ಮಂಗಳೂರಲ್ಲೊಂದು ಜೋರು ಮಕ್ಕಳ ಹಬ್ಬ

ಜಿ ಎನ್ ಅಶೋಕ ವರ್ಧನ

ಅತ್ರಿ ಬುಕ್ ಸೆಂಟರ್

ರಾಷ್ಟ್ರೀಯ ನಾಟಕ ಶಾಲೆ, ದಿಲ್ಲಿಯ ಬೆಂಗಳೂರಿನ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ರಾಜ್ಯದೊಳಗೆ ವರ್ಷಕ್ಕೊಂದೆಡೆ ನೀಡುವ – ‘ಮಳೆಬಿಲ್ಲು’ ಮಕ್ಕಳ ನಾಟಕೋತ್ಸವ ೨೦೧೨ ತನ್ನ ಎಂಟನೇ ವರ್ಷದ ಪ್ರದರ್ಶನ ಸರಣಿಯನ್ನು ಮಂಗಳೂರಿನಲ್ಲಿ ಅರ್ಥಪೂರ್ಣವಾಗಿ ನಡೆಸಿಕೊಟ್ಟಿತು. ಚುಟುಕಿನ ಉದ್ಘಾಟನೆ, ಸಮಾರೋಪಗಳಿದ್ದರೂ ಐದು ದಿನಗಳಲ್ಲಿ (ಫೆಬ್ರವರಿ ೬ರಿಂದ ೧೦ರವರೆಗೆ) ಆರು ನಾಟಕಗಳನ್ನು ಚೊಕ್ಕವಾಗಿಯೇ ಆಯ್ದಿದ್ದರು. ವರ್ಷಾವಧಿ ಹಠಗಟ್ಟಿ ಬರುವ ನೀನಾಸಂ ಮತ್ತೆ ಆಗೊಂದು ಈಗೊಂದು ಕನ್ನಡ ನಾಟಕ ಪ್ರದರ್ಶನಗಳಲ್ಲಿ ಜನಕ್ಕಿಂತ ಕುರ್ಚಿಗಳೇ ಜಾಸ್ತಿಯಾಗುವ ಮಂಗಳೂರಿನಲ್ಲಿ ಈ ಉತ್ಸವ ‘ತುಂಬಿದ ಭವನ’ ಪ್ರದರ್ಶನಗಳಾಗಿ ನಡೆದದ್ದು ವ್ಯವಸ್ಥಾಪಕರ ದಕ್ಷತೆಗೂ ಪ್ರಶಸ್ತಿಕೊಡುವಂತಿತ್ತು. ಹೇಳಬಹುದಾದ ಒಂದೇ ಕೊರತೆ ಧ್ವನಿ-ದಕ್ಷತೆಯಲ್ಲಿ ಸೋಲುವ ಡಾನ್ ಬಾಸ್ಕೋ ಹಾಲ್.

ಉದ್ಘಾಟಕ ಸದಾನಂದ ಸುವರ್ಣರು (೬-೨-೧೩) ಅವಗಣನೆಗೆ ಒಳಗಾದ ಸಾಹಿತ್ಯ ಪ್ರಕಾರವೆಂದೇ – ಮಕ್ಕಳ ನಾಟಕದ ಬಗ್ಗೆ ಕನಿಕರ ಪಟ್ಟರು. ಮಕ್ಕಳಿಂದಲೇ ಭಾಸನ ಪ್ರೌಢ ಕೃತಿ ‘ಮಧ್ಯಮ ವ್ಯಾಯೋಗ’ವನ್ನು ಸಮರ್ಥವಾಗಿ ಕೊಟ್ಟ ಜೀವನರಾಂ ಸುಳ್ಯರನ್ನು ನೆನೆಸಿಕೊಂಡು, ಮಕ್ಕಳ ಸಾಮರ್ಥ್ಯವನ್ನು ಕೀಳ್ಗಳೆಯುವ ಬದಲು, ಆಯೋಜಿಸುವವರು, ವಿತರಿಸುವವರು ಮುಂದೆ ಬರಬೇಕು ಎಂದು ಆಶಿಸಿದರು. ಓರ್ವ ಅತಿಥಿ – ಮೋಹನ ಸೋನ, ಬಣ್ಣಗಳು ಮಕ್ಕಳ ಕ್ರಿಯಾಶೀಲತೆಯ ಸೂಚಕಗಳಗಿಯೇ ನಿಲ್ಲುತ್ತವೆ. ಇಲ್ಲಿ ಆ ಏಳೂ ಮೂಲಬಣ್ಣಗಳನ್ನು ಪ್ರತಿನಿಧಿಸುವ ಮಳೆಬಿಲ್ಲು ಉತ್ಸವ ನಿಜಕ್ಕೂ ಅಪ್ಯಾಯಮಾನವಾದ ಕಲ್ಪನೆ ಎಂದೇ ಹರ್ಷಿಸಿದರು. ಇನ್ನೋರ್ವ ಅತಿಥಿ ಉದ್ಯಾವರ ನಾಗೇಶ್ ಕುಮಾರ್ – ಟೀವೀಗಳ ರಿಯಾಲಿಟಿ ಶೋಗಳಲ್ಲಿ ನಾಶವಾಗುತ್ತಿರುವ ಬಾಲ ಮುಗ್ಧತೆ ಬಗ್ಗೆ ಶೋಕಿಸಿದರು. ಬದಲು ಸಮಾರೋಪಕಿ ವೈದೇಹಿಯವರು (೧೦-೨-೧೩) ಹೇಳಿದಂತೆ ಮಕ್ಕಳಲ್ಲಿ ದೊಡ್ಡವರನ್ನು ತುಂಬುವುದು ಬೇಡ, ಪ್ರತಿ ದೊಡ್ಡವರಲ್ಲಿರುವ ಮಕ್ಕಳ ಭಾವವನ್ನು ಜಾಗೃತಗೊಳಿಸಬೇಕು. ಈ ಜಿಲ್ಲೆಯಲ್ಲೇ ಸಂದುಹೋದ ಮಹಾಕವಿ, ಸಾಹಿತಿಗಳು ಕೊಟ್ಟ ಒಂದೊಂದು ಹಾಡಿನಲ್ಲೂ ಇರುವ ನಾಟಕೀಯತೆ, ಭಾವನೆಯ ನವಿರನ್ನು ಗುರುತಿಸಿ ಮಕ್ಕಳೊಡನೆ ವಿಸ್ತರಿಸಿಕೊಳ್ಳುವುದು (ಕನಿಷ್ಠ ಮಕ್ಕಳಿಗೆ ಕಥೆ ಹೇಳುವ ಸಂಸ್ಕೃತಿಯೂ ನಾಶವಾದ ಕಾಲದಲ್ಲಿ) ಸಾಧ್ಯವಾದರೆ ಹೆಚ್ಚೇನು ಬೇಡ. ಪ್ರಾದೇಶಿಕ ಸಂಪನ್ಮೂಲ ಕೇಂದ್ರದ ನಿರ್ದೇಶಕನ ನೆಲೆಯಲ್ಲಿ ಮೊದಲ ದಿನ ಪ್ರಾಸ್ತಾವಿಕ ನುಡಿ ಕೊಡುವುದಲ್ಲದೇ ಐದೂ ದಿನ ಎಲ್ಲ ಕಲಾಪಗಳಲ್ಲಿ ನಟ / ನಿರ್ದೇಶಕ / ನಾಟಕಕಾರರ ಬಗ್ಗೆ ಅನೌಪಚಾರಿಕ ಟಿಪ್ಪಣಿ ಕೊಡುತ್ತ ಬೆನ್ನು ಚಪ್ಪರಿಸುತ್ತ ಉತ್ಸವದ ಯಶಸ್ಸಿನ ರೂವಾರಿಯೇ ಆಗಿ ತೋರಿದವರು ಸುರೇಶ ಆನಗಳ್ಳಿ.
೬-೨-೨೦೧೩
ಪರಿಸರ ಸಂದೇಶ ಹೊತ್ತ ಪುಷ್ಪರಾಣಿ ಚಂದ್ರಶೇಖರ ಕಂಬಾರರ ನಾಟಕ. ಮಕ್ಕಳನ್ನೇ ಬಳಸಿಕೊಂಡು ನಾಟಕ ಕೊಡುವ ಪ್ರಯತ್ನ ಮಾಡಿದ್ದಾರೆ. ಆದರೆ ಅನಾಕರ್ಷಕ ಹಾಡಿಕೆ, ಲಯ ತಪ್ಪಿದ ಕುಣಿತ, ಭಾವಗಳು ಪ್ರದರ್ಶನವನ್ನು ಗೆಲ್ಲಿಸಲಿಲ್ಲ. ಕೃತಿಕಾರನ ಭಾಷೆಯನ್ನು (ಮೋಹನ ಸೋನ ಸೂಚಿಸಿದಂತೆ) ಪ್ರದರ್ಶನಕ್ಕಾಗುವಾಗ ಮಕ್ಕಳಿಗೊಪ್ಪುವ ಸಹಜ ಶೈಲಿಗಿಳಿಸಬಹುದಿತ್ತು. ಬದಲು ಐತಿಹಾಸಿಕಕ್ಕೊಪ್ಪುವಂತೆ ಶೈಲೀಕೃತದಲ್ಲೇ ಉಳಿಸಹೋಗಿ ಸಂವಾದಗಳೆಲ್ಲಾ ಕೃತಕವಾದುವು. ವೇಷ ಭೂಷಣ, ಬಹುಮಕ್ಕಳನ್ನು ಬಳಸಿಕೊಂಡ ಕ್ರಮ ಶ್ಲಾಘನೀಯ. ನಾಟಕದ ವಸ್ತುವಿನಿಂದಾಗಿ ಮತ್ತು ಮಕ್ಕಳ ಮುಗ್ಧ ಪ್ರೇಕ್ಷಣೆಯಲ್ಲಿ ನಡೆದುಹೋದೀತು, ಯಶಸ್ವಿ ಖಂಡಿತಾ ಅಲ್ಲ. ನನ್ನ ನೆನಪು ಸರಿಯಿದ್ದರೆ, ಇಂಥದ್ದೇ ನಾಟಕವನ್ನು ಹಿಂದೆ ನೀನಾಸಂ (ದೊಡ್ಡ ನಟರೇ) ಪ್ರಯೋಗಿಸಿದ್ದು, ಅದಕ್ಕೆ ಕಾರಂತರು ಕೊಟ್ಟ ಸಂಗೀತದ ಮಾಧುರ್ಯ ನನ್ನನ್ನು ಉದ್ದಕ್ಕೂ ಕಾಡುತ್ತಿತ್ತು. ಇದ್ದುದರಲ್ಲಿ ರಾಣಿ ಮತ್ತು ಮೇಳದ ಕಲಾಪಗಳು ಚೇತೋಹಾರಿಯಾಗಿದ್ದುವು. ಕೊನೆಯಲ್ಲಿ ಪ್ರದರ್ಶನವನ್ನು ಅಭಿನಂದಿಸಬಂದ ಗೋಪಾಡ್ಕರ್ ನಟ-ಮಕ್ಕಳನ್ನೇ ವಿಚಾರಿಸಿದ್ದರು “ನಿಮಗೆ ಈ ಪ್ರದರ್ಶನ ಕುಶಿ ಕೊಟ್ಟಿದೆಯೇ?” ಹಾಗೆ ಕೇಳುವಲ್ಲಿ ನಮಗೆ ಕುಶಿಕೊಡುವಲ್ಲಿ ಸೋತಿದೆ ಎಂಬ ಧ್ವನಿ ಸುಳ್ಳಲ್ಲ.

[ನನ್ನ ಅಭಯಾರಣ್ಯದ ಪ್ರಾರಂಭದ ದಿನದಂದು ಪ್ರಸ್ತುತಿಪಡಿಸಿದ ಮಾರಿಷಾ ಕಲ್ಯಾಣ ತಾಳಮದ್ದಳೆಯ ಆಶಯಕ್ಕೆ ಪುಷ್ಪರಾಣಿ ತುಂಬಾ ಸಮೀಪವರ್ತಿ. ಇದರ ಕಾವ್ಯರಚನೆ ಅಮೃತ ಸೋಮೇಶ್ವರರದು. ಹಿಮ್ಮೇಳದಲ್ಲಿ ಪಿ. ವೆಂಕಟ್ರಮಣ ಐತಾಳ, ಪಿ.ಕೃಷ್ಣಯ್ಯ ಆಚಾರ್, ಗಣೇಶ ಐತಾಳರಿದ್ದರೆ, ಅರ್ಥದಾರಿಗಳಾಗಿ ಪ್ರಸಂಗವನ್ನು ಬೆಳಗಿಸಿದವರು ಪ್ರಭಾಕರ ಜೋಷಿ, ಕುಂಬಳೆ ಸುಂದರರಾವ್, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಎಂ.ಎಲ್ ಸಾಮಗ, ಶಂಭುಶರ್ಮ, ಭಾಸ್ಕರ ರೈ ಕುಕ್ಕುವಳ್ಳಿ. ಪೂರ್ಣ ಪದ್ಯ, ವೇದಿಕೆಯಲ್ಲಿ ವಿಸ್ತರಿಸಿದ ಅರ್ಥವನ್ನು ಲಿಪ್ಯಂತರಗೊಳಿಸಿ ಪ್ರಕಟಿಸಿದ ಪುಸ್ತಕ ಇಂದೂ ಲಭ್ಯ. ಬೆಲೆ ರೂ ಹದಿನೆಂಟು ಮಾತ್ರ]
೭-೨-೨೦೧೩
ನರಿಗಳಿಗೇಕೆ ಕೋಡಿಲ್ಲ – ಕುವೆಂಪು ಬರೆದ ಮಕ್ಕಳ ನಾಟಕ. ರಂಗ ಪ್ರಯೋಗದ ಭವ್ಯ ಕಲ್ಪನೆಯೇನೂ ಇಲ್ಲದ, ಇಟ್ಟೂ ಕೊಳ್ಳದ, ಕೇವಲ ಕಾವ್ಯ ಸಂತೋಷಕ್ಕೇ ತಾನು ನಾಟಕವನ್ನು ಬರೆದೆನೆಂದು ಹೆಮ್ಮೆಯಿಂದಲೇ (ಕ್ಷಮಾಪೂರ್ವಕವಾಗಿ ಅಲ್ಲ) ಹೇಳಿಕೊಂಡ ಕುವೆಂಪು ಕೃತಿಯನ್ನು ತುಂಬ ಸಮರ್ಥವಾಗಿಯೇ ಪ್ರದರ್ಶನಕ್ಕಳವಡಿಸಿದ್ದರು ನಿರ್ದೇಶಕಿ ಎನ್. ಮಂಗಳಾ. ಮನುಷ್ಯರ ಹಂಗೇ ಇಲ್ಲದ ಈ ನಾಟಕದಲ್ಲಿ ವನ್ಯ ಜೀವವೈವಿಧ್ಯವಷ್ಟೂ – ಮುಗ್ಧ ಗುಬ್ಬಿದಂಪತಿ, ಉದಾತ್ತಹುಲಿ, ಬೋಳೇಕರಡಿ, ತಂತ್ರಗಾರನರಿ, ಬುದ್ಧಿಜೀವಿಗೂಬೆಗಳೆಲ್ಲ ಸದಸ್ಯರಾಗಿರುವುದೇ ಪ್ರಾಥಮಿಕ ಕುತೂಹಲಕಾರೀ ಅಂಶ. ಅವು ತಮ್ಮ ಪ್ರಾಕೃತಿಕ ವೈಶಿಷ್ಟ್ಯಗಳೊಡನೆ ಮನುಷ್ಯ ಸಮಾಜದ ಗುಣದೋಷಗಳನ್ನೂ (ಆತಿಥ್ಯ, ಶಿಶುಪ್ರೀತಿ, ಸತ್ಯನಿಷ್ಠೆ, ವಿಶ್ವಾಸದ್ರೋಹ ಎಲ್ಲಕ್ಕೂ ಮುಖ್ಯವಾಗಿ ಗುಬ್ಬಕ್ಕ ಬೆಳಿಗ್ಗೆ ನಾಗರಿಕ ಸಮಾಜದ ಭಾಗವಾದ ಹಸುವಿನ ಹಾಲು ಕರೆಯುವುದು ಇತ್ಯಾದಿ) ಪೋಷಿಸುವ ಕ್ರಮದಿಂದ (ವಾಲ್ಟ್ ಡಿಸ್ನಿಯ ನೆನಪು ದಟ್ಟವಾಗಿ ಕಾಡುತ್ತದೆ) ಮಕ್ಕಳಿಗೆ ಬಲು ಪ್ರಿಯವಾದದ್ದರಲ್ಲಿ ಏನೂ ಆಶ್ಚರ್ಯವಿಲ್ಲ. ಹುಲಿ, ಕರಡಿ ಪ್ರೇಕ್ಷಕರ ನಡುವಿನಿಂದ ಭಾರೀ ಧಾಂ ಧೂಂನೊಡನೆ ರಂಗಪ್ರವೇಶಿಸಿದ್ದು (ಯಕ್ಷಗಾನ ಪ್ರೇಕ್ಷಕರಿಗೆ ಇದೇನು ಹೊಸತಲ್ಲ), ಮರಿ ಕಳೆದುಕೊಂಡ ಗುಬ್ಬಕ್ಕನ ಆತಂಕಕ್ಕೆ ಪ್ರೇಕ್ಷಕರೂ ಸ್ಪಂದಿಸಿದಂತೆ ಮಾಡಿದ್ದು, ನವಿಲುಗುಡ್ಡೆಯ ಒಂದೇ ಸೆಟ್ಟಿನೊಡನೆ ಇಡೀ ನಾಟಕ ನಡೆದರೂ ಏಕತಾನತೆ ಕಾಡಲಿಲ್ಲ.
ಕೊನೆಯಲ್ಲಿ ಬೆಂಗಳೂರಿನ ಸಂಚಾರಿ ಥಿಯೇಟ್ರು, ಒಂಟಿಕೊಂಬಿನ ಸುಂದರಾಂಗನಾಗಿದ್ದ ನರಿಯನ್ನು ಬೋಳನಾಗಿಸಿದಾಗ ಚಪ್ಪಾಳೆ ಹೊಡೆದು ಸಂಭ್ರಮಿಸುವುದರಲ್ಲಿ ಪ್ರೇಕ್ಷಕ ಸಮೂಹದ ದೊಡ್ಡವರೂ (ವೈದೇಹಿ ಹೇಳಿದಂತೆ ಮಕ್ಕಳ ಹೃದಯ ಉಳ್ಳವರಾದ್ದಕ್ಕೆ) ಹಿಂದುಳಿಯಲಿಲ್ಲ.
ಕುವೆಂಪು ವೈಚಾರಿಕತೆ ಪ್ರಕೃತಿಯ ಮಹತ್ವಕ್ಕೆ ಹೆಚ್ಚಿನ ಅಡಿಗೀಟು ಬರುವಂತೆ ಸಾಹಿತ್ಯ ನಿರ್ವಹಿಸಿದ್ದು ಮನನೀಯ. ಉದಾಹರಣೆಗೆ – ಮೊಟ್ಟೆ ಮರಿಗಳ ಕೊಡುಗೆಯ ಕಾಲಕ್ಕೆ ಗುಬ್ಬಿ ದಂಪತಿ ಕೋರುವುದು ‘ಸೃಷ್ಟಿಶಕ್ತಿ’ಯ ಹಾರೈಕೆ, ಬಯಸಿದ್ದು ‘ಜೀವನಮ್ಮ’ನ ಅಭಯ. ಆದರೂ ಮರಿಗಳು ಬಂದಕಾಲಕ್ಕೆ ಗುಬ್ಬಣ್ಣನನ್ನು ಹರಕೆ ಸಂದಾಯಿಸಲು ಕಾಶಿಗೆ ಹೊರಡಿಸುವಲ್ಲಿ ‘ಮಂದಿರ ಮಸಜೀದುಗಳನ್ನು ತೊರೆದು ಬನ್ನಿ’ ಎಂದ ಕುವೆಂಪು ಎಡವಿದಂತನ್ನಿಸಿತು. (ಹೋಮರನೂ ತೂಕಡಿಸುತ್ತಾನೆ!) ನಾನು ಬಾಲ್ಯದಲ್ಲಿ ಓದಿದ ಪಂಜೆಯವರ ‘ಅರ್ಗಣೆಮುದ್ದೆ’ ಕತೆಯಲ್ಲಿ ವಿವರಗಳು ಮಾತ್ರ ಸ್ವಲ್ಪ ಬೇರೆ. ಅಲ್ಲಿನ ತಂತ್ರಗಾರ ನರಿಗೆ ಸೋರೆಹಕ್ಕಿ ಜೋಡಿಯ ದೈನಂದಿನ ಆಹಾರ ಸಂಗ್ರಹದ ಓಡಾಟದ ಬಿಡುವೇ ಅವುಗಳ ಮರಿಗಳನ್ನು ನುಂಗಲು ಸಾಕಾಗಿತ್ತು!
ಪ್ರೇಕ್ಷಾಂಗಣದ ಆಸನ ವ್ಯವಸ್ಥೆಯನ್ನು ಹಂಚಿಕೊಡುವಲ್ಲಿ ವ್ಯವಸ್ಥಾಪಕರು ಮುಂದಾಗಿ ಯೋಚಿಸಿದಂತಿರಲಿಲ್ಲ. ಅದೂ ಎರಡನೇ ದಿನ ಕೊನೇ ಗಳಿಗೆಯಲ್ಲಿ ವ್ಯವಸ್ಥಾಪಕರು ಕೈ ನಿರ್ಧರಿಸಿದ್ದು ತುಸು ಮುಜುಗರವನ್ನೇ ಉಂಟು ಮಾಡಿತು. ಸಕಾಲಕ್ಕೆ ಬಂದು ವಿವಿಧ ಅನುಕೂಲಗಳನ್ನು ಲಕ್ಷಿಸಿ ಕುಳಿತ ಹಿರಿಯರ ಸೌಜನ್ಯವನ್ನೇ ಮಿಡಿದು, “ಎದ್ದು ಹಿಂದಕ್ಕೆ ಹೋಗಿ. ಮಕ್ಕಳು ಮುಂದೆ ಬನ್ನಿ” ಎಂದದ್ದು ಸರಿಯಾಗಲಿಲ್ಲ. ಹೋಗಲಿ, ಎಂದರೆ ಇಲ್ಲೂ ‘ಹೆಚ್ಚು ಸಮಾನರಾದ’ (ಇಬ್ಸೆನ್ ಹೇಳಿದ್ದಾನೆ – some are more equal) ಆಢ್ಯರು (ಸ್ವತಃ ಆನಗಳ್ಳಿಯವರಿಗೇ ಇದು ಹೊಳೆಯಲಿಲ್ಲ!) ಪಟ್ಟಭದ್ರರಾಗುಳಿದದ್ದು ಶೋಭೆ ತರುವಂತಿರಲಿಲ್ಲ. ಅಧಿಕೃತ ಚಿತ್ರ ಮತ್ತು ವಿಡಿಯೋ ಗ್ರಹಣದವರಿಗೇನೋ ವಿನಾಯ್ತಿ ಕೊಡಬಹುದು. ಇಂದು ಡಿಜಿಟಲ್ ಫೊಟೋಗ್ರಫಿಯ ಅತಿರೇಕ (ಕ್ಯಾಮರಾವೇನು ಪ್ರತಿ ಚರವಾಣಿಯಲ್ಲೂ ವಿವಿಧ ತಾಕತ್ತಿನ ಚಿತ್ರಗ್ರಹಣ ವ್ಯವಸ್ಥೆಯಿದೆ ಎನ್ನುವುದನ್ನು ನಾನು ಹೇಳಬೇಕೇ) ನಡೆಯುತ್ತಿರುವಲ್ಲಿ ಅಷ್ಟೂ ಹಿರಿಯರಿಗೆ ಯಾವ ವಿನಾಯ್ತೀ ಹೇಳಿದರೂ ತಪ್ಪೇ ತಪ್ಪು. ಉಳಿದ ಮೂರು ದಿನಗಳಲ್ಲಿ ಮೊದಲಿನಿಂದಲೇ ಆಸನ ವ್ಯವಸ್ಥೆಯ ಶಿಸ್ತು ಹೇರಿದ್ದೇನೋ ಸರಿಯೇ ಆದರೆ ‘ಹೆಚ್ಚು ಸಮಾನ’ರನ್ನು ಮಾತ್ರ ನಿಯಂತ್ರಿಸದ ತಪ್ಪು ಮುಂದುವರಿದೇ ಇತ್ತು!
೮-೨-೧೩
ರೆಕ್ಕೆ ಕಟ್ಟುವಿರಾ? – ಬಿ. ಸುರೇಶರ ಈ ಮನಕಲಕುವ ನಾಟಕವನ್ನು ನಿರ್ದೇಶಕ – ಶ್ರೀಪಾದರು ಅಷ್ಟೇ ಮನೋಜ್ಞವಾಗಿಯೇ ರಂಗಕ್ಕೆ ತಂದಿದ್ದಾರೆ. ಮಣಿಪಾಲದ ಚಿನ್ನಾರಿ ತಂಡದ ಸದಸ್ಯರಾದರೂ ಎರಡನೇ ಮಹಾಯುದ್ಧದಲ್ಲಿ ಜಪಾನಿನ ಮೇಲೆ ಬಿದ್ದ ಅಣುಬಾಂಬ್ ದುರಂತವನ್ನು ತಮ್ಮದೇ ಎನ್ನುವಂತೆ ರಂಗಪ್ರಸ್ತುತಿ ಕೊಟ್ಟಿದ್ದಾರೆ. ಬೌದ್ಧ ಸಂಗೀತ ಮತ್ತು ನೃತ್ಯಗಳ ಮಾದರಿಯನ್ನು ನಾವೂ ಟಿಬೆಟನ್ ಜನರ ಜನಪದ ಕಲಾಪಗಳಲ್ಲಿ ಅನುಭವಿಸಿದ್ದೇ ಆದ್ದರಿಂದ ಒಟ್ಟು ನಾಟಕದ ಹರಿವು ಸೌಮ್ಯವಾಗಿಯೇ ಸುಂದರವಾಗಿಯೇ ಸಾಗುತ್ತಿತ್ತು. ಆದರೆ ರೆಕ್ಕೆ ಕಟ್ಟಿ ನದಿ ನದ ಪರ್ವತ ಸುತ್ತುವ ಸುಖಿಯ ಕನಸುಗಳು, ಮುದ್ದು ಮಗನನ್ನು ಕೇವಲ ಹೊಟ್ಟೆಪಾಡಿಗಾಗಿ ಯುದ್ಧಕ್ಕೆ ಕಳಿಸಿಕೊಟ್ಟ ಅಮ್ಮನ ಇಬ್ಬರ ಮೇಲಿನ ಅವಿಚ್ಛಿನ್ನ ಪ್ರೀತಿಗಳು ಊಹಿಸಲೂ ಆಗದ ಒಂದು ಬಾಂಬ್ ಆಸ್ಫೋಟದಿಂದ ಚಿಂದಿಯಾಗುವ ದುರಂತ ಗಾಢವಾಗಿ ಪ್ರಾಯದ ಹಂಗಿಲ್ಲದೆ ಪ್ರೇಕ್ಷಕರನ್ನು (ಗಮನಿಸಿ – ಪ್ರೇಕ್ಷಾಂಗಣದಲ್ಲಿದ್ದ ಬಹುಸಂಖ್ಯಾತರು ಪ್ರೌಢಶಾಲಾ ಮತ್ತೂ ಸಣ್ಣ ಪ್ರಾಯದ ಮಕ್ಕಳೇ ಆಗಿದ್ದರು) ಆವರಿಸಿಕೊಂಡಿತು. ಜೀವನದಲ್ಲಿ ನವರಸಗಳಿಗೆ ಮಕ್ಕಳು ಎರವಾಗುವುದಿಲ್ಲ. ನಾಟಕದಲ್ಲಿ ಮಾತ್ರ ಏಕಾಗಬೇಕು ಎನ್ನುವ ಮಾತಿಗೆ ಈ ಪ್ರದರ್ಶನ ನ್ಯಾಯ ಸಲ್ಲಿಸುತ್ತದೆ. ಆದರೆ ಒಟ್ಟು ಉತ್ಸವದಲ್ಲಿನ ಇತರ ಐದೂ ನಾಟಕಗಳು ಪ್ರಾಣಹಾನಿ ಅಥವಾ ಪರಿಣಾಮಕಾರೀ ಕ್ರೌರ್ಯವನ್ನು ತಂದಿಲ್ಲ, ದುರಂತವನ್ನಂತೂ ಚಿತ್ರಿಸಿಯೇ ಇಲ್ಲ ಎನ್ನುವ ನಿಟ್ಟಿನಲ್ಲಿ ಯೋಚಿಸಿದಾಗ ‘ರೆಕ್ಕೆ ಕಟ್ಟುವಿರಾ?’ ಮಕ್ಕಳ ನಾಟಕೋತ್ಸವಕ್ಕೆ ಭಾರವೇ ಆಯ್ತು ಅನಿಸಿತು. (ಧಾಂ ಧೂಂ ಸುಂಟರಗಾಳಿಯಲ್ಲಿ ಚೌಡಿಯನ್ನು ಕೊಲ್ಲುವ ದೃಶ್ಯ ಬರುತ್ತದೆ. ಆದರದು ನೆನಪಿನ ಚಿತ್ರಣವಾಗಿಯೂ ತನ್ನನ್ನುಳಿಸಿಕೊಳ್ಳುವ ಅನಿವಾರ್ಯತೆಯ ಕ್ರಮವಾಗಿಯೂ ಬಿಂಬಿತವಾಗಿದೆ. ಮುಂದೆ ಮಗಳ ಬಾಯಿಯಲ್ಲಿ, ಸ್ವತಃ ಮಂತ್ರಬುದ್ಧಿಯ ಪಶ್ಚಾತ್ತಾಪದಲ್ಲಿ ಅದಕ್ಕೂ ಪರಿಹಾರವನ್ನು ನಾಟಕಕಾರ ತರುವುದು ಗಮನಾರ್ಹ.)
ನಾಟಕ ಮುಗಿದಾಗ ಸ್ವತಃ ನಾಟಕ ನಿರ್ದೇಶಕರೇ “ಇದು ‘ವಿಲಂಬಿತ್’ ಗತಿಯದ್ದು, ಮಕ್ಕಳಿಗೆ ಹೇಗೋ” ಎಂಬ ಸಂದೇಹ ಉಳಿಸಿಕೊಂಡೇ ಪ್ರಯೋಗಿಸಿದ್ದು ತಿಳಿಯಿತು. ಆದರೆ ಮನುಷ್ಯ ಇತಿಹಾಸವೇ ಕಂಡು ಕೇಳದ ಭಯಾನಕ ಅಣುಬಾಂಬಿನ ‘ಅತಿ ತ್ವರಿತ’ಕ್ಕೆ ಪಕ್ಕಾಗುವ ವಸ್ತು, ಕನಿಷ್ಠ ನಾಟಕೀಯ ಸಮಾಧಾನವನ್ನೂ ಕೊಡಲಾಗದ ವಿಷಾದದಲ್ಲೇ ಮುಗಿಯುವುದು ನನಗಂತೂ ಮನಸ್ಸಿಗೆ ವಿಪರೀತ ಭಾರವಾಗಿಯೇ ಉಳಿಯಿತು. ಸಾಲದ್ದಕ್ಕೆ ಭೋಪಾಲ್ ಅನಿಲ ದುರಂತ (ಆಕಸ್ಮಿಕ ಎಂದು ತೆಗೆದು ಹಾಕುವವರಿರಬಹುದು), ನಮ್ಮೂರಿನಲ್ಲೇ ಅನಾವರಣಗೊಳ್ಳುತ್ತಿರುವ ಎಂಡೋಸಲ್ಫಾನ್ ಮಹಾ ಅನ್ಯಾಯದ ಚಿತ್ರಗಳು (ಇದು ಆಕಸ್ಮಿಕವೂ ಅಲ್ಲ, ಜಪಾನಿನ ಮೇಲಾದಂತೆ ‘ವೈರಿದೇಶವನ್ನು’ ಅಳಿಸುವ ಪ್ರಯತ್ನವೂ ಅಲ್ಲ. ನಮ್ಮವರೇ ನಮ್ಮ ಮೇಲೆ ನಡೆಸಿದ ಮತ್ತೆ ನಿರ್ಲಜ್ಜವಾಗಿ ಸಮರ್ಥಿಸಿಕೊಳ್ಳುತ್ತಿರುವ ಕ್ರೌರ್ಯದ ಪರಮಾವಧಿ) ಮನಃ ಪಟಲದಲ್ಲಿ ಮುಂಚೂಣಿಗೂ ಬಾರದಿರಲಿಲ್ಲ.
೯-೨-೨೦೧೩
ಒಂದೊಂದೇ ಪ್ರದರ್ಶನವಿದ್ದೂ ನಾಲ್ಕೂ ದಿನಗಳನ್ನು ಗೆಲ್ಲಿಸಿದ ನಾಟಕೋತ್ಸವಕ್ಕೆ ಇಂದು ಮಾತ್ರ ಎರಡು ಪ್ರದರ್ಶನಗಳಿದ್ದೂ ಸೋಲಿನ ದಿನವಾಯ್ತೆಂದು ವಿಷಾದದಲ್ಲೇ ಹೇಳಬೇಕಾಗಿದೆ. ಮೊದಲು ‘ಅಂಚೆಮನೆ’ – ರವೀಂದ್ರನಾಥ ಟಾಗೋರ್ ನಾಟಕ. ಇದನ್ನು ಗೊಂಬೆಯಾಟವೆಂದೇ ವ್ಯವಸ್ಥೆ ಜಾಹೀರುಪಡಿಸಿದ್ದರೂ ಆಡಿದ ಧಾರವಾಡದ ಗೊಂಬೆಮನೆ ಬಳಗ ಬಯೋ-ಪಪೆಟ್ರಿ ಅರ್ಥಾತ್ ಸಜೀವ ಮತ್ತು ಗೊಂಬೆಯಾಟವೆಂದೇ ಹೇಳಿಕೊಂಡರೂ ವಾಸ್ತವದಲ್ಲಿ ಗಣಕದಿಂದ ಸ್ಥಿರ ಚಿತ್ರಗಳ ಪ್ರೊಜೆಕ್ಷನ್ ಸೇರಿಸಿ ತ್ರಿವೇಣೀ ಸಂಗಮವೇ ಆಗಿತ್ತು. (ಗೊಂಬೆಯಾಟ ಎನ್ನುವಲ್ಲೂ ನನ್ನ ತಿಳುವಳಿಕೆಗೆ ಮೀರಿದಂತೆ ಪ್ರದರ್ಶನಗೊಂಡದ್ದು ತೊಗಲು ಗೊಂಬೆಯಾಟ ಎನ್ನುವ ಪ್ರಕಾರದ ಛಾಯಾ ನಾಟಕ.) ಒಟ್ಟು ಪ್ರಯೋಗ ಪರಿಣತಿ ಗಳಿಸುವ ಮುನ್ನವೇ ಪ್ರದರ್ಶನಕ್ಕೆ ಬಂದಂತಿತ್ತು. ವ್ಯಕ್ತಿ ಪಾತ್ರಗಳು ಸಾಕಷ್ಟು ಚೆನ್ನಾಗಿಯೇ ನಿರ್ವಹಿಸಿದರೂ ಬೆಳಕು ಮತ್ತು ಧ್ವನಿಯ (ಮೊದಲೇ ಹೇಳಿದಂತೆ ಸಭಾಂಗಣದ ಕೊರತೆಯೂ ಸೇರಿದ್ದಿರಬಹುದು) ವೈಫಲ್ಯಗಳು ತುಂಬಾ ಕಾಡಿದವು. ಛಾಯಾ ಪಾತ್ರಗಳಂತೂ ಒಂದು ಕೈ ತಿರುವುದರಿಂದ ಮುಂದಿನ ಮಜಲು ಮುಟ್ಟಲೇ ಇಲ್ಲ. ಅವುಗಳಿಗೆ ಧ್ವನಿ ಕೊಡುತ್ತಿದ್ದ ವ್ಯಕ್ತಿಗಳಾದರೋ ಮರೆಯಲ್ಲಿರುವ ಸೌಲಭ್ಯವನ್ನೂ ಬಳಸಿಕೊಳ್ಳದೇ ಪ್ರಾಂಟಿಂಗ್ ಪಡೆಯುತ್ತಿದ್ದುದು ನನಗೆ ಸರಿ ಕಾಣಲಿಲ್ಲ. ಅಕಾಲಕ್ಕೆ ಪಾತ್ರಗಳು ಮೊಳೆದು ಮರೆಯಾಗುತ್ತಿದ್ದುದು, ಸ್ಪಷ್ಟ ನಿಲುವೂ ಇಲ್ಲದುದು ಎಲ್ಲ ಕೊರತೆಯಾಗಿಯೇ ಕಾಡಿದುವು.
ನಾಟಕರಂಗದ ಐತಿಹಾಸಿಕ ಪುರುಷರಲ್ಲಿ ಒಬ್ಬರಾದ ಗರೂಡ ಸದಾಶಿವರಾಯರ ಕುಟುಂಬದ್ದೇ ನೇರ ಟಿಸಿಲುಗಳು (ಹಿರಿಯ ನಟ, ನಾಟಕಗಳಲ್ಲಿ ಸಂಶೋಧನಾ ಪದವಿಯನ್ನೂ ಗಳಿಸಿದ ಡಾ| ಪ್ರಕಾಶ ಗರೂಡ, ನಿರ್ದೇಶಕಿ ರಜನಿ ಗರೂಡ, ಮತ್ತೊಬ್ಬ ತರುಣಿಯೂ) ಈ ಪ್ರಯೋಗದಲ್ಲಿದ್ದುದರಿಂದ ನನ್ನ ನಿರೀಕ್ಷೆ ಹೆಚ್ಚಾದದ್ದೂ ಇರಬಹುದು, ಪ್ರದರ್ಶನ ಸೋತಿತು. ದಿನದ ಎರಡನೇ ಪ್ರದರ್ಶನವಾಗಿ ಬಂದದ್ದು ಶಿವರಾಮ ಕಾರಂತರ ಪುಟ್ಟಿಯೂ ಸಿಹಿಮೂಲಂಗಿಯೂ. ಕನಿಷ್ಠ ಎರಡೂವರೆ ದಶಕದ ನಾಟಕ ಪ್ರಯೋಗಗಳ ಮುನ್ನೆಲೆಯಲ್ಲಿರುವ ತುಮರಿಯ ಕಿನ್ನರ ಮೇಳ, ಪ್ರಮೋದ್ ಶಿಗ್ಗಾಂವ್ ಅವರ ನಿರ್ದೇಶನದಲ್ಲಿ ಇದನ್ನು ಪ್ರಯೋಗಿಸಿದರು. ಕನಸುಗಾರಿಕೆ ಮತ್ತು ಅದ್ಭುತರಸಕ್ಕೆ ಮಕ್ಕಳಲ್ಲಿರುವ ಒಲವನ್ನು ಚೆನ್ನಾಗಿಯೇ ಗ್ರಹಿಸಿ ಕಾರಂತರು ಕೊಟ್ಟ ಹಲವು ಪ್ರಾಣಿ-ಪಾತ್ರಗಳೂ ಸನ್ನಿವೇಶಗಳೂ ಇದರಲ್ಲಿದ್ದುವು.
ಆದರೆ ಎಲ್ಲವೂ ಕೇವಲ ನೀರಸ ನಿರೂಪಣೆಗೇ ಸೀಮಿತಗೊಂಡದ್ದು ಆಡಿದ ಮೇಳದ ಖ್ಯಾತಿಗೆ ತಕ್ಕುದಾಗಿರಲಿಲ್ಲ. ಇದ್ದ ಪಾತ್ರಗಳೂ ಪಳಗಿರಲಿಲ್ಲ, ರಂಗಚಲನೆಯಲ್ಲಿ ಪರಸ್ಪರ ಹೊಂದಿಕೊಂಡಿರಲಿಲ್ಲ. ಮಾತೆಲ್ಲ ಕಿರಿಚುಗಳಲ್ಲಿ ನಡೆಯುತ್ತಿದ್ದುದು, ರಂಗನಿರ್ವಹಣೆಯ ವೈಶಿಷ್ಟ್ಯ ಮನೆವಾರ್ತೆಯ ಅನೌಪಚಾರಿಕತೆಯಲ್ಲಿ ಕಳೆದು ಹೋದದ್ದು ನಾಯಕ ನಟ (ಎನ್ನಿ) ಕೆ.ಜಿ. ಕೃಷ್ಣಮೂರ್ತಿಯವರ ರಂಗಾನುಭವದ ಹಿರಿತನದ ಗಳಿಕೆಯೂ ಹೌದು, ಪ್ರಸ್ತುತ ಪ್ರದರ್ಶನದ ಬಹಳ ದೊಡ್ಡ ಕೊರತೆಯೂ ಹೌದು! ನಾಟಕ ಸಿನಿಮಾದಂತಲ್ಲ, ಪ್ರತಿ ಪ್ರದರ್ಶನದಲ್ಲೂ ನಟ (ಎಷ್ಟೇ ದೊಡ್ಡವನಿರಲಿ) ಪಾತ್ರದ ಮಿತಿಯಲ್ಲಿ ಗರಿಷ್ಠ ದುಡಿಯಲೇ ಬೇಕು.
ಯಕ್ಷಗಾನದ ಪ್ರೇಕ್ಷಕ ಚಿಟ್ಟಾಣಿ, ಕೊಂಡದಕುಳಿಯಂತವರು ರಂಗ ಪ್ರವೇಶಿಸಿದ ಕೂಡಲೇ ಚಪ್ಪಾಳೆಗೆ ತೊಡಗುವಂತಾಗಿರುವುದರಿಂದ ಅಲ್ಲಿ ಯಕ್ಷಗಾನ, ಅಂಥದ್ದೇ ‘ರಿಯಾಯ್ತಿ’ಯಿಂದ ಇಲ್ಲಿ ನಾಟಕವೂ ಬೆಳೆಯಲಾರದು ಎನ್ನುವುದು ವಿಚಾರವಂತರು ತಿಳಿದಿರಲೇಬೇಕು. ಆಮೆ, ಹೆಗ್ಗಣಗಳ ಪಾತ್ರಗಳೇ ಬರಲಿಲ್ಲ. ಕರಡಿಗುಹೆಯ ಬಾಗಿಲು ತೆರೆದು ಮುಚ್ಚುವುದು, ಒಳಗಿನ ಭಯಕಾರೀ ವಾತಾವರಣ, ಪಾತ್ರಗಳು/ ವಸ್ತುಗಳು ಮಾಯಾನೀರಿನಿಂದ ಸಣ್ಣ ದೊಡ್ಡವಾಗುವುದಿತ್ಯಾದಿ ತಂತ್ರಗಳು ದೃಶ್ಯವಾಗದೇ ಒಟ್ಟು ನಾಟಕ ‘ಹರಿಕೆಯಾಟ’ದ ಮಟ್ಟದಿಂದ ಮೇಲೇಳಲಿಲ್ಲ.
೧೦-೨-೨೦೧೩
ಧಾಂ ಧೂಂ ಸುಂಟರಗಾಳಿ – (ಮೂಲ ಟೆಂಪೆಸ್ಟ್ – ಶೇಕ್ಸ್‌ಪಿಯರ್) ಕನ್ನಡದ ರೂಪಾಂತರ ವೈದೇಹಿ. ಖ್ಯಾತ ನಟ ಮಂಡ್ಯ ರಮೇಶರ ನೇತೃತ್ವದ ನಟನ, ಮೈಸೂರು ತಂಡ ಜೀವನ್ರಾಂ, ಸುಳ್ಯ ಇವರ ನಿರ್ದೇಶನದಲ್ಲಿ ಕೊಟ್ಟ ಈ ಪ್ರಯೋಗ ಮಳೆಬಿಲ್ಲು ನಾಟಕೋತ್ಸವದಲ್ಲಿ ನಿಸ್ಸಂದೇಹವಾಗಿ ಪ್ರಥಮ ಸ್ಥಾನದಲ್ಲಿ ನಿಂತಿತು. ಹಿಂದಿನ ದಿನ ಸಿಹಿಮೂಲಂಗಿಯಲ್ಲಿ ಏನೆಲ್ಲಾ ‘ಬಳಸಿಕೊಳ್ಳಲಿಲ್ಲ’ ಎಂದು ಕಾಣಿಸಿತ್ತೋ ಅವನ್ನೆಲ್ಲ ಗರಿಷ್ಠ ದುಡಿಸಿಕೊಂಡ ಪ್ರದರ್ಶನವಿದು. ವಿವಾಹೋತ್ತರ ವಿಹಾರದಲ್ಲಿದ್ದ ನೌಕೆ ಕಡಲಿನಲ್ಲಿ ಕದಡಿಹೋಗುವಲ್ಲಿಂದ ತೊಡಗಿ ಮತ್ತದೇ ಕಡಲಿನಲ್ಲಿ ಹೊಸದೇ ಮದುವೆಯ ಹಾರೈಕೆಯೊಡನೆ ವಿಹರಿಸುತ್ತ ಮರಳುವ ನಡುವೆ ಎಷ್ಟೊಂದು ಅದ್ಭುತಗಳು, ನಿರ್ವಹಣೆಯಲ್ಲಿ ಎಷ್ಟೊಂದು ಅಚ್ಚುಕಟ್ಟು. ಚೌಡಿ, ಕಿರಾತರ ಭಯಾನಕತೆ, ಗಾಳಿಕಿನ್ನರ ಮಾಯದಿಂದ ಸಂಚರಿಸುವ ಪರಿ, ಹಡಗು ಚಲಿಸುವ ಸಂಭ್ರಮ, ಒಂದೊಂದೂ ನಡೆ, ಕುಣಿತ ರಂಗದ ಮೇಲೆ ಎಷ್ಟು ವೈಭವದಿಂದ ಮೂಡುತ್ತಿತ್ತೋ ಅಷ್ಟೇ ಪ್ರೇಕ್ಷಕವರ್ಗದಿಂದ ಪ್ರತಿಧ್ವನಿಸುತ್ತಾ ‘ನಾಟಕ ಒಂದು ಹಬ್ಬ’ ಎನ್ನುವ ಮಾತನ್ನು ಮತ್ತೆ ನಿಜ ಮಾಡಿತು.
ಮಳೆಬಿಲ್ಲು ೧೨ ಬರಿಯ ನಾಟಕ ಪ್ರದರ್ಶನಗಳಲ್ಲ, ಮಕ್ಕಳ ನಾಟಕೋತ್ಸವ ಎನ್ನುವುದನ್ನೂ ಶ್ರುತಪಡಿಸಿತು. ಅದ್ಭುತ ರಸವನ್ನು ಅದ್ಭುತವಾಗಿಯೇ ದುಡಿಸಿಕೊಂಡ ಧಾಂ ಧೂಂ ಸುಂಟರಗಾಳಿ ನಾಟಕೋತ್ಸವದಲ್ಲೇ ಸರ್ವ ಪ್ರಥಮವಾಗಿ ವಿಜೃಂಬಿಸಿತು ಎಂದರೆ ಅತಿಶಯೋಕ್ತಿಯಾಗದು.
 

‍ಲೇಖಕರು G

February 16, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾಡಿದ ‘ನಾರಸಿಂಹ’

ಕಾಡಿದ ‘ನಾರಸಿಂಹ’

ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್,...

ಅವರು ಹಾರ ತೆಗೆದು ಬಿಸಾಡಿದರು…

ಅವರು ಹಾರ ತೆಗೆದು ಬಿಸಾಡಿದರು…

ನೆಂಪೆ ದೇವರಾಜ್ ಹಾರ ಕಸಿದುಕೊಂಡು ಬಿಸಾಡಿದ ರೀತಿಗೆ ಇಡೀ ಸಭೆ ರೌರವ ಮೌನದ ಬಿಕ್ಕಳಿಕೆಯಾಗಿತ್ತು. ಇಂದು ಮಹಾ ರೈತನಾಯಕನ ಜನುಮ ದಿನ ಆ ಒಂದು...

ಆರ್ ಪೂರ್ಣಿಮಾ ಹೇಳುತ್ತಾರೆ..

ಆರ್ ಪೂರ್ಣಿಮಾ ಹೇಳುತ್ತಾರೆ..

'ಅವಧಿ'ಯ ಜನಪ್ರಿಯ ಅಂಕಣ ಜಿ ಎನ್ ರಂಗನಾಥರಾವ್ ಅವರ 'ಮೀಡಿಯಾ ಡೈರಿ'ಯಲ್ಲಿ ಫೆಬ್ರುವರಿ ೪ ರಂದು ಪ್ರಕಟವಾದ 'ಪ್ರಜಾವಾಣಿ ಮತ್ತು ನೈತಿಕ...

೧ ಪ್ರತಿಕ್ರಿಯೆ

  1. shobhavenkatesh

    makkala natakothasavakke vimarshe madida ashokvardhan g n avarege, hagoo makkala natokothasavada vimrashe prakatisida avdhi thandakku dhanyavadagalu.makkala natakada vimsarshege agathayathe toridakkae vandananegalu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: