ಮಗನ ಕಣ್ಣಲ್ಲಿ ಕುಂ ವೀ!

ನನ್ನ ಪಾಲಿನ ಹೀರೋ ನನ್ನಪ್ಪ…..

ಪ್ರವರ ಕೊಟ್ಟೂರ್

ಬರಿ ಅಪ್ಪ ಅನ್ನೋದಕ್ಕಿಂತ ಆತ ನನಗೆ ಮಹಾನ್ ಕಾದಂಬರಿಯೇ ಸರಿ, ಅನುಭವಗಳ ಕಥೆಗಳನ್ನ ವರ್ಣಮಯವಾಗಿ ಹೇಳುವ ರೀತಿಯಂತೂ ಅಬ್ಬಾ ಎನ್ನಬೇಕಷ್ಟೇ. ಆತ ಮಾತನಾಡಲು ಶುರುವಿಟ್ಟರೇ ಇನ್ನೂ ಕೇಳಬೇಕೆನ್ನಿಸದೇ ಇರದು, ಮಾತು ಮಾತಿನ ನಡುವೆ ಬಸವಣ್ಣ, ಸರ್ವಜ್ಞರ ವಚನಗಳ ಹಾಗೂ ಪಂಪ ಕುಮಾರವ್ಯಾಸರ ಕಾವ್ಯಗಳನ್ನ ಅದರ ಅರ್ಥಗಳನ್ನ ಹೇಳುವಾಗಲಂತೂ….. ಪ್ರತಿ ಬಾರಿಯೂ ಹೊಸತಾಗಿ ಕಾಣಿಸುತ್ತಾನಾತ, ಆತನನ್ನು ತಿಳಿಯಬೇಕೆಂಬ ಹಂಬಲವಿದ್ದರೂ ಅದು ಸಾಧ್ಯವಾಗಿಲ್ಲ. ಬಾಯಿ ತುಂಬಾ ಮಾತನಾಡುತಿದ್ದ ಅಪ್ಪ ಒಂದೊಂದು ಬಾರಿಗೆ ಒಂದೊಂದು ಥರ, ಒಮ್ಮೆ ಗಾಂಧೀಯಾದರೆ, ಇನ್ನೊಮ್ಮೆಗೆ ಚೇ ಗುವೆರಾ. ಹಿಡಿ ನಗು ನಕ್ಕರಂತೂ ಆತನಿಗೆ ಆತನೇ ಸಾಟಿ. ಹಸಿವಿನ ಬಾಲ್ಯವನ್ನ ಅನುಭವಿಸಿದ್ದ ಆತ ಅನ್ನವನ್ನ ದೇವರೆಂದೇ ಗೌರವಿಸುತಿದ್ದ ಹಾಗೇ ನಮಗೆ ಹಾಕಿಕೊಡುತ್ತಿದ್ದ ಕಾಪಿ ಪುಸ್ತಕದಲ್ಲೂ ಸಹ “ಅನ್ನ ದೇವರಿಗಿಂತ ಇನ್ನು ದೇವರು ಇಲ್ಲ”. ನಿಜವಾದ ಗುರುವಾದವ ಅಪ್ಪ, ನನ್ನಪ್ಪ…. ಅಪ್ಪನ ಪ್ರೀತಿ ಅಂದ್ರೆ ಅದು ಕರಡಿ ಪ್ರೀತಿ, ಸಿಟ್ಟು ಬಂದ್ರೆ ಮಾತ್ರ ಕೋಪಾರುಣನೇತ್ರಂ ಅಂತ ಏನೋ ಹೇಳ್ತಾರಲ್ಲಾ ಹಾಗೆ, ಒಂದು ದಿನ ಏನಾಯ್ತಪ್ಪಾ ಅಂದ್ರೆ,… ಏಳನೇ ತರಗತಿಯಲ್ಲಿದ್ದೆ, ಆಟವಾಡಲಿಕ್ಕೆ ಹೋಗಿ ಮನೆಗೆ ತುಂಬಾ ತಡವಾಗಿ ಬಂದೆ ಅನ್ನೊ ಕಾರಣಕ್ಕೆ ಗುರುತು ಮೂಡುವ ಹಾಗೆ ಕಪಾಳಕ್ಕೆ ಬಾರಿಸಿದ್ರು, ಅಳು ಉಮ್ಮಳಿಸಿ ಬಂದುದಕೆ ರೂಮಿಗೆ ಹೋಗಿ ಬಾಗಿಲನ್ನ ಜೋರಾಗಿ ಮುಚ್ಚಿ, ಯಾರಿಗೂ ಕೇಳಿಸದಂತೆ ಅಳುತ್ತಾ ಕೂತೆ, ಅಮ್ಮ ಎಷ್ಟು ಜಪ್ಪಯ್ಯಾ ಎಂದರೂ ಹೊರಗೆ ಬರಲಿಲ್ಲ, ಅತ್ತೂ ಅತ್ತೂ ಹೊಟ್ಟೆ ಹಸಿದಿತ್ತು ಹೊರಗೆ ಕಟ್ಟೆ ಮೇಲೆ ಕೂತೆ, ಅಜ್ಜಿ-ಅಮ್ಮ ಊಟಕ್ಕೆ ಏಷ್ಟು ಒತ್ತಾಯಿಸಿದರೂ, ಹೊಡೆದಿದ್ದಕ್ಕೆ ಉಪವಾಸ ಮಾಡಬೇಕೆಂದು ನಿರ್ಧರಿಸಿದ್ದೆ, ಸ್ವಲ್ಪ ಹೊತ್ತಲ್ಲೇ ನಿದ್ದೆ ಹತ್ತಿ ಬಂದು ಮಲಗಿದೆ, ಹಸಿದ ಹೊಟ್ಟೆಯಲ್ಲೇ,. ಯಾರೋ ನನ ಬಾಚಿ ಎತ್ತಿಕೊಂಡು ಹೋಗುತಿದ್ದಾರೆ ಅನ್ನಿಸಿತು, ನಿದ್ದೆಗಣ್ಣಿನಲ್ಲಿದ್ದ ನಾನು ಮೆಲ್ಲಗೆ ನೋಡಿದರೆ ಅಪ್ಪ! ಬಚ್ಚಲಿಗೆ ಕರೆದುಕೊಂಡು ಹೋದವರೇ ಮುಖ ತೊಳೆಸಿದರು, ಬಾಯಲ್ಲಿ ನೀರು ಹಾಕಿ ಮುಕ್ಕಳಿಸು ಅಂದ್ರು ಅದೂ ಅಯ್ತು, ಚಾಪೆ ಹಾಕಿ ಕೂರಿಸಿ ತಟ್ಟೆಲಿ ಅನ್ನ ಸಾಂಬಾರು ಹಾಕಿ ಊಟ ಮಾಡು ಎಂದು ಗದರಿದರು ಒಂದಗಳನ್ನೂ ಮುಟ್ಟಲಿಲ್ಲ, ಅಮ್ಮನೂ ರಮಿಸಿದಳು ಹೂ ಹುಂ, ಕೊನೆಗೆ ಅಪ್ಪ ತೊಡೆ ಮೇಲೆ ಕೂರಿಸಿಕೊಂಡು ಅನ್ನ ಸಾರು ಮೊಸರು ಕಲೆಸಿ ಚಿನ್ನ-ರನ್ನ ಎಂದು ತುತ್ತು ಮಾಡಿ ಉಣಿಸಿದರು. ಅಪ್ಪನ ಕೈ ತುತ್ತು ಇನ್ನೂ ರುಚಿಸುತ್ತಿದೆ. ಬಾನುವಾರವಿರಬೇಕು ಹೊರಗಡೆ ಓದುತ್ತಾ ಕುಳಿತಿದ್ದೆ, ಬಿಕ್ಷೆಗೆಂದು ಮುದುಕಿಯೊಬ್ಬಳು ಬಂದರೆ ನಾನು “ಹೇ, ಮುಂದೆ ಹೋಗಮ್ಮ ಮಾಡೋಕ್ ಬೇರೆ ಕೆಲ್ಸ ಇಲ್ವ” ಅಂದೆ, ಅಪ್ಪ ನನ್ನನ್ನು ಕರೆದು ಕೈಗೆ ಐದು ರೂಪಾಯಿ ಇಟ್ಟು ಆಯಮ್ಮನಿಗೆ ಕೊಟ್ಟು ಬಾ ಎಂದರು, ಆಗಲೆ ಬೇರೆ ಮನೆಯತ್ತಿರವಿದ್ದ ಆ ಅಜ್ಜಿಯನ್ನ ದುರುಗುಟ್ಟಿಕೊಂಡು ನೋಡುತ್ತಾ ಕೊಟ್ಟು ಬಂದೆ. ಅಪ್ಪ ಯಾವುದೋ ಪುಸ್ತಕ ಓದುತಿದ್ರು, ಅಪ್ಪನ ಬಳಿ ಹೋದವನೇ “ಕೊಟ್ಟೆ ಅಪ್ಪಾಜಿ” ಎಂದೆ, ಕೆನ್ನೆ ಮೇಲೆ ನಗುವಿಟ್ಟುಕೊಂಡು ಮುಂದೆ ಕೂರಿಸಿಕೊಂಡು,”ಮಗಾ, ನಾನು ಹತ್ತನೇ ಕ್ಲಾಸು ಮುಗ್ಸಿ ಕೆಲಸಕ್ಕೆ ಅಂತಾ ಹೊಸಪೇಟೆಗೆ ಹೋಗಿದ್ದೆ, ಕೆಲಸಕ್ಕಾಗಿ ಅಲೆದೂ ಅಲೆದೂ ಕೊನೆಗೆ ರೈಲ್ವೇ ಸ್ಟೇಷನ್ನಿನಲ್ಲಿ ಕೆಲ್ಸ ಸಿಕ್ತು, ವಾರಕ್ಕೆ ಎಂಭತ್ತು ಪೈಸೆ ಕೊಡುತ್ತಿದ್ದರು, ಅದರಲ್ಲಿ ಅರವತ್ತು ಪೈಸೆನ ಊಟಕ್ಕೆ ಖರ್ಚು ಮಾಡಿ ಇಪ್ಪತ್ತು ಪೈಸೆಯನ್ನ ಉಳಿಸ್ತಿದ್ದೆ, ಹಾಗೆ ಸ್ವಲ್ಪ ದಿನಗಳು ಉರುಳಿದ್ವು, ಒಂದು ವಾರ ಕೂಲಿಯನ್ನೇ ಕೊಡ್ಲಿಲ್ಲ ಆ ದಿನಗಳಲ್ಲಿ ಉಳಿಸಿದ್ದ ಹಣದಲ್ಲೇ ಹೊಟ್ಟೆ ತುಂಬಿಸಿಯಾಗಿತ್ತು, ಕೈಯಲ್ಲಿದ್ದ ಹಣವೂ ಖಾಲಿಯಾಗಿತ್ತು. ಎರಡು ದಿನಗಳಿಂದ ಏನೂ ತಿನ್ನಲಿಲ್ಲದೇ ನೀರಿನಲ್ಲೇ ಹೊಟ್ಟ ತುಂಬ್ಸಿದ್ದೆ, ಮೂರನೇ ದಿನವಂತೂ ಹಸಿವಿಂದ ಸಾಯೋ ಸ್ಥಿತಿಗೆ ಬಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ ಅವ್ಯಾವೂ ಸಾಧ್ಯವಾಗದೇ ಅಲ್ಲೇ ಬೆಂಚಿನ ಮೇಲೆ ನಿತ್ರಾಣವಾಗಿ ಮಲಗಿದ್ದೆ, ಜೊತೆಯಲ್ಲಿ ಕೆಲಸ ಮಾಡುತಿದ್ದ ಅಜ್ಜ ಬಂದು ನಾವೇನು ನಿನ್ನ ಪಾಲಿಗೆ ಸತ್ತು ಹೋಗಿದ್ವಾ ನನ್ನ ಹತ್ರ ಹೇಳೋಕ್ ಆಗಲ್ವ ಎಂದು ಬಯ್ದು ತಾನು ಮನೆಯಿಂದ ಕಟ್ಟಿಸಿಕೊಂಡು ಬಂದಿದ್ದ ಅನ್ನ ಗುರಳ್ಳುಪುಡಿ ಉಣ್ಣಿಸಿ ಬದುಕಿಸಿದ, ಆವತ್ತು ಅನ್ನ ಮತ್ತು ಹಸಿವಿನ ಮಹತ್ವ ಗೊತ್ತಾಯ್ತು ಮಗಾ, ಹಸಿವು ಅಂತಾ ಬಂದೋರಿಗೆ ಯಾವತ್ತೂ ಇಲ್ಲ ಅನ್ಬೇಡ” ಕಣ್ಣಲ್ಲೇ ಇಣುಕುತಿದ್ದ ಹನಿಗಳ ತಡೆದುಕೊಂಡು ಹೊರಬಂದೆ. ಅಪ್ಪನ ಆತ್ಮಕಥನ “ಗಾಂಧಿಕ್ಲಾಸು” ಬಿಡುಗಡೆಯಾಗುವ ಹೊತ್ತಿಗೆ ನಾನು ಆ ಓಣಿಗಳಲ್ಲಿ ತಿರುಗಾಡುತಿದ್ದೆ. ಎಂದೂ ಅಪ್ಪ ಹೇಳಿರದ ವಿಷಯಗಳು ಓದಿ ರೋಮಾಂಚನದ ಜೊತೆಗೆ ಒಂದಿಷ್ಟು ಒದ್ದೆಯಾದ ಕಣ್ಣುಗಳು. ಅಪ್ಪನ ಮುಗ್ಧತೆಯನ್ನ ದುರುಪಯೋಗಪಡಿಸಿಕೊಂಡವರೆಷ್ಟೋ, ಜಾತಿಯ ಹೆಸರಲ್ಲಿ ಹೀಯ್ಯಾಳಿಸಿದವರೆಷ್ಟೋ , ಸಿನಿಮಾದ ಮೋಸದ ಜನ ಓದುತಿದ್ದಾಗ ಅವರೆಲ್ಲರನ್ನ ಒದ್ದುಬಿಡಬೇಕೆನ್ನುವ ಸಿಟ್ಟು ಬಾರದೇ ಇರಲಿಲ್ಲ, ಹಾಗೇ ರಕ್ತಸಿಕ್ತವಾದ ಪೇಜುಗಳ ತಿರುವಾಗ ಭಯಗೊಂಡದ್ದೂ ಇದೆ. ಮೇಲು ಕೀಳುಗಳ ಮೆಟ್ಟಿ ನಿಂತುದಕೆ ಊರ ಗೌಡರಿಂದ ಜೀವಕ್ಕೆ ಆಪತ್ತು ಬಂದರೂ ಹೆದರದ ನನ್ನಪ್ಪ, ಅಲ್ಲಿನ ಕೊಲೆಗಡುಕರನ್ನೂ ರೌಡಿಗಳ ಜೊತೆಗಿನ ಘಟನೆಗಳನ್ನ ಓದುವಾಗ ನನ್ನ ಪಾಲಿನ ಹೀರೋ ನನ್ನಪ್ಪ. ಜಾತಿ-ಧರ್ಮಗಳ ಮೀರಿ ಬೆಳೆಯಬೇಕೆಂದು ಆತ ಹೇಳುವಾಗ ಮೈ ರೋಮಗಳೆಲ್ಲಾ ನಿಮುರುತ್ತವೆ. ಬಂಡಾಯದ ಕಾವ್ಯದಂತೆ ಗೋಚರಿಸುತ್ತಾನೆ ನನ್ನಪ್ಪ ಹಿಡಿ ಮಳೆಯ ಸಾಂತ್ವನವಿಲ್ಲದೆಯೇ ಬಿರಿದಿತ್ತು ಭೂಮಿ, ರಣ ಬಿಸಿಲು ನುಸಿ ಮಣ್ಣು, ಹುಸಿ ಹಸಿರು ಒಯಸಿಸ್ಸಿನಾ ದಾಹ, ಮೂಳೆ ಹೊತ್ತೋಡುತಿದ್ದ ಬಡಕಲು ನಾಯಿ…. ಆದರೂ ಜಾಲಿ ಗಿಡ ಮುಳ್ಳು ಹೊತ್ತು ಕಲ್ಲಿನ ಬುಡಕ್ಕೆ ಅಂಟಿ ಉಸುರಾಡುತಿತ್ತು…

(’ಮುಗುಳು’  ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಬರಹ)

 ]]>

‍ಲೇಖಕರು G

September 13, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

15 ಪ್ರತಿಕ್ರಿಯೆಗಳು

 1. Gopaal Wajapeyi

  ಪ್ರವರ, ನಿಮ್ಮ ಅಪ್ಪನನ್ನು ಎದುರಿಗೆ ತಂದು ನಿಲ್ಲಿಸಿದಂತಿದೆ ಈ ಬರಹ. ಒಳ್ಳೆಯ ಮನುಷ್ಯನ ಕುರಿತ ಒಳ್ಳೆಯ ನುಡಿಚಿತ್ರ. ನಿಮ್ಮ ಶೈಲಿ ಇಷ್ಟವಾಯಿತು. ನನ್ನ ಪ್ರೀತಿಯ ಹಳೆಯ ಗೆಳೆಯ ಕುಂ.ವೀ.ಗೊಂದು ನಮಸ್ಕಾರ.

  ಪ್ರತಿಕ್ರಿಯೆ
 2. Basavaraj Patil

  ಪ್ರವರ, ತುಂಬಾ ಚೆನ್ನಾಗಿ ಬರ್ದಿದ್ದಿಯ. ನಿಮ್ಮ ತಂದೆಯಿಂದ ತುಂಬಾ ಕಲಿತಿದ್ದಿಯ ಮತ್ತು ಈ ಕಲಿಕೆ ನಿರಂತರವಾಗಿರಲಿ. ಅದರಿಂದ ನಮಗೂ ಕಲಿಯೋ ಅವಕಾಶ ಕಲ್ಪಿಸಿಕೊಡು ಈ ನಿನ್ನ ಬರವಣಿಗೆ ಮುಖಾಂತರ. ನಿನ್ನ ತಂದೆಯವರಿಗೆ ನನ್ನ ನಮಸ್ಕಾರಗಳು.
  ನಿನ್ನ ಬರಹ ಚಿರ-ನಿರಂತರವಾಗಿರಲಿ ಎಂದು ಹರಿಸುವ ನಿನ್ನ ಗೆಳೆಯ.
  -ಬಸು

  ಪ್ರತಿಕ್ರಿಯೆ
 3. Prasad

  ಪ್ರವರ ರವರೆ,
  ನಿಮ್ಮ ತೀರ್ಥರೂಪರ ಹಲವು ಕವನಗಳನ್ನು ೨೫ ವರುಷಗಳ ಹಿಂದೆ
  ಆಸ್ಟ್ರೇಲಿಯಾಗೆ ಬರುವ ಮುಂಚೆ ಓದಿದ್ದೆ.
  ನಿಮ್ಮ ಕೆಲವು ಕವನಗಳನ್ನೂ ಓದಿದ್ದೇನೆ.
  ನೀವು ಖ್ಯಾತ ಕವಿ ಕುಂ.ವೀ ರವರ ಪುತ್ರರೆಂದು
  ತಿಳಿದು ಸಂತಸ ವಾಯಿತು.

  ಪ್ರತಿಕ್ರಿಯೆ
 4. Anitha Naresh Manchi

  sogasaagide 🙂 shabhagalige meeriddannu varnisa horata reeti.. 🙂

  ಪ್ರತಿಕ್ರಿಯೆ
 5. Prasad

  ದಯವಿಟ್ಟು ಕ್ಷಮಿಸಿ,
  ಅವರ ಹಲವು ಕಥೆಗಳನ್ನು ಓದಿದ್ದೇನೆ ಎಂದಿರಬೇಕಿತ್ತು ಅಲ್ಲಿ.

  ಪ್ರತಿಕ್ರಿಯೆ
 6. ಹಿಪ್ಪರಗಿ ಸಿದ್ದರಾಮ್

  ಪ್ರವರ್ ಅವರೇ, ಕನ್ನಡ ನಾಡಿನ ಕುಂ.ವೀ.ಯಂತಹ ಹೆಮ್ಮರದಂತಿರುವ ಅವರ ಕುರಿತು ಎಲ್ಲರಿಗೂ ಗೊತ್ತು, ಈ ಬರಹದಲ್ಲಿ ಅವರನ್ನು ನೀವು ಅವರ ಇನ್ನೊಂದು ಮಗ್ಗುಲನ್ನು ಸಾಧ್ಯಂತವಾಗಿ ಹೇಳಿರುವ ಶೈಲಿ ಮೆಚ್ಚುಗೆಯಾಯಿತು. ಬಾಲ್ಯದಿಂದಲೇ ಅವರ ಸಾಹಿತ್ಯವನ್ನು ಓದುತ್ತಲೇ ಬೆಳೆದವರು ನಾವೆಲ್ಲಾ, ಅವರ ಕುರಿತು ಇಂತಹ ಬರಹಗಳನ್ನು ನಿಮ್ಮಿಂದ ಹೆಚ್ಚಾಗಿ ನಿರೀಕ್ಷಿಸುವಂತೆ ಮಾಡಿದ್ದೀರಿ. ಕುಂ.ವೀ.ಸರ್ ಗೆ ಧಾರವಾಡದ ಮಿತ್ರರೆಲ್ಲರ ಪರವಾಗಿ ನಮಸ್ಕಾರಗಳು. ಶುಭದಿನ.

  ಪ್ರತಿಕ್ರಿಯೆ
 7. ಬಿ.ಎ.ಅಶೋಕ

  ಚೆನ್ನಾಗಿದೆ… ಘಟನೆಗಳನ್ನೆಲ್ಲಾ ಕಣ್ಣೆದುರಿಗೆ ತರುವ ನಿರೂಪಣಾ ಶೈಲಿ.. ಅಪ್ಪನಿಗೆ ತಕ್ಕ ಮಗ.. ಅವರ ಹಾದಿಯಲ್ಲೆ ಸಾಗುತ್ತಿರುವ ನಿಮಗೆ ಇನ್ನಷ್ಟು ಯಶಸ್ಸು ದೊರೆಯಲಿ.. ನಿಮ್ಮ ಭವಿಷ್ಯ ಉಜ್ವಲವಾಗಲಿ..

  ಪ್ರತಿಕ್ರಿಯೆ
 8. paresh Saraf

  ನಿಮ್ಮ ಕಣ್ಣಲ್ಲಿ ನಿಮ್ಮಪ್ಪ ಮೂಡಿಬಂದ ಪರಿ ಚೆನ್ನಾಗಿದೆ. ಎಲ್ಲರಿಗೂ ತಮ್ಮಪ್ಪನೆ ಮೊದಲ ಹೀರೋ… ಚೆನ್ನಾಗಿದೆ ಬರಹ 🙂

  ಪ್ರತಿಕ್ರಿಯೆ
 9. Mohan V Kollegal

  ಚೆನ್ನಾಗಿದೆ ಲೇಖನ ಪ್ರವರ ಜೀ… ಅಪ್ಪನ ಹೆಸರು ನಿಮಗೆ ಹೆಸರು ತಂದುಕೊಟ್ಟಂತೆ, ನಿಮ್ಮ ಹೆಸರಿನಿಂದಲೂ ಅಪ್ಪನನ್ನು ಸ್ಮರಿಸುವಷ್ಟರ ಮಟ್ಟಿಗೆ ಬೆಳೆಯಲಿ ನೀವೆಂದು ಹಾರೈಸುವೆ… 🙂

  ಪ್ರತಿಕ್ರಿಯೆ
 10. Madhushree L

  ಕುಂವೀ ಸರ್ ರವರ ಅಭಿಮಾನಿಯಾದ ನನಗೆ ಒಮ್ಮೆ ತಿಳಿಯಿತು ಅವರ ಮಗ ಪ್ರವರ ಎಂದು…ಮರುಕ್ಶಣವೇ ಫ್ಹೊನ್ ಹಚ್ಛಿ, ”ಸಾರ್ ನಾನು ನಿಮ್ಮ ತಂದೆಯವರ ಬಹು ದೊಡ್ಡ ಅಭಿಮಾನಿ,ನಿಮ್ಮ ಬಳಿ ಇಂದು ಫೊನ್ನಲ್ಲಿ ಮಾತನಾಡುತ್ತಿರುವುದು ಕನಸೋ ಧಿಗ್ಭ್ರಮೆಯೋ ಎಂಬಂತೆ ಭಾಸವಾಗುತ್ತಿದೆ”, ಎಂದು ತೊದಲುತ್ತಾ ಮುಂದೆ ಮರು ಮಾತು ತೋಚದೆ ಮೌನವಾದೆ..ಬಹುಶಹ ಪ್ರವರರವರಿಗೂ ಜಾಸ್ತಿ ಮಾತು ತೋಚಲಿಲ್ಲ ಎಂದು ಕಾಣುತ್ತದೆ.ಗಲಿಬಿಲಿಯಿಂದ ಬರೇ ಧನ್ಯವಾದ ಹೇಳಿ ಸುಮ್ಮನಾದರು.ನಂತರ ನಮ್ಮಿಬ್ಬರ ನಡುವೆ ಅದುಹೇಗೆ ಚಿಗುರೊಡೆಯಿತೊ ಸ್ನೇಹ ತಿಳಿಯದು ಇಂದು ಮಾತ್ರ ಪ್ರವರ ನನಗೆ ಅದೆಷ್ಟು ಖಾಸ್ ಆಗಿಬಿಟ್ಟಿದ್ದಾನೆಂದರೆ ಈ ಕ್ಷಣ ಕಂವೀರವರ ಮಗ ನನ್ನಾತ್ಮೀಯ ಗೆಳೆಯನೆಂತದು ತಿಳಿದು ನನಗೇನೋ ಒಂದು ನಮೂನಿ ಗರ್ವ……ಮಗನ ಕಣ್ಣಲ್ಲಿ ಅಪ್ಪ ಛಲೋ ಚಿತ್ರಿತವಾಗಿದಾರೆ ಕೊಟ್ಟ್ರೇಶಿ,ನನ್ನ ಅಭಿನಂದನೆಗಳು ನಿನಗೆ.

  ಪ್ರತಿಕ್ರಿಯೆ
 11. Prasad V Murthy

  ಪ್ರವರ ನನ್ನಲ್ಲಿ ಪದಗಳಿಲ್ಲ, ನನ್ನ ಮಾತುಗಳನ್ನೆಲ್ಲಾ ಸೂರೆಗೊಂಡಿದ್ದೀರಿ.. ಅಪ್ಪ ಎನ್ನುವ ಮಮತಾ ಮೂರ್ತಿಯನ್ನು ಪದಗಳಲ್ಲಿ ಶೃಂಗರಿಸುವ ಕೆಲಸಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದೀರಿ.. ಕುಂವೀ ಸರ್ ರವರ ಅಂತರಂಗದ ಪರಿಚಯದೊಂದಿಗೆ, ಅವರ ಮಗನ ಬರವಣಿಗೆಯ ತಕತ್ತನ್ನು ಪ್ರಸ್ತುತ ಪಡಿಸಿದ ಬರಹ ಇದು.. ನನ್ನ ’ನನ್ನಪ್ಪ’ ಎಂಬ ಕವಿತೆಯನ್ನು ನೆನಪಿಸಿತು.. http://dewdrop143.blogspot.in/2011/11/blog-post_07.html

  ಪ್ರತಿಕ್ರಿಯೆ
 12. ಆಸು ಹೆಗ್ಡೆ

  ನಾವು ನಮ್ಮ ಅಪ್ಪ-ಅಮ್ಮಂದಿರ ಜೀವನದಿಂದ ಕಲಿಯುವ ಪಾಠವೇ ನಮ್ಮ ಜೀವನದ ಶ್ರೇಷ್ಟ ಪಾಠ. ಮಾತಾಪಿತರ ಜೀವನದಿಂದ ಪಾಠ ಕಲಿಯಲಿಚ್ಛಿಸದವರು, ಹೊರಗೆ ಅದೆಷ್ಟೇ ಕಲಿತರೂ ವ್ಯರ್ಥವೇ ಸರಿ. ಮಾತಾಪಿತರ ಸ್ಥಾನಮಾನ ಪ್ರಾಮುಖ್ಯವೆನಿಸುವುದಿಲ್ಲ. ಮಕ್ಕಳಿಗೆ ತಮ್ಮ ಮಾತಾಪಿತರ ಬಗ್ಗೆ ಇರುವ ಗೌರವಾದರಗಳಷ್ಟೇ ಮುಖ್ಯ ಇಲ್ಲಿ. ಇಂತಹ ಭಾವಗಳನ್ನು ಹೊಂದಿರುವ ಮಕ್ಕಳನ್ನು ಪಡೆದ ಮಾತಾಪಿತರು ಧನ್ಯರು. ಇಲ್ಲಿ ನನಗೆ ಕುಂ. ವೀ. ಅವರ ವ್ಯಕ್ತಿತ್ವಕ್ಕಿಂತಲೂ ಅವರ ಮಗನ ವ್ಯಕ್ತಿತ್ವ ಆಪ್ತವಾಗುತ್ತದೆ. ಪೀಳಿಗೆಗಗಳ ನಡುವಿನ ಅಂತರದ ಬಗ್ಗೆಯೇ ಮಾತನಾಡುವ ಈಗಿನ ದಿನಗಳಲ್ಲಿ, ಹಿಂದಿನ ಪೀಳಿಗೆಯನ್ನು ಗೌರವದಿಂದ ಕಾಣುತ್ತಾ, ಅವರನ್ನು ನೆನೆದುಕೊಂಡು ಬಾಳುವುದು ಪ್ರಶಂಸನೀಯ!

  ಪ್ರತಿಕ್ರಿಯೆ
 13. manjunatha dasanapura

  badukin anubavagalu kalisuva paata …..nammannu samvedanasila manavanagisutte annuvudannu channagi nirupisidira…..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: