ಬ್ರೆಡ್ ತಯಾರಿಸುವ ಕುಟುಂಬ

ಹೈವೇ 7 

———

hoovu4.jpg

ಭಾಗ: ಹನ್ನೊಂದು

ವಿ.ಎಂ.ಮಂಜುನಾಥ್

ಮ್ಮ ಮನೆಯ ಹಿಂದಿನ ಎಡಕ್ಕೆ ಬ್ರೆಡ್ ಮತ್ತು ರೊಟ್ಟಿಯನ್ನು ತಯಾರಿಸುವ ಮುಸ್ಲಿಂ ಕುಟುಂಬ ಇತ್ತು. ಮನೆಯ ಯಜಮಾನ ಸುಬಾನ್ ಸಾಬ್ ಗಾರೆಕೆಲಸ ಮಾಡಿಕೊಂಡಿದ್ದ. ಈತ ಗುಳ್ಳೆಮೂಟೆಪ್ಪನ ತೋಟದಲ್ಲಿ ಮಗ್ಗು ಬಿಡಿಸುವಾಗ ಹಾವಿನಿಂದ ಕಡಿಸಿಕೊಂಡು ಅಸುನೀಗಿದ. ಗೋರಿಬಿಜಾನ್ ಈತನ ಹೆಂಡತಿ. ಇವರಿಗೆ ಐದು ಜನ ಗಂಡು ಮತ್ತು ಮೂವರು ಹೆಣ್ಣು ಮಕ್ಕಳಿದ್ದರು. ಇಮ್ತಿಯಾಜ್, ಅಖ್ತರ್ ರಲ್ಲಿ ಹಿರಿಯವಳಾದ ಜೀನತ್ ನನ್ನ ಅಪ್ಪನನ್ನು ಪ್ರೇಮಿಸಿಕೊಂಡಿದ್ದಳು. ಕುಟುಂಬದ ಒತ್ತಾಯದಿಂದ ಮೆಳೆಕೋಟೆಯ ಸಂಬಂಧದಲ್ಲಿ ಮದುವೆಯಾದ ಇವಳು, ಅತ್ತೆ ಮನೆಗೆ ಹೋದ ಕೆಲವೇ ದಿವಸಗಳಲ್ಲಿ ಗಂಡನ ಮನೆ ತೊರೆದು ನನ್ನ ಅಪ್ಪನನ್ನು ಬಂದು ಸೇರಿಕೊಂಡಳು. ಏರ್ ಫೋರ್ಸಿನಲ್ಲಿ ಆಗ ಟಾರು ಹಾಕುವ ಕೆಲಸ ನಡೆಯುತ್ತಿದ್ದದ್ದರಿಂದ ವೆಂಕಟಾಲದ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನ ಟಾರು ಕಂಪೆನಿಗೆ ಕೂಲಿಗೆ ಹೋಗುತ್ತಿದ್ದರು. ಓದಿಕೊಂಡಿದ್ದ ನನ್ನ ಅಪ್ಪ ಟಾರು ಕಂಪೆನಿಗೆ ರೈಟರ್ ಆಗಿದ್ದರು. ನನ್ನ ಅಪ್ಪನನ್ನು ಓಲೈಸಲೆಂದೇ ಜೀನತ್ ಟಾರು ಕಂಪೆನಿಗೆ ಕೂಲಿಗೆ ಹೋಗತೊಡಗಿದಳು. ನನ್ನ ಅಪ್ಪನನ್ನು ಸಂಧಿಸುತ್ತಾಳೆ ಎಂಬ ಗುಮಾನಿಯ ಮೇಲೆ ಗೋರಿಬಿಜಾನ್, ಜೀನತ್ ಳ ಹಿಂದೆ ಕಾವಲು ಕಾಯಲು ಹೋಗುತ್ತಿದ್ದಳು. ಹೊಲಗಳಲ್ಲಿ ಹಸುಗಳಿಗೆ ತಿನ್ನಲು ಬೆಳೆಯುತ್ತಿದ್ದ ಕಾಕಿ ಜೋಳವನ್ನು ಫ್ಲೋರ್ ಮಿಲ್ ಗೆ ಹಾಕಿಸಲು ಗೋರಿಬಿಜಾನ್ ತನ್ನ ಗಂಡ ಸುಬಾನ್ ಸಾಬ್ ನ್ನು ಕಳುಹಿಸುತ್ತಿದ್ದಳು. ಬೀಸಿಕೊಂಡು ತಂದ ಜೋಳವನ್ನು ಹದವಾಗಿ ಕಲಸಿ ರೊಟ್ಟಿ ಸುಟ್ಟು ತನ್ನ ಮಕ್ಕಳಿಗೆ ತಿನ್ನಲು ಕೊಟ್ಟು ಟಾರ್ ಕಂಪೆನಿಗೆ ಕೂಲಿಗೆ ಕಳುಹಿಸಿ ಕೊಡುವುದರ ಜೊತೆಗೆ, ಹಸಿವಿನಿಂದ ನರಳುತ್ತಿದ್ದ ನಮಗೂ ಕೈ ತೆರೆದು ಕೊಡುತ್ತಿದ್ದಳು. ಗಟ್ಟಿಗನಂತೆ ದಷ್ಟಪುಷ್ಟವಾಗಿ ಬೆಳೆದುಕೊಂಡಿದ್ದ ನನ್ನ ದೊಡ್ಡ ಅಣ್ಣನಿಗೆ ರಾಜಣ್ಣ ಎಂದು ಹೆಸರಿಟ್ಟಿದ್ದು ಇವಳೇ.

ನನ್ನ ಅಮ್ಮನನ್ನು ಮದುವೆ ಮಾಡಿಕೊಂಡು ಬರುವ ಮುಂಚಿತವೇ ಪ್ರೀತಿ ಮಾಡಿಕೊಂಡಿದ್ದ ನನ್ನ ಅಪ್ಪ, ನಾವು ಐದು ಜನ ಮಕ್ಕಳು ಹುಟ್ಟಿದ ಮೇಲೂ ಜೀನತ್ ಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದರಾದರೂ ಮೊದಲಿನಷ್ಟು ಪ್ರಖರವಾಗಿ ಆಗಲೀ ತೀವ್ರವಾಗಿರಲಿಲ್ಲ. ನನ್ನ ಅಪ್ಪನಿಗೆ ಹುಟ್ಟಿದ ನಮ್ಮೆಲ್ಲರಿಗೂ ದೊಡ್ಡವಳಾದ ಮನ್ನಾ, ಜೀನತ್ ಳ ಹೊಟ್ಟೆಯಲ್ಲಿ ಜನಿಸಿದವಳು. ಇವಳು ತಿಗಳರ ಮುನಿರಾಜನನ್ನು ಪ್ರೀತಿಸಿ ಮದುವೆ ಮಾಡಿಕೊಂಡಳು. ಆಂಧ್ರಪ್ರದೇಶ, ಅನಂತಪುರ, ಹಿಂದೂಪುರದ ಕಡೆ ಖೋಟಾನೋಟು, ಇಸ್ಪೀಟಿನ ದಂಧೆಯಲ್ಲಿ ತೊಡಗಿದ್ದ ಇವನ ಕೈಕಾಲುಗಳ ನರಗಳನ್ನು ಪೊಲೀಸರು ತುಂಡರಿಸಿದ್ದರು. ಇವನು ಅಷ್ಟಾಗಿ ಊರಿನಲ್ಲಿ ಯಾರ ಜೊತೆಯೂ ಬೆರೆಯುತ್ತಿರಲಿಲ್ಲ.

ಜೀನತ್ ಳ ಮನೆ ಪಕ್ಕದಲ್ಲೇ ಇದ್ದದ್ದರಿಂದ ಅಪ್ಪ ಅವಳ ಜೊತೆ ಮಾತನಾಡಲು ಗೋಡೆ ಕೊರೆದು ತೂತು ಮಾಡಿಕೊಂಡಿದ್ದರು. ಅಲ್ಲಿಂದ ಜೀನತ್ ತನ್ನ ಮನೆಯಿಂದ ಮಾಂಸ, ರೊಟ್ಟಿಯನ್ನು ಕೊಡುತ್ತಿದ್ದಳು. ಅಪ್ಪ ಕೆಲಸ ಮಾಡುತ್ತಿದ್ದ ಪೊಲೀಸ್ ಕ್ಯಾಂಪ್ ಹತ್ತಿರ ಹೋಗಿ ಸಂಧಿಸುತ್ತಿದ್ದಳು. ಅಪ್ಪ ಸಂಜೆ ಮನೆಗೆ ಬರುತ್ತಿದ್ದಂತೆ ಅಮ್ಮ ಜಗಳ ತೆಗೆಯುತ್ತಿದ್ದಳು. ಜೀನತ್ ಎಲ್ಲಾದರೂ ಕಾಣಿಸಿಕೊಂಡರೆ, “ನಿಮ್ಮ ದೊಡ್ಡಮ್ಮನ್ನ ನೋಡು ಮಗನೆ” ಎಂದು ನನಗೆ ತೋರಿಸುತ್ತಿದ್ದರು.

ಜೀನತ್ ಳ ಐವರು ಸೋದರರು ನಮ್ಮ ಮನೆಯ ಹಿಂದೆ ಬ್ರೆಡ್ ಮತ್ತು ರೊಟ್ಟಿ ತಯಾರಿಸುವ ಕಸುಬನ್ನು ಪ್ರಾರಂಭಿಸಿದರು. ಬ್ರೆಡ್ ಸುಡಲು ದೊಡ್ಡ ಗಡಂಗನ್ನು ಕಟ್ಟಿಸಿದ್ದರು. ಅಬ್ದುಲ್ ರೆಹಮಾನ್ ಹಿರಿಯವನು. ಜಬ್ಬಾರ್, ಅನ್ವರ್, ಸತ್ತಾರ್, ಪ್ಯಾರ ಈ ಮೂವರು ಅಣ್ಣ ರೆಹಮಾನ್ ಗೆ ಸಹಕರಿಸುತ್ತಿದ್ದರು. ಹೆಣ್ಣುಮಕ್ಕಳು ತಿಗಳರ ತೋಟಗಳಿಗೆ ಮಗ್ಗು ಬಿಡಿಸಲು ಕೂಲಿಗೆ ಹೋಗುವುದರ ಜೊತೆಗೆ ಬ್ರೆಡ್ ತಯಾರಿಕೆಯಲ್ಲಿ ಕೂಡಿಕೊಳ್ಳುತ್ತಿದ್ದರು. ಕುಳ್ಳಗೆ, ಸಣ್ಣಗಿದ್ದ ರೆಹಮಾನ್ ಬೆನ್ನು ಬಗ್ಗಿಸಿಕೊಂಡು ತನ್ನ ಪಾಡಿಗೆ ತಾನು ನಡೆದುಹೋಗುತ್ತಿದ್ದ. ಸಂಜೆಯಾಗುತ್ತಿದ್ದಂತೆ ಬ್ರೆಡ್ ಬೇಯಿಸುವ ಸಿಹಿ ವಾಸನೆ ನಮ್ಮ ಮೂಗಿಗೆ ಬಡಿಯುತ್ತಿತ್ತು. ಕಳ್ಳಿಗಿಡದ ಸಾಲಿನಲ್ಲಿ, ಮನೆ ಹಿಂದೆ ಕಾಡಿನಂತೆ ಬೆಳೆದುಕೊಂಡಿದ್ದ ಹರಳೆಕಾಯಿ ಗಿಡಗಳಲ್ಲಿ ಆಟವಾಡುತ್ತಾ ಮೆಲ್ಲಗೆ ಬ್ರೆಡ್ ಗಡಂಗಿನತ್ತ ನಡೆದುಹೋಗುತ್ತಿದ್ದೆವು. ಸತ್ತಾರ್ ಸರುವೆತುಂಡುಗಳನ್ನು ಸಿಗಿದು ಒಲೆಗೆ ತುರುಕಿ, ಬೆಂಕಿ ಉರಿಸುವ ಕೆಲಸದಲ್ಲಿ ತಲ್ಲೀನನಾಗಿರುತ್ತಿದ್ದ. ನಾಲ್ಕು ಜನ ಸೋದರರಲ್ಲಿ ವಿಶೇಷವಾಗಿ ಕಾಣುತ್ತಿದ್ದ ಜಬ್ಬಾರ್, ಆ ಗಡಂಗಿನಿಂದ ಸುಟ್ಟ ಬ್ರೆಡ್ ಮತ್ತು ವರ್ಕಿಯನ್ನು ಹೊರತೆಗೆದು ಗುಡ್ಡೆ ಹಾಕುವಾಗ ಬಾಯಲ್ಲಿ ನೀರೂರುತ್ತಿತ್ತು. ಸಾಯುವ ಕೊನೆ ಗಳಿಗೆಯವರೆಗೂ ಬಿಳಿಉಡುಪನ್ನೇ ತೊಡುತ್ತಿದ್ದ ಜಬ್ಬಾರ್, ಬ್ರೆಡ್ ಸುಡುವಾಗ ಮಾಳಿಗೆ ಎತ್ತರದ ಬೆಂಕಿಯ ಜ್ವಾಲೆಗಳ ಮುಂದೆ ಅಂಗಿ ಬಿಚ್ಚಿ ಬರೀ ಮೈಯ್ಯಲ್ಲಿ ಅತೀ ಚುರುಕಾಗಿ ಕೆಲಸ ಮಾಡುತ್ತಿದ್ದ. ಗುಂಗುರು ಕೂದಲಿನಿಂದ ಇಳಿಯುತ್ತಿದ್ದ ಬೆವರನ್ನು ಒರೆಸಿಕೊಂಡು ನಮ್ಮ ಕಡೆ ನೋಡಿದರೆ, ಅವನಿಗಿಂತ ನಮಗೇ ಬೆವರಿಳಿದು ಹೋಗುತ್ತಿತ್ತು. ಬ್ರೆಡ್ ತಯಾರಿಸುವ ಇಡೀ ಕೋಣೆ ಸಂಪೂರ್ಣವಾಗಿ ಮಸಿಯಿಂದ ತುಂಬಿಹೋಗುತ್ತಿತ್ತು. ಒಳಗೆ ಹೆಜ್ಜೆಯಿಟ್ಟರೆ ಕಲಸಿದ ಹಿಟ್ಟಿನ ವಾಸನೆ, ಕೈ, ಮುಖ ಸವರಿಕೊಂಡ ಹಾಳುನೀರಿನ ಕೆಟ್ಟಗಮಲು ತುಂಬಿಕೊಳ್ಳುತ್ತಿತ್ತು. ಸರುವೆ ತುಂಡುಗಳು ಚಾವಣಿವರೆಗೂ ಜೋಡಿಸಿಟ್ಟಿರುತ್ತಿದ್ದರು. ಬೇರೆ ಬೇರೆ ಗ್ರಾಮಗಳಿಂದ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಂಡಿದ್ದವರು ಸೈಕಲ್ಲುಗಳಲ್ಲಿ ಬಂದು ಬ್ರೆಡ್ ಕೊಂಡುಕೊಳ್ಳುತ್ತಿದ್ದರು. ಗಿರಾಕಿಗಳೆಲ್ಲ ಹೋದ ನಂತರ ಜಬ್ಬಾರ್, ಬ್ರೆಡ್ ತುಂಡುಗಳೇನಾದರೂ ಉಳಿದಿದ್ದರೆ ನೀಡುತ್ತಿದ್ದ. ಕಾಸಿದ್ದಾಗ ಅಮ್ಮ ನಮ್ಮನ್ನು ಕಳುಹಿಸಿ ಅಂಗಿ ತುಂಬಾ ತರಿಸುತ್ತಿದ್ದಳು. ನಾವು ಮನೆ ಪಕ್ಕದವರಾದ್ದರಿಂದ ಐದು ಪೈಸೆಗೆ ಹತ್ತು ವರ್ಕಿಗಳನ್ನು ಕೊಡುತ್ತಿದ್ದರು. ಹತ್ತು ಪೈಸೆಗೆ ಎದೆ ತಬ್ಬಿಕೊಂಡು ಬೀಳುವಷ್ಟು ಹೆಚ್ಚಿಗೆ ನೀಡುತ್ತಿದ್ದರು. ಬ್ರೆಡ್ ಒಂದು ರೂಪಾಯಿ ಆದ್ದರಿಂದ ಅದನ್ನು ಕೊಳ್ಳುವುದೇ ಅಪರೂಪ. ಒಮ್ಮೆ ಕೊಂಡಿದ್ದನ್ನು ಒಂದು ಹೊತ್ತಿಗೇ ತಿಂದು ಮುಗಿಸದೆ, ವಾರಗಟ್ಟಲೆ ಇಟ್ಟುಕೊಂಡು ರುಚಿ ನೀಗಿಸಿಕೊಳ್ಳುತ್ತಿದ್ದೆವು. ನಾವು ಐದು ಜನರೂ ಕೂಡಿಕೊಂಡು ಟೀಯಲ್ಲಿ ಅದ್ದಿಕೊಂಡು ತಿನ್ನುವುದನ್ನು ರೂಢಿ ಮಾಡಿಕೊಂಡಿದ್ದೆವು.

ಜೀನತ್ ಳ ತಂಗಿ ಅಖ್ತರ್ ಮದುವೆಯಾಗಿದ್ದು ಕ್ಯಾಲನೂರಿನ ಸಂಬಂಧದಲ್ಲಿ. ಅವಳ ಗಂಡ ಉದ್ದಗಿದ್ದ. ಹಲ್ಲುಗಳಿಲ್ಲದ ಅವನು ಮುಖವೇ ಕಾಣದ ಕಪ್ಪುಕನ್ನಡಕ ಹಾಕಿಕೊಳ್ಳುತ್ತಿದ್ದ. ಇವರಿಗೆ ಸುಂದರವಾದ ಮಗಳಿದ್ದಳು. ಅವಳ ಹೆಸರು ತಬಸ್ಸುಮ್. ಸೇಬಿನಬಣ್ಣದ ಅವಳು ನಮ್ಮೊಡನೆ ಆಡಲು ಬರುತ್ತಿದ್ದಳು. ನಮ್ಮ ಮನೆಯ ಹಿಂದಿನ ಜೋಳದ ಹೊಲದಲ್ಲಿ ಬೆಳಗ್ಗೆಯಿಂದ ರಾತ್ರಿಯಾಗುವವರೆಗೂ ಆಟವಾಡಿಕೊಂಡಿರುತ್ತಿದ್ದೆವು. ಹರಳೆಗಿಡದಲ್ಲಿ ಬಿಡುತ್ತಿದ್ದ ಗುತ್ತಿಗುತ್ತಿ ಕಾಯಿಗಳನ್ನು ಕಿತ್ತು, ಒಬ್ಬರಿಗೊಬ್ಬರು ಹೊಡೆದುಕೊಳ್ಳುವ ಆಟವಾಡುತ್ತಿದ್ದೆವು. ಅವಳು ಮರ ಹತ್ತುವಾಗ ಸೊಂಟವನ್ನು ನೋಡಿ, ವಿಚಿತ್ರವಾದದ್ದೇನೊ ಕಂಡವನಂತೆ ತಟಸ್ಥನಾಗಿಬಿಡುತ್ತಿದ್ದೆ. ಶೇಖ್ ಹುಸೇನನ ಹೆಂಡತಿ ಸೈನಿಕರಿಗೆ ಬಟ್ಟೆಯನ್ನು ಕತ್ತರಿಸುವಾಗ ಬಳಸುತ್ತಿದ್ದ ಟೇಪಿನಿಂದ ತಬಸ್ಸುಮ್ ಳ ಮೈಕೈಯನ್ನೆಲ್ಲ ಒಮ್ಮೆ ಹೊಲದಲ್ಲಿ ಮಲಗಿಸಿಕೊಂಡು ಅಳೆದು ನೋಡಿದ್ದೆ. ನನಗೆ ಆಗ ನಿಜಕ್ಕೂ ಶೇಖ್ ಹುಸೇನನ ಹೆಂಡತಿಯಂತೆ ಬಟ್ಟೆ ಅಳೆಯುವ ದರ್ದು ಇತ್ತೇ ಹೊರತು, ಅವಳ ಮೈ ನೋಡುವುದಕ್ಕಲ್ಲ.

ಜೀನತ್ ಳ ಅಮ್ಮ ಗೋರಿಬಿಜಾನ್ ಗೆ ಅಪ್ಪನ ಮೇಲೆ ವೈರತ್ವ ಅವನು ಜೀನತ್ ಳನ್ನು ಪ್ರೇಮಿಸಲು ತೊಡಗಿಕೊಂಡಾಗಲೇ ಶುರುವಾಗಿತ್ತು. ಬಿಳಿದೆವ್ವದಂತೆ ಕಾಣುತ್ತಿದ್ದ ಇವಳು ತನ್ನ ಅಂತಿಮ ದಿನಗಳಲ್ಲಿ ನಮ್ಮ ಮನೆಯ ಕಡೆ ನೋಡಿಕೊಂಡು ಶಾಪ ಹಾಕುತ್ತಿದ್ದಳು. ನಾನು ನೋಡಿದಂತೆ ಅಪ್ಪ, ತಾಯಿಮಗಳಿಬ್ಬರನ್ನೂ ಅನೇಕ ಸಲ ಬಡಿದು ಹಾಕಿದ್ದರು. ನಾವೇನಾದರೂ ಅವಳ ಮನೆಯ ಸಂದಿಗೆ ಹೋದರೆ, ಬಿಳಿಗೂದಲನ್ನು ಕೆದರಿಕೊಂಡು ಆ ಕತ್ತಲೆಯಲ್ಲೇ ನಿಂತಿರುತ್ತಿದ್ದಳು. ಪಿಶಾಚಿಯಂತೆ ಕಿರುಚಿ ನಮ್ಮನ್ನೆಲ್ಲ ಹೆದರಿಸುತ್ತಿದ್ದಳು. ಮೈಮೇಲಿನ ಬಟ್ಟೆಯನ್ನೆಲ್ಲಾ ಹರಿದುಕೊಂಡು ಬೆತ್ತಲಾಗಿ ನೆಲದಲ್ಲಿ ಹೊರಳಾಡುತ್ತಿದ್ದಳು. ಈ ರೀತಿಯ ಪೈಶಾಚಿಕ ಸ್ವಭಾವಕ್ಕೆ ಅಪ್ಪನಿಂದ ಜೀನತ್ ತನ್ನ ಬಾಳನ್ನು ಪರಿಪೂರ್ಣವಾಗಿಸಿಕೊಳ್ಳದಿದ್ದದ್ದು ಮತ್ತು ಕ್ರಮೇಣ ಗಂಡುಮಕ್ಕಳು ಮದುವೆ ಮಾಡಿಕೊಂಡು ತಾಯಿಯನ್ನು ನಿರ್ಲಕ್ಷಿಸಿದ್ದೂ ಕಾರಣವಾಗಿರಬಹುದು. ಹಾಗೇ ಗಂಡುಮಕ್ಕಳು ತಮ್ಮ ಹೆಂಡತಿಯರ ಮಾತು ಕೇಳಿ ಬ್ರೆಡ್ ತಯಾರಿಕೆಯನ್ನು ಬಿಟ್ಟು ಕೂಲಿಗೆ ಹೋದರು. ರೆಹಮಾನ್ ಮದುವೆಯಾಗದೇ ತೀರಿಕೊಂಡರೆ, ಜಬ್ಬಾರ್ ಹೊಸಕೋಟೆಯ ಹೆಣ್ಣನ್ನು ಮದುವೆ ಮಾಡಿಕೊಂಡ. ಸುಮಾರು ದಿನ ರಸ್ತೆಯಲ್ಲಿ ತಳ್ಳುವ ಗಾಡಿಯಲ್ಲಿ ತರಕಾರಿ ಮಾರಿಕೊಂಡು ಗೂರಲು ಕಾಯಿಲೆಯಿಂದ ಅಸುನೀಗಿದ. ಸತ್ತಾರ್, ಹಿಂದೂಪುರದ ದೌಲತ್ತಿನ ಹೆಣ್ಣನ್ನು ಮದುವೆ ಮಾಡಿಕೊಂಡು ಕೆಲಕಾಲ ಅವಳ ದೇಹದ ದರ್ಪವನ್ನು ಇಳಿಸಿದನೇ ಹೊರತು, ಅವಳ ಮುಂದಿನ ದಿನಗಳಲ್ಲಿ ಉದ್ದೇಶಪೂರ್ವಕವಾಗಿ ಉದ್ಭವಿಸಬಹುದಾದ ಕೇಡಿನ ಯೌವನವನ್ನು ಅರಿಯದೇ ಹೋದ. ನಾನು ನನ್ನ ಮನೆಯ ಮೇಲೆ ಕುಳಿತಾಗ, ಅವಳು ತನ್ನ ಮನೆಯಿಂದ ಹಾಡೇಳುತ್ತಾ, ಕುಣಿಯುತ್ತಿದ್ದದ್ದನ್ನು ನೋಡುತ್ತಿದ್ದೆ. ನಮ್ಮ ಮನೆ ಅವರ ಹಂಚಿನ ಮನೆಗಿಂತ ಎತ್ತರವಾಗಿದ್ದರಿಂದ ಎಲ್ಲವನ್ನೂ ನೋಡಬಹುದಾಗಿತ್ತು. ಸತ್ತಾರ್ ಕುಳಿತರೆ ಏಳಲಾರದೆ, ನಿಂತ ನಿಲುವಿನಲ್ಲಿ ಮತ್ತೊಬ್ಬನಲ್ಲಿ ರಂಜಿಸಬಹುದಾದ ಅವಳನ್ನು ನೋಡಲಾಗದಷ್ಟು ರೋಗಕ್ಕೆ ತುತ್ತಾದ.

ಇದ್ದ ದೊಡ್ಡಮನೆಯನ್ನು ಮಸೀದಿಗೆ ಬರೆದು ಕೊಟ್ಟು, ಬ್ರೆಡ್ ಕುಟುಂಬ ಸಂಪೂರ್ಣವಾಗಿ ದಿವಾಳಿಯೆದ್ದು ಹೋಯಿತು. ಜಬ್ಬಾರ್ ನೆನಪಾದಾಗಲೆಲ್ಲ ಅವನ ಬ್ರೆಡ್, ರೊಟ್ಟಿ ತಯಾರಿಕೆಯ ಗಡಂಗು; ಮಳೆಗಾಲದಲ್ಲಿ ಕಳ್ಳಿಎಲೆಗಳಿಂದ ಕಾಣುತ್ತಿದ್ದ ತಬಸ್ಸುಮ್ ಳ ಭಾವಚಿತ್ರ ಮಾತ್ರ ಇಂದಿಗೂ ಕಣ್ಮುಂದೆ ಬರದೇ ಸತಾಯಿಸುತ್ತದೆ. ಬಂದರೂ ನಿಂತು ನೋಡಲು ಕಳ್ಳಿಗಿಡಗಳೇ ಉಳಿದಿಲ್ಲ. ಅದರ ಹೊರತು ತಬಸ್ಸುಮ್ ನನ್ನ ದಾರಿದ್ರ್ಯ ಎಂದಷ್ಟೇ ವ್ಯಾಖ್ಯಾನಿಸಬಹುದು. ಏಕೆಂದರೆ ನನ್ನಲ್ಲಿ ಪ್ರೇಮದ ಸ್ಥಿತಿ ಒಡಮೂಡುವ ಹೊತ್ತಿಗೆ, ಅವಳು ಬೇರೊಬ್ಬನ ರಾತ್ರೆಗಳನ್ನು ಎಣಿಸಿ ಹಾಕತೊಡಗಿದ್ದಳು.

‍ಲೇಖಕರು avadhi

March 12, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This