ಮಗ್ಗುಲಲ್ಲೊಂದು ತವರಿನ ಗಂಧ

door_number142.jpg“ಡೋರ್ ನಂ. 142” ಕಾಲಂ

 

 

ವಳ ಮುಖದಲ್ಲಿ ಇನ್ನಿಲ್ಲದ ದುಗುಡವಿತ್ತು.

ಏನಾಯಿತು? ಎಂಬುದರ ಎಳೆ ಹುಡುಕಲು ಪ್ರಯತ್ನಿಸಿದೆ. ಆ ದಿನ ಆಗಿತ್ತಲ್ಲ, ಹಾಗೆ ದಿಢೀರನೆ ಹಾವೇನಾದರೂ ಮನೆಗೆ ನುಗ್ಗಿತ್ತೆ? ಇಲ್ಲಾ ರಸ್ತೆಯಲ್ಲಿ ಕಾಟ. ತರಕಾರಿ ಅಂಗಡಿಯಲ್ಲಿ ಕಿತ್ತಾಟ.

ಉಹೂಂ, ಏನೂ ಗೊತ್ತಾಗಲಿಲ್ಲ.

ಇನ್ನೇನು ಕಣ್ಣಿಂದ ಹನಿ ಜಾರಿಬಿಡುತ್ತದೆ ಎನ್ನುವಂತಿತ್ತು. ಗುಟ್ಟು ಬಿಡಿಸಲಾಗದೆ ಏನಾಯ್ತು ಕೇಳಿದೆ.

ಲಾಂಡ್ರಿ ಅಂಗಡಿಯವನು ಒಂದು ಬಟ್ಟೆ ಮಿಸ್ ಮಾಡಿದ್ದಾನೆ ಅಂದಳು. ಅರೆ! ಇದೇನು ಹೊಸತಾ? ಮಾಲ್ ಗಳಂಥ ಮಾಲ್ ನಲ್ಲೂ ಕೊಂಡ ಬಟ್ಟೆ ಇನ್ನಾರದೋ ಅಳತೆಗೆ ಟ್ರಿಮ್ ಆಗಿರುತ್ತದೆ. ಇಸ್ತ್ರಿ ಅಂಗಡಿಯಲ್ಲಿ ಇಸ್ತ್ರಿ ಪೆಟ್ಟಿಗೆಯ ಮಾರ್ಕ್ ಹೊತ್ತೇ ಬಟ್ಟೆಗಳು ಮನೆಗೆ ಬರುತ್ತವೆ. ಟೈಲರ್ ಅಂಗಡಿಯಲ್ಲಿ ಹೇಳಿದ್ದಕ್ಕಿಂತ ಅಳತೆ ಚಿಕ್ಕದಾಗಿಸಿದ್ದಾನೆ ಎಂದು ಬಟ್ಟೆ ಅಲ್ಲೇ ಬಿಟ್ಟು ಬಂದದ್ದೂ ಆಗಿದೆ.

ಹಾಗಾದರೆ ಈಗ ಹೀಗೇಕೆ?

ನನಗೆ ಗೊಂದಲ. ಯಾವ ಬಟ್ಟೆ ಎಂದು ಕೇಳಿದೆ. ನನ್ನ ಬಟ್ಟೆಗಳು ಬಾರದೆ ಹೋದರೆ, ಪ್ಯಾಂಟಿನಲ್ಲಿ ಎರಡು ಗೀರು ಇದ್ದರೆ, ಒಗೆಯುವಾಗ ಇನ್ನೊಂದು ಬಟ್ಟೆಯ ಬಣ್ಣ ತಾಕಿದ್ದರೆ ನಾನಾಡುವ ನಾಟ್ಯ ಆಕೆಗೆ ಗೊತ್ತಿತ್ತು. ಆ ಬಟ್ಟೆ ಬಳಕೆ ಅಂದೇ ಕೊನೆ ಎಂದು ಯಾರೂ ಹೇಳಬಹುದಾದಷ್ಟು ರಂಪ ರಗಳೆ ಮಾಡುತ್ತಿದ್ದೆ. ಹಾಗೇ ಆಗಿರಬೇಕು ಅಂದುಕೊಂಡೆ. ಹೋಗಲಿ ಬಿಡು, ಲಾಂಡ್ರಿಯವರ ಗೋಳೇ ಅಷ್ಟು ಎಂದೆ.

ತಕ್ಷಣ ಕಣ್ಣೀರ ಕೋಡಿ ಹರಿಯಲಾರಂಭಿಸಿತು. ಬೆಡ್ ಶೀಟ್ ಬಂದಿಲ್ಲ ಎಂದಳು. ನನಗೆ ಗೊತ್ತಿದ್ದಂತೆ ಈ ನಡುವೆ ಯಾವ ಹೊಸ ಬೆಡ್ ಶೀಟನ್ನೂ ಕೊಂಡಿರಲಿಲ್ಲ. ಬೆಡ್ ಶೀಟ್ ಹಾಳಾದರೂ ನನ್ನ ಮೂಡಿಗೆ ಯಾವ ಪ್ರಾಬ್ಲಮ್ಮೂ ಇಲ್ಲ. ಅಂತಾದ್ದರಲ್ಲಿ? ಆ ಬೆಡ್ ಶೀಟೊ ಅಲ್ಲಲ್ಲಿ ತೂತಾಗಿತ್ತು. ನಾಜೂಕಾಗಿ ಒಗೆಯುವ ಉಸಾಬರಿಯೂ ಬೇಕಿರಲಿಲ್ಲ. ಅಂಥದ್ದರಲ್ಲಿ ಇದಕ್ಕೆ ಲಾಂಡ್ರಿ ಸೇವೆ ಬೇರೆ ಎಂದುಕೊಂಡೆ. ತಲೆಬುಡ ಅರ್ಥ ಆಗಲಿಲ್ಲ.

ಅಮ್ಮ ಊರಿಂದ ಬರುವಾಗ ಕೊಟ್ಟ ಬೆಡ್ ಶೀಟು ಎಂದಳು. ತಕ್ಷಣ ನನಗೆ ನೂರೆಂಟು ಬಲ್ಬುಗಳು ಹತ್ತಿದಂತಾಯಿತು.

ಮೂಕನಾದೆ.

sogasu1.jpgಇದ್ದ ನಮ್ಮಿಬ್ಬರ ಊರನ್ನೂ ಬಿಟ್ಟು ಇನ್ನೆಲ್ಲೋ ಗೂಡು ಮಾಡಿಕೊಂಡಿದ್ದೆವು. ಊರು ಬಿಡುವಾಗ ಸಂತಸದ ಬುಗ್ಗೆಯಿತ್ತು. ಆದರೆ ಕ್ರಮೇಣ ಯಾವ ಊರು ಬಿಟ್ಟು ಬಂದರೆ ಸಾಕಪ್ಪಾ ಎಂದುಕೊಳ್ಳುತ್ತಿದ್ದೆವೊ ಅದೇ ಊರು ಈಗ ನಮ್ಮನ್ನು ಎದ್ದರೆ ಬಿದ್ದರೆ ಕಾಡಲು ಆರಂಭಿಸಿತ್ತು. ತರಕಾರಿ ಅಂಗಡಿಯಲ್ಲಿ ಹಸಿರಾದ ಸೊಪ್ಪು, ಸೌತೆಕಾಯಿ, ಬ್ರೆಡ್ ಅಂಗಡಿಯಲ್ಲಿ ಗರಿಗರಿಯಾದ ಖಾರ ಬನ್, ಸ್ವೀಟ್ ಅಂಗಡಿಯಲ್ಲಿ ಆ ಜಿಲೇಬಿ ಅಷ್ಟೇ ಅಲ್ಲ, ಸಂಕ್ರಾಂತಿ ಬಂದರೆ ಎಳ್ಳು ಬೀರುವುದು, ಸೂರ್ಯನನ್ನು ಬಿಟ್ಟು ಚಾಂದ್ರಮಾನ ಯುಗಾದಿ ಆಚರಿಸುವುದು, ಅಡುಗೆ ಮನೆಯಲ್ಲಿ ಉಪ್ಪಿಟ್ಟು ಎಲ್ಲವೂ ನಮ್ಮನ್ನು ಮತ್ತೆ ಮತ್ತೆ ಊರಿಗೆ ಕೊಂಡೊಯ್ದು ನಮ್ಮ ಮನೆ, ಬೀದಿಗೆ ಕಟ್ಟಿ ಹಾಕುತ್ತಿತ್ತು.

ನೆನಪು ಎಂಬುದಕ್ಕಿಂತ ಮಾಯಾಚಾಪೆ ಇನ್ನೊಂದು ಬೇಕೆ? ಅದನ್ನು ಹತ್ತಿ ಕೂತರೆ ಆಯಿತು. ಎಲ್ಲಿಂದ ಎಲ್ಲಿಗೆ ಬೇಕಾದರೂ ಕ್ಷಣಾರ್ಧದಲ್ಲಿ ಜುಂಯ್ ಎಂದು ಹಾರಬಹುದಿತ್ತು. ಮಾಯಾಚಾಪೆ ಲಾಂಡ್ರಿಯಿಂದ ಈಗ ಮನೆಗೆ ಬಂದಿರಲಿಲ್ಲ.

ಯಾವುದೋ ಕವಿತೆಯಲ್ಲಿ ಓದಿದ ನೆನಪು. ಸೀತೆ ಬಿಲ್ಲು ಮುರಿದ ರಾಮನಿಗೆ ಮಾಲೆ ಹಾಕುತ್ತಾಳೆ. ಇನ್ನೇನು ರಾಮನ ಹಿಂದೆ ಹೊರಡಬೇಕು, ಆಗ ತಂದೆ ಜನಕರಾಜ ಒಂದು ಪುಟ್ಟ ಭರಣಿಯನ್ನು ಮಗಳ ಕೈಗಿಡುತ್ತಾನೆ. ಅಪ್ಪ ಇದೇನಿದು ಇಂಥ ಉಡುಗೊರೆ ಕೊಟ್ಟಿದ್ದಾನೆ, ಅಂಗೈಯಲ್ಲಿ ಹಿಡಿಯಬಹುದಾದ ಪುಟ್ಟ ಭರಣಿ ಎಂದು ಸೀತೆ ಕಕ್ಕಾಬಿಕ್ಕಿ. ಗಂಡಿನವರ ಮುಂದೆ ಅಪ್ಪ ಹೀಗೇಕೆ ಮರ್ಯಾದೆ ಕಳೆಯುತ್ತಿದ್ದಾನೆ ಎನಿಸಿತ್ತೇನೊ ಸೀತೆಗೆ? ಕುತೂಹಲದಿಂದ ತೆಗೆದು ನೋಡುತ್ತಾಳೆ. ಪುಟ್ಟ ಭರಣಿಯ ತುಂಬಾ ಮಣ್ಣು.

ಸೀತೆ ಬಿಕ್ಕಳಿಸುತ್ತಾಳೆ. ನನಗೂ ಕುತೂಹಲ: ಆ ವನವಾಸದಲ್ಲಿ, ಆ ಅಶೋಕವನದಲ್ಲಿ, ಅದೇ ಆ ನೆಲ ಬಿರಿದು ಸೀತೆ ಇಲ್ಲವಾಗುವಾಗ ಆ ಭರಣಿ, ಭರಣಿಯಲ್ಲಿದ್ದ ಮಣ್ಣು ಅವಳೊಂದಿಗೇ ಇತ್ತೇನು ಎಂದು.

ನನ್ನ ಮನೆ ಮುಂದಿದ್ದ ಹುಲ್ಲೇ, ನಾನು ಎಡವಿದ ಕಲ್ಲೇ, ನನ್ನ ಕಾಡಿದ ನೆಲವೇ… ಎಂದು ಲಂಬಾಣಿಯರು ರಾಗ ತೆಗೆದು ಅಳುತ್ತಾರೆ. ಮದುವೆ ಆಗಿ ಮನೆಯಿಂದ ಹೊರಡುವಾಗ ಓಹ್! ಅವರು ನೆನಪಿಸುವ ವಸ್ತುಗಳ ಪಟ್ಟಿ ನೋಡಿದರೇ ಸಾಕು, ಹೆಣ್ಣ ಎದೆಯಾಳದಲ್ಲಿನ ತವರ ನೆನಪು ಒದ್ದುಕೊಂಡು ಎದ್ದು ಬರುತ್ತದೆ. ಲಂಬಾಣಿಗರು ಮದುವೆಯಾಗಿ ಹೋದರೆ ಮತ್ತೆ ಜನ್ಮಕ್ಕೆ ತನ್ನ ಮನೆಯವರು ಸಿಗುತ್ತಾರೆಂಬ ನಂಬಿಕೆ ಇಲ್ಲ. ಹೇಳಿ ಕೇಳಿ ಅಲೆಮಾರಿಗಳು. ಯಾವ ಯಾವ ದಿಕ್ಕಿಗೆ ಹಂಚಿಹೋದರೋ?

ಹೊಳೆದಂಡೆ ಬದಿಯಲ್ಲಿನ ಹಸಿರು ಗರಿಕೆಯಂತೆ ನನ್ನ ಕುಟುಂಬದ ಬಳ್ಳಿ ಹರಡಲಿ ಎಂದು ಹಾರೈಸುವ ತಾಖತ್ತು ಆ “ತವರಿಗರಿ”ಗಲ್ಲದೆ ಇನ್ನಾರಿಗಿದ್ದೀತು?

ಅವಳ ಮುಖ ನೋಡಿದೆ. ತಡೆಯಲಾಗಲಿಲ್ಲ. ಲಾಂಡ್ರಿ ಅಂಗಡಿಗೆ ಹೊರಟೆವು. ಇಡೀ ಲಾಂಡ್ರಿ ಅಂಗಡಿಯಲ್ಲಿನ ಎಲ್ಲಾ ಬಟ್ಟೆ ಎಳೆಸಿದ್ದಾಯ್ತು. ಒಗೆಯಲು ಹೋಗಬೇಕಾದ ಬಟ್ಟೆಗಳ ಗಂಟು ಬಿಚ್ಚಿಸಿದ್ದಾಯ್ತು. ಬಂದವರಿಗೆಲ್ಲಾ ಕುತೂಹಲ. ಧೋಬಿ ಅಂಗಡಿಯವ ಸರಿಯಾದ ಬಟ್ಟೆಯನ್ನೇ ಎತ್ತಿಹಾಕಿದ್ದಾನೆ ಅಂತ. ಎಳೆಸೀ ಎಳೆಸೀ ಹಾಕಿದ ನಂತರ ಓಹ್! ಅಲ್ಲೇ ಅಲ್ಲೇ ಇತ್ತು ಆ ಬೆಡ್ ಶೀಟ್. ಅದೇ ಬಣ್ಣ ಮಾಸಿದ, ಕಿಂಡಿಗಳ ಚಿತ್ತಾರ ಹೊತ್ತ ಬೆಡ್ ಶೀಟ್.

ಯುರೇಕಾ! ಶಬ್ದ ಮಾತ್ರ ಹೊರಬೀಳಲಿಲ್ಲ ಅಷ್ಟೆ. ಇನ್ನುಳಿದದ್ದನ್ನೆಲ್ಲ ಅವಳ ಮುಖವೇ ಹೇಳುತ್ತಿತ್ತು.

ಅಮ್ಮನ ಬೆಚ್ಚನೆಯ ಅಪ್ಪುಗೆ, ತಾನು ಕಂಡುಂಡು ಬೆಳೆದ ತವರು, ಮಗಳು ಹುಟ್ಟಿದಾಗ ಹಾಸಿದ ಬಟ್ಟೆ, ಊರಿಂದ ಊರಿಗೆ ಹೊರಡುವಾಗಿನ ಶಾಲು, ಬೆಳೆದ ಮಗುವಿಗೆ ಮನೆಯಾಟಕ್ಕೆ ದೊರೆತ ಮೊದಲ ವಸ್ತ್ರ.

 ಓಹ್! ಬೆಡ್ ಶೀಟ್ ಎಂಬುದು ಬೆಡ್ ಶೀಟ್ ಅಲ್ಲ… 

‍ಲೇಖಕರು avadhi

August 17, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This