ಮಂಗಿಗೊಂದು ಮಸಿ ಅರಿವೆ‌

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡುನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ಅವಳು ನನ್ನ ಕಣ್ಣಿಗೆ ಬಿದ್ದದ್ದು ಸಣ್ಣಗೆ ಜುಮುರು ಉದುರುತ್ತಿರುವ ಒಂದು ಸೋನೆ ಮಳೆಯ ಜುಲೈ ತಿಂಗಳ ಮುಂಜಾವಿನ ಅರೆಗತ್ತಲು ಅರೆಬೆಳಕಿನ ಸುಮಾರು ಆರುಗಂಟೆಯ ಹೊತ್ತಿನಲ್ಲಿ. ಮನೆಯ ಎಲ್ಲರೂ ಏಳುವುದಕ್ಕಿಂತ ಮೊದಲೆದ್ದು ಸದ್ದಾಗದಂತೆ ಬಾಗಿಲು ತೆರೆದು ಹೊರಜಗಲಿಯ ಮೇಲಿಟ್ಟ ಒಂದು ಪ್ಲಾಸ್ಟಿಕ್ ಕುರ್ಚಿಯ ಮೇಲೆ ಸುಮ್ಮನೆ ಕುಳಿತು ಹತ್ತುಮಾರು ದೂರದ ದಣಪೆಯಾಚೆಯ ರಸ್ತೆಯ ಮೇಲೆ ಕುಣಿವ ಮಳೆಹನಿಗಳನ್ನೂ, ಹೊಳೆಯಾಗಿ ಓಡುವ ಕೆಂಪು ರಾಡಿ ನೀರನ್ನೂ, ಅದರಾಚೆಗಿನ ಬೃಹತ್ ನೀಲಗಿರಿ ಮರದ ವಾಲಾಟವನ್ನೂ, ಅಲ್ಲಿಂದಾಚೆ ಬಹುದೂರದವರೆಗೂ ವಿಸ್ತರಿಸಿಕೊಂಡಿರುವ ಹುಲ್ಲುಬೇಣ, ಕಲ್ಲು ಬಂಡೆ ಎರಡೂ ಮಿಳಿತವಾದ, ಮಳೆಗೆ ಮೈಕೊಟ್ಟು ನಿಂತುಕೊಂಡಿರುವ ಪುಟ್ಟಗುಡ್ಡವನ್ನೂ ತಾಸರ್ಧ ತಾಸು ಮೌನವಾಗಿ ಕೈಕಟ್ಟಿ ಕುಳಿತು ನೋಡುವ ಚಟ ನನಗೆ ಯಾವಾಗ ಹತ್ತಿತೆಂದು ನೆನಪಿಲ್ಲ. ಚಳಿಗಾಲವಾಗಿದ್ದರೆ ಸಣ್ಣ ಚಳಿಯನ್ನೂ ಬೇಸಿಗೆಯಾಗಿದ್ದರೆ ಅದಾಗಲೇ ಬೆವರಲು ಶುರುವಾದ ಸುತ್ತಲನ್ನೂ ಒಳಗೊಂಡ ವಿಚಿತ್ರ ಖುಷಿ ನೆಮ್ಮದಿ ಕೊಡುವ ವರ್ಷಪೂರ್ತಿ ಜಾರಿಯಲ್ಲಿರುವ ಈ ಸುಖದ ನೋಟವನ್ನು ಬಿಟ್ಟುಕೊಟ್ಟ ದಿನ ನನಗೆ ಸಮಾಧಾನವಾದುದಿಲ್ಲ.

ಅಂತಹುದೇ ಒಂದು ಮಳೆ ಬೆಳಗು ವಾಕಿಂಗಿನವರೆಲ್ಲ ಕೊಡೆಯಡಿಗೆ ಹಾಗೆ ಹೋಗಿ ಹೀಗೆ ವಾಪಸ್ಸು ಹೋಗುತ್ತಿರುವ ಹೊತ್ತಿನಲ್ಲಿ ತಲೆಯ ಮೇಲಿನ ಸೊಪ್ಪಿನ ಬುಟ್ಟಿ ಪಾಗಾರಕ್ಕೆ ದಾಟಿಸಿ ನನ್ನನ್ನು ನೋಡಿ ಗೇಟು ತೆಗೆದು ಒಳಬಂದವಳು ಮಂಗಿ. 

ಅವಳು ಹೇಳಿದ ಮೇಲೆ ನನಗೆ ಅವಳ ಹೆಸರು ಮಂಗಿ ಅಂತ ಗೊತ್ತಾಗಿದ್ದು. ಹಾಲಕ್ಕಿಗಳಲ್ಲಿ ಸೋಮವಾರ ಹುಟ್ಟಿದವರು ಸೋಮಿ, ಸೋಮನಾದರೆ.. ಮಂಗಳವಾರದವರು ಮಂಗಿ, ಮಂಗು. ಶುಕ್ರವಾರದವರು ಸುಕ್ರು, ಸುಕ್ರಿ ಅಥವಾ ಶುಕ್ರಿ. ಹಾಗಾಗಿ ಮನೆಮನೆಯಲ್ಲೂ ಬುದ್ದು, ಶುಕ್ರಿ, ಮಂಗು, ಸೋಮ ಇತ್ಯಾದಿಗಳು.

