದು ಬೀಳಸ್ಕಳದು. ಆದ್ರೆ… ಮಳೆ ಕೈ ಕೊಡ್ತು ಅಂದ್ರೆ ತಗ, ಅಂಗೆ ಮಕ್ಕಾಡೆ ಮಲಗ್ಸಬುಡದು. ಈ ಕಡೆ ರಾಗಿನೂ ಇಲ್ಲ ಹೊಟ್ಟಗೆ, ದನಿಗೆ ಹುಲ್ಲೂ ಇಲ್ಲ, ಕಡಿಗೆ ಕೈಗೆ ದುಡ್ಡು ಇಲ್ಲ. ಮಳೆ ಹಿಡಕಂತೂ ಅಂದ್ರೆ ಕಡುಬಿನ ಗಾತ್ರ, ಚಕ್ಕೋತದ ಗಾತ್ರಕ್ಕಿರೊ ಗೆಂಡೆಗಳ, ಕೀಳಕ್ಕೆ ಬಿಡದೆ, ಮಳೆ ತನ್ನ ನೀರಲ್ಲಿ ಅದನ್ನ ಕರುಗುಸ್ತಾ, ಅದುಕ್ಕೆ ದೊಮ್ಮೆರೋಗ ಹೊಡದು, ಭೂಮ್ತಾಯಿಯ ಹೊಟ್ಟೆ ವಳಗೆ ಅವು ಅಂಗೆ ಮೈ ಇಳದಂಗೆ(ಗರ್ಭಪಾತ) ಕರಗೋಗವು. ಮಳಿಗೆ ಬೆಳ್ಳಗೆ ಬಿಳುಚಿಕೊಳ್ಳೋ ಗಿಡ ನೋಡ್ತಾ, ಆಕಾಶದಲ್ಲಿ ಮಳೆ ಮೋಡ ಬಿದ್ದಂಗೆ, ಹಾಕದೋರ ಕಣ್ಣಲ್ಲೂ ದುಖಃ ಅನ್ನೋ ಕಪ್ಪನೆ ಮೋಡ, ಬಂದು ಕಟ್ಕಳದು.
ಇಂಥ ಒಂದು ಜೂಜಿನ ಬೆಳೆನ, ಸುತ್ತಮುತ್ತಕ್ಕೆ ತೋರ್ಸಿ ತಂದು ಹಾಕೊ ದಿವಸ…. ಗೌಡರ ಸಂಭ್ರಮ ನೋಡಬೇಕಾಗಿತ್ತು ನೀವು!  ಅವರ ಮೂಡಗಡೆ ಹೊಲ ಅನ್ನದು ಮದ್ವೆ ಮನೆಯಂಗೆ ಕಳೆಕಳೆಯಾಗಿತ್ತು. ಊರಿನ ಕಣ್ಣು ಅನ್ನವು ಮಾಡೊ ಕೆಲ್ಸ ಬುಟ್ಟು ಆಡೋ ದಾಸಯ್ಯನ ಕುಟೇ ಹೋದಂಗೆ ಗಳಿಗ್ಗೊಂದ್ಸಲ ಬಿತ್ತನೆ ಮಾಡೋ ಜಾಗಕ್ಕೆ ಹೋಗಿ ಹೋಗಿ ನೋಡಕಬರದು. ಕೆಲ್ಸ ಬುಟ್ಟು ಬುಟ್ಟು ಹೋಗೋರ ಕಂಡು ದೊಡ್ಡೋರು, “ಹೋಗಿ ಬಂದು ಯಾವನೋ ಮೂಗಿ ….ದನಂತೆ” ಅಂತ ಬಯ್ಯೋರು.
ಎತ್ತಿನ ಗಾಡಿ ಕೆಳುಗೆ, ಗೋಣಿ ಮರದ ಕೆಳುಗೆ, ಹಳೆಚಾಪೆ ಹಾಸಕಂದು, ಗೋಣಿಚೀಲ ಹಾಸಕಂದು, ಊರಟ್ಟಿನ ಅಡುಗೆ ಮಾಡದಂಗೆ ಹತ್ತು ಚೀಲ ಗೆಂಡೆಯ ಹರವಕಂದು, ಆರು ಜನ ಹೆಣ್ಣಾಳು ಕುಡ್ಲು ಇಟ್ಕಂದು ಕುಯ್ತಿರೋರು. ದಪ್ಪನೆ ಆಲೂಗೆಡ್ದೆಯ ಎಲ್ಲಾ ಭಾಗಕ್ಕೂ ಅದರ ಕಣ್ಣುಗಳು ಬರೊ ಹಂಗೆ ಭಾಗ ಮಾಡಿ ಅಂತ ಗೌಡರು ಹೇಳಿ, ನೇಗಲು ಹೊಡಯೋರ್ಗೆ ಇಂಗಲ್ಲಾ ಇಂಗೆ, ಅಂತ ಹೋಗಿ ತೋರ್ಸತಿರೋರು.
ಊರೊಟ್ಟಿನ ಹಂಡೆ ತಂದು ಅದರ ಹೊಟ್ಟೆಗೆ ಅರ್ಧ ನೀರು ತುಂಬುಸಿ ಮನೇಲಿ ಕಡೆದ ಮಜ್ಜಿಗೆನೆಲ್ಲಾ ಅದಕ್ಕೆ ಹೂದು, ಈರುಳ್ಳಿ ಕೂದ ಹಾಕ್ಕಿ, ಬಾಯಿಗೆ ರುಚಿ ಬರೊ ಹಂಗೆ ತುಂಬಿಟ್ಟಿದ್ರಾ… ಅದನ್ನ ಕೆಲಸ ಮಾಡೋ ಕಡಿಕೇ ತಗಹೋಗಿ ಸಣ್ಣ ಹುಡ್ಲು ಅವರಿಗೆ ಕುಡ್ಯಕೆ ಕೊಟ್ಟಕಂದು, ಕೂದಿರೊ ಆಲೂಗಡ್ಡೆಯ ಮಕ್ಳು ಮರಿ ಎಲ್ಲಾ ಆಟುಗಳಿ ಆಡಕಂತಲೆಯ ಅದನ್ನ ತಗದು ಮಂಕರಿಗೆ ಹಾಕರು. ಹೆಣ್ಣಾಳು ತಿರೂಗಿ ಗೆಂಡೇ ಭಾಗ ಮಾಡಿ ತುಂಬೋರು.
ಆ ಮಂಕರೀಯ ತಗೊಂಡೋಗಿ ಉತ್ತಿರೊ ಅರೆ ಸಾಲಿನ ವಳಕ್ಕೆ ಗೇಣಗೊಂದ ಎಸ್ಕಂತ ಒಬ್ಬರೋದ್ರೆ, ಅದ ಮಕಾಡೇ ನೆಲಕ್ಕೆ ಊರಿ ಮಣ್ಣ ಮುಚ್ಚೋರು ಒಬ್ರು. ಮಧ್ಯ ಮಧ್ಯಕ್ಕೆ ತಿಂಗ್ಳಹುಳ್ಳಿ ಬೀಜ, ದಂಟಿನ ಬೀಜ, ಮೂಲಂಗಿ ಬೀಜನೂ ಹಾಕಕ್ಕೆ, ಮಕ್ಳು ಮರಿ ಅಂಗೇ ಹೊಲದ ತುಂಬಾ ಓಡಾಡವು. ಎರಡು ಕಡಿಂದ್ಲೂ ನೇಗ್ಲ ಏರುಸಿ, ದಿಂಡ ಕಟ್ಟಕಂದು ಹಂಗೇ… ಎರಡಾಳು ಬತ್ತಿರೋರು. ಇನ್ನ ನಾಕಾಳು ಆರು ಹೊಡಿತಿರೋರು.
ರಾಗಿ ಹೊಲದಲ್ಲಿ ಬಿತ್ತನೆ ಆಯ್ತಿದ್ದಂಗೆ ಸಪಾಟಾಗಿ ಮರ ಹೊಡಯೋದನ್ನ ನೋಡುದ ಊರಿನ ಕಣ್ಣು, ಬಿತ್ತನೆ ಮಾಡಿ ಬಂದ ಮೇಲೆ ದಿಂಡ ಕಟ್ಟುದ್ದ ನೋಡಿ, ಗೌಡ್ರು ಕನ್ನಂಬಾಡಿ ಕಟ್ಟೆನೆ ತಂದು ಅಲ್ಲಿ ಕಟ್ಟದಂಗೆ ಅವತ್ತಿಂದಲೇ, ಅದರ ಮೇಲೆ ನಿಗಾ ಇಟ್ಟಿತ್ತು. “ಗಿಡ ಹುಟ್ಟಕೆ ಒಂದಿಪ್ಪತ್ತು ದಿಸ ಬೇಕು ಕಣರೋ” ಅಂತ ಗೌಡ್ರು ಬಂದರೆಲ್ಲರಿಗೂ ಗಿಣಿಗೆ ಹೇಳದಂಗೆ ಆವತ್ತೇ ಹೇಳೂದ್ರೂವೆ, ದಿನಾ ಬೆಳೀಗ್ಗೆ ಅಂಗೆ ಹೊಲದ ಕಡಿಕೆ ಬಂದರೆಲ್ಲಾ ನೆಲ ಬೆಂಟಿ ಬೆಂಟಿ ನೋಡೋರು.
potato-colorsವಾರಕ್ಕೆ ತಿಂಗಳುಳ್ಳಿ ಹುಟ್ಟತು. ಮೂಲಂಗಿ ಕಣ್ಣು ಬುಟ್ವು. ದಂಟು ಆಗಲೆ ಒಂದು ಗಂಟನೂ ಬುಡ್ತು. ಅಂಗೂ ಇಂಗೂ ಊರೊರ ಕಣ್ಣಿಗೆ ಕಾಣ ಹಂಗೆ ಗೆಂಡೆ ಕಣ್ಣು ಬುಟ್ಕಂದು, ಎರಡೆಲೆ ಆಚಿಗೆ ಹಾಕಿ ಊರನ್ನೇ ಸಮಾಧಾನ ಮಾಡಿ ನೋಡಕಳ್ರಪ್ಪಾ…ಇನ್ನ, ನನ್ನ ಅವತಾರವ ಅಂತು. ಹಸೂರುಗೆ ಗಾಳೀಲಿ ಉಸ್ರು ಬುಡತು.
ಒಂದು ದಬ್ಬಣದ ಗಾತ್ರಕ್ಕೆ ಗಿಡ ಮೇಲೇಳುತು. ಕಳೆ ಕಿತ್ತು ಹಸನು ಮಾಡತಿದ್ದಂಗೆ, ತಿಂಗಳೊಪ್ಪತ್ತಿಗೆ ಗಿಡ ಹರಡಕೊಂದು ಹೂವಿನ ದಂಟು ಮೇಲೇರ್ತು. ದನಿನ ಗೊಬ್ಬರೂನುವೆ, ಕೆರೆ ಗೋಡುನೂವೆ ಗೌಡ್ರು ವಸಿ ಹಾಕಿದ್ರಾ? ಬಿತ್ತನೆ ಮಾಡೋವಾಗ. ನೆಲಕ್ಕೆ ತನು ಕೊಟ್ಟುದ್ದೆ ತಗ, ಗಿಡ ಅನ್ನವು ಅಂಗೆ ಗೆಲುವಾಗಿ, ಕರ್ರಗೆ (ದಟ್ಟ ಆರೋಗ್ಯವಾದ ಹಸಿರು) ಬಂದ್ವು. ಹೂವು ಅನ್ನದು ವನ ಆಗೋಯ್ತು. ಮೂರೆಕರೆ ಹೊಲದ ತುಂಬಲೂವೆ ಅಂಗೆ ಬಿಳೇ ಹೂವಿನ ಶಾಲೆ (ಸೀರೆ) ಮಧ್ಯಕ್ಕೆ ಹಸುರು ಎಲೆ, ದಾರ ಬುಟ್ಟಂಗೆ ನೋಡೋಕೆ ಒಂದು ಚಂದವಾಗಿ ಕಾಣತಿರದು.
ಗೆಂಡೆ ಮ್ಯಾಲೆ ಬುಟ್ಟದೊ? ಕೆಳುಗ್ ಬುಟ್ಟಾದೋ? ಅಂತ ಊರು ತಲೆ ಕೆಡುಸ್ಕಂಡಿತ್ತು. ಯಾಕೆ ಅಂತೀರಾ? ಈಟಂದೊಡ್ಡಿ ಹೂವ್ವಾದ ಮೇಲೆ ಫಸಲು ಮ್ಯಾಲೆ ಬುಡಬೇಕು ತಾನೆ?
“ಗೆಂಡೆಗೆಣಸು ಅಂದ ಮ್ಯಾಕೆ  ನೆಲದ ವಳಗೆ ಬೇರಿಗೆ ಕಚ್ಕತಾವೆ? ಇದ್ಯಾಕುರ್ಲಾ? ನಮ್ಮೂರಲ್ಲಿ ಕೆರೆ ಗೆಂಡೆ ಬುಟ್ಟಿದ್ದ ಕಂಡಿಲ್ವಾ ನೀವು. ಅಂಗೇ ಇವು ನೆಲದ ವಳಗೆ ಇರ್ತವೆ. ವಂಗ ಮುಂಡೇವಾ?”
ಅನುಭವದ ಹಿರಿಯ ಅಜ್ಜಮ್ಮ ಹೇಳತು. ಆಗ ಅಜ್ಜಮ್ಮನ್ನ ಮಾತಿಗೆ ಊರಿನ ಪಡ್ಡೆಗಳು “ಭೇಷ್” ಅಂದವು.
“ಸಿಂಗಪುರದ ಬ್ರಾಮರ ಮನೆಲಿ ಇದರ ಪಲ್ಯ ಮಾಡಕಂದು ತಿಂತರೆ ಕನೆ, ದ್ವಾಸೆ ಕುಟೆ” ಅಂತ ಆ ಊರಿಗೆ ಮಗಳ ಕೊಟ್ಟ ಬಿಳಮ್ಮ ಅಂದ್ಲು.
“ಹಾಂ ಅಂಗಾ?” ಅಂತ ಸರಿಗಿತ್ತಿ ಮೂಗಿನ ಮೇಲೆ ಬೆರಳಿಟ್ಕಂಡ್ಳು.
ಹಾಸನದ ದಿಕ್ಕಿಗೆ ಬತ್ತಾ ಬತ್ತಾ, ಮಳೆ ಕಡ್ಮೆ ಆಯ್ತಾ ಹೋಯ್ತದಾ? ಅಲ್ಲಿ ಆಲೂಗೆಡ್ಡೆಯ ತರಕಾರಿ ಬೆಳ್ದಂಗೆ ಬೆಳ್ಯೋರು. ಬರಿ ಬರಗಾಡ ಇಟ್ಕಂದು, ಆಲೂರು ಗದ್ದೆಸೀಮೇರು ನೆಮ್ಮದಿಯಾಗವ್ರೆ ಅಂತ ಈ ದಿಕ್ಕಿಗೆ
ಯಾವಾಗಲೂ ಬಾಯ ಬುಟ್ಕಂಡು ನೋಡತಿದ್ದ ಅವರು, ಈಗ ಇತ್ಲ ಕಡೇರ ಕಂಡ್ರೆ… ಕ್ಯಾರೆ ಅಂತಿರಲಿಲ್ಲ. ಯಾಕಂದ್ರೆ ಆಲೂಗೆಡ್ಡೆಗ ಅಲ್ಲಿಗೆ ಬೀಳೋ ಹದಮಳೆ ಸಾಕಾಗದು. ಮೂರು ತಿಂಗಳಿಗೆ, ಕೈಗೆ ಬೆಳೆ ಬಂದುಬಿಡೋದು. ಅದರೊಳಗೆ ಕಾಳು ಕಡ್ಡೀನೂ ವಸಿ ಆಗದು. ಬೆಂಗಳೂರು,ಪೂನ,ಬಾಂಬೆ ಮಾರ್ಕೆಟ್ಟಿಗೋಗಿ ನಾಕಾರು ಥರದ ಜನ, ನಾಕಾರು ವ್ಯವಹಾರ, ಜೋಬಿನ ತುಂಬ ದುಡ್ಡು ತುಂಬಕಂಡು, ಕೈಗೆ ವಾಚು ಕಟ್ಕಂದು. ಮನಿಗೆ ಗಡಿಯಾರ ನೇತು ಹಾಕ್ಕಂದು, ರೇಡಿಯೋನ ಕಿವಿ ಚೊಟ್ರೇಲಿ ಇಟ್ಕಂದು, ಸೈಕಲ್ಲ ಮೇಲೆ ತಿರಗತಾ, ಶೋಕಿ ಮಾಡದ ಕಲಿತಿದ್ದರು. ಇಂಥ ನೆಂಟರೊಬ್ಬರು ಊರಿಗೆ ಬಂದೋರು “ಗಡಿಯಾರ ಅನ್ನದು ಮನೇಲಿ ದೊರೆ ಇದ್ದಂಗೆ” ಅಂತ ಜಂಭ ಕೊಚ್ಚಿದ್ದ  ಈ ಊರು ನೋಡಿತ್ತು.
ಸೂರ್ಯಪ್ಪನ ಜತೇಲೆ ಎದ್ದು, ಅದರ ಜೊತೇಲಿ ಗೇಯ್ಮೆ ಮಾಡಿ ಅದರ ಜತೀಗೆ ಮಲಿಕ್ಕಳ ಊರು, ಈ ಮಳೆ ಮುಡಿಯ ತಲೆ ಮೇಲೆ ಕಟ್ಕಂಡು, ಮಳೆಗಾಲದಲ್ಲಿ ಕಟ್ಟಕಂದಿರೋ ಪಾಚಿ ಮೇಲೆ ಹುಶಾರಾಗಿ ಓಡಾಡೋ ಅಂಥ ಈ ಊರು “ನೋಡಪ್ಪಾ! ಎಂಗೀತೆ. ನಮ್ಮ ಮೂಡಲ ದೇವರಗಿಂತ ದೊಡ್ಡದಂತಲ್ಲ ಆ ಗಡಿಯಾರ. ಬನ್ರಲಾ… ಅರೆ ರಾತ್ರೀಲಿ ಸಿರಿ ಬರ ಹೊತ್ಗೆ ಯಾವನೋ ಕೊಡೇ ಹಿಡಕಂಡಂಗಾತು. ಒಂದೊರ್ಶ ಮಳೆ ಭೂಮಿಗೆ ಕೆಡುವದಲೇ ನಮ್ಮ ಸೂರ್ಯಪ್ಪ, ಉರಿಗಣ್ಣು ಬುಟ್ಟ ಅಂದ್ರೆ ಅಂಗೇಯ… ಇವನೆಲ್ಲಿರ್ತಾನೋ? ಮೂಢಸೀಮೆ ಮುಕ್ಕನ್ನ ತಂದು. ನೀವು ಅವರ ಪುಕ್ಸಟ್ಟೆ ಮಾತಿಗೆ ಬೆರಗಾಗಬೇಡಿ, ಕಣ್ರಲಾ…” ಅಂತ ತನ್ನೂರ ಹರೇದ ಹುಡ್ಲಿಗೆ ಊರು ತಿಳಿ ಹೇಳಕೊಡತು.
ಅಲ್ಲಿಯ ನೆಂಟಸ್ತಿಕೆ ಕಂಡಿದ್ದ ಸಗನಪ್ಪ
“ಇದುಕ್ಕೆ ಮತ್ತೆ ಮಲೆಸೀಮೆ ಮಂಗಗಳು ಅಂತ ಆಡಕಳದು ಹಾಸನದ ಕೋಟೆರು ನಿಮ್ಮ ತಗ! ಈ ಹೂವು ಬುಟ್ಟು ಗಿಡ ಬಾಡಿ,
ಗಿಡ ಸತ್ ಮ್ಯಾಕೆ, ಗಿಡ ಕಿತ್ ನೋಡಿ, ಅಂಗೆ… ಬೇರುಬೇರಿಗೂ ಉಸ್ರು ಬುರುಡೆ ಅಂಗೆ ಗೆಜ್ಜೆ ಕಟ್ಕಂದಿರ್ತಾವೆ”  ಅಂತ ಅವನಿಗೆ ತಿಳುದ್ ಇಚಾರ ಹೇಳುದ್ದೆ ತಡ, ತಕ… ಊರಿನ ಮರಿಕುರಿಗಳು ಗಿಡ ಕೀಳಕ್ಕೆ ಶುರು ಮಾಡುದ್ವು. ಇದ ತಡೆಯಾಕೆ ಅಂತನೆ ಗೌಡ್ರವ್ವಾರು ದಿನಕ್ಕೆ ಹತ್ಸಲನಾರು ಮನೆ ಹಿತ್ಲತಾವಲಿಂದಲೆ ಕೂಗು ಹಾಕರು. “ಯಾರಿರ್ಲಾ ಅದು? ಗೆಂಡೆ ಹೊಲದ ತಾವ ಅಡ್ಡಾಡರು. ಬಂದೆ. ಈಗ ಬಂದೆ. ಇರಿ. ನಿಮ್ಮವ್ವಸ್ಸಾಳಾಗ…..” ಅಂತ ಕೂಗಿನ ಮರಿ ಅಂತ ಹೆಸರಾಗಿದ್ದ ಅಜ್ಜಮ್ಮಾರ ರಾಗ ಅನ್ನದು ಊರು ತುಂಬಲೂ ಅಲೆಯದು. ಇದ ನೋಡಕಂದು ಈಗಿನ ಸೊಸೇರು ಮುಸುಮುಸಿ ನಗರು. ತಾವೂ ಒಂದಿಸ ಅಜ್ಜಿರಾಗತೀವಿ ,ಅಂಥ ಪಾಪಾ! ಈಗಲೇ ಅವುರಗೇನು ಗೊತ್ತಾದದು. ಅಲ್ವಾ?
ಬೇರಲ್ಲಿ ಗೆಂಡೆ ಆಗವೆ, ಒಂದೊಂದು ಗಿಡದಲ್ಲಿ ಹತ್ತರ ಮೇಲೆ ಗೆಂಡೆ ಬುಟ್ಟವೆ ಅಂತ ರಾತ್ರಿ ಗೌಡಮ್ಮರ ಬಾಯಿಂದ ತಿಳಿತಿದ್ದಂಗೆ ಗೌಡ್ರು ಎಳೆ ಬಿಸಲು ತನ್ನ ರೆಕ್ಕೆಯ ನೆಲಕ್ಕೆ ಇಳಿ ಬಿಡೋ ಹೊತ್ತಿಗೆ ಆಗಲೆ ಬೆಳಗಿನ ಕೆಲಸ ಮುಗುಸಿ ಕೆರೆ ಏರಿ ದಾಟತಿದ್ರು. ಇನ್ನೇನೋ ಮರ್ತನಲ್ಲಾ… ಕೆರೆ ತೂಬಲ್ಲಿ ನೀರು ಏನಾರ ಹೋಯ್ತಾವ ಅಂತ ನೋಡೋಕೆ ನಾಕೆಜ್ಜೆ ಹಿಂದಕ್ಕೆ ಬಂದ್ರು. ಸಸಿ ಗದ್ದಿಗೆ ನೀರು ಹರಿತಿತ್ತು. .ಗದ್ದೆ ಗಣ್ಣ ಇನ್ನೂ ಬೇಸಾಯ ಕಂಡಿರಲಿಲ್ಲ. ಸಸಿ ಈಗಿನ್ನೂ ವಟ್ಳು (ಬೀಜ ಹಾಕಿದ ಮಡಿ) ಹೂದೀತೆ. ಅವು ಬರೊತ್ತಿಗೆ ಗೆಂಡೆ ಕಿತ್ಬುಡಬೋದು ಅನ್ಕಂದು ಸಮಾಧಾನಾಗಿ, ಗೆಂಡೆ ಹೊಲತ್ತಕೆ ಬಂದ್ರು, ಬಂದ್ರೆ…. ಹೊಲದಲ್ಲಿ ಚಟ್ಟು (ಬೀನ್ಸ್) ಕುಯ್ಯೋ ನೆವದಲ್ಲಿ ಹುಡ್ಲು ಗೆಂಡೆ ಬೇರ ಕಿತ್ತು
ಕಿತ್ತು ನೋಡುತಾವೆ. “ಗೆಂಡೆ ಕಿತ್ತ ಮೇಲೆ ಹೊಲದಲ್ಲಿ ಉಳುದ್ ಗೆಂಡೆ ಆಯಕಂಡು ಹೋದರೆ ನಿಮ್ಮ ಮನೆ ಪೂರ್ತಕ್ಕೆ ಆಯ್ತವೆ. ಹೋಗ್ರಲ್ಲಾ… ಈಗ ಎಲ್ಲರೂವೆ. ಬಂದು ನೋಡಿ ಇನ್ನೊಂದ್ಸಲ, ಅಂಡ ಮೇಲೆ ಕಜ್ಜಾಯ ಕಾಯುಸ್ತೀನಿ.”  ಅಂತ ಜೋರಾಗಿ ಗದರುದ್ರು. ಹುಡ್ಲು ಎಲ್ಲಾ ಓಡೋದ್ವು.
ಆದರೂ ಬೆಂಕಿ ವಳ್ಗೆ ಬೆಂದವು ನಚ್ಚಗಿರ್ತಾವೆ ಬಾಯಿಗೆ ಅಂತವ, ದನಿನ ಹುಡ್ಲು ಬೆಂಕಿ ಹಾಕಂದು ಗೆಂಡೆ ಕಿತ್ಕಹೋಗಿ ದಿನಾ ಅದರಲ್ಲಿ ಕುಸುವಕಂದು ತಿನ್ನದು ಬುಡ್ನಿಲ್ಲ. ಗೌಡ್ರ ಹಿತ್ಲಿಂದ ಅಜ್ಜಮ್ಮಾರು ಕೂಗಿನ ಅಲೆಯ ಊರೊಳುಗೆ ಅಲೆಸೋದು ತಪ್ನಿಲ್ಲ. ಇಂಗೆ ಮೂರು ತಿಂಗಳು ತುಂಬತು. ಗೆಂಡೆ ಅನ್ನದರ ಹುಸಿ ಹೆರಿಗೆ ನೋವ ಕಂಡಿದ್ದ ಊರು, ದೊಡ್ಡ ಹೆರಿಗೆ ಆಗಬೇಕು ಅನ್ನೋವಾಗ ಒಂದು ವಾರ… ಮಳೆ ಇಡಕಂತು. ಗೌಡ್ರು ದೇವರು ಇಟ್ಟಂಗೆ
ಆಗಲಿ ಅನಕಂದರೆ, ಗೌಡಮ್ಮಾರು “ಸಾಲ ಮಾಡಿ ಬೀಜದ ಗೆಂಡೆ ತಂದು ಹಾಕಿರದ ಮೈ ಮೇಲೆ ತರಸಬೇಡ ಕನಪ್ಪಾ ಸಕನಿ ರಂಗ” ಅಂತ ಮನೆ ದೇವರಿಗೆ ಕೈ ಮುಗುದ್ರು.
potato2ಮಳೆ ಶುರುವಾತು. ಊರು, ಗೆಂಡೆನ ಅತ್ಲಾಗೆ ತಲೆಯಿಂದ ತೆಗೆದು ಹಾಕಿ, ನೀರು ಗದ್ದೆ ಉಳೋದು, ಭತ್ತ ಬಿತ್ತೋರು ಬಿತ್ತದು, ಸಸಿ ಹುಯ್ಯೋರು ಹುಯ್ಯೋದು, ಗದ್ದೆ ನಾಟಿ ಮಾಡೋರು ಮಾಡದು, ಹಿಂಗೆ, ತನ್ಗೆ ಗೊತ್ತಿರೊ ಕಾಯಕದಲ್ಲಿ ಮುಳುಗೋಯ್ತು. ಆಲೂಗೆಡ್ಡೆ ಏನಾಯ್ತವೋ? ಅಂತ ಒಂದುಸ್ರ ಎದೆ ವಳಗೆ ಗಂಟು ಕಟ್ಕಂಡೆ ಗೌಡರ ಮನೆ ನಾಟಿ ಶುರುವಾತು. ಸಾಬಿಗದ್ದೆ, ದೊಡ್ಡಗದ್ದೆ ನಾಟಿ ಮುಗಿಯೋ ಹೊತ್ಗೆ, ಮಳೆ ಹೊಳವು ಕೊಟ್ಟು ಎಂಟು ದಿಸ ಆಗಿತ್ತು. ನಾಟೀ ಅರ್ಧಕ್ಕೆ ಬುಟ್ಟು, ಗೌಡ್ರು ಮತ್ತೆ ಮಳೆ ಹಿಡಿಯೊ ಹೊತ್ಗೆ ಗೆಂಡೆ ಕೀಳದು ಅಂತ ಹೇಳುಬುಟ್ರು. ಊರನರೆಲ್ಲ ತಗಳಪ್ಪ, ದೊಡ್ಡ ಹೆರಿಗೆ ಮಾಡಸಾಕೆ ತಯ್ಯಾರಾದ್ರು. ಗೆಂಡೆ ಆಯಕ್ಕೆ ಬನ್ರೋ ಅಂದಿದ್ದೆ ತಡ, ವಯಸ್ಸಾದ ಎಂಗಸ್ರು, ಮಕ್ಕಳು, ಮರಿ ಇಂಗೆ, ಹೊಲದ ತುಂಬ ಆಳು ಅಂತ… ಊರಿನ ಆಸೆ ಕಣ್ಣೆಲ್ಲಾ ಬಂದು… ದೊಡ್ಡ ಹೆರಿಗೆಗೆ ನಿಂತ್ಕಂಡು, ಸಡಗರಮಾಡಬುಡ್ತು. ಜೊತಿಗೆ ತಂತಮ್ಮ ಮನಿಗೆ ಗೆಂಡೇ ತುಂಬಸಕೋ… ಹೋಗಕೆ, ಊರು ಅನ್ನದು ಕೈ ಚೀಲ ಬೇರೆ ತಂದಿತ್ತು.
ಹೊಕ್ಕಳ ಬಳ್ಳೀ ಕತ್ತರ್ಸ್ಕಂಡು, ನೇಗ್ಲ ಮೊನೆಲಿ ತಾಯಿ ಕರುಳ ಹರ್ಕಂಡು ಈಚಿಗೆ ಬರೊ ಮಗಿನಂಗೆ ಗೆಂಡೆಗಳು ಕೆಬ್ಬೆ ಮಣ್ಣಲ್ಲಿ ಹೊಲದ ತುಂಬ ಬೆಳ್ಳಗೆ ಉಳ್ಳಾಡವು. ತಗ, ಸಿರಿ ಬಂದಂಗೆ ಮುದುಕರು ಆಯ್ದು ಮಂಕರೀಲಿ ತುಂಬಕೊಡರು. ಹೊಲದ ಬದಿನ ಮೇಲೆ ತಂದು ಮಕ್ಳು  ಹಾಕತಿದ್ರೆ… ಊರ ಆಚೆಲಿದ್ದ ಕಲ್ಲಿನ ಗುಡ್ಡ, ಬುಂಡು ಬುಂಡಕೆ ಕಪಿಸೈನ್ಯ ತಂದು ಗುಡ್ಡೆ ಹಾಕದಂಥ ಗುಡ್ಡೇ ಆಗಿ… ಇಲ್ಲಿಗ್ ಬಂದಂಗೆ, ಅಷ್ಟೆತ್ರಕ್ಕೆ…. ಹೊಲದ ಬದು ಮೇಲೆ ಬಿದ್ಕಂತು. ಇಂಗೆ ಒಂದು ನೇಗ್ಲು ಆಯ್ತು. ಎರಡನೆ ನೇಗಲಲ್ಲಿ ಎದ್ದ ಗೆಂಡೆನೂ ತಂದು ಅಜ್ಜಮ್ಮನ ಕಣ್ಗಾವಲಲ್ಲಿ ಗುಡ್ಡೆ ಹಾಕುದ್ರು. ಮೂರನೆ ನೇಗಲಲ್ಲಿ ಬಂದಂಥ, ಉಳದ ಗೋಲಿ ಗೆಂಡೆಯ ಗೌಡ್ರೆ ಅತ್ಲಾಗೆ ಎಲ್ಲರ್ಗೂ ಹಂಚಿಕೊಟ್ರು.
ಅದ ಮನಿಗೆ ತಕ ಬಂದ ಮೇಲೆ, ಉಸ್ಸಪ್ಪಾ…. ಹೋಗ್ ಅತ್ಲಾಗೀ… ಊರು  ನೆಮ್ಮದಿಯಾಗಿ ಮಲಿಕ್ಕಂಡು, ಕಣ್ಣ ತುಂಬ ನಿದ್ದೆ ಮಾಡತು.
ಊರಾಚೇಲಿ ಹೊಲದ ಬದಿನ ಮೇಲೆ ಇರೊ ಗೆಂಡೆ ಅನ್ನ ಆ ಗುಡ್ಡವ, ರಾತ್ರಿ ಹೊತ್ನಲ್ಲಿ ಕಾಯಕಂಡು ಮಲಿಕ್ಕಳಕ್ಕೆ ಅಂತ ಆಳುಮಗ ಒಬ್ಬ ಅಲ್ಲಿಗ್ ಬಂದಿದ್ದ. ಅವನು ಲಾಟೀನ್ ಬೆಳಕಲ್ಲಿ ಅಂತಾರೆ ಮಲಿಕ್ಕಂದು, ಚಿಕ್ಕಿ ನೋಡತಾ ನೆಪ್ಪಾದ ಪದ ಹಾಡಕಂತಿದ್ದ.
“ಉಣ್ಣೋವರಗೂ ಬಾಳೆ ಹಾಕತೀನಿ. ಬದನೆ ಹಾಕತೀನಿ
ಉಂಡ ಆದ ಮೇಲೆ ನನ್ ಗೆಂಡೆ ಹಾಕತೀನಿ ತಕ”
ಅನಕಂದು ಗೆಂಡೆ ಇದಾವೆ ಅನ್ನೋದನ್ನೇ ಮರೆತು ಮುಖದ ತುಂಬ ಕಂಬಳಿ ಹೊದ್ದು ಬೆಚ್ಚಗೆ ನಿದ್ದೆಗೆ ಜಾರಿ ಹೋದ. ಲಾಟೀನು ಬೆಳಕು ಎಂಥ ಗಾಳೀಗೂ ಅಳ್ಳಾಡದ ಹಂಗೆ ಅಲೂಗೆಡ್ಡೆ ರಾಶಿ ಮೇಲೆ ಒಂದು ಕಣ್ಣು ಸಣ್ಣಗೆ ಇಟ್ಕಂಡೆ ಉರಿತಿತ್ತು.
ಇದ ನೋಡಿ ಚಿಕ್ಕಿ ಅನ್ನವು ಕಣ್ಣ ಮಿಟುಕುಸ್ಕಂದು “ಅಲ್ಲಾ…ಮನುಶನ ಭಂಗದ ಬಾಳಿಗೀಟು ಬೆಂಕಿ ಹಾಕ. ಬಾ. ಅಲ್ಲಾ… ಊರ ತುಂಬ ಹರವಕಂದು ಬಿದ್ದಿರೊ ಅಂತ ಭೂಮಿನೆ ಬುಟ್ಟು ಬದಿಕ್ಕಳಿ ನನ್ ಮಕ್ಕಳೆ ಅಂತ ಆ ತಾಯಿ ನಿರುಮ್ಳಾಗಿ ಮಲಗಿದ್ರೆ ಈ ಮುಂಡೆವು ಬದಿನ ಮೇಲೆ ಈಸು ಗೆಂಡೆ ಗುಡ್ಡೆ ಹಾಕಂಡು ಕಾಯ್ಕಂದು ಮಲ್ಕಂದವಲ್ಲಾ!ಏನ್ ಹೇಳನ ಹೇಳು ಮತ್ತೇ…. ” ಅನಕಂದು ಆಡಕಂದು ಹೊಟ್ಟೆ ಬಿರ್ಯಂಗೆ ನಗತಿರವು.
ಮನೇಲಿ ಆಲೂಗೆಡ್ಡೆ ತಗೊಂಡೋಗಿ, ಮಾರಾಟ ಮಾಡೋದರ ಇಚಾರವ ಗೌಡ್ರು, ನಿದ್ದೆ ಬರೋವರ್ಗೂ ಮಾತಾಡತಲೆ ಇದ್ರು. ನಿದ್ದಗಣ್ಣಲೂ ಗೌಡಮ್ಮರು ಹೂಂಕತನೆ ಇದ್ರು. ನಿದ್ದೆ ಬರದಿರೊ ಅಜ್ಜಮ್ಮ ಒಬ್ಬರು, ನಡುಮನೇಲಿ ಕರೆಕಂಬಳಿ ಕಂಡಿಯಿಂದ ತೂರಿ ಬರೋ ಮಗನ ಮಾತಿಗೆ ಕಿವಿಕೊಟ್ಟಕಂಡೇ ಇದ್ರು.

‍ಲೇಖಕರು admin

October 16, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...

7 ಪ್ರತಿಕ್ರಿಯೆಗಳು

 1. Dr. Chandra Aithal

  ಇಲ್ಲಿನ ಭಾಷೆ ಕರ್ನಾಟಕದ ಯಾವ ಪ್ರದೇಶಕ್ಕೆ ಸೇರಿದ್ದು? ತಿಳಿಸಿ.

  ಪ್ರತಿಕ್ರಿಯೆ
  • H.r. Sujatha

   Sir, Hassan Dist. Adrallu alur talukina
   Sutta e bhasheli hagu raga ide
   Tnk u

   ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ AnonymousCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: