ಮಕ್ಕಳ ಹಕ್ಕುಗಳ ಜಾರಿಯಲ್ಲಿ ನವಗ್ರಹಗಳು!

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

|ಕಳೆದ ಸಂಚಿಕೆಯಿಂದ|

ಏನೂ ಅಚ್ಚರಿ ಪಡಬೇಡಿ. ಮಕ್ಕಳ ಹೆಸರಿನಲ್ಲಿ ನಿಮಗೆ ಯಾವುದೇ ನವಗ್ರಹ ಹೋಮ, ದಾನ ಧರ್ಮದ ಬಗ್ಗೆ ಹೇಳಲು ಹೋಗುವುದಿಲ್ಲ. ಆದರೆ ಈ ನವಗ್ರಹಗಳು (!) ನಮ್ಮ ಮಕ್ಕಳಿಗೆ ಅದೆಷ್ಟು ಮುಖ್ಯ ಅಂತ ಹೇಳುವ ಪ್ರಯತ್ನದಲ್ಲಿದ್ದೇನೆ.

ಆಗ ನಾನು ಸಮಾಜಕಾರ್ಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿ. ನನ್ನ ಮೇಷ್ಟ್ರು ಪ್ರೊ.ಎಚ್.‌ ಎಂ. ಮರುಳಸಿದ್ದಯ್ಯನವರು ಅವರ ತವರೂರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇಕುಂಬಳಗುಂಟೆಯಲ್ಲಿ ಅವರು ಶುರು ಮಾಡಿದ್ದ ʼಸ್ವಸ್ತಿʼ ಸಂ‍ಸ್ಥೆಯಲ್ಲಿ ಕ್ಷೇತ್ರಕಾರ್ಯ ಮಾಡಲು ೧೯೮೯ರಲ್ಲಿ ನನ್ನನ್ನು ಅಟ್ಟಿಬಿಟ್ಟರು! ನಾನು ಅರ್ಧ ಮನಸ್ಸಿನಲ್ಲೇ ಅಲ್ಲಿಗೆ ಹೋದೆ. ಎರೆಡು ಮೂರು ದಿನಗಳಲ್ಲೇ ಹಳ್ಳಿಯ ಸಮುದಾಯದಲ್ಲಿ ಬೆರೆತು ಹೋದೆ.

ಆ ದಿನಗಳಲ್ಲಿ ನನ್ನನ್ನ ತಮ್ಮ ಸಮುದಾಯದೊಳಗೆ ಹುದುಗಿಸಿಕೊಂಡ ಬಸಪ್ಪ, ಸರ್ವೇಶ, ಕಣ್ಣಿ, ಕೊಟ್ರೇಶ ಮೊದಲಾದವರ ಬಗ್ಗೆ ಮತ್ತೊಮ್ಮೆ ಬರೆಯುವೆ. ಆ ಹಳ್ಳಿಯಲ್ಲಿ ನಾನು ಕೇಳಿ ಕಂಡು ಅನುಭವಿಸಿದ ನವಗ್ರಹಗಳನ್ನು ಮಾತ್ರ ಮತ್ತೆ ಮತ್ತೆ ನೆನೆಯುತ್ತಲೇ ಇರುತ್ತೇನೆ, ಬರೆಯುತ್ತಲೇ ಇರುತ್ತೇನೆ.

ಮುಖ್ಯ ದೇವರುಗಳ ಪಕ್ಕಕ್ಕೆ ಕಟ್ಟೆ ಮೇಲೆ ನಿಲ್ಲಿಸಿರುವ ನವಗ್ರಹಗಳು ದೇವಸ್ಥಾನಗಳಿಗೆ ಹೋಗಿ ಬರುವವರಿಗೆಲ್ಲಾ ಚೆನ್ನಾಗಿ ಪರಿಚಯವಿರುತ್ತದೆ. ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಅಂತ ಹೆಸರಿಸುತ್ತೀರಿ. ನವಗ್ರಹಗಳನ್ನು ನಿಲ್ಲಿಸಿರುವಲ್ಲಿ ವಿಶಿಷ್ಟವಾದ ಒಂದು ಲಕ್ಷಣ ಕಣ್ಣಿಗೆ ಬಿದ್ದಿರುತ್ತದೆ. ಒಂಭತ್ತೂ ಗ್ರಹಗಳ ಮನುಷ್ಯ ರೂಪಿ ವಿಗ್ರಹಗಳು ಯಾವುವೂ ಒಂದರ ಮುಖ ಇನ್ನೊಂದು ನೋಡುವುದಿಲ್ಲ ಗಮನಿಸಿರುತ್ತೀರ.

ಯಾಕೋ ಗೊತ್ತಿಲ್ಲ. ಆಗಮ ಶಾಸ್ತ್ರದ ಪ್ರಕಾರ ಯಾವುದಾದರೂ ಎರಡು ಗ್ರಹಗಳು ಒಬ್ಬರನ್ನೊಬ್ಬರು ನೋಡಿದ್ದೇ ಆದಲ್ಲಿ ಅವುಗಳು ಜಗತ್ತಿನ ಮೇಲೆ ಬೀರುವ ಶಕ್ತಿ ಕುಂದಿಹೋಗುತ್ತದಂತೆ. ಇನ್ನೊಂದೆಡೆ ಯಾರೋ ಬರೆದಿದ್ದರು. ಅವೇನಾದರೂ ಒಂದು ಸಾಲಿನಲ್ಲಿ ಬಂದರೆ ಅಥವಾ ಒಬ್ಬರನ್ನೊಬ್ಬರು ನೋಡಿದರೆ ʼಪ್ರಳಯವಾಗಿ ಬಿಡುತ್ತದೆ!ʼ ಇನ್ನೊಂದು ಮಾತಿನಂತೆ ಈ ಎಲ್ಲವೂ ಎಲ್ಲ ದಿಕ್ಕುಗಳಿಂದ ಯಾವುದಾದರೂ ದುಷ್ಟ ಶಕ್ತಿಗಳು ಬಂದರೆ ಅವನ್ನು ಎದುರಿಸಲು ಸಜ್ಜಾಗಿ ನಿಂತಿರುವುದಂತೆ.

ಆಗತ್ತೋ ಬಿಡುತ್ತೋ ಗೊತ್ತಿಲ್ಲ. ನನಗೆ ಇದೊಂದು ಸೋಜಿಗ. ಸದಾ. ಈಗಲೂ.

ಅಂತಹ ನವಗ್ರಹಗಳ ಕೂಟ ಆಗುವುದು ಅಥವಾ ಆಗದಿರುವುದು ನಮ್ಮ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲೂ ಬಹಳ ಪ್ರಭಾವಿ.  ೧೯೮೯ರಲ್ಲಿ ನನಗೆ ಎದುರಾದ ದೊಡ್ಡದೊಂದು ಪ್ರಶ್ನೆ, ಹಳ್ಳಿಗೆ ಬೇರೆ ಬೇರೆ ಅಧಿಕಾರಿಗಳು ಬರುತ್ತಿದ್ದರು. ತಮ್ಮ ತಮ್ಮ ಭೇಟಿ, ತಪಾಸಣೆ ಮುಗಿಸಿ ಹೊರಟು ಹೋಗುತ್ತಿದ್ದರು. ಅಂಗನವಾಡಿಯವರು ಶಾಲೆಯ ಕಡೆ ಹೋಗರು. ಶಾಲೆಯ ಅಧಿಕಾರಿಗಳು ಆರೋಗ್ಯ ಕೇಂದ್ರ ನೋಡರು.

ಆರೋಗ್ಯ ಅಧಿಕಾರಿ ಬಂದು ಹೋದರೋ ಇಲ್ಲವೋ ಎಂದು ಬೇರೆಯವರಿಗೆ ತಿಳಿಯದು. ಪ್ರತಿಯೊಬ್ಬರಿಗೂ ಅವರವರದೇ ಆದ ಕೆಲಸದ ಚೌಕಟ್ಟು. ನಾನು ಹಿರೇಕುಂಬಳಗುಂಟೆ ಹಳ್ಳಿಗೆ ಹೊರಗಿನವ. ಹಾಗಿರಲಿ ಹಳ್ಳಿಯ ವಾತಾವರಣಕ್ಕೇ ಹೊಸಬ. ಈಗ ಬಲವಂತವಾಗಿ ತಿಂಗಳೊಪ್ಪತ್ತು ಇರಲೇಬೇಕಿತ್ತು. ನನಗೆ ಹಳ್ಳಿಯಲ್ಲಿ ಕಾಣುವುದೆಲ್ಲಾ ಹೊಸತು ಅಥವಾ ಪ್ರಶ್ನೆಗಳು.

ಕ್ಷೇತ್ರಕಾರ್ಯಕ್ಕೆ ಹೋಗಿದ್ದ ನಾನು ಮಕ್ಕಳ ಆರೋಗ್ಯ, ಪೌಷ್ಟಿಕಾಂಶ ಮಟ್ಟ ಮತ್ತು ಮಕ್ಕಳ ಶಾಲೆಯಲ್ಲಿನ ಕೆಲವು ಅವ್ಯವಸ್ಥೆ, ಮಕ್ಕಳು ಶಾಲೆಯಿಂದ ಹೊರಗಿರುವುದು, ಕೆಲಸಕ್ಕೆ ಹೋಗುವುದು ಹೀಗೆ ಈ ಎಲ್ಲವನ್ನೂ ಸೇರಿಸಿ ಬಳ್ಳಾರಿಯ ಮುಖ್ಯಾಧಿಕಾರಿಯೊಬ್ಬರಿಗೆ ಒಂದು ಪತ್ರವೆಂಬ ದೂರು ಬರೆದು ಅವರ ಗಮನ ಸೆಳೆದೆ. ಆಶ್ಚರ್ಯವೆಂಬಂತೆ ನಾಲ್ಕೈದು ದಿನಗಳಲ್ಲಿ ವಿವಿಧ ಇಲಾಖೆಗಳಿಂದ ಅಧಿಕಾರಿಗಳು ಬಂದು ತಮ್ಮ ತಮ್ಮ ಭೇಟಿ / ತನಿಖೆ ಮಾಡಿ ಹೋದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಒಂದು ದಿನ ಬಂದರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತೊಂದು ದಿನ.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಪೊಲೀಸರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ಮತ್ತು ಇನ್ನೂ ವಿವಿಧ ಇಲಾಖೆಗಳ ಅಧಿಕಾರಿಗಳು (ನನಗಾಗ ಇಷ್ಟು ಹೆಸರುಗಳು ಕೂಡಾ ತಿಳಿದಿರಲಿಲ್ಲ) ಹಳ್ಳಿಗೆ ಬಂದೂ ಬಂದು ಹೋದರು. ಅದೇ ಹೇಳಿದೆನಲ್ಲಾ ಅವರೆಲ್ಲರೂ ಅವರವರಿಗೆ ಸಂಬಂಧಿಸಿದ ಕೇಂದ್ರಗಳಿಗೆ ಭೇಟಿ ಕೊಟ್ಟು ಕೆಲ ನಿಮಿಷಗಳಲ್ಲೇ ಹೊರಟು ಹೋಗುತ್ತಿದ್ದರು. ಅವರು ಬಂದರು ಹೋದರು ಎಂಬುದಕ್ಕೆ ಸಾಕ್ಷಿ ಅವರ ವಾಹನಗಳು ಬಂದಾಗ ಹೋದಾಗ ಎಬ್ಬಿಸಿದ ಧೂಳು!

