ಭಾಗೇಶ್ರೀ ನೆನಪಲ್ಲಿ ಕಿ ರಂ

ರೂಟ್ ಬಸ್ ನಲ್ಲಿ ಕ್ಲಾಸ್ ಮಾಡುತ್ತಿದ್ದ ಕಿ ರಂ ಬಾಗೇಶ್ರೀ ಕೀರಂ ಶಿಷ್ಯ ಕೋಟಿಯಲ್ಲಿ ನಾನೂ ಒಬ್ಬಳು ಅಂತ ಹೇಳಿಕೊಳ್ಳುವುದು “ರಾಜ್ ಕುಮಾರ್ ಚಿಕ್ಕಪ್ಪ ನಮ್ಮ ಅತ್ತೆಯ ಪಕ್ಕದ ಮನೆಯಲ್ಲಿ ಇದ್ದರು” ಅಂತ ಯಾವುದೋ ಬಾದರಾಯಣ ಸಂಬಂಧ ಹೇಳಿ ನಮ್ಮ ಕಲ್ಪನೆಯ ಕಿರೀಟಕ್ಕೆ ನಾವೇ ಒಂದು ನವಿಲು ಗರಿ ಸಿಕ್ಕಿಸಿಕೊಂಡ ಹಾಗೆಯೇ. ಕೀರಂ ಯಾರಿಗೆ ಗುರು ಅಲ್ಲ ಹೇಳಿ. ಅವರ ಕ್ಲಾಸಿನಲ್ಲಿ ಕೂತು ಪಾಠ ಕೇಳದ ಅನೇಕರಿಗೆ ಇನ್ಯಾವುದೋ ಪರೋಕ್ಷ ರೀತಿಯಲ್ಲಿ ಇವರು ಪಾಠ ಹೇಳಿದವರೇ. ಕೀರಂ ಸಾವಿನ ಸುದ್ದಿ ಕೇಳಿದಾಗ ನನಗೆ ಅನ್ನಿಸಿದ್ದು ನಾನು ಎಷ್ಟೇ ಬಾದರಾಯಣ ಸಂಬಂಧ ಹುಡುಕಿಕೊಂಡು ಶಿಷ್ಯತ್ವವನ್ನು ಆರೋಪಿಸಿಕೊಂಡರೂ ಅವರಿಂದ ನಿಜವಾದ ಅರ್ಥದಲ್ಲಿ ಏನೂ ಕಲಿಯಲಿಲ್ಲವಲ್ಲ ಅಂತ. ನಾನು ಹೇಳುತ್ತಿರುವುದು ಅವರ ಪಂಪನಿಂದ ಹಿಡಿದು ಪೋಸ್ಟ್ ಮಾಡರ್ನಿಸಂವರೆಗಿನ ಪಾಂಡಿತ್ಯದ ಬಗ್ಗೆಯಷ್ಟೆ ಅಲ್ಲ, ಅವರ ವಿಶಿಷ್ಟ ಸಹಜತೆಯ ಬಗ್ಗೆ ಕೂಡ. ಅವರನ್ನು ಮೊದಲು ನಾನು ಮತ್ತು ನನ್ನ ಗೆಳತಿ ರೇಖ ಕಂಡಿದ್ದು ಬೆಂಗಳೂರು ಯೂನಿವರ್ಸಿಟಿಯ ಕ್ಯಾಂಪಸ್ಸಿನಲ್ಲಿ. ಆಗ ನಮಗೆ ಕೆದರಿದ ತಲೆ, ಮುದುರಿದ ಖಾದಿ ಜುಬ್ಬ ಮತ್ತು ಹೆಗಲಲ್ಲಿ ಜೋಳಿಗೆ ಇರುವವರ ಬಗ್ಗೆಯೆಲ್ಲಾ ತುಂಬಾ ಅನುಮಾನ. ಈ ರೀತಿಯ ವೇಷಧಾರಿಗಳೆಲ್ಲಾ ತಾನು intellectual ಅಂತ ಜಗಜ್ಜಾಹೀರು ಮಾಡಲಿಕ್ಕೆಯೇ ಹೊರಟಿರುತ್ತಾರೆ ಅಂತ. ನಮ್ಮ ಸುತ್ತ ಮುತ್ತ ಇದ್ದ ಅನೇಕರು ಈ ಥರದವರು. ಆದ್ದರಿಂದ ಮೊದಲು ನಾವು ಕೀರಂ ಅವರನ್ನು ನೋಡಿದಾಗ ಅವರನ್ನೂ ಇದೇ ಗುಂಪಿಗೆ ಸೇರಿಸಿಬಿಟ್ಟಿದ್ವಿ. ಕನ್ನಡ ಡಿಪಾರ್ಟುಮೆಂಟಿನ ನಾರಾಯಣಸ್ವಾಮಿ ಮತ್ತು ರಾಮಲಿಂಗಪ್ಪ ”ಪೆದ್ದಂಭಟ್ಟಿಯರೇ, ಇವರು ಹಾಗಲ್ಲ” ಅಂತ ಬುದ್ಧಿ ಹೇಳಿದ ನಂತರವೇ ನಾವು ಇವರು ಸಾಹಿತ್ಯಲೋಕದ ಸ್ಟಾರ್ ಅಂತ starry-eyed ಆಗಿ ನೋಡಲಿಕ್ಕೆ ಶುರು ಮಾಡಿದ್ದು. ನಮಗೆ ಇವರನ್ನು ಕನ್ನಡ ಡಿಪಾರ್ಟುಮೆಂಟಿನ ಹುಡುಗರು ದಯೆ ತೋರಿ ಪರಿಚಯಿಸಿದರೋ ನಾವೇ ಪರಿಚಯ ಮಾಡಿಕೊಂಡೆವೋ ನೆನಪಿಲ್ಲ. ಆದರೆ ನಮ್ಮ ರೂಟ್ ಬಸ್ಸಿನಲ್ಲಿ ಅನೇಕ ಬಾರಿ ಬರುತ್ತಿದ್ದ ಇವರ ಪಕ್ಕ ಏನಾದರೂ ಜಾಗ ಸಿಕ್ಕಿದರೆ ಒಳ್ಳೆ ಕ್ಲಾಸೇ ನಡೆಯುತ್ತಿತ್ತು. ಅವರ ಧಾಟಿ ಯಾವತ್ತೂ ಯಾರೋ ತಮ್ಮಷ್ಟೇ ಪಂಡಿತರ ಜೊತೆ ಮಾತಾಡಿದ ಹಾಗೆ. ಒಂದು ದಿನ ”ನೀವು ಗಾಯಿತ್ರಿ ಸ್ಪಿವಾಕ್ ಓದಿದೀರಾ?” ಅಂತ ಅವರಂದರೆ ನಾವು ಕಣ್ ಕಣ್ ಬಿಟ್ಟು “ಇಲ್ಲ ಸಾರ್” ಅಂದಿದ್ದೆವು. “ಓದಬೇಕ್ರಿ ತುಂಬಾ ಚೆನ್ನಾಗಿ ಬರೀತಾರೆ” ಅಂದಿದ್ದರು. ನಾವು ಕಷ್ಟಪಟ್ಟು ಸಂಪಾದಿಸಿಕೊಂಡು ಓದಿದರೆ ಸುತರಾಂ ಒಂದಕ್ಷರವೂ ತಲೆ ಒಳಗೆ ಇಳಿದಿರಲಿಲ್ಲ ಅನ್ನೋದು ಬೇರೆ ಮಾತು. ಹೀಗೆ ನಮ್ಮದೇ ಡಿಪಾರ್ಟುಮೆಂಟಿನ ಟೀಚರ್ರುಗಳಿಗಿಂತ ಹೆಚ್ಚು ಹೊಸ ಪುಸ್ತಕಗಳ, ಲೇಖಕರ ಹೆಸರುಗಳನ್ನು ನಾವು ಕೀರಂ ಬಾಯಿಂದ ಆ ದಿನಗಳಲ್ಲಿ ಕೇಳಿದ್ವಿ. ಈ ಲೆಕ್ಚರ್ರುಗಳಿಂದ ನಾವು ಎಷ್ಟು ಕಲಿತೆವೋ ಬಿಟ್ಟೆವೋ. ಆದರೆ ಎರಡು ಮುಖ್ಯ ಪಾಠಗಳನ್ನಂತೂ ಕಲಿತೆವು: ಮೊದಲನೆಯದಾಗಿ, ಕೃತಕತೆಯೇ ಇಲ್ಲದೆ ತಮ್ಮಂತೆ ತಾವು ಅನ್ನುವ ಸಹಜ ಭಾವದ ಮಂದಿ ಬುದ್ಧಿಜೀವಿಗಳ ನಡುವೆಯೂ ಇರಲಿಕ್ಕೆ ಸಾಧ್ಯ; ಎರಡನೆಯದಾಗಿ, ಕಾವ್ಯದ ಓರೆಕೋರೆ ಉಬ್ಬುತಗ್ಗುಗಳನ್ನೆಲ್ಲಾ ದುರ್ಬೀನು ಹಿಡಿದು ವಿಮರ್ಷೆ ಮಾಡುವುದೆಂದರೆ ಕಾವ್ಯವನ್ನು ಖುಷಿ ಉಲ್ಲಾಸದೊಂದಿಗೆ ಓದುವುದನ್ನು ಮರೆತುಬಿಡುವುದೆಂದೇನೂ ಅಲ್ಲ. ಕೆದರಿದ ತಲೆ, ಮುದುರಿದ ಖಾದಿ ಜುಬ್ಬ, ಅಗಲ ನಗು, ಸ್ವಲ್ಪ ಒಡಕಲು ದನಿ, ಕಾವ್ಯ ಪ್ರೀತಿ, ಯಾವುದೇ ಮಾತು ಅಥವಾ ಬರಹದಲ್ಲಿ ಉಡಾಫೆ ಗುಣ ಇದೆ ಅನ್ನಿಸಿದಾಗ ಸಟ್ಟನೆ ಬರುತ್ತಿದ್ದ ಕೋಪ… ಹೀಗೆ ಕೀರಂನಲ್ಲಿ ಯಾವುದೂ put on ಅಂತಲೋ stereotypical ಅಂತಲೋ ಯಾವತ್ತೂ ಅನ್ನಿಸಿದ್ದಿಲ್ಲ. ಮತ್ತೆ ಅವರನ್ನು ನೋಡ್ತಾ ಇದ್ದದ್ದು ಸಭೆ ಸಮಾರಂಭಗಳಲ್ಲಿ (ಬೋರು ಹೊಡೆಸದೆ ಭಾಷಣ ಮಾಡುವ ಕಲೆ ಅರಿತ ಕೆಲವೇ ಭಾಷಣಕಾರರಲ್ಲಿ ಕೀರಂ ಒಬ್ಬರು, ಅಲ್ಲವಾ?), typical ಪತ್ರಕರ್ತೆಯಾಗಿ ಬರೆದ Storyಗೆ quoteಗಳನ್ನು ಹುಡುಕಿಕೊಂಡು ಹೊರಟಾಗ. ಬಸವನಗುಡಿಯ ಬಗ್ಗೆ ಅರ್ಜೆಂಟ್ ಆಗಿ ಏನೋ ಕಥೆ ಹೊಸೆಯುತ್ತಿರುವಾಗ ಅವರನ್ನು ಮಾತಾಡಿಸಿದ್ದೆ. ಹಳೆಯ ಬಸವನಗುಡಿ ನೋಡಬೇಕು ಅಂದರೆ ಬೆಳಗ್ಗೆ ೫ ರಿಂದ ೭ ರ ಒಳಗೆ ಗಾಂಧಿಬಜಾರಿಗೆ ಬರಬೇಕ್ರಿ ಅಂತ ಹೇಳಿ ಒಂದಷ್ಟು ಹಳೆ ಕತೆಗಳನ್ನು ಬಿಚ್ಚಿಟ್ಟಿದ್ದರು. ಬೆಂಗಳೂರಿನ ಏರಿಯಾಗಳ ಬಗ್ಗೆಯೂ ಸ್ಥಳಪುರಾಣಗಳನ್ನು ಬರೆಯಬೇಕಲ್ಲವಾ ಅಂದಿದ್ದರು. (ಕೀರಂ ಮತ್ತು ಸ್ಥಳ ಪುರಾಣದ ಬಗ್ಗೆ ರಶೀದ್ ತುಂಬಾ ಚೆಂದ ಬರೆದಿದ್ದಾರೆ). ಮೌಕಿಕ ಪರಂಪರೆಯಲ್ಲಿ ಸಂಪೂರ್ಣ ಸಂಬಿಕೆ ಇರುವ ಕೀರಂ ಇದನ್ನೆಲ್ಲಾ ಬರೆಯುವ ಸಾಧ್ಯತೆಗಳು ಕಡಿಮೆ ಅಂತ ನಾನು, “ಸಾರ್, ನೀವು ಹೇಳಿ ನಾನು ಬರೆದುಕೊಳ್ಳುತ್ತೀನಿ” ಅಂದಿದ್ದೆ. ತಮ್ಮ ಎಂದಿನ generosity ತೋರಿಸಿ ನಕ್ಕು “ಬನ್ನಿ, ಬನ್ನಿ ಮಾತಾಡೋಣ” ಅಂದಿದ್ದರು. Story ಯಿಂದ story ಗೆ ಹಾರುವ ನನ್ನ ಕ್ಷಣಿಕ ಲೊಳಲೊಟ್ಟೆಯ ಲೋಕದಲ್ಲಿ ಈ ಮಾತೆಲ್ಲ ಮರೆತೇ ಹೋಗಿತ್ತು. ಮೊನ್ನೆ ಅಕ್ಷತಾ ಬ್ಲಾಗಿನಲ್ಲಿ ಕೀರಂ ಲಿಪಿಕಾರಳಾಗಬೇಕು ತನಗೆ ಅಂತ ಆಸೆ ಬರೆದಿದ್ದು ಓದಿ ಈ ಚುರುಕು ಹುಡುಗಿ ಮಾಡಿಯೇ ಬಿಡುತ್ತಾಳೆ ಅಂತ ಸ್ವಲ್ಪ ಹೊಟ್ಟೆಕಿಚ್ಚೇ ಆಗಿತ್ತು. ಇನ್ನೊಂದು ಸಾರಿ ಒಂದನೆ ತರಗತಿಯಲ್ಲಿ ಮಕ್ಕಳಿಗೆ ಇಂಗ್ಲಿಷ್ ಕಲಿಸಬೇಕಾ ಅನ್ನುವ ಪ್ರಶ್ನೆ ಬಂದಾಗಲೂ ಮಾಮೂಲಿನಂತೆ ಅವರ quote ಕೇಳಿ ಫೋನ್ ಮಾಡಿದ್ದೆ. ಕನ್ನಡ ಮೇಷ್ಟ್ರು ಅಂದರೆ ಇದಕ್ಕೆ ವಿರೋಧವೇ ಇರಬಹುದು ಎನ್ನುವ ಲೆಕ್ಕಾಚಾರಕ್ಕೆ ವಿರುದ್ಧವಾಗಿ, ಭಾಷಾ ಕಲಿಕೆಯ ಹಿಂದಿನ ರಾಜಕೀಯದ ಬಗ್ಗೆ ಮಾತಾಡಿ, ಇಂಗ್ಲೀಷ್ ಕಲಿಕೆಯನ್ನು ಬೆಂಬಲಿಸಿದ್ದರು. ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಕೀರಂ ರಾಜಕೀಯದ ಬಗ್ಗೆ ಮಾತಾಡುತ್ತಿದ್ದರು. ಇಂದಿನ ಪ್ರಜಾವಾಣಿಯ ಲೇಖನದಲ್ಲಿ ಎಸ್. ಆರ್. ವಿಜಯ ಶಂಕರ್ ಕೀರಂ ಅವರು ಉಡುಪಿಯ ಭಾಷಣದಲ್ಲಿ ರಾಜಕೀಯ ಮತ್ತು ಸಾಹಿತ್ಯದ ಸಂಬಂಧದ ಬಗ್ಗೆ ಆಡಿದ ಮಾತಿನ ಪ್ರಸ್ತಾಪ ಮಾಡಿದ್ದಾರೆ. ಮಾತು ಭಾಷೆಯ ರಾಜಕೀಯದಿಂದ ಹಿಡಿದು ತಮ್ಮ ನೆಚ್ಚೆನ ಕವಿ ಬೇಂದ್ರೆಯವರೆಗೆ ಏನೇ ಇರಬಹುದು. ಒಟ್ಟಾರೆ ಯಾವತ್ತೂ ಕೀರಂ ಹೃದಯದಾಳದಿಂದ ಹುಟ್ಟುವ genuine passion ಇಲ್ಲದೆ, ಸುಮ್ಮನೆ effectಗೆ ಇರಲಿ ಅಂತ ಮಾತಾಡಿದ್ದೇ ಇಲ್ಲವೇನೋ. ಕೊನೆಯಲ್ಲಿ ಬೇಂದ್ರೆಯ ಬಗ್ಗೆ ನಿರರ್ಗಳ ಮಾತಾಡಿ, ಕಾವ್ಯದ ಥೆರಪಿಟಿಕ್ ಗುಣದ ಬಗ್ಗೆ ಹೇಳಿ ಮನೆಗೆ ಹೋದವರು ಮತ್ತೆ ಸುಮ್ಮನೆ ಇಲ್ಲವಾದದ್ದೂ ಕೂಡ ಎಷ್ಟು ಸಹಜ “ಕೀರಂತನ” ಅನ್ನಿಸುವುದಿಲ್ಲವಾ? ಈ ರೀತಿ ಸಹಜತೆಯೇ ಸ್ಥಾಯಿಭಾವವಾದ ಎಷ್ಟು ಮಂದಿ ನಮ್ಮ ಜೀವನದಲ್ಲಿ ನಮಗೆ ಸಿಕ್ಕಿಯಾರು?]]>

‍ಲೇಖಕರು avadhi

August 8, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

2 ಪ್ರತಿಕ್ರಿಯೆಗಳು

  1. usha

    ತುಂಬಾ ಆತ್ಮೀಯ ಬರಹ. ನಾನು ಕೀರಂ ಅವರನ್ನು ನೋಡಿದ್ದು ಮತ್ತು ಅವರ ಮಾತುಗಳನ್ನು ಕೇಳಿದ್ದು ಮಾತ್ರ. ಅವರ ಶಿಷ್ಯೆಯೆನಿಸುವ ಸಂದಭ೯ ಬಂದಿರಲಿಲ್ಲ. ಆದರೆ ಅವರ ಮಾತುಗಳು ಮತ್ತು ಬರಹಗಳು ನನಗೆ ತುಂಬಾ ಕಲಿಸಿವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: