
ಸುನೀತಾ ಬೆಟ್ಕೇರೂರ್
ಇವಳು ನಮ್ಮ ಮಗಳು,
ಪೃಥೆ.
ಕಂಕುಳಲ್ಲಿದ್ದಳು,
ನೆಲಕಿಳಿದಳು
ಬೆರಳನ್ಹಿಡಿದು ಹೆಜ್ಜೆಯಿಟ್ಟಳು
ಈಗೋ—— ಈಗೋ
ಅನ್ನುವಲ್ಲಿ ದಾಂಗುಡಿಯಿಟ್ಟಳು
ಶಿಶಿರನೆಡೆಗೆ,
ಹೊಸ ಜೇನಿನ ಠಾವಿಗೆ.
ಹೊರಡು ಮಗಳೆ, ಹಿಡಿದು
ಕೈಯೊಳು ನಮ್ಮದೊಂದು
ಹಣತೆ.
ಬೆಳಗಿಸು ನೂರಾರು—
ಸಾವಿರಾರು ಹಣತೆಗಳ
ಅಡಿಯಿಡುವೆಡೆಯಲೆಲ್ಲಾ.

ಚಿಮ್ಮು ಮಗಳೆ, ನಾವು
ಹಚ್ಚಿದ ಪುಟ್ಟ ರೆಕ್ಕೆಗೆ
ಶಿಶಿರನ ಒಲವಿದೆ
ಬಲವಿದೆ.
ಉಬ್ಬು –ತಗ್ಗುಗಳಿಲ್ಲದ
ಅಂಬರವಿದೆ.
ಮೂಡಿಸ
ಶಿಶಿರನೆದೆಯಲಿ ಮಿಂಚಿನ
ಸೆಳಕ
ಅರಳು ಕಂಗಳಲಿ ನಕ್ಷತ್ರಗಳ
ಹೊಳಪ.
ಹರಿಸು ಸಂತಸದ ಹೊಳೆಯ
ಅವನಂಗಳದಲಿ.
ನೆನಪಿರಲಿ ಮಗಳೆ
ನಾನಿಂದು ದಣಿದಿದ್ದೇನೆ
ಕುಳಿತಿದ್ದೇನೆ, ಕಾಯುತ್ತಿದ್ದೇನೆ
ವಿರಾಮದೊಂದಿಗೆ,
ನೀನೇರುವ ಮೆಟ್ಟಿಲುಗಳನೆಣಿಸಲು.
ನೀನೂಣಬಡಿಸುವ ಜೇನ
ಸವಿಯಲು,
ನೀನರಳಿಸುವ ಸುಮಗಳ
ಮುಡಿಗೇರಿಸಿಕೊಳಲು.
ಚೆನ್ನಾಗಿದೆ. ಮಾತೃ ಮಮತೆಯ ಧಾರೆ..!