ದೊಡ್ಡಾಟ
-ಡಾ.ಎಸ್.ಬಿ.ಜೋಗುರ
ಸಿಂದಗಿಯೆ೦ಬೋ ಊರಿನ ನಟ್ಟ ನಡುವೆ ಇರೋ ಬಸರೀ ಗಿಡದ ನೆರಳೊಳಗಿರೋ ಶಾಪೂರ ಗುರಪ್ಪನ ಮನಿ ಮುಂದಿನ ಕಟ್ಟಿ0ು ಮೇಲೆ ಹಗಲು ಹರದಿದ್ದೇ ತಡ, ಹಿಂಡಿಂಡಾಗಿ ಓಣಿಯೊಳಗಿನ ಮಂದಿ ಬಂದು ಕುಂತು ಒಂದು ಬೀಡಿನೊ..ಇಲ್ಲಾ ಎಲೀ ಅಡಕಿನೋ..ಜಗಿದು ಮನಿಕಡಿ ನಡದರೆ ಆ ಗುರಪ್ಪ ಮಾತ್ರ ಆ ಕಟ್ಟೀ ಮ್ಯಾಲೇ ಠಿಕಾಣಿ ಹೂಡತಿದ್ದ. ಬೀಡಿ ಸೇದವರಿದ್ರ ಅವರ ಕಡಿಂದ ಬೀಡಿ, ಎಲಿ ಅಡಕಿ ತಿನ್ನವರಿದ್ರ ಎಲಿ ಅಡಕಿ, ದಾರೂ ಕುಡಿಯುವವರಿದ್ರ ಅವರ ಕಡಿಂದ ಒಂದು ಕೊಟ್ಟೆ ದಾರೂ ಅದು ತನ್ನ ಚಾಜಾ ಅನ್ನೂವಂಗ ಇಸಿದುಕೊಳ್ಳುವ ಗುರಪ್ಪ ಅಪ್ಪ ನೆಟ್ಟ ಬಸರೀ ಗಿಡದ ನೆರಳಿಗಂತೂ ಮೂಲ ಆಗಿದ್ದ. ಇಡೀ ಊರ ಮಂದಿ ಅಂವಾ ಶಾಪೂರ ಗುರಪ್ಪ ಅಲ್ಲ ಸೋಮಾರಿ ಗುರಪ್ಪ ಅಂತ ಮಾತಾಡೂದು ಇವನ ಕಿವಿಗಿ ಬಿದ್ದರೂ ಅಂವಾ ತಲಿ ಕೆಡಿಸಿಕೋತಿರಲಿಲ್ಲ. ಗುರಪ್ಪನ ಅಪ್ಪ ಮಾರ್ತಂಡಪ್ಪ ಇಡೀ ಊರಿಗೇ ಬೇಕಾದವನು. ಊರೊಳಗಿನ ತಂಟೆ-ತಕಾರಾರುಗಳನ್ನ ತನ್ನ ಕೆಂಪು ಬಣ್ಣದ ಜರಿ ಪಟಕಾ ಸುತಗೊಂಡು, ಕಟ್ಟಿ ಮ್ಯಾಲ ಕುತಗೊಂಡು ನಿಂತು ಕೇಳವರು ಬರೊಬ್ಬರಿ.. ಬರೊಬ್ಬರಿ.. ಅನ್ನೂವಂಗ ನ್ಯಾಯಾ ಬಗೆಹರಿಸುವವನು. ಕೊಡುಗೈ ದಾನಿ ಅಂತೇ ಹೆಸರಾದ ಮಾರ್ತಂಡಪ್ಪ ಸುಗ್ಗಿಯ ದಿನಗಳಲ್ಲಿ ರಾಶಿ ಮಾಡುವಾಗ ಕೆಳಗಿನ ಕೇರಿ ಜನರೆಲ್ಲಾ ಸಾಲಾಗಿ ಬಂದು ಕಣದ ಸುತ್ತಲೂ ನಿಲ್ಲವರು. ಮಾರ್ತಂಡಪ್ಪ ಎಲ್ಲರಿಗೂ ಮೊರ ತುಂಬಿ ತುಂಬಿ ಜೋಳಾ ಹಾಕವನು. ಆಗ ಎಂಟೆತ್ತಿನ ಒಕ್ಕಲುತನ..ಮನಿ ತುಂಬಾ ಹೈನು. ವಾರಗಟ್ಟಲೆ ಮೀಸಲು ಹಿಡಿದ ಮಜ್ಜಿಗೆ ಇಡೀ ಅರ್ಧ ಊರಿಗೇ ಮಾರ್ತಂಡಪ್ಪನ ಮನಿಯಿಂದ ಹಂಚಿಕಿ ಆಗ್ತಿತ್ತು. ಈ ಮಾರ್ತಂಡಪ್ಪಗ ಇದ್ದದ್ದು ಒಂದೇ ಒಂದು ಗಂಡು ಅವನೇ ಈ ಸೋಮಾರಿ ಗುರಪ್ಪ. ಮನಿ ಮುಂದೇ ಸಾಲಿ ಇದ್ದರೂ ಮಾರ್ತಂಡಪ್ಪ ಮಗ ಗುರಪ್ಪಗ ಓದಸಲಿಲ್ಲ. ಬರೀ ದೇಕರೇಕಿ ಮಾಡಕೊಂಡು ಹೋದ್ರೂ ಸಾಕು ಅನ್ನೂವಂಗ ಆಸ್ತಿ ಮಾಡಿದ್ದ ಮಾರ್ತಂಡಪ್ಪಗ ಈ ಮಗ ಹಿಂಗ ರಿಕಾಮಿ ಆಗ್ತಾನ ಅಂತ ಅನಿಸಿರಲಿಲ್ಲ. ಮಾರ್ತಂಡಪ್ಪ ಸಾಯೂಮಟ ಈ ಗುರಪ್ಪಗ ಯಾವ ಬ್ಯಾನಿನೂ ಇರಲಿಲ್ಲ. ಎಲ್ಲಾ ಕಟಿಬಿಟಿ ಅವರಪ್ಪನೇ ಮಾಡತಿದ್ದ. ಇವನಿಗಿ ಒಂದು ಹೇಳದರ ಎರಡು ಮಾಡತಿದ್ದ. ಒಂದು ಸಾರಿ ಯಕಂಚಿ ಸಿದ್ರಾಮಪ್ಪಗ ಹತ್ತು ಸಾವಿರ ರೂಪಾಯಿ ಕೊಟ್ಟು ಬಾ ಅಂತ ಕಳಿಸಿದರ ಇಂವಾ ಜೋಲು ಮುಖಾ ಹಾಕೊಂಡು ಕಿಸೆ ಪಿಕ್ ಪಾಕೆಟ್ ಆಯಿತು ಅಂತ ತಿರುಗಿಬಂದಿದ್ದ. ಅವತ್ತಿನಿಂದ ಮಾರ್ತಂಡಪ್ಪ ಗುರಪ್ಪನ ಕೈಯಾಗ ದುಡ್ದು ಕೊಡೂದೇ ನಿಲ್ಲಿಸಿದ್ದ. ಇಂಥಾ ಸೋಮಾರಿ ಗುರಪ್ಪಗ ಸಂತಾನ ಭಾಗ್ಯವೇನು ಕಡಿಮೆಯಿರಲಿಲ್ಲ. ದೇವರಿಗೆ ಅರ್ಜಿ ಹಾಕಿದವರಂಗೆ ನಾಲ್ಕು ಗಂಡು,ನಾಲ್ಕು ಹೆಣ್ಣು. ಹೆಂಡತಿ ಈರಮ್ಮ ಸಿಂದಗಿ ತಾಲೂಕಿನ ಕಡೆ ಹಳ್ಳಿಯವಳು. ದುಡಿಲಾಕ ಬಾಳ ಗಟ್ಟೂಳ ಹೆಣಮಗಳು. ಎಂಟೆಕರೆ ಕಸಾ ಒಬಳೇ ತಗದು ಇಡೀ ಊರಿಗೂರೇ ಮಾತಾದವಳು. ಇಂಥಾ ಗಟ್ಟಿಗಿತ್ತಿಗಿ ಬಾಳ ಅಳಸ ಗಂಡ ಸಿಕ್ಕಿದ್ದು ಅಕಿ ತೋಬಾತೋಬಾ ಅನ್ನುವಂಗ ಆಗಿತ್ತು. ಇಂವಾ ಒಂದೇ ಒಂದಿನ ಹೊಲಕ್ಕ ಹೋಗವನಲ್ಲ, ಬರವನಲ್ಲ. ಥೇಟ್ ಇವನಂಥದೇ ಸ್ವಭಾವ ಇರೋ ಭೀಮರಾಯನ ದೋಸ್ತಿ ಮಾಡಿ ಇಡೀ ಹೊತ್ತು ದೇಶಾವರಿ ಮಾತಾಡೋದು, ಹಸಿವಾದರೆ ಊಟ ಮಾಡೊದು ಮತ್ತ ಕಟ್ಟೀ ಮ್ಯಾಲ ಕುಂತು ದೇಶಾವರಿ ಮಾತಾಡೊದು. ಬರೀ ಮಾತು ಬೇಸರಾದರ ಇಬ್ಬರೂ ಒಂದೊಂದು ಬೀಡಿ ಜಗ್ಗೂದು, ಅದೂ ಬೇಸರಾದರ ಬಸರೀ ಗಿಡದ ಕೆಳಗ ಕುತ್ಗೊಂಡು ಹುಲಿ ಕಟ್ಟಿ ಆಡೂದು. ಭೀಮರಾಯ ಕುರಬರ ಲಕ್ಕಪ್ಪನ ಮಗ. ಲಕ್ಕಪ್ಪ ತನ್ನ ಮಗನ್ನ ತಕ್ಕ ಮಟ್ಟಿಗೆ ಓದಸಿದ್ದ ಹೀಂಗಾಗಿ ಭೀಮರಾಯಗ ಓದಲಿಕ್ಕ ಬರೀಲಿಕ್ಕ ಬರತಿತ್ತು. ಈ ಭೀಮರಾಯನ ಓಣಿಯೊಳಗ ಬೀರಪ್ಪನ ಗುಡಿ ಮುಂದ ಬರೋ ಗೌರಿ ಹುಣ್ಣವಿ ಮುಂದ ‘ಶುಂಭ ನಿಶುಂಭ’ ಅನ್ನೋ ಬಯಲಾಟ ಆಡೂವದರಲ್ಲಿದ್ದರು. ಆ ಎಲ್ಲಾ ಪಾತ್ರಧಾರಿಗಳಿಗೂ ಡೈಲಾಗ್ ಹೇಳುವವನೇ ಭೀಮರಾಯ ಆಗಿದ್ದ. ಗುರಪ್ಪಗ ಬ0ುಲಾಟದೊಳಗ ಸಾರಥಿ ಆಗಿ ಇಡೀ ಆಟಾ ನಡಿಸಿ ಕೊಡೊ ಕಲಾ ಒಂದು ಗೊತ್ತಿತ್ತು. ಬಯಲಾಟ ಇನ್ನೂ ಒಂದು ವಾರ ಐತಿ ಅನ್ನೂ ವ್ಯಾಳೆದೊಳಗ ಜೋಪಾನತೋಟದೊಳಗ ತಾಲೀಮು ಬೆಳ್ಳ ಬೆಳತನಕ ನಡೀತಿತ್ತು. ಅವಾಗಂತೂ ಈ ಸೋಮಾರಿ ಗುರಪ್ಪಂದು ದೊಡ್ಡ ಡಿಮ್ಯಾಂಡು. ವಾರಗಟ್ಟಲೆ ಮನಿಗೇ ಹೋಗತಿರಲಿಲ್ಲ. ದಾರೂ, ಊಟ, ತಿಂಡಿ, ಬೀಡಿ,ಚಾ ಎಲ್ಲಾ ಹೊರಗೇ ಹೋಗತಿತ್ತು. ತನಗೂ ಒಂದು ಮನಿ ಐತಿ, ಹೆಂಡ್ರು ಮಕ್ಕಳು ಅದಾರ ಅನ್ನೂ ಖಬರ್ ಇರಲಾರದಂಗ ಇಂವಾ ಇರತಿದ್ದ. ಬಯಲಾಟ ನೋಡೂ ವ್ಯಾಳೆದೊಳಗ ಊರ ಮಂದಿ ಗುರಪ್ಪ ಇಡೀ ವರ್ಷ ಸೋಮಾರಿ ಆಗಿ ದಿನ ದೂಡದ್ರೂ ಈ ಬಯಲಾಟ ವ್ಯಾಳೆದಾಗಾದ್ರೂ ಚುಲೊ ದುಡಿತಾನ..ಟಾವನಂಗ ಸಾರಥಿ ಮಾಡೊದು ಸುತ್ತ ಇಪ್ಪತ್ತು ಹಳ್ಯಾಗ ಇಲ್ಲ ಅಂತಿದ್ದರು. ಗುರಪ್ಪನ ಮಕ್ಕಳು ಮತ್ತ ಹೆಂಡತಿಗಿ ಮಾತ್ರ ಈ ಸಾರಥಿ ಪಾತ್ರ ಬೇಕಾಗಿರಲಿಲ್ಲ. ಮಾಡಲಿಕ್ಕ, ಮಟ್ಟಲಿಕ್ಕ ಬಾಳ ಕೆಲಸ ಅದಾವ ಅದೂ ಅಲ್ಲದೇ ಎರಡು ಹೊಲಾ ಮಾಡವರಿಲ್ಲದೇ ಬೀಳು ಬಿದ್ದಾವ ಅಂತದರೊಳಗ ಈ ಅಪ್ಪ ಸಾರಥಿ ಆಗಿ ವಾರಗಟ್ಟಲೆ ಮನಿಗಿ ಹತ್ತದೇ ನಾಪತ್ತೆ ಆದ್ರ ಅದ್ಯಾಂಗ ಅವರಿಗಿ ಸರಿ ಅನಸ್ತದ. ತಮ್ಮ ಅಜ್ಜನ ಮಾನ ಮರ್ಯಾದೆ ಎಲ್ಲಾ ಇವನು ಬೀದಿಗೆ ತಂದ ಅನ್ನೂವಂಗ ಸಿಟ್ಟಿಗಿ ಬರತಿದ್ದರು. ಒಂದಿನ ಈ ಗುರಪ್ಪನ ಹಿರಿ ಮಗ ಸಿದ್ಲಿಂಗ ಸೀದಾ ಬಯಲಾಟ ನಡದಿರೋ ಹೆಗ್ಗೇರೆಪ್ಪನ ಗುಡಿಗೇ ಬಂದಿದ್ದ. ಅವರಪ್ಪನ್ನ ಹೊರಗ ಕರದು ‘ನಿನಗೇನು ಬುದ್ದಿಗಿದ್ದಿ ಐತೋ ಇಲ್ಲೋ..? ನಾಳೆ ಹೊತ್ತು ಹೊಂಟರ ಹೊಲಾ ಬಿತ್ತೂವದಾವ. ಎರಡು ಪಟ್ಟು ಕೊಡತೀನಿ ಅಂದ್ರೂ ಆಳು ಸಿಗಾಕತ್ತಿಲ್ಲ. ನಿನಗ ನೀಗಲಿಲ್ಲಂದ್ರ ಸುಮ್ಮ ಕೂಲಿಯವರ ಹಿಂದ ನಿಲ್ಲಲಿಕ್ಕೂ ಆಗಂಗಿಲ್ಲನೂ..?’ ಅಂತ ಕೇಳಿದ್ದಕ ಗುರಪ್ಪ ಮೌನ ಮುರಿಲಾರದೇ ಕಲ್ಲಾಗಿದ್ದ. ಗುರಪ್ಪ ಮೊದಲ ಚುಲೋ ಇದ್ದ. ಹಿರಿ ಮಗ ಸಿದ್ಲಿಂಗ ಹುಟ್ಟೂವಾಗ ಅಂವಾ ಚುಲೋನೇ ಇದ್ದ. ಅದೇ ವ್ಯಾಳೆಯೊಳಗೇ ತೋಟದೊಳಗ ಇನ್ನೊಂದು ಬಾವಿ ತೋಡಸಿದ್ದ. ಅದ್ಯಾವಾಗ ಈ ಬಯಲಾಟದ ಚಟಕ್ಕ ಬಿದ್ದನೋ ಅವಾಗಿಂದ ಅವನ ದುಡಿತನೇ ಕಡಿಮಿ ಆಯ್ತು. ಮುಂದ ವರ್ಷ ಒಪ್ಪತ್ತಿನೊಳಗ ಕುಡಿಯೋ ಚಟಕ್ಕ ಬಿದ್ದ ಮ್ಯಾಲಂತೂ ಪಕ್ಕಾ ರಿಕಾಮಿಯಾಗಿಯೇ ದಿನ ದೂಡತಾ ಇದ್ದ. ಮೊದಲ ಬರೀ ಸಿಂದಗಿಯೊಳಗ ಅಷ್ಟೇ ಬಯಲಾಟದೊಳಗ ಸಾರಥಿಯಾಗತಿದ್ದ. ಈಗ ಹಂಗಲ್ಲ ಸುತ್ತ ಮುತ್ತ ಹಳ್ಳಿಯೊಳಗ ನಡಿಯೋ ಬಯಲಾಟದೊಳಗೂ ಸಾರಥಿಯಾಗಿ ಗುರಪ್ಪನೇ ಬೇಕು ಎನ್ನುವಂಗಿತ್ತು. ಆದರ ಮಹಾನವಮಿ ಸಂದರ್ಭದೊಳಗ ದೇವಿ ಮಹಾತ್ಮೆ ಅಂತ ಭ0ುಲಾಟ ಆಡೂ ಮುಂದ ಇಂವಾ ಎರಡು ಕ್ವಾರ್ಟರ್ ಗಟ ಗಟಾಂತ ಕುಡದು, ಬಯಲಾಟ ತಾಳ ತಪ್ಪುವಂಗ ಮಾಡಿದ್ದಕ ಮ್ಯಾನೇಜರ ಸಂಗಣ್ಣ ಇಂವಗ ಹಿಗ್ಗಾಮುಗ್ಗಾ ಬೈದು ಹೊರಗ ಅಟ್ಟಿದ್ದ. ನೆರದ ಜನರ ಮುಂದ ತನಗ ಹೀಂಗ ಆಯ್ತಲ್ಲ ಅನ್ನೋ ಇಸಮಿಗೆ ಬಿದ್ದು ಭವಿಷ್ಯದೊಳಗ ಮತ್ತೆಂದೂ ಆತ ಬಯಲಾಟದೊಳಗ ಸಾರಥಿ ಆಗಬಾರದು ಅಂತ ತೀರ್ಮಾನ ಮಾಡಿದ್ದ.
*********************
ಗುರಪ್ಪಗ ಈಗ ಹೆಚ್ಚೂ ಕಮ್ಮಿ ಎಂಬತ್ತು ವರ್ಷ. ಇವನಿಗಿಂತ ಚಿಕ್ಕವರು, ಇವನದೇ ಓರಿಗೆಯವರು ಬಾಳ ಜನ ಇವನ ಕಣ್ಣ ಮುಂದೆನೇ ಮಣ್ಣಾಗಿಹೋದರು. ಇವನ ಗೆಳೆಯ ಭೀಮರಾಯನೂ ಸತ್ತ, ಹೆಂಡತಿ ಈರಮ್ಮ ಸತ್ತಳು, ಅವನ ಕಣ್ಣೆದುರೇ ಅವನ ಹಿರಿ ಮಗಾ ಸಿದ್ಲಿಂಗ ಸತ್ತ. ಈಗೀಗ ಗುರಪ್ಪನಿಗೆ ಪಾಪಿಗಳು ಚಿರಾಯು ಅನ್ನೋ ಮಾತು ಸತ್ಯವಾದುದು ಅನಿಸತೊಡಗಿದೆ. ತನಗಿಂತಲೂ ಚಿಕ್ಕವರು ಅದೆಷ್ಟೊ ಜನ ತನ್ನ ಕಣ್ಣ್ನೆದುರೇ ಜೀವಬಿಟ್ಟರು. ಅವರೆಲ್ಲಾ ಈ ಸಮುದಾಯ, ಊರು, ಮನೆಮಂದಿಗೆಲ್ಲಾ ಬೇಕಾದವರು. ತನ್ನ ಹಾಗೆ ಯಾರಿಗೂ ಬೇಡಾದವರಲ್ಲ. ಆದರೆ ತಾನು ಮಾತ್ರ ಯಾರಿಗೂ ಬೇಡ ಆದರೂ ಇನ್ನೂ ಬದುಕೀನಿ. ತಾನು ಬದುಕಿದ ಈ ದೀರ್ಘ ಅವಧಿಯ ಬಗ್ಗೆ ಯೋಚಿಸುತ್ತಿರುವಾಗಲೇ ಅವನ ಕಣ್ಣೆದುರಿಗೆ ಚುರುಮುರಿ ಮಾರುವ ಅಹ್ಮದಖಾನ ಸೈಕಲ್ಲೇರಿ ನಡೆದದ್ದನ್ನು ಕಂಡ. ಅಹ್ಮದಖಾನ ತನ್ನದೇ ಮನೆಯ ಹಿಂದೆ ದೊಡ್ದಿಯಲ್ಲಿ ಒಂದು ಮಂಡಕ್ಕಿ ಬಟ್ಟಿಯನ್ನು ಆರಂಭಿಸಿ ಸುಮಾರು ಐವತ್ತು- ಅರವತ್ತು ವರ್ಷಗಳಿಂದ ದುಡಿಯುತ್ತಿದ್ದಾನೆ. ಪ್ರತಿ ದಿನ ಅವನು ‘ಬಿಸಿ ಬಿಸಿ ಮಂಡಕ್ಕಿ’ ಅಂತ ಕೂಗುತ್ತಾ ಸೈಕಲ್ ಮೇಲೆ ಹೊಗೋದನ್ನು ನೋಡುತ್ತಿದ್ದ ಗುರಪ್ಪನಿಗೆ ಆ ದಿನ ಇದ್ದಕ್ಕಿದ್ದಂಗೆ ಆ ಅಹ್ಮದಖಾನ ಜೊತೆಗೆ ಮಾತಾಡಬೇಕೆನಿಸಿತ್ತು. ಅವನಿಗೂ ತನ್ನಷ್ಟೇ ವಯಸ್ಸಾಗಿದೆ ಆದರೆ ತನಗಿಂತಲೂ ಆತ ತುಸು ಗಟ್ಟಿಮುಟ್ಟಾಗಿಯೇ ಇದ್ದಾನ. ಸೈಕಲ್ ಹೊಡೆಯುತ್ತಾ ಇಡೀ ಊರು ಸುತ್ತುತ್ತಾನ್ನೆನ್ನುವದೇ ಇಡೀ ಊರ ಜನರ ಕುತೂಹಲವಾಗಿತ್ತು. ಅಹ್ಮದಖಾನ್ ಅಪ್ಪ ಲಾಳೇಸಾಬ್ ಹಣ್ಣಿನ ಅಂಗಡಿ ಇಟ್ಟುಕೊಂಡಿದ್ದ. ಅವನಿಗೆ ಇದ್ದದ್ದು ಆರು ಮಕ್ಕಳು ಎರಡು ಗಂಡು ನಾಲ್ಕು ಹೆಣ್ಣು ಹಿರಿ0ು ಮಗ ಅಬ್ದುಲ್ಲಾ ತೀರಿಕೊಂಡೇ ಇಪ್ಪತ್ತು ವರ್ಷಗಳಾಗಿತ್ತು. ಎರಡನೇಯವನೆ ಈ ಅಹ್ಮದಖಾನ್. ಈ ಅಹ್ಮದ್ ಗುರಪ್ಪನ ಮನೆಯ ಹಿಂದೆ0ಯೇ ಇದ್ದರೂ ಗುರಪ್ಪನ ಹೆಂಡತಿ ಈರಮ್ಮ ಸಾಕಷ್ಟು ಆ ಅಹ್ಮದನ್ನ್ ನೋಡಿಯಾದರೂ ಕಲೀರಿ ಅಂತ ಹೇಳದ ಮ್ಯಾಲೂ ಗುರಪ್ಪ ಕಿವಿಯೊಳಗ ಹಾಕಿಕೊಂಡಿರಲಿಲ್ಲ. ಅಷ್ಟಕ್ಕೂ ಈ ಗುರಪ್ಪನಿಗೆ ದುಡಿಯುವರನ್ನ ಕಂಡರೆ ಆಗುತ್ತಿರಲಿಲ್ಲ. ಹೀಗಾಗಿ ಅಹ್ಮದನನ್ನ ಮಾತಾಡಿಸೋ ಉಸಾಬರಿಗೇ ಅಂವಾ ಹೋಗಿರಲಿಲ್ಲ. ಈಗೀಗ ತಾನೇ ಊರಲ್ಲಿ ಹಿರಿಯ ವಯಸ್ಸಿನವನು ಅಂತ ತಿಳಕೊಂಡಿರೋ ಗುರಪ್ಪನಿಗೆ ಈ ಅಹ್ಮದ್ ತನಗಿಂತಲೂ ಎರಡು ವರ್ಷ ದೊಡ್ದವನು ಅಂತ ತಿಳಿದಾದ ಮೇಲೆ ಆ ಅಹ್ಮದ್ ಅದೇಕೋ ಗುರಪ್ಪನಿಗೆ ಇಷ್ಟವಾಗತೊಡಗಿದ್ದ. ಈ ಮೊದಲು ಪ್ರತಿನಿತ್ಯ ಇವನ ಮುಂದೆಯೇ ಹಾದು ಹೋದರೂ ಅವನ ಬದಿ ಗುರಪ್ಪ ನೋಡುತ್ತಿರಲಿಲ್ಲ.ಅಷ್ಟೇ ಅಲ್ಲ ಚುರುಮುರಿ ಮಾರಿಯಾದ ಮೇಲೆ ಅವತ್ತಿನ ಕಲೆಕ್ಷನ್ ಎಲವನ್ನೂ ಗುರಪ್ಪನ ಮನೆಯ ಮುಂದಿನ ಬಸರೀಗಿಡದ ನೆರಳಲ್ಲಿಯೇ ನಿಂತು ಹೊಂದಿಸಿಕೊಳ್ಳುತ್ತಿದ್ದ. ಅಹ್ಮದಖಾನಗೂ ಅಷ್ಟೆ ಈ ಗುರಪ್ಪ ಒಬ್ಬ ರಿಕಾಮಿ ಇಂಥವನನ್ನು ಮಾತಾಡಿಸುವದರಿಂದ ಯಾರಿಗೂ ಏನೂ ಪ್ರಯೋಜನವಿಲ್ಲ. ದೊಡ್ದ ಮನೆತನ ಇವನಿಂದಲೇ ಹಾಳಾಯಿತು ಎನ್ನುವ ಅರಿವೂ ಅವನಿಗಿತ್ತು. ತಪ್ಪಿ ಈ ಗುರಪ್ಪನನ್ನು ಎದುರುಗೊಳ್ಳುವ ಪ್ರಸಂಗ ಬಂದರೆ ಅಹ್ಮದ್ ‘ಸಾಹುಕಾರ ನಮಸ್ಕಾರ’ ಅನ್ನುತ್ತಾ ಮುಂದೆ ಸಾಗುತ್ತಿದ್ದ. ಇಂತಪ್ಪ ಗುರಪ್ಪನಲ್ಲಿ ಕಿರಾತಕತನ ಎನ್ನುವದು ತು೦ಬಿ ತುಳಕುತ್ತಿತ್ತು. ಹಗಲು ಹೊತ್ತಿನಲ್ಲಿಯೇ ಜನನಿಬಿಡ ಜಾಗದಲ್ಲಿಯೇ ನಿಂತು ಉಚ್ಚೆ ಹೊಯ್ಯುವ, ಮನೆಯಲ್ಲಿ ಪಾಯಿಖಾನೆ ಇದ್ದರೂ ಯಾರದೋ ಮನೆಯ ಗೋಡೆಗುಂಟ ಕುಳಿತು ಹೇಲುವ,ಜಳಕ ಮಾಡಲಿಕ್ಕೆಂದೇ ಬಚ್ಚಲು ಕೊಣೆಯನ್ನು ಕಟ್ಟ್ತಿದ್ದರೂ ಈತ ಒಂದು ಪ್ಲಾಸ್ಟಿಕ್ ತಂಬಿಗೆ0ುಲ್ಲಿ ನೀರು ತುಂಬಿಕೊಂಡು ಮನೆಯ ಹೊರಗೆ ಕಟ್ಟೆಯ ಬಳಿ ನಿಂತು, ಗಂಟಲಲ್ಲಿ ಬೆರಳು ತೂರಿ ಮಹಾನ್ ಸಾಹಾಸ ಮಾಡುವವನಂತೆ ಗ್ಯಾ..ಗ್ಯಾ..ಗ್ಯಾ ಗೊಳಳ.. ಕ್ಯಾಕರಿಸಿ ಉಗಿಯುವ, ಅಲ್ಲೇ ಮುಖ ತೊಳೆಯುವ ಕೆಲಸವನ್ನೂ ಮುಗಿಸಿಬಿಡುತ್ತಿದ್ದ. ಆತ ಹಲ್ಲು ಉಜ್ಜಿದ್ದು ಅವನ ಮನೆಯವರು ಕೂಡಾ ನೋಡುವದು ಅಪರೂಪ. ಇಂಥಾ ಗುರಪ್ಪ ಮಕ್ಕಳನ್ನು ಕಂಡರೆ ಸಾಕು ಗುರ್ರ್ ಅಂತಿದ್ದ. ಅದರಲ್ಲೂ ಆಟಾ ಆಡೂ ಚುಕ್ಕೋಳನ್ನು ಕಂಡ್ರೆ ಸಾಕು ಉರದು ಹಾಯ್ತಿದ್ದ. ಅಷ್ಟೆ ಸಿಟ್ಟು ಅವನಿಗೆ ನಾಯಿಗಳು ಸಂಭೋಗ ಮಾಡೊದನ್ನು ಕಂಡಾಗ ಆಗುವದಿತ್ತು. ಓಣಿಯೊಳಗ ಯಾವುದಾದರೂ ನಾಯಿಗಳು ಪಟ್ಟಾಹಾಕೊಂಡು ನಿಂತರೆ ಅವನ್ನ ಕಲ್ಲು ಹೊಡೆದು ಗಂಡ ನಾಯಿ, ಹೆಣ್ಣನಾಯಿ ಎರಡೂ ಬೇರೆ ಬೇರೆ ಆಗಿ ಓಡಿ ಹೂಗೂ ಮಟ ಬಿಡವನಲ್ಲ. ಓಣಿಯೊಳಗಿರೋ ಬೆರಕೀ ಹುಡುಗರಗಿ ಇದು ಗೊತ್ತಾಗಿ ಎಲ್ಲಾದರೂ ನಾಯಿಗಳು ಜೋಡಿ ಆದರೆ ‘ಗುರಪ್ಪ ಮುತ್ಯಾ ಬಂದ ಓಡ್ರೆಲೇ’ ಅಂತಿದ್ದರು. ಅಷ್ಟರ ಮಟ್ಟಿಗೆ ಅವನಿಗೆ ಈ ನಾಯಿಗೋಳು ಲವ್ ಮಾಡೊದು ಕಂಡ್ರ ಆಗ್ತಿರಲಿಲ್ಲ. ಈಗೀಗ ಈ ಗುರಪ್ಪನ್ನ ಓಣಿ ಚುಕ್ಕೋಳು ಹುಚ್ಚ ಗುರಪ್ಪ, ರಿಕಾಮಿ ಗುರಪ್ಪ, ಟಿಕ್ಕ್ ಗುರಪ್ಪ, ಸಾಡೆಸಾತಿ ಗುರಪ್ಪ ಅಂತ ಕೂಗಿ ಓಡಿಹೋಗಾಕ ಸುರು ಮಾಡದರು. ದೊಡ್ದವರು ಅವನಿಗಿ ಹೀಂಗ ರಿಕಾಮಿ ಅಂದ್ರ ಬೇಸರಾಗಿರಲಿಲ್ಲ ಈಗ ಮಕ್ಕಳು ಅನ್ನಾಕ ಸುರು ಮಾಡಿದ್ದು ಕೇಳಿ ಅಂವಗ ಬಾಳ ಬ್ಯಾಸರ ಆಗಿತ್ತು. ಅದೇನೋ ದೇನಿಸುವವನಂಗ ಬಸರೀ ಗಿಡದ ಕೆಳಗ ಅಂವಾ ಕುಂತು ಬಿಡತಿದ್ದ. ಅಲ್ಲೇ ಅವನ ಸಮೀಪ ಒಬ್ಬವನು ಗದರ್ ಗಮ್ಮತ್ ತೋರಸತಿದ್ದ. ಅಂವಗೂ ಹೆಚ್ಚೂ ಕಮ್ಮಿ ಎಪ್ಪತ್ತು ವರ್ಷ ಆಗಿರಬೇಕು ಅವನ ಹೆಸರು ಮಕಬೂಲ. ಅಂವಾ ತನ್ನ ಗದರ್ ಗಮ್ಮತ್ ಡಬ್ಬಿ ಹೊತಗೊಂಡು ಊರ ಊರ ತಿರಗತಿದ್ದ. ಗುರಪ್ಪಗ ಈ ಮಕಬೂಲ ಮತ್ತ ಅಹ್ಮದ ಈ ವಯಸಿನೊಳಗೂ ದುಡಿಯೂದು ಕಂಡು ಒಂಥರಾ ಖುಷಿ ಅನಸಾಕತ್ತು. ಎಂದೂ ಮಾತಾಡದಿರೋ ಗುರಪ್ಪ ಅವತ್ತ ಅಹ್ಮದಖಾನನ್ನ ಕೂಡಿಸಿಕೊಂಡು ಅವನ ಕಥಿ ಕೇಳತಿದ್ದ. ಅವನೂ ಅಷ್ಟೇ ಚುಲೊ ಮಾಡಿ ಹೇಳತಿದ್ದ. ‘ನೋಡ್ರಿ ಸಾಹುಕಾರ, ದುಡದು ತಿಂದರ ಅನ್ಯಾ ಇಲ್ಲ. ಅಲ್ಲಾ ದುಡೆವರ ಹೊಟ್ಟೀ ಮ್ಯಾಲ ಬುಲ್ಕುಲ್ ಹೊಡಿಯುವಂಗಿಲ್ಲ. ನಂದೇ ತಗೋರಿ ನನಗ ಎಂಟು ಹೆಣ್ಣು ಮಕ್ಕಳು. ಮುಂದಿಂದರೇ ಗಂಡ ಆದೀತು ಅಂದುಕೊಂಡು ಹಂಗೇ ಮಕ್ಕಳ ಮಾಡಕೊಂತ ಬಂದ್ವಿ ಆಗಿದ್ದು ಎಂಟೂ ಹೆಣ್ಣು. ಹುಟ್ಟ್ತಸದ ಮ್ಯಾಲ ಅವುಕರ ಹೊಟ್ಟಿ ಬಟ್ಟಿ ನೋಡಬೇಕಲ್ಲರಿ ಎಲ್ಲಾ ಮಕ್ಕಳಿಗಿ ಓದಸೀನಿ, ಚುಲೊ ಮನಿತನ ನೋಡಿ ಶಾದಿ ಮಾಡಿ ಕೊಟ್ಟೀನಿ. ಅಲ್ಲಾ.. ಹೆಂಗೋ ನಡಸದ ಎಲ್ಲಾ ಆ ಒಂದು ಚುರುಮುರಿ ಬಟ್ಟೀ ಮ್ಯಾಲ. ಮೊದಮೊದಲು ತೊಡಾ ಪರೇಶಾನ್ ಆಯ್ತು ಆದರ ಈಗ ಎಲ್ಲಾ ಚುಲೋ ಐತಿ. ದುಡದರ ಇದ್ದೇ ಐತಿ’ ಅಂದಾಗ ಗುರಪ್ಪಗ ಆ ಅಹ್ಮದಖಾನನ ಸಾಹಸ ಬಾಳ ದೊಡ್ದದು ಅನಿಸಿತ್ತು. ಅದೂ ಅಲ್ಲದೇ ಅಹ್ಮದ್ ಗುರಪ್ಪನ ಬಯಲಾಟದ ಕಲೆಗಾರಿಕೆಯನ್ನ ಸಿಕ್ಕಾಪಟ್ಟೆ ಹೊಗಳತಿದ್ದ. ‘ನೀವು ಏನೇ ಹೇಳ್ರಿ ಸಾಹುಕಾರ ಒಬ್ಬರ ವಿದ್ಯಾ ಇನ್ನೊಬ್ಬರಗಿ ಬರೂದಿಲ್ಲ ನೀವು ದೊಡ್ಡಾಟದೊಳಗ ಸಾರಥಿ ಆಗಿ ಕೆಲಸಾ ಮಾಡೂವಂಗ ಮತ್ತ ಯಾರೂ ಬರಲೇ ಇಲ್ಲ. ಅದ್ನ ನೀವು ಯಾಕ ಬಿಟ್ಟರಿ..? ಬಿಡಬಾರದಿತ್ತು ನೀವು ಬಿಟ್ಟ ಮ್ಯಾಲ ಗೌರೀ ಹುಣ್ಣವಿ ಮುಂದ ದೊಡ್ಡಾಟ ಇಲ್ಲ, ಮಹಾನವಮಿ ಒಳಗೂ ಇಲ್ಲ’ ಅಂತ ಆತ ಹೇಳಿದ್ದು ಗುರಪ್ಪಗ ಎದಿಗಿ ಮುಟ್ಟದಂಗಿತ್ತು.
0 ಪ್ರತಿಕ್ರಿಯೆಗಳು