ಭೂಪಾಲದ ನೋವಿಗೆ ಸ್ಪಂದಿಸೋಣ

ಭಾರತ ಪರ ಜನ ವೇದಿಕೆ, ಬೆಂಗಳೂರು

ನಂ.8, ಓ.ಟಿ.ಸಿ ರಸ್ತೆ, ಬೆಂಗಳೂರು 560002 ವಿಮಾ ನಿಗಮ ನೌಕರರ ಸಂಘ ಬೆಂಗಳೂರು ವಿಭಾಗ 1 ಮತ್ತು 2/ ಬಿ.ಆರ.ಜಿ.ಐ.ಇ.ಎ/ ಬಿ.ಇ.ಎಫ್.ಐ/ ಡಿ.ವೈ.ಎಫ್.ಐ/ ಎಸ್.ಎಫ್.ಐ/ ಜನವಾದಿ ಮಹಿಳಾ ಸಂಘಟನೆ/ ಭಾರತ ಜ್ಞಾನ ವಿಜ್ಞಾನ ಸಮಿತಿ/ ಸಮುದಾಯ/ ಐ.ಟಿ.ನೌಕರರ ಬಳಗ/ ಬಿ.ಎಚ್.ಇ.ಎಲ್ ಮತ್ತು ಬಿ.ಎಸ್.ಎನ್.ಎಲ್ ಗೆಳೆಯರು,
ಭೂಪಾಲ್ ವಿಷಾನಿಲ ದುರಂತ ಕುರಿತ ತೀರ್ಪು ನ್ಯಾಯ ದೇಗುಲದಿಂದಲೇ ಅಕ್ಷಮ್ಯ ಅನ್ಯಾಯ ದುರಂತದ ಹಿನ್ನೆಲೆ ವಿಶ್ವದ ಅತ್ಯಂತ ದೊಡ್ಡ ಕೈಗಾರಿಕಾ ದುರಂತ-ಭೂಪಾಲ್ ವಿಷಾನಿಲ ದುರಂತ-ಕುರಿತ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ. 25000 ಕ್ಕೂ ಹೆಚ್ಚಿನ ಜನರನ್ನು ಬಲಿತೆಗೆದುಕೊಂಡ ಹಾಗೂ ಐದು ಲಕ್ಷಕ್ಕೂ ಮೀರಿದ ಅಮಾಯಕರ ಬದುಕನ್ನು ಕಸಿದುಕೊಂಡ ಆ ದುರಂತದ ತೀರ್ಪು ಕೊನೆಗೂ 25 ವರ್ಷಗಳ ನಂತರ ಹೊರಬಿದ್ದಿದೆ. ಯೂನಿಯನ್ ಕಾರ್ಬೈಡ್ ನ ಗೊಬ್ಬರ ಕಾರ್ಖಾನೆಯಲ್ಲಿ 1984ರ ಡಿಸೆಂಬರ್ 2 ಮತ್ತು 3 ನಡುವಿನ ರಾತ್ರಿಯಲ್ಲಿ 40000 ಕೆಜಿ. ವಿಷಾನಿಲ ಸೋರಿಕೆಯಿಂದ ಕ್ಷಣಮಾತ್ರದಲ್ಲಿ 4000 ಕ್ಕಿಂತಲೂ ಹೆಚ್ಚಿನ ಜನ ಹೆಣವಾದರು ಮತ್ತು ಒಂದು ಲಕ್ಷಕ್ಕಿಂತಲೂ ಮೀರಿದ ಜನರು ಗಾಯಗೊಂಡರು. ದಿನಗಳು ಉರುಳಿದಂತೆ ಆ ಸಂಖ್ಯೆಗಳು ಏರುತ್ತಾ ಹೋದವು. ಕಾರ್ಖಾನೆ ಆಡಳಿತವರ್ಗದ ನಿರ್ಲಕ್ಷ್ಯ ಮತ್ತು ಸುರಕ್ಷಾ ವ್ಯವಸ್ಥೆಯ ಲೋಪದ ಬಗ್ಗೆ ಸಾಕಷ್ಟು ಮುಂಚೆಯೇ ಎಚ್ಚರಿಕೆ ನೀಡಿದ ಮೇಲೂ ಕ್ರಮಗಳನ್ನು ಕೈಗೊಳ್ಳದಿರುವುದು ಆ ಅನಾಹುತಕ್ಕೆ ಕಾರಣ ಎಂಬುದು ತನಿಖೆಗಳಿಂದ ಸಾಬೀತಾಗಿದೆ. ವಾರೆನ್ ಆಂಡರ್ಸನ್ ಎಂಬ ದೊಡ್ಡ ಪಾತಕಿ ಪ್ರಮುಖ ಆರೋಪಿ ಯೂನಿಯನ್ ಕಾರ್ಬೈಡ್ ನ ಅಂದಿನ ಅಧ್ಯಕ್ಷ ವಾರೆನ್ ಆಂಡರ್ಸನ್ ಅಮೆರಿಕದ ನ್ಯೂಯಾರ್ಕ್ ನಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾನೆ. ಅವನ ಬಗ್ಗೆ ಚಕಾರವನ್ನೂ ಎತ್ತದ ಈ ತೀರ್ಪು,  ಆ ಕಾರ್ಖಾನೆಯಲ್ಲಿ ಮೇಲಧಿಕಾರಿಗಳಾಗಿದ್ದ ಎಂಟು ಭಾರತೀಯರಿಗೆ ಕೇವಲ ಎರಡು ವರ್ಷಗಳ ಜೈಲುವಾಸದ ಶಿಕ್ಷೆಯನ್ನು ನೀಡಿದೆ. ವಿಪರ್ಯಾಸವೆಂದರೆ ಆ ತೀರ್ಪಿನ ಜತೆಯಲ್ಲೇ ಅವರೆಲ್ಲರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಿಯೂ ಆಗಿದೆ. ಅದೊಂದು ಅಕ್ಷಮ್ಯ ಅನ್ಯಾಯದ ತೀರ್ಪು. ನ್ಯಾಯ ದೇಗುಲವೇ ನ್ಯಾಯವನ್ನು ನಿರಾಕರಿಸಿದ ತೀರ್ಪು ಅದು. ನ್ಯಾಯಾಧೀಶ ವಿ.ಆರ್.ಕೃಷ್ಣ ಅಯ್ಯರ್  ಅವರ ನೋವಿನ ನುಡಿ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾದ ವಿ.ಆರ್.ಕೃಷ್ಣ ಅಯ್ಯರ್ ಆ ತೀರ್ಪಿನ ಬಗ್ಗೆ ಬರೆದ ಲೇಖನವೊಂದರಲ್ಲಿ ಹೇಳುತ್ತಾರೆ: ‘ . . ಸಣ್ಣ ಪುಟ್ಟ ಅಪರಾಧಿಗಳು ಉದ್ಯೋಗ ಮಾಡಿದರೆ, ಅವರಿಗೆ ಶಿಕ್ಷೆ ವಿಧಿಸಬೇಕು ಎಂದು ಗುಲ್ಲೆಬ್ಬಿಸುತ್ತಾರೆ. ಆದರೆ ಬಲಿಷ್ಠ ವ್ಯಕ್ತಿಗಳು ಮಾರಕ ಹತ್ಯಾರಗಳ ಮೂಲಕ ಪೈಶಾಚಿಕ ಅಪರಾಧಗಳನ್ನು ಮಾಡಿದರೆ ಅಂಥವರನ್ನು ಬಿಟ್ಟುಬಿಡಬೇಕೆ? ಅಂತಹ ಕಾನೂನು ಅನೈತಿಕವಾದದ್ದು, ಅಮಾನೀಯವಾದದ್ದು ಹಾಗೂ ನ್ಯಾಯದ ಉಲ್ಲಂಘನೆ.’ ಮುಂದುವರಿಯುತ್ತಾ ‘. . . ಮಾನವೀಯ ತತ್ವದ ಯಾವುದೇ ಕಾನೂನು, ಕೊಲೆಪಾತಕಿಯಿಂದ ಹಣ ಪಡೆದ ನಂತರ ತನ್ನ ಪ್ರಜೆಗಳ ಜೀವಗಳನ್ನು ಬಲಿತೆಗೆದುಕೊಳ್ಳುವ ಅಧಿಕಾರವನ್ನು ಒಂದು ಸರ್ಕಾರಕ್ಕೆ ನೀಡಲು ಸಾಧ್ಯವಿಲ್ಲ . . ಇದೇ ನಮ್ಮ ಕಾನೂನಾದರೆ ಈ ನಾಡಿನಲ್ಲಿ ಬುಧ್ಧ ಮತ್ತು ಗಾಂಧಿ ಹುಟ್ಟಿದ್ದೇ ದಂಡ . . .’ ಎಂದು ಅಯ್ಯರ್ ತೀಕ್ಷ್ಣವಾಗಿ ನೊಂದು ನುಡಿದಿದ್ದಾರೆ. ಸಚಿವರ ಸಮಿತಿ ಮತ್ತು ಪರಮಾಣು ಋಣಭಾರ ಮಸೂದೆ ಆ ತೀರ್ಪಿನ ವಿರುಧ್ಧ ಜನರ ಆಕ್ರೋಷ ಮತ್ತು ಮಾಧ್ಯಮಗಳ ತೀಕ್ಷ್ಣ ಟೀಕೆಯಿಂದಾಗಿ ಕೇಂದ್ರ ಸರ್ಕಾರ ಸಚಿವರ ಸಮಿತಿಯೊಂದನ್ನು ರಚಿಸಿದೆ. ಆ ಸಮಿತಿಯ ಶಿಫಾರಸುಗಳು ಸಂತ್ರಸ್ತರಿಗೆ ಅನುಕೂಲ ಮಾಡಿಕೊಡುವ ಬದಲು ಈಗಾಗಲೇ ಕುಖ್ಯಾತಿಯಾಗಿರುವ ಪರಮಾಣು ಋಣಭಾರ ಮಸೂದೆ(ನ್ಯೂಕ್ಲಿಯರ್ ಲಿಯಬಿಲಿಟಿ ಬಿಲ್)ಯನ್ನು ಹೇಗೆ ಉಳಿಸಬೇಕು ಎನ್ನುವುದರತ್ತ ಹೆಚ್ಚು ತಲೆ ಕಡಿಸಿಕೊಂಡಿದೆ. ಕೇಂದ್ರ ಯು.ಪಿ.ಎ ಸರ್ಕಾರವು ಆ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕಾರ ಮಾಡಲು ಹವಣಿಸುತ್ತಿದೆ. ಭೂಪಾಲ್ ದುರಂತದಂತಹ ಹಲವಾರು ಪರಮಾಣು ಅನಾಹುತಗಳ ಸಾಧ್ಯತೆ ಹೊಂದಿರುವ ಭಾರತ ಅಮೆರಿಕಾ ಅಣು ಒಪ್ಪಂದಕ್ಕೆ ಪೂರಕವಾಗಿ ಪರಮಾಣು ರಿಯಾಕ್ಟರ್ ಉತ್ಪಾದನಾ ಕಂಪನಿಗಳ ಬಲವಂತಕ್ಕೆ ಮಣಿದು ಆ ಮಸೂದೆಯನ್ನು ತರಲಾಗುತ್ತಿದೆ. ಅನಾಹುತಗಳಾದಾಗ ವಿದೇಶೀ ಪೂರೈಕೆದಾರರನ್ನು ಋಣಭಾರದಿಂದ ಮುಕ್ತಗೊಳಿಸುವ ಹುನ್ನಾರ ಆ ಮಸೂದೆಯಲ್ಲಿದೆ. ಈಗ ಭೂಪಾಲ್ ದುರಂತದಲ್ಲಿ ದೊರೆತ ಪರಿಹಾರದ ಮೊತ್ತಕ್ಕಿಂತಲೂ ಕಡಿಮೆ ಮೊತ್ತವನ್ನು ಆ ಮಸೂದೆ ನಿಗದಿಪಡಿಸಿದೆ. ಆ ಮಸೂದೆಯನ್ನು ಅಂಗೀಕಾರ ಮಾಡುವುದು ಎಂದರೆ ಭಾರತ ದೇಶದ ಜನರ ಸುರಕ್ಷತೆ ಮತ್ತು ಹಿತಾಸಕ್ತಿಯನ್ನು ಬಲಿಕೊಡುವುದು ಎಂದೇ ಅರ್ಥ. ಆದ್ದರಿಂದ ಸಹಿ ಸಂಗ್ರಹ ಚಳುವಳಿ 1. ಕೇಂದ್ರ ಸರ್ಕಾರವು ಆ ತೀರ್ಪಿನ ವಿರುಧ್ಧ ಈ ಕೂಡಲೇ ಮೇಲ್ಮನವಿ ಸಲ್ಲಿಸಬೇಕು; 2. ಆರೋಪಿಗಳಿಗೆ ಇನ್ನೂ ಹೆಚ್ಚಿನ ಶಿಕ್ಷೆಯಾಗಬೇಕು; 3. ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಮತ್ತು ಸಂತ್ರಸ್ತರಾದವರಿಗೆ ತಕ್ಷಣವೇ ಪರಿಹಾರ ನೀಡಬೇಕು ಮತ್ತು ಪುನರ್ವಸತಿ ಕಲ್ಪಿಸಬೇಕು; 4. ಉತ್ತಮ ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲೆಗಳು ಮುಂತಾದ ಅನುಕೂಲಗಳನ್ನು ಸರ್ಕಾರ ಈ ಕ್ಷಣವೇ ಒದಗಿಸಬೇಕು; 5. ಸರ್ಕಾರದ ಬೊಕ್ಕಸದಿಂದ ನೀಡಿದ ಪರಿಹಾರ ಧನವನ್ನು ಯೂನಿಯನ್ ಕಾರ್ಬೈಡ್ ಮತ್ತು ವಾರೆನ ಆಂಡರ್ಸನ್ ರವರಿಂದ ವಸೂಲಿಮಾಡಲು ಕ್ರಮ ತೆಗೆದುಕೊಳ್ಳಬೇಕು; 6. ನ್ಯೂಕ್ಲಿಯರ್ ಲಿಯಬಿಲಿಟಿ ಮಸೂದೆಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆಯಬೇಕು. ಈ ಮೇಲೆ ಕಾಣಿಸಿರುವ ಕ್ರಮಗಳನ್ನು ಕೇಂದ್ರ ಸರ್ಕಾರವು ಈ ಕೂಡಲೆ ಕೈಗೊಳ್ಳಬೇಕೆಂದು ಒತ್ತಾಯಿಸಿ ‘ಸಹಿ ಸಂಗ್ರಹ ಚಳುವಳಿ’ ಮಾಡಲಾಗುತ್ತಿದೆ. ನಾಗರಿಕರು ತಮ್ಮ ಸಹಿಯನ್ನು ಹಾಕುವುದರ ಮೂಲಕ ಭೂಪಾಲ್ ವಿಷಾನಿಲ ದುರಂತ ಸಂತ್ರಸ್ತರ ನೆರವಿಗೆ ಬರಬೇಕೆಂದು ಅನೇಕ ಸಂಘಟನೆಗಳ ಕೂಟವಾಗಿರುವ ಭಾರತ ಪರ ಜನ ವೇದಿಕೆ ಬೆಂಗಳೂರು ಕಳಕಳಿಯ ಮನವಿ ಮಾಡುತ್ತದೆ. ಸಹಿಸಂಗ್ರಹ ಚಳುವಳಿಯು ಆಗಸ್ಟ್ 9,೨೦೧೦ (ಹಿರೋಶಿಮಾ ನಾಗಸಾಕಿ ದಿನ ಮತ್ತು ಭಾರತ ಬಿಟ್ಟು ತೊಲಗಿ ದಿನ) ರಂದು ಒಂದು ಸಾಮೂಹಿಕ ಕಾರ್ಯಕ್ರಮದ ಮೂಲಕ ಕೊನೆಗೊಳ್ಳಲಿದೆ. ಮಧ್ಯಂತರದಲ್ಲಿ ಭೂಪಾಲ್ ದುರಂತ ಕುರಿತ ಸಾಕ್ಷ್ಯಚಿತ್ರಗಳ ಪ್ರದರ್ಶನ (ಕಾಲೇಜುಗಳಲ್ಲಿ), ಬೀದಿನಾಟಕ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಚಿತ್ರರಚನಾ ಸ್ಪರ್ಧೆ, ಕವಿಗೋಷ್ಠಿ, ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ಕಲಾವಿದರಿಂದ ವರ್ಣಚಿತ್ರ ರಚನೆ ಮುಂತಾದ ಕಾರ್ಯಕ್ರಮಗಳ ಮೂಲಕ ಸಹಿ ಸಂಗ್ರಹ ನಡೆಯುತ್ತದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕೆಂದು ವಿನಂತಿಸುತ್ತೇವೆ.
]]>

‍ಲೇಖಕರು avadhi

July 7, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಕ್ಷ್ಮೀನಾರಾಯಣ

    ಈ ಹಿಂದೆ ನಾನು ಈ ಸ್ಥಳದಲ್ಲೆ ಪ್ರಸ್ತಾಪಿಸಿದ ಸಲಹೆಯನ್ನು ಮತ್ತೊಮ್ಮೆ ಪ್ರಸ್ತಾಪಿಸುತ್ತೇನೆ. ಇದು ಕಲ್ಪಿತವಾಸ್ತವಗಳ ಕಾಲ. ಆದರೆ ನಾವೂ ಹಾಗೆ ಆಗ ಬೇಕಾದ್ದಿಲ್ಲ. ನಮ್ಮ ಪ್ರತಿಭಟನೆ ಕೇವಲ ಸಾಂಕೇತಿಕವಾಗದೆ, ಒಂದು ಇನ್ನೊಂದಕ್ಕೆ ಕೂಡಿಕೊಂಡು ಗಟ್ಟಿಯಾಗಿ ಕೃತಿಯಲ್ಲಿ ಕಾಣಿಸಿಕೊಳ್ಳುವ, ನೇರ ಪರಿಣಾಮ ಬೀರುವ ಫಲಿತಕ್ಕೆ ದಾರಿಮಾಡಿಕೊಡುವಂತೆ ಇರಬೇಕೆಂದು ನಾನು ಬಯಸುತ್ತೇನೆ. ಇಂಥ ಒಂದು ಕ್ರಮ ಯೂನಿಯನ್ ಕಾರ್ಬೈಡ್, ಡಿಒಡಬ್ಲಿಯೂ, ಎವರೆಡಿ ಹೀಗೆ ಯಾವುದೇ ಹೆಸರಿನಲ್ಲಿ ತಲೆಮರೆಸಿಕೊಂಡಿರುವ ಕೊಲೆಗಡುಕ ಕಂಪೆನಿಗೆ ಭಾರತದಲ್ಲಾದರೂ ವ್ಯಾಪಾರವಿಲ್ಲದಂತೆ ಮಾಡುವ ಶಕ್ತಿ ಭಾರತೀಯರ ಕೈಲೇ ಇದೆ. ಇದೇ ಈ ಕಂಪೆನಿಯ ಎಲ್ಲಾ ಉತ್ಪನ್ನಗಳನ್ನು, ಅದರಲ್ಲೂ ದೈನಂದಿನ ಜೀವನದಲ್ಲಿ ಬಳಸುವ ಬ್ಯಾಟರಿ, ಟಾರ್ಚು ಇತ್ಯಾದಿಯನ್ನು ಬಹಿಷ್ಕರಿಸುವುದು. ಮೂಗು ಹಿಡಿದರೆ ಬಾಯಿ ತೆರೆಯುತ್ತದೆ ಎಂಬ ಗಾದೆ ಇದೆಯಲ್ಲ. ಜನರ ದುಡ್ಡನ್ನು ಕೊಲೆಗಡುಕ ಕಂಪೆನಿಯ ಪರವಾಗಿ ಸಂತ್ರಸ್ತರಿಗೆ ಕೊಡುತ್ತೇವೆನ್ನುವ ದುಷ್ಟ ಸರ್ಕಾರದ ಹಂಗಿಲ್ಲದೆ ಯಾರುಬೇಕಾದರೂ ಕೈಗೊಳ್ಳಬಹುದಾದ ಕ್ರಮ ಇದು. ಈ ಬಗ್ಗೆ ಚಿಂತಿಸುವುದು ಅಗತ್ಯ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: