ಮಣಿಕಾಂತ್ ಬರೆದಿದ್ದಾರೆ: ‘ಆಪ್ತಮಿತ್ರ’ದ ಹಾಡು

6213_1079515355773_1462958320_30205965_5660699_n111ಎ ಆರ್ ಮಣಿಕಾಂತ್

ಚಿತ್ರ: ಆಪ್ತಮಿತ್ರ. ಗಾಯನ: ಮಧು ಬಾಲಕೃಷ್ಣ

ಗೀತೆರಚನೆ: ಕವಿರಾಜ್. ಸಂಗೀತ: ಗುರುಕಿರಣ್

ಕಣಕಣದೆ ಶಾರದೆ, ಕಲೆತಿಹಳು ಕಾಣದೆ

ವನವನದಲ್ಲೂ ಕುಹುಕುಹು ಗಾನ

ಝರಿಝರಿಯಲ್ಲೂ  ಜುಳುಜುಳು ಧ್ಯಾನ

ವಿಧವಿಧದಾ ನಾದ ಅವಳು ನುಡಿಸುತಿಹಳು ||ಪ||

ಜನನಕು ಹಾಡು ಮರಣಕು ಹಾಡು ಯಾರೀ ಛಲಮಗಳು

ಪ್ರತಿ ಎದೆಯಾಳದಲು ಲಯ ತಾಳ ಗೀತೆ ಬದುಕಿನಲು

ಕೊರಳಿನಲಿ ಕೊಳಲಿನಲಿ ಚೆಲುವಿನಲಿ ಒಲವಿನಲಿ

ಒಲಿದು ಉಲಿದು ನಲಿದು ಹರಿದು ಬರುವುದು ಶ್ರುತಿಲಯವು ||1||

ಕುಲ ನೆಲದಾಚೆ ಅರಿಯುವ ಭಾಷೆ ಒಂದೇ ಜಗದೊಳಗೆ

ಅವರಿವರಿಲ್ಲ ಸರಿಸಮರೆಲ್ಲ ಸಪ್ತಸ್ವರಗಳಿಗೆ

ನಿಪಮಪನಿ ಸನಿಪನಿಸ ಗಸನಿಸಗ

ಮಪಮಪಗ ನಿಮಪಮ ಸನಿಪನಿ ಗಸನಿಸ ||2||

Apthamitra

`ಆಪ್ತಮಿತ್ರ’ ಚಿತ್ರದ ಈ ಸನ್ನಿವೇಶ ನೆನಪಿಸಿಕೊಳ್ಳಿ. ಆ ಚಿತ್ರದಲ್ಲಿ ಪ್ರೇಮಾ ಸೆಕೆಂಡ್ ಹೀರೊಯಿನ್. ಆಕೆಯ ತಾತನ ಪಾತ್ರಧಾರಿ ಶಿವರಾಂ. ಈ ತಾತ-ಮೊಮ್ಮಗಳು, ನಾಯಕ ರಮೇಶ್ ಮನೆಯ ಔಟ್ಹೌಸ್ನಲ್ಲಿ ಇರುತ್ತಾರೆ. ಅದೊಂದು ದಿನ ಬೆಳ್ಳಂಬೆಳಗ್ಗೆಯೇ ಹಾಮರ್ೋನಿಯಂ ನುಡಿಸುತ್ತಾ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಿರುತ್ತಾರೆ ಪ್ರೇಮಾ. ತುಸು ಕರ್ಕಶ ಅನ್ನುವಂಥ ಸಂಗೀತ ಹಾಗೂ ಹಾಡು ಕೇಳಿದ ಕಥಾನಾಯಕ ರಮೇಶ್ರ ಗೆಳೆಯ ವಿಷ್ಣುವರ್ಧನ್- `ಅಯ್ಯೋ, ಇದ್ಯಾರಪ್ಪಾ ಬೆಳಗ್ಗೆ ಬೆಳಗ್ಗೇನೇ ರಾಗ ಶುರುಮಾಡಿ ನನ್ನ ನಿದ್ರೇನ ಹಾಳು ಮಾಡಿದರಲ್ಲ’ ಎಂದುಕೊಂಡೇ ಹಾಸಿಗೆಯಲ್ಲಿ ಹೊರಳುತ್ತಿರುತ್ತಾರೆ. ಆ ನಂತರದಲ್ಲೂ ಆ ಹಾಡಾಗಲಿ, ಸಂಗೀತವಾಗಲಿ ನಿಲ್ಲುವುದಿಲ್ಲ. ಒಂದೆಡೆ ಕರ್ಕಶ ಸಂಗೀತದ ಹಿಂಸೆ, ಇನ್ನೊಂದೆಡೆ ಬೆಳಗಿನ ನಿದ್ರೆ ಹಾಳಾಯಿತು ಎಂಬ ಸಿಟ್ಟಿನಿಂದ ಎದ್ದು ಬಂದ ವಿಷ್ಣುವರ್ಧನ್ಗೆ, ಆ ಸಂಗೀತ ಮತ್ತು ಹಾಡು ಔಟ್ಹೌಸ್ನಿಂದ ಕೇಳಿಬರುತ್ತಿದೆ ಎಂದು ಅರ್ಥವಾಗುತ್ತದೆ.

ಸಿಡಿಮಿಡಿಯಿಂದಲೇ ಶಿವರಾಂ ಅವರನ್ನು ಹೊರಗೆ ಕರೆಯುವ ವಿಷ್ಣುವರ್ಧನ್ ಆಗ್ರಹದ ಧ್ವನಿಯಲ್ಲಿ ಹೀಗೆ ಹೇಳುತ್ತಾರೆ: `ನೋಡಿ, ಈ ಮನೆಯಲ್ಲೇ ವಾಸಕ್ಕೆ ಇರಬೇಕು ಅನ್ನುವುದಾದರೆ, ಇವತ್ತಿಂದಲೇ ಈ ಸಂಗೀತ ಕಾರ್ಯಕ್ರಮವನ್ನು ನೀವು ಬಂದ್ ಮಾಡಬೇಕು. ಇಲ್ಲ ಅಂದರೆ…’

ಈ ಮಾತಿನಿಂದ ವ್ಯಗ್ರಳಾದ ಪ್ರೇಮಾ- `ಬೇಕಾದರೆ ನಾವು ಈ ಜಾಗ ಬಿಟ್ಟು ಹೋಗ್ತೇವೆ. ಆದರೆ ಸಂಗೀತವನ್ನು ಬಿಡುವುದಿಲ್ಲ. ಅದರ ಮಹತ್ವ ನಿಮಗೇನು ಗೊತ್ತು? ಸಂಗೀತದ ಗಂಧ-ಗಾಳಿಯ ಪರಿಚಯವೂ ಇಲ್ಲದವರ ಬಳಿ ಮಾತಾಡಿ ಏನು ಪ್ರಯೋಜನ?’ ಎಂದೆಲ್ಲ ಕಟುವಾಗಿ ಮಾತನಾಡಿ ಹೋಗಿಬಿಡುತ್ತಾಳೆ.

ವಿಷ್ಣುವರ್ಧನ್ ಏನೊಂದೂ ಮಾತನಾಡದೆ ಮನೆಗೆ ಹಿಂದಿರುಗುತ್ತಾರೆ. ಒಂದೆರಡು ನಿಮಿಷದ ನಂತರ ಹಾಡೊಂದು ಅಲೆಅಲೆಯಾಗಿ ಕೇಳಿಬರುತ್ತದೆ- `ಕಣ ಕಣದೆ ಶಾರದೆ, ಕಲೆತಿಹಳು ಕಾಣದೇ…’ ಹಾಡು ಮತ್ತು ಸಂಗೀತದ ಧ್ವನಿ ಕೇಳಿದ ನಾಯಕಿ, ಇದೆಲ್ಲಿಂದ ಬರುತ್ತಿದೆ ಈ ಮಧುರ ರಾಗಾಲಾಪ ಎಂದು ತಿಳಿಯಲು ಓಡುತ್ತಾ ಮೆಟ್ಟಿಲೇರಿ ಹಾಡು ಕೇಳಿಸುತ್ತಿದ್ದ ಕೋಣೆಗೆ ಬಂದವಳೇ ಬೆಕ್ಕಸಬೆರಗಾಗಿ ನಿಂತುಬಿಡುತ್ತಾಳೆ. ಏಕೆಂದರೆ, ಕಥಾನಾಯಕ ವಿಷ್ಣುವರ್ಧನ್, ಹಾರ್ಮೋನಿಯಂ ಬಾರಿಸಿಕೊಂಡು ತನ್ಮಯನಾಗಿ ಹಾಡುತ್ತಿರುತ್ತಾನೆ. ಕೆಲವೇ ನಿಮಿಷಗಳ ಹಿಂದಷ್ಟೇ- `ನಿಮಗೆ ಸಂಗೀತದ ಮಹಿಮೆ ಗೊತ್ತಿಲ್ಲ, ಸಂಗೀತದ ಗಂಧ-ಗಾಳಿ ಕೂಡ ಇಲ್ಲ ಎಂದು ಟೀಕಿಸಿದ್ದೆನಲ್ಲ’ ಎಂದು ನೆನಪು ಮಾಡಿಕೊಂಡು ಪ್ರೇಮಾ ಕಂಗಾಲಾದ ಕ್ಷಣದಲ್ಲಿಯೇ ನಾಯಕ ತಬಲಾ ಕೈಗೆತ್ತಿಕೊಳ್ಳುತ್ತಾನೆ. ನಂತರದಲ್ಲಿ ಸಂಗೀತದ ಒಂದೊಂದೇ ಸಾಧನಕ್ಕೆ ಹೊರಳಿಕೊಳ್ಳುತ್ತಾನೆ. ಹಾಡು ಮುಗಿಯುತ್ತಿದ್ದಂತೆಯೇ- `ನಿಮ್ಮ ಸಂಗೀತ ಜ್ಞಾನದ ಬಗ್ಗೆ ತಿಳಿಯದೇ ನಾನು ದುಡುಕಿ ಮಾತಾಡಿಬಿಟ್ಟೆ. ದಯವಿಟ್ಟು ಕ್ಷಮಿಸಿ’ ಎನ್ನುತ್ತಾಳೆ ನಾಯಕಿ…

120px-Apthamitraಅಂದಹಾಗೆ, ಈ ಹಾಡು ಬರೆದವರು ಕವಿರಾಜ್. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಯಡೂರು ಎಂಬ ಗ್ರಾಮದವರಾದ ಕವಿರಾಜ್, ಓದಿದ್ದು ಬಿ.ಎಸ್ಸಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಮುಗಿಸಿದ ಕವಿರಾಜ್, ಕಾಲೇಜು ದಿನಗಳಲ್ಲಿ ಒಂದಿಷ್ಟು ಪ್ರೇಮಗೀತೆಗಳನ್ನು ಬರೆದರು ನಿಜ. ಆದರೆ ಅವುಗಳನ್ನು ಹುಡುಗಿಯರಿಗೆ ಕೊಡುವುದಿರಲಿ, ತೋರಿಸುವ ಸಾಹಸವನ್ನೂ ಮಾಡಲಿಲ್ಲ. ಕಡೆಗೊಂದು ದಿನ, ಧೈರ್ಯ ಮಾಡಿ ಆಪ್ತಮಿತ್ರನೊಬ್ಬನಿಗೆ ತೋರಿಸಿದರು. ಆತ- `ವಾಹ್ , ತುಂಬಾ ಚೆನ್ನಾಗಿ ಬರೆದಿದ್ದೀ ಕಣೋ’ ಎಂದ. ಒಂದೆರಡು ದಿನಗಳ ನಂತರ ಕವನವೊಂದನ್ನು ಕಾಲೇಜಿನ ನೋಟಿಸ್ ಬೋಡರ್್ಗೇ ಹಾಕಿಬಿಟ್ಟ. ಪರಿಣಾಮ ಸಹ್ಯಾದ್ರಿ ಕಾಲೇಜಿನ ಅಂಗಳದಲ್ಲಿ  ವಲ್ಡರ್್ ಫೇಮಸ್ ಆಗಿ ಹೋದರು ಕವಿರಾಜ್. ನಂತರದ ದಿನಗಳಲ್ಲಿ ಅವರ ಸಹಪಾಠಿಗಳು ಮಾತ್ರವಲ್ಲ, ಅಧ್ಯಾಪಕರು ಕೂಡ- `ನೀವು ಚೆನ್ನಾಗಿ ಕವಿತೆ ಬರೀತೀರ. ಮುಂದುವರಿಸಿ’ ಅಂದರಂತೆ.

ಪದವಿಯ ನಂತರ ಸ್ವಲ್ಪ ದಿನದ ಮಟ್ಟಿಗೆ ಪದ್ಯ ಬರೆಯುವುದನ್ನೇ ಮರೆತ ಕವಿರಾಜ್, ಉದರನಿಮಿತ್ತಂ- ಬೆಂಗಳೂರಿಗೆ ಬಂದರು. ಮೆಡಿಕಲ್ ರೆಪ್ರಸೆಂಟೇಟಿವ್ ಆದರು. ಔಷಧ ಮಾರಾಟ ಹಾಗೂ ಮಾತ್ರೆ-ಟಾನಿಕ್ನ ಮಹಾತ್ಮೆ ಸಾರುತ್ತಾ ಬೆಂಗಳೂರನ್ನು ಗಿರಗಿರಗಿರ ಸುತ್ತಿದರು. ಆ ನೌಕರಿಯಲ್ಲಿ ಕೈತುಂಬ ಸಂಬಳವಿತ್ತು ನಿಜ. ಆದರೆ ಆತ್ಮಸಂತೋಷ ಅಂತೀವಲ್ಲ? ಅದು ಇರಲಿಲ್ಲ. ಅದೊಂದು ದಿನ, ಈ ಮೆಡಿಕಲ್ ರೆಪ್ ಕೆಲಸ ಸಾಕು ಎಂದು ನಿರ್ಧರಿಸಿದ ಕವಿರಾಜ್, ಸಿನಿಮಾಕ್ಕೆ ಹಾಡು ಬರೆದೇ ಯಾಕೆ ಬದುಕಬಾರದು ಎಂದು ಯೋಚಿಸಿದರು. ನಂತರ ಅದು ಹೇಗೋ ಸಂಗೀತ ನಿದರ್ೇಶಕ ಗುರುಕಿರಣ್ರ ಮನೆ ವಿಳಾಸ ಪತ್ತೆಹಚ್ಚಿ, ಒನ್ ಫೈನ್ ಡೇ ಅವರ ಮನೆಯ ಬಾಗಿಲು ಬಡಿದೇ ಬಿಟ್ಟರು.

ಆ ಸಂದರ್ಭವನ್ನು ಕವಿರಾಜ್ ವಿವರಿಸುವುದು ಹೀಗೆ: `ನನಗೆ ಅದಕ್ಕೂ ಮುಂಚೆ, ಗುರುಕಿರಣ್ರ ಪರಿಚಯವಿರಲಿಲ್ಲ. ಯಾರ ಶಿಫಾರಸು ಪತ್ರವೂ ನನ್ನಲ್ಲಿರಲಿಲ್ಲ. ಆದರೂ ಒಂದು ಭಂಡ ಧೈರ್ಯದೊಂದಿಗೆ, ವಿಶ್ವಾಸದೊಂದಿಗೆ ಹೋದೆ. ನನ್ನ ಪರಿಚಯ, ಹಿನ್ನೆಲೆ, ಹೇಳಿಕೊಂಡೆ. ಗೀತರಚನೆಕಾರ ಆಗಬೇಕು ಅಂತಿದೀನಿ ಸಾರ್. ದಯವಿಟ್ಟು ಅವಕಾಶ ಕೊಡಿ ಅಂದೆ. ನನ್ನ ಹಳೆಯ ಪದ್ಯಗಳನ್ನು ತೋರಿಸಿದೆ. ಅದನ್ನೆಲ್ಲ ನೊಡಿದ ಗುರುಕಿರಣ್- `ಸರಿ, ಈಗ ಒಂದು ಟ್ಯೂನ್ ಕೇಳಿಸ್ತೀನಿ. ಅದನ್ನು ಕೇಳಿಸ್ಕೊಂಡು ಹಾಡು ಬರೆದುಕೊಂಡು ಬನ್ನಿ’ ಎಂದರು.