ಬೇಸಿಗೆಯಾದರೆ ಚಂಬು ನೀರು ಮತ್ತು ಹೋಳು ಉಪ್ಪಿನಕಾಯಿಗಾಗಿ ಸೌದೆಗೋ, ಸೊಪ್ಪಿಗೋ ಹೋಗಿಬರುವ ಹಾಲಕ್ಕಿ ಹೆಂಗಸರು ಬುಟ್ಟಿ ಪಾಗಾರಕ್ಕೆ ಚಾಚಿ ದಟ್ಟಿ ಕೊಡವಿ ‘ನೀರ್ ತರಿ ಅಮಾ’ ಎಂದು ಕೇಳುತ್ತ ಅಂಗಳಕ್ಕೆ ಬರುವ ಖಾಯಂ ಕರಕರೆ ಇದ್ದದ್ದೇ.. ಹಾಗಾಗಿ ಒಂದು ದೊಡ್ಡ ಬೋಗುಣಿ ನೀರು ಮತ್ತದರ ಲಗ್ತ ಒಂದು ಲೋಟ ಜೋನಿಬೆಲ್ಲ ಹೊರಗೇ ಇಟ್ಟುಬಿಡುವ ರೂಢಿ ನಾನು ಬಹುಕಾಲದಿಂದ ಇಟ್ಟುಕೊಂಡಿದ್ದೇನೆ. ನಾನಿಲ್ಲದಿದ್ದರೂ ಅವರೇ ಕುಡಿದುಕೊಂಡು ಹೋಗುತ್ತಾರೆ ಹಲವುಬಾರಿ.

ಈಗಾದರೆ ಮಳೆಗಾಲ. ಅವರೇ ಹೇಳುವಂತೆ ಗಂಟಲು, ನಾಲಿಗೆ ಹಸಿಯಾಗಿಸಿಕೊಳ್ಳಲು ಬುಟ್ಟಿಗುಂಟ ಇಳಿದು ನೆತ್ತಿ ಹಣೆ ದಾಟಿ ಕೆಳಗಿಳಿವ ಮಳೆನೀರು ಇದ್ದೇ ಇದೆ. ಯಾಕೆ ಬಂದಿರಬಹುದಪ್ಪ ಈ ಹೆಂಗಸು ಎನ್ನುವುದರೊಳಗಾಗಿ ಮನೆ ಮಾಡಿನ ಒಂದು ಪಕ್ಕೆಯ ಅಲಕಿನಂಚಿಗೆ ಹೋಗಿ ನಿಂತು ಸೆರಗು ನೆರಿಗೆ ಎಲ್ಲ ಹಿಂಡಿ, ಕುಡುಗಿ ಮೈ ಒರೆಸಿಕೊಳ್ಳುತ್ತ ಮತ್ತೆ ಮತ್ತೆ ಹಿಂಡಿಕೊಳ್ಳುತ್ತ ಆಗಾಗ ನನ್ನ ಕಡೆ ನೋಡುತ್ತ ಏನನ್ನೋ ಕೇಳಲೋ ಬೇಡವೋ ಅಂತಿದ್ದಳು ಮಂಗಿ.

ನೀರು ಬೇಕೇನೇ..?
ಊಹುಂ..
ಮತ್ತೆ ಚಾ ಅರಕು ಬೇಕೇನೇ..?
ಉಹುಂ..
ತಲೆಗೆ ಸೂಡುಕೆ ಕೊಟ್ಟೆ ಕೊಡ್ಲೇನೇ..?
ಪೂರ ನೆಂದು ಹೋಗಿ ಆಗೀದು..ಈಗೆಂತ ಕೊಟ್ಟೆ.?
ಮತ್ತೆಂತ ಸಾಯುಕೆ ಬಂದಿಯೇನೆ..
ಹ್ಹ ಹ್ಹ ಈಗೇನ್ ಜೀವಂತ್ ಈವೆ ನಾನು ಅಂತ ಮಾಡಿರೇನು ಅಮ್ಮೋರೇ?
ಮತ್ತೆ?

“ಬೆಳಗಾಗೆ ಹೋಗುವಾಗ ಸಮಾ ಇದ್ದೆ.. ಹೋಗಿ ಸೊಪ್ಪು ಕೊಯ್ಯುವಾಗ ಮುಟ್ಟಾಗಿಬಿಟ್ಟೆ. ಹಾಳಾದ್ದು..!! ನಿಲ್ಲಲು ಬಂದಿದೆಯೋ ಏನೋ.. ಹಳ್ಳದಾಂಗೆ ಹರೀತಿದು ನೆತ್ರ.. ಹಿಂದೆ ಮುಂದೆ ಬರೂರೆಲ್ಲ ಕಾಲಿಂದ ಹರಿಯೋ ರಕ್ತಾನೇ ನೋಡ್ತೀರೇನೋ ಅಂಬಗಾತೀದು… ಮತ್ತೂ ಅರ್ಧ ಮೈಲು ನಡಿಬೇಕು ಈ ಮುಟ್ಟಿ ಹೊತ್ತು.. ಒಂದು ಹರಕು ಮಸಿಅರಿವೆ ತುಂಡು ಹೊತಾಕಿ ಈ ಕಡೆ… ಅಥವಾ ಒಂದು ಕೊತ್ಲ ಪಾಟಾದ್ರೂ….(ಗೋಣಿ ತಾಟು)”

ಏನು ಹೇಳುತ್ತಿದ್ದಾಳಿವಳು.? ಎಂದು ಅರ್ಥ ಮಾಡಿಕೊಳ್ಳಲು ಹತ್ತು ಸೆಕೆಂಡುಗಿಂತ ಹೆಚ್ಚಿನ ವೇಳೆ ವ್ಯಯವಾಗಲಿಲ್ಲ ನನ್ನದು..

“ಮಂಗಿ ಸೊಪ್ಪಿಗೆ ಹೋದಾಗ ಮುಟ್ಟಾಗಿದ್ದಾಳೆ.. ಈಗ ಬರುವ ಹಾದಿಯಲ್ಲಿ ನಿಂತು ಜನ್ಮಸ್ಥಾನಕ್ಕೆ ಉಟ್ಟುಕೊಳ್ಳಲು ಒಂದು ಮಸಿಅರಿವೆಯ ತುಂಡು ಅಥವಾ ಗೋಣಿತಾಟಿನ ತುಂಡು ನನ್ನಲ್ಲಿ ಕೇಳುತ್ತಿದ್ದಾಳೆ”

ಮಾತು ಬೆಳೆಸಲು ಇನ್ನೇನೂ ಉಳಿಯದ ಹೊತ್ತಿಗೆ ಒಳಹೋಗಿ ನನ್ನ ಹಳೆಬಟ್ಟೆಯ ದಫ್ತರದಿಂದ ಒಂದು ಹಳೆಕಾಟನ್ ನಿಲುವಂಗಿಯ ಅರ್ಧಭಾಗವನ್ನು ತಂದು “ಅಲ್ಲಿಂದೇ ಹೊತಾಕಿ” ಎಂದು ಒಡ್ಡಿದ ಅವಳ ತೋಳಿಗೆ ತೂರಿ.. ಇರು ಬಂದೆ ಎನ್ನುತ್ತ ಅವಳಿಗೂ ಒಂದಿಷ್ಟು ಕೊಟ್ಟರಾಯ್ತೆಂದು ಚಹಾ ಮಾಡಲು ಒಳಬಂದೆ. 

ಮಳೆಗೆ ಮರೆ ಇಲ್ಲ, ಚಪ್ಪಲಿ ಇಲ್ಲ, ಬಟ್ಟೆಯೊಳಗೆ ಲಂಗವಿಲ್ಲ.. ಹಾಕಿಕೊಂಡ ಜೀರ್ಣ ಬಟ್ಟೆ ಒದ್ದೆಯಾಗಿ ಮೈಗಂಟಿ, ಎರಡೂ ತೊಡೆಗೂ ಕಾಲಿಗೂ ಅಡಿಗಡಿಗೆ ಸೆರೆದು ಮುಂದೆ ಹೆಜ್ಜೆ ಇಕ್ಕಲು ಬಿಡುವುದಿಲ್ಲ.. ನೆತ್ತಿಯಿಂದ ಇಳಿದು ಕಣ್ಣಿಗಿಳಿವ ಮಳೆನೀರ ಮತ್ತೆ ಮತ್ತೆ ಒರೆಸಿ ಮುಂದಡಿ ಇಡುತ್ತ ಹುಲ್ಲೋ ಸೊಪ್ಪೋ ಸೌದೆಯೋ ಹೊತ್ತು ಸಾಗುವ ಈ ಹೆಣ್ಣುಗಳ ದೈನಂದಿನ ಚರಿತ ‘ಅಯ್ಯೋ’ ಅಂದರೆ ಬದಲಾಗುವುದಿಲ್ಲ.

ಮಂಗಿಯನ್ನು ನೋಡಿದ ತಕ್ಷಣಕ್ಕೆ ಇಪ್ಪತ್ತು ಮೂವತ್ತು ವರ್ಷದ ಹಿಂದಕ್ಕೆ ಹೋದ ಮನಸ್ಸು ತವರಿನ ಅಂಗಳದ ಅಪ್ಪಾಲೆ ತಿಪ್ಪಾಲೆ ಆಟದ ಜಾಗಕ್ಕೆ ಹೋಗಿ ನಿಂತಿತು. ತಿಂಗಳ ಬಾಕಿ ದಿನದಲ್ಲಿ ಭತ್ತ ಕುಟ್ಟುತ್ತ, ಹಿಟ್ಟು ಬೀಸುತ್ತ, ದೋಸೆ ರುಬ್ಬುತ್ತ, ನೆಲಕ್ಕೆ ಸಗಣಿ ಸಾರಿಸುತ್ತ ಒಳಗೂ ಹೊರಗೂ ಬಿಡುವಿಲ್ಲದ ಕೆಲಸದಲ್ಲಿರುವ ಹೆಂಗಸರು ‘ಆ ಮೂರು ದಿನ’ ಮಾತ್ರ ಮುಂಜಾನೆ ಕೊಟ್ಟಿಗೆಯ ಸೆಗಣಿ ಎಳೆದು ಹಾಕಿ ಸೊಪ್ಪಿಗೋ ಹುಲ್ಲಿಗೋ ಹೋಗಿಬಂದು ಗದ್ದೆಕೆಲಸದ ದಿನಮಾನವಾಗಿರದಿದ್ದರೆ ಆ ನಂತರದಲ್ಲಿ ಪುರುಸೊತ್ತಾಗಿ ಬಿಡುತ್ತಿದ್ದರು.

ಅಂಗಳದಂಚಿನ ಅಡಿಕೆ ಗಿಡಕ್ಕೋ ಕೊಟ್ಟಿಗೆ ಕಂಬಕ್ಕೋ ಬೆನ್ನುಚಾಚಿಕೊಂಡು ಉಟ್ಟಿದ್ದ ಹರಕು ಸೀರೆಯ ನೆರಿಗೆಯನ್ನು ಹಾಕಿದ ಕತ್ತರಿ ಕಾಲಿನ ನಡುವೆ ಇರುಕಿ ಬೇರೆಯದೇ ಆದ ಭಂಗಿಯಲ್ಲಿ ನಿಂತುಕೊಂಡು ಬಾನಿಯ ಹತ್ತಿರ ಮಡಿಕೆ, ಹೆಂಚು ತೊಳೆವ ಹೆಂಗಸರೊಂದಿಗೆ ಮಾತನಾಡುತ್ತಿದ್ದರು.. ‘ಅವರನ್ನು ಕಿಟ್ಟುಕಾಗ’ (ಮುಟ್ಟಬಾರದು) ಎಂಬುದಷ್ಟೇ ಗೊತ್ತಿರುವ ನಾವು ಆಡಾಡುತ್ತ ಅವರ ಹತ್ತಿರಕ್ಕೆ ಹೋದರೂ ಸಾಕು.. ಹೇ ಹೇ ಹೋಗಿ ಆ ಕಡೆ.. ಬರ್ಬೇಡಿ ಈ ಕಡೆ.. ಎಂದು ಗೌಜಿ ಹಾಕುತ್ತ ಒಂದು ಹಸಿ ನಕ್ಕಿ ಸೊಪ್ಪಿನ ಬರಲು ಕೈಯಲ್ಲಿ ಹಿಡ್ಕಂಡು ಜಳಪಿಸುತ್ತ ನಮ್ಮ ಮೇಲೊಂದು ಸೈಡುಗಣ್ಣನ್ನಿಟ್ಟುಕೊಂಡೇ ಮಾತು ಮುಂದುವರಿಸುತ್ತಿದ್ದರು..

ಉಟ್ಟ ಹತ್ತಿಯ ಕಪಡಕ್ಕೆ ಹತ್ತಾರು ಹೊಲಿಗೆ ಬಿದ್ದು ಮತ್ತವು ಕುಳಿತಾಗಲೊಮ್ಮೆ ನಿಂತಾಗಲೊಮ್ಮೆ ಭರ್ …ಪರಕ್… ಎನ್ನುತ್ತ ಮತ್ತೆ ಮತ್ತೆ ಬಿಂಜುವ ಕಾಲಮಾನದಲ್ಲಿ ಮುಟ್ಟಿನ ಬಟ್ಟೆಗಾಗಿ ಮತ್ತು ಸೋಪಿನ ತುಣುಕೂ ಕಾಣದ ಹೊತ್ತಿನಲ್ಲಿ ಅದನ್ನು ಶುಭ್ರವಾಗಿಡುವುದಕ್ಕಾಗಿ ಅವರೇನು ಮಾಡುತ್ತಿದ್ದರೋ ಎಂಬುದು ಈಗಲೂ ನಾನು  ಮ್ಲಾನಮನದವಳಾಗಿ ಧ್ಯಾನಮಾಡುವ ವಿಷಯ… ಅಂಟುವಾಳ ಹೆಕ್ಕಿ ತಂದು ಬೀಜ ತೆಗೆದು ಒರಳುಕಲ್ಲಲ್ಲಿ ಕುಟ್ಟಿ ಪುಡಿ ಮಾಡಿ ವರ್ಷಪೂರ್ತಿ ಮರದ ಮರಿಗೆಯಲ್ಲಿ ಸಂಗ್ರಹ ಮಾಡಿಕೊಳ್ಳುತ್ತಿದ್ದ ನೋಟವೂ ಕಣ್ಣ ಮುಂದಿದೆ.

“ನಮಗೆ ನಿಮ್ಮಂತೆ ಚಲ್ಲಣ ಇರಲಿಲ್ಲ.. ಬಾಳೆ ಬಳ್ಳಿಯನ್ನೋ.. ಸೆಣಬು ದಾರವನ್ನೋ ಸೊಂಟಕ್ಕೆ ಕಟ್ಟಿ ಆ ದಿನಗಳಲ್ಲಿ ಕಾಸೆ ಕಟ್ಟಿಕೊಳ್ಳುತ್ತಿದ್ದೆವು.” ಎಂದು ಅವಳ ಸೊಂಟದ ಸುತ್ತ ವರ್ತುಳಾಕಾರವಾಗಿ ಬಿದ್ದ ಕಡುಗಪ್ಪು ಕಲೆಯನ್ನು ಪ್ರಶ್ನಿಸಿದಾಗಲೆಲ್ಲ ಅವ್ವ ಉತ್ತರಿಸುತ್ತಿದ್ದಳು.

ನೂರಾರು ಕಂಪನಿಯ ವಿವಿಧ ಸೈಜುಗಳ ಸ್ಯಾನಿಟರಿ ಪ್ಯಾಡುಗಳು.. ಮೆನ್ಸ್ಟ್ರುವೆಲ್ ಕಪ್ಪುಗಳು ರಾರಾಜಿಸುತ್ತಿರುವ ಹೊತ್ತಿನಲ್ಲಿ ಉದ್ಯೋಗಸ್ಥ ಅಥವಾ ಕೊಂಚ ಆರ್ಥಿಕ ಸಬಲ ಹೆಣ್ಣು ನೆಮ್ಮದಿಯಾಗಿ ಉಸಿರುಬಿಡುತ್ತ “ಈಗೇನು ಬಿಡು ಏನು ಬೇಕಾದ್ರೂ ಸಿಕ್ತದೆ ದುಡ್ಡಿದ್ದರೆ” ಎಂಬ ಸಮಾಧಾನದಲ್ಲಿರುವ ಈ ಸಮಯದಲ್ಲಿ ಉಟ್ಟುಕೊಳ್ಳಲು ಮತ್ತಂತಹುದೇ ಹರಕು ಮಸಿ ಅರಿವೆ, ಗೋಣಿತಾಟಿಗಾಗಿ ಬೇಡಿಕೆಯಿಟ್ಟು ‘ನೀನು ಮತ್ತು ನಿನ್ನಂತಹ ನಾಕು ಜನ ಬದಲಾದರೆ ಏನಂತೆ.. ಲೋಕ ಇರೋದು ನಮ್ಮಂತೆ’ ಎಂಬ ಸತ್ಯದರ್ಶನ ಮಾಡಿಸಿದ್ದಳು ಮಂಗಿ.

ಇಪ್ಪತ್ತೊಂದನೆಯ ಶತಮಾನ. ಎಲ್ಲ ಬದಲಾಗಿದೆ.. ಆಗುತ್ತಲಿದೆ.. ಮಹಿಳೆ ಹಿಂದಿನಂತಿಲ್ಲ ಎಂದುಕೊಂಡವರಿಗೆಲ್ಲ ಈ ತಕ್ಷಣಕ್ಕೆ ಮಂಗಿಯನ್ನು ಕರೆದುಕೊಂಡು ಹೋಗಿ ತೋರಿಸೋಣ ಎಂದೆನಿಸಿತು.. ಮುಟ್ಟಿನ ಸ್ರಾವಕ್ಕೆ ತಡೆಯೊಡ್ಡಲು ಅಪರಿಚಿತೆಯಾದ ತಾನು ಬಟ್ಟೆಕೇಳಿದರೆ ಸೊಕ್ಕಿನವಳು ಅನಿಸಿಕೊಂಡೆನೇನೋ ಎನ್ನುತ್ತ ಕೇಳುವಾಗಲೇ ಹಾಳು ಮಸಿ ಅರಿವೆ ಅಥವಾ ಗೋಣಿತಾಟಿಗೆ ಬೇಡಿಕೆಯಿಟ್ಟ ಮಂಗಿ ಮತ್ತು ಅವಳಂತಹ ಹಳ್ಳಿಯ ಸಾವಿರಾರು, ಲಕ್ಷಾಂತರ ಹೆಣ್ಣುಮಕ್ಕಳು ಈಗಲೂ ತಿಂಗಳ ಸ್ರಾವ ಎಂಬುದನ್ನು ಹೆಣ್ಣಿನ ಜನ್ಮಕ್ಕೆ ಅಂಟಿಕೊಂಡ ಶಾಪ ಎಂದುಕೊಳ್ಳುತ್ತ ಅದಕ್ಕೊಂದಿಷ್ಟು ಬಯ್ಯುತ್ತ ಇಂಥಹುದೇ ಯಾವುದಕ್ಕೂ ಉಪಯೋಗಕ್ಕೆ ಬರದ ಹಳೇ ಹೊಲಸು ಬಟ್ಟೆಯನ್ನು ಮುಟ್ಟಿಗಾಗಿ ಉಪಯೋಗಿಸುತ್ತ ಬದುಕು ನವೆಸುತ್ತಿದ್ದಾರೆ…

ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಶಾಲಾ ಶಿಕ್ಷಕರು ಹಳ್ಳಿಗಳಲ್ಲಿ ಬಲವಾಗಿ ಬೇರೂರಿರುವ ಮುಟ್ಟಿನ ಕಾಲದ ಅಸ್ಪೃಶ್ಯತೆಯನ್ನು.. ಸ್ವಚ್ಛತೆಯ ಕುರಿತಾದ ಅವರ ನಿಷ್ಕಾಳಜಿಯನ್ನು ಬುಡಸಮೇತ ಕಿತ್ತುಹಾಕಲು ಹಲವಾರು ಕಾರ್ಯಕ್ರಮಗಳ ಮೂಲಕ ಪ್ರಯತ್ನಿಸುತ್ತಿದ್ದರೂ ಚೂರುಪಾರು ಬಿಟ್ಟರೆ ಅಷ್ಟೇನೂ ಉಪಯೋಗವಾಗುತ್ತಿಲ್ಲ…

ಇದಕ್ಕೆ ಸಂಬಂಧಿಸಿದ ಮೂಢ ಪದ್ಧತಿಗಳನ್ನೂ ಪರಿಪಾಲಿಸುತ್ತ ತಾವು ಮುಟ್ಟಾದಾಗ ಶಾಲೆಗೆ ಬರುವ ಮಗನನ್ನೋ ಮಗಳನ್ನೋ ಶಾಲೆ ತಪ್ಪಿಸಿ ಮನೆಯಲ್ಲಿಟ್ಟುಕೊಂಡು ಅಡುಗೆ ಮಾಡಲು, ಮಾವ, ಗಂಡ ಬಂದಾಗ ಬಡಿಸಲು ಅವರು ಬೇಕು ಎಂದು ಕಾರಣ ಕೊಡುವ ಅವರು “ಮುಟ್ಟು ಮೈಲಿಗೆಯಲ್ಲ ಕಣ್ರೇ” ಎಂಬ ನಮ್ಮ ಮಾತನ್ನು ಗಾಳಿಗೆ ತೂರಿ” ಇದರಂಥ ದೊಡ್ಡ ಕರಾಮತಿ ಮೈಲಿಗೆ ಮತ್ಯಾವುದೂ ಇಲ್ಲ.. ನಿಮ್ಗೆ ಏನ್ ತಿಳೀತದೆ ಎಂಬಂತೆ ಮಾತಾಡುತ್ತಾರೆ.

ಸ್ಯಾನಿಟರಿ ನ್ಯಾಪಕಿನ್ ಅಭಿಯಾನ, ಕಪ್ ನಮ್ದೇ ಅಭಿಯಾನಗಳು ಪೇಸ್ಬುಕ್ಕುಗಳಲ್ಲಿ.. ನೆರೆ ನಿಮಿತ್ತದ ಪರಿಹಾರ ಕೇಂದ್ರಗಳಲ್ಲಿ ನಡೆಯುತ್ತಿರುವಾಗ ಕಣ್ಬಿಟ್ಟಲ್ಲೆಲ್ಲ ಕೆಳಸ್ತರದ ಬದುಕು ರಾಚುವ ನಾನಿರುವ ಊರಿನಲ್ಲಿ ನಾನಿವುಗಳ ಕುರಿತು ನನ್ನ ವಿದ್ಯಾರ್ಥಿಗಳ ತಾಯಂದಿರಿಗೆ ವಿವರಿಸುವಾಗ ಅವರ ಆಕಳಿಕೆ ನನ್ನನ್ನು ಸಪ್ಪೆ ಮಾಡುತ್ತದೆ. “ಸಾಯಲಿ ಬಿಡ್ರಾ.. ಇವೊಂದೂ ಆಗುದಲ್ಲ ಹೋಗುದಲ್ಲ” ಎಂಬ ಅವರ ಒಪ್ಪಿಕೊಳ್ಳದ ನಿರಾಶಾದಾಯಕ ಉತ್ತರಕ್ಕೆ ಕಾರಣಗಳಿವೆ.

ಇನ್ನೂರೋ ಮುನ್ನೂರೋ ದಿನಗೂಲಿ ದುಡಿದು ಬರುವ ಗಂಡ ಹೆಂಡತಿಯ ಕೂಲಿಗಳಲ್ಲಿ ಮನೆಗೆ ದಕ್ಕುವ ಕಾಸು ಹೆಂಡತಿಯದು ಮಾತ್ರ.. ಅವಳದರಲ್ಲಿ ಹೊಟ್ಟೆ ಬಟ್ಟೆ ಮಕ್ಕಳ ಶಿಕ್ಷಣ ಎಲ್ಲವನ್ನೂ ನೋಡಿಕೊಂಡು ತನಗಾಗಿ ಇರುವ ಬೇಡಿಕೆಗಳನ್ನೆಲ್ಲ ಕೆಳಗೆ ಅಮುಕಿ ಮುಂದಕ್ಕೆ ಹಾಕುತ್ತಲೇ ಇರುತ್ತಾಳೆ. ಹಾಗಾಗಿ ಅವಳಿಗೆ ತನ್ನ ಬಟ್ಟೆಯ ಸ್ವಚ್ಚತೆಗಾಗಿ ಪಕ್ಕದ ಗೂಡಂಗಡಿಯಲ್ಲಿ ಕೊಳ್ಳುವ ಎರಡುಗೆರೆಯ ನೊರೆಬರದ ಎರಡೇ ರೂಪಾಯಿಯ ವಡಾ ಸೋಪನ್ನು ಬಿಟ್ಟರೆ ಒಂದು ಉತ್ತಮ ಗುಣಮಟ್ಟದ ಬಟ್ಟೆ ಸೋಪನ್ನಾಗಲಿ ಒಂದು ಪುಟ್ಟ ಡೆಟಾಲ್ ಬಾಟಲಿಯನ್ನಾಗಲಿ ಕೊಳ್ಳಲು ಕೊನೆಗೂ ಸಾಧ್ಯವಾಗುವುದೇ ಇಲ್ಲ. ಮತ್ತವಳಿಗೆ ಆಯ್ಕೆಗಳೂ ಇಲ್ಲ..

ಚಹಾ ಕುದಿದು ನನಗೊಂದಿಷ್ಟು ಮಂಗಿಗೊಂದಿಷ್ಟು ತರುವುದರೊಳಗೆ ಅವಳು ಹೊರಜಗಲಿಯ ಮೂಲೆಗೆ ಬಂದು ಕುಳಿತುಕೊಂಡಿದ್ದಳು.. ಲೋಟ ನೋಡಿದ್ದೇ ” ನೀವು ಪೇಲೆಯಲ್ಲಿ ಚಾ ಕೊಡುದಿದ್ರೆ ನಾನು ಕುಡಿಯೂದಿಲ್ಲ ಮುಟ್ಟಾದವಳು. ಗೆರಟೆ ತನ್ನಿ ಅಂದಳು.. ಹುಚ್ಚಿ!! ಯಾವ ಕಾಲದಲ್ಲಿದ್ದೀಯೇ.? ಈಗೆಂತ ಮುಟ್ಟುಚಿಟ್ಟು? ಅದೆಲ್ಲ ಹಿಂದಾಯ್ತು. ಕುಡಿ ಸುಮ್ಮನೆ ಎಂದರೂ ಕೇಳದೇ.. ನಾವು ದ್ಯಾವ್ರು ದಿಂಡ್ರಿಗೆ ನಡಕಂಬೋರು.. ನಿಮ್ಮದೂ ಮಕ್ಳು ಮರಿ ಇದ್ದ ಮನೆ.. ನೀವ್ ಸುಮ್ನಿರಿ. ನಿಮ್ಗೆ ಅವೆಲ್ಲ ಗೊತ್ತಾಗುದಿಲ್ಲ. ಮುಟ್ಟಿನ ಮೈಲಿಗೆ ಭಾಳ ಕೆಟ್ಟದ್ದು.. ಎನ್ನುತ್ತ ಅದರ ಕುರಿತಾಗಿ ನಂಬಿಕೊಂಡಿರುವ ಮೂಢನಂಬಿಕೆಗಳನ್ನು ಅವಳು ವಿವರಿಸುತ್ತಿರುವಾಗ ಇವಳು ಬಿಲ್ಕುಲ್ ಚಹಾ ಮುಟ್ಟಲಿಕ್ಕಿಲ್ಲ ಎಂದು ತಿಳಿದ ಮೇಲೆ ಇದ್ದುದರಲ್ಲೇ ಕೊಂಚ ನೆಗ್ಗಿದ ಲೋಟಕ್ಕೆ ಚಹಾ ಹಾಕಿ ತಂದು ಕೊಟ್ಟೆ.

ಶಾಲೆ ಮತ್ತು ಹೈಸ್ಕೂಲುಗಳಲ್ಲಿ ಈಗ ನಾಲ್ಕೈದು ವರ್ಷದಿಂದ ಸರ್ಕಾರ ಹೆಣ್ಣು ಮಕ್ಕಳಿಗಾಗಿ ವಿತರಿಸುತ್ತಿರುವ “ಶುಚಿ” ಪ್ಯಾಡುಗಳು ಬರೀ ವಿತರಣೆಯಾಗುತ್ತಿವೆ ಹೊರತು ಒಂದೂ ಬಳಕೆಯಾಗುತ್ತಿಲ್ಲ. ಬಳಸುತ್ತಿದ್ದಾರಾ ಅಂತ ಕೇಳುವವರು ಯಾರೂ ಇಲ್ಲ.. ಒಂದೆರಡು ಸಲ ಕೇಳಿದರೆ ಮಕ್ಕಳೂ ಹೂಂ ಅಂತಾರೆ. ಉಪಾಯದಿಂದ ತಿರಗಾ ಮುರಗಾ ಪ್ರಶ್ನಿಸಿ ಪಾಲಕರನ್ನೂ ಕರೆದು ವಿಚಾರಿಸಿದರೆ ಇರುವ ಸತ್ಯ ಹೊರಬೀಳುತ್ತದೆ. “ಶುಚಿ” ಪ್ಯಾಡುಗಳಲ್ಲಿ ತೀರ ತೆಳು ಮತ್ತು ಬಿಡಿ ಬಿಡಿಯಾಗಿ ಕೂರಿಸಿದ ಹತ್ತಿಯ ಪದರದ ಕಾರಣ ಧರಿಸಿಕೊಂಡ ಹದಿನೈದು ನಿಮಿಷದಲ್ಲಿ ಸ್ರಾವ ಹೊರ ಜಾರಲಾರಂಭಿಸುತ್ತದೆ..

“ಬಟ್ಟೆ ಬಿಡಿ. ಪ್ಯಾಡ್ ಬಳಸಿ” ಎಂಬ ನಮ್ಮ ಒತ್ತಾಯಕ್ಕೆ ಹುಡುಗಿಯರು ಪ್ಯಾಡ್ ಹಾಕಿಕೊಂಡು ಬಂದು ಅದು ಅವರು ಮುಂಜಾನೆ ಪ್ರಾರ್ಥನೆಯ ವೇಳೆಯಲ್ಲಿ ಅಮರವಾಣಿ, ಪೇಪರ್ ಓದುತ್ತಿರುವಾಗಲೇ ಸೋರಿ…. ತೊಟ್ಟಿಕ್ಕಿದ ರಕ್ತವನ್ನು ಮುಚ್ಚಲು ಇವರು ಅದರ ಮೇಲೆ ಪಾದ ಮುಚ್ಚಿ- ಇಷ್ಟೆಲ್ಲ ನಡೆಯುವಾಗ ಶಿಕ್ಷಕರಿಗೆ ತಾವೇ ಶುಚಿತ್ವದ ಕಾರಣಕ್ಕೆ ತೊಡಲು ಒತ್ತಾಯಿಸಿದ ಪ್ಯಾಡ್‌ಗಳು ವಿದ್ಯಾರ್ಥಿನಿಯರ ಈ ಅವಸ್ಥೆಗೆ ಕಾರಣವಾದುದಕ್ಕೆ ಬೇಸರವಾಗುತ್ತದೆ.. ಮತ್ತದೇ ಹಳೆಯ ಬಟ್ಟೆಗೆ ಅವರು ಶಿಫ್ಟ್ ಆಗುವುದನ್ನು ನಾವು ಬೇಡವೆನ್ನಲು ನಮಗೆ ಸಕಾರಣ ದೊರಕುವುದಿಲ್ಲ..

ಮುಟ್ಟಿನ ಸ್ರಾವದ ಪರಿಮಾಣ ಒಬ್ಬರಂತೆ ಇನ್ನೊಬ್ಬರದಿಲ್ಲ. ಒಂದು ದಿನಕ್ಕೆ ಎರಡು ಮೂರು ಟೇಬಲ್ ಚಮಚದಿಂದ ಒಂದು ಲೋಟದವರೆಗೂ ಇದರ ಹರಿವು ಇದೆ. ಹಾಗಾಗಿ ಮುಂಜಾನೆ ಏಳಕ್ಕೆ ಮನೆಬಿಟ್ಟು ಸಂಜೆ ಏಳಕ್ಕೆ ಮನೆ ತಲುಪುವ ಅತಿಸ್ರಾವದ ಮಹಿಳೆಯರಿಗೆ (ಉದ್ಯೋಗಸ್ಥ) ವಿಸ್ಪರ್ ಅಲ್ಟ್ರಾ ನೈಟ್ ಪ್ಯಾಡುಗಳು ಕೂಡ ತಾಸೆರಡು ತಾಸಿನ ಹೊರತು ಪ್ರಯೋಜನಕ್ಕಿಲ್ಲ.. ಕೆಲವೊಂದು ಕಡೆ ಬದಲಾಯಿಸಲು ಸಮಯ ಸಂದರ್ಭ ಸ್ಥಳ ಒದಗಿಬರುವುದಿಲ್ಲ.. ಹಾಗಾಗಿ ಎಲ್ಲ ಬಿಟ್ಟು ಮತ್ತೆ ದಪ್ಪ ಬಟ್ಟೆಗೇ ಮೊರೆ ಹೋಗಬೇಕಾದ, ಸಂಜೆ ಬರುವಾಗ ಈ ಬಟ್ಟೆಗಳ ಕಾರಣದಿಂದಾಗಿ ತರಚಿದ, ಉರಿವ ತೊಡೆಗಳ ಹೊತ್ತು ಬರಬೇಕಾದ ಸಮಸ್ಯೆ ಹತ್ತರಲ್ಲಿ ಏಳು ಹೆಣ್ಣುಗಳಿಗೆ ಇಂದಿಗೂ ಇದೆ. ಆದರೆ ಇತ್ತೀಚೆಗೆ ಬಂದ ಮೆನಸ್ಟ್ರುವೆಲ್ ಕ‍ಪ್‌ಗಳ ಬಳಕೆಯ ಕಡೆ ನಮ್ಮ ಹೆಣ್ಮಕ್ಕಳು ಕೊಂಚ ಮನಸ್ಸು ಮಾಡಿದರೆ ಮತ್ತದನ್ನು ಒಮ್ಮೆ ಐದಾರುನೂರು ವ್ಯಯಿಸಿಕೊಂಡು ಬಿಟ್ಟರೆ ಹತ್ತಾರು ಸಮಸ್ಯೆಗಳಿಗೆ ಅದು ಪರಿಹಾರ. ಮತ್ತು ಆರಾಮದಾಯಕ ಎಂಬುದು ಅತಿಸ್ರಾವದ ಸಮಸ್ಯೆಯಿಂದ ರೋಸಿ ಹೋಗಿರುವ ಹಲವು ಮಹಿಳೆಯರ ಅಭಿಪ್ರಾಯ.

December 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

4 ಪ್ರತಿಕ್ರಿಯೆಗಳು

 1. Kiran Bhat

  ಮಂಗಿ ಯ ಮೂಲಕ ಆ ದಿನಗಳ ನೋವು ಹಂಚಿಕೊಂಡಿದ್ದೀರಿ.
  ಆರ್ದ್ರ ಬರಹ.

  ಪ್ರತಿಕ್ರಿಯೆ
 2. ವಾಸುದೇವ ಶರ್ಮಾ

  ಬಹಳ ಸೂಕ್ತವಾದ ಬರಹ. ಈಗೀಗ ನಮ್ಮ ಸಂಸ್ಥೆಯ ಮುಲಕ ಚಿಕ್ಕಬಳ್ಳಾಪುರದಲ್ಲಿ ಋತು ಚಕ್ರ ಮತ್ತದರ ಪ್ರಾಮುಖ್ಯತೆ, “ಮರುಬಳಕೆ” ಪ್ಯಾಡ್ ಗಳನ್ನು‌ ಕುರಿತು ಪುರುಷ ಶಿಕ್ಷಕರು, ಗಂಡುಹುಡುಗರು, ಸಮುದಾಯದಲ್ಲಿ ಅರಿವು ಕೆಲಸ ನಡೆಸಿದ್ದೇವೆ. ಒಂದು SHG ಯವರು ಮರುಬಳಕೆ ಪ್ಯಾಡ್ ಹೊಲೆಯುವ ಘಟಕ ನಡೆಸಿದ್ದಾರೆ. ಮಾರಾಟ ಕಷ್ಟ! ಮುಖ್ಯವಾಗಿ ಪುರುಷರಲ್ಲಿ ಹುಡುಗರಲ್ಲಿ ಸಂವೇದನೆ ತರುವ ಯತ್ನ ನಡಸಸಿದ್ದೇವೆ. ಈಗಲೂ ಮಂಗಿಯಂತಹ ಪರಿಸ್ಥಿತಿ ಇದೆ ಎನ್ನುವುದು ನಿಜ.

  ಪ್ರತಿಕ್ರಿಯೆ
 3. ಮಾಲತಿ ಮುದಕವಿ

  ಮಂಗಿಗೊಂದು ಮಸಿ ಅರಿವೆ‌… ಎಂಥ ಛಂದದ ವಾಸ್ತವ.. ರೇಣುಕಾ, ಹೆಣ್ಣು ಮನೆಯ ಅಂಗಳದಿಂದ ಮಂಗಳನ ಅಂಗಳಕ್ಕೆ ಜಿಗಿದಿದ್ದಾಳೆ! ಕಿಚನ್ ನಿಂದ ಕೀಬೋರ್ಡ್ ಗೆ ಜಿಗಿದಿದ್ದಾಳೆ ಎಂದು ಹೆಮ್ಮೆ ಪಡುವ ನಾವು ಇನ್ನೂ ಹೆಣ್ಣು ಎಂಥ ಸಂಕಷ್ಟ ದ ಜೀವನ ನಡೆಸುತ್ತಿದ್ದಾಳೆ ಎನ್ನುವುದನ್ನೇ ಗಣನೆಗೆ ತೆಗೆದುಕೊಂಡಿಲ್ಲ… ಕೆನೆಪದರ ಶಕ್ತಿ ಹೊಂದಿದರೆ ಸಾಕೇ?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: