– ಜಯದೇವ ಪ್ರಸಾದ ಮೊಳೆಯಾರ
ಒಂದಾನೊಂದು ಕಾಲದಲ್ಲಿ, ಒಂದಾನೊಂದು ಪುಟ್ಟ ಹಳ್ಳಿಗೆ ಒಬ್ಬ ವರ್ತಕ ಬಂದ.
ನನ್ನ ಪಟ್ಟಣದಲ್ಲಿ ಮಂಗಗಳಿಲ್ಲ. ನಮಗೆ ಬೇಕು. ನಾನು ಮಂಗಗಳ ವ್ಯಾಪಾರ ಮಾಡುತ್ತೇನೆ. ಒಂದು ಮಂಗಕ್ಕೆ ಹತ್ತು ರೂಪಾಯಿಯಂತೆ ಎಷ್ಟು ಮಂಗಗಳನ್ನು ಬೇಕಾದರೂ ಖರೀದಿಸಬಲ್ಲೆ ಅಂತ ಹಳ್ಳಿಗರಿಗೆ ಆಫರ್ ಮಾಡಿದ.
ಹಳ್ಳಿ ಜನರಿಗೆ ಖುಶಿಯೋ ಖುಶಿ. ಗುಡ್ಡಗಾಡಿನ ತಪ್ಪಲಲ್ಲಿರುವ ಹಳ್ಳಿಯಲ್ಲಿ ಮಂಗಗಳಿಗೆ ಬರವೇ? ಹಿಡಿದೂ ಹಿಡಿದೂ ಹತ್ತು ರೂಪಾಯಿಗೆ ಒಂದರಂತೆ ವರ್ತಕನಿಗೆ ಮಾರಿದರು. ವರ್ತಕ ಅವನ್ನೆಲ್ಲ ಖರೀದಿಸಿ ದೊಡ್ಡ ದೊಡ್ಡ ಬೋನುಗಳಲ್ಲಿ ಕೂಡಿಹಾಕಿದನು. ಕೆಲವು ದಿನಗಳ ಬಳಿಕ ಮಂಗಗಳ ಸಂಖ್ಯೆ ಕಡಿಮೆಯಾದಂತೆ ವರ್ತಕ ಮಂಗವೊಂದಕ್ಕೆ 25 ರೂ ಬೆಲೆಯನ್ನು ಘೋಷಿಸಿದ. ಹಳ್ಳಿಗರು ತುಸು ದೂರ ಕಾಡಿನಲ್ಲಿ ಅಲೆದು ಮಂಗಗಳನ್ನು ಹಿಡಿದು ಮಾರಿದರು. ದುಡ್ಡು ಕಿಸೆಗೇರಿಸಿದರು. ಇನ್ನೂ ಕೆಲವು ದಿನಗಳು ಸಂದವು. ಮಂಗಗಳು ಇನ್ನೂ ಕಡಿಮೆಯಾದವು.
ಈ ಬಾರಿ ವರ್ತಕ ಮಂಗವೊಂದಕ್ಕೆ 50 ರೂ ಎನೌನ್ಸ್ ಮಾಡೇ ಬಿಟ್ಟ. ಅಲ್ಲದೆ ತಾನು ಒಂದು ವಾರದ ಮಟ್ಟಿಗೆ ಪಟ್ಟಣಕ್ಕೆ ಹೋಗಿ ಬರುವುದಾಗಿ ತಿಳಿಸಿ ತನ್ನ ಒಬ್ಬ ಸಹಾಯಕನನ್ನು ಹಳ್ಳಿಯಲ್ಲಿ ಕುಳ್ಳಿರಿಸಿ ಹೊರಟುಹೋದ.
ಆತ ಹೋದ ಬಳಿಕ ಆ ಸಹಾಯಕ ಹಳ್ಳಿಗರಿಗೆ ತನ್ನದೇ ಒಂದು ಆಫರ್ ನೀಡಿದ. ಹಳ್ಳಿಗರೇ, ಬೋನಿನಲ್ಲಿರುವ ಮಂಗಗಳನ್ನು ನನ್ನಿಂದ 35 ರೂ ಗಳಂತೆ ನೀವು ತಗೊಳ್ಳಿ. ಧನಿ ಬಂದ ನಂತರ 50 ರೂ ಗಳಂತೆ ಆತನಿಗೆ ಮಾರುವಿರಂತೆ. ನಾನಂತೂ ಎಲ್ಲಾ ಮಂಗಗಳು ತಪ್ಪಿಸಿಕೊಂಡು ಹೋದವೆಂದು ಸೋಗು ಹಾಕುತ್ತೇನೆ. ನಿಮಗೂ ಲಾಭ, ನನಗೂ ಲಾಭ. ಏನಂತೀರಾ..??
ಈವರೆಗೆ ಸುಲಭದಲ್ಲಿ ದುಡ್ಡು ಮಾಡಿದ್ದ ಹಳ್ಳಿಗರಿಗೆ ಹಣದ ರುಚಿ ಹತ್ತಿತ್ತು. 35 ರಂತೆ ತಗೊಂಡು 50 ರಂತೆ ಮಾರಾಟ! 15 ರೂಪಾಯಿಗಳ ಸುಲಭದ ಗಳಿಕೆ. ಇದೊಂದು ವಂಡರ್ ಫುಲ್ ಅವಕಾಶ ಅಂತ ಅನಿಸಿತು. ಇದ್ದ ಹಣವನ್ನೆಲ್ಲ ಒಟ್ಟುಗೂಡಿ, ಸಾಲ ಸೋಲ ಮಾಡಿ ಬೋನಿನಲ್ಲಿದ್ದ ಮಂಗಗಳನ್ನೆಲ್ಲ ಆ ಸಹಾಯಕನಿಂದ ಖರೀದಿಸಿದರು. ಕೆಲವರಂತೂ ಆತನಿಗೆ ಕಮಿಶನ್ ಕೊಟ್ಟು ಜಾಸ್ತಿ ಮಂಗಗಳನ್ನು ತಮ್ಮದಾಗಿಸಿದರು.
ಮರುದಿನ ಬೆಳಗ್ಗೆ ಆ ಊರಿನಿಂದ ದುಡ್ಡು ಗಂಟುಕಟ್ಟಿಕೊಂಡು ಸಹಾಯಕ ಓಡಿ ಹೋಗುತ್ತಾನೆ. ವರ್ತಕ ಮೊದಲೇ ಪರಾರಿ.
ಈಗ ಊರಿಡೀ ಬರೇ ಮಂಗಗಳೇ ಮಂಗಗಳು. ಕೆಲವು ಬಾಲವಿರುವ. . . , ಕೆಲವು ಬಾಲವಿಲ್ಲದ !!!
ಇದು, ಹಳ್ಳಿಯೊಂದರಲ್ಲಿ ಮಂಗಗಳ ವ್ಯಾಪಾರದಲ್ಲಿ ಹಳ್ಳಿಗರು ಮಂಗಗಳಾದ ಕತೆ !!
ಈಗ ಆ ಹಳ್ಳಿ, ಆ ಕಾಲ ಬಿಟ್ಟು ಈ ನಗರ, ಈ ಕಾಲಕ್ಕೆ ಬರೋಣ:
ಇನ್ಫೋಸಿಸ್, ರಿಲಾಯನ್ಸ್, ಎಲ್ ಐನ್ಡ್ ಟಿ ಯಂತಹ ಹಲವು ಬ್ಲೂಚಿಪ್ ಕಂಪೆನಿಗಳಲ್ಲಿ ಹಣ ತೊಡಗಿಸಿ ಕೋಟ್ಯಾಧೀಶರಾದವರ ಕತೆಗಳನ್ನು ನಾವೆಲ್ಲರೂ ಕೇಳಿಯೇ ಇದ್ದೇವೆ. ಅವನ್ನೆಲ್ಲ ಕೇಳಿ, ನೋಡಿ ಅತಿಶೀಘ್ರ ಶ್ರೀಮಂತರಾಗುವ ಕನಸನ್ನು ನಾವೆಲ್ಲ ಕಟ್ಟಿಕೊಳ್ಳುತ್ತೇವೆ. ಅಲ್ಪ ಸ್ವಲ್ಪ ಹಣವನ್ನು ಕೆಲವು ಶೇರುಗಳಲ್ಲಿ ಮಾಡಿಯೂ ಇರುತ್ತೇವೆ. ಸ್ವಾಭಾವಿಕವಾಗಿ ಆಸೆ ಕುದುರುತ್ತದೆ. ಹೆಚ್ಚಿನ ಹೂಡಿಕೆಗೆ ತೊಡಗುತ್ತೇವೆ. ಆ ಸಂದರ್ಭದಲ್ಲೇ ಬುಲ್ ಮಾರ್ಕೆಟ್ ಆರಂಭವಾಗಿರುತ್ತದೆ. ನಾವೂ ಗೂಳಿಗಳಂತೆ ನುಗ್ಗುತ್ತೇವೆ. ಅವರಿವರಿಂದ ಹಾಟ್ ಟಿಪ್ಸ್ ತೆಗೆದುಕೊಳ್ಳುತ್ತೇವೆ. ಬ್ರೋಕರ್ ಅಡ್ಡಾಗಳನ್ನು ಎಡತಾಕುತ್ತೇವೆ.ಆಫೀಸು ಸಮಯದಲ್ಲೂ ಗುಟ್ಟುಗುಟ್ಟಾಗಿ ಈಗ ಟಿ.ಸಿ.ಎಸ್ ಎಷ್ಟು ಮೇಲೆ ಹೋಯಿತು? ಅಯ್ಯೋ, ವಿಪ್ರೋ ಬಿತ್ತಾ. .?
ಅಂತೆಲ್ಲ ಚಡಪಡಿಸುತ್ತೇವೆ. ಟಿ.ವಿ ಪೇಪರ್ಗಳಲ್ಲಂತೂ ಸಲಹೆ ಕೊಡುವವರು ನಿದ್ರಾಹಾರ ಬಿಟ್ಟು ಕೆಲಸ ಮಾಡುತ್ತಿರುತ್ತಾರೆ. ಮನೆಯಲ್ಲೇ ಇರುವ ಹೆಂಗಸರೂ ಒಲೆಯಲ್ಲಿ ನೀರಿಟ್ಟು ಟಿ.ವಿ ನೋಡ್ಕೊಂಡುಆಫೀಸಿನಲ್ಲಿರುವಗಂಡನಿಗೆ ರಿಲಯನ್ಸ್ ಪವರ್ ಬಗ್ಗೆ ಎಸ್.ಎಂ.ಎಸ್ ಮಾಡುತ್ತಾಳೆ. ಬಸ್ಟಾಂಡಿನಿಂದ ಮನೆಗೆ ಬರುವಾಗ ಆಟೋ ಡ್ರೈವರ್ ಕೂಡಾ ತಮ್ಮೊಡನೆ ನಾಳೆ ಬಜಾಜ್ ಆಟೋ ಹೇಗೆ ಮೇಲೆ ಎರುತ್ತೆ ನೋಡಿ ಸಾರ್ ಎಂದು ಆಕ್ಸಿಲರೇಟರ್ ಏರಿಸುತ್ತಾನೆ. ಏರುತ್ತಿರುವ ಮಾರುಕಟ್ಟೆಯಲ್ಲಿ ನಾವೆಲ್ಲಾ ಗೂಳಿಗಳೇ!! ದುಡ್ಡು ಹೂಡಿದ್ದೇ ಹೂಡಿದ್ದು. ಶೇರುಬೆಲೆ ಮೇಲೆ ಏರಿದ್ದೇ ಏರಿದ್ದು.
ಈಗ ಒಬ್ಬ ವರ್ತಕ ಬರುತ್ತಾನೆ. ಬಾಂಬೆ ಶೇರು ಬಜಾರಿನಲ್ಲಿ ಯಾವುದೋ ಒಂದು ಯಃಕಶ್ಚಿತ್ ನಾಲ್ಕಾಣೆ ಮೌಲ್ಯದ ಶೇರನ್ನು (ಪೆನ್ನಿ ಸ್ಟಾಕ್) ಎಂಟಾಣೆಗೆ ಒಂದಷ್ಟು ಸಾವಿರ ಸಂಖ್ಯೆಯಲ್ಲಿ ಖರೀದಿಸುತ್ತಾನೆ. ಆದಿನ ರಾತ್ರಿ ನಾವು-ನೀವು ನಿದ್ದೆಗೆಟ್ಟು ಶೇರುಗಳ ಸಂಶೋಧನೆ ನಡೆಸುತ್ತಿರುವಾಗ ಈ ನಾಲ್ಕಾಣೆ ಶೇರ್ ನಮ್ಮ ಕಣ್ಣಿಗೆ ಬೀಳುತ್ತದೆ. ಒಂದೇ ದಿನದಲ್ಲಿ 100% ಏರಿಕೆ ಅಂದರೆ ಹಾಕಿದ ಹಣ ಡಬಲ್. ಏನೋ ಇದೆ ಅಂದುಕೊಳ್ಳುತ್ತೇವೆ. ಮರುದಿನ ವರ್ತಕ ಆ ಶೇರುಗಳನ್ನು ತನ್ನ ಸಹಾಯಕನಿಗೆ 1 ರೂಪಾಯಿಯಂತೆ ಮಾರುತ್ತಾನೆ. ಮರುದಿನವೂ ಆ ಶೇರು ಡಬಲ್! ಅದರ ಮರುದಿನ ಪುನಃ ವರ್ತಕನೇ 2 ರೂಗೆ ಖರೀದಿಸುತ್ತಾನೆ. ನಾಲ್ಕಾಣೆ ಶೇರು ಈಗ 2 ರೂ. ಅಂದರೆ, 800% ಬರೇ 3 ದಿನಗಳಲ್ಲಿ. ವರ್ತಕ ಈಗ ಸಾಕಷ್ಟು ಸಂಖ್ಯೆಯಲ್ಲಿ ಆ ಶೇರು ಜಮಾಯಿಸಿ ಆ ಶೇರಿಗೆ ಪಬ್ಲಿಸಿಟಿ ಕೊಡುತ್ತಾನೆ. ಅದು ದೊಡ್ಡ ಸುದ್ದಿಯಾಗುತ್ತದೆ. ನಾವು ನೀವು ‘ಯುರೇಕಾ’ ಎಂದು ಕೂಗುತ್ತೇವೆ. ‘ಸಿಕ್ಕಿತು ನಾಳಿನ ರಿಲಾಯನ್ಸ್, ಭವಿಷ್ಯದ ಇನ್ಫೋಸಿಸ್ ಇದೇನೇ. .’ ಎಂದುಕೊಳ್ಳುತ್ತೇವೆ. ಇಡೀ ದೇಶವೇ ಈಗ ಅದಕ್ಕೆ ಮುಗಿ ಬೀಳುತ್ತದೆ. ಸ್ವಾಭಾವಿಕವಾಗಿ ಜನರ ಬೇಡಿಕೆಯಿಂದಾಗಿಯೇ ದಿನದಿಂದ ದಿನಕ್ಕೆ ಶೇರು ಮೇಲೇರುತ್ತದೆ – ದೇಹದಲ್ಲಿ ವಿಷ ಏರಿದಂತೆ! ಈಗ ವರ್ತಕ ಕೈಕಟ್ಟಿ ತಣ್ಣಗೆ ಕುಳಿತಿರುತ್ತಾನೆ. ಒಂದು ದಿನ ಶೇರು 100 ರೂ ಮುಟ್ಟಿದಾಗ ತನ್ನಲ್ಲಿದ್ದ ಎಲ್ಲಾ ಶೇರುಗಳನ್ನೂ ಮಾರುತ್ತಾನೆ. ಪಬ್ಲಿಸಿಟಿ ನಿಲ್ಲುತ್ತದೆ. ಒಮ್ಮೆಗೇ ಅಷ್ಟೊಂದು ಶೇರು ಮಾರುಕಟ್ಟೆಗೆ ಬಂದು ಬೀಳುವಾಗ ಬೆಲೆ ಕುಸಿಯುತ್ತದೆ. ಏರಿದಷ್ಟೇ ವೇಗದಲ್ಲಿ ಕುಸಿಯುತ್ತದೆ. ಖರೀದಿಸುವವರಿಲ್ಲದೆ ವಾರದೊಳಗೆ ತನ್ನ ಒರಿಜಿನಲ್ ಬೆಲೆಯಾದ ನಾಲ್ಕಾಣೆಗೆ ಬಂದು ನಿಲ್ಲುತ್ತದೆ. ವರ್ತಕ ದುಡ್ಡಿನ ಗಂಟು ಕಟ್ಟಿ ಊರುಬಿಟ್ಟು ಅಂತರ್ಧಾನನಾಗುತ್ತಾನೆ. ನಾವು-ನೀವೆಲ್ಲ ಇದ್ದ ಬದ್ದ ದುಡ್ಡನ್ನೆಲ್ಲ ಹಾಕಿ ಪೀಕ್ ರೇಟ್ನಲ್ಲಿ ಖರೀದಿಸಿದ ಈ ಆಧುನಿಕ ಮಂಗಗಳಿಂದ ಪರಚಿಸಿಕೊಳ್ಳುತ್ತಾ ಕೂರುತ್ತೇವೆ. ಮುಲಾಮು ಕೊಳ್ಳಲೂ ದುಡ್ಡಿರುವುದಿಲ್ಲ.
ಇದು ಶೇರು ಮಾರುಕಟ್ಟೆಯಲ್ಲಿ ವಿದ್ಯಾವಂತರಾದ ನಾವು-ನೀವು ಗೂಳಿಗಳಾಗಲು ಹೋಗಿ ಮಂಗಗಳಾದ ಕತೆ!!
ಈಗ ಹೇಳಿ: ಈ ಎರಡು ಕತೆಗಳಿಗೆ ಏನು ವ್ಯತ್ಯಾಸ ??
ಯಾವುದೇ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕೈಗಾರಿಕೆಯ ಅಭಿವೃದ್ಧಿಗೆ ಒಂದು ಸದೃಢ ಶೇರು ಮಾರುಕಟ್ಟೆಯ ಅಗತ್ಯ ಖಂಡಿತಾ ಇದೆ. ಇದರಲ್ಲಿ ಎರಡು ಮಾತಿಲ್ಲ. ಕೈಗಾರಿಕಾ ಕ್ಷೇತ್ರದಲ್ಲಿ ಹೂಡಿಕೆಗಾಗಿ ಶೇರುಗಳ ಮೂಲಕ ಹಣ ಸಂಗ್ರಹಿಸಲಾಗುತ್ತದೆ. ಹಾಗೂ ಆ ಕೈಗಾರಿಕೆ ಅಭಿವೃದ್ಧಿ ಹೊಂದಿದಂತೆಲ್ಲ ಅದರ ಶೇರುಗಳ ಮೌಲ್ಯವೃದ್ಧಿಯಾಗಿ ಹೂಡಿಕೆದಾರರು ಲಾಭಕ್ಕೆ ಮಾರಬಹುದು. ಈ ರೀತಿ ಕೊಡ-ಕೊಳ್ಳುವ ಒಂದು ಗಟ್ಟಿ ಮಾರುಕಟ್ಟೆಯ ವ್ಯವಸ್ಥೆ ಇದ್ದರೇನೇ ಕೈಗಾರಿಕೆಯ ಅಭಿವೃದ್ಧಿ ಸಾಧ್ಯ. ಅಂತಹ ಒಂದು ವ್ಯವಸ್ಥೆಯಲ್ಲಿ ಹಣವನ್ನು ವಿವೇಕದಿಂದ ವಿನಿಯೋಗಿಸಿ ಲಾಭ ಗಳಿಸಬಹುದು.
ಆದರೆ ಮನುಷ್ಯನ ಲೋಭತನ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಅಮಾಯಕರನ್ನು ಬಲಿಹಾಕುವ ಧೂರ್ತರಿಗೆ ಕೊರತೆಯಿರುವುದಿಲ್ಲ. ಶೇರು ಮಾರುಕಟ್ಟೆ ಎಂಬುದು ಬೆಂಕಿಯಿದ್ದಂತೆ. ಎಚ್ಚರಿಕೆಯಿಂದ ಬಳಸಿದರೆ ನಮಗೆ ಉಪಕಾರಿ. ಎಚ್ಚರ ತಪ್ಪಿದರೆ ಮೈಕೈ ಸುಟ್ಟುಕೊಳ್ಳುವುದು ಗ್ಯಾರಂಟಿ !! ಶೇರ್ ಮಂಗ ಸುಲಭವಾಗಿ ಪಳಗುವ ಪ್ರಾಣಿಯಲ್ಲ. ಸಂಯಮ, ವಿವೇಕ, ಅಧ್ಯಯನ ಎಲ್ಲವೂ ಮುಖ್ಯವೆನಿಸುತ್ತದೆ.
one of the greatest articles
Thanks
jayadev
Hello Jayadev,
That was a wondeful article. I liked it.
I keep reading “VittaPrabha” especially your articles on stock/shares…etc.
The way in which you explain the various stock terminologies are wonderful.
Thanks.
Regards,
Satsih B. T.
Wah, wah.. I would had missed this article.. Superb…