ಮಗುವನ್ನೇನೋ ಸಮಾಧಿ ಮಾಡಿದೆವು ಆದರೆ…..

ನನ್ನ ಮಗ ವೈಟಿ

– ಶಾಂತಿ ಬಾಲಚಂದ್ರ ವೈಟಿ ನಮಗೆ ಸಿಕ್ಕಿದ್ದು ಇದೆ ಜುಲೈ ತಿಂಗಳಲ್ಲಿ ಐದು ವರುಷದ ಕೆಳಗೆ.ಅದೊಂದು ದಿನ ನಾನೂ ಇವರೂ ಸಂಜೆಯ ವಾಕ್ ಮುಗಿಸಿ ಮನೆಗೆ ಹಿಂತಿರುವಾಗ ಯಾರೋ ಮಹಾನುಭಾವರು ಅದಿನ್ನೂ ಹುಟ್ಟಿದ್ದ ಐದು ಬೆಕ್ಕಿನ ಮರಿಗಳನ್ನು ತಂದು ಮುಂದಿನ ರಸ್ತೆಯಲ್ಲಿದ್ದ ತಿಪ್ಪೆಯಲ್ಲಿ ಹಾಕಿ ಹೋಗಿದ್ದರು.ಅದಾಗಲೇ ಸಣ್ಣಗೆ ಕತ್ತಲು ಮುತ್ತಿಕೊಂಡಿದ್ದು, ಅಲ್ಲೊಂದು ಇಲ್ಲೊಂದು ಮಳೆಹನಿಯಿಡುತ್ತಿತ್ತು.ಅವುಗಳು ಗಾಬರಿಯಿಂದ ಮಿಯ್ಯಾಂ ಮಿಯ್ಯಾಂ ಅಂತ ಕಿರಿಚುತ್ತಿದ್ದರೆ ಕೆಲವು ಬೀದಿ ನಾಯಿಗಳು ಅವುಗಳನ್ನು ಕುತೂಹಲದಿಂದ ನೋಡುತ್ತಾ ನಿಂತಿದ್ದವು. ಮೊದಲೇ ನನಗೆ ಪ್ರಾಣಿಗಳೆಂದರೆ ಬಲು ಪ್ರೀತಿ.ಅಂಥದ್ದರಲ್ಲಿ ಹೀಗೊಂದು ಸನ್ನಿವೇಶದಲ್ಲಿ ಅವುಗಳನ್ನು ನಿರ್ಲಕ್ಷಿಸಿ ಮುಂದೆ ಸಾಗುವ ಮಾತೇ ಇರಲಿಲ್ಲ.ಆದರೆ ಅಲ್ಲೊಂದು ಸಮಸ್ಯೆಯಿತ್ತು.ಅದಿನ್ನೂ ನಾವು ಚೆನ್ನೈಗೆ ಬಂದು ಒಂದು ತಿಂಗಳಾಗಿತ್ತಷ್ಟೆ.ಅವಸರದಲ್ಲಿ ವಟಾರದ ಮನೆಯೊಂದರಲ್ಲಿ ಬಾಡಿಗೆಗೆ ಸೇರಿಕೊಂಡಿದ್ದೆವು. ಅಲ್ಲಿನ ಓನರ್ ಎಂಥಾ ವ್ಯಕ್ತಿಯೆಂದರೆ ಶುಕ್ರವಾರದ ದಿನ ಅವರು ದೇವರ ಪೂಜೆ ಮಾಡುತ್ತಾರೆಂಬ ಕಾರಣಕ್ಕೆ ನಾವು ವಟಾರದವರು ಯಾರೂ ಮಾಂಸದಡಿಗೆ ಮಾಡುವಂತಿರಲಿಲ್ಲ .ಅದೇ ಹಾಗಾದರೆ ಯೋಚಿಸಿ ….ನಮಗೆ ಅಲ್ಲಿ ಸಿಕ್ಕಾಪಟ್ಟೆ ರಿಸ್ಟ್ರಿಕ್ಷನ್ಗಳಿದ್ದವು .ಮನೆಗೆ ನೆಂಟರು ಬಂದರೆ ಮೂರು ದಿನಗಳ ಮೇಲೆ ಉಳಿಯುವಂತಿಲ್ಲ , ಸಂಜೆ ನಾಲ್ಕರ ಮೇಲೆ ಬಟ್ಟೆ ಒಗೆಯುವಂತಿಲ್ಲಾ, ಮೊಳೆ ಹೊಡೆಯೋ ಹಾಗಿಲ್ಲ, ಜೋರಾಗಿ ಚಪ್ಪಲಿ ಸದ್ದು ಮಾಡಿಕೊಂಡು ನಡೆಯೋ ಹಾಗಿಲ್ಲ ಹೀಗೆ ಇನ್ನೂ ಏನೇನೋ … ಅಂಥದ್ದರಲ್ಲಿ ಹೀಗೆ ನಾವು ಐದು ಬೆಕ್ಕಿನ ಮರಿ ಸಾಕುತ್ತೆವೆಂದರೆ ಆಕೆ ಸುತಾರಾಂ ಒಪ್ಪಿಗೆ ಕೊಡುವಂತಿರಲಿಲ್ಲ.ಕಡೆಗೆ ಹಾಗೂ ಹೀಗೂ ಮಾಡಿ ಸ್ವಲ್ಪ ದೊಡ್ದವಾಗಿದ್ದೆ ನಾವು ಅವುಗಳನ್ನ ಮೀನಿನ ಮಾರ್ಕೆಟ್ ನಲ್ಲಿ ಬಿಟ್ಟು ಬಿಡುತ್ತೇವೆಂದು ಮಾತು ಕೊಟ್ಟು ಅವುಗಳನ್ನ ಮನೆಗೆ ಕರೆತಂದಿದ್ದೆವು.ಆಮೇಲೆ ನಮ್ಮ ಬೇಬಿ ಸಿಟ್ಟಿಂಗ್ ಶುರುವಾಯ್ತು.ಪ್ರತಿ ಎರಡು ಘಂಟೆಗಳಿಗೊಮ್ಮೆ ಅವಕ್ಕೆ ಸಿರಿಂಜಿನ ಮೂಲಕ ಹಾಲು ಕುಡಿಸಬೇಕಾಗಿ ಬರುತಿತ್ತು. ಅವಿನ್ನೂ ಎಳೇಮರಿಗಳಾದ ಕಾರಣ ಅಲ್ಲಲ್ಲೇ ಒಂದು ಎರಡು ಎಲ್ಲ ಮಾಡಿಕೊಳ್ಳುತ್ತಿದ್ದವಾಗಿ ಪ್ರತೀ feed ನ ನಂತರ ಅವುಗಳ ಮೈ ಕೈ ಕಾಲು ಎಲ್ಲ ಒರೆಸಿ ಕ್ಲೀನ್ ಮಾಡಿ,ಅವು ಮಲಗುತ್ತಿದ್ದ ಸ್ಥಳವನ್ನೂ ಸ್ವಚ್ಚ ಮಾಡಬೇಕಾಗುತಿತ್ತು. ನಾವು ಅದನ್ನೆಲ್ಲಾ ಕಿಂಚಿತ್ತೂ ಬೇಸರ ಪಟ್ಟುಕೊಳ್ಳದೆ ಮಾಡುತ್ತಿದ್ದೆವು. ಕ್ರಮೇಣ ಅವು ಬೆಳೆದವು.ನಮ್ಮೆದುರೇ ಕಣ್ಣು ತೆರೆದವು,ನಡೆಯಲು ಕಲಿತವು,ಓಡಿ ಆಡಿ ಆಟವಾಡತೊಡಗಿದವು.ಆದರೆ ಅವುಗಳ ಆಟವೆಲ್ಲ ನಮ್ಮ ಒಂದೇ ಒಂದು ರೂಮಿನ ಪುಟಾಣಿ ಮನೆಯೊಳಗೇ ಮುಗಿದು ಹೋಗುತ್ತಿತ್ತು.ಯಾವುದೇ ಕಾರಣಕ್ಕೂ ಅವುಗಳನ್ನು ಹೊರಗೆಲ್ಲ ಬರಲು ಬಿಡಬಾರದೆಂದು ನಮ್ಮ ಹೌಸ್ ಓನರ್ ಆಣತಿಯಾಗಿತ್ತು.ಹೊರಗೆಲ್ಲಾದರೂ ಹೋಗುವಾಗ ಬೆಕ್ಕೇನಾದರೂ ಅಡ್ಡ ಬಂದರೆ ಅಪಶಕುನವಂತೆ ಅದಕ್ಕೆ!

ಮಕ್ಕಳಿಲ್ಲದ ನಮಗೆ ಅವು ಹೆಚ್ಚು ಕಡಿಮೆ ಮಕ್ಕಳೇ ಆಗಿ ಹೋಗಿದ್ದವು.ದಿನಾ ಅವುಗಳ ತುಂಟಾಟ ನೋಡುತ್ತಾ ,ಅವುಗಳೊಂದಿಗೆ ಆಡುತ್ತ ನಮ್ಮೆಲ್ಲ ಬೇಸರ ಮರೆಯುತ್ತಿದ್ದೆವು.ಆದರೆ ಸುಮಾರು ಐದು ತಿಂಗಳಾದಾಗ ನಮ್ಮ ಎರಡು ಬೆಕ್ಕಿನ ಮರಿಗಳು ಹಟಾತ್ತನೆ ಒಂದೇ ವಾರದ ಅವಧಿಯಲ್ಲಿ ಒಂದರ ಹಿಂದೊಂದರಂತೆ ಯಾವುದೇ ಮುನ್ಸೂಚನೆಯಿಲ್ಲದೇ ತೀರಿ ಕೊಂಡವು.ವೈದ್ಯರಲ್ಲಿ ವಿಚಾರಿಸಲಾಗಿ ಹೆಚ್ಚಿನ ದೈಹಿಕ ಶ್ರಮವಿಲ್ಲದೆ ದಿನಾಲೂ ಮೊಟ್ಟೆ ಊಟ ತಿಂದ ಕಾರಣದಿಂದ heart attack ಆಗಿರಬೇಕು ಅಂದಿದ್ದರು.ಅದಕ್ಕೆ ತಕ್ಕಂತೆ ಅವುಗಳೂ ಊಟ ಹಾಕಿದ ತಕ್ಷಣ ಬಕಾಸುರ ಭೀಮರಂತೆ ಉಳಿದವರಿಗೆ ಅವಕಾಶವನ್ನೇ ಕೊಡದೆ ತಾವೇ ಗಬಗಬ ತಿಂದು ಮುಗಿಸುತ್ತಿದ್ದರು.ಹಾಗಾಗಿ ಅವರಿಗೆ ನಾವು ಭೀಮ ,ಬಕಾಸುರ ಅಂತಲೇ ಹೆಸರಿಟ್ಟಿದ್ದೆವು.ಇನ್ನು ನಮ್ಮ whiety ಇದ್ದವರಲ್ಲೇ ಪಾಪದ ಬೆಕ್ಕಾಗಿದ್ದ.ಅವನು ಮೊಟ್ಟೆ ತಿನ್ನುತ್ತಲೇ ಇರಲಿಲ್ಲ.ಹಾಗಾಗಿ ನಾವು ಅವನಿಗೆ ಬ್ರಾಹ್ಮಣ ಅಂತ ಹೆಸರಿಟ್ಟಿದ್ದೆವು. ಹಾಗೆ ಅವೆರಡು ಬೆಕ್ಕು ಮರಿಗಳು ಸತ್ತು ಹೋದಾಗಲೂ ನಾವು ತುಂಬಾ ದುಃಖ ಪಟ್ಟಿದ್ದೆವು.ಸದಾ ಅವುಗಳ ಚಿನ್ನಾಟದ ನೆನಪೇ ಕಾಡುತ್ತಿತ್ತು.ಹಾಗಾಗಿ ನಾವು ಇನ್ನು ಇಲ್ಲಿರುವುದು ಬೇಡ ಹೊಸಮನೆ ಹುಡುಕಿಕೊಂಡು ನಮ್ಮ ಬೆಕ್ಕುಮರಿಗಳನ್ನು ಕೂಡ ಸೇರಿಸಿಕೊಳ್ಳುವ ಕಡೆ ಹೋಗಬೇಕೆಂದು ನಿರ್ಧರಿಸಿದೆವು..ಸಾಲದಕ್ಕೆ ಮನೆ ಓನರ್ ಬೇರೆ ನಿತ್ಯವೂ ಬೆಕ್ಕಿನ ಮರಿ ಬಿಟ್ಟಿರಾ ಬಿಟ್ಟಿರಾ ಎಂದು ಕೇಳಿ ಕೇಳಿ ನಮ್ಮ ತಲೆ ತಿನ್ನುತ್ತಿದ್ದರು.ನಂತರ ನಾವು ಅಲ್ಲಿಂದ ಮನೆ ಖಾಲಿಮಾಡಿ ಕ್ವಾರ್ಟರ್ಸ್ ಗೆ ಬಂದೆವು.ಅಲ್ಲಿ ಮರಗಿಡಗಳೂ,ಮನೆಯ ಸುತ್ತ ಸಾಕಷ್ಟು ಸ್ಥಳವೂ ಇತ್ತಾಗಿ ನಮಗೆ ತುಂಬಾ ಖುಷಿಯಾಗಿತ್ತು.ನಮ್ಮ ಮಕ್ಕಳೂ ಹೊಸ ಸ್ಥಳಕ್ಕೆ ಬಲುಬೇಗ ಹೊಂದಿಕೊಂಡವು.ಆಗ ನಮ್ಮ ಪಕ್ಕದ ಮನೆಯ ಹುಡುಗಿ whiety ಗೆ ಇದೆಂಥ “ಬ್ರಾಹ್ಮಣ” ಅಂತ ಹೆಸರಿಟ್ಟಿದ್ದೀರಿ ಅಂತ ನಕ್ಕು whiety ಅಂತ ಕರೆಯತೊಡಗಿದಳು.ಹಾಗೆ ನಮ್ಮ ಮಗುವಿಗೆ whiety ಅನ್ನೋ ಹೆಸರೇ ಖಾಯಂ ಆಯ್ತು. ನಂತರದ ದಿನಗಳಲ್ಲಿ ನಮ್ಮ ಮನೆಗೆ ಬಹಳಷ್ಟು ಬೆಕ್ಕುಗಳು ಸೇರ್ಪಡೆಯಾದವು .ರಸ್ತೆಯಲ್ಲಿ ಅನಾಥವಾಗಿ ಬಿಟ್ಟು ಹೋದ ಬೆಕ್ಕುಗಳೇನಾದರೂ ಕಣ್ಣಿಗೆ ಬಿದ್ದರೆ ಸಾಕು ನಾನು ಅವುಗಳನ್ನು ಮನೆಗೆ ಎತ್ತಿಕೊಂಡು ಬರುತ್ತಿದ್ದೆ.ಸಾಲದಕ್ಕೆ ನಮ್ಮ ಮನೆಯಲ್ಲಿ ಸಾಕಷ್ಟು ಬೆಕ್ಕುಗಳು ಓಡಾಡುವುದ ಕಂಡ ಕೆಲವರು ಅವರಿಗೆ ಬೇಡವಾದ ಮರಿಗಳನ್ನು ತಂದು ನಮ್ಮ ಮನೆ ಬಾಗಿಲಲ್ಲಿ ರಾತ್ರೋ ರಾತ್ರಿ ಬಿಟ್ಟು ಹೋಗಿ ಬಿಡುತ್ತಿದ್ದರು.ಹೀಗಾಗಿ ನಮ್ಮ ಮನೆ ಬೆಕ್ಕಿನ ಮನೆಯೆಂದೇ ಫೇಮಸ್ ಆಗಿಬಿಟ್ಟಿತು.ಇದೆಲ್ಲ ಅದರೂ ನಮ್ಮ whiety ಮತ್ತು ಆತನ ತಂಗಿ ಕರ್ಮಿ ನಮ್ಮ ಪಾಲಿಗೆ ವಿಶೇಷವಾಗೆ ಉಳಿದರು.ಯಾಕೆಂದರೆ ಅವುಗಳ ನಡವಳಿಕೆ ಉಳಿದ ಬೆಕ್ಕುಗಳಿಗೆ ಹೋಲಿಸಿದರೆ ತೀರಾ ವಿಭಿನ್ನವಾಗಿತ್ತು.ತಾಯಿಯಿಂದ ದೂರವಾಗಿ ನಮ್ಮೊಂದಿಗೆ ಬೆಳೆದದ್ದಕ್ಕೋ ಏನೋ ಅವು ಬೇಟೆಯಾಡುತ್ತಿರಲಿಲ್ಲ.ಹಸಿ ಮಾಂಸ ಮೀನು ತಿನ್ನುತ್ತಿರಲಿಲ್ಲ.ಉಳಿದ ಬೆಕ್ಕುಗಳಂತೆ ಎಲ್ಲರೊಡಗೂಡಿ ಊಟ ತಿನ್ನುತ್ತಿರಲಿಲ್ಲ.ಊಟಕ್ಕೆ ಅವುಗಳ ತಟ್ಟೆಯೇ ಆಗಬೇಕು.ಬೇರೆ ಯಾವುದಾರೂ ಬೆಕ್ಕು ಅಪ್ಪಿ ತಪ್ಪಿ ಅವುಗಳ ತಟ್ಟೆಗೆ ಬಾಯಿ ಹಾಕಿ ಬಿಟ್ಟರೆ ಮುಗೀತು ..ಅಲ್ಲಿಗೇ ಊಟ ಸ್ಟಾಪ್.ಮಲಗುವಾಗಲೂ ಅಷ್ಟೇ.ಅವು ನೆಲದ ಮೇಲೋ ಗೋಣಿ ತಾಟಿನ ಮೇಲೋ ಮಲಗುತ್ತಿರಲಿಲ್ಲ. ಒಂದು ನಮ್ಮ ರೂಮಿನಲ್ಲಿ ಅಲಮಾರಿಯೊಳಗೆ ,ಇನ್ನೊಂದು ಅಲ್ಲೇ ಮೇಜಿನ ಮೇಲೆ.ಊಟದ ಸಮಯದಲ್ಲೂ ಅವು ಮಿಕ್ಕ ಬೆಕ್ಕುಗಳಂತೆ ಕಿರುಚಿ ಗಲಾಟೆ ಮಾಡದೆ ಶಾಂತವಾಗಿ ಕುಳಿತು ಅವುಗಳ ಸರದಿಗೆ ಕಾಯುತ್ತಿದ್ದವು. ಹಾಗೆ ದೊಡ್ಡವನಾದ ವೈಟಿಗೆ ಗೆಳತಿಯೊಬ್ಬಳು ಸಿಕ್ಕಿದಳು.ಆ ಸಮಯದಲ್ಲಿ ವೈಟಿ ಯಾವಾಗ ನೋಡಿದರೂ ಅವಳೊಂದಿಗೇ ಇರುತ್ತಿದ್ದ.ಪರಿಣಾಮ ನಾಲ್ಕು ಮರಿಗಳ ಅಪ್ಪನೂ ಆದ.ಆದರೆ ಆ ಅವನ ಗೆಳತಿ ಪಕ್ಕದ ಮನೆಯ ಕಾಪೌಂಡಿನಲ್ಲಿ ಮರಿ ಹಾಕಿದ್ದಳಾಗಿ ಆ ಮನೆಯವನು ಅವೆಲ್ಲ ಮರಿಗಳ ಸಮೇತ ತಾಯಿ ಬೆಕ್ಕನ್ನು ಮೀನಿನ ಮಾರ್ಕೆಟ್ ನಲ್ಲಿ ಬಿಟ್ಟು ಬಂದಿದ್ದ.ಮತ್ತೆ ನಾವು ಹೋಗಿ ಹುಡುಕಿದೆವಾದ್ರೂ ಅವು ಕಣ್ಣಿಗೆ ಬೀಳಲಿಲ್ಲ.ಆದರೆ ನಮ್ಮ ಅದೃಷ್ಟಕ್ಕೆ ಒಂದೇ ಒಂದು ಚಾಣಾಕ್ಷ ಮರಿ ಆತನಿಂದ ತಪ್ಪಿಸಿ ಕೊಂಡು ಇಲ್ಲೇ ಉಳಿದು ಬಿಟ್ಟಿತ್ತು.ಹಾಗಾಗಿ ಬೇರೆ ದಾರಿ ಇಲ್ಲದೆ ಅದೂ ನಮ್ಮನೆ ಸೇರಿಕೊಂಡಿತು.ಅದು ನಮ್ಮ ವೈಟಿಗೆ ತದ್ವಿರುದ್ದವಾಗಿತ್ತು,ನಮ್ಮ ವೈಟಿ ಎಷ್ಟು ಒಳ್ಳೆಯವನೋ ಇದು ಅಷ್ಟೇ ಕೆಟ್ಟ ಬೆಕ್ಕಾಗಿತ್ತು. ಅದಕ್ಕೆ ನಾವು ಅವನಿಗೆ “ಕೆಟ್ಟ ಕೆಟ್ಟ ಮಗು” ಅಂತ ಹೆಸರಿಟ್ಟೆವು ಆದರೆ ಅದೇ ಈಗ ಸ್ವಲ್ಪ ಮಾರ್ಪಾಡಾಗಿ “ಕೆ ಕೆ” ಅಂತಾಗಿದೆ. ನಮ್ಮ ವೈಟಿ ನೋಡಲು ತುಂಬಾ ಚೆಂದಕ್ಕಿದ್ದ.ಒಳ್ಳೆಯ ಫೈಟರ್ ಕೂಡ.ಆದರೆ ನಮ್ಮ ವೈಟಿ ಯನ್ನು ಹೆದರಿಸಲು ನಮ್ಮ ಏರಿಯದಲ್ಲೊಂದು ಗಡವ ಬೆಕ್ಕಿತ್ತು.ಅದು ಯಾವಾಗಲೂ ನಮ್ಮ ವೈಟಿಯೊಂದಿಗೆ ಜಗಳ ಮಾಡಲು ನಮ್ಮನೆ ಹತ್ತಿರ ಬರುತಿತ್ತು.ವೈಟಿ ಬೇರೆ ಇದ್ದೊಬ್ಬ ತನ್ನ ಗೆಳತಿಯನ್ನು ಕಳೆದುಕೊಂಡು ಹೊಸ ಗೆಳತಿಗಾಗಿ ಹುಡುಕಾಟ ನಡೆಸಿದ್ದ.ಇದು ಆ ಗಡವ ಬೆಕ್ಕಿನ ಕಣ್ಣು ಕೆರಳಿಸಿತ್ತು.ಸದಾ ನಮ್ಮನೆ ಬಳಿ ಇವರಿಬ್ಬರ ಜಗಳ.ವೈಟಿ ಚೆನ್ನಾಗಿ ಫೈಟ್ ಮಾಡುತ್ತಿದ್ದನಾದರೂ ಗಡವ ಬೆಕ್ಕಿನ ಎದುರು ಸೋತು ಹೋಗುತ್ತಿದ್ದ.ಅವ್ನು ದಿನಾಲು ಮೈ ಕೈ ಎಲ್ಲ ಗಾಯ ಮಾಡಿಕೊಂಡು ಬರುವುದನ್ನ ನೋಡಲಾಗದೆ ನಮ್ಮ ಮನೆಯವರು ಅವನಿಗೆ ವೈದ್ಯರ ಸಲಹೆಯಂತೆ castration ಮಾಡಿಸಿದರು.ಆಮೇಲೆ ವೈಟಿ ಅಷ್ಟಾಗಿ ಹೊರಗೆ ಸುತ್ತಲು ಹೋಗುತ್ತಿರಲಿಲ್ಲ ಬದಲಾಗಿ ಮನೆಯೊಳಗೇ ಆಟವಾಡತೊಡಗಿದ.ತನಗೂ ವಿಷಯ ತಿಳಿಯಿತೇನೋ ಎಂಬಂತೆ ಗಡವ ಬೆಕ್ಕು ನಮ್ಮನೆಗೆ ಬರುವುದನ್ನು ನಿಲ್ಲಿಸಿತು. ನಮ್ಮ ವೈಟಿ ತುಂಬಾ ಚಂದವಿದ್ದ ನಿಜ ಆದರೆ ಅದಕ್ಕಿಂತ ಹೆಚ್ಚಾಗಿ ಅವನಿಗೆ ಅಷ್ಟೊಂದು ಒಳ್ಳೆಯ ಬುದ್ದಿಯಿತ್ತು.ನಮ್ಮ ಪ್ರತಿಯೊಂದು ಮಾತನ್ನೂ ಅರ್ಥ ಮಾಡಿಕೊಳ್ಳುತ್ತಿದ್ದ.ರಾತ್ರಿ ಮಲಗುವಾಗ ನಮ್ಮ ಮನೆಯವರ ತೋಳ ಮೇಲೆ ತಲೆಯಿಟ್ಟು ಮಲಗುವುದು ಅವನಿಗೆ ಅತ್ಯಂತ ಇಷ್ಟ.ನನಗಿಂತ ನಮ್ಮ ಮನೆಯವರ ಮೇಲೆ ಅವನಿಗೆ ಹೆಚ್ಚಿನ ಪ್ರೀತಿಯಿತ್ತು.ನನಗೆ ಕೆಲವೊಮ್ಮೆ ಪರಚಿಕಚ್ಚಿ ಮಾಡುತ್ತಿದ್ದನಾದರೂ ಒಂದೇ ಒಂದು ದಿನವೂ ನಮ್ಮ ಮನೆಯವರನ್ನು ಕಚ್ಚಿದ್ದೆ ಇಲ್ಲ.ಅವನನ್ನು ಹೆರಲಿಲ್ಲ ಅನ್ನುವುದು ಬಿಟ್ಟರೆ ಒಂದು ತಾಯಿ ತನ್ನ ಮಗುವನ್ನು ಎಷ್ಟು ಪ್ರೀತಿಸುತ್ತಾಳೋ ನಾನೂ ನಮ್ಮ ವೈಟಿಯನ್ನು ಹಾಗೆ ಪ್ರೀತಿಸುತ್ತಿದ್ದೆ. ಅವರೂ ಅಷ್ಟೇ .ಬೆಳಗಾಗೆದ್ದು ವೈಟಿಯ ಮುಖ ನೋಡಿದ ಮೇಲೆಯೇ ಮುಂದಿನ ಕೆಲಸ.ಏನೇ ಮಾಡುವ ಮೊದಲುನಾವು ನಮ್ಮ ಮಕ್ಕಳು ವೈಟಿ ಮತ್ತು ಕರ್ಮಿ ಯನ್ನು ಮನಸಲ್ಲಿಟ್ಟುಕೊಂಡೇ ಮಾಡುತ್ತಿದ್ದೆವು. ಹೊಸತೆನಾದರೊಂದು ವಸ್ತು ಕೊಂಡರೆ ಅದರಿಂದಾಗಿ ನಮ್ಮ ಮಕ್ಕಳಿಗಾಗುವ ಸಾಧಕ ಭಾದಕಗಳೇನು ಎಂಬುವುದರ ಕುರಿತು ಚರ್ಚಿಸಿ ತರುವಾಯ ನಿರ್ಧರಿಸುತ್ತಿದ್ದೆವು.ಕೆಲದಿನಗಳ ಹಿಂದೆ ಹೊಸ ನೆಕ್ಲೆಸ್ ಒಂದನ್ನು ಕೊಂಡಾಗ ಮೊದಲು ಅದನ್ನು ವೈಟಿ ಗೆ ತೊಡಿಸಿ ಆನಂದಿಸಿದ್ದೆವು.ಕಡೆಗೆ ಪಾದ ಸರ ಕೊಂಡಾಗಲೂ ಅದನ್ನು ವೈಟಿ ಯ ಕತ್ತಿಗೆ ಹಾಕಿ ನೋಡಿ ಸಂಭ್ರಮಿಸಿದ್ದೆವು.ಮುಂದೊಂದು ದಿನದಲ್ಲಿ ಅವನ ಕತ್ತಿಗೆ ಒಂದು ಚಿನ್ನದ ಸರ ಮಾಡಿಸಬೇಕೆಂಬುವುದು ನಮ್ಮ ಆಸೆಯಾಗಿತ್ತು. ನೀನು ಹೊತ್ತು ಹೆತ್ತು ಕಷ್ಟ ಪಡುವುದು ಬೇಡ ಅಂತಲೋ ಏನೋ ದೇವರು ನಮಗೆ ರೆಡಿಮೆಡ್ ಮಕ್ಕಳನ್ನ ಕೊಟ್ಟಿದ್ದಾನೆ ಅಂತ ನಮ್ಮ ಮನೆಯವರೇ ಒಮ್ಮೊಮ್ಮೆ ತಮಾಷೆ ಮಾಡುತಿದ್ದರು. ಅವನಿಲ್ಲದ ದಿನ…. ಅದು ನಮ್ಮ ಕಲ್ಪನೆಯಲ್ಲಿ ಇರಲಿಲ್ಲ.ಅವನಿಗೆ ,ಕರ್ಮಿಗೆ ,ನಮ್ಮೆಲ್ಲ ಬೆಕ್ಕುಗಳಿಗೂ ಕೊಡಿಸಬೇಕಾಗಿದ್ದ ಎಲ್ಲ vaccinationಗಳನ್ನೂ ನಾವು ಸರಿ ಯಾಗಿ ಕೊಡಿಸಿದ್ದೆವು.ಊಟವೂ ಅಷ್ಟೇ.ಶುಚಿ ರುಚಿಯಾಗಿ ಕೊಡುತ್ತಿದೆವು.ಇಲ್ಲಿ ಹಕ್ಕಿಪಿಕ್ಕಿಗಳು ಬೆಕ್ಕು ಹಿಡಿದು ತಿನ್ನುತ್ತಾರೆ.ಬೆಕ್ಕುಗಳಿಗೆ ಮೊದಲ ಆಪತ್ತಾಗಿ ಕಾಡುವುದೇ ಈ ಹಕ್ಕಿ ಪಿಕ್ಕಿ ಜನಾಂಗದವರು..ಹಾಗಾಗಿ ನಾನು ಅವರು ನಮ್ಮ ಸುತ್ತಿನ ಏರಿಯಾದಲ್ಲೆನಾದ್ರೂ ಕಂಡರೆ ಸಾಕು ,ಒಡನೇ ಹೋಗಿ ಅವರನ್ನು ಆಚೆ ಕಳಿಸಿಬಿಡುತ್ತಿದ್ದೆ.ಇವುಗಳು ಎಲ್ಲಾದರೂ ಹೊರಗೆಲ್ಲ ಹೋಗಿ ಅವರ ಕೈಗೆ ಸಿಲುಕಿಕೊಂಡಾವೆಂಬ ಭಯದಲ್ಲಿ ಮನೆಯ ಸುತ್ತಲೂ ಎತ್ತರಕ್ಕೆ ಬೇಲಿಹಾಕಿಸಿದ್ದೆ.ಆದರೆ ವಿಧಿಯಾಟದ ಮುಂದೆ ನಾವೆಲ್ಲಾ ಎಷ್ಟು ಮಾತ್ರದವರು? ಇದೇ ಕಳೆದ ಡಿಸಂಬರಿನಲ್ಲಿ ನನ್ನ ಮಗುವಿನ ಗಂಟಲ ಕೆಳಗೆ ಊತ ಕಾಣಿಸಿಕೊಂಡಿತ್ತು. ಏನೋ infection ಆಗಿರಬೇಕೆಂದು ಇವ್ರು ಒಡನೇ ಪಕ್ಕದ ಕ್ಲಿನಿಕ್ಕಿಗೆ ಕರಕೊಂಡು ಹೋದರೆ ಅಲ್ಲಿ ಯಾವುದೋ anti biotic ಹಾಕಿ ಕಳಿಸಿದ್ದರು.ಆದ್ರೆ ಔಷಧಿಯ ಕೋರ್ಸ್ ಕಂಪ್ಲೀಟ್ ಆಗಿತ್ತಾದರೂ ಊತ ಇಳಿದಿರಲಿಲ್ಲ.ಮತ್ತೆ ಅದೇ ಕಡೆ ಹೋದಾಗ ಇನ್ನೂ ಎರಡು ದಿನ ಇದೆ ಔಷಧಿ ಮುಂದುವರೆಸಿ ಹಾಗೆ ಸೆಟ್ಲ್ ಆಗದೆ ಇದ್ದರೆ ಹೋಮಿಯೋಪತಿ treatment ಕೊಡುವಾ ಅಂದಿದ್ದರು ಡಾಕ್ಟರು.ಆದರೆ ಅದೇನೋ ನನ್ನ ಮನಸು ಕೇಳಲೇ ಇಲ್ಲ.ನೀವು ಯಾವುದಕ್ಕೂ ಇವನನ್ನ ವೆಟರ್ನರಿ ಕಾಲೇಜ್ ಗೆ ತಗೊಂಡು ಹೋಗಿ ,lymphoma ನೋ ಏನೋ ಅಂತ ನಮ್ಮ ಮನೆಯವರಲ್ಲಿ ದುಂಬಾಲು ಬಿದ್ದಿದ್ದೆ.ಏನೋ ಮಾತಿಗೆ ಹಾಗೆ ಹೇಳಿದ್ದೆನಾದರೂ ಅವನಿಗೆ ತೀರ ಅದೇ ಖಾಯಿಲೆ ಇರಬಹುದೆಂದು ನಾ ಸರ್ವಥಾ ಎಣಿಸಿರಲಿಲ್ಲ.ನೋಡಿದರೆ ಬಯಾಪ್ಸಿ ರಿಪೋರ್ಟ್ ಅದನ್ನೇ ಸೂಚಿಸುತ್ತಿತ್ತು. ನನ್ನ ಮುದ್ದು ಮಗುವಿಗೆ ಕ್ಯಾನ್ಸರ್ ! ನಮಗೆ ನಂಬಲಾಗಲಿಲ್ಲ.ಮತ್ತೆ ನಾವು ಸೆಕೆಂಡ್ ಒಪಿನಿಯನ್ ತೆಗೆದುಕೊಂಡೆವು.ಆದರೆ ಖಾಯಿಲೆ ಅದೇ ಅನ್ನುವುದು ಖಾತ್ರಿಯಾಯ್ತು.ಬೇರೆ ಏನೂ ದಾರಿಯಿರಲಿಲ್ಲ.ನಮ್ಮ ಮಗುವಿಗೆ ಕೀಮೊತೆರಪಿ ಕೊಡಲು ಶುರುಮಾಡಲಾಯ್ತು.ಡಾಕ್ಟರ್ ಚಂದ್ರಶೇಖರ್ ಬಳಿ ನಮ್ಮ ಮಗುವಿಗೆ treatment ಕೊಡಿಸತೊಡಗಿದೆವು.ಒಟ್ಟು ೨೧ ಕೀಮೋ ಕೊಡಿಸಬೇಕಿತ್ತು. ಮೊದ ಮೊದಲು ಪ್ರತೀ ವಾರಕ್ಕೊಂದರಂತೆ ನಂತರ ಹದಿನೈದು ದಿನಕ್ಕೊಂದರಂತೆ.ಅದಲ್ಲದೆ ಪ್ರತಿಬಾರಿಯೂ ಕೀಮೋ ಕೊಡುವ ಮುನ್ನ ರಕ್ತ ಪರೀಕ್ಷೆ ಮಾಡಿಸಿ ಅದರಲ್ಲಿ ಅವನ ಹೀಮೊಗ್ಲೋಬಿನ್, ಯೂರಿಯಾ ,ಕ್ರಿಯಾಟಿನಿನ್ ಎಲ್ಲವೂ ನಾರ್ಮಲ್ ಆಗಿದ್ದರೆ ಮಾತ್ರ ಇಂಜಕ್ಷನ್ ಕೊಡಲಾಗುತ್ತಿತ್ತು.ಕೀಮೋ ತೆರಪಿಯ ಸೈಡ್ ಎಫೆಕ್ಟ್ಸ್ ಬಹಳ.ಕೂದಲು ಉದುರುವುದು,ತೂಕ ಇಳಿಯುವುದು ,ವಾಂತಿ ,ಊಟ ಸೇರದಂತಾಗುವುದು, ದೃಷ್ಟಿ ಕಡಿಮೆಯಾಗುವುದು,ಹೆಚ್ ಬಿ ಕಮ್ಮಿಯಾಗುವುದು ಹೀಗೆ ಅನೇಕ.ಆದರೆ ಕೀಮೋ ಕೊಡಿಸದೇ ಬೇರೆ ದಾರಿಯೂ ಇರಲಿಲ್ಲ. ಮೊದಲೆಲ್ಲ ದೇವರಲ್ಲಿ ಅಷ್ಟಾಗಿ ಪ್ರಾರ್ಥಿಸದೆ ಇದ್ದ ನಾನು ಈಗ ಸದಾ ದೇವರಲ್ಲಿ ವೈಟಿ ಯ ಆರೋಗ್ಯಕ್ಕೂ ಆಯುಷ್ಯಕ್ಕೂ ಮೊರೆಯಿಡತೊಡಗಿದೆ.ಅದಕ್ಕೆ ತಕ್ಕಂತೆ ನಮ್ಮ ವೈಟಿ ಕೀಮೊಗೆ ಚೆನ್ನಾಗೆ ರೆಸ್ಪಾಂಡ್ ಮಾಡತೊಡಗಿದ.ಸ್ವತಃ ಡಾಕ್ಟರ್ ,ಪರವಾಗಿಲ್ಲ ನಿಮ್ಮ ವೈಟಿ ಇಂಥ ಸ್ಟ್ರಾಂಗ್ ಇಂಜೆಕ್ಷನ್ ಗಳನ್ನ ತಡಕೊಳ್ತಾ ಇದಾನಲ್ಲ ಅನ್ನುತ್ತ ಆಶ್ಚರ್ಯ ಪಡುತ್ತಿದ್ದರು.ಇವರು ವಾರದಲ್ಲಿ ಮೂರು ದಿನ ಮಗುವನ್ನು ಕರಕೊಂಡು ಕಡ್ಡಾಯ ಆಸ್ಪತ್ರೆಗೆ ಹೋಗಬೇಕಾಗುತ್ತಿತ್ತು. ಆಫೀಸಿಗೆ ಹೋಗುವುದು ಹೆಚ್ಚು ಕಡಿಮೆ ಮರೆತಂತಾಗಿತ್ತು. ಈ ನಡುವೆ ವೈಟಿಯ ಕ್ರಿಯಾಟಿನಿನ್ ಲೆವೆಲ್ ಬೇರೆ ಹೆಚ್ಚಾಗಿ ಸುಮಾರು ಒಂದು ತಿಂಗಳು ಪ್ರತೀ ದಿನ ಅವನನ್ನು ಆಸ್ಪತ್ರೆಗೆ ಒಯ್ಯಬೇಕಾಯ್ತು.ಇದನ್ನು ಗಮನಿಸಿದ ಡಾಕ್ಟರ್ ನೀವೇ ಮನೆಯಲ್ಲಿ subcutaneous ಆಗಿ ಒಂದು ೩೦ ಎಂ ಎಲ್ ನಷ್ಟು fluid ಕೊಡಿ ಎಂದು ಹೇಳಿದ್ದರು ಹೇಗೂ ನಿಮ್ಮ ಮಿಸೆಸ್ nurse ತಾನೇ ಅವರು ಹಾಕಬಹುದು ಎಂದು ಧೈರ್ಯ ಹೇಳಿದ್ದರು.ಆದರೆ ನನ್ನಿಂದ ನನ್ನ ಮಗುವಿಗೆ ಸೂಜಿ ಚುಚ್ಚಲು ಆಗಲೇ ಇಲ್ಲ.ಕೈಯೆಲ್ಲ ನಡುಗಿ,ಎದೆಯೊಳಗೊಂದು ವಿಚಿತ್ರ ನೋವಾಗುತ್ತಿತ್ತು. ಕಡೆಗೆ ನಮ್ಮ ಮನೆಯವರೇ ಡಾಕ್ಟರ್ ಮಾರ್ಗದರ್ಶನದಲ್ಲಿ fluid ಹಾಕುವುದು ,ಇಂಜೆಕ್ಷನ್ ಕೊಡುವುದು ಎಲ್ಲವನ್ನೂ ಕಲಿತು ಕೊಂಡರು . ಬೆಳಗೆ ಆಸ್ಪತ್ರೆಯಲ್ಲಿ ,ಸಂಜೆ ಮನೆಯಲ್ಲಿ ಅವನಿಗೆ fluid ಹಾಕಿ injection lasix ಕೊಟ್ಟು ನೋಡಿಕೊಂಡೆವು.ಆ ಸಮಯದಲ್ಲಿ electrolytes imbalance ಆಗಿ ಅವನಿಗೆ ವಿಪರೀತ muscle cramps ಬರುತ್ತಿತ್ತು.ಆಗ ಮಗು ನಮ್ಮ ಮುಖವನ್ನೇ ನೇರ ನೋಡಿಕೊಂಡು ನೋವಿನಿಂದ ಅಳುತ್ತಿತ್ತು ನೋಡೀ..ಅಬ್ಬ! ನಾನು ನನ್ನ ಜೀವನದಲ್ಲೇ ಅಷ್ಟೊಂದು ನೋವು ಅನುಭವಿಸಿರಲಿಲ್ಲ. ಕಡೆಗೂ ಒಂದು ತಿಂಗಳ ಬಳಿಕ ಅವನ ಕ್ರಿಯಾಟಿನಿನ್ ಲೆವೆಲ್ ನಾರ್ಮಲ್ ಆಯ್ತು.ಮತ್ತೆ ಕೀಮೋ ಶುರು. ಆದರೆ ಇಲ್ಲಿ ಇನ್ನೊಂದು ವಿಷಯ ಗಮನಿಸಬೇಕು .ಸಾಮಾನ್ಯವಾಗಿ ಬೆಕ್ಕುಗಳಿಗೆ treatment ಕೊಡುವುದು ಸ್ವಲ್ಪ ಕಷ್ಟ ಯಾಕೆಂದರೆ ಅವು ಪರಚುವುದು ಕಚ್ಚುವುದು ಜಾಸ್ತಿ.ಸಾಮಾನ್ಯ ಅವುಗಳಿಗೆ ಇಂಜೆಕ್ಷನ್ ಕೊಡಬೇಕಾದರೆ ಅವು ತುಂಬಾ ರೆಸಿಸ್ಟ್ ಮಾಡುತ್ತವೆ ಆದರೆ ನಮ್ಮ ವೈಟಿ ಯಾರೊಬ್ಬರಿಗೂ ಕಚ್ಚುತ್ತಿರಲಿಲ್ಲ.ಎಷ್ಟು ನೋವಾದರೂ ತಡೆದುಕೊಳ್ಳುತ್ತಿದ್ದ.ಕಿರುಚಿ ಗಲಾಟೆ ಮಾಡುತ್ತಿರಲಿಲ್ಲ.ಅದೊಂದು ಬಗೆಯ ಶಾಂತತೆ.. ಅದರಿಂದಲೋ ಏನೋ ಅವನಿಗೆ ಇಲ್ಲೀ ತನಕ ಅಂದರೆ ಒಟ್ಟು ಹದಿನಾರು ಕೀಮೋ ಕೊಡಿಸುವುದು ಸಾಧ್ಯವಾಯ್ತು.ಈ ನಡುವೆ ನಮ್ಮ ಮಗುವನ್ನು ಅನೇಕ ಸಮಸ್ಯೆಗಳು ಕಾಡುತ್ತಿದ್ದವು.ಅವನ ತೂಕ ಕಡಿಮೆಯಾಗಿತ್ತು.ಊಟ ಕಡಿಮೆ ಮಾಡಿದ್ದ.ತುಂಟಾಟ ನಿಲ್ಲಿಸಿದ್ದ. ಆಗಾಗ ವಾಂತಿ ಮಾಡಿಕೊಳ್ಳುತ್ತಿದ್ದ.ಅಷ್ಟಾದರೂ ಅವನ ಮುಖದ ಚೆಲುವು,ಕಣ್ಣಿನ ಕಾಂತಿ ಕುಂದಿರಲಿಲ್ಲ.ಇದೆಲ್ಲ expected side effects ಸೊ ನೀವು ಚಿಂತಿಸಬೇಡಿ.ಕೀಮೋ ಕಂಪ್ಲೀಟ್ ಆದಮೇಲೆ ಅವನು ಮತ್ತೆ ಪಿಕ್ ಅಪ್ ಆಗ್ತಾನೆ ಎಂದು ಡಾಕ್ಟರ್ ನಮ್ಮನ್ನು ಸಮಾಧಾನಿಸುತ್ತಿದ್ದರು.ಅವರು ಎಷ್ಟೊಳ್ಳೆ ಡಾಕ್ಟರು.ತಡರಾತ್ರಿಯಲ್ಲಿ ಫೋನು ಮಾಡಿದರೂ ಕಿಂಚಿತ್ತೂ ಬೇಸರಿಸಿಕೊಳ್ಳದೆ ಉತ್ತರಿಸುತ್ತಿದ್ದರು.ಅವನ ಚಿಕ್ಕ ಪುಟ್ಟ ತೊಂದರೆಗಳನ್ನು ಕೂಡ ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆ ನೀಡುತ್ತಿದ್ದರು.ಯಾವಾಗಲೂ busy ಇರುತ್ತಿದ್ದ ಅವರು ಯಾರನ್ನೇ ಆಗಲಿ neglect ಮಾಡಿದ್ದನ್ನ ನಾವು ನೋಡಲಿಲ್ಲ.ಸಾಮಾನ್ಯವಾಗಿ ವೆಟರ್ನರಿ ಡಾಕ್ಟರ್ ಅಂದರೆ ದನದ ಡಾಕ್ಟರ್, ಎಂದು ತುಸು ಉದಾಸೀನತೆಯಿಂದ ನೋಡುವವರೇ ಹೆಚ್ಚು.ಆದರೆ ನಿಜದಲ್ಲಿ ಅವರೇ ಗ್ರೇಟ್ ಡಾಕ್ಟರ್ಸ್.ಅವರು ಓದಿ ಕೊಳ್ಳಬೇಕಾಗಿರುವ systems ಎಷ್ಟೊಂದು! ಪ್ರತೀ ಪ್ರಾಣಿಯ ಅನಾಟಮಿಯೂ ಬೇರೆ ಬೇರೆ! ಸಾಲದಕ್ಕೆ ಅವು ತಾವಾಗೆ ಏನಾದರೂ complaints ಹೇಳ್ತವಾ ಅಂದರೆ ಇಲ್ಲ.ಇವರುಗಳೇ ,signs and symptoms observe ಮಾಡಿ diagnosis ಮಾಡಬೇಕು..ಆ ನಿಟ್ಟಿನಲ್ಲಿ ಡಾ.ಚಂದ್ರಶೇಖರ್ ಗೆ ನನ್ನ ನಮನಗಳು. ಇಷ್ಟೆಲ್ಲಾ ಆಗುತ್ತಾ ಅದಾಗಲೇ ಆರು ತಿಂಗಳ ಮೇಲಾಗಿತ್ತು.ನಮ್ಮ ವೈಟಿಯೂ ಚೆನ್ನಾಗೆ ಇದ್ದ.ಆದರೆ ಇದೇ ಕಳೆದವಾರದ ಕೆಳಗೆ ಇದ್ದಕ್ಕಿದ್ದಂತೆ ಅವನು ಊಟ ನಿಲ್ಲಿಸಿದ.ಏನಪ್ಪಾ ಅಂದರೆ ಬಾಯಲ್ಲಿ ಹುಣ್ಣಾಗಿತ್ತು.stomatitis . ಅವನಿಗೆ ಹಸಿವಿತ್ತು.ಊಟ ಮಾಡಲಾಗುತ್ತಿರಲಿಲ್ಲ.ಬಾಯಾರಿಕೆ ಆಗುತ್ತಿತ್ತು.ಆದರೆ ನೀರು ಕುಡಿಯಲಾಗುತ್ತಿರಲಿಲ್ಲ.ಏನೋ ಹೇಳಲು ಪ್ರಯತ್ನಿಸುತ್ತಿದ್ದ..ಆದರೆ ದನಿ ಸರಿಯಾಗಿ ಹೊರಡುತ್ತಿರಲಿಲ್ಲ.ಬಾಯಿಂದ ಜೊಲ್ಲು ಸುರಿಯುತ್ತಿರುತ್ತಿತ್ತು.ಇವೆಲ್ಲವೂ ಒಂದೇ ದಿನದಲ್ಲಿ ತೀರ unexpected ಆಗಿ ಕಾಣಿಸಿಕೊಂಡವು.ನಾವು ಮತ್ತೆ ವೈದ್ಯರ ಬಳಿಗೊಯ್ದು drip ಹಾಕಿಸತೊಡಗಿದೆವು.ಮನೆಯಲ್ಲಿ ಸಿರಿಂಜಿನ ಮೂಲಕ ಹಾಲು,ಜೆಲ್ಲಿ ಫುಡ್ ,ನೀರು ಕುಡಿಸ ತೊಡಗಿದೆವು.ಬಾಯಿಗೆ ಔಷಧಿ ಹಚ್ಚುತ್ತಿದ್ದೆವು. ಸಾಮಾನ್ಯವಾಗಿ ನಮ್ಮ ವೈಟಿ ಯಾವಾಗಲೂ ತುಂಬಾ ಕ್ಲೀನ್ ಆಗಿ ಇರುತ್ತಿದ್ದ.ಅವನ ಬೆಳ್ಳನೆ ಬಣ್ಣ ಯಾವತ್ತೂ ಫಳ ಫಳ ಹೊಳೆಯುವಂತೆ ಇಟ್ಟುಕೊಳ್ಳುತ್ತಿದ್ದ.ಹಾಗಾಗಿ ನಾವು ಸಾಧ್ಯವಾದಷ್ಟೂ ಅವನ ಮೈ ಕೈ ಒರೆಸಿ ಶುಚಿಯಾಗಿಡುತ್ತಿದ್ದೆವು. ಆದರೆ ಅವನ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಲೇ ಹೋಯ್ತು.ಬರೇ ಮೂರು ದಿನಗಳಲ್ಲಿ ಅವನು ಸುಮಾರು 700 gram ನಷ್ಟು ತೂಕ ಕಳೆದುಕೊಂಡ.ಈ ಮೊದಲೇ ಸ್ವಲ್ಪ ತೂಕ ಕಳೆದುಕೊಂಡಿದ್ದವನು ಈಗ ಇನ್ನೂ ಸಣ್ಣಗಾದ.ಅಷ್ಟೆಲ್ಲ ಆದರೂ ಮಗು ತೀರ ವಾಂತಿ ಮಾಡಲು ಕೂಡ ತೂರಾಡುತ್ತ ,ತಾರಾಡುತ್ತ ಬಾತ್ರೂಮಿಗೆ ಹೋಗುತ್ತಿತ್ತು.ನಾವು ಮನುಷ್ಯರೇ ಕೆಲವೊಮ್ಮೆ ವಾಂತಿಯನ್ನೆಲ್ಲ hold ಮಾಡದೆ ಎಲ್ಲೆಂದರಲ್ಲಿ ಮಾಡಿಬಿಡುತ್ತೇವೆ ಅಂತದ್ದರಲ್ಲಿ ಇವನು ಕಷ್ಟಪಟ್ಟು ..ನಡೆಯಲಾಗದೆ ನಡೆಯುತ್ತಾ ಬಾತ್ರೂಮಿಗೆ ಹೋಗುವುದು ಕಾಣುವಾಗ ಕಣ್ಣೀರು ಬರುತ್ತಿತ್ತು.ಆಮೇಲೆ ನಾನೋ ಇಲ್ಲ ಇವರೋ ಎತ್ತಿಕೊಂಡು ಹೋಗಿ ವಾಂತಿ ಮಾಡಿಸುತ್ತಿದ್ದೆವು. ಈ ಸಮಯದಲ್ಲಿ ನಾವು ಪಟ್ಟ ಸಂಕಟ ಹೇಳತೀರದು.ಅವನ ನೋವನ್ನು ಅವನು ಹೇಳಿಕೊಳ್ಳಲಾರ ..ನಾವೂ ಅವನ ಸಲುವಾಗಿ ಏನೂ ಮಾಡುವಂತಿರಲಿಲ್ಲ.ಅವನಿಗೆ ಹಸಿಯುತ್ತಿದ್ದರೂ ಊಟ ಮಾಡಲಾಗದ ಸ್ಥಿತಿ, ಏನೋ ಹೇಳಬಯಸುತ್ತಿತ್ತು ಮಗು..ಆದರೆ ಮಾತಾಡಲಾರದ ಸ್ಥಿತಿ .ಇದು ಬಲು ಘೋರ.ಅವನ ಈ ಸ್ಥಿತಿ ತಿಳಿದುಕೊಂಡು ನಾವು ಸದಾ ಅವನಲ್ಲಿ ಅದೂಇದೂ ಮಾತಾಡುತ್ತ ಇರುತ್ತಿದ್ದೆವು.ಅವನ ಎದುರು ಅಳಬಾರದೆಂದು ನಮ್ಮ ಮನೆಯವರು ನನಗೆ ಬಯ್ಯುತ್ತಿದ್ದರು.ಹಾಗಾಗಿ ನಾನು ಇವರೂ ,ಮಗುವೂ ಮಲಗಿದ ಮೇಲೆ ದೇವರಲ್ಲಿ ಪ್ರಾರ್ಥಿಸುತ್ತ ಅಳುತ್ತ ಕೂರುತ್ತಿದ್ದೆ. ದೇವರು ನನ್ನ ಪ್ರಾರ್ಥನೆ ಕೇಳಿದರೋ ಇಲ್ಲವೋ ಗೊತ್ತಿಲ್ಲ..ದೇವರ ತೀರ್ಪು ಬೇರೆಯದೇ ಆಗಿತ್ತು. ಅದರಂತೆ ನಮ್ಮ ಮುದ್ದು ಮಗುವಿನಿಂದ ಹೋರಾಟ ಮುಂದುವರಿಸಲು ಆಗಲಿಲ್ಲ.ಇದೇ july 25 ನೆ ತಾರೀಕಿನಂದು ಮದ್ಯಾಹ್ನ ಸರಿಯಾಗಿ ಎರಡು ಘಂಟೆಗೆ ನಾವಿಬ್ಬರೂ ಮಗುವಿನ ತಲೆ ಸವರುತ್ತ ,ಮಾತಾಡುತ್ತ ಕುಳಿತಿರುವಂತೆಯೇ..ಸಾವು ನಮ್ಮನ್ನು ದಾಟಿ ಬಂದು ಮಗುವಿನ ಜೀವವನ್ನು ಸದ್ದಿಲ್ಲದೇ ಹೊತ್ತೊಯ್ಯಿತು.ಅವನ ಪುಟ್ಟ ಹೃದಯ ಕಡೆಯದಾಗಿ ನಾಲ್ಕಾರು ಬಾರಿ ಮಿಡಿದು ಮೌನವಾಯ್ತು. ದುರಂತವೆಂದರೆ ನನಗೆ ಮದ್ಯಾಹ್ನದ ಶಿಫ್ಟ್ duty .ನಾನು ರಜೆ ಕೇಳಿದೆ ..ಸಿಗಲಿಲ್ಲ.ಬೆಕ್ಕು ನಾಯಿ ಸತ್ತಿದ್ದಕ್ಕೆಲ್ಲ ಎಂತ ರಜೆ ಅಂದರು.ಅವನು ನನ್ನ ಮಗಎಂದು ಅವರಿಗೆ ಅರ್ಥ ಮಾಡಿಸುವುದು ಸಾಧ್ಯವಿರಲಿಲ್ಲ.ನಾನು ಮಾತಾಡದೆ ಡ್ಯೂಟಿ ಮಾಡಿದೆ.ಆಗಾಗ ಬಾತ್ರೂಮಿಗೆ ಹೋಗಿ ಮನಸೋ ಇಚ್ಛೆ ಅಳುವುದು ಬಿಟ್ಟರೆ ನನ್ನಿಂದ ಏನೂ ಮಾಡಲಾಗಲಿಲ್ಲ.ಅತ್ತ ನಮ್ಮ ಮತ್ತು ಮಗುವಿನ ಪ್ರೀತಿ ಬಾಂಧವ್ಯದ ಬಗೆ ತಿಳಿದವರೆಲ್ಲ ಬಂದು ನೋಡಿಕೊಂಡು ಹೋದರು.ಈ ನಡುವೆ ನಮ್ಮ ಮನೆಯವರು ಹೋಗಿ ದೊಡ್ಡದೊಂದು ಹೂ ಕುಂಡ ತಂದಿಟ್ಟರು.ಮತ್ತೆ ರಾತ್ರಿ 9 ;30 ಗೆ ನಾ ಡ್ಯೂಟಿ ಮುಗಿಸಿ ಬಂದ ಮೇಲೆ ಮಗುವನ್ನು ಹೂಕುಂಡದಲ್ಲಿಟ್ಟು ಅಳುತ್ತಾ ಮಣ್ಣು ಮಾಡಿದೆವು .ಈಗ ದಿನಾ ಬೆಳಗೆ, ಸಂಜೆ ಮಗುವಿನೊಂದಿಗೆ ಕುಳಿತು ಟೀ ಕುಡಿಯುತ್ತೇವೆ.ಪೇಪರ್ ಓದುವುದು ಅಲ್ಲೇ ..,ಏನಾದರೂ ಫ್ರೀ time ಇದ್ದರೆ ಅಲ್ಲೇ ಪಕ್ಕದ ಬೆಂಚಿನಲ್ಲಿ ಕುಳಿತು ಕಳೆಯುತ್ತೇವೆ.ಸಂಜೆ ಹೂವಿಟ್ಟು ದೀಪ ಹಚ್ಚುತ್ತೇವೆ.ಕೆಲದಿನಗಳ ಬಳಿಕ ಅದರಲ್ಲಿ ಮಲ್ಲಿಗೆ ಗಿಡ ನೆಡಬೇಕಿದೆ. ಮಗುವನ್ನೇನೋ ಸಮಾಧಿ ಮಾಡಿದೆವು ಆದರೆ ಈ ನೆನೆಪುಗಳ ಸಮಾಧಿ ಮಾಡುವುದು ಸಾಧ್ಯವೇ ?ಸಾವು ನಮ್ಮಿಂದ ನಮ್ಮ ಮಗುವನ್ನು ಹೊತ್ತೊಯ್ದಿರಬಹುದು ಆದರೆ ನೆನಪುಗಳ ಒಯ್ಯಲು ಸಾಧ್ಯವೇ ? ನಾವು ಬದುಕಿರುವ ತನಕ ಅದು ಸಾಧ್ಯವಿಲ್ಲ.ನಮ್ಮ ನಂತರವೂ ನಮ್ಮ ಮಗುವಿನ ನೆನಪುಳಿಯುವಂತೆ ಏನಾದರೂ ಮಾಡಬೇಕೆಂಬ ಆಸೆಯಿದೆ ನೋಡುವ. ನಮ್ಮ ಕಣ್ಣೀರು ಇನ್ನೂ ಬತ್ತಿಲ್ಲ.ನಮ್ಮ ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುವುದರ ಹೊರತು ಮತ್ತೇನೂ ತೋಚುತ್ತಿಲ್ಲ. ಜೊತೆಗೆ ನಿಮ್ಮದೂ ಒಂದು ಹಾರೈಕೆಯಿರಲಿ.]]>

‍ಲೇಖಕರು G

August 3, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

6 ಪ್ರತಿಕ್ರಿಯೆಗಳು

 1. D.RAVI VARMA

  ಮಗುವನ್ನೇನೋ ಸಮಾಧಿ ಮಾಡಿದೆವು ಆದರೆ ಈ ನೆನೆಪುಗಳ ಸಮಾಧಿ ಮಾಡುವುದು ಸಾಧ್ಯವೇ ?ಸಾವು ನಮ್ಮಿಂದ ನಮ್ಮ ಮಗುವನ್ನು ಹೊತ್ತೊಯ್ದಿರಬಹುದು ಆದರೆ ನೆನಪುಗಳ ಒಯ್ಯಲು ಸಾಧ್ಯವೇ ? ನಾವು ಬದುಕಿರುವ ತನಕ ಅದು ಸಾಧ್ಯವಿಲ್ಲ.ನಮ್ಮ ನಂತರವೂ ನಮ್ಮ ಮಗುವಿನ ನೆನಪುಳಿಯುವಂತೆ ಏನಾದರೂ ಮಾಡಬೇಕೆಂಬ ಆಸೆಯಿದೆ ನೋಡುವ.
  ನಮ್ಮ ಕಣ್ಣೀರು ಇನ್ನೂ ಬತ್ತಿಲ್ಲ.ನಮ್ಮ ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುವುದರ ಹೊರತು ಮತ್ತೇನೂ ತೋಚುತ್ತಿಲ್ಲ. ಜೊತೆಗೆ ನಿಮ್ಮದೂ ಒಂದು ಹಾರೈಕೆಯಿರಲಿ.
  ನಿಮ್ಮ ಅಂತಾರಾಳದ ನೋವು, ಆ ಹಳಹಳಿಕೆ, ರೋದನೆ,ನಿಜಕ್ಕೂ ಒಂದು ಕ್ಷಣ ನನ್ನನ್ನು ಮುಕನನ್ನಗಿಸಿದವು. ಮೊದಲಿಗೆ ನಿಮ್ಮ ಪ್ರಾಣಿ ಪ್ತೀತಿಗೆ ನನ್ನದೊಂದು ಹೃದಯಪೂರ್ವಕ ನಮಸ್ಕಾರ, ಇಲ್ಲಿ ಹುಟ್ಟಿದ ಮಕ್ಕಳನ್ನು ತಿಪ್ಪೆಗುಂಡಿಗೆ, ಕಸದ ಡಬ್ಬಿಗೋ ಎಸೆಯುತ್ತಿರುವ , ಈ ವಿಚಿತ್ರ ಸಾಮಾಜಿಕ ವ್ಯವಸ್ತೆಯಲ್ಲಿ , ನೀವು ನಿಮ್ಮ ಆ ವ್ಹಿಟಿ ಯನ್ನು ಮಗನಂತೆ ಪ್ರೀತಿಸಿ,ಸಾಕಿ , ಅದರ ಆರೋಗ್ಯಕ್ಕಾಗಿ ಪ್ರತಿ ದಿನ, ಪ್ರತಿ ಕ್ಷಣ ಪಟ್ಟ ಆ ಶ್ರಮ.ಆತಂಕ. ನೋವು ಎಲ್ಲ ಓದ್ತಿದ್ದಂತೆ ನನ್ನ ಕನ್ನಾಲೆಯಲ್ಲಿ ನೀರು ತುಂಬಿ ಬಂತು . ನಾನು ಕೂಡ ಹಿಂದೆ ನನ್ನ ಮನೆಯಲ್ಲಿ ಗಿಳಿ,ಪಾರಿವಾಳ, ನಾಯಿ, ಮೊಲ, ಮೀನು ಎಲ್ಲವನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದೆ, ನನ್ನೋಣಿಯ ಹುಡುಗರು ನನ್ನ ಈ ಸಣ್ಣ ಜೂ ನೋಡಲುದಿನಾಲು ಬಂದು ಹೋಗುತ್ತಿದ್ದರು , ಅದು ನನಗೆ ಕೊಟ್ಟ ಆನಂದ
  ಸುಖವೇ ಬೇರೆ , ಆ ಕಾಲದಲ್ಲಿ ದಿನದ ಒಂದಿಸ್ತು ಸಮಯ avugolottige ಕಳೆಯುತ್ತಿದ್ದೆ, ಒಮ್ಮೊಮ್ಮೆ ನಾನು ಹೊರ ಹೋದರೆ ಆ ಬಿಳಿ ಪಾರಿವಾಳ ನನ್ನ ಬುಜದ ಮೇಲೆ ಕುತಿರುತ್ತಿತ್ತು ಅಲ್ಲಿಂದ ಮತ್ತೆ ವಾಪಸು ಮನೆಗೆ ಬಂದಿರುತಿತ್ತು . ಇನ್ನು ನನ್ನ ನಾಯಿ ರಾಜು ಅದು ನನ್ನ ಬದುಕಿನ ಭಾಗವೇ ಆಗಿತು ಬೆಳಗಿನ ವಾಲ್ಕಿಂಗ್ ನಿಂದ ಹಿಡಿದು ಕಾಲುವೆ ನಾನುಈಜಲು ಹೋದಾಗ ನನ್ನೊಡನೆ ಅದು ಈಜುತಿತ್ತು , ಪುರಾರಾತ್ರಿ ನನ್ನ ಗಾಡಿಯಮೇಲೆ ನಿದ್ರಿಸುತಿತ್ತು ಅದೊಂದು ದಿನ ನಾನು ನಮ್ಮೊನಿಯ ಸಭೆಯಲ್ಲಿ ಭಾಷಣ ಮಾಡುತ್ತಿರುವಾಗ ಇದ್ದಕಿದ್ದಂತೆ ವೇದಿಕೆ ಮೇಲೆ ಬಂದುಬಿಟ್ಟಿತು, ಅಲ್ಲಿರುವ ಸಭಿಕರು ಅದನ್ನು ಎಸ್ಟೆ ಓಡಿಸಲು ಪ್ರಯತ್ನಿಸಿದರೂ ಅದು ನಾನು ವೇದಿಕಇಂದ ಕೆಳಗಿಯುವವರೆಗೂ ಹೊರ ಹೋಗಲಿಲ್ಲ ಆದರೆ ನಾನು ಒಂದಿಸ್ತು ದಿನ ಮನೆಯಿಂದ ಹೊರಹೊದಾಗ ಗಿಳಿ ಪಾರಿವಾಳ ಎಲ್ಲವು ಕಾಲವಶವಗಿದ್ದವು ಆ ದಿನಗಳಲ್ಲಿ ನಾನುಂಡ ನೋವು ಅಘಾದವಾದದ್ದು . ಈಗಲೂ ಆಗೊಮ್ಮೆ ಈಗೊಮ್ಮೆ ಅವುಗಳ ಫೋಟೋ ನೋಡಿದಾಗ ದುಕ್ಖ ಉಕ್ಕಿಬರುತ್ತೆ.
  ಇಲ್ಲಿ ನಮ್ಮ ನಾಗರಿಕತೆಯನ್ನು ಒಮ್ಮೆ ಅವಲೋಕಿಸಿದರೆ ನಮ್ಮ ಹಿಂದಿ ಹಿರಿಕರು ಪಶು, ಪಕ್ಷಿ, ಪ್ರಾಣಿಗಳ ಜೊತೆ ಬದುಕುತ್ತಿದ್ದರು .ಅವು ಅವರ ಬದುಕಿನ ಭಾಘವೆ ಆಗಿ ಹೋಗಿದ್ದವು ,ಕುವೆಂಪು ಅವರ’ ಗುತ್ತಿ ‘ನಾಯಿ ಯಾಗಲಿ, ತೆಜಸ್ವ್ವಿ ಅವರ’ ಕಿವಿ ‘ ಬೀಚಿ ಅವರ
  ನಾಯಿ ‘ಸತ್ಯಭೋಧ’ {ಅವರು ತಮ್ಮ ನಾಯಿಗೆ ಸತ್ಯಭೋಧ ಅಂತಾ ಹೆಸರಿಟ್ಟಿದ್ದಕ್ಕೆ ಒಂದು ಉಪಕಥೆ ಏ ಇದೆ } ಆಗಲಿ ಅವರಿಗೆ ಅವರ ಮನೆಯ ಬದುಕಿನ ಒಂದು ಭಾಗವೇ ಆಗಿ ಹೋಗಿದ್ದವು .. ಒಂದೆಡೆ ಮನೋವಿಜ್ಞಾನಿಗಳು ಹೇಳುವ ಹಾಗೆ ಮನುಸ್ಯ ಪ್ರಾಣಿ,ಪಕ್ಷಿ, ಗಳ ಒಡನಾಟದಲ್ಲಿ ತಮ್ಮ ಬದುಕಿನ ಒತ್ತಡವನ್ನು ಕಳೆದುಕೊಳ್ಳ ಬಲ್ಲನಂತೆ.
  ಇತ್ತ್ತಿಚಿನ ದಿನಗಳಲ್ಲಿ, ಮನುಸ್ಯ ಸಂಬಂದಗಳೇ ಕಲುಸಿತಗೊಂದು, ಇಲ್ಲಿ, ವೈಷಮ್ಯ, ಸ್ವಾರ್ಥ, ಅಸೂಯೆ, ಜಾತಿ, ಹೀಗೆ ಹೀಗೆ ಹಲವು ಕಾರಣಗಳಿಂದ ವಿಚಿತ್ರ ಬದುಕನ್ನು ಬದುಕುತ್ತಿರುವ ಈ ದಿನಗಳಲ್ಲಿ ಈ ಪಶು,ಪಕ್ಸಿಗಳ ಜೊತೆ ಬದುಕುವುದು ಹೆಚ್ಚು ಅರ್ಥಪುರ್ಣವೆನಿಸುತ್ತಿದೆ, ಏಕೆಂದರೆ ಆ ಸಂಭಂದಗಳ ಮದ್ಯೆ ಮೋಸ, ವಂಚನೆ, ಅಸೂಯೆ ಏನು ಇರಲ್ಲ,, ಅವು maatanadadiddaru , ನಮ್ಮ ಭಾವನೆಗಳಿಗೆ, ನೋವಿಗೆ ,ಪ್ರೀತಿಗೆ ಸ್ಪಂದಿಸಬಲ್ಲಂತಹ ಸ್ನೇಹಜೀವಿಗಳು .
  ಮಗುವನ್ನೇನೋ ಸಮಾದಿ ಮಾಡಿದೆವು ಆದರೆ ಅದರ ನೆನಪು……… ನಿಮ್ಮ ಈ ಒಳಮನಸ್ಸಿನ ತುಡಿತ, ಸಂಕಟ, ವ್ಹಿಟಿ ಯನ್ನು ಕಳೆದುಕೊಂಡಾಗ ಉಂಟಾದ ಒಂಟಿತನ, ಆ ಕ್ಷಣದ ನಿಮ್ಮ ಧೀರ್ಗ ನಿಟ್ಟುಸಿರು ,ಮೌನ ಅದೊರ್ದನೆ ನೀವು ಕಳೆದ ಸಂತಸದ ಕ್ಷಣ ಎಲ್ಲವು …. ನಿಮ್ಮನ್ನಸ್ತೆ ಅಲ್ಲ ನಮ್ಮನ್ನು ಕಾಡುವಂತೆ ಮನಮುಟ್ಟುವ ಹಾಗೆ ಬರೆದಿದ್ದೀರಿ . ಕೆಲವು ನೆನಪುಗಳೇ ಹಾಗೆ ಅವು ನಿರಂತರವಾಗಿ ನಮ್ಮ ಮನದಲ್ಲಿ ಉಳಿದು ಬಿಡುತ್ತವೆ, ಆಗಾಗ್ಗೆ ತುಂಬಾ ಕಾಡುತ್ತವೆ,…. ಕಾಡುತ್ತಲೇ ಇರುತ್ತವೆ,
  ನಾವು ಬದುಕಿರುವವರೆಗೂ ………
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
  • D.RAVI VARMA

   ಸಾವು ತಂದಿಡುವ ಸಂಕಟ,ಒಂಟಿತನ, ಭಯ,ವ್ಯಾಕುಲತೆ, ಧೀರ್ಗ ಮೌನ ,ಅನಂತಾನಂತ ನೋವು ,ಇವೆಲ್ಲ ಯಾವ ಬಾಷೆಯ ಹಿಡಿತಕ್ಕು ಸಿಕ್ಕಲಾರದ್ದು ….
   ಆ ಅಂತರಾಳದ ನೋವು ,madagatti ನಿಂತ ದುಖ್ಹ ನಮ್ಮನು ಕಾಡುವ,ಅಳಿಸುವ, ನಮ್ಮ ಬದುಕನ್ನೇ ಹಿಡಿದು ಅಲ್ಲಡಿಸಿಬಿಡುವ ಹಿಂಡುವ ಎಲ್ಲವು ಆ ಕ್ಸ್ನದ ಸತ್ಯಗಳೇ…
   ಆದರೆ ಇಲ್ಲಿ ಹುಟ್ಟಿಬಂದ ಜೀವಿ,ಪ್ರಾಣಿ,ಪಕ್ಷಿ … ಎಲ್ಲರು ಒಂದು ದಿನ ಕಾಲದ ಕರೆಗೆ ogadabekastee
   ಮತ್ತೆ ಮತ್ತೆ ದಿ,ವಿ,ಜಿ ನೆನಪಾಗುತ್ತಾರೆ .
   ..
   ‘ಬದುಕು ಜಟಕಾ ಬಂಡಿ ,ವಿಧಿ ಅದರ ಸಾಹೆಭ ,
   ಕುದುರೆ ನೀನ್ ,ಅವ ಪೆಲ್ದಂಗೆ ಪಯಣಿಗರು .
   ಮದುವೆಗೋ ,ಮಸಣಕೋ ,ಹೊಗೆನ್ದಕದೆಗೊಗೋ ,
   ಪದಕುಸಿವ ನೆಲವಿಹುದು ಮಂಕುತಿಮ್ಮ ‘
   ರವಿ ವರ್ಮ ಹೊಸಪೇಟೆ .
   ‘ ,

   ಪ್ರತಿಕ್ರಿಯೆ
 2. shanthi k.a.

  ನಮಸ್ತೆ ರವಿ ಸರ್ ,
  ನಿಮ್ಮ ಪ್ರತಿಕ್ರಿಯೆ ಓದಿ ಮನಸು ತುಂಬಿ ಬಂತು.ನನ್ನ ನೋವಿಗೆ ಸ್ಪಂದಿಸಿ ಸಾಂತ್ವನ ಹೇಳಿದ ನಿಮ್ಮ ಪತ್ರದ ಪ್ರತಿಯೊಂದು ಪದಕ್ಕೂ ನನ್ನ ಹೃದಯಾಂತರಾಳದ ಧನ್ಯವಾದಗಳು.ನೀವೂ ನನ್ನಂತೆ ಪ್ರಾಣಿ ಪ್ರಿಯರೆಂದು ತಿಳಿದು ಸಂತೋಷವಾಯ್ತು.ಅದು ಪ್ರಾಣಿಯೋ,ಪ್ರೇಮಿಯೋ,ಪ್ರಿಯವಾದವ್ಯಕ್ತಿಯೋ,ವಸ್ತುವೋ ಅಗಲಿಕೆ ತಂದು ಕೊಡುವ ನೋವು ಅಪಾರ.ಆ ಖಾಲಿತನವನ್ನು ಯಾರಿಂದಲೂ ,ಯಾತರಿಂದಲೂ ತುಂಬಲು ಸಾಧ್ಯವಿಲ್ಲ.ಸಮಯದೊಂದಿಗೆ ನೋವಿನ ತೀವ್ರತೆ ಕಡಿಮೆಯಾಗಬಹುದೇನೋ….
  ಅದಲ್ಲದೆ ಪ್ರೀತಿಪಾತ್ರರು,ಸಹೃದಯಿಗಳು ನೀಡುವ ಸಾಂತ್ವನ ಮನಸಿನ ಭಾರವನ್ನೊಂದಿಷ್ಟು ಹಗುರಗೊಳಿಸಬಹುದು ಅಷ್ಟೇ..
  ಆ ನಿಟ್ಟಿನಲ್ಲಿ..ನಿಮಗೆ ಮತ್ತೊಮ್ಮೆ ..ಥ್ಯಾಂಕ್ಸ್…

  ಪ್ರತಿಕ್ರಿಯೆ
 3. Swarna

  ವೈಟಿಯ ನೆನಪು ನಿಮ್ಮಲ್ಲಿ ಸದಾ ಇರುವಾಗ ಅವನಿಲ್ಲೇ ಇರುತ್ತಾನೆ ಬಿಡಿ.
  ನಿಮಗಾಗಿ ಮತ್ತೆ ಹುತ್ತಿರಲೂ ಬಹುದು.
  Take care.
  ಸ್ವರ್ಣಾ

  ಪ್ರತಿಕ್ರಿಯೆ

Trackbacks/Pingbacks

 1. ಕರೆದರು ಇಲ್ಲ ಹಾಲೂ ಬೆಲ್ಲ ಕಾಯಿಸಿ ಇಟ್ಟಿದ್ದೆ… « ಅವಧಿ / avadhi - [...] ಹ೦ಚಿಕೊಡಿದ್ದರು. (ಆ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ). ಅದನ್ನು ಓದಿದ ಜಗದೀಶ್ ಕೊಪ್ಪ ಅವರು ಬರೆದ [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: