ಭಾರತಿ ಕೇಳ್ತಾರೆ: ಒಬ್ಬ ಮನುಷ್ಯನಿಗೆ ಎಷ್ಟು ಕಷ್ಟ ಬರಬಹುದು?

ಕಷ್ಟಗಳ ಸರಮಾಲೆ ಅಂತ ಕೇಳಿದ್ದೆ ಮಾತ್ರ ..

– ಭಾರತಿ ಬಿ ವಿ

ಒಬ್ಬ ಮನುಷ್ಯನಿಗೆ ಎಷ್ಟು ಕಷ್ಟ ಬರಬಹುದು? ಇದೆಂಥ ವಿಚಿತ್ರ ಪ್ರಶ್ನೆ ಅಂತೀರಾ? ನಾನು ಕೂಡಾ ಈ ಪ್ರಶ್ನೆ ಕೇಳಿಕೊಂಡಿರಲಿಲ್ಲ ಮೊನ್ನೆ ಮೊನ್ನೆಯವರೆಗೂ .. ಅಂದರೆ ರಾಮುವನ್ನು ಭೇಟಿಯಾಗುವವರೆಗೆ. ಅವನನ್ನು ಭೇಟಿ ಮಾಡಿದ ಮೇಲೆ ಈ ಪ್ರಶ್ನೆ ನನಗೆ ನಾನೇ ಹಾಕಿಕೊಂಡೆ .. ಉತ್ತರ ಸಿಗೋದಿಲ್ಲ ಅಂತ ಗೊತ್ತಿದ್ದರೂ. ರಾಮು ಯಾರು ಅಂತ ಹೇಳ್ತೀನಿ ಇರಿ … ಮೊನ್ನೆ ಮೈಸೂರು ರಸ್ತೆಯಲ್ಲಿ ಆಟೋಗಾಗಿ ಕಾಯ್ತಾ ನಿಂತಿದ್ದೆ. ತುಂಬ ಹೊತ್ತು ಕಾದ ಮೇಲೆ ಒಬ್ಬ ಪುಣ್ಯಾತ್ಮ ದಯೆ ತೋರಿಸಿ ಆಟೋ ನಿಲ್ಲಿಸಿದ. ಬೆಂಗಳೂರಿನ ಆಟೋದವರ ಬಗ್ಗೆ ಗೊತ್ತಿರುವವರು ನಾನು ಈ ಥರ ‘ಪುಣ್ಯಾತ್ಮ’, ‘ದಯೆ’ ಅಂತೆಲ್ಲ ಯಾಕೆ ಬರ್ದಿದೀನಿ ಅಂತ ಕೇಳೋದಿಲ್ಲ. ಆದರೆ ಗೊತ್ತಿಲ್ಲದಿರುವವರಿಗಾಗಿ ಈ ಸಣ್ಣ ಮಾಹಿತಿ ನಾನು ಕೊಡಲೇಬೇಕು. ಬೆಂಗಳೂರಿನ ಆಟೋದವರು ನಾವು ಕರೆದ ಕಡೆ ಎಂದೂ ಬರೋದಿಲ್ಲ. ಅವರು ಹೋಗುವ ದಾರಿಯಲ್ಲಿ ಅದೃಷ್ಟವಶಾತ್ ನಮ್ಮ ಮನೆಯಿದ್ದರೆ ನಾವು ಭಾಗ್ಯವಂತರು! ಮತ್ತೆ ಹತ್ತೋದಕ್ಕೆ ಹೋಗುವ ಮುಂಚೆ ಬರೀ ಬಡಾವಣೆಯ ಹೆಸರಷ್ಟೇ ಅಲ್ಲದೇ ಅಕ್ಕಪಕ್ಕದಲ್ಲಿ ಇರೋ ಪ್ರಮುಖ ಗುರುತಿನ ಸ್ಥಳಗಳ ಬಗ್ಗೆ ಹೇಳಿ, ಕ್ರಾಸು, ಮೇನು, ಮನೆ ನಂಬರ್ ಎಲ್ಲ ಹೇಳಬೇಕು. ನಂತರ ಅವರು ಅದನ್ನ ಎರಡು ನಿಮಿಷ ಪರಾಮರ್ಶಿಸಿ ನಂತರ ಇದ್ದಕ್ಕಿದ್ದ ಹಾಗೆ ಆಟೋ ಸ್ಟಾರ್ಟ್ ಮಾಡಿ ಕಾಣೆಯಾಗುತ್ತಾರೆ. ಆಗ ನಾವು ಅರ್ಥ ಮಾಡಿಕೊಳ್ಳಬೇಕು ನಾವು ಹೇಳಿದ ಸ್ಥಳ ಅವರು ಬರಲು ಯೋಗ್ಯವಾದದ್ದಾಗಿರಲಿಲ್ಲ ಎಂದು! ನಮ್ಮ ಮನೆ preferably ಮಹಾತ್ಮ ಗಾಂಧಿ ರಸ್ತೆ, ಕೋರಮಂಗಲದ ಫೋರಂ ಮಾಲ್‌ನ ಪಕ್ಕ, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಎದುರು ಅಥವಾ ಮಾನ್ಯ ಮುಖ್ಯಮಂತ್ರಿಗಳ ಮನೆ ಪಕ್ಕ ಇದ್ದರೆ ಒಳ್ಳೆಯದು … ಉಳಿದ ಕಡೆಯಲ್ಲಿದ್ದರೆ ನನ್ನ ಹಾಗೆ ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ. ಈಗ ಮತ್ತೆ ರಾಮುವಿನ ವಿಷಯಕ್ಕೆ ಬರ್ತೀನಿ. ಕುಳಿತ ಕೂಡಲೇ ಆಟೋ ಡ್ರೈವರ್ ತನ್ನಲ್ಲಿ ತಾನೇ ‘ಅಬ್ಬಾ! ಅಂತೂ ಇಷ್ಟು ದೂರ ಬಂದ ಮೇಲಾದ್ರೂ ದಯೆ ತೋರಿಸಿದ್ಯಲ್ಲಾ ತಂದೆ ..’ ಅಂತ ಹೇಳಿಕೊಂಡಿದ್ದು ಕೇಳಿಸಿತು. ನನಗೆ ಪರಮ ಆಶ್ಚರ್ಯ! ನಮ್ಮ ಬೆಂಗಳೂರಿನ ಆಟೋ ಡ್ರೈವರ್ ಒಬ್ಬರ ಬಾಯಿಂದ ಈ ಮಾತು! ನನಗೆ ಕುತೂಹಲ ಕೆರಳಿತು. ‘ಯಾಕೆ ಹಾಗಂದ್ರಿ?’ ಅಂತ ಕೇಳಿಯೇ ಬಿಟ್ಟೆ. ‘ನೆಲಮಂಗಲದ ಹತ್ತಿರದಿಂದ ಖಾಲಿ ಬರ್ತಿದೀನಿ. ಒಂದೇ ಒಂದು ಗಿರಾಕಿ ಸಿಕ್ಕಲಿಲ್ಲ. ಪೂರ್ತಿ ಖಾಲೀನೇ ಬಂದೆ. ಇನ್ನೇನು ಮನೆ ಹತ್ರ ಬಂದಾಗ ನೀವು ಸಿಕ್ಕಿದ್ರಿ’ ಅಂದರ. ನಾನು ನಗ್ತಾ ‘ಇದೇನು ಹೀಗೆ ಹೇಳ್ತೀರಾ .. ಬೆಂಗಳೂರಿನ ಆಟೋದವರ ಹತ್ರ ದಿನಾ ಸಲಾಮ್ ಹಾಕಿಕೊಂಡು ಬದುಕ್ತಿದೀನಿ ನಾನು. ನೀವು ನೋಡಿದ್ರೆ ಹೀಗೆ ಹೇಳ್ತೀರಲ್ಲಾ ..’ ಅಂತ ಛೇಡಿಸಿದೆ. ಯಾಕೋ ಆತನ ಬಗ್ಗೆ ಕುತೂಹಲವಾಯ್ತು. ಅವನನ್ನ ಮಾತಿಗೆಳೆದೆ…. ‘ನೆಲಮಂಗಲಕ್ಕೆ ಯಾಕೆ ಹೋಗಿದ್ರಿ?’ ಅನ್ನೋ ನನ್ನ ಪ್ರಶ್ನೆ ಕೇಳಿದ್ದೇ ತಡ ಆತ ಅದಕ್ಕಾಗೇ ಕಾಯ್ತಿದ್ದನೇನೋ ಅನ್ನೋ ಹಾಗೆ ತನ್ನ ಕಥೆ ಶುರು ಮಾಡಿದ…‘ನೆಲಮಂಗಲಕ್ಕೆ ಡಾಕ್ಟರ್ ಹತ್ರ ಹೋಗಿದ್ದೆ ತಾಯಿ .. ಕಡಿಮೆ ಖರ್ಚಲ್ಲಿ ಆಪರೇಷನ್ ಮಾಡ್ತಾರೆ ಅಂದ್ರು ಯಾರೋ. ಅದಕ್ಕೆ ನೋಡಿ ೪೦ ಕಿಲೋಮೀಟರ್ ಡ್ರೈವ್ ಮಾಡ್ಕೊಂಡು ಹೋದೆ. ಅಲ್ಲಿ ಆಗೋದಿಲ್ಲ ಅಂದು ಬಿಟ್ರು’ ಅಷ್ಟು ಹೇಳೋ ಅಷ್ಟರಲ್ಲಿ ಆತನ ದನಿ ಗದ್ಗದವಾಗಿತ್ತು. ಅಂತ ದೊಡ್ಡ ಗಂಡಸು ಆ ರೀತಿ ಅಳೋ ಮಟ್ಟಕ್ಕೆ ದುಃಖ ಪಟ್ಟಾಗ ನನ್ನ ಮನಸ್ಸಿಗೆ ಕಸಿವಿಸಿ ಆಯ್ತು. ‘ಏನಾಗಿದೆ?’ ಅಂದೆ ಮೆಲ್ಲನೆ. ಆತ ಆಟೋ ನಿಲ್ಲಿಸಿ ಮುಂದೆ ನೇತು ಹಾಕಿದ್ದ ಒಂದು ದೊಡ್ಡ ಬ್ಯಾಗ್ ತೆಗೆದ. ನಾನು ಕುತೂಹಲದಿಂದ ಅದೇನು ಅಂತ ನೋಡಿದರೆ ಬ್ಯಾಗ್‌ನ ಭರ್ತಿ ಎಕ್ಸ್-ರೇ ಮತ್ತು ಸ್ಕ್ಯಾನಿಂಗ್ ರಿಪೋರ್ಟ್‌ಗಳು ಮತ್ತು ಡಾಕ್ಟರ್ ಬರೆದ prescription ಗಳು. ‘ಈಗ ಮೂರು ವರ್ಷದ ಕೆಳಗೆ ಆಟೊದಲ್ಲಿ ಬಾಡಿಗೆಗೆ ಹೋಗ್ತಿದ್ದಾಗ BTS (ಈಗ ಅದು BMTC ಅಂತ ಆಗಿದೆಯಾದ್ರೂ ಕೂಡಲೇ ಬಾಯಲ್ಲಿ ಬರೋದು BTS ಅಂತಲೇ) ಬಸ್ ಬಂದು ಹೊಡೆದು ಬಿಡ್ತು. ಹೊಡೆದವನು ಹೊರಟುಹೋದ. ನಾನು ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದೆನಂತೆ. ಯಾರೋ ನನ್ನ ಮೊಬೈಲ್‌ನಲ್ಲಿ ನನ್ನ ಸ್ನೇಹಿತನ ನಂಬರ್ ನೋಡಿ ಅವನಿಗೆ ಫೋನ್ ಮಾಡಿ ಕರೆಸಿ ಆಮೇಲೆ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ರು. ಕಾಲಿನ ಮೂಳೆ ಪುಡಿ ಪುಡಿ ಆಗಿದೆ ತಕ್ಷಣ ಆಪರೇಷನ್ ಮಾಡ್ಬೇಕು ಅಂದು ಬಿಟ್ರು. ನಾನು ಬಡವ ಎಲ್ಲಿಂದ ತರಲಿ ಅಷ್ಟು ದುಡ್ಡು? ಆಮೇಲೆ ನನ್ನ ಸ್ನೇಹಿತರು, ನೆಂಟರು ಎಲ್ಲ ಸೇರಿ ಒಂದಿಷ್ಟು ಸಹಾಯ ಮಾಡಿ ಹೇಗೋ ಆಪರೇಷನ್ ಮಾಡ್ಸಿದ್ರು. ಕಾಲಿಗೆ ರಾಡ್ ಹಾಕಿದ್ರು. ಇನ್ನೇನು ಸರಿ ಹೋಗತ್ತೆ ಅಂತ ಎಲ್ರೂ ಖುಷಿಯಾದ್ವಿ ತಾಯಿ. ಆಮೇಲೆ ಶುರುವಾಯ್ತು ನೋಡಿ ಇನ್ನೂ ಕಷ್ಟದ ದಿನಗಳು… ಕಾಲಿನ ಗಾಯ ಒಣಗಲೇ ಇಲ್ಲ. ಡಾಕ್ಟ್ರನ್ನ ಕೇಳಿದ್ರೆ ಒಣಗತ್ತೆ ಇರಯ್ಯಾ ನಿನ್ನ ಆತುರಕ್ಕೆ ಹಾಗೆಲ್ಲ ಒಣಗೋದಿಲ್ಲ ಅಂತ ಬಯ್ದು ಬಿಟ್ರು. ನಾವು ಇನ್ನೊಂದಿಷ್ಟು ದಿನ ಕಾದರೂ ಗಾಯ ಒಣಗಲೇ ಇಲ್ಲ. ಗುಣ ಆಗೋದಿರ್ಲಿ ಇನ್ನಿಷ್ಟು ಕೀವು ತುಂಬ್ಕೊಂಡು ಅಸಾಧ್ಯ ನೋವು ಶುರು ಆಯ್ತು. ಆಗ ಇನ್ನೊಂದು ಡಾಕ್ಟರ್ ಹತ್ರ ಹೋದ್ವಿ. ಅವರು ಎಲ್ಲ ಚೆಕ್ ಮಾಡಿ ನೋಡಿ ಆಪರೇಷನ್ ಸರಿಯಾಗಿ ಮಾಡಿಲ್ಲ ಒಳಗೆಲ್ಲ ಸ್ವಲ್ಪ ಕೊಳೀತಾ ಇದೆ, ಇನ್ನೊಂದು ಆಪರೇಷನ್ ಆಗಬೇಕು ಅಂದ್ರು ..’ ಹೇಳ್ತಾ ಹೇಳ್ತಾ ಅಷ್ಟು ದೊಡ್ಡ ಗಂಡಸು ಮಗುವಿನ ಹಾಗೆ ಅಳೋದಿಕ್ಕೆ ಶುರು ಮಾಡಿಬಿಟ್ಟ. ಸಮಾಧಾನಿಸಿದೆ ನನಗೆ ತಿಳಿದ ರೀತಿಯಲ್ಲಿ… ಒಂದೈದು ನಿಮಿಷ ಅತ್ತು ಸಮಾಧಾನ ಮಾಡಿಕೊಂಡ ಮನುಷ್ಯ ‘ಇಲ್ಲಿ ನೋಡಿ ನನ್ನ ಕಾಲಿನ ಸ್ಥಿತಿ ..’ ಅಂದ. ನಾನು ಆಟೋದಿಂದ ಇಳಿದು ನೋಡಿ ಬೆಚ್ಚಿ ಬಿದ್ದೆ. ಅಬ್ಬ ! ಕಾಲೆಲ್ಲ ಕಪ್ಪಗೆ ಚರ್ಮ ಸಿಪ್ಪೆ ಸಿಪ್ಪೆ ಒಡೆದುಕೊಂಡು ನಿಂತಿತ್ತು. ಆ ಕಾಲಿಗೆ ಒಂದು ತೆಳ್ಳಗಿನ ಬಿದಿರು ಪಟ್ಟಿ ಕಟ್ಟಿ ಅದರ ಸುತ್ತ ಒಂದು ಬಟ್ಟೆ ಸುತ್ತಿದ್ದ. ಅದು ಯಾಕೆ ಅಂತ ಕೇಳಿದರೆ ‘ಕಾಲು ನಡೆಯುವಾಗ ಸಪೋರ್ಟ್ ಇಲ್ದೇ ಹಿಂದಕ್ಕೆ ಮಡಚಿಕೊಂಡು ಬಿಡತ್ತೆ ತಾಯಿ. ಅದಕ್ಕೆ ಹೀಗೆ ಕಟ್ಟಿಕೊಂಡಿದೀನಿ’ ಅಂದ. ನನಗೆ ಮೈ ಜುಮ್ ಅಂದಿತು ಒಂದು ಕ್ಷಣ. ಅಬ್ಬ ಅದೆಂಥ ನೋವು ಅನುಭವಿಸ್ತಿದಾನೋ ಅಂತ ಮನಸ್ಸು ಮರುಗಿತು. ಈ ಥರದ ಬದುಕು ಅದೆಷ್ಟು ಕಠೋರವಾಗಿರ್ಬೇಕು ಪಾಪ! ‘ಮೊದಮೊದಲು ನೆಂಟರೆಲ್ಲ ಸಹಾಯ ಮಾಡಿದ್ರು. ಆದ್ರೆ ಎಷ್ಟೂ ಅಂತ ಮಾಡ್ತಾರೆ ಹೇಳಿ? ಇದು ರಿಪೇರಿ ಆಗೋ ಕೇಸ್ ಅಲ್ಲ ಅಂತ ಒಬ್ಬೊಬ್ರೇ ದೂರ ಆದ್ರು. ಕೊನೆಗೆ ಉಳಿದವರು ನಾನು, ಹೆಂಡತಿ, ಇಬ್ಬರು ಮಕ್ಕಳು ಅಷ್ಟೇ. ನನ್ನ ಕಾಲು ಈ ಸ್ಥಿತೀಲಿರುವಾಗ ಆಟೋ ಯಾರೂ ಬಾಡಿಗೆಗೆ ಕೊಡ್ಲೇ ಇಲ್ಲ ತಾಯಿ. ಬರ್ತಿದ್ದ ಆದಾಯ ಪೂರ್ತಿ ನಿಂತೋಗಿ ಕೊನ್ನೆಗೆ ತಿನ್ನಕ್ಕೆ ಕೂಡಾ ಇಲ್ಲ ಅನ್ನೋ ಪರಿಸ್ಥಿತಿ ಬಂದುಬಿಡ್ತು. ಆಗ ನನ್ನ ದೊಡ್ಡ ಮಗನ್ನ ಕೆಲ್ಸಕ್ಕೆ ಸೇರಿಸಿದೆ. ಪಾಪ ಓದಕ್ಕೆ ಇಷ್ಟ ಇತ್ತು ಅವ್ನಿಗೆ. ಆದ್ರೂ ಕಾಲೇಜು ಬಿಡಿಸಿ ಕೆಲ್ಸಕ್ಕೆ ಸೇರಿಸಿದೆ. ಅವನಿಗೆ ಒಂಚೂರು ಸಂಬಳ ಅಂತ ಬರೋದಿಕ್ಕೆ ಶುರು ಆಯ್ತು. ಆದ್ರೆ ನನ್ನ ಕಾಲಿನ ಆಪರೇಷನ್‌ಗೆಲ್ಲ ಆಗೋ ಅಷ್ಟಲ್ಲ. ಅರೆ ಹೊಟ್ಟೆ ತಿನ್ನೋ ಅಷ್ಟು ಮಾತ್ರ. ನಾನೂ ಆಪರೇಷನ್ ಆಸೆ ಬಿಟ್ಟು ನಾಟಿ ವೈದ್ಯ , ಅದೂ ಇದೂ ಅಂತ ಮಾಡ್ಕೊಂಡು ಕೋಲು ಹಿಡ್ಕೊಂಡು ಓಡಾಡಿಕೊಳ್ತಾ ಆಟೋ ಬಾಡಿಗೆಗೆ ಕೊಡಿ ಅಂತ ಅವರಿವರ ಹತ್ರ ಬೇಡ್ಕೊಳಕ್ಕೆ ಶುರು ಮಾಡಿದೆ. ಆಗ ಈಗ ಸಿಗ್ತಿತ್ತು .. ಮಧ್ಯೆ ಮಧ್ಯೆ ಅದೂ ಇಲ್ಲ. ಆಗೆಲ್ಲ ಮಗನ ಸಂಬಳ ಅಷ್ಟೆ ..’ ಅಷ್ಟರಲ್ಲಿ ಮತ್ತೆ ಜೋರಾಗಿ ಅತ್ತು ಬಿಟ್ಟ. ‘ಯಾಕೆ ಅಳ್ತೀರ ಬಿಡಿ ಕಷ್ಟ ಸುಮಾರಾಗಿ ತೀರಿತ್ತಲ್ಲಾ …’ ಅಂದೆ. ಅವನು ಬಿಕ್ಕಿ ಬಿಕ್ಕಿ ಅಳೋದರ ನಡುವೇನೆ ‘ಎಲ್ಲಿ ಕಷ್ಟ ತೀರೋ ಕಥೆ ತಾಯಿ? ಇನ್ನೂ ಈಗ ಶುರು ಅನ್ಬೇಕು. ಈಗ ೨ ವರ್ಷದ ಕೆಳಗೆ ಸ್ನೇಹಿತರ ಜೊತೆ ಟ್ರಿಪ್ ಹೋಗಿ ಬರ್ತೀನಿ ಅಂತ ಹೋದ. ಪಾಪ ಓದೋ ವಯಸ್ಸಿನ ಹುಡುಗ ಕೆಲ್ಸ ಮಾಡಿ ಸುಸ್ತಾಗಿದ್ದಾನಲ್ಲಾ ಒಂದು ದಿನವಾದ್ರೂ ಸಂತೋಷದಿಂದ ಇದ್ದು ಬರಲಿ ಅಂತ ಕಳಿಸಿದೆ. ಅವನ ಸ್ನೇಹಿತರೆಲ್ಲ ಅದೇನು ದ್ವೇಷ ಇತ್ತೋ ಗೊತ್ತಿಲ್ಲ ಅವನನ್ನ ಮೇಲಿಂದ ತಳ್ಳಿ ಕೊಲೆ ಮಾಡಿಬಿಟ್ರು … ಬೆಳೆದ ಮಗ ಹಾಗೆ ಸತ್ತೋದ. ಅದೂ ಅವನ ಸಂಪಾದನೇಲೇ ಸಂಸಾರ ಸಾಗ್ತಿದ್ದಿದ್ದು. ಅವನೇ ಹೊರಟು ಹೋದ್ರೆ ನಮ್ಮ ಗತಿ ಏನಾಗಿರ್ಬೇಕು ಹೇಳಿ. ಈಗ ಇರೋ ನನ್ನ ಕಷ್ಟ ಸಾಲದು ಅಂತ ಪೋಲಿಸ್ ಸ್ಟೇಷನ್‌ಗೆ, ಕೋರ್ಟ್‌ಗೆ ಅಲೆಯೋ ಕೆಲಸ ಬೇರೆ ಬಿತ್ತು. ಮಗ ಹೋದ ಅಂತ ಅಳಲೋ, ಕೆಲ್ಸ ಮಾಡ್ಲೋ, ಮನೆ ನೋಡ್ಲೋ, ನನ್ನ ಆರೋಗ್ಯ ನೋಡ್ಲೋ … ಏನು ಮಾಡ್ಬೇಕು ಹೇಳಿ ನಾನು? ಈ ಮಧ್ಯೆ ನನ್ನ ಹೆಂಡ್ತೀಗೆ ಮಗ ಸತ್ತೋಗಿದ್ದಕ್ಕೆ ಒಂಥರ ಶಾಕ್ ಆಗೋಗಿ ಮಂಕಾಗೋದ್ಲು. ಅಡ್ಗೆ ಮಾಡಲ್ಲ, ತಿಂಡಿ ಮಾಡಲ್ಲ. ಕೂತ ಕಡೆಯೇ ಕೂತಿರ್ತಾಳೆ. ಮಧ್ಯೆ ಮಧ್ಯೆ ಕಿರುಚಿಕೊಳ್ತಾಳೆ, ಅಳ್ತಾಳೆ. ಅವಳನ್ನ ಯಾರಾದ್ರೂ ಡಾಕ್ಟ್ರ ಹತ್ರ ತೋರ್ಸಿ ಅಂತ ಹೇಳ್ತಾರೆ .. ಅದಕ್ಕೆಲ್ಲಿಂದ ತರ್ಲಿ ದುಡ್ಡು ನೀವೆ ಹೇಳಿ?’ ‘ನಾವು ಮುಂಚೆ ಇದ್ದ ಮನೆ ಪಕ್ಕ ಒಬ್ಬರು ಸ್ನೇಹಿತರಿದ್ರು. ಅವ್ರು ಒಂದಿಷ್ಟು ದಿನಸಿ ಕಳಿಸೋದಿಕ್ಕೆ ಶುರು ಮಾಡಿದ್ರು. ಅದ್ರಿಂದ ಇನ್ನೂ ಸಾಯದೇ ಬದುಕಿದೀವಿ ಅಷ್ಟೇ. ನನ್ನ ಇನ್ನೊಬ್ಬ ಮಗ ಪಿ.ಯು.ಸಿ ಒಂದು ವರ್ಷ ಓದಿದಾನೆ .. ಇನ್ನೊಂದು ವರ್ಷ ಓದಿದ್ರೆ ಸುಮಾರಾಗಿರೋ ಕೆಲ್ಸಾನಾದ್ರೂ ಸಿಗ್ತಿತ್ತು. ಅದು ಓದ್ಸಕ್ಕೆ ದುಡ್ಡೆಲ್ಲಿಂದ ತರಲಿ? ಅವನನ್ನ ಕಾಲೇಜು ಬಿಡಿಸಿದೆ. ಸಣ್ಣ ಕೆಲ್ಸ ಸಿಕ್ಕಿದೆ. ಅದಕ್ಕೆ ಹೋಗ್ತಿದಾನೆ. ಈ ಮಧ್ಯೆ ಈ ಕಾಲು ಭಲೇ ತೊಂದರೆ ಕೊಡ್ತಿದೆ ತಾಯಿ. ಅಸಾಧ್ಯ ನೋವು. ಅದ್ಯಾರ್ಯಾರೋ ಸಿಗ್ತಾರೆ. ಆ ಡಾಕ್ಟ್ರತ್ರ ಹೋಗು, ಈ ಡಾಕ್ಟ್ರತ್ರ ಹೋಗು ಅಂತ ಹೇಳ್ತಾರೆ. ಎಲ್ಲ ಸರಿ ಹೋಗೇ ಬಿಡತ್ತೇನೋ ಅನ್ನೋ ಆಸೆಯಿಂದ ನಾನು ಎಲ್ಲ ಕಡೆ ಹೋಗ್ತೀನಿ. ಒಂದೊಂದು ಸಲ ಹೋದ್ರೆ ೨೦೦ ರೂಪಾಯಿ ಛಾರ್ಜು ಆಗತ್ತೆ. ನೋಡಿ ಈ ಚೀಲದ ಭರ್ತಿ ಎಕ್ಸ್ ರೇಗಳು, ಸ್ಕ್ಯಾನಿಂಗ್ ರಿಪೋರ್ಟ್‌ಗಳು. ಇವತ್ತು ಯಾರೋ ಹೇಳಿದ್ರು ಅಂತ ನೆಲಮಂಗಲಕ್ಕೆ ಹೋದ್ರೆ ಆ ಡಾಕ್ಟ್ರು ಹೇಳ್ತಾರೆ ಅವರು ಯಾವುದೋ ಜಾತಿಯ ಆಶ್ರಮವೋ, ಮಠವೋ ನಡೆಸೋ ಆಸ್ಪತ್ರೆಗೆ ಸೇರಿದವ್ರಂತೆ. ಆ ಜಾತಿಗೆ ಸೇರಿದವ್ರಿಗೆ ಮಾತ್ರ ಆಪರೇಷನ್ ಮಾಡ್ತೀವಿ ಅಂದ್ರು. ನಾನು ಬೇರೆ ಜಾತಿಯವ್ನು. ಕೆಲ್ಸ ಆಗಲ್ಲ ಅಂತ ಗೊತ್ತಾಯ್ತು. ಕಾಲೆಳೆದುಕೊಂಡು ಬಂದೆ. ಅಲ್ಲ .. ಪಾಪಿ ಸಮುದ್ರಕ್ಕೆ ಹೋದ್ರೂ ಮೊಣಕಾಲುದ್ದ ನೀರು ಅನ್ನೋ ಹಾಗೆ ಹೋದ ಖರ್ಚಾದ್ರೂ ಹುಟ್ಟಲಿ ಅಂತ ಗಿರಾಕಿ ನೋಡ್ಕೊಂಡು ಬಂದ್ರೆ ಅಲ್ಲಿಂದ ಒಬ್ಬನೇ ಒಬ್ಬ ಕೈ ತೋರಿಸಲಿಲ್ಲ. ನಾನು ಕಾಲಿಟ್ಟ ಕಡೆ ಎಲ್ಲ ಹಾಳು ಅನ್ನೊ ಹಂಗೆ ಆಗೋಗಿದೆ ನೋಡಿ. ಇನ್ನೇನು ನಮ್ಮನೆ ಎರಡು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಬರೋವಾಗ ನೀವು ಕೈ ತೋರ್ಸಿದ್ರಿ…’ ಮಾತು ನಿಲ್ಲಿಸಿ ಉಸಿರೆಳೆದುಕೊಂಡ. ನಾನು ಮೂಕಳ ಹಾಗೆ ಕೂತಿದ್ದೆ. ಕಷ್ಟಗಳ ಸರಮಾಲೆ ಅನ್ನೋ ಪದಗುಚ್ಛ ಬಳಸಿ ಬಳಸಿ ಸವಕಲು ಕ್ಲೀಷೆಯಾಗಿ ಹೋಗಿ ನಿಜಕ್ಕೂ ಹಾಗೆಂದರೆ ಏನು ಅನ್ನೋದನ್ನೇ ಯೋಚಿಸಿರಲಿಲ್ಲ ಯಾವತ್ತೂ. ಈಗ ಗೊತ್ತಾಯ್ತು ಅದರ ಅರ್ಥ! ‘ನಿನ್ನ ಮಗನ ಕಾಲೇಜಿಗೆ ಎಷ್ಟು ದುಡ್ಡು ಕಟ್ಟಬೇಕು?’ ಅಂದೆ. ಮೂರು ಸಾವಿರ ಅಂದ. ‘ನಾನು ಕೊಟ್ಟರೆ ಸೇರಿಸ್ತೀಯಾ?’ ಅಂದೆ. ಅವನ ಮುಖದಲ್ಲಿ ಆಶ್ಚರ್ಯವೋ, ದಿಗ್ಭ್ರಮೆಯೋ ಎಂತದ್ದೋ ಭಾವ. ಅವನ ಕೈಗೆ ಮೂರು ಸಾವಿರಕೊಟ್ಟು ಫೋನ್ ನಂಬರ್ ತೆಗೆದುಕೊಂಡು ಹೊರಟೆ. ‘ಅಡ್ಮಿಷನ್ ಮಾಡಿಸಿ ಆಮೇಲೆ ಫೋನ್ ಮಾಡ್ತೀನಿ ತಾಯಿ’ ಅಂದ. ತಲೆಯಾಡಿಸಿ ಹೊರಟೆ. ಮನಸ್ಸಿಗೆ ಸುಸ್ತಾಗಿತ್ತು. ಉಪಸಂಹಾರ: ದಿನಗಳು ಉರುಳಿದವು. ಅವನ ಫೋನ್ ಇಲ್ಲ! ನನಗೆ ಮೋಸ ಮಾಡಿದನಾ? ಅನ್ನಿಸೋದಿಕ್ಕೆ ಶುರು ಆಯ್ತು. ಅವನ ಫೋನ್ ನಂಬರ್ ಇದ್ದರೂ ನಾನು ಕಾಲ್ ಮಾಡಲಿಲ್ಲ. ಆಗ ನಡೆದದ್ದನ್ನ ಮನೆಯಲ್ಲಿನ ಸದಸ್ಯರಿಗೆ ಹೇಳಿದೆ….‘ಸರಿಯಾಗಿ ಟೋಪಿ ಹಾಕಿದಾನೆ ಬಿಡು’ .. ‘೨ ಕಿಲೋಮೀಟರ್‌ಗೆ ೩೦೦೦ ಸಾವಿರ ! ದುಬಾರಿಯಾಯ್ತಲ್ಲ ಮಾರಾಯ್ತಿ. ಚಾರ್ಟರ್ಡ್ ಪ್ಲೇನ್‌ನಲ್ಲಿ ಹೋಗಬಹುದಿತ್ತು’ …‘ಇಂಥ ಕಷ್ಟ ಇರೋರು ಜಗತ್ತಿನಲ್ಲಿ ಎಷ್ಟೊಂದು ಜನ ಇದಾರೆ. ಎಲ್ರಿಗೂ ಕೊಟ್ಕೊಂಡು ಹೋಗ್ತೀಯಾ?’ …‘ಇನ್ಮೇಲೆ ಎಕ್ಸ್ಟ್ರಾ ದುಡ್ಡು ಇಟ್ಕೊಂಡು ಹೋಗಬೇಡ, ದಾನ ಮಾಡ್ಕೊಂಡು ಬರ್ತೀಯಾ’ … ‘ಅಷ್ಟೊಂದಿದ್ರೆ ಅವನ ಜೊತೆ ಕಾಲೇಜಿಗೇ ಹೋಗಿ ಅಡ್ಮಿಷನ್ ಮಾಡಿಸಿ ಬರ್ಬೇಕಿತ್ತು’ ಹೀಗೆ ನಾನಾ ಉಪದೇಶ, ಗೇಲಿ ಎಲ್ಲ ಕೇಳಿದ್ದೂ ಆಯ್ತು. ನಾನು ಉತ್ತರಿಸುವ ಗೋಜಿಗೆ ಹೋಗದೆ ಸುಮ್ಮನುಳಿದೆ. ಹೋಗಲಿ ಬಿಡು, ಮೋಸವೇ ಮಾಡಿದ್ದಾನೆ ಅಂತ ಇಟ್ಕೊಂಡರೂ ಪಾಪ ಮೂರು ಸಾವಿರ ತಾನೇ? ಅಂತ ನನ್ನ ನಾನೇ ಸಮಾಧಾನಿಸಿಕೊಂಡೆ. ಅವನ ಕಾಲಿನ ಸ್ಥಿತಿ ಕಣ್ಣಾರೆ ಕಂಡಿದ್ದೆನಲ್ಲಾ .. ಹಾಗಾಗಿ ಮೋಸ ಮಾಡಿದ್ದರೂ ಆ ಸ್ಥಿತಿಯಲ್ಲಿರೋ ಮನುಷ್ಯನಿಗೆ ಯಾವುದೋ ಒಂದು ಕೆಲ್ಸಕ್ಕೆ ನನ್ನ ದುಡ್ಡು ಉಪಯೋಗಕ್ಕೆ ಬಂದಿರತ್ತೆ ಅಂದುಕೊಂಡೆ. ಅದಾದ ಒಂದು ವಾರದ ನಂತರ ಬೇರೆ ಯಾವುದೋ ನಂಬರ್‌ನಿಂದ ಫೋನ್ ಬಂತು... ಮಗನನ್ನ ಕಾಲೇಜಿಗೆ ಸೇರಿಸಿದೆ, ಉಪಕಾರವಾಯ್ತು, ಮಗನನ್ನ ಕರ್ಕೊಂಡು ಒಂದಿನ ಬರ್ತೀನಿ ಅಂದ. ಇರಲಿ ಬಿಡು ಅಂದೆ. ನಂಬಿಕೆ ಬದುಕಿನ ತಳಹದಿ ಅನ್ನೋದು ನನ್ನ ನಂಬಿಕೆ!!]]>

‍ಲೇಖಕರು G

March 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

22 ಪ್ರತಿಕ್ರಿಯೆಗಳು

 1. Jayalaxmi Patil

  ನಿಜಕ್ಕೂ ವರ್ತ್ ಓದು ಇದು.ಆ ವ್ಯಕ್ತಿಯ ಬದುಕು ಇನ್ನಾದರೂ ಹಸನಾಗಲಿ… ನಿಮ್ಮ ವಿಶಾಲ ಮನಸ್ಸಿಗೊಂದು ಸಲಾಮ್ ಭಾರತಿ.

  ಪ್ರತಿಕ್ರಿಯೆ
 2. kavya

  namaste madam,
  nivu nijakku 1nd volle kelsa maadidira, daivittu a vyakthiya phone number sigutha? namma sanehitharellaru seri kashta irovrige aadasttu sahaya mado nittinalli naavu Sahaya hastha geleyara balaga anno team madkondidivi.. nanna snehithara jothe mathadi namminda ago astu avrige help mado prayathna madthivi..
  dhanyavaadagalu 🙂

  ಪ್ರತಿಕ್ರಿಯೆ
 3. savitri

  ಮೇಡಮ್, ಅಟೋವಾಲಾಗಳಲ್ಲಿ ಕಷ್ಟಸಹಿಷ್ಣುಗಳೂ, ದಯಾಮಯಿಗಳೂ ಇರುತ್ತಾರೆ…ಅಂತಹ ವ್ಯಕ್ತಿಗಳು ತಮ್ಮಂಥವರಿಂದ ಸಹಾಯ ಪಡೆಯುತ್ತಾರೆ. ಮತ್ತೆ ಯಾರಿಗೋ ಸಹಾಯದ ಅಗತ್ಯ ಇದೆ ಎಂದು ತಿಳಿದರೆ ತಮ್ಮ ಪಾಲಿಗೆ ಇಟ್ಟುಕೊಂಡಿದ್ದನ್ನೇ ಕೈ ಎತ್ತಿ ಕೊಟ್ಟೂ ಬಿಡುತ್ತಾರೆ. ನೀವು ಬಿತ್ತಿದ್ದು ಬೆಳಕಿನ ಬೀಜ…ಅದು ಹೆಮ್ಮರವಾಗಲಿ…

  ಪ್ರತಿಕ್ರಿಯೆ
 4. veena bhat

  GREAT…Bharati..! Olle uddeshadinda kottiddu yavattoo waste aagada haage devru nodkotane..

  ಪ್ರತಿಕ್ರಿಯೆ
 5. bharathi

  KAVYA IDU AAGIDDU SUMAARU DINAGALA HINDE. NANNA MOBILE KETTUHOGI ELLA CONTACTS KALEDUKONDU BITTE. ADRALLI AVNA NO. KOODAA HORTU HOYTHU … NANNA NO. AAMELE BADALISIDE .. HAAGAAGI AATHANA HATRA NANNA NO. ILLA .. AUTO NO. KOODAA NENAPILLA .. ((

  ಪ್ರತಿಕ್ರಿಯೆ
 6. sunil

  akka…..u deserves the best…
  novannu ele eleyaagi tegeditta neevu kannerannu tarisibitri…

  ಪ್ರತಿಕ್ರಿಯೆ
 7. mahima

  bhaarti madam worth reading, duddu kotre kaledu hogutte mosa aagutte anta maadoke manasidru sumne baro kaaldalli, 3000 rs kottu sahaaya maadida nimma olletanaana mecchbeku. maride cal madida raamuna kuda

  ಪ್ರತಿಕ್ರಿಯೆ
 8. bharathi

  illondu maathu helalebeku naanu … avana hesru Ramu alla shivanna antha mattu avnige ondu gandu mattu ondu hennu maklu. naa duddu kottiddu aa magala odige. avna mane irodu bank colony anda .. allina auto drivers na kelidre enaadroo sahaya aagbahudaa antha ondu yochne bartide eega … naanu adade hesrugalanna bardu hindella swalpa tondreli sikkondidde .. adakke swalpa sanna putta badalaavane maadi haakde ashte .. ulidella sangathigaloo 100% haag haage bardidini .. avna magla colg hesru koodaa nenpaagtilla ..

  ಪ್ರತಿಕ್ರಿಯೆ
 9. renuka nidagundi

  ಭಾರತಿ ನೀವು ಮಾಡಿದ್ದು ಒಳ್ಳೆ ಕೆಲಸ. ನಿಮ್ಮ ವಿಶಾಲ ಮನಸ್ಸಿಗೆ ಒಂದು ಸಲಾಮ್ !ಆದರೆ ಮಹಾನಗರದಲ್ಲಿನ ಕಷ್ಟದಲ್ಲಿರೋ ಜನ ನಿಜವನ್ನೇ ಹೇಳುತ್ತಾರೆಂದು ಯಾರೂ ನಂಬಲಾರದ ಜಮಾನಾ ಇದು. ಆದರೂ ಆ ಕ್ಷಣಕ್ಕೆ ನಿಮ್ಮ ಮನಸ್ಸು ಹೇಳಿದ್ದನ್ನು ಪ್ರಮಾಣಿಕವಾಗಿ ಮಾಡಿದ್ದೀರಿ. ಒಬ್ಬ ವಿದ್ಯಾರ್ಥಿಗೆ ನಿಜವ್ಕ್ಕೂ ಸಹಾಯವಾಗಿದ್ದರೆ ಅದು ಸಾರ್ಥಕವೇ. ಆದ್ರೂ ಮನುಷ್ಯ ಪರಿಸ್ಥಿತಿಯ ಕೈಗೊಂಬೆ. ಏನೋ ಒಂದು ರೀತಿ ಅವನಿಗೆ ಸಹಾಯವಾಗಿದೆಯೆಂದು ಖುಶಿಯಾಗುತ್ತೆ.

  ಪ್ರತಿಕ್ರಿಯೆ
 10. bharathi

  avnu harditta x ray, scanning reports, jotege biduru kattidda kaalu nodid mele nambade irodikke aaglilla renuka .. sulabhakke nambo anthavalalla naanoo …

  ಪ್ರತಿಕ್ರಿಯೆ
 11. ಕುಮಾರ ರೈತ

  ಈ ಬರಹ ಓದ್ತಾ ಓದ್ತಾ ಮೈ ಜುಮ್ ಅಂತು. ಎಷ್ಟೆಲ್ಲ ಕಷ್ಟಗಳು. ಎಲ್ರಿಗೂ ಸಹಾಯ ಮಾಡೋಕ್ಕಾಗೋಲ್ಲ ನಿಜ. ಆದ್ರೆ ಯಾರಿಗೂ ಸಹಾಯ ಮಾಡದೇ ಇರೋಕೆ ಸಾಧ್ಯವಿಲ್ಲ. ತುಂಬ ಒಳ್ಳೆ ಕೆಲ್ಸ ಮಾಡಿದ್ರಿ ಭಾರತಿ. ನಿಮ್ ಅಂತಃಕರಣಕ್ಕೆ ಅಭಿನಂದನೆ….

  ಪ್ರತಿಕ್ರಿಯೆ
 12. D.RAVI VARMA

  ಮೇಡಂ ನಿಮಗೊಂದು ಪ್ರೀತಿಪೂರ್ವಕ ನಮಸ್ಕಾರ. ಈ ಜಂಜಡ,ಮಾನಸಿಕ ಒತ್ತಡ , ಒಂಟಿತನ ಇವೆಲ್ಲವುಗಳ ಮದ್ಯೆ ನಾವು ನಮ್ಮ ಬದುಕನ್ನು,ಜೀವನ್ತೀಕೆಯೇನ್ನೇ ಎಲ್ಲೋ ಕಳೆದುಕೊಲ್ಲುತ್ತಿದ್ದೆವೇನೋ ಅನಿಸುತ್ತದೆ, ಆದರೆ ಒಮ್ಮೆ ಇನ್ನೋದೆದೆ ಕಣ್ಣು ಹಾಯಿಸಿದರೆ ಅಲ್ಲಿ ದಿನನಿತ್ಯದ ಬದುಕು ಹಸಿವೆ,ಬಡತನ,ನರಳಾಟ, ಅರಚಾಟ ,ದಿನನಿತ್ಯದ ಗೋಳು ಹೀಗೆ,ಹೀಗೆ ಬದುಕು ವಿಲವಿಲ ಒದ್ದಾಡುತ್ತದೆ, ಈ ಬದುಕು ಕ್ಷಣಿಕ, ಇದ್ದು ಇಲ್ಲವಗುವಮುನ್ನ, ನಮ್ಮಿಂದ ಒಂದಿಸ್ತು ಇತರರಿಗೆ ಸಹಾಯ ಮಾಡಲು ಸಾದ್ಯವಾದರೆ ಅದಕ್ಕಿಂತ ಕುಶಿ ಮತ್ತೊಂದಿಲ್ಲ. ನಿಮ್ಮ ಈ ಮಾನವೀಯ ಕಳಕಳಿಯನ್ನು ನಾನು ತುಂಬಾ ಮೆಚ್ಚುತ್ತೇನೆ ,

  ಪ್ರತಿಕ್ರಿಯೆ
 13. MANJUKUMAR

  Namaste,
  kashta iruva kadeye kashta irutte, sukha iruva kadeye suka irutte.
  Sukha iruvavaru sahaya mado manobhava irabeku aagale baduku sarthaka agodu.
  Eshtu sahaya madidvi annodikintha, yava paristitili sahaya madidvi annodu IMPORTNANT.
  THUMBA SANTOSHA AYTHU NIMMA MANOBHAVA (DINDA).
  VANDANEGALU
  MANJU KUMAR

  ಪ್ರತಿಕ್ರಿಯೆ
 14. D.RAVI VARMA

  ಮೇಡಂ,ನನಗೆ ಕುಂವೀ ಅವರ ಒಂದು ಕಥೆ ನೆನಪು ಬರುತ್ತೆ. ಆ ಕಥೆಯಲ್ಲಿ ಒಂದುಕುಟುಂಬ ಶವಸಂಸ್ಕಾರ ವನ್ನೇ ಕಸುಬಾಗಿಸಿಕೊಂಡು ಬದುಕುತ್ತಿರುತ್ತೆ, ಕುನಿತೆಗೆಯುವುದರಿಂದ ಪ್ರಾರಮ್ಬಗೊಂದು, ಅದು ಮಾನು ಮಾಡುವತನಕ ಅವರ ಕೆಲಸ. ಅದು ಬಿಟ್ಟರೆ ಬೇರೆಕೆಲಸವೇ ಗೊತ್ತಿಲ್ಲ., ಒಮ್ಮೆ ಬಹಳದಿನಗಳವರೆ ಅಲ್ಲಿ ಯಾರು ಸಾಯುವುದಿಲ್ಲ, ಕಿತ್ತಿತಿನ್ನುವ ಬಡತನ,ಹಸಿವು
  ಹಾಹಾಕಾರ, ಆಗ ಇದ್ದಕಿನ್ದ್ದಂತೆ ಯಾರೋ ಮನೆಯಲ್ಲಿ ಒಂದು ಸಾವಾಗಿದೆ ಎನ್ನುವ ವಿಷಯ ತಿಲಿದತಕ್ಷಣ ಅವನು ಮನೆಯಲ್ಲಿಯ ಹಲಗೆ ಹಿಡಿದು ಕುಣಿಯುತ್ತಾನೆ, ಈದಿನ ನನ್ನ ಕುಟುಂಬಕ್ಕೆ ಒಂದಿಸ್ತು ,ಆಹಾರ ಸಿಗುತ್ತೆ ಎನ್ನುವ ಕುಶಿಯಿಂದ, ನೋಡಿ ಸಾವಿ ದುಕ್ಖದ ಮನೆ, ಮತ್ತೊಂಡದೆ ಆ ಸಾವನ್ನು ವಿಜ್ರುಂಬಿಸಿವ ದುರಂತ. ಇದೆ ಬದುಕು ವಿಚಿತ್ರವಾದರೂ ಅಪ್ಪಟ ಸತ್ಯ. ಮತ್ತೊಂದು ಜನಪದ ಹಾಡು ನೆನಪು ಬರುತ್ತೆ ನೋಡಿ .
  ಅನ್ನೆಕಾರ ಅರಸು ನಿನ್ನ ಸಂಬಳ ಸಾಕಯ್ಯ
  ಹನ್ನೆರಡು ವರ್ಷದ ಹಳಿ ಅಕ್ಕಿ ಅಣ್ಣ ಉಂಡು
  ಚೆನ್ನಿಗ ನನ್ನ ತಮ್ಮ ಬಡವಾದ .
  ಬಡವರು ಸತ್ತರೆ , ಸುಡಲಾಕ ಸೌದಿಲ್ಲೋ ,
  ಒಡಲಾ ಬೆಂಕ್ಯಾಗ ಹೆಣ ಬೆಂದೂ ,
  ಓದಲ ಬೆಂಕ್ಯಾಗ ಹೆಣ ಬೆಂದೂ ದ್ಯಾವರಾ
  ಬಡವರಿಗೆ ಸಾವಾ ಕೊಡಬ್ಯಾಡೋ , ಒಪ್ಪತ್ತಿನ ಕೂಲಿಗಾಗಿ ಬದುಕು ಇಲ್ಲಿ ವಿಲಿ ವಿಲಿ ಒದ್ದದುತಿದ್ದರೆ ಮತ್ತೊಂದೆಡೆ ವೈಭೋಗದಲ್ಲಿ ಮೆರೆಯುತ್ತಿದೆ , ಬಹುಷಃ ಕುಡಿ ತಿನ್ನೋ ಕೋಳಿಹಾಂಗ.ಕುಉಗಿ ಕರೆಯೋ ಕಾಗಿಹಾಂಗ ಬದುಕೋದನ್ನು ನಾವು ಕಲಿಯಲಿಲ್ಲವೇನೋ ಅಲ್ಲವೇ . ನಿಮ್ಮ ಲೇಖನ ನನ್ನನು ತುಂಬಾ ಕಾಡಿತು ಹಾಗಾಗಿ ಇದೆಲ್ಲವನ್ನು ಹೇಳಬೇಕಯ್ತು
  ರವಿ ವರ್ಮ ಹೊಸಪೇಟೆ ,

  ಪ್ರತಿಕ್ರಿಯೆ
 15. ಉಷಾಕಟ್ಟೆಮನೆ

  ಲೇಖನದ ಆರಂಭದಲ್ಲಿ ನನಗೆ ನೆನಪಾಗಿದ್ದು ಸುಮಾರು ಹತ್ತು ವರ್ಷಗಳ ಹಿಂದಿನ ಅನುಭವ; ರಾತ್ರಿ ಒಂಬತ್ತು ಘಂಟೆ ಹೊತ್ತಿನಲ್ಲಿ ಅಟೋ ಡ್ರೈವರನೊಬ್ಬ ನನ್ನಲ್ಲಿ ಡಬ್ಬಲ್ ರೇಟ್ ಕೇಳಿದಾಗ ನಾನು ಜಗಳವಾಡಿದೆ. ಅದಕ್ಕಾತ ’ ಮೊನ್ನೆ ಮೈಕ್ ಟೈಸನ್ ಮಾಡಿದ್ದು ಗೊತ್ತಲ್ಲಾ’ ಎಂದು ಉದ್ದಟತನದಿಂದ ಮಾತಾಡಿದ್ದು. ಬಾಕ್ಸರ್ ಮೈಕ್ ಟೈಸನ್ ಎಸಗಿದ ಅತ್ಯಾಚಾರ ಪ್ರಕರಣ ಆಗ ಜಗತ್ತಿನಾದ್ಯಂತ ಸುದ್ದಿ ಮಾಡಿತ್ತು.
  ಓದುತ್ತಾ ಹೋದಂತೆಲ್ಲಾ ಭಾರತಿ ಕೇಳಿದಂತೆ”ಒಬ್ಬನೇ ಮನುಷ್ಯನಿಗೆ ಇಷ್ಟೆಲ್ಲಾ ಕಷ್ಟ ಬರಬಹುದೇ’ ಎಂದು ಕೇಳಿಕೊಳ್ಳುವಂತಾಯಿತು.
  ಬಾರತಿ, ನೀವು ನಿರ್ಲಿಪ್ತತೆಯಿಂದ ಕಥೆ ಹೇಳಿದಂತೆ ನಿರೂಪಿಸುತ್ತಾ ಹೋದ ಶೈಲಿ ತುಂಬಾ ಇಷ್ಟ ಆಯಿತು.
  ಇನ್ನು ನಿಮ್ಮ ಮಾನವೀಯ ಸ್ಪಂದನೆಗೆ ನನ್ನಲ್ಲಿ ಮಾತುಗಳಿಲ್ಲ. ಆ ಗುಣ ನನ್ನನ್ನೂ ಅವರಿಸಿಕೊಳ್ಳಲಿ
  ಉಷಾಕಟ್ಟೆಮನೆ.

  ಪ್ರತಿಕ್ರಿಯೆ
  • bharathi

   usha .. antha auto drivergaloo sikkidaare nanage .. adakkintha kettadaagi varthisidavroo kooda …

   ಪ್ರತಿಕ್ರಿಯೆ
 16. N.Viswanatha

  niroopane hrudaya sparshi agide. lekhakiyanthaha udaara manasinavaragalu beralenikeyashtu.inthahavara sankhye vriddiyagali

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: