ಮಣಿಕಾಂತ್ ಬರೆದಿದ್ದಾರೆ:ಎಲ್ಲಿದ್ದೆ ಇಲ್ಲೀತಂಕ

ಎ ಆರ್ ಮಣಿಕಾಂತ್

ಚಿತ್ರ: ಎಲ್ಲಿಂದಲೋ ಬಂದವರು. ಗೀತೆರಚನೆ: ಪಿ. ಲಂಕೇಶ್.

ಸಂಗೀತ:ವಿಜಯ ಭಾಸ್ಕರ್. ಗಾಯನ:  ಎಸ್.ಪಿ. ಬಾಲಸುಬ್ರಹ್ಮಣ್ಯಂ

ಎಲ್ಲಿದ್ದೆ ಇಲ್ಲೀತಂಕ ಎಲ್ಲಿಂದ ಬಂದ್ಯವ್ವ

ನಿನಕಂಡು ನಾನ್ಯಾಕೆ ಕರಗಿದೆನೋ

ಸುಡುಗಾಡು ಹೈದನ್ನ ಕಂಡವಳು ನೀನ್ಯಾಕೆ

ಈಟೊಂದು ತಾಯಾಗಿ ಮರುಗಿದೆಯೋ  ||ಪ||

ನೂರಾರು ಗಾವುದ ಬಂದಿದ್ದೆ ಕಾಣವ್ವ

ಬಂದಿಲ್ಲ ಅನ್ಸಿತ್ತು ನೋಡಿದರೆ

ಇಲ್ಲೆ ಈ ಮನೆಯಾಗೆ ಹುಟ್ಟಿದ್ದೆ ಅನ್ಸಿತ್ತು

ನಿನ್ನನ್ನ ಆ ಗಳಿಗೆ ನೋಡಿದರೆ  ||1||

ಕನ್ನಡ ಸಾಂಸ್ಕೃತಿಕ ಜಗತ್ತಿನ `ರೆಬೆಲ್ಸ್ಟಾರ್’ ಎಂದೇ ಹೆಸರಾಗಿದ್ದವರು ಪಿ. ಲಂಕೇಶ್. ಅವರ ಮಾತು- ಬರಹ  ಎರಡರಲ್ಲೂ ನೇರ ಮಾತಿಕೆಯಿತ್ತು ನಿಷ್ಠುರತೆಯಿತ್ತು. ಅನಿಸಿದ್ದನ್ನು ಮುಲಾಜಿಲ್ಲದೆ ಹೇಳುವ ಧೈರ್ಯವಿತ್ತು. ನಡೆ-ನುಡಿಯಲ್ಲಿ ತುಂಬಾ ಸರಳವಾಗಿದ್ದರು ಲಂಕೇಶ್. ತಮ್ಮ ವಾರಿಗೆಯ ಯಾರಾದರೊಬ್ಬರು ಒಂದೊಳ್ಳೆಯ ಕಥೆಯನ್ನೋ, ಕವಿತೆ/ ಕಾದಂಬರಿಯನ್ನೋ ಬರೆದುಬಿಟ್ಟರೆ, ಅವರನ್ನು ಮೀರಿಸುವಂತೆ ಬರೆಯಬೇಕೆಂಬ ತಹತಹ ಲಂಕೇಶರಿಗೆ ಆ ಕ್ಷಣದಲ್ಲೇ ಬಂದುಬಿಡುತ್ತಿತ್ತು. ನಂತರದ ಕೆಲವೇ ದಿನಗಳಲ್ಲಿ ಈ ಹಟದಲ್ಲಿ ಲಂಕೇಶ್ ಗೆದ್ದೂಬಿಡುತ್ತಿದ್ದರು.

ಇಂಥ ಹಿನ್ನೆಲೆಯ ಲಂಕೇಶರು, ತಮ್ಮ ತಹತಹದ ವ್ಯಕ್ತಿತ್ವಕ್ಕೆ ಸಹಜ ಅನ್ನಿಸುವ ರೀತಿಯಲ್ಲೇ ಸಿನಿಮಾ ಲೋಕಕ್ಕೆ ಬಂದರು. ಅವರು ನಿರ್ದೇಶಿಸಿದ ಮೊದಲ ಚಿತ್ರ `ಪಲ್ಲವಿ’. ಇದಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂದು ರಾಷ್ಟ್ರಪ್ರಶಸ್ತಿ ಬಂತು. ಜತೆಗೆ, ಲಂಕೇಶರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ದಕ್ಕಿತು. ಮುಂದೆ ` ಅನುರೂಪ’, `ಖಂಡವಿದೆಕೋ ಮಾಂಸವಿದೆಕೋ’ ಹಾಗೂ ` ಎಲ್ಲಿಂದಲೋ ಬಂದವರು’ ಚಿತ್ರಗಳನ್ನು ಲಂಕೇಶ್ ನಿರ್ದೇಶಿಸಿದರು.


ಈ ಪೈಕಿ `ಎಲ್ಲಿಂದಲೋ ಬಂದವರು’ ಚಿತ್ರಕ್ಕೆ ಸೂಪರ್ಬ್ ಎಂದು ಕಣ್ಮುಚ್ಚಿಕೊಂಡು ಹೇಳಬಹುದಾದಂಥ ಮೂರು ಹಾಡುಗಳನ್ನು ಬರೆದರು ಲಂಕೇಶ್. ಅವೆಂದರೆ-`ಕೆಂಪಾದವೋ ಎಲ್ಲ ಕೆಂಪಾದವೋ’, `ಎಲ್ಲಿದ್ದೆ ಇಲ್ಲೀತಂಕ ಎಲ್ಲಿಂದ ಬಂದ್ಯವ್ವ’ ಮತ್ತು ` ಕರಿಯವ್ನ ಗುಡಿತಾವ ಅರಳ್ಯಾವೆ ಹೊಸಹೂವು…’ ಚಿತ್ರ ಸಾಹಿತಿಯಾಗಿ ಲಂಕೇಶ್ ಅದೆಂಥ ಪ್ರಚಂಡ  ಎಂಬುದಕ್ಕೆ ಇವತ್ತಿಗೂ ಈ ಹಾಡುಗಳೇ ಸಾಕ್ಷಿ ಹೇಳುತ್ತವೆ. ಪ್ರತಿ ಬಾರಿ ಕೇಳಿದಾಗಲೂ ಹೊಸದೆಂಬಂತೆ ಕಾಣಿಸುವುದು ಲಂಕೇಶರ ಹಾಡುಗಳ ವೈಶಿಷ್ಟ್ಯ. ಕನ್ನಡದ ಅತ್ಯುತ್ತಮ ಗೀತೆಗಳ ಪಟ್ಟಿಯಲ್ಲಿ ಜಾಗ ಪಡೆದುಕೊಂಡಿರುವ ಈ ಹಾಡುಗಳನ್ನು ಲಂಕೇಶ್ ಎಷ್ಟು ದಿನಗಳಲ್ಲಿ ಬರೆದರು? ಎಲ್ಲಿ ಬರೆದರು? ಬರೆದ ನಂತರ ಹೇಗೆಲ್ಲಾ ತಿದ್ದುಪಡಿ ತಂದರು? ಎಂಟೇ ಸಾಲುಗಳ `ಎಲ್ಲಿದ್ದೆ ಇಲ್ಲೀತಂಕ’ ಹಾಡಿನಲ್ಲಿ ಎಲ್ಲರ ಮನದ ನೋವನ್ನೂ ಮೀಟುವಂಥ ಪದಗಳನ್ನು ಅದು ಹೇಗೆ ತಂದಿಟ್ಟರು ಲಂಕೇಶ್?

ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಹೇಳಿದವರು, ಲಂಕೇಶ್ ನಿರ್ದೇಶಿಸಿದ ನಾಲ್ಕು ಚಿತ್ರಗಳಿಗೂ ಸಹಾಯಕ ನಿರ್ದೇಶಕರಾಗಿದ್ದ ರಮೇಶ್ ಕಾಮತ್. ಹಾಡುಗಳು ಹುಟ್ಟಿದ ಕಥೆಯನ್ನು ಅವರ ಮಾತುಗಳಲ್ಲೇ ಕೇಳೋಣ: ಓವರ್ ಟು ರಮೇಶ್ ಕಾಮತ್.

***

70ರ ದಶಕದ ಕೊನೆಯ ಭಾಗ ಅಂದರೆ- ಕಮ್ಯೂನಿಸ್ಟ್ ಪಕ್ಷ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಸಂದರ್ಭ. ಆ ದಿನಗಳಲ್ಲಿ ಕಮ್ಯುನಿಸ್ಟ್ ಪಕ್ಷ ಮತ್ತು ಸಿದ್ಧಾಂತವನ್ನು ಆರಾಸುತ್ತಿದ್ದ ಹಲವರು ತಮಿಳು ಹಾಗೂ ಮಲಯಾಳಂನಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾದರು. ಅಂಥವರಲ್ಲಿ ಕೇರಳದ ಸಿಪಿಎಂ ನಾಯಕ ಜಯಪಾಲ್ ಮೆನನ್ ಕೂಡ ಒಬ್ಬರು. ಕ್ರಾಂತಿಕಾರಿ ಸಂದೇಶದ ಒಂದು ಸಿನಿಮಾವನ್ನು ಕನ್ನಡದಲ್ಲೂ ತಯಾರಿಸಬೇಕು ಎಂಬ ಆಸೆ ಅವರದಿತ್ತು. ಕರ್ನಾಟಕದಲ್ಲಿ ಸಿಪಿಎಂ ಪಕ್ಷವನ್ನು ಬೆಂಬಲಿಸುತ್ತಿದ್ದ ಮೋಹನ್ಕೊಂಡಜ್ಜಿಯವರಲ್ಲಿ ಈ ವಿಷಯ ಹೇಳಿಕೊಂಡ ಮೆನನ್. ಹಿಂದೆಯೇ  `ಲಂಕೇಶ್ ಅವರಿಂದ ಈ ಚಿತ್ರದ ನಿರ್ದೇಶನ ಮಾಡಿಸೋಣ’ ಎಂದರು.

ಮುಂದೆ ಲಂಕೇಶ್ ಅವರನ್ನು ಮೋಹನ್ ಕೊಂಡಜ್ಜಿ ಅವರೊಂದಿಗೆ ಭೇಟಿಮಾಡಿದ ಜಯಪಾಲ್ ಮೆನನ್-`ಎರಡು ಲಕ್ಷ ರೂ. ನಮ್ಮ ಬಜೆಟ್. ಇಷ್ಟರಲ್ಲಿ ಒಂದು ಒಳ್ಳೆಯ ಸಿನಿಮಾ ಮಾಡಿಕೊಡಿ. ಕ್ರಾಂತಿಕಾರಿ ವಿಷಯ, ಕ್ರಾಂತಿಗೆ ಸಂಬಂಸಿದ ಒಂದು ಹಾಡು ಸಿನಿಮಾದಲ್ಲಿ ಇರಬೇಕು’ ಅಂದರು. ಅದಕ್ಕೆ ಲಂಕೇಶ್- `ಬರಿಯ ಕ್ರಾಂತಿ ವಿಷಯದಿಂದಲೇ ಸಿನಿಮಾ ಮಾಡೋಕಾಗಲ್ಲ. ನಿರ್ದೇಶನದಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಿ. ನೀವು ಹೇಳಿರುವ ಅಂಶಕ್ಕೂ ಇಂಫಾರ್ಟೆನ್ಸ್ ಕೊಟ್ಟು ಸಿನಿಮಾ ಮಾಡ್ತೇನೆ’ ಅಂದರು. ಈ ಮಾತಿಗೆ ನಿರ್ಮಾಪಕರೂ ಒಪ್ಪಿದರು.

ಯಾವುದೇ ವಿಷಯವಾಗಲಿ, ಇದ್ದಕ್ಕಿದ್ದಂತೆಯೇ ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಲಂಕೇಶ್. `ಎಲ್ಲಿಂದಲೋ ಬಂದವರು’ ಸಿನಿಮಾದ ವಿಷಯದಲ್ಲೂ  ಹಾಗೇ ಆಯಿತು. ನಿರ್ಮಾಪಕರೊಂದಿಗೆ ಮಾತಾಡಿದ ನಂತರ, ಒಂದು ದಿನ ತುಂಬಾ ಅವಸರದಲ್ಲಿ ಪತ್ರಿಕಾಗೋಷ್ಠಿ ಕರೆದರು. ಅಲ್ಲಿ -`ಎಲ್ಲಿಂದಲೋ ಬಂದವರು’ ಚಿತ್ರದ ಬಗ್ಗೆ ವಿವರಣೆ ನೀಡುತ್ತಾ ಈ ಚಿತ್ರಕ್ಕೆ ರಾಜೀವ್ ತಾರಾನಾಥ್ ಸಂಗೀತ ನೀಡಲಿದ್ದಾರೆ ಎಂದು ಘೋಷಿಸಿಬಿಟ್ಟರು. ಒಂದೆರಡು ದಿನಗಳ ಬಳಿಕ, ಗ್ರಾಮೀಣ ಹಿನ್ನೆಲೆಯ ಕಥೆ ಹೊಂದಿರುವ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಲು ರಾಜೀವ್ ತಾರಾನಾಥ್ ಸೂಕ್ತ ವ್ಯಕ್ತಿಯಲ್ಲ ಅನ್ನಿಸಿತು. ತಕ್ಷಣವೇ ಅವರ ಮನಸ್ಸಿಗೆ ಬಂದವರು ವಿಜಯಭಾಸ್ಕರ್. ಆದರೆ, ಈ ವಿಷಯವನ್ನು ರಾಜೀವ್ ತಾರಾನಾಥ್ಗೆ ಹೇಳಲೇ ಇಲ್ಲ.

ಅವತ್ತಿಗೆ, ವಿಜಯಭಾಸ್ಕರ್, ದೊಡ್ಡ ಹೆಸರು ಮಾಡಿದ್ದರು. ತರಾತುರಿಯಲ್ಲೇ  ಅವರನ್ನು ಫೋನ್ನಲ್ಲಿ ಸಂಪರ್ಕಿಸಿದ ಲಂಕೇಶ್, ತಮ್ಮ ಹೊಸ ಚಿತ್ರದ ವಿವರ ಹೇಳಿದರು. ಮುಂದುವರಿದು-ನಿಮ್ಗೆ 6000 ರೂ. ಸಂಭಾವನೆ ಕೊಡ್ತೇನೆ. ಅಷ್ಟರಲ್ಲೇ ನನಗೆ ಹಾಡುಗಳ ಧ್ವನಿಮುದ್ರಣ ಮಾಡಿಸಿಕೊಡಿ…’ ಅಂದರು. ಲಂಕೇಶರ ಮಾತುಗಳಲ್ಲಿ ಅದೆಂಥ ಮೋಡಿಯಿತ್ತೋ ಕಾಣೆ: ವಿಜಯ ಭಾಸ್ಕರ್, ಮರುಮಾತಿಲ್ಲದೆ ಒಪ್ಪಿಕೊಂಡರು. ನಂತರ ಅವರು-`ರೆಕಾರ್ಡಿಂಗ್ ಯಾವತ್ತು ಇಟ್ಕೊಳ್ಳೋಣ ಸಾರ್? ಅಂದರೆ- `ಶುಕ್ರವಾರ ಇಟ್ಕೊಳ್ಳಿ’ ಅಂದೇ ಬಿಟ್ಟರು.

ನೋಡಿದರೆ- ಅವತ್ತಾಗಲೇ ಮಂಗಳವಾರ. ನನಗೆ ಗಾಬರಿಯಾಯಿತು. ಹಾಗಾಗಿಯೇ ಕೇಳಿದೆ: `ಇದೇನ್ಸಾರ್? ಇನ್ನೂ ಹಾಡು ಬರೆದಿಲ್ಲ. ಉಳಿದಿರೋದು ಮೂರೇ ದಿನ. ಅಷ್ಟರೊಳಗೆ ನೀವು ಹಾಡು ಬರೀಬೇಕು. ಆ ಮೇಲೆ ಅದನ್ನ ಮದ್ರಾಸ್ಗೆ ತಗೊಂಡು ಹೋಗಬೇಕು… ಕಷ್ಟ ಅಲ್ವಾ?’ ಈ ಮಾತಿಗೆ ಒಂಥರಾ ಉಡಾಫೆಯ ನಗೆಯಲ್ಲಿ ಲಂಕೇಶ್ ಹೇಳಿದರು: `ಅಯ್ಯೋ ಬಿಡ್ರಿ, ಅದೇನ್ಮಹಾ? ಬೇಗ ಬರೆದುಕೊಡ್ತೇನೆ…’

ನೋಡನೋಡುತ್ತಲೇ ಬುಧವಾರ ಕಳೆಯಿತು. ಗುರುವಾರ ಗಾಬರಿಯಿಂದಲೇ ಅವರಲ್ಲಿ ಹಾಡಿನ ಬಗ್ಗೆ ಪ್ರಸ್ತಾಪಿಸಿದೆ. ಅವರು ತಕ್ಷಣವೇ `ಈಗಲೇ ಬರೀತೀನಿ ನೋಡ್ರಿ’ ಎಂದು ಕೂತೇಬಿಟ್ರು. ನಂತರದ ಅರ್ಧಗಂಟೆಯಲ್ಲಿ `ಕೆಂಪಾದವೋ ಎಲ್ಲ ಕೆಂಪಾದವೋ’ ಹಾಡು ಬರೆದೂಬಿಟ್ಟರು. ಈ ಪವಾಡ ನಡೆದದ್ದು ಗೋವಿಂದಪ್ಪ ರಸ್ತೆಯಲ್ಲಿದ್ದ ಅವರ ಮನೆಯಲ್ಲಿ.

ನಂತರ -`ಬನ್ನಿ ಕಾಮತ್ರೇ. ಒಂದು ರೌಂಡ್ ಗುಂಡು ಹಾಕಿ ಬರೋಣ. ನಂತರ ಬಾಕಿ ಇರುವ ಇನ್ನೆರಡು ಹಾಡು ಬರೆದುಕೊಡ್ತೇನೆ’ ಅಂದರು. ಇಬ್ಬರೂ ಜಯನಗರದ ಸೌತ್ಎಂಡ್ ಸರ್ಕಲ್ ಬಳಿ ಇದ್ದ ಗಂಧರ್ವ ಬಾರ್ಗೆ ಹೋದೆವು ಅಲ್ಲಿಂದ ಸೀದಾ ಮಾರ್ಕೆಟ್ಗೆ ಸಮೀಪವಿರುವ ಎನ್.ಎಂ.ಎಚ್. ಹೋಟೆಲಿಗೆ ಬಂದೆವು. ಅಲ್ಲಿ ಕೂತು ಗಂಟೆಗೆ ಒಂದರಂತೆ  `ಎಲ್ಲಿದ್ದೆ ಇಲ್ಲೀತಂಕ…’ ಹಾಗೂ `ಕರಿಯವ್ನ ಗುಡಿತಾವು…’ ಹಾಡುಗಳನ್ನು ಬರೆದರು.

ಈ ಪೈಕಿ `ಎಲ್ಲಿದ್ದೆ ಇಲ್ಲೀತಂಕ’ ಹಾಡು ಬರೆದದ್ದು ಯಾರ ಮೇಲೆ? ಈ ಹಾಡು ಬರೆವ ಸಂದರ್ಭದಲ್ಲಿ ಲಂಕೇಶರ ಮನಸಲ್ಲಿ ಇದ್ದದ್ದು ಯಾರ ಚಿತ್ರ? ಇಂಥ ಕುತೂಹಲದ ಪ್ರಶ್ನೆಗೆ ಮುಂದೊಂದು ದಿನ ಲಂಕೇಶ್ ಅವರೇ ಹೀಗೆಂದಿದ್ದರು: ನನ್ನ ಗೆಳತಿಯೊಬ್ಬಳಿದ್ದಳು. ಆಕೆ ಅದೊಮ್ಮೆ ಇದ್ದಕ್ಕಿದ್ದಂತೆ ದೂರಾಗಿದ್ದಳು. ಎರಡು ವರ್ಷ ಕಾಲ ಫೋನ್ ಇಲ್ಲ. ಪತ್ರವೂ ಇಲ್ಲ. ಸುದ್ದಿಯೂ ಇಲ್ಲ. ಇಂಥ ಗೆಳತಿ `ಎಲ್ಲಿಂದಲೋ ಬಂದವರು’ ಸಿನಿಮಾ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಿಕ್ಕಳು. ಆ ಸಂದರ್ಭದಲ್ಲಿ ಅವಳಿಗೆ ಕೇಳಬೇಕಿದ್ದ ಪ್ರಶ್ನೆ; ಅವಳಿಗಾಗಿ ಕಾತರಿಸಿದ ಸಂದರ್ಭದಲ್ಲಿ ನನಗೆ ಉಂಟಾದ ಭಾವನೆ, ನನ್ನ ತಹ ತಹ, ಅವಳನ್ನು ದಿಢೀರ್ ಕಂಡಾಗ ನನ್ನೊಳಗೆ ಉಂಟಾದ ಸಂಭ್ರಮವನ್ನೇ ಹಾಡಾಗಿಸಿದೆ…

ಅವತ್ತೇ ರಾತ್ರಿ ಹಾಡುಗಳೊಂದಿಗೆ ನಾನು ಮದ್ರಾಸ್ಗೆ ಹೋದೆ. ವಿಜಯ ಭಾಸ್ಕರ್ ಅವರಿಗೆ ಹಾಡುಗಳನ್ನು ಕೊಟ್ಟೆ. ಟ್ಯೂನ್ ಮಾಡಿದ ಅವರು `ಎಲ್ಲಿದ್ದೆ ಇಲ್ಲೀತಂಕ’ ಹಾಡಿನ ಒಂದೆರಡು ಪದಗಳನ್ನು ಬದಲಿಸಲಿಕ್ಕಾಗಿ ಲಂಕೇಶರಿಗೆ ಟ್ರಂಕ್ಕಾಲ್ ಮಾಡಿದರು. ಪರಿಣಾಮ ಹಾಡಿನ ಕಡೆಯ ಸಾಲು ಮೊದಲು-`ನಿನ್ನ ನಾನವತ್ತು ನೋಡಿದರೆ’ ಎಂದಿದ್ದದ್ದು, ಫೋನ್ ಮಾತುಕತೆಯ ನಂತರ- `ನಿನ್ನನ್ನ ಆ ಗಳಿಗೆ ನೋಡಿದರೆ’ ಎಂದು -`ಬದಲಾಯಿತು…

ಮುಂದಿನ ಕತೆ ಕೇಳಿ: ಮೊದಲು ತಮ್ಮನ್ನು ಸಂಗೀತ ನಿರ್ದೇಶಕ ಎಂದು ಹೆಸರಿಸಿ, ನಂತರ ತಮಗೆ ಸೌಜನ್ಯಕ್ಕೂ ವಿಷಯ ತಿಳಿಸದೆ ವಿಜಯ ಭಾಸ್ಕರ್ ಅವರಿಂದ ಸಂಗೀತ ನಿರ್ದೇಶನ ಮಾಡಿಸಿದರೆಂದು ರಾಜೀವ್ ತಾರಾನಾಥ್  ಫಿಲಂ ಛೇಂಬರ್ಗೆ ದೂರು ನೀಡಿದರು. ಆಗ ಛೇಂಬರ್ ಅಧ್ಯಕ್ಷರಾಗಿದ್ದವರು ಭಕ್ತವತ್ಸಲಂ. ದೂರಿನ ವಿಷಯವಾಗಿ ಲಂಕೇಶರಿಗೆ ನೋಟಿಸ್ ಬಂತು. ಈ ಮಹರಾಯರು ಅದಕ್ಕೆ ಉತ್ತರಿಸಲೇ ಇಲ್ಲ. ರಾಜೀವ ತಾರಾನಾಥ್ ಪರವಾಗಿ ಫ್ರೊಫೆಸರ್ ಬಿ.ಕೆ. ಚಂದ್ರಶೇಖರ್ ವಾದಿಸುತ್ತಿದ್ದರು. ಆಗಷ್ಟೇ ಇಂಗ್ಲೆಂಡ್ನಲ್ಲಿ ಕಾನೂನು ಪದವಿ ಪಡೆದು ಬಂದಿದ್ದ ಬಿ.ಕೆ.ಸಿ,ವಾದ ಮಂಡಿಸುವಾಗ ಇಂಗ್ಲೆಂಡಿನ ಕಾನೂನನ್ನೇ ಉದಾಹರಿಸುತ್ತಿದ್ದರು.  ಲಂಡನ್ನ ಕಾನೂನು ಭಾರತದಲ್ಲಿ ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಿದ್ದಾಯ್ತು. ರಾಜೀವ್ ತಾರಾನಾಥ್ ಸಂಗೀತ ನಿರ್ದೇಶಕರೆಂದು ಈ ಹಿಂದೆ ಪತ್ರ ಬರೆದು ತಿಳಿಸಿರಲಿಲ್ಲ. ಹಾಗಾಗಿ ಕೇಸ್ ನಿಲ್ಲಲಿಲ್ಲ.

ಈ ಸಿನಿಮಾಕ್ಕೆ ನಾನು ಮನಸ್ಸಂತೋಷಕ್ಕಾಗಿ ಕೆಲಸ ಮಾಡಿದೆ. ಅದು ಲಂಕೇಶ್ ಅವರಿಗೂ ಗೊತ್ತಿತ್ತು.  ಅವರು-`ತಾವು ಕಟ್ಟಿದ್ದ ಎಚ್ಎಂಟಿ ವಾಚ್ ಕೊಟ್ಟು, ಇದು ನನ್ನ ಪ್ರೀತಿಯ ಕಾಣಿಕೆ ಇಟ್ಟುಕೊಳ್ಳಿ’ ಅಂದರು…

ಇಷ್ಟು ಹೇಳಿ ಹಾಡಿನ ಕಥೆಗೆ ಮಂಗಳ ಹಾಡಿದರು ರಮೇಶ್ ಕಾಮತ್.

ಅಂದಹಾಗೆ, `ಎಲ್ಲಿಂದಲೋ ಬಂದವರು’ ಸಿನಿಮಾದ ಸಂಬಂಧವಾಗಿ ನಡೆದ ಅಷ್ಟೂ ಪತ್ರ ವ್ಯವಹಾರಗಳ ದಾಖಲೆ ಈಗಲೂ ಮೋಹನ್ ಕೊಂಡಜ್ಜಿ ಅವರ ಬಳಿ ಇದೆ. ಆ ಸಂಗ್ರಹದಲ್ಲಿ ಲಂಕೇಶರ  ಅಕ್ಷರದಲ್ಲಿ ಅರಳಿರುವ ಹಾಡುಗಳ ಹಸ್ತಪ್ರತಿ  ಕೂಡ ಇದೆ…( ಹಾಡಿನ ಕುರಿತು ಮಾಹಿತಿ ನೀಡಿದ ಅವರಿಗೆ ಧನ್ಯವಾದ.)

ಲಂಕೇಶರ ಮನದ ಅಷ್ಟೂ ತಳಮಳಕ್ಕೆ ಕನ್ನಡಿ ಹಿಡಿಯುವಂಥ ಸಂಗೀತ ನೀಡಿದ ವಿಜಯಭಾಸ್ಕರ್ ಹಾಗೂ `ಎಲ್ಲಿದ್ದೆ ಇಲ್ಲೀತಂಕ’ ಗೀತೆಯನ್ನು ನೂರು ಬಾರಿ ಕೇಳಿದರೂ ಕೇಳುತ್ತಲೇ ಇರಬೇಕು ಎಂಬಂತೆ ಹಾಡಿದ ಎಸ್.ಪಿ.ಬಿ. ಯವರನ್ನು ಎಷ್ಟು ಸ್ಮರಿಸಿದರೂ ಸಾಲದು, ಅಲ್ಲವೆ.

‍ಲೇಖಕರು avadhi

April 10, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

೧ ಪ್ರತಿಕ್ರಿಯೆ

 1. Vasanth

  Sir,
  really great
  What a talent-Lankesh sir can only write these sorts of songs.
  Good write up .Thanks

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: