
ಸೌಜನ್ಯ ನಾಯಕ
ಹಾಯಾದ ಗಾಳಿಯಲಿ
ಹಸಿರು ಹಾಸಿನ ನಡುವಲ್ಲಿ
ಕುಂತು ನಿನಗಾಗಿ ಗೀಚಿದ
ಪತ್ರವೊಂದನ್ನ ಓದುವಾಗಲೆಲ್ಲ
ಕೊಂಚ ನಕ್ಕು ಬೇಸರಗೊಳ್ಳುತ್ತೇನೆ…
ನನ್ನ ಈ ನಗು
ಪ್ರೀತಿಯ ಅನುಭವವ
ನೀ ನನ್ನ ಮನಕ್ಕೆ
ನೀಡಿದ ಕಾರಣಕೆ…
ಅಂತೆಯೆ ಬೇಸರ
ಪತ್ರದಲ್ಲಿಳಿಸಿದ ನನ್ನ
ಮನದ ಮಾತುಗಳ
ಓದುವ ಮೊದಲೆಯೇ ನೀ
ನನ್ನ ತೊರೆದು ಹೋದುದಕೆ…

ನೋಡು, ಸುತ್ತಲು ಅದೇ
ಮೈಸೋಕುವ ತಣ್ಣನೆಯ ಗಾಳಿ
ಅದೇ ನಾಚಿ ನರ್ತಿಸುವ
ಹಚ್ಚ ಹಸುರಿನ ಹಾಸು
ಜೊತೆಗೊಂದಿಷ್ಟು ನಮ್ಮ
ಗೆಳೆತನದ ಸಲುಗೆಯ ನೆನಪು
ಬಿಟ್ಟರೆ ಹೇಳಲಾಗದೆ ಉಳಿದ
ಪ್ರೀತಿಯ ರೋಧನವಷ್ಟೇ…
ಈ ಗಾಳಿ, ಹಸಿರಿಗೂ ಗೊತ್ತಿತ್ತು
ನಿನ್ನೆಡೆಗಿನ ನನ್ನ ಪ್ರೀತಿಯ ಆಳ
ಆ ಒಂದು ಕಾರಣಕೆ ತಾನೇ
ಇಂದಿಗೂ ಛೇಡಿಸುತಿದೆ ಗಾಳಿ
ಕಿವಿಯಲಿ ಉಸುರಿ
ನಿನ್ನಯ ಹೆಸರಿನ ಜಪಮಾಲ…
ಇಂದಿಗೂ ನನ್ನ ಕಂಡಾಗಲೆಲ್ಲ
ಹುಚ್ಚೆದ್ದು ಕುಣಿಯುತ್ತದೆ ಹಸಿರು
ಇನ್ನೇನು ಕೆಲ ಕ್ಷಣದಲ್ಲಿ
ಮೊಳಗಿಯೇ ಬಿಡುವಂತೆ ಗಟ್ಟಿಮೇಳ…
ಯಾವುದರ ಅರಿವಿರದ ಅವುಗಳ
ನೋಯಿಸಲಾಗದೆ ನಸುನಕ್ಕು ಎದ್ದು,
ಕುಳಿತು, ಸುತ್ತಲು ಓಡಾಡಿ
ಆಲಂಗಿಸಿಕೊಳ್ಳುತ್ತೇನೆ ಮತ್ತದೆ
ಹಳೆಯ ನೆನಪುಗಳ…
ಇದೇ ಜಾಗದಲ್ಲಿ ಅಲ್ಲವೆ
ಹುರುಪಿನಲಿ ನಾ ನಿನಗೊಂದು
ಪ್ರೇಮಪತ್ರವ ಗೀಚಿದ್ದು
ಅರೆ ಹುಚ್ಚಿಯಂತೆ ಅಲೆದು
ಮನದ ಭಾವನೆಗಳ ಹಿಡಿದು
ಅಕ್ಷರರೂಪಕ್ಕಿಳಿಸಿ ಸುಖಿಸಿದ್ದು…
ಬೇಸರವೇನೆಂದರೇ
ಇದೆಲ್ಲದವುಗಳಿಗೆ ನಿಸರ್ಗ
ಸಾಕ್ಷಿಯಾಯಿತೆ ಹೊರತು
ಪತ್ರದಲ್ಲಿನ ಯಾವ ಪದಗಳು
ನಿನ್ನ ಕಣ್ ಸೆರೆಯಾಗಲೇ ಇಲ್ಲ…

ಆದರೂ ನೋವ ಮರೆಮಾಚಿ
ಆಗಾಗ ನಗುತಿರುತ್ತೇನೆ
ದೊರೆತೊಂದು ಹೊಸದಾದ ಅನುಭವಕೆ
ಅದೇ ಕಾರಣಕ್ಕೆ ಇರಬೇಕು
ಆಗಾಗ ಬಂದು ಹೋಗುತಿರುತ್ತೇನೆ
ಜೊತೆಯಾಗಿ ನೀನಿಲ್ಲದಿದ್ದರೂ
ಈ ಹಚ್ಚ ಹಸುರಿನ ಜಾಗಕ್ಕೆ…
ನಾಚಿ ನೀರಾಗುತ್ತೇನೆ ಈಗಲೂ
ಯಾವುದರ ಅರಿವಿರದೆ
ನಿನ್ನ ಹೆಸರ ಪಿಸುಗುಟ್ಟು
ಛೇಡಿಸುವ ಗಾಳಿಯ
ಇಂಪಾದ ನಾದಕ್ಕೆ…
ಅದೇ ಗಾಳಿ, ಅದೇ ಹಸಿರು
ನಿನ್ನೊಡಗಿನ ಅದೇ ಹಳೆಯ
ಗೆಳೆತನದ ಘಮಲು
ಬೇಸರಿಸಿ ಅಡಗಿ ಕುಳಿತಿರುವುದು ಮಾತ್ರ
ನಿನ್ನ ಕಣ್ಣಿಗೆ ಬೀಳಲು ತವಕಿಸಿ
ಸೋತುಹೋದ
ಮಡಚಿಟ್ಟ ಪತ್ರದಲ್ಲಿನ
ನನ್ನ ಮನದಕ್ಷರಗಳು…
0 ಪ್ರತಿಕ್ರಿಯೆಗಳು