ಬ್ಲಾಗಿಗರ ಬ್ಲಾಗವನ…

-ಶಿವು.ಕೆ “ಈ ಬಾಟಲಿಸ್ಟ್ ಯಾರು?” “ನಿಮ್ಮಲ್ಲಿ ಯಾರಾದರೂ ಬಾಟನಿಸ್ಟ್ ಇದ್ದಾರ?” ಈಶ್ವರ ಪ್ರಸಾದ್ ಕೇಳಿದರು. “ಇಲ್ಲಸಾರ್ ಬೇಕಾದರೆ ಬಾಟಲಿಸ್ಟ್ ಸಿಗುತ್ತಾರೆ.” ತಕ್ಷಣ ಪ್ರಕಾಶ್ ಹೆಗಡೆ ಉತ್ತರಿಸಿದರು. “ಅದೇ ಸರ್, ಬಾಟಲಿಸ್ಟು,” ಕೈಬಾಯಿ ಸನ್ನೆ ಮಾಡಿ ತೋರಿಸಿದರು. ಈಶ್ವರ ಪ್ರಸಾದ್ ಸೇರಿದಂತೆ ನಮ್ಮ ಬ್ಲಾಗಿಗರೆಲ್ಲಾ ಎಷ್ಟು ಜೋರಾಗಿ ನಕ್ಕೆವೆಂದರೆ ಹೊಟ್ಟೆ ಹಿಡಿದುಕೊಂಡು ಕೂರುವಷ್ಟು. “ಶಿವು ನಿಮ್ಮ ವಯಸ್ಸೆಷ್ಟು?” ಈಶ್ವರ ಪ್ರಸಾದ್ ನಮ್ಮ ಜೊತೆ ಊಟ ಮಾಡುತ್ತಾ ನನ್ನನ್ನು ಕೇಳಿದರು. ನಾನು ನನ್ನ ವಯಸ್ಸು ಹೇಳಿದೆ. ಮತ್ತೆ ಹಾಗೆ ಸುತ್ತ ಕುಳಿತಿದ್ದ ಪರಂಜಪೆ, ಉಮೇಶ್ ದೇಸಾಯಿ, ನಂಜುಂಡ,….ಹೀಗೆ ಒಬ್ಬೊಬ್ಬರಾಗಿ ಹೇಳುತ್ತಿದ್ದರು. ಪ್ರಕಾಶ್ ಹೆಗಡೆ ಸರದಿ ಬಂತು. “ಪ್ರಕಾಶ್ ನಿಮ್ಮ ವಯಸ್ಸು ಎಷ್ಟು?” ಮತ್ತೆ ಕೇಳಿದರು ಈಶ್ವರ ಪ್ರಸಾದ್, “ನೀವೇ ಹೇಳಿ ಸರ್,” “ನಾನು ಮರಗಳ ವಯಸ್ಸನ್ನು ಹೇಳಬಲ್ಲೆ. ಆದ್ರೆ ನಿಮ್ಮ ವಯಸ್ಸನ್ನು ಹೇಗೆ ಹೇಳುವುದು?” “ಹಾಗಾದ್ರೆ ಸರ್, ಮರಗಳ ವಯಸ್ಸನ್ನು ಹೇಗೆ ಗುರುತಿಸುವಿರಿ?” “ಮರಗಳಿಗೆ ಬಂದಿರುವ ಹೊರಪದರಗಳ ಲೇಯರುಗಳಿಂದ.” “ಹಾಗಾದರೆ ನನ್ನ ಲೇಯರಿನ ಟಯರನ್ನು[ಸೊಂಟದ ಸುತ್ತಳತೆ] ನೋಡಿ ನೀವು ಸುಲಭವಾಗಿ ನನ್ನ ವಯಸ್ಸು ಹೇಳಬಹುದು!” ಊಟ ಮಾಡುತ್ತಿದ್ದವರೆಲ್ಲಾ ಈ ಮಾತು ಕೇಳಿ ನಗು ತಡೆಯಲಾಗಲಿಲ್ಲ. ಇವೆರಡು ದಿನಾಂಕ ೨೯-೮-೨೦೧೦ರ ಭಾನುವಾರ ನಾವು ಬ್ಲಾಗಿಗರೆಲ್ಲಾ ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಇರುವ ಸಸ್ಯವನಕ್ಕೆ ಗಿಡನೆಡಲು ಹೋಗಿದ್ದಾಗ ಉಕ್ಕಿದ ನೂರಾರು ನಗೆಬುಗ್ಗೆಗಳಲ್ಲಿ ಇವೆರಡು ಸ್ಯಾಂಪಲ್.

ಅವತ್ತು ಬೆಳಿಗ್ಗೆ ೨೮ ಬ್ಲಾಗಿಗರು ಬಸ್ಸಿನಲ್ಲಿ ಹೊರಟಾಗ ಬೆಳಿಗ್ಗೆ ಒಂಬತ್ತುಗಂಟೆ. ದಾರಿಯುದ್ದಕ್ಕೂ ಅಂತ್ಯಾಕ್ಷರಿ, ನಗು ಜೋಕು ಅನ್ನುವಷ್ಟರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ಬಂದುಬಿಟ್ಟಿತ್ತು. ಎಲ್ಲರು ಇಳಿದು ಈಶ್ವರ ಪ್ರಸಾದ್ ಹಿಂದೆ ನಡೆದೆವು. ಸ್ವಲ್ಪ ದೂರನಡೆಯುವಷ್ಟರಲ್ಲಿ ಒಂದು ಪುಟ್ಟ ಚಪ್ಪರವನ್ನು ಹಾಕಿದ ಜಾಗದ ಮುಂದೆ ನಿಂತರು. ನಮ್ಮ ಅದೃಷ್ಟಕ್ಕೆ ಮೋಡದ ವಾತಾವರಣವಿದ್ದು ಒಂಥರ ತಣ್ಣನೇ ಗಾಳಿ ಬೀಸುತ್ತಿದ್ದರಿಂದ ಎಲ್ಲರಿಗೂ ಒಂಥರ ಹಿತವೆನಿಸುತ್ತಿತ್ತು. ಮೊದಲು ಎಲ್ಲರ ಪರಿಚಯವಾಯ್ತು. ಈಶ್ವರ ಪ್ರಸಾದ್ ಕೂಡ ತಮ್ಮ ಪರಿಚಯವನ್ನು ಮಾಡಿಕೊಂಡರು. ನಂತರ ಸ್ಥಳ ಮಹಾತ್ಮೆಯ ಬಗ್ಗೆ ತಿಳಿಸಲು ನವೀನ್[ಹಳ್ಳಿಹುಡುಗ]ಗೆ ಓದಲು ತೇಜಸ್ವಿಯವರು ಅನುವಾದ ಮಾಡಿದ ಕೆನೆತ್ ಆಂಡರ್ಸನ್‍ರವರ ಕಾಡಿನ ಕಥೆಗಳು ಮೂರನೇ ಭಾಗವಾದ “ಮುನಿಸ್ವಾಮಿ ಮತ್ತು ಚಿರತೆ” ಪುಸ್ತಕವನ್ನು ಕೊಟ್ಟರು. ಅದರಲ್ಲಿ ನಾವು ನಿಂತ ಜಾಗ[ತಿಪ್ಪಗೊಂಡನಹಳ್ಳಿ ವಿಶೇಷತೆ], ಪರಿಚಯ, ವಾತವರಣದಲ್ಲಿನ ನೀರಿನ ಮಟ್ಟ, ಇತ್ಯಾದಿ ವಿಚಾರವನ್ನು ಅವರು ಎಲ್ಲರಿಗೂ ಅರ್ಥವಾಗುವಂತೆ ಹೇಳಿದ ರೀತಿ ತುಂಬಾ ಚೆನ್ನಾಗಿತ್ತು. ನಡುವೆ ನಾವು ಬೆಂಗಳೂರಿನಲ್ಲಿ ಬಳಸುವ ನೀರು ಮತ್ತು ವಿಧ್ಯುತ್ತನ್ನು ಹೇಗೆ ನಮಗೆ ಗೊತ್ತಿಲ್ಲದಂತೆ ಪೋಲು ಮಾಡುತ್ತಿದ್ದೇವೆ ಸ್ವಲ್ಪ ಅಲೋಚನೆ ಮತ್ತು ಬುದ್ದಿವಂತಿಕೆಯನ್ನು ಉಪಯೋಗಿಸಿದರೇ ಎಷ್ಟು ವಿಧ್ಯುತ್ ಮತ್ತು ನೀರು ಉಳಿಸಬಹುದು ಎನ್ನುವುದನ್ನು ತಿಳಿಸಿಕೊಟ್ಟರು.

ನಾವು ಮನೆಯಲ್ಲಿ ತರಕಾರಿ ತೊಳೆದ ನೀರು, ಪಾತ್ರೆ ತೊಳೆದ ನೀರು, ಊಟವಾದ ಮೇಲೆ ಎಂಜಲನೀರು, ಇದನ್ನೆಲ್ಲಾ ಒಟ್ಟು ಮಾಡಿ ಇಟ್ಟರೆ ಮುಸುರೆ ನೀರು ಅನ್ನುತ್ತಾರೆ. ಅದೇ ನೀರನ್ನು ನಾವು ಒಂದು ಬಕೆಟಿನಲ್ಲಿ ಸಂಗ್ರಹಿಸಿ ನಮ್ಮ ಮನೆಗಳ ವರಾಂಡದಲ್ಲಿ, ಬಾಲ್ಕನಿಗಳಲ್ಲಿ ಎಲ್ಲವಿಧವಾದ ತರಕಾರಿ ಗಿಡಗಳನ್ನು ಬೆಳೆಸುತ್ತಾ ಇದೇ ನೀರನ್ನು ಅದಕ್ಕೆ ಉಣಿಸಿದರೆ, ಇಂಥ ನೀರನ್ನು ಎಷ್ಟು ಸಮಂಜಸವಾಗಿ ಬಳಸಬಹುದು ಮತ್ತು ಅದಕ್ಕೆ ತಕ್ಕಂತೆ ನಾವು ಹಾಕಿದ ತರಕಾರಿಗಳು ಎಷ್ಟು ಚೆನ್ನಾಗಿ ಯಾವುದೇ ರಸಾಯನಿಕ ಗೊಬ್ಬರಗಳಿಲ್ಲದೆಯೂ ಎಂಥ ಸಮೃದ್ದ ಫಲ ಕೊಡುತ್ತವೆ ಎನ್ನುವುದನ್ನು ತಮ್ಮ ಮನೆಯಲ್ಲಿ ಬೆಳೆದ ತರಕಾರಿಗಳನ್ನು ಉದಾಹರಿಸುತ್ತಾ ಹೇಳಿದಾಗ ನಾವು ಇದನ್ನು ಮಾಡಲು ಸಾಧ್ಯವಿದೆಯಲ್ಲಾ ಎನಿಸಿತ್ತು. ಅವರ ಮಾತಿನ ನಡುವೆಯೇ ಅಲ್ಲಿಯೇ ನಮ್ಮಂತೆ ಬೆಳಸಿದ ಮರಗಳಲ್ಲಿ ಬಿಟ್ಟ ಸೀತಾಫಲ ಹಣ್ಣುಗಳನ್ನು ನಮಗೆ ತಿನ್ನಲು ಕೊಟ್ಟರು. ಯಾವುದೇ ರಸಾಯನಿಕಗಳಿಲ್ಲದೇ ಬೆಳೆದ ಸೀತಾಫಲಹಣ್ಣುಗಳನ್ನಂತೂ ನಮ್ಮ ಬ್ಲಾಗಿಗರೂ ಮಕ್ಕಳಂತೆ ಸಂಭ್ರಮದಿಂದ ತಿನ್ನುತ್ತಾ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದರು.

ಈಶ್ವರ್ ಪ್ರಸಾದ್ ಪರಿಚಯವನ್ನು ನಾನು ಮಾಡಿಕೊಡಲೇ ಬೇಕು. ಚಿಕ್ಕಮಗಳೂರಿನಲ್ಲಿ ಕೆಲವರ್ಷ ನೆಲಸಿ, ಸಣ್ಣಮಟ್ಟದ ಫ್ಯಾಕ್ಟರಿ ತೆರೆದು, ಅದರಲ್ಲಿ ವಿಫಲರಾಗಿ ನಂತರ ತೇಜಸ್ವಿಯವರ ಜೊತೆ ಹದಿನೆಂಟು ವರ್ಷಗಳ ಒಡನಾಟದಿಂದ ತಾವು ಕಲಿತ ಪರಿಸರ ಪಾಠ, ಅವರಿಂದ ಪ್ರತಿಯೊಂದು ವಿಚಾರಕ್ಕೂ ಬೈಸಿಕೊಳ್ಳುತ್ತಾ ಮುಂದುವರಿದಿದ್ದು, ಅವರ ನಂತರ ನಾಗೇಶ್ ಹೆಗಡೆಯವರ ಒಡನಾಟ. ಪ್ರೀತಿಯಿಂದ ನಾಗೇಶಣ್ಣ ಎನ್ನುವ ಇವರು ನಾಗೇಶ್ ಹೆಗಡೆ ಬರೆದ ಲೇಖನದ ವಿಚಾರಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮುನ್ನುಗ್ಗುತ್ತಿದ್ದಾರೆ. ಕೆಲವು ವಿಚಾರಗಳಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅವರ ಮಾತುಗಳಲ್ಲಿನ ಆತ್ಮವಿಶ್ವಾಸವಂತೂ ನಮಗೆಲ್ಲಾ ಸ್ಪೂರ್ತಿಯೆನಿಸಿತ್ತು. ಅವರು ಪರಿಸರದ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ. ಮಳೆಯ ನೀರು ಬಿದ್ದರೆ ಎಲ್ಲಿ ಹರಿದುಹೋಗುತ್ತದೆ, ಅದನ್ನು ಹೇಗೆ ತಡೆದು ನಿಲ್ಲಿಸಬಹುದು, ಹೇಗೆ ನೀರನ್ನು ಭೂಮಿಯೊಳಗೆ ಹಿಂಗಿಸಬಹುದು, ಭೂಮಿಯೊಳಗೆ ನೀರು ಈಗ ಇರುವುದೆಷ್ಟು, ಮೊದಲು ಎಷ್ಟಿತ್ತು, ಇತ್ಯಾದಿ ವಿಚಾರಗಳನ್ನು ತಾವೇ ಖುದ್ದಾಗಿ ಅಲ್ಲೆಲ್ಲಾ ಮಾಡಿರುವುದನ್ನು ತೋರಿಸಿದರು. ಇದಲ್ಲದೇ ನಮ್ಮ ಕಾಗದ ಬಳಕೆ, ನಾವು ಬಳಸುವ ಸೋಪು ಸಾಂಫು, ಇತ್ಯಾದಿಗಳಿಗೆ ಮರುಳಾಗುವ ಬದಲು ನಮ್ಮದೇ ಅಜ್ಜಿಕಾಲದ ಕೆಲವು ಉತ್ಪನ್ನಗಳಿಂದ ಹೇಗೆ ನಾವು ಹಣ ಮತ್ತು ಪರಿಸರವನ್ನು ಉಳಿಸಬಹುದು ಎನ್ನುವುದನ್ನು ತಿಳಿಸಿಕೊಟ್ಟರು. ನಮ್ಮಗೊಂದು ಪುಟ್ಟ ಚಾಅಣದಂತೆ ನಡೆಸುತ್ತಾ ಅವರು ತಮ್ಮ ಪರಿಚಯದ ಕತೆಯನ್ನು ಹೇಳುತ್ತಿದ್ದರೇ ನಮಗೆಲ್ಲಾ ಆ ಸಮಯದಲ್ಲಿ ರೋಚಕವೆನಿಸಿತ್ತು.

ಮುಂದೆ ಗಿಡನೆಡುವ ಕಾರ್ಯಕ್ರಮ. ಅದಂತೂ ಒಂಥರ ಹೃದಯಸ್ಪರ್ಶಿಯಾಗಿತ್ತು. ಮೊದಲಿಗೆ ನಾನು ನನ್ನ ಶ್ರೀಮತಿಯ ಜೊತೆಗೂಡಿ “ಛಾಯಾಕನ್ನಡಿ” ಹೆಸರಿನಲ್ಲಿ ಹಿಪ್ಪೆಮರವನ್ನು ನೆಟ್ಟೆವು. ಆ ಸಮಯದಲ್ಲಿ ಈಶ್ವರಪ್ರಸಾದ್ “ಹಿಪ್ಪೆಮರ ಸಾವಿರಕ್ಕೂ ಹೆಚ್ಚು ವರ್ಷ ಬದುಕುವಂತದ್ದು ನಿಮ್ಮ ಬ್ಲಾಗ್ ಹೆಸರು ಕೂಡ ಹಾಗೆ ಸಾವಿರ ವರ್ಷಗಳು ನೆನಪಿರಲಿ ಎಂದಾಗ ನಾನು ಭಾವುಕನಾಗಿದ್ದೆ. ನಂತರ ಆಜಾದ್, ಸ್ವತಂತ್ರದ ಹೆಸರಿನಲ್ಲಿ ಗಿಡ ನೆಟ್ಟರು. ನಂತರ ಪ್ರಕಾಶ್ ಹೆಗೆಡೆ ದಂಪತಿಗಳು, ಸುಗುಣ ಮಹೇಶ್ ದಂಪತಿಗಳು, ದಿಲೀಪ್ ಹೆಗಡೆ ದಂಪತಿಗಳು, ಉಮೇಶ್ ದೇಸಾಯಿ ಕುಟುಂಬ, ನಂಜುಂಡ ಮತ್ತು ಚೇತನಭಟ್ ಕುಟುಂಬ ಗಿಡನೆಟ್ಟರು. ಆಮೇಲೆ ನಮ್ಮ ಬ್ಯಾಚುಲರ್ ಹೈಕಳಾದ, ಶಿವಪ್ರಕಾಶ್, ಗುರುಪ್ರಸಾದ್, ನವೀನ್[ಹಳ್ಳಿಹುಡುಗ], ಫ್ರಶಾಂತ್, ರಾಘವೇಂದ್ರ, ಅನಿಲ್ ಬೆಡಗೆ, ಕೊನೆಯಲ್ಲಿ ಮೈಸೂರಿನ ನಿಮ್ಮೊಳಗೊಬ್ಬ ಬಾಲು ಹೆಸರಲ್ಲಿ ಸ್ವತಃ ಈಶ್ವರ ಪ್ರಸಾದ್ ಗಿಡನೆಟ್ಟರು. ಒಬ್ಬರಿಗೆ ನೇರಳೆ ಗಿಡ ಸಿಕ್ಕರೆ ಮತ್ತೊಬ್ಬರಿಗೆ ಮಹಾಘನಿ, ಸೀತಾಫಲ, ಬೇವು, ಹೊಂಗೆ, ಹೀಗೆ ಅನೇಕ ಗಿಡಗಳು ಈಶ್ವರ ಪ್ರಸಾದರಿಂದ ತಮ್ಮ ವಿಶೇಷಣಗಳನ್ನು ಹೇಳಿಸಿಕೊಳ್ಳುತ್ತಾ ನಮ್ಮ ಬ್ಲಾಗ್ ಗೆಳೆಯರಿಂದ ನೆಡಲ್ಪಟ್ಟವು. ನಡುವೆ ಫೋಟೊಗಾಗಿ ಫೋಸು, ನಗು, ಭಾವುಕತೆ, ಆನಂದ, ಜೋಕು, ಇತ್ಯಾದಿಗಳು ಚಾಲ್ತಿಯಲ್ಲಿದ್ದವು. ನಮ್ಮ ಅಧಿಕೃತ ಕಾರ್ಯಕ್ರಮಗಳ ನಡುವೆ ಕೆಲವು ಅನಧಿಕೃತ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅವುಗಳು ಯಾವುವೆಂದರೆ, ಅದೇಕೋ ಗುರುಪ್ರಸಾದ್‍ಗೆ ಮನುಜರ ಫೋಟೊ ಕ್ಲಿಕ್ಕಿಸುತ್ತಾ ನಡುವೆ ಗಿಡಗಳ ಮುಳ್ಳುಗಳ ಫೋಟೊಗಳನ್ನು ಕ್ಲಿಕ್ಕಿಸುತ್ತಿದ್ದರು. ಎರಡೂ ಫೋಟೊಗಳ ನಡುವೆ ಯಾವಾ ಗೂಡಾರ್ಥಗಳಿವೆಯೋ ನೀವೇ ಕಂಡುಹಿಡಿಯಬೇಕು. ಹಾಗೇ ಹೊಸ ಮದುವೆ ಗಂಡು ದಿಲೀಪ್ ತಮ್ಮ ಶ್ರೀಮತಿಯಿಂದ ಬಿಡುವು ಸಿಕ್ಕಾಗಲೆಲ್ಲಾ ತರಾವರಿ ಸಣ್ಣ ಸಣ್ಣ ಹೂಗಳ ಫೋಟೊ ತೆಗೆಯಲು ನೆಲದ ಮೇಲೆ ಕೂತು ಮಲಗಿ ಇತ್ಯಾದಿ ಸರ್ಕಸ್ ಮಾಡುತ್ತಿದ್ದರು. ಪಕ್ಕದಲ್ಲಿ ಹೂಮನಸ್ಸಿನ ಮಡದಿಯನ್ನು ಬಿಟ್ಟು ಹೂಗಳ ಹಿಂದೆ ಏಕೆ ಬಿದ್ದಿರಬಹುದು? ಚಿಪ್ಸ್ ಪಾಕೆಟ್ಟು ತೆರೆದು ಪುಟ್ಟ ಸೃಜನ್ ಕೈಗೆ ಕೊಟ್ಟು ಅವನು ಎಲ್ಲರಿಗೂ ಹಂಚುವುದನ್ನು ನೋಡಿ ಅನಂದಿಸುತ್ತಿದ್ದರು ದಿವ್ಯ ಹೆಗಡೆ. ನವೀನ್ ತೇಜಸ್ವಿಯವರ ಪುಸ್ತಕ ಓದುವಾಗ ವಸುದೇಶ್ ಪಾಠಕ್ ಅಂತೂ ಅದ್ಯಾಕೋ ಪಕ್ಕದ ಪುಟ್ಟದ ಬಂಡೆಯ ಮೇಲೆ ಸುಮ್ಮನೇ ಏನೋ ಅಲೋಚನೆಯಲ್ಲಿ ಕುಳಿತುಬಿಟ್ಟಿದ್ದರು. ಅವರು ಪರಿಸರ, ತೇಜಸ್ವಿ ಬಗ್ಗೆ ಯೋಚಿಸುತ್ತಿದ್ದರೋ ಇನ್ನೇನು ಕನಸು ಕಾಣುತ್ತಿದ್ದರೋ ಗೊತ್ತಿಲ್ಲ.

ಈ ನಡುವೆ ಸುಗುಣ ಮಹೇಶ್‍ರವರ ಮಗ ಮನುವಚನ ಒಂದು ತರಲೇ ಕೆಲಸ ಮಾಡಿಬಿಟ್ಟಿದ್ದ. ನೋಡುವುದಕ್ಕೆ ತರಲೇ ಕೆಲಸವಾದರೂ ಅದು ಎಲ್ಲರ ತಲೆಗೂ ಕೆಲಸ ಕೊಡುವಂತದ್ದಾಗಿತ್ತು. ಅದೇನೆಂದರೆ ಆತ ಹತ್ತಾರು ಮರಗಳ ಎಲೆಗಳನ್ನು ಯಾರಿಗೂ ಗೊತ್ತಿಲ್ಲದಂತೆ ಕಿತ್ತು ತಂದಿದ್ದ. ಗಿಡ ನೆಡುವ ಕಾರ್ಯಕ್ರಮವಾದ ನಂತರ ಅದನ್ನು ನೇರ ಈಶ್ವರ ಪ್ರಸಾದ್ ಕೈಗ್ ತಲುಪಿಸಿ ಈ ಎಲೆಗಳು ಯಾವ ಮರಗಳದ್ದು ಹೇಳಲೇಬೇಕು ಎಂದು ದುಂಬಾಲು ಬಿದ್ದಿದ್ದ. ಎಲ್ಲರಿಗಿಂತ ಒಂದು ಕೈ ಹೆಚ್ಚೇ ಕುತೂಹಲಿಯಾದ ಈಶ್ವರಪ್ರಸಾದ್ ಅದರಲ್ಲೂ ಒಂದು ಆಟ ಹೂಡಿಬಿಟ್ಟರು. ಅದೇನೆಂದರೆ ಎಲ್ಲರನ್ನು ಒಟ್ಟಿಗೆ ಸೇರಿಸಿದರು. ಒಂದೊಂದು ಎಲೆಯನ್ನು ತೋರಿಸುತ್ತಾ ಇದು ಯಾವ ಮರದ ಎಲೆ? ಎಂದು ಕೇಳುವುದು? ಪ್ರಾರಂಭವಾಯಿತಲ್ಲ. ಮತ್ತೆ ಮಕ್ಕಳಂತೆ ಎಲ್ಲರೂ ಕುತೂಹಲದಿಂದ ಒಂದೊಂದು ಎಲೆಗೂ ಉತ್ತರಿಸತೊಡಗಿದರು. ಸರಿ ಉತ್ತರ ಕೊಟ್ಟವರಿಗೆ ಬೆನ್ನು ತಟ್ಟುವಿಕೆ ಚಪ್ಪಾಳೆ. ಈ ಆಟದಲ್ಲಿ ಅನೇಕ ವಿಷಯಗಳು ಎಲ್ಲರ ಮನಸ್ಸಿನಲ್ಲಿ ಜಾಗ ಮಾಡಿಕೊಂಡವು. ಇದು ಮುಗಿಯಿತು ಎನ್ನುವಷ್ಟರಲ್ಲಿ ದೂರದಲ್ಲಿ ಹಕ್ಕಿಯೊಂದು ಕೂಗಿತು. ಅದನ್ನು ನೋಡಿ ನಮ್ಮ ಪ್ರಕಾಶ್ ಹೆಗಡೆ ಸುಮ್ಮನಿರಬೇಕಲ್ಲ. ಅವರು ಅದಕ್ಕೆ ಉತ್ತರವಾಗಿ ಕೂಗಿದರು. ಹೀಗೆ ಕೂಗಾಟ ಎಲ್ಲರಲ್ಲೂ ಶುರುವಾಯಿತು. ಕೊನೆಗೆ ಅದೇ ಒಂದು ಹೊಸ ಆಟವಾಗಿ ಪರಿವರ್ತನೆಯಾಗಿಬಿಟ್ಟಿತ್ತು. ಈ ಆಟದ ನಿಯಮವೇನೆಂದರೆ ಯಾರು ಎಷ್ಟು ಸಮಯ ಕೂಗುತ್ತಾರೋ ನೋಡೋಣ ಎನ್ನುವ ಪರೀಕ್ಷೆ. ಒಬ್ಬೊಬ್ಬರಾಗಿ ಉಸಿರು ಹಿಡಿದು ಬಿಡುವವರೆಗೆ ಕೂಗುವಂತದ್ದು. ರಾಘು, ನವೀನ್, ಉಮೇಶ್, ಪರಂಜಪೆ, ಅನಿಲ್, ಗುರುಪ್ರಸಾದ್, ವಸುದೇಶ್, ಯುವಕರಾದಿಯಾಗಿ ಎಲ್ಲರೂ ಕೂಗಿದರು. ದಂಪತಿಗಳ ಪತಿಗಳಂತೂ ತಮ್ಮ ಮಡದಿಯರನ್ನು ಮೆಚ್ಚಿಸಲೋಸುವೇನೋ ಸ್ವಲ್ಪ ಜೋರಾಗಿಯೇ ಕೂಗಿದರು. ಮದುವೆಯಾಗದ ಪಡ್ಡೇ ಹೈಕಳಂತೂ ಎಷ್ಟು ಜೋರಾಗಿ ಕೂಗಿದರೆಂದರೆ ದೂರದಲ್ಲಿರುವ ತಮ್ಮ ಮೆಚ್ಚಿನ ಗೆಳತಿಗೆ ಕೇಳುತ್ತಿದೆಯೇನೋ[ಹಾಗೆ ಅಂದುಕೊಂಡಿದ್ದು ಅವರ ಭಾವನೆ]ಅಂತ ಮಧುರವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಕೂಗಿದರು. ನಂತರ ಹೆಣ್ಣುಮಕ್ಕಳ ಸರಧಿ. ದಿವ್ಯ ಕೂಗಿದ್ದೂ ಯಾಇಗೂ ಕೇಳಿಸಲೇ ಇಲ್ಲ. ಅದೇ ರೀತಿ ಇನ್ನೂ ದಂಪತಿಗಳಲ್ಲಿ ದಂಗಳ ಕೂಗು. ಅವರು ಕೂಗಿ ಕಿರುಚಿದ್ದು ಯಾಇಗೂ ಸರಿಯಾಗಿ ಕೇಳಿಸಲೇ ಇಲ್ಲ. ನಿಮ್ಮ ಯಜಮಾನರ ಮೇಲೆ ಅದೆಷ್ಟು ವರ್ಷಗಳ ಸಿಟ್ಟಿದೆಯೋ ಜೋರಾಗಿ ಕೂಗಿ ತೀರಿಸಿಕೊಳ್ಳಿ ಎಂದು ನಾವೆಲ್ಲ ಅದೆಷ್ಟು ಸ್ಪೂರ್ತಿ ತುಂಬಿದರೂ ಚೇತನಭಟ್, ಇಬ್ಬರೂ ಆಶಾ ಅಕ್ಕಂದಿರು, ಶ್ರೀಮತಿ ಉಮೇಶ್ ದೇಶಾಯಿ, ಹೇಮಾ, ಪ್ರಗತಿ ಹೆಗಡೆ, ಸುಗಣಕ್ಕ………ಯಾರ ಕೂಗೂ ಜೋರಾಗಿ ಕೇಳಿಸಲೇ ಇಲ್ಲ. ಬಹುಶಃ ಇಲ್ಲೆಲ್ಲಾ ಕೂಗಾಡಿದರೇ ಏನು ಉಪಯೋಗ ಮನೆಯಲ್ಲಿ ತಮ್ಮ ಪತಿಗಳ ಮೇಲೆ ಪ್ರಯೋಗಿಸಿದರೆ ಉಪಯೋಗಕ್ಕೆ ಬರುತ್ತದೆ ಎಂದುಕೊಂಡು ನಮ್ಮ ಅಮಿಶಗಳನ್ನೆಲ್ಲ ತಿರಸ್ಕರಿಸಿಬಿಟ್ಟರು. ಈ ಸ್ಪರ್ಧೆಯ ಪೈಪೋಟಿಯಲ್ಲಿ ಈಶ್ವರ ಪ್ರಸಾದ್ ಸೇರಿದಂತೆ ಅನೇಕ ಯುವಕರು ಮುಂದಿದ್ದರೂ ಕೊನೆಗೂ ಈ ಕೂಗಾಟದಲ್ಲಿ ಗೆದ್ದವರು ಪಕ್ಕುಮಾಮ. ಅವರು ಉಸಿರು ಹಿಡಿದು ೨೩.೫೨ ಸೆಕೆಂಡು ಕೂಗಿದ್ದರು. ಅವರಿಗೆ ಕೊನೆಯಲ್ಲಿ ಬಹುಮಾನ ಕೊಡಲಾಯಿತು. ಅವರಿಗೆ ಹತ್ತಿರವಾಗಿ ಕೂಗಿದವರು ಉಮೇಶ್ ದೇಸಾಯಿ ೧೯ ಸೆಕೆಂಡು. ಪಕ್ಕುಮಾಮನ ಮಗ ಆಶೀಶ್ ಕೂಡ ೧೪ ಸೆಕೆಂಡುಗಳವರೆಗೆ ಕೂಗಿದ್ದ. ಅದಾದ ನಂತರ ಊಟ. ಊಟ ಸರಳವಾಗಿತ್ತು. ಒಟ್ಟಿಗೆ ಕೂತು ಎಲ್ಲರೂ ಕೂತು ತಮಾಷೆ ಮಾಡುತ್ತಾ, ನಗುತ್ತಾ ಆನಂದಿಸುತ್ತಾ ತಮ್ಮ ಮನೆಮನೆಕತೆಗಳನ್ನು ಹೇಳುತ್ತಾ ತೃಪ್ತಿಯಿಂದ ಊಟಮಾಡಿದೆವು. ಊಟ ನಡುವೆ ಕೋತಿಗಳ ಕಾಟ ತಪ್ಪಿಸಲು ಕೆಲವು ಬಾರ್ಡರ್ ಸೆಕ್ಯುರಿಟಿ ಫೋರ್ಸ್[ರಾಘು,ನವೀನ್, ಅನಿಲ್]ನವರು ಕೈಯಲ್ಲಿದ್ದ ಕೋಲುಗಳನ್ನು ಗನ್ನುಗಳೆಂದುಕೊಂಡು ಫೋಸ್ ಕೊಡುತ್ತಾ ಕೋತಿಗಳಿಗೆ ಬೆದರಿಕೆ ಹಾಕುತ್ತಾ, ನಮ್ಮ ಊಟ ಸರಾಗವಾಗಿ ಆಗುವಂತೆ ನೋಡಿಕೊಂಡರು. ಊಟವಾದ ಮೇಲೆ ಒಂದು ಸಣ್ಣ ನಡಿಗೆ. ತಿಪ್ಪಗೊಂಡನಹಳ್ಳಿ ಜಲಾಶಯದ ಸೇತುವೆ ಮೇಲೆ ನಡೆದಿದ್ದು ನಿಜಕ್ಕೂ ಖುಷಿಯ ಅನುಭವ. ಅಲ್ಲಿಂದ ನಮ್ಮ ಪಯಣ ಅಲ್ಲಿನ ಅತಿಥಿ ಗೃಹಕ್ಕೆ. ೧೯೩೦ರಲ್ಲಿ ಬ್ರಿಟಿಸರು ಕಟ್ಟಿದ ಆ ಆತಿಥಿಗೃಹ ನಮ್ಮನ್ನು ಮೋಡಿ ಮಾಡಿತ್ತು. ಒಳಗೆ ಹೋಗುತ್ತಿದ್ದಂತೆ ಅಲ್ಲಿದ್ದ ಕೆಲಸಗಾರರು ನಮಗಾಗಿ ಕುಡಿಯಲು ನೀರು ಕೊಟ್ಟರು. ನಡುವೆ ಈಶ್ವರ ಪ್ರಸಾದ್ ಕಲ್ಲಹತ್ತಿ ಮರವನ್ನು ತೋರಿಸಿ ಅದು ಹೇಗೆ ಒಂದು ಬಂಡೆಸಿಕ್ಕಿದರೆ ಅದನ್ನು ಕೊರೆದು ಸೀಳಿಕೊಂಡು ತನ್ನ ಬೇರು ಬಿಟ್ಟುಕೊಂಡು ಹೋಗುತ್ತದೆ ಎನ್ನುವುದನ್ನು ವಿವರಿಸಿದರು. ಗೆಸ್ಟ್ ಹೌಸ್ ಒಳಗೆ ಒಂದು ಸಣ್ಣ ಪವರ್ ಪಾಯಿಂಟ್ ಕಾರ್ಯಕ್ರಮ. ೨೦೭೦ದಲ್ಲಿ ನಮ್ಮ ಪರಿಸ್ಥಿತಿ ಹೇಗಿರಬಹುದು ಎನ್ನುವುದರ ಬಗ್ಗೆ ತಿಳುವಳಿಕೆ ಮೂಡಿಸಲು ವಿಜ್ಞಾನಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಬರೆದ ಪತ್ರವದು. ಎಲ್ಲರೂ ನೋಡುತ್ತಿದ್ದಂತೆ ನಮ್ಮ ಮಕ್ಕಳ ಮತ್ತು ಮೊಮ್ಮೊಕ್ಕಳ ಪರಿಸ್ಥಿತಿ ಹೇಗಿರಬಹುದು ಅನ್ನುವುದನ್ನು ಕಲ್ಪಿಸಿಕೊಂಡಾಗ ಎಲ್ಲರಿಗೂ ದಿಗಿಲಾಗಿತ್ತು. ಎಲ್ಲರೂ ಗೆಸ್ಟ್ ಹೌಸಿನ ವರಾಂಡಕ್ಕೆ ಬಂದು ಗುಂಡಾಗಿ ಕುಳಿತೆವಲ್ಲ! ಅಮೇಲೆ ನಡೆದಿದ್ದು ನಿಜಕ್ಕೂ ಫನ್. ಮೊದಲಿಗೆ ನಾನು ಕೆಲವು ಚುಟುಕು ಆಟಗಳನ್ನು ಆಡಿಸಿದೆ. ಅದರಲ್ಲಿ ಮೊದಲನೆಯದು ಗೋವಿಂದನ ಆಟ. ಗೋವಿಂದನ ಆಟದಲ್ಲಿ ಸಿಕ್ಕಿಕೊಂಡವರು ನಡುವೆ ಬಂದು ತಮಗೆ ತಿಳಿದ ನೃತ್ಯ ಮಾಡಬೇಕು. ಬೇರೆಲ್ಲೂ ಸಿಗದ ತರಾವರಿ ನೃತ್ಯಗಳು ಅವು.

ಒಬ್ಬರ ನಾಚಿಕೆಯೇನು, ಮಗದೊಬ್ಬರ ನಡುಕುಲುಕುವೆಯೇನು, ಒಂದೇ ಎರಡೇ…. ನೋಡಲು ತರಾವರಿ ಸಿಕ್ಕಿದ್ದವು. ಅದಾದ ಮೇಲೆ ಒಬ್ಬೊಬ್ಬರಾಗಿ ತಮ್ಮ ಪಕ್ಕದವರ ಹೆಸರನ್ನು ಸೇಇಸಿಕೊಂಡು ಹೇಳುವ ಆಟ. ಇದಂತೂ ಬಲೇ ಮಜವಾಗಿತ್ತು. ಮೊದಲನೆಯವರಿಗೆ ತಮ್ಮ ಹೆಸರಿನ ಜೊತೆಗೆ ಪಕ್ಕದವರ ಹೆಸರು ಮಾತ್ರ ಹೇಳಬೇಕಿದ್ದರೆ ಕೊನೆಯವರಿಗೆ ಮೊದಲಿಂದ ಕೊನೆಯವರೆಗಿನ ಎಲ್ಲರ ಹೆಸರನ್ನು ಹೇಳಬೇಕಿತ್ತು. ಈ ಆಟವನ್ನು ಆಡಿಸಿದ್ದು ನಾನಾದ್ದರಿಂದ ಮೊದಲು ನನ್ನಿಂದಲೇ ಪ್ರಾರಂಭವಾಗಿತ್ತು. ಅದಕ್ಕೆ ನಾನು ಎಲ್ಲರ ಹೆಸರು ನೆನಪಿಸಿಕೊಂಡು ಹೇಳುವುದರಿಂದ ತಪ್ಪಿಸಿಕೊಂಡಿದ್ದೆ. ನಂತರ ಶುರುವಾಗಿದ್ದು ಗುರುಪ್ರಸಾದ್‍ರವರು ಆಡಿಸಿದ ಮೈಂಡ್ ಗೇಮ್. ಎಲ್ಲರನ್ನೂ ನಾಲ್ಕು ಗುಂಪುಗಳಾಗಿ ವಿಂಗಡಿಸಿ ಆಡಿದ್ದ ಆಟವಂತೂ ನಿಜಕ್ಕೂ ಮರೆಯಲಾಗದ್ದು. ಈ ಆಟದಲ್ಲಿ ಮೊದಲಿಗೆ ನಮ್ಮ ಪರಿಚಯಿಸುವ ಕ್ರಮದಲ್ಲಿ ನಮ್ಮ ತಂಡ ಅದ್ಬುತವೆನ್ನುವ ಕ್ರಿಯೇಟಿವಿಟಿ ಪ್ರದರ್ಶಿಸಿ ಮುಂದೆ ಇದ್ದೆವು. ಆದರೆ ನಂತರ ನಮಗೆ ಸಿಕ್ಕಿದ್ದೆಲ್ಲಾ ತುಂಬಾ ಕಷ್ಟದ್ದು. ಉಳಿದ ಮೂರು ತಂಡಗಳಿಗೆ ಒಂದಲ್ಲ ಒಂದು ಸುಲಭ ವಿಷಯಗಳು ಸಿಕ್ಕು ಅವರ ಅಂಕಗಳು ಸಹಜವಾಗಿ ನಮಗಿಂತ ಹೆಚ್ಚಾಗಿಬಿಟ್ಟವು. ಇದೆಲ್ಲಾ ಮೋಸ, ನಮಗೆ ಅನ್ಯಾಯವಾಗಿದೆ, ಏಕೆಂದರೆ ನಮಗೆ ತುಂಬಾ ಕಷ್ಟ ವಿಷಯಗಳು ಸಿಕ್ಕಿವೆ. ನಮ್ಮ ಕಡೆ ಅದೃಷ್ಟವಿಲ್ಲ. ಆದರೂ ನಾವು ನಮ್ಮ ಶಕ್ತಿಮೀರಿ ಇಷ್ಟು ಅಂಕ ಗಳಿಸಿದ್ದೇವೆ. ಅದು ಉಳಿದವರು ಗಳಿಸಿದ ಅಂಕಗಳಿಗೆ ಹೋಲಿಸಿದರೆ ಎರಡರಷ್ಟು ಲೆಕ್ಕ ಎಂದು ತೆಗೆದುಕೊಳ್ಳಬೇಕೆಂದು ನಾವು ಅಪೀಲ್ ಮಾಡಿದರೂ ಜಡ್ಜುಗಳಾದ ಗುರುಪ್ರಸಾದ್ ಮತ್ತು ಶಿವಪ್ರಕಾಶ್ ನಮ್ಮ ಕಡೆ ಸ್ಕೋರು ಹೆಚ್ಚು ಕೊಡಲಿಲ್ಲ. ಕೊನೆಯಲ್ಲಿ ಶಿವಪ್ರಕಾಶನನ್ನು ನಿಶ್ಯಬ್ದವಾಗಿ ಕರೆದು “ನಿನದೊಂದು ಅಮೇಜಿಂಗ್ ಫೋಟೊ ತೆಗೆದಿದ್ದೇನೆ. ಅದನ್ನು ಯಾರಾದರೂ ಹುಡುಗಿ ನೋಡಿದರೆ ಕ್ಲೀನ್ ಬೋಲ್ಡ್, ಅದನ್ನು ನಿನಗೆ ಪರ್ಸನಲ್ಲಾಗಿ ಕಳಿಸುತ್ತೇನೆ. ನಮಗೆ ಹೆಚ್ಚು ಮಾರ್ಕ್ಸ್ ಹಾಕಿ ನಮ್ಮನ್ನು ಮೊದಲ ಸ್ಥಾನದಲ್ಲಿ ನಿಲ್ಲಿಸು” ಅಂತ ಆತನ ಕಿವಿಯಲ್ಲಿ ಹೇಳಿ ಮ್ಯಾಚ್ ಫಿಕ್ಸ್ ಮಾಡಿದರೂ ಆಟ ನನ್ನ ಕುತಂತ್ರಕ್ಕೆ ಸೊಪ್ಪು ಹಾಕದೇ ನಾನು ಈ ಮಾತನ್ನು ಹೇಳಿದ್ದೇ ಅಪರಾಧವಾಯಿತೇನೋ ಎನ್ನುವಂತೆ ಇದ್ದ ಸ್ಥಾನಕಿಂತ ಕೊನೆಯ ಸ್ಥಾನಕ್ಕೆ ತಳ್ಳಿಬಿಟ್ಟಿದ್ದ. ಸುಗುಣಕ್ಕ, ದಿವ್ಯ, ಪ್ರಗತಿ, ದಿಲೀಪ್ ಮತ್ತು ನಾನಿದ್ದ ಸೃಜನಶೀಲತೆ ಎನ್ನುವ ನಮ್ಮ ತಂಡ ಕೊನೆಯ ಸ್ಥಾನಕ್ಕೆ ಬಿದ್ದರೆ, ಪ್ರಕಾಶ್ ಹೆಗಡೆ, ಹೇಮಾಶ್ರಿ, ಆಶೀಷ್, ಪ್ರಶಾಂತ್ ಮತ್ತು ವಸುದೇಶ್ ಇದ್ದ “ಕಾರಂತ” ತಂಡ ಮೂರನೇ ಸ್ಥಾನಕ್ಕಿಳಿದಿತ್ತು. ಅಂಜಲಿ ಅಕ್ಕ, ನಂಜುಂಡ, ಮಹೇಶ್, ಮನು, ಮತ್ತು …….ಇದ್ದ ಪೋಲಿ ಪಠಾಲಂ ತಂಡ ಹೆಸರಿಗೆ ಎರಡನೇ ಸ್ಥಾನವನ್ನು ಗಳಿಸಿತು. ಅಜಾದ್, ರಾಘು, ಚೇತನ, ಆಶಾಕ್ಕ ಮತ್ತು ………ಇದ್ದ “ಅಪ್ರತಿಮ ಕನ್ನಡಿಗರು” ತಂಡ ಮೊದಲನೇ ಸ್ಥಾನ ಗಳಿಸಿತು. ಕೊನೆಯಲ್ಲಿ ಕುಳಿತಲ್ಲೇ ಆಡುವ ಬಾಲ್ ಗೇಮ್. ಈ ಆಟದಲ್ಲಿ ಒಬ್ಬರಿಗೊಬ್ಬರೂ ಬಾಲನ್ನು ಕೊಡುತ್ತಾ ಹೋಗುವುದು. ಸಂಗೀತ ನಿಂತಾಗ ಬಾಲ್ ಯಾರ ಕೈಯಲ್ಲಿರುತ್ತದೋ ಅವರು ಔಟ್. ಹೀಗೆ ಎಲ್ಲರೂ ಔಟಾದ ನಂತರ ಕೊನೆಯಲ್ಲಿ ಗೆದ್ದಿದ್ದು ಪ್ರಗತಿ ಹೆಗಡೆ.

ಎಲ್ಲ ಮುಗಿಯಿತಲ್ಲ. ಕೊನೆಯಲ್ಲಿ ಒಂದು ಸುಂದರ ಗ್ರೂಪ್ ಫೋಟೊ. ಅದಾದ ನಂತರ ಬಹುಮಾನ ಕಾರ್ಯಕ್ರಮ. ಬಹುಮಾನ ಏನು ಎನ್ನುವುದನ್ನು ನಾನು ಹೇಳಲಾರೆ. ಅದನ್ನು ನೀವು ಚಿತ್ರದಲ್ಲಿಯೇ ನೋಡಿಬಿಡಿ. ಎಲ್ಲವೂ ಮುಗಿದು ಹೊರಡುವಾಗ ಎಲ್ಲರ ಹೃದಯ ತುಂಬಿಬಂದಿತ್ತು. ಈಶ್ವರಪ್ರಸಾದರಿಗೆ ಆತ್ಮೀಯವಾದ ಧನ್ಯವಾದಗಳನ್ನು ಹೇಳಿ ಹೊರಟಾಗ ಇವತ್ತಿನ ದಿನವನ್ನು ನಮ್ಮ ದಿನವಾಗಿ ಪರಿವರ್ತಿಸಿಕೊಂಡು ಹೊರಗಿನ ಪ್ರಪಂಚವನ್ನು ಮರೆತು ಹಕ್ಕಿಯಂತೆ ಆಕಾಶದಲ್ಲಿ ತೇಲಿದ ಅನುಭವ. ಒಟ್ಟಾರೆ ಕಾರ್ಯಕ್ರಮದಲ್ಲಿ ನಾವು ಅನುಭವಿಸಿದ ಖುಷಿ, ಗೆಳೆತನದಲ್ಲಿನ ಮುಗ್ದತನ, ಹೊಸತನ್ನು ನೋಡಬೇಕು, ಕಲಿಯಬೇಕು ಎನ್ನುವ ಮಗುವಿನ ಮನಸ್ಸು, ಗಿಡನೆಡುವಾಗ ಮತ್ತು ಇಡೀದಿನವನ್ನು ನಮ್ಮದಾಗಿಸಿಕೊಂಡ ಸಾರ್ಥಕತೆ, ಹಕ್ಕಿಯಂತೆ ನಮ್ಮದೇ ಲೋಕದಲ್ಲಿ ಆಟವಾಡುತ್ತಾ ಕಂಡ ಕನಸು……….ಇನ್ನೂ ಏನೇನೋ ವರ್ಣಿಸಲು ಪದಗಳಲ್ಲ. ಮೊದಲ ಪ್ರಯತ್ನದಲ್ಲಿ ನಮ್ಮ ಬ್ಲಾಗ್ ವನಕ್ಕೆ ಹನ್ನೆರಡು ಗಿಡಗಳನ್ನು ನೆಟ್ಟಿದ್ದೇವೆ. ಮುಂದೆ ಅದು ನೂರಹನ್ನೆರಡು..ಸಾವಿರದ ಹನ್ನೆರಡು…ಅಮೇಲೆ ಲಕ್ಷ……ಹೀಗೆ ಮುಂದುವರಿಯಲು ನಮ್ಮಿಂದಾದ ಸಹಕಾರವನ್ನು ಮಾಡುತ್ತೇವೆ ಎಂದು ಎಲ್ಲರೂ ವಾಗ್ದಾನ ಮಾಡಿ ತಿಪ್ಪಗೊಂಡನಹಳ್ಳಿ ಬಿಟ್ಟು ನಮ್ಮ ಮಿನಿ ಬಸ್ ಹತ್ತಿದಾಗ ಸಮಯ ಆಗಲೇ ಏಳುಗಂಟೆದಾಟಿತ್ತು. ಇಡೀ ದಿನದ ಕಾರ್ಯಕ್ರಮದಲ್ಲಿ ನಾನು ಬರೆದಿದ್ದು ಸ್ವಲ್ಪ ಮಾತ್ರ. ಪ್ರತಿಯೊಂದು ಪ್ರಸಂಗವನ್ನು ಬರೆದರೆ ಹತ್ತಕ್ಕಿಂತ ಹೆಚ್ಚು ಲೇಖನಗಳಾಗುವುದು ಖಂಡಿತ. ಮತ್ತೆ ಇಡೀ ದಿನದ ದೊಡ್ಡ ಜೋಕ್ ಎಂದರೆ ಹೊರಡುವ ಕೊನೆ ಗಳಿಗೆಯ ಗಡಿಬಿಡಿಯಲ್ಲಿ ನಮ್ಮ ಕ್ಯಾಮೆರಾ ಭ್ಯಾಗನ್ನು ಮರೆತುಬಂದಿದ್ದು. ಹಾಗಾಗಿ ನವೀನ್[ಹಳ್ಳಿಹುಡುಗನ ಸಣ್ಣ ಕ್ಯಾಮೆರವನ್ನು ಕಿತ್ತುಕೊಂಡು ಅದರಲ್ಲಿಯೇ ಕೆಲವು ಫೋಟೊಗಳನ್ನು ಕ್ಲಿಕ್ಕಿಸಿ ಸಮಾಧಾನ ಮಾಡಿಕೊಂಡಿದ್ದೆ.

]]>

‍ಲೇಖಕರು avadhi

August 31, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This