ಭವದ ಕೇಡಿನ ಕಥೆಯನ್ನು ಕುರಿತು…

bhava.gif

ಸ್ ಸುರೇಂದ್ರನಾಥ್ ಅವರ “ಎನ್ನ ಭವದ ಕೇಡು” ಕಾಯುವಿಕೆಯಲ್ಲೇ ಕದಲುವ, ಕನಲುವ ಕಥೆ.

ಈ ಕಥೆಯೊಳಗೆ ಪ್ರವೇಶಿಸುತ್ತಿದ್ದಂತೆ ಗಾಢವಾಗಿ ಆವರಿಸಿಕೊಳ್ಳುವ ಪಾತ್ರ ಮಾಮಿಯದು. ಆದರೆ, ಮಾಮಿಯ ಬದಲಾಗಿ ಸರಸ್ವತಿಯನ್ನು ಕೇಂದ್ರಪಾತ್ರವಾಗಿ ನೋಡುತ್ತ ಮುಂದುವರಿದರೆ ಹೇಗಿರುತ್ತದೆ ಎಂಬ ಕುತೂಹಲದೊಂದಿಗೆ ಈ ಕಥನದ ಹೆಜ್ಜೆ ಜಾಡನ್ನು ಕಂಡುಕೊಳ್ಳಬೇಕೆನ್ನಿಸುತ್ತದೆ. ಇಲ್ಲಿ ಮಾಮಿಯೇ ಎಲ್ಲವೂ ಅಲ್ಲ. ಅವಳಿಗೆ ಸಾವಿನ ವಾಸನೆ ಗೊತ್ತಾಗುತ್ತದೆ. ಆದರೆ ಅಡುಗೆ ಮನೆಯ ವಾಸನೆಯನ್ನೇ ಹಿಡಿದುಕೊಂಡು ಹುಟ್ಟಿ, ಅದರ ಸತತ ಸಹವಾಸದಲ್ಲೇ ಬೆಳೆದ ಸರಸ್ವತಿಯ ಜೀವನ್ಮುಖೀ ಗುಣ ನೇರವಾಗಿ ಮಾಮಿಗೆ ಕಡೆಯತನಕವೂ ಎದುರಾಗಿ ನಿಲ್ಲುವಂಥದ್ದು. ಸಾವಿನ ವಾಸನೆ ಹಿಡಿದು ಯಾವ ಕ್ಷಣವೆಂದರೆ ಆ ಕ್ಷಣ ಹೊರಟುಬಿಡುವ ಮಾಮಿ, ಒಂದು ಹೊಸ ಜೀವ ಈ ಜಗತ್ತಿಗೆ ಬರುವಾಗ ಮಾತ್ರ ಉಪಸ್ಥಿತಳಿರುವುದಿಲ್ಲ ಎಂಬುದನ್ನು ಗಮನಿಸಬೇಕು. ಕಾದಂಬರಿಯೊಳಗಿನ ಇಂಥ ಎರಡು ಸಂದರ್ಭಗಳನ್ನು ನೋಡುವುದಾದರೆ, ಮೊದಲನೆಯದು, ರಾಧೆ ಹೆರುವ ಸಮಯದಲ್ಲಿನ ಮಾಮಿಯ ವಿಮುಖತೆ. ಆಗ ಹೊಸ ಜೀವವಾಗಿ ಜಗತ್ತಿಗೆ ಸರಸ್ವತಿಯ ಪ್ರವೇಶವಾಗುತ್ತದೆ. ಎರಡನೆಯದು, ಯಮುನೆಯ ಹೆರಿಗೆಯ ವೇಳೆ. ಈಗಲೂ ಮಾಮಿ ಇಲ್ಲ. ಏನೆಂದರೆ ಏನೂ ಗೊತ್ತಿಲ್ಲದ ಸರಸ್ವತಿಯೊಬ್ಬಳೇ ನಿಂತು ಹೆರಿಗೆ ಮಾಡಿಸುತ್ತಾಳೆ. ಅವಳ ಪವಾಡ ಸದೃಶ ಚಾಕಚಕ್ಯತೆಗೆ ಸ್ವತಃ ವೈದ್ಯನಾಗಿರುವ ಅಜಿತನೇ ಬೆರಗಾಗಿ ಹೋಗುತ್ತಾನೆ. ಹೆಜ್ಜೆ ಹೆಜ್ಜೆಗೂ ತನಗೆ ವಿಷ ಹಾಕಲು ಹವಣಿಸುತ್ತಿದ್ದಾರೆ ಎಂದು ಆತಂಕಗೊಳ್ಳುವ ಮಾಮಿ ಸಾವಿನ ಭಯದಲ್ಲೇ ಬದುಕುತ್ತಿದ್ದಾಳೇನೋ ಎನ್ನಿಸುತ್ತದೆ. ಅದೇ ಹೊತ್ತಿಗೆ, ತನ್ನ ಆಕಾಂಕ್ಷೆಗಳ ಸಮೀಪ ಹೋಗುವುದಕ್ಕೆ ಸಾವಿನ ದಾರಿಯೇ ಆದರೂ ಸರಿ, ಅದನ್ನು ಬಳಸುವ ಜೀವನತೀವ್ರತೆ ಸರಸ್ವತಿಯದ್ದಾಗಿದೆ. ಮಗು ಹುಟ್ಟಿದರೆ ತಾನು ಸಾಯುತ್ತೇನೆ ಎಂಬ ಭಯದಿಂದಲೇ ಅದಕ್ಕೆ ವಿಮುಖಳಾಗುವ ಮಾಮಿ, ಇತ್ತ ಹೊಸ ಜೀವವನ್ನೂ ಸ್ವಾಗತಿಸಲಾರದೆ, ಅತ್ತ ಸಾವನ್ನೂ ದಿಟ್ಟತನದಿಂದ ಎದುರಿಸಲಾಗದೆ, ವಿಲಕ್ಷಣ ಅತಂತ್ರ ಸ್ಥಿತಿಯಲ್ಲಿ ಬೇಯುತ್ತಾಳೆ. ಸತ್ತೇಹೋಗಿದ್ದಾಳೆ ಎಂದೇ ಎಲ್ಲರೂ ಭಾವಿಸುವ ಹಾಗಿರುವ ಮರಣಮುಖಿ ಭಂಗಿಯಲ್ಲಿ ಇನ್ನೂ ಸಾಯದೇ ಉಳಿದಿರುವವಳು ಅವಳು. ಮಂತ್ರದಂಡವೇನೋ ಎಂಬಂತೆ ಕಾಣಿಸುವ ಅವಳ ಕೈಯಲ್ಲಿನ ಕೋಲೂ ಅಷ್ಟೆ. ಸರಸ್ವತಿಯನ್ನು ಜೀವ ಹೋಗುವ ಹಾಗೆ ಬಡಿಯಬಲ್ಲ ಆ ಕೋಲಿಗೆ, ಕೆಟ್ಟ ಮನಸ್ಸಿನವನಾದ, ವಿಷಸರ್ಪದಂತಿರುವ ಚಿನ್ನಸ್ವಾಮಿಯನ್ನು ಬಡಿದರೂ ಅವನ ದುಷ್ಟತನವನ್ನು ದಮನಗೊಳಿಸುವ ಶಕ್ತಿಯಿಲ್ಲ. ಹೀಗೆ ಇಡೀ ಕಥೆಯೇ ಜೀವನ್ಮರಣ ಹೋರಾಟ; ಸರಸ್ವತಿ ಮತ್ತು ಮಾಮಿಯ ಮಧ್ಯದ ಸಂಘರ್ಷ.

ಇನ್ನೂ ಒಂದು ಕಾರಣಕ್ಕಾಗಿ ಮಾಮಿಗಿಂತ ಸರಸ್ವತಿ ಮುಖ್ಯಳೆನ್ನಿಸುತ್ತಾಳೆ. ಅದು ಅವಳ ಕಣ್ಣೀರಿನ ಕಾರಣ. ಈ ಕಣ್ಣೀರಿನ ಮೂಲಕವೇ ಅವಳು ನಮ್ಮ ಮನೆಯ ಹುಡುಗಿಯಂತಾಗಿಬಿಡುತ್ತಾಳೆ. ಸಂಕಟ ಮಾತ್ರವಲ್ಲ, ಪ್ರತಿಭಟನೆಯೂ ಆಗಿ ಹರಿಯುತ್ತದೆ ಅವಳ ಕಣ್ಣೀರು. ಅದು ಮನೆಯನ್ನೆಲ್ಲ ತೋಯಿಸಿ ಹರಿಯುತ್ತ, ಹಿತ್ತಿಲಿನ ಕರಿಬೇವಿನ ಮರಕ್ಕೂ ನೀರುಣಿಸುತ್ತದೆ. ಹೀಗೆ ಯಾತನೆಯ ಪ್ರವಾಹವೊಂದು ಇಲ್ಲಿ ಪ್ರವಹಿಸುತ್ತದೆ.

ಸರಸ್ವತಿ, ಮಾಮಿಯ ಹಾಗೆ ತಾನು ಮೋಹಿಸಿದ್ದವನ ನೆನಪನ್ನು ಪೆಠಾರಿಯೊಳಗೆ ಹೂತಿಟ್ಟು ಕೂತಿರುವವಳಲ್ಲ. ತಾನು ಒಲಿದವನು ಈಗ ತನ್ನವನಲ್ಲ ಎಂದು ಗೊತ್ತಿದ್ದೂ ಮತ್ತೆ ಮತ್ತೆ ಅವನೆಡೆಗೆ ತುಡಿಯುವವಳು, ಅವನಿಗೆ ಸೋಲುವವಳು. ಈ ಸೋಲಿನಲ್ಲೇ ಬದುಕಿನ ಗೆಲುವನ್ನು ಗಳಿಸಿ ನಳನಳಿಸುವವಳು. ಆದರೆ ಮಾಮಿ ಮಾತ್ರ, ಸರಸ್ವತಿಯನ್ನು ಸೋಲಿಸಬೇಕೆಂಬ ಹಠದಲ್ಲೇ ಮತ್ತೆ ಮತ್ತೆ ಹತಾಶೆಯ ಪ್ರವಾಹಕ್ಕೆ ಸಿಕ್ಕು ನಲುಗುವವಳು. ಗೆದ್ದೆನೆಂದುಕೊಂಡ ಮರುಕ್ಷಣದಲ್ಲೇ ಮತ್ತಷ್ಟು ಮುರುಟಿಹೋಗುವವಳು. ಅತ್ತ ಸರಸ್ವತಿ ತನ್ನ ಸ್ಫೋಟಕತೆಯಲ್ಲಿ, ಒಪ್ಪಿಸಿಕೊಳ್ಳುವಿಕೆಯಲ್ಲಿ, ಸ್ವೇಚ್ಛೆ ಎನ್ನಬಹುದಾದರೆ ಅಂಥ ಬಗೆಯಲ್ಲಿ ಸ್ವಪ್ನವನ್ನು ಮೀರುತ್ತ ಹೋದರೆ, ಇತ್ತ ಮಾಮಿ ತಾನೇ ತನಗೊಂದು ದುಃಸ್ವಪ್ನವಾದಳೇ?

ಓದಿ: ಬುಕ್ ಬಝಾರ್

‍ಲೇಖಕರು avadhi

November 26, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This