ಆ ವೇಳೆಗಾಗಲೇ ತುಂಬ ಜನಪ್ರಿಯರಾಗಿದ್ದ, ಬ್ಯುಸಿಯಾಗಿದ್ದ ಗುರುಕಿರಣ್ರಿಂದ ನಾನು ಅಂಥ ಅಪರೂಪದ ಕಾಣಿಕೆಯನ್ನು ನಿರೀಕ್ಷಿಸಿರಲಿಲ್ಲ. ಒಂದು ವೇಳೆ ಅವರೇನಾದರೂ, `ನಾನಿವತ್ತು ಬ್ಯುಸಿ ಇದೀನಿ. ನಾಳೆ ಬನ್ನಿ’ ಅಂದಿದ್ರೆ, ಮತ್ತೆ ಆ ಕಡೆಗೆ ಹೋಗ್ತಾ ಇದ್ದೆನೋ ಇಲ್ಲವೋ ಗೊತ್ತಿಲ್ಲ. ಆದರೆ ಹೊಸಬನಾದ ನನ್ನನ್ನು `ಹಾಡು ಬರ್ಕೊಂಡು ಬಾ’ ಅಂದರಲ್ಲ? ಆ ಮಾತು ಕೇಳಿ ನಾನು ಗಾಳಿಯಲ್ಲೇ ತೇಲಾಡಿದೆ. ಆ ಕ್ಷಣದ ನನ್ನ ಸಂಭ್ರಮವನ್ನೆಲ್ಲ ಜತೆಗಿಟ್ಟುಕೊಂಡು- `ನನ್ನಲಿ ನಾನಿಲ್ಲ ಮನದಲಿ’ ಹಾಡು ಬರೆದೆ. 2002ರಲ್ಲಿ ತೆರೆಕಂಡ ಪ್ರೇಮ್ ನಿದರ್ೇಶನದ `ಕರಿಯಾ’ ಚಿತ್ರಕ್ಕೆ ಈ ಹಾಡು ಬಳಕೆಯಾಯಿತು. ಹಾಡು ಮತ್ತು ಸಿನಿಮಾ ಸೂಪರ್ಹಿಟ್ ಆಯಿತು.’

ಹೀಗೆ, ಮೊದಲ ಹಾಡಿಂದಲೇ ಜಾಕ್ಪಾಟ್ ಹೊಡೆದ ಕವಿರಾಜ್- `ಆಪ್ತಮಿತ್ರ’ ಚಿತ್ರಕ್ಕೆ ಹಾಡು ಬರೆದದ್ದು ಹೇಗೆ? `ಕಣಕಣದೆ ಶಾರದೆ’ ಹಾಡು ಅವರಿಗೆ ಒಲಿದದ್ದು ಎಲ್ಲಿ ಮತ್ತು ಹೇಗೆ? ಸಂಗೀತ ಅಭ್ಯಾಸ ಮಾಡುವ ಸಂದರ್ಭದಲ್ಲೇನಾದರೂ ಅವರು ಈ ಹಾಡು ಬರೆದರೋ ಹೇಗೆ? ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಖುದ್ದು ಕವಿರಾಜ್ ಉತ್ತರಿಸಿದ್ದು ಹೀಗೆ:

`ಕರಿಯಾ’ ಚಿತ್ರದಲ್ಲಿ ನನ್ನ ಕೈಹಿಡಿದ ಗುರುಕಿರಣ್, ನಂತರದಲ್ಲಿ ತಮ್ಮ ಸಂಗೀತ ನಿದರ್ೇಶನದ ಹಲವು ಚಿತ್ರಗಳಲ್ಲಿ ಅವಕಾಶ ಕೊಟ್ಟರು. 2003ರಲ್ಲಿ ದ್ವಾರಕೀಶ್ ನಿಮರ್ಾಣದ `ಆಪ್ತಮಿತ್ರ’ ಶುರುವಾದಾಗ- ನನ್ನನ್ನು ಕರೆದು- `ಒಂದು ಹಾಡು ಬರಿ’ ಅಂದರು. ಚಿಕ್ಕಂದಿನಿಂದಲೂ ವಿಷ್ಣುವರ್ಧನ್ರ ಕಟ್ಟಾ ಅಭಿಮಾನಿ ನಾನು. ಅವರಿಗೇ ಒಂದು ಹಾಡು ಬರೆವ ಅವಕಾಶ ಸಿಕ್ಕಿತ್ತು. ನಾನಂತೂ ಥ್ರಿಲ್ಲಾಗಿ ಹೋದೆ. ಡ್ಯುಯೆಟ್ ಸಾಂಗ್ ಇರಬೇಕು ಅಂದುಕೊಂಡು `ಆಯ್ತು ಸಾರ್’ ಬರೀತೀನಿ ಅಂದೆ. ನಂತರ ಒಂದು ಟ್ಯೂನ್ ಕೇಳಿಸಿದ ಗುರುಕಿರಣ್- `ಇದು ಶಾಸ್ತ್ರೀಯ ಸಂಗೀತದ ಹಾಡಾಗಬೇಕು. ಹುಶಾರಾಗಿ ಯೋಚಿಸಿ, ಚೆನ್ನಾಗಿ ಬರಿ’ ಅಂದರು.

ಶಾಸ್ತ್ರೀಯ ಸಂಗೀತದ ಬಗ್ಗೆ ನನಗೆ ಅಂಥ ಒಳ್ಳೆಯ ಜ್ಞಾನವಿರಲಿಲ್ಲ. ಹಾಗಾಗಿ, ಗುರುಕಿರಣ್ರ ಮಾತು ಕೇಳಿ ಥರಗುಟ್ಟಿಹೋದೆ. ಯಾಕೋ ಇದು ನನ್ನಿಂದ ಆಗದ ಕೆಲಸ ಅನಿಸಿತು. ಅದನ್ನೇ ಗುರುಕಿರಣ್ಗೆ ಹೇಳಿದೆ. ಅವರು- `ಹೆದರಬೇಡ. ನೀನು ಬರೀತೀಯ. ಸ್ವಲ್ಪ ಟೈಮ್ ತಗೋ. ಕೂಲ್ ಆಗಿರು’ ಎಂದರು. ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಕೂಡ ಅದೇ ಮಾತು ಹೇಳಿ `ಬೆಸ್ಟ್ ಆಫ್ ಲಕ್’ ಎಂದರು.

ಬೆಂಗಳೂರಿನ, ಬಸವೇಶ್ವರ ನಗರದಲ್ಲಿರುವ ಆಲದ ಮರದ ಪಾಕರ್್ಗೆ ಆವಾಗಾವಾಗ ಹೋಗುವುದು ನನ್ನ ಅಭ್ಯಾಸ. ಅದೊಂದು ಸಂಜೆ ಹೋಗಿ ಪಾಕರ್್ನಲ್ಲಿ ಕೂತಿದ್ದೆ. ಬೃಹತ್ತಾದ ಆ ಆಲದಮರದ ತುಂಬಾ ನೂರಾರು ಹಕ್ಕಿಗಳಿದ್ದವು. ಎಲ್ಲವೂ ಅಲ್ಲಿಯೇ ಗೂಡು ಕಟ್ಟಿಕೊಂಡಿದ್ದವು. ಕೆಲವು ಆಗಲೇ ಗೂಡು ಸೇರಿದ್ದವು. ಮತ್ತೆ ಕೆಲವು ಗೂಡಿಗೆ ಮರಳುತ್ತಿದ್ದವು. ಇಡೀ ಪಾಕರ್ಿನ ತುಂಬಾ ಹಕ್ಕಿಗಳದ್ದೇ ಕಲರವ. ಸುಮ್ಮನೇ ಒಮ್ಮೆ ಕತ್ತೆತ್ತಿ ನೋಡಿದರೆ, ಎಲೆ ಎಲೆಯ ಮೇಲೂ ಹಕ್ಕಿಗಳೇ ಕಂಡವು. `ಈ ಹಕ್ಕಿಗಳಿಗೂ ಒಂದು ಭಾಷೆ ಕಲಿಸಿದ್ದಾಳಲ್ಲ? ಅವುಗಳಿಗೂ `ಬುದ್ಧಿ’ ನೀಡಿದ್ದಾಳಲ್ಲ? ಆ ಶಾರದೆಯ ಮಹಿಮೆ ದೊಡ್ಡದು’ ಎಂದು ನನಗೆ ನಾನೇ ಹೇಳಿಕೊಂಡೆ. ನಂತರ, ಎಲೆ ಎಲೆಗೂ ಹಕ್ಕಿಗಳೇ ಎಂಬುದನ್ನೇ ಮನದಲ್ಲಿಟ್ಟುಕೊಂಡು- `ಕಣ ಕಣದೆ ಶಾರದೆ’ ಎಂದು ಒಂದು ಹಾಳೆಯಲ್ಲಿ ಗೀಚಿಕೊಂಡೆ. ನಂತರ, ಆ ಶಾರದಾಂಬೆ, ಮನುಷ್ಯರಿಗೆ ಮಾತ್ರವಲ್ಲ, ಎಲ್ಲ ಪಕ್ಷಿಗಳಿಗೂ ಸಿರಿಕಂಠ ನೀಡಿದ್ದಾಳಲ್ಲ, ಅದು ಸೋಜಿಗವಲ್ಲವೆ? ಹಿಂದೆಯೇ ಕಾಡಿನ ಒಂದು ಮೂಲೆಯಲ್ಲಿ ಹರಿವ ತೊರೆಯ ಸದ್ದಿಗೂ ಒಂದು ಲಯವಿರುತ್ತದೆ. ಇದೂ ಒಂದು ರೀತಿಯಲ್ಲಿ ಆ ದೇವಿಯ ಮಹಿಮೆ ಎನ್ನಿಸಿ ವಿಸ್ಮಯವಾಯಿತು. ಈ ಎರಡೂ ಸಾಲುಗಳನ್ನು ಸೇರಿಸಿ- `ವನವನದಲ್ಲೂ ಕುಹುಕುಹು ಗಾನ, ಝರಿ ಝರಿಯಲ್ಲೂ ಜುಳುಜುಳು ಧ್ಯಾನ, ವಿಧವಿಧದಾ ನಾದ ಅವಳು ನುಡಿಸುತಿಹಳು’ ಎಂದು ಬರೆದೆ.

ಹೀಗೆ, ದಿಢೀರನೆ ಕೈಹಿಡಿದ ಸಾಲುಗಳ ಬಗ್ಗೆ ಯೋಚಿಸುತ್ತಿದ್ದಾಗಲೇ ಮನುಷ್ಯರು ಸಂಗೀತವನ್ನು ಹೇಗೆಲ್ಲ ಬಳಸುತ್ತಾರೆ ಎಂದು ನೆನಪು ಮಾಡಿಕೊಂಡೆ: ನಮ್ಮ ಜನ `ಹುಟ್ಟಿದಾಗ ಒಂದುಹಾಡು ಕಟ್ತಾರೆ. ಸತ್ತಾಗಲೂ ಒಂದು ಹಾಡು ಹೇಳ್ತಾರೆ’ ಅನ್ನಿಸ್ತು. ಅದನ್ನೇ `ಜನನಕೂ ಹಾಡು ಮರಣಕೂ ಹಾಡು’ ಎಂದು ಬದಲಿಸಿಕೊಂಡೆ. ಹಿಂದೆಯೇ- ಪ್ರತಿಯೊಬ್ಬರಿಗೂ ಅವರದೇ ಆದ ರಾಗಮಾಧುರ್ಯವಿದೆ ಅನ್ನಿಸಿತು. ಅದನ್ನು `ಪ್ರತಿ ಎದೆಯಾಳದೊಳು…’ ಸಾಲಿನಲ್ಲಿ ತಂದೆ. ಸಂಗೀತಕ್ಕೆ ಜಾತಿ, ಭಾಷೆ, ಮೇಲು ಕೀಳೆಂಬ ಕಟ್ಟುಪಾಡಿಲ್ಲ. ಪರಿಶ್ರಮಿಗಳಿಗೆ ಅದು ಖಂಡಿತ ಒಲಿಯುತ್ತದೆ ಎಂದು ಹೇಳಲು- `ಕುಲ ನೆಲದಾಚೆ…’ ಸಾಲು ಬಳಸಿದೆ! ಆಲದ ಮರದಡಿ ಧ್ಯಾನಿಸುತ್ತಾ ಕೂತವನಿಗೆ ಕೆಲವೇ ನಿಮಿಷಗಳಲ್ಲಿ ಹಾಡು ಒಲಿದಿತ್ತು… ನಂತರ ಮನೆಗೆ ಬಂದು ಹಾಡನ್ನು ಇಡಿಯಾಗಿ `ಶಾಪರ್್’ ಮಾಡಿದೆ. ಹಾಡು ಕಂಡು ಗುರುಕಿರಣ್, ವಿಷ್ಣುವರ್ಧನ್ ತುಂಬ ಖುಷಿಪಟ್ಟರು. ಮುಂದೆ ಚಿತ್ರ ತೆರೆಕಂಡಾಗ ಹಾಡು ಕೇಳಿ ಚಿತ್ರಪ್ರೇಮಿಗಳೂ ಚಪ್ಪಾಳೆ ಹೊಡೆದರು…

ಹೀಗೆನ್ನುತ್ತಾ ಭಾವುಕರಾದರು ಕವಿರಾಜ್. ಅವರ ಕಂಗಳಲ್ಲಿ ಜಗತ್ತು ಗೆದ್ದವನ ಸಂಭ್ರಮವಿತ್ತು….

‍ಲೇಖಕರು avadhi

September 25, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

4 ಪ್ರತಿಕ್ರಿಯೆಗಳು

  1. sritri

    ಜನನಕು ಹಾಡು ಮರಣಕು ಹಾಡು ಆದಮೇಲೆ … ” ಯಾರೀ ಛಲಮಗಳು” ಅಂದರೆ ಏನು ಅರ್ಥ? ನಾನು ಅದನ್ನು “ಲಾಲಿ ಚರಮಗಳು” (ಲಾಲಿ ಜನನಕ್ಕೆ ಮತ್ತು ಮರಣಕ್ಕೆ ಚರಮ ಸಂಕೇತವಾಗಿ) ಅಂತ ಅಂದುಕೊಂಡಿದ್ದೆ. ನೀವು ಕವಿರಾಜ್ ಆವರನ್ನೇ ಮಾತಾಡಿಸಿ ಬರೆದಿರೋದ್ರಿಂದ ನೀವು ಬರೆದಿರುವುದೇ ಸರಿ ಇರಬಹುದೇನೊ. ಆದರೆ ಹಾಗಂದರೇನು ತಿಳಿಯಲಿಲ್ಲ!

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ sritriCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: