ಬ್ಲಾಗ್ ಲೋಕದ ಹೂಳೆತ್ತಬೇಕಾಗಿದೆ…

ನಾನು ವಿಜಯ ಕರ್ನಾಟಕದಲ್ಲಿ ಪ್ರಕಟವಾಗುವ ಮೀಡಿಯಾ ಮಿರ್ಚಿ ಅಂಕಣದ ಲೇಖನವನ್ನು ಇನ್ನೂ ಹೆಚ್ಚಿನ ಚರ್ಚೆಗಾಗಿ ಇಲ್ಲಿ ಮುಂದಿಡುತ್ತಿದ್ದೇನೆ. ಬ್ಲಾಗ್ ಗಳಲ್ಲಿ ಬ್ಲಾಗ್ ಬರಹಗಳ ಬಗ್ಗೆ ನಾವೆಷ್ಟು ಕಾಳಜಿ ವಹಿಸುತ್ತೆವೋ ಅಷ್ಟೇ ಕಾಳಜಿ ಬ್ಲಾಗ್ ಕಾಮೆಂಟ್ ಗಳ ಬಗ್ಗೆಯೂ ಇರಬೇಕು ಎಂಬ ಹಂಬಲ ನನ್ನದು.

ಈ ಲೇಖನ ಓದಿ. ಬ್ಲಾಗ್ ಲೋಕದ ಹೂಳೆತ್ತಲು ನಾವು ಮನಸ್ಸು ಮಾಡಲು ಸಾಧ್ಯವಾ ಯೋಚಿಸೋಣ

-ಜಿ ಎನ್ ಮೋಹನ್

‘ನೀವು ಯಾಕೆ ಒಂದು ಬ್ಲಾಗ್ ಮಾಡಬಾರದು?’ ಅಂತ ನಾನು ಕೇಳಿದ್ದು ‘ಉದಯವಾಣಿ’ ಸಂಪಾದಕಿ ಆರ್. ಪೂರ್ಣಿಮಾ ಅವರನ್ನ. ತುಂಬಾ ದಿನಗಳ ನಂತರ ಉಭಯ ಕುಶಲೋಪರಿ ಮಾತಾಡಿಕೊಳ್ತಾ ಇದ್ವಿ. ಆಗ ಈ ಪ್ರಶ್ನೆ ಕೇಳಿದೆ. ಪೂರ್ಣಿಮಾ ‘ರಪ್’ ಅಂತ ಉತ್ತರ ಕೊಟ್ರು- ‘ಬ್ಲಾಗ್ ಮಾಡ್ಬೇಕು ಅಂತ ಇಷ್ಟ ಇತ್ತು. ಆದರೆ ಈಗ ಬ್ಲಾಗ್ ಗಳಲ್ಲಿ ಬಾರೋ ಕಾಮೆಂಟ್ ನೋಡ್ತಾ ಇದ್ರೆ ಯಾರಿಗೆ ಬ್ಲಾಗ್ ಮಾಡ್ಬೇಕು ಅನ್ಸುತ್ತೆ ಹೇಳಿ’ ಅಂದರು. ಒಂದೆರಡು ವರ್ಷಗಳಿಂದ ತೀವ್ರವಾಗಿ ಬ್ಲಾಗ್ ಲೋಕದಲ್ಲಿ ತೊಡಗಿಸಿಕೊಂಡಿರುವ ನಾನೂ ತಬ್ಬಿಬ್ಬಾದೆ. ಹೌದಲ್ಲಾ! ಅನಿಸಿತು. ಬ್ಲಾಗ್ ಲೋಕದ ಬೆಳವಣಿಗೆಗಳನ್ನ ಸದಾ ಹಿಂಬಾಲಿಸುತ್ತಲೇ ಬಂದಿದ್ದೇನೆ ಆದರೆ ಕಾಮೆಂಟ್ ಗಳ ಅಬ್ಬರ, ಆರ್ಭಟಕ್ಕೆ ‘ಬ್ಲಾಗ್ ಸಹವಾಸವೇ ಬೇಡ’ ಎನ್ನುವ ನಿರ್ಧಾರಕ್ಕೆ ಬಂದ ಘಟನೆಗೆ ಕಣ್ಣು ಬಿಟ್ಟಿದ್ದು ಈಗಲೇ . ಪೂರ್ಣಿಮಾ ಅಮೆರಿಕಾಗೆ ಹೋದಾಗಲೆಲ್ಲಾ ಅಲ್ಲಿನ ಬ್ಲಾಗ್ ಲೋಕದ ಬೆನ್ನತ್ತುತ್ತಾರೆ. ಒಬಾಮ-ಹಿಲೆರಿ ನಡುವಣ ಸ್ಪರ್ಧೆಯ ಬಿರುಸು ಅಲ್ಲಿನ ಬ್ಲಾಗ್ ಲೋಕದಲ್ಲಿ ಪಡೆದುಕೊಂಡ ತಿರುವು ನೋಡಿ ಇದಾವ ರೀತಿಯ ಬ್ಲಾಗಿಂಗ್ ? ಅಂತ ತೀರ್ಮಾನಕ್ಕೆ ಬಂದಿದ್ದಾರೆ. ‘ಒಬಾಮಾಗೆ ಬೆಂಬಲ ಕೊಡೋ ಉತ್ಸಾಹದಲ್ಲಿ ಹಿಲರಿ ಕ್ಲಿಂಟನ್ ಚಾರಿತ್ರ್ಯ ವಧೆ ಯಾಕೆ ಮಾಡ್ಬೇಕು. ಅವಳ ಖಾಸಗಿ ಬದುಕಿಗೆ ಕೈ ಹಾಕೋದು ಯಾಕೆ? ಕಾಮೆಂಟ್ ಗಳಿಗೆ ಒಂದು ಮಿತಿ ಬೇಡ್ವಾ?’ ಎಂದು ಪ್ರಶ್ನಿಸಿದರು.

ಹೌದು! ಕಾಮೆಂಟ್ ಗಳಿಗೆ ಒಂದು ಎಲ್ಲೆ, ಚೌಕಟ್ಟು ಬೇಡ್ವಾ ಅಂತ ಯೋಚಿಸ್ತಾ ಇರೋವಾಗಲೇ ಅದೇ ಅಮೆರಿಕಾದ ಕೇಟಿ ಸಿಯರ್ರಾ ನೆನಪಾದಳು. ಕಂಪ್ಯೂಟರ್ ಪುಸ್ತಕಗಳನ್ನು ಬರೆಯುವ ಕೇಟಿ ತಮಗೆ ಇಷ್ಟವಾದ ಫುಟ್ಬಾಲ್ ತಂಡವೊಂದು ಈ ಸಲದ ಪಂದ್ಯದಲ್ಲಿ ಗೆದ್ದೇ ಗೆಲ್ಲುತ್ತೆ ಅಂತ ಬ್ಲಾಗ್ ನಲ್ಲಿ ಬರೆದರು. ಅಷ್ಟೇ ಸಾಕಾಯ್ತು. ಶುರುವಾಯ್ತು ‘ಕಾಮೆಂಟ್ ಅಟ್ಯಾಕ್’. ಜೀವ ತೆಗೀತೀವಿ, ಕಾಲು ಮುರಿತೀವಿ, ಆಚೆ ಬಾ ನೋಡ್ಕೋತೀವಿ ಅಂತ ಕಾಮೆಂಟ್ ಗಳು ಅಬ್ಬರಿಸೋದಿಕ್ಕೆ ಶುರು ಮಾಡಿದವು. ಯಾವ ಕಾಮೆಂಟ್ ಗಳಿಗೂ ಮುಖ ಇಲ್ಲ. ಕೇಟಿ ಬದುಕನ್ನೇ ನುಚ್ಚು ನೂರು ಮಾಡುವಂತಾ ಅಟ್ಯಾಕ್ ಶುರುವಾದವು. ಕೊನೆಗೆ ಪೋಲೀಸರ ಮೋರೆ ಹೋಗಬೇಕಾಯಿತು. ಯಾವಾಗ ಕೇಟಿ ತಾವು ಅನುಭವಿಸಿದ್ದನ್ನೆಲ್ಲಾ ಬಹಿರಂಗಪಡಿಸಿದರೋ ಆಗ ನೂರಾರು ಬ್ಲಾಗರ್ ಗಳು ತಾವೂ ಸಹಾ ಅಸಭ್ಯ, ಅಸಹನೀಯ, ಬೇಜವಾಬ್ದಾರಿ ಕಾಮೆಂಟ್ ಗಳಿಂದ ನೊಂದ ಕಥೆಗಳನ್ನು ಹೊರಗೆಡಹಿದರು. ಆಗ ಶುರುವಾಯಿತು ನೋಡಿ ಮುಖರಹಿತ, ಹೊಣೆಗಾರಿಕೆ ಇಲ್ಲದ ಕಾಮೆಂಟ್ ವಿರುದ್ಧದ ಚಳವಳಿ. ರಾಬರ್ಟ್ ಸ್ಕೊಬಲ್ ಈ ಕಾಮೆಂಟ್ ಅಟ್ಯಾಕ್ ವಿರೋಧಿಸಿ ಇಡೀ ವಾರ ತಮ್ಮ ಬ್ಲಾಗ್ ಬಂದ್ ಮಾಡಿದರು. ಸೈಬರ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ ಟಿಮ್ ಓ ರೀಲಿ ‘ಸಪೋರ್ಟ್ ರೆಸ್ಪಾನ್ಸಿಬಲ್ ಕಾಮೆಂಟಿಂಗ್’ ಚಳವಳಿಗೆ ನಾಂದಿ ಹಾಡಿದರು. ಬೇಕಾಬಿಟ್ಟಿಯಾಗಿ ಹರಿಯುತ್ತಿದ್ದ ಕಾಮೆಂಟ್ ಗಳಿಗೆ ಕಡಿವಾಣ ಹಾಕಲು ಈ ಎಲ್ಲರಿಗೂ ಸಾಧ್ಯವಾಗಿದೆಯೋ ಇಲ್ಲವೊ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಬ್ಲಾಗ್ ಲೋಕದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನಂತೂ ಈ ಚಳವಳಿ ಮನದಟ್ಟು ಮಾಡಿಕೊಟ್ಟಿದೆ.

‘ಯಾಕೆ ಹೀಗಾಯ್ತೋ, ನಾನು ಕಾಣೆನು…’ ಅಂತ ಸುಮ್ಮನಿರುವ ಬದಲು ಕನ್ನಡ ಬ್ಲಾಗ್ ಲೋಕದತ್ತ ಕಣ್ಣಾಡಿಸತೊಡಗಿದೆ. ಕನ್ನಡ ಬ್ಲಾಗ್ ಲೋಕದಲ್ಲಿ ಈಗ ಸುದ್ದಿ ಮಾಡುತ್ತಿರುವ ಬರಹಗಳನ್ನು, ಅದನ್ನು ನೂರೆಂಟು ಜನರಿಗೆ ಹಂಚಲು ಸರಸರನೆ ಹರಿದಾಡುತ್ತಿರುವ ‘ಮೇಲ್’ಗಳನ್ನು ಗಮನಿಸಿದರೆ ಸಾಕು ಕನ್ನಡ ಬ್ಲಾಗ್ ಲೋಕದಲ್ಲೂ ಹೂಳೆತ್ತುವ ಕೆಲಸ ನಡೆಯಬೇಕಾಗಿದೆ ಎಂಬುದಂತೂ ಸ್ಪಷ್ಟ. ಇತ್ತೀಚೆಗೆ ಒಂದಷ್ಟು ಬ್ಲಾಗ್ ಗೆಳೆಯರು ಸೇರಿ ಬ್ಲಾಗರ್ ಗಳ ಸಮ್ಮೇಳನಕ್ಕೆ ಅಡಿಪಾಯ ಹಾಕುತ್ತಿದ್ದೆವು. ನಮ್ಮ ಆ ದಿನದ ಇಡೀ ಸಮಯವನ್ನು ಕಬಳಿಸಿದ್ದು ಕಾಮೆಂಟ್ ಗಳು. ಕಾಮೆಂಟ್ ಗಳಿಗೆ ಒಂದು ಜವಾಬ್ದಾರಿ ಇರಬೇಕು ಎನ್ನುವುದನ್ನು ಮುಖ್ಯ ಚರ್ಚೆಯಾಗಿಟ್ಟುಕೊಂಡರೆ ಒಳ್ಳೆಯದು ಅನ್ನುವುದೇ ಎಲ್ಲರ ಯೋಚನೆ. ಬ್ಲಾಗಿಂಗ್ ಅನ್ನು ಪ್ರೀತಿಸೋ ಒಂದಷ್ಟು ಜನ ಒಟ್ಟಿಗೆ ಸೇರಿದರೆ ಸಾಕು ಅಲ್ಲಿ ಮೊದಲು ಚರ್ಚೆಯಾಗುವುದೇ ಕಾಮೆಂಟ್ ಗಳು. ‘ಅಯ್ಯೋ ನಂಗೂ ಬಕೆಟ್ ಅಂತ ಕರೀತಾರೆ. ನಿನ್ನ ಚರಿತ್ರೆ ಎಲ್ಲಾ ಬಯಲು ಮಾಡ್ತೀನಿ ಅಂತ ಧಮಕಿ ಹಾಕ್ತಾರೆ, ನಾನು ಬರದ್ರೆ ಸಾಕು ಉಗೀತಾರೆ. ಬರೀ ನನ್ನನ್ನ ಮಾತ್ರ ಅಲ್ಲ ನಮ್ಮ ಮನೆಯವರನ್ನೂ ತೊಳೆಯೋಕೆ ಹೊರಟಿದಾರೆ… ಬ್ಲಾಗ್ ನಡೆಸುವುದಕ್ಕೂ ಎಂಟೆದೆ ಬೇಕು ಎನ್ನುವ ಕಾಲವಂತೂ ಬಂದುಬಿಟ್ಟಿದೆ

ಬಯ್ಯೋದು, ಹಂಗಿಸೋದು, ಕಾಲೆಳೆಯೋದು ಇವೆಲ್ಲಾ ಎಲ್ಲೋ ಕದ್ದು ಮುಚ್ಚಿ ಮಾಡಬೇಕಾಗಿಲ್ಲ. ಅದನ್ನ ಎನ್ಕರೇಜ್ ಮಾಡೋ ಹೊಸ ಟ್ರೆಂಡ್ ಶುರುವಾಗಿದೆ. ಅಮೆರಿಕಾದಲ್ಲಿ ‘ಷಾಕ್’ ರೇಡಿಯೋ ಅಂತಿದೆ. ಅದರ ಆಸೇನೇ ಷಾಕ್ ಕೊಡ್ಬೇಕು ಅನ್ನೋದು. ಹಾಗಾಗಿ ಇಲ್ಲಿ ಬಯ್ಯೋರಿಗೆ, ಹಂಗಿಸೋರಿಗೆ ಮೊದಲ ಮಣೆ. ಹಿಂದುಗಡೆ ಬಾಗ್ಲಿಂದ ಕಳ್ಳನ ಥರಾ ಈ ಟ್ರೆಂಡ್ ಬ್ಲಾಗ್ ಒಳಕ್ಕೂ ಬಂದು ಕೂತಿದೆ. ಒಂದು ಕಾರ್ಟೂನ್ ಯಾವುದೋ ಬ್ಲಾಗ್ ನಲ್ಲಿ ನೋಡಿದ್ದು ನೆನಪು. ‘ಮೊದಲು ನಾವು ಬೊಗಳ್ತಿದ್ವಿ ಈಗ ಬ್ಲಾಗ್ತೀವಿ’ ಅಂತ. ಅದೇ ಕನ್ಫ್ಯೂಶನ್ ಈಗ ಎಲ್ರಿಗೂ. ಜವಾಬ್ದಾರೀನೆ ಇಲ್ದೆ ಇರೋ ಕಾಮೆಂಟ್ ನೋಡಿದಾಗ ‘ಇದೇನಿದು ಬೊಗಳ್ತಿದಾರೋ. ಬ್ಲಾಗ್ತಿದಾರೋ’ ಅಂತ.

ಕನ್ನಡ ಬ್ಲಾಗ್ ಲೋಕಕ್ಕೆ ಈಗ ಪ್ರತೀ ದಿನ ಒಂದಿಲ್ಲೊಂದು ಬ್ಲಾಗ್ ರಂಗ ಪ್ರವೇಶ ಮಾಡ್ತಾ ಇದೆ. ಬ್ಲಾಗ್ ಮಂಡಲಕ್ಕೆ ಇದು ನಿಜಕ್ಕೂ ಒಳ್ಳೇ ಸುದ್ದಿ. ಪತ್ರಿಕೆ, ಚಾನಲ್ ಗಳ ಟ್ರಾಫಿಕ್ ಜಾಸ್ತಿ ಆಗ್ತಾ ಇರೋ ರೀತಿನೇ ಬ್ಲಾಗ್ ಟ್ರಾಫಿಕ್ ಸಹಾ ಜಾಸ್ತಿ ಆಗ್ತಿದೆ. ಆಗ್ಲಿ. ಆದ್ರೆ ಬೇರೆ ಮಾಧ್ಯಮದಲ್ಲಿರೋ ನಂ 1 ರೇಸ್ ಇಲ್ಲೂ ಇಣಕಿ ಹಾಕ್ತಿದೆ. ಪೇಪರ್ಗೆ ಸರ್ಕ್ಯುಲೇಶನ್, ಚಾನಲ್ ಗೆ ಟಿ ಆರ್ ಪಿ ಹಾಗೇ ಬ್ಲಾಗ್ ಗೆ ‘ಹಿಟ್ಸ್’ . ಪ್ರತಿಯೊಂದು ಬ್ಲಾಗ್ ನ ಬಾಗಿಲು ಎಷ್ಟು ಜನ ಬಡಿದಿದಾರೆ ಅಂತ ಗೊತ್ತಾಗೋದಿಕ್ಕೆ ಬ್ಲಾಗ್ ತಾಣಗಳೇ ನೀಡಿರೋ ಒಂದು ಫೆಸಿಲಿಟಿ- ಬ್ಲಾಗ್ ಮೀಟರ್. ಪ್ರತಿಯೊಬ್ಬರಿಗೂ ಹಿಟ್ಸ್ ಬೇಕು. ಇವತ್ತು ದೊಡ್ಡ ದನೀಲಿ ಮಾತಾಡಿದ್ರೆ ಸಾಕು ಎಲ್ರೂ ನಮ್ ಕಡೆ ನೋಡ್ತಾರೆ ಅನ್ನೋ ಸುಖಾನ ಹಲವು ಕಾಮೆನ್ಟಿಗರು ಅನುಭವಿಸ್ತಾ ಇದಾರೆ. ಇವತ್ತು ಹಿಟ್ಸ್ ಚಾರ್ಟ್ ನಲ್ಲಿ ಮೇಲೇರಬೇಕಂದ್ರೆ ಇರೋ ಸುಲಭವಾದ ಮಾರ್ಗಾನೆ ಜಯಂತ ಕಾಯ್ಕಿಣಿ ಹೇಳಿದ ಹಾಗೆ ‘ಮರೆಯಲ್ಲಿ ಕೂತು ಕಲ್ಲು ಹೊಡೆಯೋದು’. ಜೋಗಿ ಮೊನ್ನೆ ಪುಸ್ತಕ ಬಿಡುಗಡೆ ಪ್ರೊಗ್ರಾಮ್ ನಲ್ಲಿ ನೆನಪಿಸಿಕೊಳ್ತಾ ಇದ್ರು- ಎ ಎನ್ ಮೂರ್ತಿರಾಯರು ಹೇಳ್ತಿದ್ರಂತೆ- ‘ಹೊಗಳುವಾಗ ಅನಾಮಿಕನಾಗಿರು, ತೆಗಳುವಾಗ ನೀನು ಯಾರು ಅಂತ ಗುರುತಿಸಿಕೋ’ ಅಂತ. ಆದರೆ ಈಗಿನ ಟ್ರೆಂಡ್ ಅದಕ್ಕೆ ಉಲ್ಟಾ.

ಅನಾಮಿಕತೆ ಅನ್ನೋದು ಬ್ಲಾಗ್ ನ ಒಂದು ಶಕ್ತಿ. ಆದರೆ ಅದೇ ಅದರ ದೌರ್ಬಲ್ಯ ಕೂಡಾ ಅನ್ನೋದನ್ನ ನಿಜಾ ಮಾಡೋಕೆ ಅಂತಾನೇ ಹೊರಟಿರೋ ಕಾಮೆನ್ಟಿಗರೂ ಇದ್ದಾರೆ. ಈ ಜಗತ್ತಿನಲ್ಲಿ ‘ಜೋಬು ಅನ್ನೋದು ಇರೋವರ್ಗೂ ಜೋಬುಗಳ್ರು ಇರ್ತಾರೆ ‘ ಅನ್ನೋ ಥರಾ ಬ್ಲಾಗ್ ಗಳು ಇರೋವರ್ಗೂ ಅದಕ್ಕೇ ಮಸಿ ಬಳಿಯೋದಕ್ಕೆ ಅಂತಾನೇ ಇರೋ ಒಂದಷ್ಟೋ ಕಾಮೆನ್ಟಿಗರೂ ಇರ್ತಾರೆ. ಅನಾಮಿಕತೆ ಅನ್ನೋ ಸೌಲಭ್ಯ ಬಳಸಿ ಪ್ರತೀ ಬ್ಲಾಗಿಗೂ ಕನ್ನ ಹಾಕ್ತಾ ಖುಷಿ ಅನುಭವಿಸೋರೂ ಇದಾರೆ. ಅನಾಮಿಕತೆ ಬರಹಗಾರರಿಗೆ ಎಷ್ಟೋ ಬಾರಿ ತಮ್ಮೊಳಗಿನ ಬೆಸ್ಟ್ ಅನ್ನ ನೀಡೋದಕ್ಕೆ ಸಹಾಯ ಮಾಡಿದೆ. ಅನಾಮಿಕತೆ ಅನ್ನೋದು ಎಷ್ಟೋ ನಂಬಲಿಕ್ಕೆ ಆಗದ ನೋವುಗಳನ್ನ ಹಂಚಿಕೊಳ್ಳೋಕೆ ಸಹಾಯ ಮಾಡಿದೆ. ಅನಾಮಿಕತೆ ಅನ್ನೋದು ಲೋಕಾಯುಕ್ತಕ್ಕೆ ಇರೋ ದೊಡ್ಡ ಶಕ್ತಿ. ಆದರೆ ಇವತ್ತು ಇದೇನು anonimity ಯೋ ಇಲ್ಲಾ enimity ಯೋ ಅಂತ ಗೊಂದಲ ಕಾಡೋ ಅಷ್ಟು ಬ್ಲಾಗ್ ಲೋಕ ಬದಲಾಗಿವೆ.

support responsible commenting ಚಳವಳಿ ತನ್ನನ್ನ ಬ್ಲಾಗ್ ಲೋಕಕ್ಕೆ ಕಾಮನ್ ಸೆನ್ಸ್ ತರೋ ಪ್ರಯತ್ನ ಅಂತ ಬಣ್ಣಿಸಿಕೊಂಡಿದೆ. ಬ್ಲಾಗ್ ಲೋಕಕ್ಕೆ ಏನು ಬೇಕಾಗಿದೆ ಅಂತ ಗುರುತಿಸಿ ಕೊಳ್ಳೋ ಹೊತ್ತಲ್ಲೇ ಬ್ಲಾಗ್ ಲೋಕಕ್ಕೆ ಏನು ಬೇಡ ಅನ್ನೋದನ್ನೂ ಗುರುತಿಸಿ ಕೊಳ್ಳೋ ಜರೂರು ಇದೆ ಅನ್ನೋದು ಗೊತ್ತಾಗಿದೆ. ‘ಇದೇನು ಸೆನ್ಸಾರಾ?’ ಅಂತ ಕೂಗೆಬ್ಬಿಸಿದವರಿಗೆ ಇದು ಸೆನ್ಸಾರ್ ಅಲ್ಲ ಸೆಲ್ಫ್ ಸೆನ್ಸಾರ್ ಅನ್ನೋದನ್ನ ಚಳವಳಿ ಸ್ಪಷ್ಟ ಮಾಡಿದೆ. ಬ್ಲಾಗ್ ನಲ್ಲಿ ಹಾಕುವ ಬರಹಗಳಿಗೆ ಹೇಗೆ ಬ್ಲಾಗಿಗರು ಜವಾಬ್ದಾರರೋ ಹಾಗೇನೇ ಅದರ ಕಾಮೆಂಟ್ ಗಳಿಗೂ ಜವಾಬ್ದಾರರು ಅನ್ನೋದನ್ನ ಕಲಿಸಲಾಗ್ತಿದೆ.

ಬ್ಲಾಗಿಂಗ್ ಗೆ ಒಂದು ನೀತಿ ಸಂಹಿತೆ ಇರ್ಬೇಕು ಅಂತ ಯೋಚನೆ ಮಾಡ್ತಾ ಇರೋರ ಸಂಖ್ಯೆ ಜಾಸ್ತಿ ಆಗ್ತಿದೆ. ವಿಕಿಪೀಡಿಯಾದ ಬಳಗ ಸಹಾ ಇದಕ್ಕೆ ಕೈಜೋಡಿಸಿದೆ. ಅಮೆರಿಕಾದಲ್ಲಿ ಈಗಾಗಲೇ ಇದನ್ನ ‘ಸೈಬರ್ ಬುಲ್ಲಿಯಿಂಗ್’ ಅಂತ ಗುರ್ತ್ಸಿದ್ದಾರೆ. ದೈಹಿಕವಾಗಿ, ಮಾನಸಿಕವಾಗಿ ಹಲ್ಲೆ ನಡೆಸಿದ ಹಾಗೆ ಈಗ ಸೈಬರ್ ಹಲ್ಲೆ ನಡೆಸಲಾಗ್ತಿದೆ ಅನ್ನೋದು ವಿವರಣೆ. ಕನ್ನಡದಲ್ಲಿ ಬ್ಲಾಗಿಂಗ್ ಈಗ ಶೈಶವಾವಸ್ಥೆಯನ್ನ ದಾಟಿಕೊಳ್ಳೋ ಕಾಲದಲ್ಲಿದೆ. ಈ ಕಾಲ ಒಂದು ವಿಮರ್ಶೆಯ ಕಾಲ ಆಗ್ಬೇಕು. ಕತ್ತಲಲ್ಲಿ ಕ್ರಿಮಿಗಳು ಸಿಕ್ಕಾಪಟ್ಟೆ ಜಾಸ್ತಿ. ಹಾಗಾಗಿ ಬೆಳಕು ಇರೋ ರೀತಿ ನೋಡಿಕೊಳ್ಳೋ ಜವಾಬ್ದಾರಿ ಕೂಡಾ ನಮ್ಮ ಮುಂದೇನೇ ಇದೆ. ಕೇವಲ ‘ಹಿಟ್ಸ್’ ಗಳ ಮೇಲೆ ಮಾತ್ರ ಕಣ್ಣಿಟ್ಟರೆ ಕೊನೆಗೆ ಉಳಿಯೋದು ‘ಹಿಟ್ ಅಂಡ್ ರನ್’ ಕೇಸ್ ಗಳು ಮಾತ್ರ.

‍ಲೇಖಕರು avadhi

August 18, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

11 ಪ್ರತಿಕ್ರಿಯೆಗಳು

 1. ರಂಜಿತ್

  >>ಕತ್ತಲಲ್ಲಿ ಕ್ರಿಮಿಗಳು ಸಿಕ್ಕಾಪಟ್ಟೆ ಜಾಸ್ತಿ. ಹಾಗಾಗಿ ಬೆಳಕು ಇರೋ ರೀತಿ ನೋಡಿಕೊಳ್ಳೋ ಜವಾಬ್ದಾರಿ ಕೂಡಾ ನಮ್ಮ ಮುಂದೇನೇ ಇದೆ. ಕೇವಲ ‘ಹಿಟ್ಸ್’ ಗಳ ಮೇಲೆ ಮಾತ್ರ ಕಣ್ಣಿಟ್ಟರೆ ಕೊನೆಗೆ ಉಳಿಯೋದು ‘ಹಿಟ್ ಅಂಡ್ ರನ್’ ಕೇಸ್ ಗಳು ಮಾತ್ರ!<<

  ಅಕ್ಷರಶಃ ನಿಜವಾದ ಮಾತು!

  ಪ್ರತಿಕ್ರಿಯೆ
 2. Manoj

  ಬ್ಲಾಗ್ ತಾಣಗಳು ಅನಾಮಿಕ ಕಾಮೆಂಟುಗಳನ್ನು ಹಾಕಲು ಬಿಡಬಾರದು. ಯಾವುದಾದರು ಒಂದು ರೀತಿಯ authorization mechanism ಇರಲೇಬೇಕು.
  ಈಗಾಗಲೇ ಹೆಚ್ಚಿನ ಬ್ಲಾಗಿಂಗ್ ಸೈಟುಗಳು openIdಯನ್ನು ಸಪೋರ್ಟ್ ಮಾಡುತ್ತವೆ. ಹಾಗಾಗಿ wordpress ಬ್ಲಾಗ್ ಹೊಂದಿರುವವರು blogspotನಲ್ಲಿ ಅವರ wordpress ಐಡಿ ಬಳಸೇ (ಇಲ್ಲಿ url ಬಕೆಯಾಗುತ್ತದೆ) ಕಾಮೆಂಟು ಹಾಕಬಹುದು. wordpress, blogspot ಅಲ್ಲದೆ ಇನ್ನು ಹಲವು ವೆಬ್ ಸೈಟುಗಳು openId ಸಪೋರ್ಟ್ ಮಾಡುತ್ತವೆ ಹಾಗೆ openId provider ಕೂಡ ಆಗಿರುತ್ತವೆ, ಹೀಗಿರುವಾಗ ಅನಾನಿಮಸ್ ಕಾಮೆಂಟುಗಳಿಗೆ ಮುಕ್ತಿ ಕೊಡಬಹುದು.
  ಇದನ್ನೂ ದುರುಪಯೋಗ ಮಾಡಬಹುದು, ಆದರೆ ಈಗಿನ ತರಹ ಸಿಕ್ಕಾಬಟ್ಟೆ ನಿಮಿಷಕ್ಕೊಂದರಂತೆ ಹೊಸ ಹೊಸ ಹೆಸರಿನಿಂದ ಕಾಮೆಂಟು ಮಾಡುವುದನ್ನ ತಪ್ಪಿಸಬಹುದು

  ಪ್ರತಿಕ್ರಿಯೆ
 3. shreenidhids

  ಅನಾನಿಮಸ್ ಕಾಮೆಂಟುಗಳ ಹಾವಳಿಯಿಂದ ಹೊರ ಬರೋದು -ಇದೊಂತರ ಬೆಕ್ಕಿನ ಕೊರಳಿನ ಗಂಟೆ ಕಥೆಯಾಗಿದೆ.
  ಇನ್ನೊಂದು ಮಜಾ ಅಂದರೆ, ಮಾಧ್ಯಮಕ್ಕೆ ಸಂಬಂಧಿಸಿದ ಬ್ಲಾಗುಗಳಲ್ಲಿಯೇ ಈ ಹಾವಳಿ ಹೆಚ್ಚಾಗಿರೋದು! ಮತ್ತು, ಯಾಕೆ ಹೀಗೆ ಅಂತ ಕೇಳಿದರೆ, ಅಲ್ಲಿ ಉತ್ತರಿಸೋರು – ಅದನ್ನು ಸಮರ್ಥಿಸುವ ಪರಿ ನೋಡಬೇಕು. ಇವರುಗಳ ಸಹವಾಸವೇ ಬೇಡ ಅಂತ ಸುಮ್ಮನಿರಬೇಕು, ಅಷ್ಟೇ.

  ಪ್ರತಿಕ್ರಿಯೆ
 4. Dr. BR. Satyanarayana

  ನೀವು ಹೇಳೋದು ನಿಜ. ಈ ಅನಾಮಿಕರ ಕಾಟ ಮಿತಿಮೀರಿದೆ ಎಂದೇ ಹೇಳಬಹುದು. ಮುಂಚೆ ನನ್ನ ಬ್ಲಾಗಿಗೆ ಯಾರೂ ಬೇಕಾದರೂ ಕಾಮೆಂಟ್ ಮಾಡುವ ಸೌಲಭ್ಯವಿತ್ತು. ಆದರೆ ಒಬ್ಬ ಕಿಡಿಗೇಡಿ ಕಾಮೆಂಟಿಗ ನೀಡಿದ ತೊಂದರೆಯಿಂದಾಗಿ ನಾನು ಈಗ ಆ ಸೌಲಭ್ಯವನ್ನು ಇಲ್ಲವಾಗಿಸಿಬಿಟ್ಟಿದ್ದೇನೆ. ಈ ಅನಾಮಿಕರು ಬೆತ್ತಲೆ ಸಾಮ್ರಾಜ್ಯದ ಚಕ್ರವರ್ತಿಗಳಿದ್ದ ಹಾಗೆ! ತಾವು ಕತ್ತಲೆಯಲ್ಲಿದ್ದು ಬೇರೆಯವರನ್ನು ಬೆಳಕಿನಲ್ಲಿ ಬೆತ್ತಲಾಗಿಸಿ ನೋಡುವ ಚಟ ಇವರದು.

  ಪ್ರತಿಕ್ರಿಯೆ
 5. ಟೀನಾ

  ಕೆಲದಿನಗಳ ಹಿಂದಷ್ಟೆ ಟೀವಿ9ನ ಶಿವಪ್ರಸಾದ್ ಇಂತಹದೇ ಒಂದು ಲೇಖನ ಬರೆದಿದ್ರು.
  ಅದರಲ್ಲಿ ನೇರಾನೇರ ಹೆಸರೆತ್ತಿ ಬರೆಯಲಾಗಿತ್ತು, ಅಷ್ಟೇ ವ್ಯತ್ಯಾಸ!! ನನ್ನ ಮಟ್ಟಿಗೆ
  ಹೇಳುವದಾದರೆ ಸುಮ್ಮನಿರೋದು ಅವರಿಗೆ ಉತ್ತೇಜನ ಕೊಡುವಷ್ಟೇನೆ ತಪ್ಪು.
  ನಾವು ಬ್ಲಾಗಿಂಗ್ ಶುರುಮಾಡಿದಾಗ ಇದ್ದ ಚೆಂದದ ಹುರುಪಿನ ವಾತಾವರಣ ಈಗಿಲ್ಲ
  ಅನ್ನೋದು ನಿಜ.ಎಲ್ಲರೂ ಅವರವರ ಮೂಗಿನ ನೇರಕ್ಕೇ ಯೋಚಿಸುವ, ಎಲ್ಲರನ್ನೂ
  ಸಂಶಯಮನೋಭಾವದಿಂದ ನೋಡುವ ಮನಸ್ಥಿತಿ ಬಂದುಬಿಟ್ಟಿದೆ. ಹುಂಬತನದ
  ಎಲ್ಲೆ ಮೀರುವವರು ಮಾತ್ರ ಇಲ್ಲಿ ಉಳಿಯೋದು ಸಾಧ್ಯ ಅನ್ನೋ ಹತಾಶಮನೋಭಾವ.
  ನಾನಂತೂ ಬ್ಲಾಗ್ ಅಪ್ಡೇಟ್ ಮಾಡಿ ಸುಮಾರು ಸಮಯ ಆಗಿಹೋಯಿತು!!
  GNM, ಯಾರುಯಾರಿಗೆ ಹೇಳಬೋದು ನಾವು? ಕೇಳುವವರಿಗೇನೋ ತಿಳೀತದೆ,
  ಕೇಳಲಿಕ್ಕೇ ತಯಾರಿರದ, ಈ ಕೆಲಸ ಮಾಡಿ ಸಂತಸಪಡುವ ವಿಕೃತಮನಸ್ಸಿನವರಿಗೆ ಗೊತ್ತಾಗತ್ತಾ ಇದು?

  ಪ್ರತಿಕ್ರಿಯೆ
 6. neelanjana

  ಈ ಕಾಮೆಂಟ್ ಗಲಾಟೆ ಇರೋದೆಲ್ಲ ಮೀಡಿಯಾ-ಪತ್ರಕರ್ತರ ಬ್ಲಾಗ್ ಗಳಿಗೆ ಮಾತ್ರ ಅನ್ಸತ್ತೆ !ನಮ್ಮಂತಹವರ ತಂಟೆಗೆ ಯಾರೂ ಬರೋಲ್ಲ 🙂

  ಪ್ರತಿಕ್ರಿಯೆ
 7. ಅನಿಕೇತನ ಸುನಿಲ್

  ಆತ್ಮೀಯರೇ,
  ನಾವು ಅರಿಸಿಕೊಲ್ಲೋ ವಿಷಯದ ಮೇಲೆ ತಾನೇ ಕಾಮೆಂಟ್ ಬರೋದು…….ಎಷ್ಟು ತಗೋಬೇಕು ಬಿಡಬೇಕು…ಯಾವ್ದು ಅಗತ್ಯ ಅನಗತ್ಯ ಅಂತ ಗೊತ್ತಿದ್ದರೆ ಅಷ್ಟೇನೂ ತೊಂದ್ರೆ ಆಗೋಲ್ಲ ಅನ್ಕೋತೀನಿ…..ಬಹುಷಃ ನಾನು ಹೊಸಬನಾದ್ದರಿಂದ ನಂಗೆ ಸಮಸ್ಯೆ ಹೆಚ್ಚು ಗೊತ್ತಾಗ್ತಿಲ್ಲ ಅನ್ಕೋತೀನಿ.
  ಅಲ್ಲದೆ ಕಾಮೆಂಟ್ moderation ಅನ್ನೋ option ಇದ್ದೆ ಇರುತ್ತಲ್ಲ?
  Anyways ಲೇಖನ ಚಿಂತನೆಗೆ ಹಚ್ಚುವಂತಿದೆ.
  ಧನ್ಯವಾದಗಳು ಮೋಹನ್ ಸರ್ ಗೆ.
  ಸುನಿಲ್.

  ಪ್ರತಿಕ್ರಿಯೆ
 8. Balu

  ಈ ತರದ ಕಾಮೆ೦ಟ್ ಗಳು ಎಲ್ಲರಿಗೂ ಬರುತ್ತವೆ, ಆದರೆ ಅದನ್ನು ಬ್ಲಾಗ್ ನ ವಾರಸು ದಾರರು ಪ್ರಕಟಿಸ ಬಾರದು ಅಷ್ಟೆ. ಒಬ್ಬ ಬೈದು ಬರೆದ್ರೆ, ಇನ್ನೊಬ್ಬ ಅವನಿಗೆ ಬೈದು ಉತ್ತರ ಕೊಡ್ತಾನೆ.
  ಮು೦ದೆ ಅಲ್ಲಿ ಉಳಿಯೊದು ಜಗಳ, ವಿರಸ ಅಷ್ಟೆ.

  ಮೀಡಿಯ ಪತ್ರ ಕರ್ತರಿಗೆ ಇ ಅನುಭವ ಜಾಸ್ತಿ ಅನ್ಸುತ್ತೆ.

  ಪ್ರತಿಕ್ರಿಯೆ
 9. Berlinder

  ಮಾನ್ಯ ಮೋಹನ್,
  ನಲುಮೆಯ ನಮಸ್ಕಾರ.

  ’ಬ್ಲಾಗ್’ ಲೋಕದ ಬರಹಗಳ ಬಗ್ಗೆ ನಿಮ್ಮ ಹೂಳೆತ್ತುವ ಪ್ರಯತ್ನದ ಲೇಖನ ಅಚಲ ಆಲೋಚನಾ ಮನೋಭಾವವನ್ನು ಕುಲುಕಿ ದೀರ್ಗವಾಗಿ ಚಿಂತಿಸಲು ಪ್ರೇರೇಪಣೆ ಮಾಡಿದ ಕಾರಣ ಒಂದೆರಡು ಮಾತುಗಳನ್ನು ಬರೆಯಲು ಕೈಗೊಂಡ ಯತ್ನವಿದು.
  *
  ನಿಮ್ಮ ಲೇಕನದಲ್ಲಿ ನಿವು ತುಂಬಿರುವ ಅಭಿಪ್ರಾಯಗಳು ಸಕಾಲಿಕವಾಗಿ ವಾಸ್ತವ ಸಂಗತಿಯಾದ ಪರಿಸ್ಥಿತಿ. ಆಲ್ಲಿ ಯಾರು ಬೇಕಾದರೂ ಏನೆಲ್ಲಾ ಟೀಕೆಗಳನ್ನು ಬರೆಯಬಹುದು. ಅದು ಸುಸ್ಥಿತಿಯ ಸ್ವಸ್ಥತೆಯುಳ್ಳ ಮಹಾ ಪ್ರಜಾಪ್ರಭುತ್ವದಲ್ಲಿ ಒಂದು ಒಳ್ಳೆಯ ಸಂಗತಿ ನಿಜವಾಗಿ. ಆದರೆ …… ಆ ’ಬ್ಲೊಗ್’ಗಳಲ್ಲಿ ಮುಕ್ಕಾಲು ಬ್ಲಾಗ್-ಟೀಕೆ-ಟಿಪ್ಪಣಿ-ಲೇಖಕರು ಬರೆಯುವ ತಿಳಿಸುವ ಅಭಿಪ್ರಾಯಗಳು ಸತ್ವವಿಲ್ಲದ, ತರ್ಕವಿಲ್ಲದ ಸಮಯೋಚಿತವಲ್ಲದ ಸರಳಭಾವದ ಉಪಯುಕ್ತವಲ್ಲದ ಮೊದಲಾದ ಹಣ್ಣಾಗದ ಹುಳಿ ಕಾಯಿಗಳಂತೆ ಅನಿಸಿ ಓದಲು ನೀರಸವಾಗಿ ಬೇಸರಿಸುತ್ತವೆ. ಅಲ್ಲಿ ಓದಾಡುವಾಗ ಅನಿಸುವುದು ದೊಡ್ಡಿಕೊಳದ ಕೆಸರ ಕೊಳಕು ನೀರಲ್ಲಿ ಈಜಾಡುವ ಪ್ರಯತ್ನದಂತೆ. ಅಲ್ಲಿ ಹಗಲೆಲ್ಲ ಅಸ್ಪಷ್ಟ ನಿರ್ದಿಷ್ಟವಿಲ್ಲದ ಅಲ್ಲಿಂದಿಲ್ಲಿಗೆ ನೆಗೆಯುವ ಓಡಾಟದ ಒಂದೆಡೆಯೂ ನೇರವಾದ ಮಹಾರಸ್ತೆಯಿಲ್ಲದ ತಟಕ್ಕನೆ ದಾರಿಮುಗಿದು ಹಿಂತಿರುಗಿ ನೇರವಾಗಿ ಮೂಲಸ್ಥಾನ ಸುಲಭವಾಗಿ ಸೇರಲು ಕಷ್ಟವಾಗಿ ಅನಿರೀಕ್ಷಿತ ಪುಟಗಳನ್ನು ತಲುಪಿ ತಬ್ಬಲಿಯಂತೆ ಪರಜಾಗದಲ್ಲಿ ನಿಲ್ಲುವಂತೆ ಆಗಿರುತ್ತದೆ. ಈ ನನ್ನ ಮಾತುಗಳು ಉತ್ಪ್ರೇಕ್ಷಿಸಿದಂತೆ ಅನಿಸಿದರೆ ಅದು ವಾಸ್ತವಸ್ಥಿತಿಗೆ ದೂರವಾಗದ ಮಾತು, ನಿಜಾಂಶ.

  ಪ್ರಿಯ ಮೋಹನ್, ನಿಮ್ಮ ಲೇಖನದ ಭಾಷೆಯ ವೈಕರಿ ತಿಳಿಸುವುದು: ನಿಮ್ಮ ಕನ್ನಡ ಪಾಂಡಿತ್ಯ, ಲೇಖನ ಶೈಲಿ, ಲೇಖನರಚನೆಯ ಸೊಗಸು ಕನ್ನಡನುಡಿ ಸಂಪತ್ತು ಅವೆಲ್ಲ ತೋರ್ಪಡಿಸುತ್ತವೆ – ನಿಮ್ಮ ಕನ್ನಡಪ್ರೇಮ. ನಿಮಗೂ ಅರಿವಾಗಿದೆ ಕನ್ನಡ ಭಾಷೆ ಎಲ್ಲೆಡೆಯೂ ಅನವಶ್ಯ ಅನೇಕಾವರ್ತಿ ಅನುಚಿತವಾಗಿ ಆಚಾರಹೀನವಾಗಿ ಅವನತಿಯ ಪೆಟ್ಟು ತಿನ್ನುತ್ತಿದೆ. ಅಂಥಾ ದುರಪರಿಸ್ಥಿತಿ ಇನ್ನಾವದೇಶದಲ್ಲೂ ಇಲ್ಲ. ಯಾವ ಪರದೇಶಿಯೂ ಕನ್ನಡದೇಶದಲ್ಲಿ ಕನ್ನಡಾಭಾಷೆಅಯ ಗಂಧವಿಲ್ಲದಿದ್ದರೂ ಆರಾಮವಾಗಿ ಉದ್ಯೋಗಿಯಾಗಿ ಜೀವಿಸಬಹುದು. ಇನ್ನಾವದೇಶದಲ್ಲೂ ಅದು ಸಾಧ್ಯವಿಲ್ಲ. ಉದಾಹರಣೆಗೆ ಇಂಗ್ಲೆಂಡ್ ಅಮೇರಿಕ ದೇಶಗಳಿಗೆ ಹೋಗಲು ಇಂಗ್ಲಿಷ್ ಭಾಷೆ ಬರೆಯಲು ಓದಲು ಮಾತಾಡಲು ತಿಳಿದಿರಬೇಕು. ಮೊದಲಾಗಿ.

  ನಿಮ್ಮ ಲೇಖನದಲ್ಲಿ ಎಲ್ಲೆಡೆ ’ಕಾಮೆಂಟ್’ ಮಾತು! ಆ ಪರಮಾತಿಗೆ ಕನ್ನಡದಲ್ಲಿ ’ಟೀಕೆ, ಟಿಪ್ಪಣಿ, ಕಿರುವಿಮರ್ಷೆ, ಅಭಿಪ್ರಾಯ, ಮೊದಲಾದ ಮಾತುಗಳುಂಟು. ಈ ಕನ್ನಡ ಮಾತುಗಳಲ್ಲಿ ’ಕಾಮೆಂಟ್’ ಮಾತಿನ ಭಾವರ್ಥವಿಲ್ಲವೆ? ಶತಮಾನದ ಹಿಂದೆ ಇಂಗ್ಲಿಷ್ ಭಾರತಕ್ಕೆ ಬರುವ ಮೊದಲು ಭಾರ‍ತೀಯ ಪಂಡಿತರು ಲೇಖಕರು ವಿಮರ್ಷೆ ಟೀಕೆ ಟಿಪ್ಪಣಿಗಳನ್ನು ಎರಡುಮೂರು ಸಾವಿರ ವರ್ಷಗಳಿಂದಲೂ ಬರೆಯುತ್ತಿದ್ದರು. ಅವರೆಲ್ಲರಿಗೆ ಪರಭಾಷೆಯ ’ಕಾಮೆಂಟ್’ ಮಾತಿನ ಉಪಯೋಗ ಬೇಕಾಗಿರಲಿಲ್ಲ. ಸಂಸ್ಕೃತ ಭಾಷೆಯ ಭಾವ ಸಂಪತ್ತು ಲೋಕಪ್ರಸಿದ್ಧವಾಗಿತ್ತು ವಿಶ್ವಸಾಹಿತ್ಯ ಲೋಕದಲ್ಲಿ. ನಿಮ್ಮಂತ ಭಾಷಾ ಮೇಧವಿಗಳು ಇತರ ಕನ್ನಡ ಲೇಖಕರಿಗೆ ಕನ್ನಡ ಭಾಷೆಯ ಪೋಷಣೆಯ ಅವಶ್ಯಕತೆ ಮನದಟ್ಟಿಸದಿರೆ ಇನ್ನಾರು ಮಾಡಲು ಸಾದ್ಯ? ಹಾಗೆಯೇ ’ಬ್ಲೊಗ್’ ಪರಮಾತಿಗೆ ಕನ್ನಡದಲ್ಲಿ ಒಂದು ’ನುಡಿ’ಯನ್ನು ಸೃಷ್ಟಿಸಿ ಕನ್ನಡ ಲೇಖನಗಳಲ್ಲಿ ಬಳಸಿ ಬೆಳಗಿದರೆ ತಪ್ಪೇನು. ಆ ಪರಮಾತು ಒಂಡು ದೇಶದ ನಾಮವಲ್ಲ. ಅದೊಂದು ಭಾವನೆಯ ಮಾತು ಇತರ ಲಕ್ಷಾಂತರ ಮಾತುಗಳಂತೆ. ಇಂಗ್ಲಿಷ್ ಜನ ಭಾರತದಲ್ಲಿ ಸಾವಿರಾರು ಹೆಸರುಗಳನ್ನು ತಮ್ಮ ನಾಲಿಗೆಗೆ ತಕ್ಕಂತೆ ಬದಲಾಯಿಸಿದ್ದರು. ಬೆಂದಕಾಳೂರೊ ಅಥವ ಬೆಂಗಳೂರು ನ್ನು ಬನ್ಗಲೊರೆ ಮಾಡಿದ್ದರು. ಹಾಗೆಯೇ ’ಬ್ಲೊಗ್’ನ್ನೂ ನಮ್ಮ ಭಾಷೆಗೆ ತಕ್ಕಂತೆ ಪರಿವರ್ತಿಸಬಾರದೇಕೆ?

  ಇದೊಂದು ಕೇವಲ ಮಿತ್ರಭಾವನೆಯಲ್ಲಿ ಅಲೋಚಿಸಿ ಪರ್ಯಾಲೋಚಿಸಿ ಬರೆದ ವಿನಯ ಅಭಿಪ್ರಾಯ ಮಾತ್ರ.
  ಕೇವಲ ’ನಾನ್ ಆಬ್ಲಿಗೇಟರಿ ಕಾಮೆಂಟ್’ – ಮಾತನಾಡಿದಂತೆ ನಾನು ಮತ್ತು ನನ್ನ ಮಿತ್ರ!
  ವಿಷಾದಿಸುವಂತ ವಿಷಯ ಬರೆದಿಲ್ಲ ಅನಿಸುವ ಖಚಿತ ಭಾವನೆಯಲ್ಲಿ.
  ಆದರೂ ನನ್ನ ಪ್ರಜ್ಞೆಗೆ ಅರಿಯದೆ ದೋಷವೇನಾದರು ಹರಿದು ಬಂದು ಸೇರಿದ್ದರೆ ವಿಶಾಲ ಹೃದಯಿಯಾಗಿ ಕ್ಷಮಿಸಿ.
  ನಿಮ್ಮ ವಿಶ್ವಾಸಿ
  ವಿಜಯಶೀಲ, ಬೆರ್ಲಿನ್, ೧೯.೦೮.೨೦೦೯
  *

  ಪ್ರತಿಕ್ರಿಯೆ
 10. uniquesupri

  ಬ್ಲಾಗ್ ಎನ್ನುವುದು ಒಂದು ಸಂಸ್ಥೆಯಾಗಿಲ್ಲವಾದ್ದರಿಂದ ಯಾವ ಚರ್ಚೆಯನ್ನೂ ನಾವು ಆ ದೃಷ್ಟಿಕೋನದಿಂದ ಶುರು ಮಾಡಿದರೆ ಅದು ಅನುಪಯುಕ್ತ ಅನ್ನಿಸುತ್ತದೆ. ಬ್ಲಾಗ್ ಅಂಗಳ, ಬ್ಲಾಗ್ ಮಂಡಳ, ಬ್ಲಾಗಿಗರ ಕೂಟ ಎಂಬುದೆಲ್ಲಾ ಮುಖವಿಲ್ಲದ ಬ್ಲಾಗಿಂಗಿಗೆ ಒಂದು ಸಮುದಾಯದ, ಒಂದು ಗುಂಪಿನ, ಕುಟುಂಬದ ಮುಖ ಕೊಡುವ ಪ್ರಯತ್ನಗಳು ನಿರರ್ಥಕ.

  ಬ್ಲಾಗಿಂಗಿನಲ್ಲಿ ಜವಾಬ್ದಾರಿಯಿಲ್ಲದ ಸ್ವಾತಂತ್ರ್ಯವಿದೆ ಎಂದು ಭಾವಿಸುವುದು ನಮ್ಮ ಮೊದಲನೆಯ ತಪ್ಪು. ಯಾರು ಏನು ಬೇಕಾದರೂ ಬರೆಯಬಹುದು ಎನ್ನುವುದು ನಮಗೆ ನಮ್ಮ ಸ್ವಾತಂತ್ರ್ಯವಾಗಿ ಕಂಡರೆ ಕಮೆಂಟಿಗರಿಗೂ ಅದು ತಮ್ಮ ಸ್ವಾತಂತ್ರ್ಯವಾಗಿ ಕಾಣುತ್ತೆ. ವರ್ಡ್ ಪ್ರೆಸ್, ಬ್ಲಾಗ್ ಸ್ಪಾಟ್ ಮುಂತಾದವುಗಳಲ್ಲಿ ಪರಿಚಿತರಿಗಾಗಿ ಮಾತ್ರ ಬ್ಲಾಗ್ ಬರಹ ಓದಲು ಅವಕಾಶ ಮಾಡಿಕೊಡುವ, ನಾವು ಅನುಮತಿಸಿದ ಇ-ಮೇಲ್ ಐಡಿಗಳ ಓದುಗರು ಮಾತ್ರ ಪ್ರತಿಕ್ರಿಯೆ ನೀಡಬಹುದಾದ ವ್ಯವಸ್ಥೆಗಳಿವೆ. ಈ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೆ vulnerable ಆಗಿ ವರ್ತಿಸಿ ಆ ಮೇಲೆ ದಾಳಿಯಾಯಿತು ಎಂದು ದೂರುವುದು ಖಂಡಿತಾ ಬುದ್ಧಿವಂತಿಕೆಯಲ್ಲ.

  ಪ್ರತಿಕ್ರಿಯೆ
  • ಟೀನಾ

   ಮಾನ್ಯ ವಿಜಯಶೀಲ ಅವರೆ,
   ನಿಮ್ಮ ಕಮೆಂಟು ಮೋಹನ್ ಅವರನ್ನ ಸಂಬೋಧಿಸಿ ಬರೆದುದಾಗಿದ್ದು ಆದರೂ ಕೆಲವೊಮ್ದು ಮಾತು ಹೇಳುವ ಮನಸ್ಸಾದುದಕ್ಕೆ ಈ ಪ್ರತಿಕ್ರಿಯೆ.ಕ್ಷಮಿಸಿರಿ.

   ತಮಗೆ ಕನ್ನಡ ಬ್ಲಾಗುಗಳು ಸತ್ವವಿಲ್ಲದ ಹೀಚುಗಾಯಿಗಳಂತೆ ತೋರಿಬಂದಿವೆ. ನಮ್ಮ ಮಟ್ಟಿಗೆ ಇವತ್ತು ದಿನೇದಿನೇ ಬೆಳೆಯುತ್ತ ಇರುವ ಕನ್ನಡ ಬ್ಲಾಗುಗಳ ಸಂಖ್ಯೆ ಒಂದು ಪುಟ್ಟ ಭಾಷಾಕ್ರಾಂತಿ. ಇಲ್ಲಿ ಪ್ರಕಾಂಡ ಪಂಡಿತರಿಲ್ಲ, ಇಲ್ಲಿ ಉನ್ನತಮಟ್ಟದ ಚರ್ಚೆ ನಡೆಯುತ್ತ ಇಲ್ಲ – ನಿಜವೇನೆ!! ಯಾಕೆ ಬಲ್ಲಿರಾ? ಹೆಚ್ಚಿನ ಮಟ್ಟಿಗಿನ ಕನ್ನಡ ಬ್ಲಾಗರುಗಳು ಮಾಮೂಲಿ ಶ್ರೀಸಾಮಾನ್ಯರು. ಕನ್ನಡ ಸಾಫ್ಟ್ ವೇರುಗಳ ಬಳಕೆಯನ್ನ ಆಸ್ಥೆಯಿಂದ ತಿಳಿದುಕೊಂಡು ಪ್ರಪಂಚದ ಮೂಲೆಮೂಲೆಗಳಿಂದ ತಮ್ಮ ಭಾಷೆಯ ಘಮಲನ್ನ ಜೀವಂತವಾಗಿಡೋಕೆ ತಮ್ಮ ಅಳಿಲುಸೇವೆ ಸಲ್ಲಿಸುತ್ತ ಇರುವವರು. ಇಂಥವರಿಗೆ ತರ್ಕ,ತತ್ವ, ಪಾಂಡಿತ್ಯಗಳ ಅವಶ್ಯಕತೆ ತೋರಿಬರದೇ ಇರುವದು ಆಶ್ಚರ್ಯವಲ್ಲವೆ? ಕನ್ನಡ ಬ್ಲಾಗ್ ಲೋಕ ಈಗಿನ್ನೂ ಅಂಬೆಗಾಲಿಡುತ್ತ ಇದೆ, ಆಗಲೆ ಎದ್ದು ವಿಶ್ವ ಅಥ್ಲೆಟಿಕ್ಸಿನಲ್ಲಿ ಬಾಗವಹಿಸುವ ಮಟ್ಟಿಗೆ ಯಾಕಿಲ್ಲ ಅಂತ ಬೇಸರಿಸುತ್ತಿದ್ದಿರಲ್ಲ?
   ಎರಡನೇಯದಾಗಿ, ಪ್ರಪಂಚದ ಯಾವುದೇ ಭಾಷೆ ಕೂಡ ಹಲವಾರು ಕಾಲಘಟ್ಟಗಳ
   ವೈವಿಧ್ಯ, ಹಳತು-ಹೊಸತನಗಳು ಮೇಳೈಸಿದ ಪರಿಣಾಮವಾಗಿ ಬೆಳೆದುಬಂದಿರುವದು.
   ನಮಗೆ ಅರ್ಥವಾಗುವದು ಭಾಷೆ. ಹೀಗಿರುವಾಗ ಬ್ಲಾಗಿಗರೆಲ್ಲರಿಗೂ ಅರ್ಥವಾಗುವ, ಎಲ್ಲೆಡೆ ಬಳಕೆಯಲ್ಲಿರುವ ’ಕಮೆಂಟ್’ ಪದದ ಬಳಕೆಯ ಬಗ್ಗೆಗಿನ ತಮ್ಮ ಆರೋಪ ದುರಭಿಮಾನ ಅನ್ನಿಸಿತು.
   ಹಾಗೆ ನೋಡಿದರೆ ಕನ್ನಡ ಭಾಷೆಯ ಮೂಲಪದಗಳನ್ನೆ ನಾವು ಬಳಸಬೇಕೆನ್ನುವದಾದರೆ ಹಳಗನ್ನಡವನ್ನೇಕೆ ಬಳಸಬಾರದು ನೀವು? ಅದಕ್ಕಿನಾ ಹಿಂದೆ ಏನಾದರು ಇದ್ದೀತು ಅಂದರೆ ಯಾವುದೋ ಮೂಲದ್ರಾವಿಡ ಬಾಷೆಯನ್ನೆ ಬಳಸಬಹುದಲ್ಲ? ಯಾಕೆ ಬಳಸುತ್ತಿಲ್ಲ ನಾವುನೀವು? ಹಾಗಾದರೆ ವಿದೇಶಕ್ಕೆ ಹೋಗುವವರು ಮಾತ್ರ ಆಂಗ್ಲ (ತಾವು ’ಇಂಗ್ಲೀಷ್’ ಅಂದಿದೀರ!!)ಭಾಷೆಯನ್ನ ಕಲಿಯಬೇಕು ಅಂತಾಯಿತು.
   ನಿಮ್ಮ ಭಾಷೆ ಹೀಗೇ ಇರಬೇಕು ಹಾಗೇ ಬಳಸಬೇಕು ಅನ್ನುವ ವಾದಗಳು ನಾವು ಎಲ್ಲವನ್ನ ತೊರೆದು ಶಿಲಾಯುಗದ ಜೀವನಕ್ರಮಕ್ಕೆ ತಿರುಗಿ ಹೋಗಬೇಕು ಅನ್ನುವಷ್ಟು ಹಾಸ್ಯಾಸ್ಪದ. ಮಹಾರಾಷ್ಟ್ರದಲ್ಲಿ ಟಾಕ್ರೆಯ ಭಾಷಾ ಥಿಯರಿಗೆ ಉತ್ತೇಜನ ಕೊಟ್ಟಿದ್ದರಿಂದ ಏನಾಗಿದೆ ಅನ್ನುವದು ಆಗಲೆ ತಿಳಿದುಬಂದಿದೆ. ನಮ್ಮ ಭಾಷೆ ನಮ್ಮ ಹಾಗೇ ಎಗ್ಗಿಲ್ಲದೆ ಎಲ್ಲವನ್ನೂ ಒಳಗೊಂಡು ಬೆಳೆಯುತ್ತಿದೆ. ಹಾಗೇ ಇರಲಿ, ಏನಂತೀರಿ?
   ಬ್ಲಾಗುಗಳು ಭಾಷೆಗೆ ತಕ್ಕಂತೆ ಇರಬೇಕೋ, ಭಾಷೆ ಬ್ಲಾಗಿಗೆ ತಕ್ಕಂತೆ ಇರಬೇಕೊ ಅನ್ನುವ ಪ್ರಶ್ನೆಯನ್ನ ಮೀರಿ ಕನ್ನಡ ಬ್ಲಾಗುಗಳು ಬೆಳೆದಿವೆ, ಆಗಿರುವುದರ ಬಗ್ಗೆ ಇಲ್ಲಿ ಚರ್ಚೆ ನಡೆಯುತ್ತಿದೆ. ದಯವಿಟ್ಟು ರೆಸ್ಪಾನ್ಸಿಬಲ್ ಕಮೆಂಟಿಂಗಿನ ಬಗ್ಗೆ ಚರ್ಚೆ ಮಾಡಿ.
   ನಮಸ್ಕಾರ.
   ಟೀನಾ.

   ಪ್ರತಿಕ್ರಿಯೆ

Trackbacks/Pingbacks

 1. ಸೈಬರ್ ಪೋಲೀಸರಿಲ್ಲದೇ ಹೋದರೆ ಅಸಾಧ್ಯ… « ಅವಧಿ - [...] ಲೋಕದ ಬೇಜವಾಬ್ದಾರಿ ಕಾಮೆಂಟ್ ಗಳ ಬಗ್ಗೆ ಪ್ರಕಟಿಸಿದ ಆತಂಕಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಗಂಭೀರ [...]
 2. ಚರ್ಚೆ ಶುರುವಾಗಿರೋದು ಬಲೇ ಒಳ್ಳೇದು… « ಅವಧಿ - [...] ಲೋಕದ ಬೇಜವಾಬ್ದಾರಿ ಕಾಮೆಂಟ್ ಗಳ ಬಗ್ಗೆ ಪ್ರಕಟಿಸಿದ ಆತಂಕಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಗಂಭೀರ [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: