ಮಂಜುಳ ಗೋನಾಳ ಅವರ ಮೊದಲ ಪ್ರಕಟಿತ ಕೃತಿಯಾಗಿರುವ ‘ನುಡಿಯ ನೆರಳು’ ಕೃತಿ ವಿಶ್ಲೇಷಣೆ, ತಾತ್ವಿಕ ಚಿಂತನೆ, ಸಾಹಿತ್ಯ ಕೇಂದ್ರಿತ ಪರಿಶೀಲನಾ ಲೇಖನಗಳಿಂದ ಗಮನ ಸೆಳೆಯುತ್ತದೆ. ತಾವು ಅಧ್ಯಯನ ಮಾಡಿದ ಕೆಲವು ಕೃತಿಗಳನ್ನು ವಿಶ್ಲೇಷಿಸುತ್ತ ತಾತ್ವಿಕತೆಗೆ ಹೊರಳುವ ದೃಷ್ಟಿಕೋನದ ಲೇಖನಗಳು ಲೇಖಕಿಯ ಕಣ್ಣೋಟದ ಫಲವಾಗಿವೆ.

ಬರಗೂರು ರಾಮಚಂದ್ರಪ್ಪ
ಮಂಜುಳ ಗೋನಾಳ ಅವರ ಮೊದಲ ಪ್ರಕಟಿತ ಕೃತಿಯಾಗಿರುವ ‘ನುಡಿಯ ನೆರಳು’ ಕೃತಿ ವಿಶ್ಲೇಷಣೆ, ತಾತ್ವಿಕ ಚಿಂತನೆ, ಸಾಹಿತ್ಯ ಕೇಂದ್ರಿತ ಪರಿಶೀಲನಾ ಲೇಖನಗಳಿಂದ ಗಮನ ಸೆಳೆಯುತ್ತದೆ. ತಾವು ಅಧ್ಯಯನ ಮಾಡಿದ ಕೆಲವು ಕೃತಿಗಳನ್ನು ವಿಶ್ಲೇಷಿಸುತ್ತ ತಾತ್ವಿಕತೆಗೆ ಹೊರಳುವ ದೃಷ್ಟಿಕೋನದ ಲೇಖನಗಳು ಲೇಖಕಿಯ ಕಣ್ಣೋಟದ ಫಲವಾಗಿವೆ.
ಇನ್ನೂ ಕೆಲವು ತಾತ್ವಿಕ ಚಿಂತನೆಗೆ ತೊಡಗುತ್ತ, ಸಾಹಿತ್ಯದ ಆಕರಗಳನ್ನು ಒಳಗೊಂಡು, ಆಳಕ್ಕೆ ಇಳಿದ ಒಳನೋಟವನ್ನು ನೀಡುತ್ತವೆ. ಇದಕ್ಕೆ ನಿದರ್ಶನವಾಗಿ ಬದುಕು: ಪ್ರೀತಿ, ಎಂಬ ಲೇಖನವನ್ನು ಪ್ರಾತಿನಿಧಿಕವಾಗಿ ಪರಿಗಣಿಸಬಹುದು. ಹೊಸ ತಂತ್ರಜ್ಞಾನದ ಫಲವಾದ ಅಂತರ್ಜಾಲದಲ್ಲಿ ಬರುತ್ತಿರುವ ಬರಹಗಳನ್ನು ಸಾಹಿತ್ಯ ಕೇಂದ್ರೀತ ಪರಿಶೀಲನೆಗೆ ಒಡ್ಡುವ ರೀತಿ ಗಮನೀಯವಾಗಿರುವುದನ್ನು ಕಾಣಬಹುದು.
ಯಾವುದೇ ವಿಷಯವನ್ನು ತೆಗೆದುಕೊಂಡರೂ ತಮ್ಮ ಓದಿನ ಫಲಿತಗಳನ್ನು ಹೊಂದಿಸುತ್ತ ಬರಹವನ್ನು ಬೆಳೆಸುವ ಕ್ರಮದಿಂದ ಪ್ರತಿ ಬರಹಕ್ಕೂ ಸಾಹಿತ್ಯ ಕೇಂದ್ರಿತ ಪರಿಶೀಲನಾ ಸ್ವರೂಪವೊಂದು ಲಭ್ಯವಾಗುವುದು, ಮಂಜುಳ ಗೋನಾಳ ಅವರ ರಚನೆಗಳ ವಿಶಿಷ್ಠತೆಯಾಗಿದೆ.
ಯಾವುದೇ ವಿಷಯವನ್ನು ಮೇಲ್ನೋಟದ ವಸ್ತುವಾಗಿಸದೆ, ಒಳಗಿಳಿದು ಹೊರಬಂದು, ಭಾಷಿಕ ರೂಪ ಕೊಡುವ ಮಂಜುಳ ಗೋನಾಳ ಅವರು ಮೊದಲ ಕೃತಿಯಲ್ಲೇ ಬೆಳೆಯುವ ಭರವಸೆ ಮೂಡಿಸಿದ್ದಾರೆ. ಅಧ್ಯಯನ ಶೀಲ ಹಸಿವು ಮತ್ತು ವಿಶ್ಲೇಷಣೆಯ ಒಲವು ಒಂದಾಗಿ ಅನುಸಂಧಾನಿಸುವ ಹಾದಿ ಹಿಡಿದಿರುವ ಮಂಜುಳ ಅವರ ‘ನುಡಿಯ ನೆರಳು’, ಅವರ ‘ಆಕೃತಿ’ಯ ನಿಜರೂಪವಾಗಿದ್ದು, ನೆರಳಿನ ನುಡಿಯಾಗಿ ಓದಿಗೆ ಆಹ್ವಾನಿಸುತ್ತದೆ. ಓದುತ್ತಾ ಹೋದಂತೆ ನುಡಿಯ ನೆರಳಾಗುತ್ತದೆ.

1. ಮರೆಯುವ ಮುನ್ನ
ಸಾರಿ ಕಣೆ ಆಮೇಲೆ ಸಿಗ್ತಿನಿ
ಎಂದು ಫೋನಿಡುವ ಗೆಳೆಯ
ನೆನಪಾಗ ತೊಡಗಿದಾಗ,
ರಂಗೇರಿದ ಸಂಜೆ ಕಾಡ್ಗತ್ತಲು ಕವಿದಂತೆ
ನನ್ನ ಮುಂದೆ ನಿಲ್ಲುತ್ತದೆ.
ಸುಡುಗಾಡು ಸೋನೆ ಮಳೆ ಬರದಿದ್ದರೆ
ಒಪ್ಪವಿತ್ತು.
ಹೀಗೆ ನಿನ್ನೊಲವಿನ ಚಿತ್ರವಿಡಿದು ಮಳೆ
ರಟ್ಟೆ ಹಿಡಿಯುತ್ತಿರಲಿಲ್ಲ.
ಮನಸ್ಸು ನಿನ್ನ ಎಲ್ಲೆಂದರಲ್ಲಿ ಹುಡುಕುತ್ತಿರಲಿಲ್ಲ.
ಆ ಚಂದ್ರ ತಾರ ಬಲಗಳು ನಿನ್ನ ಹುಡುಕಿ
ಹುಡುಕಿ ಕಾಲು ಸೋತು ನಿಂತಿವಿ.
ಪ್ರೀತಿಯ ಸಾಲ ಪಡೆದು
ನಾಪತ್ತೆಯಾಗಿದ್ದಿಯಾ.
ಬಡ್ಡಿ, ಚಕ್ರ ಬಡ್ಡಿ ಕೇಳುವುದಿಲ್ಲ
ಅಸಲು ಪ್ರೀತಿಯ ನೀಡುವ
ಆಸೆಯಿದ್ದರೆ ಮಾತ್ರ ನೀಡು.

ಇಗೋ ನಾವು ಕೂರುತ್ತಿದ್ದ
ಆ ಬಟಾನಿಕಲ್ ಗಾರ್ಡನ್ನಿನ ಕಲ್ಲು
ಬಂಡೆಯೂ ನಿನ್ನೇ ಕಾಯುತ್ತಿದೆ.
ಉಸಿರ ಬಿಗಿ ಹಡಿದು ಕನಸಿನ ದಾರಿಯಲಿ
ಮತ್ತದೇ
ಸಾರಿ ಕೇಳಲಾದರೂ
ಒಮ್ಮೆ ಬಂದು ಬಿಡು.
2. ಹಾಲಕ್ಕಿ ನುಡಿದೈತೆ
ಹಾಲಕ್ಕಿ ನುಡಿಯುವವ ಬಂದಾಗೊಮ್ಮೆ
ಏನೋ ತವಕ.
ಹಾಲ ಕುಡಿಸಿದವಳಿಗೆ ನಂಜಿನ ನೀರು
ಭಲೇ ಭಲೇ ನಿಜ ನುಡಿಯುತ್ತಿರುವ,
ಓಕೋಳಿ ಹಬ್ಬದಾಗ ರಕುತದ
ಬಣ್ಣ ಗಡಿದಾಟಿ ನಿಂತೈತೆ.
ಓ ಭೂತ ಭವಿಷ್ಯ ಎರಡರ ಬಗ್ಗೆಯೂ
ಗೊತ್ತು ಇವನಿಗೆ.
ಬೆತ್ತಲ ಬಸಿರಿಗೆ ಸಾಕ್ಷಿ ಕೇಳುತಾರೆ,
ತಂಗೆಂಬುದು ಬರಿ ತಂಗ್ಯಲ್ಲೋ
ತಾಯ ಬೇರ ನಂಟು
ತಿಳಿದು ನಡೆದರ
ಹರಹರ, ಮೇಲೆ
ಕೆಳಗಾಗುವುದಿಲ್ಲೋ ಲೋಕ.
ಗಂಟುಳ್ಳವಗ ಐ.ಟಿ ರೇಡಿನ ಚಿಂತೆ
ಬಡ ರೈತನಿಗೆ ಸಾಲ ತೀರಿಸಲಾಗದ ಚಿಂತೆ.
ನೆರೆ ಬಂದು ಊರು ಕಾಡದಾರೂ,
ಕೇಳುವವರಿಲ್ಲ ನಿಮ್ಮ ಗೋಳು.
ಹಾಲಕ್ಕಿ ನುಡಿದೈತೆ .
ಹಾಲಕ್ಕಿ ನುಡಿದೈತೆ
ನನಗೇನು ಬೇಡ ಹೊತ್ತು
ಹೊಂಡುದಾಕ ಬಿಸಿ ರೊಟ್ಟಿ ಬದನೇಕಾಯಿ ಚಟ್ನಿ.

ಅವ್ವ ಉಟ್ಟು ಬಿಟ್ಟ ಹಳೆ ಸೀರೆ,
ಅಪ್ಪನ ಸೊಲ್ಲಾಪುರದ ರಗ್ಗು.
ಹಕ್ಕಿ ಕೂಗು ನಿಲ್ಲುವ ಮುನ್ನ
ಅವನೇ ಮಳೆ ನೀರಲಿ ಸಿಕ್ಕ
ಎದ್ದು ಕರೆ ತರುವವರಾರು?
ಅವನ ದನಿ ಮರಳಿ ಕೊಡಿಸುವವರು ಯಾರು?
3. ಮಾಯದ ಗಾಯ
ಹಬ್ಬಿ ನಿಂತಿರುವ ಟೊಂಗೆ ತುಂಬಾ
ಕೀವು ಸೋರುತ್ತಿದೆ. ಥೂ! ನೋಡಲು
ಬಂದವರು, ಚಿವುಟಿ ಚಿವುಟಿ ಹೊಸ ಗಾಯ
ಮಾಡುತ್ತಾರೆ.
ಇವರ ಕತೆ ಇಷ್ಟೆಯಾ
ನೋವಿನಲ್ಲೂ ಖುಷಿ
ನಲಿವಿನಲಿ ದುಃಖ
ಪೂಜೆಯಲಿ ಬೆಂಕಿ
ಮತ್ತೆ ಪ್ರಾರ್ಥನೆ.
ಪ್ರಾಣ ತೆಗೆಯಲು ಸಂಚು
ನೀರು ನೆರಳಿಗೂ
ಸಾವಿನ ಭಯ.
ಹೀಗೆ ಈ ಜನ
ಮರದ ನೋವಿಗೆ ಕುಣಿಕೆ
ಹಾಕುವವರಿಲ್ಲ.
ಮಾಮುಲಿ.

ಕೊಡಲಿಯಿಂದಲಾದರೂ ಕತ್ತರಿಸಿ,
ಹಸಿ ಹಸಿ ಚಕ್ಕೆ
ಮತ್ತದೆ ಹೊಸ ಗಾಯ
ಚಿಗುರು ನೋವಿಗೆ ಕರ್ಚೀಫು ಎಲ್ಲಿ?
4. ಆಜ್ಞೆ ಹೊರಡಿಸುವ ಕೈ
ಅವರು ಕಪ್ಪಾದದ್ದು ಬಣ್ಣದ ಕಾರಣದಿಂದ
ಮನುಷ್ಯತ್ವದ ಕಾರಣದಿಂದ ಅಲ್ಲ
ಹಾಗಾಗಿ ಅವರು ಬದುಕಲು
ಅರ್ಹರು ಎಂಬ ಆಜ್ಞೆ ಹೊರಡಿಸಬೇಕು.
ಭೂಮಿ ನೀರು ಜಾಗ ಯಾರು ಅವಶ್ಯಕ್ಕಿಂತ
ಜಾಸ್ತಿ ಇಟ್ಟುಕೊಂಡಿರುತ್ತಾರೋ?
ಅವರೆಲ್ಲಾ ಇಲ್ಲದವರನ್ನ ಹುಡುಕಿ ಹಂಚಬೇಕು
ಇಲ್ಲವಾದಲ್ಲಿ ಆಸ್ತಿಯೆಲ್ಲಾ ಅನಾಥರ ಪಾಲಿಗೆ ಹೋಗಬೇಕು.
ಹಕ್ಕಿ ಪ್ರಾಣಿಗಳೇ ನ್ಯಾಯ ಹೇಳುವಂತಾಗಬೇಕು.
ಮನುಷ್ಯ ಅದನ್ನು ಕೇಳುವಂತಾಗಬೇಕು.
ಫಿಲ್ಟರ್ ವಾಟರ್ಗಿಂತ ಬೆವರ ಬಸಿದ
ನೀರ ಕುಡಿಯಬೇಕು ಅದು ಅವನ ಬೆವರೇ ಆಗಿರಬೇಕು.
ಅಯ್ಯೋ ಗಂಡೆದೆಯಲ್ಲೂ ಕಷ್ಟಕ್ಕೆ ನೆರವಾಗುವ
ಎದೆ ಹಾಲ ಬಸಿಯಬೇಕು, ಕರುಳು ಕೊರಿಯಬೇಕು.
ಈ ಸಿದ್ದಾಂತಗಳ ಕಟ್ಟು ನಿಟ್ಟಾಗಿ ಪಾಲಿಸಲೇಬೇಕು.
ಒಳ್ಳೆಯ ಧರ್ಮ ಗ್ರಂಥ
ಒಳ್ಳೆಯ ನೀತಿ ಪಾಠ
ಮಾಡಿದ್ದು, ಬರೆಸಿಕೊಂಡಿದ್ದು ಹೆಣ್ಣಾದರೂ
ಬರೆದದ್ದರ ಕಾರಣಕ್ಕೆ ರೂವಾರಿತನ
ನಮ್ಮದೆಂದು ಎದೆ ಸೆಟೆದು ಬೀಗುವವರು
ತಲೆ ತಗ್ಗಿಸಿ ಗೌರವದಿಂದ
ಇತಿಹಾಸದಲಿ ಮಹಿಳೆಯರಿಗೂ
ಮಕ್ಕಳಿಗೂ ಜಾಗ ಕೊಡಬೇಕು
ಅದು ಸಮತೆಯಲಿರಬೇಕು.
ಈ ಆಜ್ಞೆ ಮನೆ ಮುಂದಿನ ಎಳೆಹುಲ್ಲು,
ಹೊಲದಲ್ಲಿನ ಬಸವನ ಹುಳು,ಎರೆಹುಳುವಿನ
ಮಧ್ಯದಲ್ಲೆ ರಚನೆಯಾಗಬೇಕು ಜಾರಿ ಬರಬೇಕು.
5. ಅವನ ಇತಿಹಾಸ
ದುಃಖ ಬಿಕ್ಕಳಿಸಿ ಬರುತ್ತಿದೆ
ಅವ ಬಡಿದ ಬಾರಿ
ಮೊಳೆಯ ಗಾಯದಿಂದ,

ರಕ್ತ ಸೋರುತಿದೆ, ಕಣ್ಣ ಮೇಲೆ
ಹಾಗೆ, ದೃಷ್ಟಿ ಮೇಲೆಯೂ
ಹಾಗಾಗಿ ಕಂಡ ದೃಶ್ಯಗಳಲ್ಲೆಲ್ಲಾ
ಅವನದ್ದೇ ಇತಿಹಾಸ.
ಇತಿಹಾಸ ಎಂದ ತಕ್ಷಣ
ಕ್ರೌರ್ಯಕ್ಕೆ ಬಲಿಯಾದವರ
ಸೊಂಕು ಇಂದಿಗೂ ತಗಲುತ್ತಲೇ ಇದೆ.
ಅಂದು ಕಣ್ಣಿನ ದೃಷ್ಟಿ
ಅವನ ನೋಡಬಾರದೆಂದವಳು
ಇಂದು ಹೃದಯದ ಬಡಿತ
ಕೇಳಬಾರದೆಂದು ಕಿವಿಗೆ ಚಿಲಕ
ಜಡೆದುಕೊಳ್ಳುತ್ತಿದ್ದಾಳೆ;
ಚೀಲಕ ಜಾರುತ್ತಲೇ ಇದೆ
ಅವಳು ಕೂಡಾ ಜಾರುತ್ತಲೇ ಇದ್ದಾಳೆ.
6. ಮುತ್ತುಗದ ಹೂವು
ಅವಳೊಂದು ಕಣ್ಣು ಕುಕ್ಕಿಸುವ
ಬಣ್ಣದ ಗಿಡುಗ
ಒರಟು ತನದ ಮೈ ಆದರೂ
ಬಗೆದು ತಗೆದರೆ ಗರ್ಭದಾಳದ ಸತ್ಯ
ಸುಗಂಧ ದ್ರವ್ಯಕ್ಕೆ ಹೂವಿನ ಕಂಪು ಅಂದರು.
ಛೇ ಅಪ್ಪಟ ಮೋಸ ಕೃತಕ ವಾಸನೆ
ಅವಳೊಂದು ನೀರವ ರಾತ್ರಿಯ
ನಿರ್ಲಜ್ಜೆಯ ಕತ್ತಲು.
ಪ್ರಪಂಚವೇ ಶರಣಾಗಿ ಬಿದ್ದಿದೆ.

ತೃಷೆ ತೀರಿದ ಮೇಲೆ ಅವಳ
ಚರ್ಮ ಹಸಿರು ಗಟ್ಟಿದ ಪಾಚಿ.
ಅವಳ ಧ್ವನಿ ಅವನ ಉದಾರತೆಯ ಬದುಕು
ಬಯಕೆ ಚಂಚಲ ದಾರಿ.
ಕತ್ತಲ ನೀರಾಳತೆಗೂ ಅನಂತ ದಾಹ
ಹಾಗೆ ಅನಂತ ನೋವು .
ಅವಳಿಗೆ ಬದುಕು ಆಯ್ಕೆಯೇ
ಹೊರತು ಒಪ್ಪಿಗೆ ಅಲ್ಲ.
ಸೂತಕದ ಕತೆ
ದಿನಪತ್ರಿಕೆ ತುಂಬ ಸೂತಕದ ಸುದ್ಧಿ
ಹೊತ್ತಿಲ್ಲದ ಹೊತ್ತಲ್ಲಿ ಲೋಚಗುಟ್ಟುವ
ಹಲ್ಲಿ ಅಪಶಕುನ.
ನರಳುತ್ತಿವೆ ನೋವುಗಳು ಅವನ
ಪಾದದಡಿಯಲಿ ಸಿಲುಕಿ
ಭಾವನೆಗಳೆಲ್ಲಾ ಮೂಲೆಗುಂಪಾಗಿ
ಅವನ ತೆಕ್ಕೆಯಲೆ ಕೂತಿವೆ.
ಸುತ್ತ ಗಸ್ತು ತಿರುಗುವವು ಸೈತಾನಿ ಹೃದಯಗಳೇ.
ಯಮಗಳಿಗೆಯಲಿ ನರಕವಾಗುತ್ತಿವೆ ನಗರಗಳು
ಮುಪ್ಪಿನ ಮುದಿ ಮರದಲ್ಲೂ ವಿಕೃತ ವಾಸನೆ.
ಕುಡಿಯೊಡೆದ ಮೊಗ್ಗುಗಳ ಆತ್ಯಾಚಾರ
ಅಬ್ಬಾ! ಬಾಲ್ಯ ಕರಗುವ ಮುನ್ನ ಬಸುರಿಯಾಗುತ್ತಾಳೆ ಬಾಲೆ.
ಕ್ರೂರತ್ವಕ್ಕೆ ಸಾಕ್ಷಿ,ಈ ಬಿಕ್ಕಳಿಕೆಯ ಬದುಕು.
ಪತಂಗದ ರೆಕ್ಕೆ
ಮೊದಲು ಮಾಗಿದ ಬಾಗಿದ ಹಣ್ಣು
ಸಿಹಿಯಾಗಿಯೇ ಇರಬೇಕೆಂದೆನು ಇಲ್ಲ
ಅದು ಹುಳಿಯಲ್ಲಿ ಹುಳಿಯಾಗಿ ಒಂದಿಷ್ಟು,ಸಿಹಿ ಕಹಿ ಮಿಶ್ರಿತ
ಎಷ್ಟೇ ತಾಜಾತನ ಎಂದುಕೊಂಡರು
ಕೆಲವೊಮ್ಮೆ ಮುರುಟುತ್ತವೆ, ಕೊಳೆಯುತ್ತವೆ.
ಎಳೆತನದರಲ್ಲಿ ನಾಜೂಕು.
ಪತಂಗದ ರೆಕ್ಕೆಯಂತೆ.
ಪ್ರೀತಿಸುವ ಗುಣವಿರುವ ಆ ಹಣ್ಣಿಗೆ ಬಹಿಷ್ಕಾರ
ಮೇಡ್ ಇನ್ ಇಂಡಿಯಾ ಎಫೆಕ್ಟ್.
ಆ ಹಣ್ಣು ತಿಂದರೆ ಧರ್ಮಭ್ರಷ್ಟ
ಈ ಹಣ್ಣು ತಿಂದರೆ ಧರ್ಮಾತೀತ.
ಪಾಪ ಹಣ್ಣುಗಳು
ಕಂಡಷ್ಟು ಖುಷಿ ಕೊಡುವ ಇವಕ್ಕೆ
ದ್ವೇಷಿಸಲು ಬರುವುದಿಲ್ಲ.
ಬಹಿಷ್ಕಾರವಾದ ಹಣ್ಣು ಎಂದು ಚಿತ್ರಿತವಾದಾಗ
ಅದರ ಅಳು ನನ್ನ ಅಣಕಿಸುತ್ತಿತ್ತು.
ಹಣ್ಣಿನ ಧರ್ಮವನ್ನು ಮರೆಸುವ ಹುನ್ನಾರ
ಬಹುತ್ವದ ನೆಲೆಯಂತೆ ಎಂದು ಅಣಕಿಸಿದಂತಾಯ್ತು.
0 ಪ್ರತಿಕ್ರಿಯೆಗಳು