ಹಳ್ಳಿಯ ಕೆಲವರೊಂದಿಗೆ ಮಾತನಾಡಿದೆ. ಅವರು ಬರುತ್ತಾರಲ್ಲಾ ಸಮುದಾಯದವರೊಡನೆ ಭೇಟಿ ಆಗುತ್ತಾರೇನು, ಏನಾದರೂ ಮಾತನಾಡುತ್ತಾರಾ? ಊರ ಹಿರಿಯರೊಬ್ಬರು ಹೇಳಿದ್ದು ಅವತ್ತಿನ ದಿನಕ್ಕೆ ನನಗೊಂದು ದೊಡ್ಡ ತಮಾಷೆಯಾಗಿ ಕೇಳಿಸಿತ್ತು. ʼಯಾವ ದೇವ್ರು ಯಾವಾಗ ಬಂದು ಅದೇನ್ಮಾಡಿ ಹೋಗ್ತಾರೋ ಯಾರಿಗ್ಗೊತ್ತು. ಒಳ್ಳೇ ಗ್ರಹಗೋಳು. ಯಾವತ್ತೂ ಎರಡು ಗ್ರಹ ಸೇರೋದಿಲ್ಲ. ನಮ್ಮನ್ನ ನೋಡಲ್ಲ!ʼ

ಎಷ್ಟೋ ದಿನಗಳು ಈ ʼಗ್ರಹʼಗಳ ಬಗ್ಗೆ ಯೋಚಿಸ್ತಿದ್ದೆ. ಮಕ್ಕಳ ಹಕ್ಕುಗಳ ವಿಚಾರದಲ್ಲಿ ಕೆಲಸ ಆರಂಭಿಸಿದವನಿಗೆ ಈ ʼಗ್ರಹʼಗಳು ನಿಧಾನವಾಗಿ ದರ್ಶನ ಕೊಡಲಾರಂಭಿಸಿದವು. ನಿಜವಾಗಿಯೂ.  ಎಲ್ಲ ಸಮುದಾಯಗಳಲ್ಲೂ ಮಕ್ಕಳಿಗೆ ಸಂಬಂಧಿಸಿದ ವಿವಿಧ ಕೆಲಸಗಳು-ಆರೋಗ್ಯ, ಶಿಕ್ಷಣ, ಅಭಿವೃದ್ಧಿ, ರಕ್ಷಣೆ ಹೀಗೆ ಬೇರೆ ಬೇರೆ ಕೆಲಸಗಳಿಗೆ ಬೇರೆ ಬೇರೆ ವ್ಯವಸ್ಥೆಗಳು, ಇಲಾಖೆಗಳು, ಕಾರ್ಯಕರ್ತರು, ಅಧಿಕಾರಿಗಳು ನೇಮಕವಾಗಿರುತ್ತಾರೆ.

ಮಕ್ಕಳ ಹಕ್ಕುಗಳ ಒಡಂಬಡಿಕೆಯ ೪ನೇ ಪರಿಚ್ಛೇದ ʼಮಕ್ಕಳ ಹಕ್ಕುಗಳ ಜಾರಿಗೆ ಕ್ರಮಗಳುʼ ಎನ್ನುವುದರಲ್ಲಿ ಹೇಳುವುದು, ಸರ್ಕಾರಗಳು ಆಯಾ ದೇಶದಲ್ಲಿ ಸೂಕ್ತವಾದ ಶಾಸನಾತ್ಮಕ ಹಾಗೂ ಆಡಳಿತಾತ್ಮಕ ಏರ್ಪಾಡುಗಳನ್ನು ಮಾಡಬೇಕು. ಈಗಾಗಲೇ ಇರುವ ವ್ಯವಸ್ಥೆಗಳಲ್ಲಿ ಸೂಕ್ತ ಬದಲಾವಣೆಗಳನ್ನು ತಂದು ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಜಾರಿಗೆ ವ್ಯವಸ್ಥೆಗಳನ್ನು ಮಾಡಬೇಕು. ಆರೋಗ್ಯ, ರಕ್ಷಣೆ, ಅಭಿವೃದ್ಧಿ ಮತ್ತು ಮಕ್ಕಳ ಭಾಗವಹಿಸುವಿಕೆಗೆ ಅವಕಾಶಗಳನ್ನು ಮಾಡಿಕೊಡಬೇಕು. ಭಾರತದಲ್ಲಿ ಅಂತಹ ವ್ಯವಸ್ಥೆಗಳು ಇವೆ. ಆದರೆ ಸಮರ್ಪಕವಾಗಿವೆಯೇ ಎನ್ನುವುದು ಕೇಳಬೇಕಾದ ಪ್ರಶ್ನೆ ಮತ್ತು ಮಾಡಬೇಕಾದ ವಿಶ್ಲೇಷಣೆ.

ಆರೋಗ್ಯ ಕೇಂದ್ರಗಳು ಮತ್ತು ಅಲ್ಲಿ ಆರೋಗ್ಯ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ ಮತ್ತು ವೈದ್ಯರು, ಆ ಕೇಂದ್ರಕ್ಕೊಂದು ಸಲಹಾ ಸಮಿತಿ; ಅಂಗನವಾಡಿಗಳು ಅಲ್ಲಿ ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ ಮತ್ತು ಅಲ್ಲಿಗೆ ಬರುವ ಮೇಲ್ವಿಚಾರಕಿ, ಆ ಅಂಗನವಾಡಿಗೊಂದು ಬಾಲವಿಕಾಸ ಸಮಿತಿ; ಶಾಲೆಗಳು ಮತ್ತು ಅಲ್ಲಿನ ಶಿಕ್ಷಕ ವರ್ಗ ಹಾಗೂ ಭೇಟಿಗೆ ಬರುವ ಸಿ.ಆರ್.ಪಿ. ಮತ್ತು ಬಿ.ಆರ್.ಪಿ. ಇತ್ಯಾದಿಗಳು; ಶಾಲೆಗೊಂದು ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ; ಪಂಚಾಯಿತಿ ಗ್ರಂಥಾಲಯಗಳು; ಹಳ್ಳಿಗೆ ಕಾಲಕಾಲಕ್ಕೆ ಭೇಟಿಗೆ ಬಂದು ಹೋಗುವ ಪೊಲೀಸ್‌ ಪ್ರತಿನಿಧಿಗಳು; ಪಡಿತರ ವಿತರಣೆಗಾಗಿ ನ್ಯಾಯಬೆಲೆ ಅಂಗಡಿಗಳು ಮತ್ತು ಅವುಗಳಿಗೆ ಉಸ್ತುವಾರಿ ಮತ್ತು ಸಲಹಾ ಸಮಿತಿ, ಇಷ್ಟರ ಮೇಲೆ ಹಳ್ಳಿ ಹಳ್ಳಿಗಳಲ್ಲಿರುವ  ಸ್ವಯಂಸೇವಾ ಸಂಘಟನೆಗಳು, ಯುವಕ ಯುವತಿ ಸಂಘಗಳು, ರೈತ ಸಂಘ, ಮತ್ತಿತರ ಜನ ಸಂಘಟನೆಗಳು ಇತ್ಯಾದಿ. ಇವೇ ನೋಡಿ, ಮುಖ್ಯವಾಗಿ ಮಕ್ಕಳ ವಿಚಾರಗಳನ್ನು ಕುರಿತು ಕೆಲಸ ಮಾಡಬೇಕಾದ ಒಂದೂ, ಎರಡು, ಮೂರು… ಒಂಭತ್ತು, ಹತ್ತು, ಇನ್ನೂ ಹೆಚ್ಚಿನ ಗ್ರಹಗಳು. 

ಹಳ್ಳಿಗೆ ಬರುತ್ತಿದ್ದ ಅಧಿಕಾರಿಗಳು ಮಧ್ಯಾಹ್ನಕ್ಕೆ ಸ್ವಲ್ಪ ಮೊದಲು ಬಂದು ಹೊರಟು ಹೋಗುತ್ತಿದ್ದರು. ಆಗ ಬಹುತೇಕ ಹಳ್ಳಿಯ ಜನ ತಮ್ಮ ಹೊಲ ಗದ್ದೆ ತೋಟಗಳಲ್ಲಿ ಕೆಲಸಗಳಲ್ಲಿರುತ್ತಿದ್ದರು. ಇಲ್ಲವೇ ತಮ್ಮ ಕುರಿ, ಹಸು, ಎಮ್ಮೆ ಮೇಯಿಸಲಿಕ್ಕೆ ಬಯಲು, ಬೆಟ್ಟ ಎಂದು ಹೊರಗಿರುತ್ತಿದ್ದರು. ಯಾರೋ ಕೆಲವರು ಮುದುಕರು ಅಥವಾ ಅಂಗಡಿಗಳನ್ನು ತೆರೆದಿಟ್ಟುಕೊಂಡಿರುವವರು ಇರಬಹುದಷ್ಟೆ.

ಸಮುದಾಯದ ನಿಜವಾದ ಜನ ಇಲ್ಲದಾಗ ಈ ಅಧಿಕಾರಿಗಳು ಬಂದು ಹೋಗುವುದೇಕೆ. ಜನ ಸಂಪರ್ಕ ಮಾಡುವುದಾದರೂ ಹೇಗೆ? ನಾನು ಕೊಟ್ಟ ದೂರನ್ನು ಕುರಿತು ಇವರು ತನಿಖೆ ಮಾಡಬೇಕೆಂದರೆ ಸಮುದಾಯದ ಜೊತೆ ಮಾತನಾಡಬೇಕಲ್ಲವೆ, ಕನಿಷ್ಠ ದೂರು ಕೊಟ್ಟವರಾರು ಎಂದು ಕೇಳಲೂ ಬಾರದೆ.

ನಾನು ಅದೇ ಹಳ್ಳಿಯಲ್ಲಿ ಇದ್ದುದರಿಂದ ಮತ್ತು ಅಲ್ಲಿನ ಸ್ವಯಂಸೇವಾ ಸಂಘಟನೆ, ʼಸ್ವಸ್ತಿʼಯ ಕೆಲಸಗಳಲ್ಲಿ ಬೆರೆತಿದ್ದರಿಂದ  ನಮ್ಮ ಎಲ್ಲ ಜನಸಮುದಾಯಗಳ ಸಭೆಗಳು ಆಗುತ್ತಿದ್ದು ಸಂಜೆಯ ಮೇಲೆ. ಹಗಲುಗಳಲ್ಲಿ ನಾನು ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ, ಪಂಚಾಯತಿ ಕಚೇರಿ, ಪಡಿತರ ವಿತರಣೆ ಅಂಗಡಿ ಎಂದು ಓಡಾಡಿಕೊಂಡಿದ್ದೆ. ಇಷ್ಟಾದರೂ ನಾನಲ್ಲಿದ್ದಾಗಲೂ ಯಾವುದೇ ಅಧಿಕಾರಿ ನೀನ್ಯಾವ ಊರಿನವನು, ಇಲ್ಲಿ ಏನು ಮಾಡುತ್ತಿದ್ದೀಯಾ, ಯಾವ ದೂರಿನ ಮೇಲೆ ತಾವು ಬಂದದ್ದು ಒಂದೂ ಮಾತನಾಡಿರಲಿಲ್ಲ.

ನನ್ನನ್ನು ತುಂಬಾ ಬಾಧಿಸಿದ್ದು, ಈ ಎಲ್ಲರೂ ಒಬ್ಬೊಬ್ಬರೇ ಒಂದೊಂದು ದಿನ ಬಂದರು ಅಥವಾ ಒಂದೇ ದಿನ ಎರಡು ಮೂರು ಅಧಿಕಾರಿಗಳು ಬಂದು ಹೋದರು. ಎಲ್ಲರೂ ಅವರವರ ವಾಹನಗಳಲ್ಲಿ ಬಂದರು, ಹೋದರು. ಈ ಎಲ್ಲರೂ ಒಟ್ಟಿಗೆ ಬಂದಿದ್ದರೆ ತನಿಖೆ, ಮಾಹಿತಿ ಸಂಗ್ರಹ ಮಾಡಿಕೊಂಡು, ಒಟ್ಟಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದು ಹೋಗಬಹುದಿತ್ತಲ್ಲಾ, ಖರ್ಚು ಕಡಿಮೆಯಾಗುತ್ತಿತ್ತು, ಪ್ರಕರಣದ ಸಮಗ್ರ ಚಿತ್ರಣ ಸಿಗುತ್ತಿತ್ತು. ದೂರಿನ ಮೇಲೆ ಮಾಡಿದ ವಿಚಾರಣೆಗೆ ನ್ಯಾಯ ದೊರಕುತ್ತಿತ್ತು. ಪರಿಹಾರೋಪಾಯವನ್ನೂ ಒಟ್ಟಿಗೆ ಮಾಡಬಹುದಿತ್ತು ಎನ್ನುವುದು ನನ್ನ ಆಗಿನ ಚಿಂತನೆಯಾಗಿತ್ತು.  

೨೦೦೩ರಲ್ಲಿ ಯುನಿಸೆಫ್‌ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರದ ಪರವಾಗಿ ʼಕರ್ನಾಟಕ ರಾಜ್ಯ ಮಕ್ಕಳ ಕ್ರಿಯಾ ಯೋಜನೆ ೨೦೦೩-೧೦ʼ ರಚಿಸಲು ನನಗೆ ಆಹ್ವಾನ ಸಿಕ್ಕಿತು. ಯುನಿಸೆಫ್‌ನ ಸಮಾಲೋಚಕನಾಗಿ ರಾಜ್ಯದ ಮಕ್ಕಳ ಅಂದಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಂದಿನ ಹತ್ತು ವರ್ಷಗಳಿಗಾಗಿ ಎಂತಹ ಕಲ್ಪನೆಗಳನ್ನು ಮಾಡಿಕೊಳ್ಳಬೇಕು ಮತ್ತು ಅವುಗಳಿಗೆ ಯಾವ ಯಾವ ಹೆಗ್ಗುರುತುಗಳನ್ನು ಹಾಕಿಕೊಂಡು, ಯಾವ ಯಾವ ಇಲಾಖೆಗಳು ಸಾಧಿಸಬೇಕು ಎಂದು ಸೂಚಿಸುವ ಕೆಲಸ.

ಹಿಂದಿನ ಕ್ರಿಯಾ ಯೋಜನೆಗಳನ್ನ ಓದಿದೆ, ಮಕ್ಕಳ ಹಕ್ಕುಗಳ ಒಡಂಬಡಿಕೆ ಮತ್ತು ಅಂದಿನ ಕಾಲಕ್ಕೆ ದೊಡ್ಡ ಮಾತಾಗಿದ್ದ ವಿಶ್ವಸಂಸ್ಥೆಯ ಸಹಸ್ರಮಾನದ ಅಭಿವೃದ್ಧಿ ಗುರಿಗಳು (MDG – Millennium Development Goals), ಭಾರತ ಸರ್ಕಾರ ನೀಡಿದ್ದ ಮಕ್ಕಳ ಹಕ್ಕುಗಳ ಜಾರಿ ವರದಿಗಳ ಮೇಲೆ ವಿಶ್ವಸಂಸ್ಥೆಯ ಸಮಿತಿಗಳು ಕೊಟ್ಟಿದ್ದ ಟೀಕೆ ಟಿಪ್ಪಣಿಗಳು ಎಲ್ಲ ಓದಿ ಟಿಪ್ಪಣಿ ಮಾಡಿಕೊಂಡು, ಪ್ರಶ್ನೆಗಳನ್ನು ಇಟ್ಟುಕೊಂಡು ಉತ್ಸಾಹದಿಂದ ಹೊರಟವನಿಗೆ ಮೊದಮೊದಲಲ್ಲೇ ತಣ್ಣೀರೆರಚುವ ಮಾತುಗಳು ಕೆಲವು ಇಲಾಖೆಗಳಿಂದ ಬಂದಿತು.

ʼಇಂತವೆಲ್ಲಾ ನೂರಾರು ಆಗಿವೆ. ಇನ್ನೊಂದು ಬಂತುʼ. ʼಈಗಾಗಲೇ ಇರತ್ತಲ್ಲ ಪ್ಲಾನ್‌ ಆಫ್‌ ಆಕ್ಷನ್‌ಗಳು ಅದರಲ್ಲಿರೋದನ್ನೇ ಸ್ವಲ್ಪ ಬದಲಿಸಿ ಹಾಕಿಬಿಡಿʼ. ಕೆಲವು ಇಲಾಖೆಗಳು ಕೊಟ್ಟಿದ್ದ ಅಂಕಿಸಂಖ್ಯೆಗಳನ್ನು ಹಿಂದಿನ ಕ್ರಿಯಾ ಯೋಜನೆಗಳಿಗೆ ಹೋಲಿಸಿ ನೋಡಿದಾಗ ನನಗೇ ಗಾಬರಿಯಾಗಿತ್ತು. ಹಿಂದಿನ ಯಾವ ಹೆಗ್ಗುರುತುಗಳು ಅಂದುಕೊಂಡಂತೆ ಸಾಧನೆಯೇ ಆಗಿಲ್ಲ.  ಪ್ರಶ್ನೆಗಳನ್ನು ಕೇಳಿದರೆ, ನಿಮಗ್ಯಾಕೆ. ನಾವು ಕೊಟ್ಟಿದ್ದು ಇಟ್ಟುಕೊಂಡು ನಿಮ್ಮ ಕೆಲಸ ಮಾಡಿಬಿಡಿ.

ಮಕ್ಕಳ ಪೌಷ್ಠಿಕ ಮಟ್ಟ, ರೋಗ ನಿರೋಧಕ ಲಸಿಕೆಗಳು, ಜನ್ಮ ಪ್ರಮಾಣ ಪತ್ರದ ವಿತರಣೆ, ಶಿಶು ಮರಣ, ಮಕ್ಕಳ ಮರಣ, ತಾಯಂದಿರು ಹೆರಿಗೆ ಸಮಯದಲ್ಲಿ ಸಾಯುವ ಪ್ರಮಾಣ, ಬಾಲ್ಯವಿವಾಹಗಳು, ಗಂಡು ಹೆಣ್ಣು ಅನುಪಾತ, ಶಾಲೆ ಸೇರುವ ಮತ್ತು ಬಿಡುವ ಮಕ್ಕಳು, ಅಂಗವಿಕಲತೆ, ಈ ಎಲ್ಲವನ್ನೂ ಹಿಂದುಳಿದ ಜಾತಿ ವರ್ಗಗಳು ಮತ್ತು ಅಲ್ಪ ಸಂಖ್ಯಾತ ಸಮುದಾಯಗಳ ಮಕ್ಕಳ ಪರಿಸ್ಥಿತಿಯಂತೆ, ನಗರ ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶಗಳು, ಇತ್ಯಾದಿಯಂತೆ ವಿಂಗಡಿಸಿದ ಅಂಕಿಸಂಖ್ಯೆಗಳ ವಿಶ್ಲೇಷಣೆ, ಒಂದೇ ಎರಡೇ ಕ್ರಿಯಾ ಯೋಜನೆಯಲ್ಲಿ ಅದೆಷ್ಟು ಪ್ರಶ್ನೆಗಳು.

ಅದಕ್ಕೆ ಸಮಾಧಾನವಾಗಿ ಯೋಜನೆಗಳು, ವಿವಿಧ ಇಲಾಖೆಗಳೊಡನೆ ಸಮನ್ವಯತೆಗಾಗಿ ಚಿಂತನೆಗಳು. ಹೀಗೆ ಅದೊಂದು ದೊಡ್ಡ ಲೋಕ.ನಾನು ಸರ್ಕಾರದವನಲ್ಲ, ಹೀಗಾಗಿ ಸಮಾಲೋಚಕರಿಗೆ ಉತ್ತರ ಕೊಡುವುದಿಲ್ಲವೇನೋ ಎಂದುಕೊಂಡು, ಕೆಲವು ಇಲಾಖೆಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಬಂಧಿತ ಅಧಿಕಾರಿ ಶ್ರೀಮತಿ ರೇವತಿಯವರನ್ನು ಮುಂದಿಟ್ಟುಕೊಂಡು ಹೋಗಿ ಆಯಾ ಇಲಾಖೆಗಳ ಕೆಲಸಗಳಿಗೆ ಸಂಬಂಧಿಸಿದ ಮಕ್ಕಳ ಸದ್ಯದ ಪರಿಸ್ಥಿತಿಯ ಅಂಕಿಸಂಖ್ಯೆ, ಮುಂದಿನ ಹತ್ತು ವರ್ಷಗಳಲ್ಲಿ ಸಾಧಿಸಬೇಕಾದ ಗುರಿಗಳನ್ನು ಕುರಿತು ಕೇಳಿದೆ.

ಆಗಲೂ ಅದೇ ಉತ್ತರ! ಒಂದು ಇಲಾಖೆಗೆ ಇನ್ನೊಂದು ಇಲಾಖೆ ಉತ್ತರಿಸುವುದಿಲ್ಲವೆ. (ನವಗ್ರಹಗಳು ಹಾಗೆಲ್ಲಾ ಇನ್ನೊಂದು ಗ್ರಹದೊಡನೆ ನೇರವಾಗಿ ಮಾತನಾಡುವುದಿಲ್ಲವೇನೋ?) ಹಾಗೂ ಹೀಗೂ ಮೇಲಿನ ಅಧಿಕಾರಿಗಳನ್ನು ಹಿಡಿದು ಅವರಿಂದ ಇವರಿಗೆ, ಇವರಿಂದ ಅವರಿಗೆ ಹೇಳಿಸಿ, ವಿವಿಧ ಇಲಾಖೆಗಳನ್ನು ಉಬ್ಬಿಸಿ, ಎಬ್ಬಿಸಿ, ಯೋಜನಾ ಇಲಾಖೆಯಿಂದ ಗದರಿಸಿಸಿ ೨೦೦೭ರೊಳಗೆ ಏನು ಸಾಧನೆಯಾಗಬೇಕು ಯಾವುದು ಕಡಿಮೆಯಾಗಬೇಕು, ಯಾವುದು ಹೆಚ್ಚಾಗಬೇಕು, ಯಾವುದರ ಬಗ್ಗೆ ನಾವು ಯೋಚನೆ ಮಾಡಲು ಆರಂಭಿಸಬೇಕು ಮತ್ತು ೨೦೧೦ರೊಳಗೆ ಮಕ್ಕಳ ಪರಿ‍ಸ್ಥಿತಿಯನ್ನು ರಾಜ್ಯ ಎಲ್ಲಿಗೆ ಮುಟ್ಟಿಸಬೇಕು ಎಂಬ ಕ್ರಿಯಾ ಯೋಜನೆ ಸಿದ್ಧವಾಗಿ ಆಗಿನ ಮುಖ್ಯಮಂತ್ರಿಗಳಾದ ಧರ್ಮಸಿಂಗ್‌ ಅವರಿಂದ ಬಿಡುಗಡೆಯಾಯಿತು.

ರಾಜ್ಯ ಮಟ್ಟದ ಕ್ರಿಯಾ ಯೋಜನೆ ಮುಂದಿಟ್ಟುಕೊಂಡು ಜಿಲ್ಲಾ ಮಟ್ಟದಲ್ಲಿ ಕ್ರಿಯಾ ಯೋಜನೆ ತಯಾರಿಸುವ ಕೆಲಸದಲ್ಲಿ ಇನ್ನೊಂದು ಲೋಕ ಕಂಡಿತು. ಜಿಲ್ಲಾ ಮಟ್ಟದ ಅಂಕಿಸಂಖ್ಯೆಗಳಿಗೂ ರಾಜ್ಯ ಮಟ್ಟದ ಪರಿಸ್ಥಿತಿಗೂ ಹಲವು ಕಡೆ ತಾಳಮೇಳವಿಲ್ಲ. ಕಾರಣವನ್ನು ಸ್ಥಳೀಯ ಅಂಕಿಸಂಖ್ಯೆ ಅಧಿಕಾರಿಗಳು ವಿವರಿಸಲು ಮುಂದಾಗುವುದಿಲ್ಲ! ಗ್ರಹಕೂಟವಾಗುವುದೇ ಇಲ್ಲ. [೨೦೦೩ರಲ್ಲಿ ನಿರ್ಮಿಸಿದ ಕರ್ನಾಟಕ ರಾಜ್ಯ ಮಕ್ಕಳ ಕ್ರಿಯಾ ಯೋಜನೆಯ ನಂತರ ಅಂತಹ ಕ್ರಿಯಾ ಯೋಜನೆ ಮುಂದಿನ ಹಂತಗಳಿಗೆ ಹೊರಬರಲೇ ಇಲ್ಲ. ೨೦೨೧ರ ದಶಕಕ್ಕಾದರೂ ರಾಜ್ಯ ಮಕ್ಕಳ ಕ್ರಿಯಾ ಯೋಜನೆ ತಯಾರಿಸಿ ಎಂದು ಬೇಡಿಕೆಯನ್ನು ಸರ್ಕಾರದ ಮುಂದೆ ಇಡುತ್ತಲೇ ಇದ್ದೇವೆ. ನೋಡೋಣ].

ಕಳೆದ ಹಲವು ವರ್ಷಗಳಲ್ಲಿ ರಾಜ್ಯ ಮಟ್ಟದಲ್ಲಿ ಕೆಲವೊಮ್ಮೆ, ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳು ಜಂಟಿ ಸಭೆಗಳನ್ನು ನಡೆಸುವ ಯತ್ನ ಮಾಡುತ್ತಿವೆ. ಆದರೆ ತಳ ಮಟ್ಟದಲ್ಲಿ ಅಧಿಕಾರಿಗಳೆಂಬ ನವಗ್ರಹಗಳು ಸಭೆಗಳಿಗೆ ಬಂದರೂ ಮುಖ ಮೂರು ಕಡೆ ಎಂಬಂತಿರುವುದು ಇನ್ನೂ ಮಾಯವಾಗಿಲ್ಲ. ಈಗೀಗ ಜಿಲ್ಲಾ ಮಟ್ಟದಿಂದ ಹಿಡಿದು ಗ್ರಾಮಪಂಚಾಯತಿ ಮಟ್ಟದಲ್ಲಿ ʼಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆ.ಡಿ.ಪಿ – ಕರ್ನಾಟಕ ಡೆವೆಲಪ್‌ಮೆಂಟ್‌ ಪ್ರೋಗ್ರಾಂ)ʼ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ವಿಶ್ಲೇಷಣೆ ನಡೆಯುತ್ತಿದೆ. ನವಗ್ರಹಗಳು ಅಲ್ಪಸ್ವಲ್ಪ ಪರಸ್ಪರ ನೋಡಿ ನಗಬೇಕು ಇಲ್ಲವೇ ಮುಖ ಸಿಂಡರಿಸಿಕೊಳ್ಳಲೇಬೇಕು ಎಂಬಂತಾಗಿದೆ. ಕೆಲವು ವಿಚಾರಗಳನ್ನು ಕುರಿತು ಚರ್ಚೆ ಮಾಡಿ ಒಮ್ಮತಕ್ಕೆ ಬರಲೇಬೇಕಾಗಿದೆ.  

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೨೫ ಮಕ್ಕಳಿಗಾಗಿ ಮಾಡಿರುವ ವ್ಯವಸ್ಥೆಗಳನ್ನು ನಿಯಮಿತ ಅವಧಿಗಳಲ್ಲಿ ಪುನರ್ವಿಮರ್ಶೆ ಮಾಡುತ್ತಿರಬೇಕು ಎಂದು ಹೇಳಿದೆ. ಆಗಲೇ ಮಕ್ಕಳಿಗೆ ಸಾಮಾಜಿಕ ಭದ್ರತೆ ಮತ್ತು ಸೂಕ್ತ ಜೀವನ ಮಟ್ಟವನ್ನು ಖಾತರಿ ಮಾಡಲು ಸಾಧ್ಯವಾಗುತ್ತದೆ. ಅದರ ಹಿನ್ನೆಲೆಯಲ್ಲೇ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಜಾರಿ ವಿಚಾರಣಾ ಸಮಿತಿ ಭಾರತಕ್ಕೆ ೨೦೦೨ರಲ್ಲಿ ಒಂದು ಗುಟುರು ಹಾಕಿತ್ತು.

ನೀವು ಎಲ್ಲ ವ್ಯವ‍ಸ್ಥೆಗಳನ್ನು ಮಕ್ಕಳಿಗಾಗಿ ಮಾಡಿದ್ದೇವೆ ಎಂದು ಹೇಳುತ್ತೀರಿ, ಆದರೆ ಅವುಗಳ ಜಾರಿ ಕುರಿತು ನಿಮ್ಮಲ್ಲೇನಾದರೂ ಒಂದು ಸ್ವತಂತ್ರ ಸಂಸ್ಥೆ, ಆಯೋಗ, ಲೋಕಪಾಲ್‌ ತರಹದ್ದು  ಎಂದು. ಆಗಲೇ ಸರ್ಕಾರ ತರಾತುರಿಯಲ್ಲಿ ೨೦೦೫ರಲ್ಲಿ ‘ಮಕ್ಕಳ ಹಕ್ಕುಗಳ ಆಯೋಗಗಳ ಕಾಯಿದೆʼ ಹೊರಡಿಸಿ, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳನ್ನು ಸ್ಥಾಪಿಸಿತು. ಇದು ಸ್ವತಂತ್ರ ಸಂಸ್ಥೆಯಾಗಿರಬೇಕು ಎಂಬುದು ಆಶಯ! 

ಕರ್ನಾಟಕದಲ್ಲಿ ೨೦೦೬ರಿಂದ ನಡೆದಿರುವ ಮಕ್ಕಳ ಹಕ್ಕುಗಳ ಗ್ರಾಮಸಭೆಗಳಲ್ಲಿ ಈಗ ʼನವಗ್ರಹʼಗಳ ಕೂಟ ಆಗಲೇಬೇಕು, ಅವರು ಸೇರಲೇಬೇಕು ಎಂದು ಆಜ್ಞೆಯಾಗಿದೆ. ಈ ವರ್ಷ ಹೊರಡಿಸಿರುವ ಸುತ್ತೋಲೆಯಂತೆ ವಿವಿಧ ಇಲಾಖೆಗಳು ಅಂಕಿಸಂಖ್ಯೆ ಸಮೇತ ಬಂದು ಮಕ್ಕಳ ವಾಸ್ತವ ಪರಿಸ್ಥಿತಿಯನ್ನು ವಿವರಿಸಬೇಕು, ಯೋಜನೆಗಳ ವಿವರಗಳನ್ನು ಹಂಚಿಕೊಳ್ಳಬೇಕು, ಹೇಗೆ ಪರಸ್ಪರ ಸಹಕಾರ ಕೊಡಬೇಕು, ಏನಾಗಬೇಕು ಎಂದು ಹೇಳಲೇಬೇಕಿದೆ.

ಮಕ್ಕಳಿಗಾಗಿ ಇರುವ ಯೋಜನೆಗಳ ವಿಮರ್ಶೆ, ಸಮಸ್ಯೆಗಳ ಪರಾಮರ್ಶೆ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸಂಯೋಜಿತ ಪ್ರಯತ್ನ ಮಾಡುವುದು ಕಡ್ಡಾಯವಾಗಿದೆ. ಆದರೆ ಇಂತಹ ಸಭೆಗಳಿಗೆ ಅಧಿಕಾರಿಗಳೇ ಬರದಿದ್ದರೆ, ಬಂದರೂ ಮಕ್ಕಳ ಸಮಸ್ಯೆಗಳ ಮೂಲವನ್ನು ಅರಿತುಕೊಳ್ಳುವ ಪ್ರಯತ್ನವನ್ನೇ ಮಾಡದಿದ್ದರೆ, ಸಮಸ್ಯೆ ತಿಳಿದರೂ ಕಾಟಾಚಾರದ ಉತ್ತರ ನೀಡಿ ಕೈತೊಳೆದುಕೊಂಡರೆ.. ಅದು ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುತ್ತದೆ.

ಈ ಕುರಿತು ಗ್ರಾಮಪಂಚಾಯತಿ ಮಟ್ಟದಲ್ಲಿರುವ ಯುವಜನರು, ಪೋಷಕರು ಮತ್ತು ಪ್ರಜ್ಞಾವಂತರು, ಸ್ವಯಂಸೇವಾ ಸಂಸ್ಥೆಗಳು ಎಚ್ಚರವಹಿಸಬೇಕಿದೆ. ನಿರ್ದಿಷ್ಟ ವಿಚಾರಗಳು –ಮಕ್ಕಳ ಅಪೌಷ್ಠಿಕತೆ, ಬಾಲ್ಯವಿವಾಹ, ಬಾಲಕಾರ್ಮಿಕರು, ಶಾಲೆ ಅಂಗನವಾಡಿಗಳಲ್ಲಿರುವ ಸೌಲಭ್ಯಗಳು ಮತ್ತು ಇದ್ದಿರಬಹುದಾದ ಅವ್ಯವಸ್ಥೆ, ತೊಂದರೆಗಳು, ಲೋಪಗಳು, ಬೀದಿ ದೀಪ, ನೀರಿನ ಸರಬರಾಜು, ಮಕ್ಕಳ ಮೇಲಾಗುವ ದೌರ್ಜನ್ಯಗಳು, ಹೀಗೆ ನೂರೆಂಟು ವಿಚಾರಗಳನ್ನು ಕುರಿತು ʼನವಗ್ರಹʼಗಳೆಂಬ ಅಧಿಕಾರಿ ದೇವರುಗಳನ್ನು ಮಕ್ಕಳು ಮತ್ತು ವಯಸ್ಕರು ಇಬ್ಬರೂ ಕೇಳಲೇಬೇಕಿದೆ.

ಕರ್ನಾಟಕದ ಎಲ್ಲ ಗ್ರಾಮಪಂಚಾಯತಿಗಳಲ್ಲಿ ಈಗ ಗ್ರಹ ಕೂಟ ನಡೆಯುತ್ತಿದೆ. ನೀವೂ ಭಾಗವಹಿಸಿ.

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ವಾಸುದೇವ ಶರ್ಮ

December 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...

2 ಪ್ರತಿಕ್ರಿಯೆಗಳು

 1. ಕಮಲಾಕರ ಕಡವೆ

  ಹೌದಲ್ವಾ, ವಾಸು, ನಮ್ಮ ನಾಡಿನಲ್ಲಿ ಇದೇ ಒಂದು ದೊಡ್ಡ ಸಮಸ್ಯೆ. ಕಾರ್ಯರೂಪಕ್ಕೆ ಇಳಿಸುವಲ್ಲಿನ ಸಮಸ್ಯೆ. ಮೂಲತಃ ನಾವು ಒಂದು ರೀತಿಯ ನೀತಿಭ್ರಷ್ಟ ಸಮಾಜಾನಾ ಅಂತ?

  ಪ್ರತಿಕ್ರಿಯೆ
 2. Anjali

  ಅಬ್ಬಬ್ಬಾ ನೀವುಗಳು ಅದೆಷ್ಟು ಕೆಲಸ ಮಾಡಿ ನಮ್ಮಂತಹ ಮರಿ ಕುರಿಗಳ ಕ್ಷೇತ್ರ ದೇವರಾಗಿದ್ದೀರಾ!!!! ಧನ್ಯವಾದಗಳು
  Anjali Ramanna

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: