ಮಣಿಕಾಂತ್ ಬರೆದಿದ್ದಾರೆ: ಇಷ್ಟು ಹೇಳಿ ಫುಲ್ ಸ್ಟಾಪ್ ಹಾಕಿದರು ಕಲ್ಯಾಣ್

ಎ ಆರ್ ಮಣಿಕಾಂತ್
ಈ ನನ್ನ ಕಣ್ಣಾಣೆ…
ಚಿತ್ರ: ಅಭಿ, ಗೀತೆರಚನೆ: ಕೆ. ಕಲ್ಯಾಣ್
ಸಂಗೀತ: ಗುರುಕಿರಣ್, ಗಾಯನ: ಉದಿತ್ ನಾರಾಯಣ್, ಮಹಾಲಕ್ಷ್ಮಿ ಅಯ್ಯರ್.
ಈ ನನ್ನ ಕಣ್ಣಾಣೆ, ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ, ಈ ನನ್ನ ಉಸಿರಾಣೆ
ಈ ಪ್ರೀತಿ ನೀ ನನ್ನ ಪ್ರಾಣ ಕಣೆ

ನಂಗು ನಿಂಗೂ ಇನ್ನು ಹೊಸದು ಇಂಥಾ ಅನುಭವ
ಕಂಡು ಕಂಡು ಎದೆಯ ಒಳಗೆ ಏನೋ ಕಲರವ
ಸದಾ ಸದಾ ವೈಯಾರದ ಪದ ಪದಾ ಬೆಸೆದಿವೆ
ಹೊಸ ಹೊಸ ಶೃಂಗಾರದ ರಸ ರಾಗ ಲಹರಿ ಹರಿಸುತ್ತಿದೆ
ಓ ಒಲವೆ ಒಲವೆಂಬ ಒಲವೆನ್ನಿರಿ

ಪ್ರೀತಿ ಒಂದು ಗಾಳಿಯ ಹಾಗೆ ಗಾಳಿ ಮಾತಲ್ಲ
ಪ್ರೀತಿ ಹರಿಯೋ ನೀರಿನ ಹಾಗೆ ನಿಂತ ನೀರಲ್ಲ
ಅದು ಒಂದು ಜ್ಯೋತಿಯ ಹಾಗೆ ಸುಡೋ ಬೆಂಕಿಯಲ್ಲ
ಅದು ಒಂದು ಭುವಿಯ ಹಾಗೆ ನಿರಂತರ ಈ ಪ್ರೇಮಸ್ವರ
ಈ ಪ್ರೀತಿ ಆಕಾಶಕೂ ಎತ್ತರ

ಪುನೀತ್ ರಾಜ್ ಕುಮಾರ್ ಅಭಿನಯದ ಎರಡನೇ ಚಿತ್ರ `ಅಭಿ’. ಈ ಚಿತ್ರದಲ್ಲಿ ಪುನೀತ್ ಗೆ ನಾಯಕಿಯಾಗಿದ್ದಾಕೆ ರಮ್ಯಾ. ಆ ಚಿತ್ರದ ಸನ್ನಿವೇಶವನ್ನು ನೆನಪು ಮಾಡಿಕೊಳ್ಳಿ.
ಅವಳ ಹೆಸರು ಭಾನು. ಆಕೆ  ಹುಬ್ಬಳ್ಳಿಯಿಂದ ಬಂದ ಮುಸ್ಲಿಂ ಹುಡುಗಿ. ಆಕೆ ಬೆಂಗಳೂರಿನ `ಅಭಿ’ಯ ಮನೆಗೆ ಬಾಡಿಗೆಗೆ ಬರ್ತಾಳೆ. ಇಬ್ರೂ ಒಂದೇ ಕಾಲೇಜಲ್ಲಿ ಓದ್ತಾ ಇರ್ತಾರೆ. ಪರಸ್ಪರರ ಮೇಲೆ ಇಬ್ರಿಗೂ ಪ್ರೀತಿ ಇರುತ್ತೆ. ಆದ್ರೆ ಅದನ್ನು ಇಬ್ರೂ ಹೇಳ್ಕೊಂಡಿರಲ್ಲ. ಹೀಗಿರುವಾಗ-ಅಭಿ, ಒಮ್ಮೆ ಗೆಳೆಯರಿಗೆಲ್ಲ ಪಾರ್ಟಿ ಕೊಡ್ತಾನೆ. ಮನೆ ಕೆಲಸದವಳ ಮೇಲೆ ಅವನಿಗೆ ತಾಯಿ ಮಮತೆ! ತುಂಬ ಅಕ್ಕರೆ. ಆಕೆಯನ್ನು ಗೆಳೆಯರಿಗೆಲ್ಲ ಪರಿಚಯಿಸ್ತಾನೆ. ಅಭಿಯ ಈ ವರ್ತನೆಯಿಂದ ಭಾನು ತುಂಬ ಇಂಪ್ರೆಸ್ ಆಗ್ತಾಳೆ. ಅವನಿಗೆ ಪ್ರೊಪೋಸ್ ಮಾಡುವ ಉದ್ದೇಶದಿಂದ-`ಪಾರ್ಟಿ ಮುಗಿದ ಮೇಲೆ ಟಿರೇಸ್ ಮೇಲೆ ಬಾ ಮಾತಾಡೋಣ’ ಅಂತಾಳೆ.
ಇವನು ಮರೆತು ಮಲಗಿಬಿಡ್ತಾನೆ. ಆದ್ರೆ ಅವಳು ಟೆರೇಸ್ ಮೇಲೆ ಇಡೀ ರಾತ್ರಿ ಅವನಿಗೋಸ್ಕರ ಕಾಯ್ತಾಳೆ. ಧಾರಾಕಾರ ಮಳೆ ಸುರಿದ್ರೂ ಅವಳು ಅಲುಗಾಡಲ್ಲ. ಪರಿಣಾಮ, ತುಂಬ ಜ್ವರ ಬರುತ್ತೆ. ಬೆಳಗ್ಗೆ ಎಲ್ಲ ವಿಷಯ ತಿಳಿದ ಅಭಿ-`ಸಾರಿ, ನನ್ನಿಂದಾನೇ ಹೀಗೆಲ್ಲ ಆಯ್ತು’ ಅಂದು ಅವಳಿಗೆ ಟ್ರೀಟ್ಮೆಂಟ್ ಕೊಡಿಸಿ, ಕಾಲೇಜಿಗೆ ಹೋಗ್ತಾನೆ. ಆದರೆ ಅವನ ಮನಸೆಲ್ಲಾ ಅವಳ ಮೇಲೇ ಇರುತ್ತೆ. ಸಂಜೆ ಬಂದವನೇ, ಅವಳನ್ನು ಮುಟ್ಟದೆ  `ಈಗ ಜ್ವರ ಬಿಟ್ಟಿದೆ’ ಅಂತಾನೆ. ಅವಳು- `ನೀನು ನನ್ನನ್ನು ಮುಟ್ಟಿ ಕೂಡ ನೋಡಲಿಲ್ಲ. ಹೀಗಿರುವಾಗ ಜ್ವರ ಬಿಟ್ಟಿದೆ ಅಂತ ಹೇಗೆ ಹೇಳ್ತೀಯ?’ ಅಂತಾಳೆ. ಇವನು ಧೈರ್ಯ ಮಾಡಿ ಅವಳ ಮೈ ಮುಟ್ತಾನೆ. ಆಗ ಅವಳು ಮುಖ ಅರಳಿಸಿ-`ಈಗ ಜ್ವರ ಬಿಡ್ತು’ ಅನ್ನುತ್ತಾಳೆ. ಇವನು-`ಕಾಲೇಜು ಇವತ್ತು ಖಾಲಿ ಖಾಲಿ ಅನಿಸ್ತು’ ಅಂತಾನೆ. ಅವಳು- ಕಾಲೇಜು ಖಾಲಿ ಅನ್ನಿಸ್ತೋ ಅಥವಾ, ನಾ ಇಲ್ದೇ ನಿನ್ನ ಮನಸ್ಸು ಖಾಲಿ ಅನ್ನಿಸ್ತೋ’ ಅಂತಾಳೆ. ಇವನು- `ನೀನು ಹೇಳಿದ್ದೇ ಸರಿ’ ಅಂತಾನೆ. ಮೆಚ್ಚಿದವನ ಮಾತು ಕೇಳಿ ಅವಳಿಗೆ ಆ ಜ್ವರದಲ್ಲೂ ಖುಷಿ ಖುಷಿ. ಆಗಲೇ ಕನಸಿನ ಗೀತೆಯಾಗಿ ಈ ಹಾಡು ಶುರುವಾಗುತ್ತೆ: ಈ ನಿನ್ನ ಕಣ್ಣಾಣೆ, ಈ ನಿನ್ನ ಎದೆಯಾಣೆ….’
ಸ್ವಾರಸ್ಯವಿರುವುದೇ ಇಲ್ಲಿ. `ಅಭಿ’ ಚಿತ್ರದಲ್ಲಿ,  ನಾಯಕ-ನಾಯಕಿ ಪರಸ್ಪರರ ಕುರಿತು ತಮ್ಮ ಎದೆಯಾಳದ ಭಾವನೆಗಳನ್ನು ಹಂಚಿಕೊಳ್ಳಲು ಈ ಹಾಡು ಹೇಳುತ್ತಾರೆ ನಿಜ. ಈ  ಸಿನಿಮಾ ನೋಡಿದವರೆಲ್ಲ, ಆಗಷ್ಟೇ ಪ್ರೀತಿಯ ಹೊಳೆಗೆ ಬಿದ್ದ ಹರೆಯದ ಹಕ್ಕಿಗಳು ಹಾಡುವ ಹಾಡಿದು ಎಂದುಕೊಂಡಿರುತ್ತಾರೆ. ಮತ್ತು ಸಿನಿಮಾದ ಸಂದರ್ಭ ಕೂಡ  ಈ ಅರ್ಥವನ್ನೇ  ಧ್ವನಿಸುವುದರಿಂದ ನಾವು ನಂಬಿರುವುದೇ ನಿಜ ಅಂದುಕೊಂಡಿರುತ್ತಾರೆ. ಆದರೆ, ವಾಸ್ತವ ಬೇರೆಯೇ ಇದೆ. ನಂಬಿ; ಈ ಹಾಡು ಬರೆದ ಸಂದರ್ಭದಲ್ಲಿ `ಈ ನಿನ್ನ ಕಣ್ಣಾಣೆ, ಈ ನನ್ನ ಎದೆಯಾಣೆ’ ಎಂಬ ಅಪರೂಪದ ಸಾಲು ಹುಟ್ಟಲು ಕಾರಣವೂ, ಸ್ಫೂರ್ತಿಯೂ ಆದವರು ಬೇರೆಯಾರೂ ಅಲ್ಲ. ಡಾ. ರಾಜ್.  ಆ ವಿವರವನ್ನು ಗೀತರಚನೆಕಾರ ಕಲ್ಯಾಣ್ ಅವರಿಂದಲೇ ಕೇಳಿದರೆ ಚೆಂದ. ಓವರ್ ಟು ಕೆ. ಕಲ್ಯಾಣ್:
ಪುನೀತ್ ಅಭಿನಯದ ಮೊದಲ ಸಿನಿಮಾ `ಅಪ್ಪು’ಗೆ ನಾನು ಎರಡು ಹಾಡು ಬರೆದಿದ್ದೆ. ನಂತರ `ಅಭಿ’ ಚಿತ್ರದಲ್ಲೂ ಅವಕಾಶ ಸಿಕ್ಕಿತಲ್ಲ? ಆಗ ಸಹಜವಾಗಿಯೇ ಖುಷಿಯಾಯಿತು. ಆ ದಿನಗಳಲ್ಲಿ ನಾನು ಒಂದೇ ಪದ ಇಟ್ಕೊಂಡು ಹಾಡು ಬರೆದು ಜನಪ್ರಿಯನಾಗಿದ್ದೆ. ಆ ಟ್ರೆಂಡ್ ನ  ಬದಲಿಸಬೇಕು. ಬೇರೆ ಥರದಲ್ಲೂ ಹಾಡು ಬರೆದು ಗೆಲ್ಲಬೇಕು ಅಂದ್ಕೊಂಡಿದ್ದೆ. ಅದೇ ವೇಳೆಗೆ ಸಂಗೀತ ನಿರ್ದೇಶಕ ಗುರುಕಿರಣ್ `ಅಭಿ’ ಚಿತ್ರದ ಸಂದರ್ಭ ವಿವರಿಸಿದರು. ನಂತರ, ಒಂದು ಟ್ಯೂನ್ ಕೇಳಿಸಿ, ಇದಕ್ಕೆ  ಹೊಂದುವಂಥ ಹಾಡುಬೇಕು. ಅದು ರೋಮ್ಯಾಂಟಿಕ್ ಕಂ ಡ್ಯುಯೆಟ್ ಸಾಂಗ್ ಆಗಿರಬೇಕು ಎಂದರು.
ಕೆಲವೇ ದಿನಗಳಲ್ಲಿ ಒಂದಷ್ಟು ಪಲ್ಲವಿ ಹಾಗೂ ಚರಣಗಳನ್ನು ಸಿದ್ಧಮಾಡಿಕೊಂಡೆ. ನಂತರ ಹಾಡುಗಳನ್ನು ಓಕೆ ಮಾಡಿಕೊಳ್ಳುವ ಉದ್ದೇಶದಿಂದ ನಿರ್ದೇಶಕ ದಿನೇಶ್ ಬಾಬು, ಸಂಗೀತ ನಿರ್ದೇಶಕ ಗುರುಕಿರಣ್ ಜತೆಯಲ್ಲಿ ಡಾ. ರಾಜ್ ಕುಮಾರ್ ಅವರ ಮನೆಗೆ ಹೋದೆ.
ಹಾಡು ಹೇಗಿದ್ದರೆ ಚೆಂದ ಎಂಬ ವಿಷಯವಾಗಿ ಚರ್ಚೆ ಶುರುವಾಯಿತು. ಚರ್ಚೆಯಲ್ಲಿ ನಮ್ಮೊಂದಿಗೆ-ಡಾ.ರಾಜ್, ವರದಪ್ಪ, ಪಾರ್ವತಮ್ಮ ರಾಜ್ಕುಮಾರ್ ಹಾಗೂ ರಾಘಣ್ಣ ಇದ್ದರು. ನಾನು ಮೊದಲೇ ಬರೆದುಕೊಂಡು ಹೋಗಿದ್ದ ಪಲ್ಲವಿ ಹಾಗೂ ಚರಣಗಳನ್ನು ತೋರಿಸಿದೆ. ಅವುಗಳನ್ನು ತೆಗೆದುಕೊಂಡ ವರದಪ್ಪನವರು, ಮೊದಲು ತಮ್ಮಷ್ಟಕ್ಕೆ ತಾವೇ ಓದಿಕೊಂಡು ನಂತರ ರಾಜ್ ಅವರತ್ತ ನೋಡಿ-`ಅಣ್ಣಾ, ಈ ಹಾಡಿನ ಸಾಲು ಎಷ್ಟು ಚೆಂದವಿದೆಯೇ ನೋಡು’ ಎಂದರು. ಹೀಗೇ ಮಾತುಕತೆ ಮುಂದುವರಿದಂತೆಲ್ಲ ಒಮ್ಮೊಮ್ಮೆ ವರದಪ್ಪನವರು ರಾಜ್ ಅವರನ್ನು `ಅಣ್ಣಾ’ ಎಂದು ಕರೆಯುತ್ತಿದ್ದರು. ಕೆಲವೊಮ್ಮೆ `ಅಪ್ಪಾ’ ಎನ್ನುತ್ತಿದ್ದರು.
ಇಲ್ಲಿ ಡಾ. ರಾಜ್ ಕುಮಾರ್ ಅವರ ವಿಶೇಷ ಗುಣದ ಬಗ್ಗೆ ಒಂದು ಮಾತು ಹೇಳಲೇಬೇಕು. ಏನೆಂದರೆ -ಯಾವುದೇ ಸಂದರ್ಭದಲ್ಲಿ ಯಾವುದೇ ಹಾಡಿನ ಸಾಲುಗಳನ್ನೂ ಅವರು-`ಇದು ಚನ್ನಾಗಿಲ್ಲ’ ಎಂದು ಹೇಳಿದವರೇ ಅಲ್ಲ. ಗೀತ ರಚನೆಕಾರರ ಬಗ್ಗೆ ಅವರಿಗೆ ಅಷ್ಟೊಂದು ಭರವಸೆ, ಗೌರವ. ಜತೆಗೆ, ನಾನು ಓದಿಕೊಂಡವನಲ್ಲ, ಹಾಡು ಬರೆಯುವವರೆಲ್ಲ ಚನ್ನಾಗಿ ಓದಿಕೊಂಡವರು. ಹಾಗಾಗಿ ಅವರು ಬರೆದ ಸಾಲುಗಳ ತುಂಬ ಚನ್ನಾಗೇ ಇರ್ತವೆ ಎಂಬ ವಿನಯದ ಮಾತು ಬೇರೆ. ಒಂದೊಂದು ಸಂದರ್ಭದಲ್ಲಿ ಯಾವುದಾದರೂ ಸಾಲು ಇಷ್ಟವಾಗದಿದ್ದರೆ-ಇದು ಚನ್ನಾಗಿಲ್ಲ ಎಂದು ಅವರು ಹೇಳುತ್ತಿರಲಿಲ್ಲ. ಬದಲಿಗೆ, ಈ ಸಾಲುಗಳನ್ನು ಒಂದಿಷ್ಟು ಬದಲಿಸಬಹುದೆ ನೋಡಿ, ಎಂದಷ್ಟೆ ಹೇಳುತ್ತಿದ್ದರು. ಈ ಮಧ್ಯೆ ವರದಪ್ಪನವರು -`ಈ ಸಾಲು ಪಲ್ಲವಿಯಾದರೆ ಚೆಂದ, ಈ ಸಾಲು ಚರಣವಾದರೆ ಚೆಂದ’ ಎಂದು ಆಯ್ಕೆ ಮಾಡುತ್ತಿದ್ದರು. ನಂತರ ಅದನ್ನು ರಾಜ್ ಕುಮಾರ್ ಅವರಿಗೆ ಕೊಟ್ಟು `ಅಣ್ಣಾ, ನೀನೂ ಒಂದ್ಸಾರಿ ನೋಡಿಬಿಡು’ ಅನ್ನುತ್ತಿದ್ದರು. ತಮ್ಮನ ಆಯ್ಕೆಯ ಬಗ್ಗೆ ಡಾ. ರಾಜ್ ಕುಮಾರ್ ಗೆ ತುಂಬ ನಂಬಿಕೆಯಿತ್ತು. ಹಾಗೆಂದೇ ಅವರು- `ಸರಿ ಕಣಪ್ಪ, ಇದು ಚನ್ನಾಗಿದೆ’ ಎನ್ನುತ್ತಿದ್ದರು. ನಂತರ ತಮ್ಮಷ್ಟಕ್ಕೆ ತಾವೇ ಹಾಡಲು ಶುರುಮಾಡುತ್ತಿದ್ದರು.
`ಇದು ಪಲ್ಲವಿಯಾಗಲಿ, ಈ ಸಾಲುಗಳು ಚರಣದಲ್ಲಿ ಬರಲಿ’ ಎಂದು ವರದಪ್ಪ ಹಾಗೂ ಡಾ. ರಾಜ್ ಚರ್ಚಿಸುವುದು ಕಂಡಾಗಲೇ ಹೊಸದೊಂದು ಚರಣ ಬರೆದರೆ ಹೇಗೆ ಅನ್ನಿಸಿತು. ಹಿಂದೆಯೇ- ಗಾಳಿ, ನೀರು, ಬೆಂಕಿ, ಭೂಮಿ, ಆಕಾಶ… ಈ ಪಂಚಭೂತಗಳನ್ನೇ ಜತೆಗಿಟ್ಟುಕೊಂಡು ಒಂದು ಚರಣವನ್ನು ಬರೆಯಬಾರದೇಕೆ ಅನ್ನಿಸ್ತು. ತಕ್ಷಣವೇ ಒಂದು ಹಾಳೆ ತಗೊಂಡು `ಪ್ರೀತಿಯೊಂದು ಗಾಳಿಯ ಹಾಗೆ, ಗಾಳಿ ಮಾತಲ, ಪ್ರೀತಿ ಹರಿಯೋ ನೀರಿನ ಹಾಗೆ ನಿಂತ ನೀರಲ, ಅದು ಒಂದು ಜ್ಯೋತಿಯ ಹಾಗೆ ಸುಡೋ ಬೆಂಕಿಯಲ, ಅದು ಒಂದು ಭುವಿಯ ಹಾಗೆ ನಿರಂತರ ಈ ಪ್ರೇಮಸ್ವರ ಈ ಪ್ರೀತಿ ಆಕಾಶಕೂ ಎತ್ತರ…’ ಎಂದು ಬರೆದೆ. ಇದನ್ನು ವರದಪ್ಪ ಹಾಗೂ ರಾಜ್ ಅವರಿಗೆ ತೋರಿಸಲು ಧೈರ್ಯ ಬರಲಿಲ್ಲ. ಹಾಗೇ ಸುಮ್ಮನೆ ನಿಂತಿದ್ದೆ.
ಆದರೆ, ವರದಪ್ಪನವರು ಅದ್ಯಾವ ಮಾಯದಲ್ಲಿ ಗಮನಿಸಿದರೋ ಗೊತ್ತಿಲ್ಲ. ತಕ್ಷಣ ಬಳಿ ಬಂದು -`ಅದೇನೋ ಚೀಟಿಯಲ್ಲಿ ಬರೀತಿದ್ರಲ್ಲ? ನಮಗೂ ತೋರಿಸಿ, ನೋಡಬೇಕು’ ಎಂದರು. ನಾನು ಅಳುಕಿನಿಂದಲೇ-`ಏನಿಲ್ಲ, ಏನಿಲ್ಲ…’ ಎಂದೆ. ಅವರು ಪಟ್ಟು ಬಿಡದೆ-`ಪರವಾಗಿಲ್ಲ ಕೊಡಿ. ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ ಯಾರಿಗೆ ಗೊತ್ತು?’ ಎಂದರು. ಈ ಮಾತಿಂದ ಧೈರ್ಯ ತಂದುಕೊಂಡು-`ಮೊದಲು ಬರೆದಿದ್ದ ಪಲ್ಲವಿ ಹಾಗೂ ಚರಣಗಳು ನಿಮಗೆ ಸಮಾಧಾನ ನೀಡಿಲ್ಲ ಅನ್ನಿಸ್ತು. ಹಾಗಾಗಿ, ಪಂಚಭೂತಗಳ ಉದಾಹರಣೆ ಇಟ್ಕೊಂಡು ಹೊಸ ಸಾಲುಗಳನ್ನು ಬರೆದಿದ್ದೀನಿ. ನಿಮಗೆ ಇಷ್ಟವಾಗಬಹುದೇನೋ ನೋಡಿ…’ ಎಂದೆ.
ಆ ಸಾಲುಗಳನ್ನು ಕಂಡದ್ದೇ, ವರದಪ್ಪನವರ ಕಂಗಳು ಮಿನುಗಿದವು. ಅವರು ಖುಷಿಯಿಂದ ಚೀಟಿಯನ್ನು ರಾಜ್ ಅವರಿಗೆ ನೀಡಿ-`ಅಣ್ಣಾ, ಇದು ನೋಡು’ ಎಂದರು. ರಾಜ್ ಅವರು ಅದನ್ನು ಓದಿದವರೇ ಸರಸರನೆ ನನ್ನ ಬಳಿ ಬಂದು-ಕೈಕುಲುಕಿ, ಈ ಸಾಲುಗಳು ತುಂಬಾ ಚನ್ನಾಗಿದೆ. ಅದ್ಭುತವಾಗಿವೆ’ ಎಂದರು. ಅವರ ಪ್ರಶಂಸೆಯಿಂದ ಕಕ್ಕಾಬಿಕ್ಕಿಯಾಗಿ-`ಸಾರ್, ಈ ಕ್ಷಣದಲ್ಲಿ ತೋಚಿದ್ದು ಇಷ್ಟೆ. ಅದನ್ನೇ ಬರೆದಿದ್ದೇನೆ’ ಎಂದೆ. ಅದಕ್ಕೆ ರಾಜ್-`ಇಲ್ಲ ಇಲ್ಲ. ಇದು ಸುಮ್ಮನೇ ತೋಚಿದ್ದಕ್ಕೆ ಬರೆದಿದ್ದಲ್ಲ, ನೀವು ಸಂಗೀತಕ್ಕೆ ಸೋತಿದ್ದಕ್ಕೆ ಬರೆದ ಸಾಲು’ ಎಂದರು. ನಂತರ ತಮ್ಮಷ್ಟಕ್ಕೇ ಗಟ್ಟಿಯಾಗಿ ಹಾಡಲು ಶುರುಮಾಡಿದರು. ಹಿಂದೆಯೇ ವರದಪ್ಪನವರೂ ದನಿ ಸೇರಿಸಿದರು. ಚಿತ್ರರಂಗದ ಅಪೂರ್ವ ಸೋದರರ ಜುಗಲ್ಬಂದಿ ಕಂಡು ನನಗಂತೂ ಅಚ್ಚರಿ, ಆನಂದ, ವಿಸ್ಮಯ. ಒಂದು ರೌಂಡ್ ಹಾಡಿ ಮುಗಿಸಿದ ನಂತರ ರಾಜ್ ಅವರ ಕಂಗಳಲ್ಲಿ ದೊಡ್ಡ ಸಂತೃಪ್ತಿಯಿತ್ತು. ಅದನ್ನು ಕಂಡು ಅವರಿಗೆ ನಿಂತಲ್ಲಿಂದಲೇ ಕೈಮುಗಿದೆ. ಅವರು ಹತ್ತಿರ ಬಂದು ನನ್ನ ಕೈ ತೆಗೆದುಕೊಂಡು ಎದೆಗೆ ಒತ್ತಿಕೊಂಡರು.
ಈ ಅಪೂರ್ವ ಅನುಭವದಿಂದ ನನಗೆ  ರೋಮಾಂಚನವಾಯಿತು. ರಾಜ್  ಅವರಂಥ ಐಕಾನ್ ನನ್ನ ಕೈ ಹಿಡಿದು ಎದೆಗೆ ಒತ್ತಿಕೊಂಡರಲ್ಲ; ನನ್ನ ಪಾಲಿಗೆ ಅದೊಂದು ಅವಿಸ್ಮರಣೀಯ ಸಂದರ್ಭ. ಆ ಕ್ಷಣದಲ್ಲಿ ನನ್ನೊಳಗೆ ಹೊಸ ಸಾಲು ಹುಟ್ಟಿತು: ರಾಜ್ ಅವರ ಕಣ್ಣ ನೋಟ, ನನ್ನ ಕೈಯನ್ನು ಎದೆಗೆ ಒತ್ತಿಕೊಂಡ ಸಂದರ್ಭವನ್ನೇ ಮತ್ತೆ ಮತ್ತೆ ನೆನೆದು-ಈ ನಿನ್ನ ಕಣ್ಣಾಣೆ, ಈ ನಿನ್ನ ಎದೆಯಾಣೆ… `ಎಂದು ಬರೆದೆ. ಅದನ್ನೊಮ್ಮೆ ಎಲ್ಲರಿಗೂ ತೋರಿಸಿದೆ. ವರದಪ್ಪ-ರಾಜ್ ಇಬ್ಬರೂ ಖುಷಿಯಿಂದ ಇದು ಪಲ್ಲವಿಯಾಗಲಿ ಎಂದರು. ಹಿಂದೆಯೇ-ಈ ಹಾಡು ಹಿಟ್ ಆಗುತ್ತೆ ಎಂದು ಭವಿಷ್ಯ ನುಡಿದರು. ನಂತರ ನಡೆದಿದ್ದು ಇತಿಹಾಸ…
ಇಷ್ಟು ಹೇಳಿ ಹಾಡಿನ ಕಥೆಗೊಂದು ಫುಲ್ಸ್ಟಾಪ್ ಹಾಕಿದರು. ಕಲ್ಯಾಣ್.

‍ಲೇಖಕರು avadhi

January 17, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This