ಮಣಿಕಾಂತ್ ಬರೆದಿದ್ದಾರೆ: ಈ ಹಾಡಿನ ಮಹತ್ವವನ್ನು ಇನ್ನೂ ವಿವರಿಸಬೇಕೆ

-ಎ ಆರ್ ಮಣಿಕಾಂತ್
ನಿಷ್ಠುರ ಸತ್ಯ ಹೇಳುವ ಈ ಹಾಡಿನಲ್ಲಿ ನಮ್ಮೆಲ್ಲರ ದನಿಯೂ ಇದೆ !
ಚಿತ್ರ: ಗಜೇಂದ್ರ. ಗೀತೆರಚನೆ: ಚಿ. ಉದಯಶಂಕರ್
ಸಂಗೀತ: ಜಿ.ಕೆ. ವೆಂಕಟೇಶ್ ಗಾಯನ : ಎಸ್.ಪಿ.ಬಿ
ರಾಮಕೃಷ್ಣ ಗಾಂಧಿ  ಬುದ್ಧ
ಹುಟ್ಟಿದಂಥ ದೇಶವೆಂದು ಸಂತೋಷದಿ ಹೇಳುವೆ
ಬಾಯಲ್ಲಿ  ರಾಮನಾಮ ನಂಬಿದಾಗ ಪಂಗನಾಮ
ಹಾಕುತ್ತ ನೀ ಬಾಳುವೆ
ನ್ಯಾಯವು ಎಲ್ಲಿದೆ ಧರ್ಮವು ಎಲ್ಲಿದೆ?    ||ಪ||
ಅಕ್ಕಿ ಇಲ್ಲ ಬೇಳೆ ಇಲ್ಲ ಎಣ್ಣೆ ಇಲ್ಲ ಬೆಣ್ಣೆ ಇಲ್ಲ
ನೀ ಏನೇ ಬೇಕೆಂದರೂ ಸಿಕ್ಕೋದಿಲ್ಲ ಅಂತಾರಲ್ಲ
ಜನರ ಕಷ್ಟ  ಕೇಳೋರಿಲ್ಲ  ಸ್ವಾತಂತ್ರ್ಯ ಬಂದಾದರೂ
ಕಾರಣ ಬಲ್ಲೆಯ ಹೇಳಲೆ ನಾನು  ||ಅ.ಪ||
ಹಣವನ್ನು ಗುಡ್ಡೆ ಹಾಕಿ ಹಣವನ್ನು ಬೆಳೆಸೋರ
ಗುಂಪೊಂದು ನಮ್ಮಲ್ಲಿದೇ
ಬೆಳೆದಿದ್ದ ದೋಚಿಕೊಂಡು ಬೆಲೆ ಏರೋ ಹಾಗೆ ಮಾಡೋ
ಚಂಡಾಲ ಬುದ್ಧಿ ಇದೇ
ಹಸಿದವರಲ್ಲಿ ಕನಿಕರವಿಲ್ಲ, ಮಾನವ ಹೃದಯ ಅವರಲಿ ಇಲ್ಲ
ಇವರನ್ನು ಮುಗಿಸೋತನಕ
ಈ ಅನ್ನದ ಕೂಗು ನಿಲ್ಲದು        ||1||
ಆಳೋರು ಯಾರೇ ಇರಲಿ ಹೇಳೋರು ಯಾರೇ ಬರಲಿ
ಈ ಕಷ್ಟ ಕೊನೆಯಾಗದು
ಹಸಿದೋರ ಹೊಟ್ಟೆ ಬೆಂಕಿ ಉರಿಯಾಗಿ ನುಗ್ಗೋತನಕ
ಕಣ್ಣೀರ ಹನಿ ಇಂಗದು
ಸ್ವಾರ್ಥಿಗಳನ್ನು ದ್ರೋಹಿಗಳನ್ನು
ಬಡವರ ಹಿಂಡಿ ದೋಚೋರನ್ನು
ಗುಂಡಿಟ್ಟು ಕೊಲ್ಲೋತನಕ ಈ ದೇಶ ಉದ್ಧಾರವಾಗದು ||2||

ಆಕ್ಷನ್,  ಥ್ರಿಲ್ಲರ್ನ ಎಳೆ ಹೊಂದಿದ ಕಥೆಗೆ ಸೆಂಟಿಮೆಂಟ್ನ ಸ್ಪರ್ಶ ನೀಡಿ ಒಂದರ ಹಿಂದೊಂದು ಹಿಟ್ ಸಿನಿಮಾ ನೀಡಿದವರು ನಿರ್ದೇಶಕ ವಿ. ಸೋಮಶೇಖರ್. ಶಂಕರ್ ಗುರು, ಪ್ರೇಮದ ಕಾಣಿಕೆ, ಬಹದ್ದೂರ್ ಗಂಡು, ಹಾವಿನ ಹೆಡೆ, ಚಂಡಿಚಾಮುಂಡಿ, ಬೇಟೆ, ಪರಶುರಾಮ್…. ಈ ಎಲ್ಲ ಚಿತ್ರಗಳ ಹಿಂದಿದ್ದವರು ವಿ. ಶೋಮಶೇಖರ್. 80 ಹಾಗೂ  90ರ ದಶಕದಲ್ಲಿ ಸೋಮಶೇಖರ್ ನಿರ್ದೇಶನದ ಚಿತ್ರಗಳು ಎಂದರೆ ಭರ್ತಿ ಮನರಂಜನೆಯ ಸಿನಿಮಾಗಳೆಂದೇ ಹೆಸರು ಮಾಡಿದ್ದವು. ಒಂದು ಸಿನಿಮಾ ಅಂದಮೇಲೆ ಒಂದಿಷ್ಟು  ಪಾಲಿಟಿಕ್ಸ್, ನಾಲ್ಕು ಫೈಟು, ನಾಲ್ಕು ಹಾಡು, ಒಂದೆರಡು ಕೊಲೆ, ಮಧ್ಯೆ ಮಧ್ಯೆ ಹಾಸ್ಯ, ಖಳನಾಯಕರ ಅಟ್ಟಹಾಸ, ನಾಯಕನ ಮೆರೆದಾಟ, ಪೋಷಕ ನಟರ ಪಾತ್ರಗಳ ಪರದಾಟ… ಈ ಎಲ್ಲ ಅಂಶಗಳೂ ಸೋಮಶೇಖರ್ ಅವರ ಸಿನಿಮಾಗಳಲ್ಲಿ ಇರುತ್ತಿದ್ದವು.
ಒಂದು ವಿಶೇಷವೆಂದರೆ, ಡಿಶುಂಡಿಶುಂ ಚಿತ್ರಗಳ ನಿರ್ದೇಶಕರಾಗಿದ್ದರೂ ಕೂಡ ಸೋಮಶೇಖರ್ ಅವರು ಎಂದಿಗೂ ಹೀರೋಗಾಗಿ ಕಥೆ ಮಾಡಲಿಲ್ಲ. ಬದಲಿಗೆ ತಮ್ಮ ಕಥೆಗಳಿಗೆ ಹೊಂದುವಂಥ ಹೀರೋಗಳನ್ನು ಹಾಕಿಕೊಂಡರು. ಚಿತ್ರದಲ್ಲಿ ನಾಯಕ ಸ್ವಲ್ಪ ಒರಟೊರಟು ಮಾತಿನ, ಬಿಡುಬೀಸು ಸ್ವಭಾವದವನಾಗಿದ್ದರೆ ಅಂಥ ಪಾತ್ರಗಳು ಅಂಬರೀಷ್ ಅವರಿಗೇ ಮೀಸಲಾಗಿರುತ್ತಿದ್ದವು. ಅಂಬರೀಷ್ ಆ ದಿನಗಳಲ್ಲಿ ರೆಬಲ್ ಸ್ಟಾರ್ ಎಂದು ಹೆಸರಾಗಿದ್ದುದರಿಂದ ಬೆಂಕಿ ಚೆಂಡಿನಂಥ ಮಾತಿನ ಪಾತ್ರಗಳು ಅವರಿಗೆ ಖಡಕ್ಕಾಗಿ ಹೊಂದಿಕೆಯಾಗುತ್ತಿದ್ದವು. ಹೀರೋ ಪತ್ತೆದಾರಿ ಸ್ವಭಾವದವನೂ, ಖಳನಟರೊಂದಿಗೆ ಹೋರಾಡುವಾಗ ಕರಾಟೆ ತೆಗೆಯುವವನೂ ಆಗಿದ್ದರೆ ಅಂಥ ಪಾತ್ರಗಳು ಶಂಕರ್ ನಾಗ್ ಮಡಿಲಿಗೆ ಬಂದು ಬೀಳುತ್ತಿದ್ದವು. ಹಾಗೆಯೇ ಹೀರೋ ಒಂಥರಾ ಫ್ಯಾಂಟಮ್ ಇದ್ದ ಹಾಗೆ. ಆತ ಹತ್ತು ಮಂದಿ ಖಳನಾಯಕರನ್ನೂ ಒಂದೊಂದೇ ಏಟಿಗೆ ಹೊಡೆದು ಬಿಸಾಕುತ್ತಾನೆ ಎಂಬಂಥ ಪಾತ್ರವಾದರೆ ಆಗ ಪ್ರಭಾಕರ್ ಅವರನ್ನೇ ಕರೆಯುತ್ತಿದ್ದರು ಸೋಮಶೇಖರ್. ಒಂದು ಸಂತೋಷವೆಂದರೆ ಈ ಎಲ್ಲ ಡಿಶುಂಡಿಶುಂ ಕಥೆಯ ಮಧ್ಯೆಯೂ ಚಿತ್ರದಲ್ಲಿ ಮಧುರ ಹಾಡುಗಳಿರುವಂತೆ ಅವರು ಎಚ್ಚರ ವಹಿಸುತ್ತಿದ್ದರು.
`ಗಜೇಂದ್ರ’ ಚಿತ್ರದ `ಅಕ್ಕಿ ಇಲ್ಲ ಬೇಳೆ ಇಲ್ಲ…’ ಗೀತೆಯನ್ನೂ, ಅದು ಸೃಷ್ಟಿಯಾದ ಸಂದರ್ಭವನ್ನೂ ವಿವರಿಸುವ ಮುನ್ನ ವಿ-ಸೋಮಶೇಖರ್ ಬಗ್ಗೆ ನಾಲ್ಕು ಮಾತುಗಳನ್ನು ಹೇಳಬೇಕಾಯಿತು. ಏಕೆಂದರೆ, ಗಜೇಂದ್ರ ಚಿತ್ರದ ನಿರ್ದೇಶನದ ಸೋಮಶೇಖರ್ ಅವರದೇ, ಈ ಚಿತ್ರದ `ರಾಮ ಕೃಷ್ಣ ಗಾಂ ಬುದ್ಧ…’ ಹಾಡು 80ರ ದಶಕದ ಮಧ್ಯಭಾಗದಿಂದ ನಂತರದ ಹತ್ತು ವರ್ಷಗಳ ಕಾಲ ಟೀನೇಜ್ ಹುಡುಗ-ಹುಡುಗಿಯರ ನಾಲಿಗೆ ತುದಿಯಲ್ಲಿದ್ದುಕೊಂಡು ದರ್ಬಾರು ಮಾಡಿತು.
ನಮ್ಮ ಭ್ರಷ್ಟ ರಾಜಕೀಯ ವ್ಯವಸ್ಥೆ, ಪ್ರಜೆಗಳನ್ನು ಪೀಡಿಸುವ ಜನನಾಯಕರು, ಬಡವರನ್ನು ಶೋಷಿಸುವ ಶ್ರೀಮಂತರು, ಮಧ್ಯಮ ವರ್ಗದವರಿಗೆ ಸಿಗದೇ ಹೋಗುವ ಪಡಿತರ, ಜನ ಸಾಮಾನ್ಯರ ಮುಗಿಯದ ಗೋಳು… ಇಂಥ ಸಮಸ್ಯೆಗಳು ಸರ್ವಕಾಲಕ್ಕೂ ಇರುವಂಥವೇ ಅನ್ನಬಹುದು. ಈ ಸಮಸ್ಯೆಗಳನ್ನು ಕಂಡು ರೊಚ್ಚಿಗೆದ್ದ ಯುವಕನೊಬ್ಬ ಅಸಮಾನತೆಯನ್ನು ಹೇಗೆ ಸರಿಪಡಿಸಿದ? ಅನ್ಯಾಯದ ವಿರುದ್ಧ ಹೇಗೆ ಹೋರಾಡಿದ? ಸಮಾಜ ಘಾತಕ ಶಕ್ತಿಗಳನ್ನು ಹೇಗೆ ಮಟ್ಟ ಹಾಕಿದ ಎಂಬುದೇ `ಗಜೇಂದ್ರ’ ಚಿತ್ರದ ಕಥೆ. ಈ ಚಿತ್ರದಲ್ಲಿ ನಾಯಕನ ಎಂಟ್ರಿ ಆಗುವುದೇ `ರಾಮ ಕೃಷ್ಣ ಗಾಂ ಬುದ್ಧ,,,’ ಹಾಡಿನ ಮೂಲಕ.
ಸೋಮಶೇಖರ್ ಅವರಿಗೆ `ಗಜೇಂದ್ರ’ ಚಿತ್ರದ ಕಥೆ ಹೊಳೆದದ್ದೂ ಆಕಸ್ಮಿಕವಾಗಿಯೇ. ಅದು 83ನೇ ಇಸವಿಯ ಮಾತು. ಎಲ್ಲರ ಬಾಯಲ್ಲೂ ಆಗ ಗುಂಡೂರಾವ್ ಸರಕಾರದ ದರ್ಪ, ದೌಲತ್ತು, ಠೇಂಕಾರ ಕುರಿತೇ ಮಾತು. ಅಕಾರದ ಹಮ್ಮಿನಲ್ಲಿ ನಾನುಂಟು ಮೂರು ಲೋಕವುಂಟು ಎಂದು ಮೆರೆದ ಗುಂಡೂರಾಯರಿಗೆ ಸರಿಯಾಗಿ ಬುದ್ಧಿ ಕಲಿಸಲೆಂದೇ 1983ರ ಚುನಾವಣೆಯಲ್ಲಿ ಜನ ಜನತಾಪಕ್ಷವನ್ನು ಅಕಾರಕ್ಕೆ ತಂದರು.
ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಸರಕಾರದ ಬಗ್ಗೆ ಎಲ್ಲರಿಗೂ ಭಾರೀ ನಿರೀಕ್ಷೆಗಳಿದ್ದವು. ಕೆಲವು ಪತ್ರಿಕೆಗಳಂತೂ `ಕನರ್ಾಟಕದಲ್ಲಿ ರಾಮರಾಜ್ಯವೇ ಶುರುವಾಯಿತು’ ಎಂದೂ ಬರೆದುಬಿಟ್ಟವು. ಆದರೆ, ಒಂದು ವರ್ಷ ಕಳೆವುದರೊಳಗೆ ಎಲ್ಲ ನಂಬಿಕೆಯೂ ಉಲ್ಟಾ ಆಯಿತು. ಏಕೆಂದರೆ ಅಕಾರದ ಅಮಲಿನಲ್ಲಿ ಜನತಾ ಪಕ್ಷದವರೂ ಗುಂಡೂರಾವ್ ಸರಕಾರದಂತೆಯೇ ವತರ್ಿಸಲು ಶುರುಮಾಡಿದರು. ಅದೇ ಸಂದರ್ಭಕ್ಕೆ ಸರಿಯಾಗಿ ಪಡಿತರಕ್ಕೆ ಕೊರತೆ ಉಂಟಾಯಿತು. ಸಣ್ಣ ಪ್ರಮಾಣದಲ್ಲಿ ಬರವೂ ಬಂತು. ಒಂದು ಕಡೆಯಲ್ಲಿ ನೀರಿಲ್ಲ, ಕರೆಂಟಿಲ್ಲ, ಅಕ್ಕಿ ಇಲ್ಲ, ಬೇಳೆ ಇಲ್ಲ, ಸಕ್ಕರೆ ಇಲ್ಲ… ಇನ್ನೊಂದು ಕಡೆಯಲ್ಲಿ ಈ ಸಮಸ್ಯೆ ಪರಿಹಾರ ಯಾವಾಗ ಎಂಬುದಕ್ಕೆ ಸರಕಾರದಿಂದ ಪ್ರಾಮಾಣಿಕ ಉತ್ತರ ಸಿಗುತ್ತಿಲ್ಲ. ವಿಪರ್ಯಾಸವೆಂದರೆ, ಅಂಥ ಸಂದರ್ಭದಲ್ಲಿ ಶಾಸಕರು, ಸಚಿವರು ಆರಾಮಾಗಿದ್ದರು- ವಿಧಾನಸೌಧದಲ್ಲಿ’.
ಇದನ್ನೆಲ್ಲ ಕಂಡು ಕುದ್ದು ಹೋದ ವಿ. ಸೋಮಶೇಖರ್, ತಮ್ಮೊಳಗಿನ ಸಿಟ್ಟು, ಸಿಡಿಮಿಡಿಯನ್ನೇ ಸೇರಿಸಿಕೊಂಡು ನಾಯಕನ ಪಾತ್ರ ` ಸೃಷ್ಟಿಸಿದರು’. ನಂತರ ಅದನ್ನೇ ಚಿ. ಉದಯಶಂಕರ್ ಅವರಿಗೆ ಹೇಳಿಕೊಂಡರು. ನಂತರ- `ಸಾರ್, ಹೀರೋ ಎಲ್ಲವನ್ನೂ ಪ್ರಶ್ನಿಸುತ್ತಾ ಈ ವ್ಯವಸ್ಥೆಯ ತಪ್ಪುಗಳನ್ನು ಎತ್ತಿ ತೋರುತ್ತ, ಕೇಡಿಗರ ಮೇಲೆ ಕಿಡಿಕಾರುತ್ತಾ ಎಂಟ್ರಿ ಕೊಡುವ ಹಾಗೆ ಒಂದು ಹಾಡು ಬರೆದು ಕೊಡಿ. ಅದು ಎಲ್ಲ ಯುವ ಪೀಳಿಗೆಯ ಆಕ್ರೋಶದ ಹಾಡಿನಂತಿರಲಿ’ ಎಂದರು.
`ಸರಿ ಸರಿ’ ಎಂದ ಉದಯಶಂಕರ್, ನಂತರ ತಮಾಷೆ ಮಾಡುತ್ತಾ ಹೀಗೆಂದರಂತೆ. ಅಲ್ಲ ಕಣ್ರೀ ಸೋಮಶೇಖರ್, ನಮ್ಮದು ಶ್ರೀರಾಮಚಂದ್ರ ಆಳಿದ ರಾಮರಾಜ್ಯ. ಒಂದೇ ಅಗುಳಿನಿಂದ ಅನ್ನದ ರಾಶಿಯನ್ನೇ ಸೃಷ್ಟಿಸಿದ ಕೃಷ್ಣನ ದೇಶ. ಶಾಂತಿ-ಸಹಬಾಳ್ವೆಯನ್ನು ಬೋಸಿದ ಬುದ್ಧ-ಗಾಂ- ಬಾಳಿದ ದೇಶ. ಹೀಗಿರುವಾಗ ನಾವು ಅಕ್ಕಿ-ಬೇಳೆಗೆ ಪರದಾಡ್ತೇವೆ. ಅಶಾಂತಿಯ ನೆರಳಲ್ಲೇ ಬದುಕ್ತಾ ಇದೀವಿ ಅಂತೆಲ್ಲಾ ಹಾಡು ಬರೀಬೇಕಲ್ಲ? ವ್ಯಂಗ್ಯ ಅಲ್ಲವೇನ್ರೀ’ ಎಂದರಂತೆ.
ಈ ಮಾತುಗಳಿಂದ ತುಂಬಾ ಖುಷಿಯಾದ ಸೋಮಶೇಖರ್-`ಸಾರ್, ನನ್ನಗೆ ಏನು ಬೇಕಿದೆಯೋ ಅದಷ್ಟು ನಿಮ್ಮ ಮಾತುಗಳಲ್ಲೇ ಇದೆ. ಈಗ ಹೇಳಿದಿರಲ್ಲ? ಅದನ್ನೇ ಹಾಡಿನ ಸಾಲುಗಳಲ್ಲಿ ತಂದುಬಿಡಿ’ ಅಂದರಂತೆ.
ಆಗಲೂ `ಸರಿ ಸರಿ’ ಎಂದ ಉದಯಶಂಕರ್, ಜನಾರ್ದನ ಹೋಟೆಲಿನ ರೂಂ ನಂ. 108ರಲ್ಲಿ ಕೂತು ಹಾಡಿನ ಪಲ್ಲವಿ ಬರೆದೇ ಬಿಟ್ಟರು. ಪಲ್ಲವಿ ಮುಗಿಸಿದ ತಕ್ಷಣವೇ- ಹೀರೋ ಹೇಳಿ ಕೇಳಿ ಬಂಡಾಯ ಸ್ವಭಾವದ ಬಿಸಿರಕ್ತದ ತರುಣ. ಇಂದಿನ ಸಂಕಟಕ್ಕೆ ಯಾರು  ಕಾರಣ ಎಂದು ತಿಳಿದಿರುವವನು ಅಂದ ಮೇಲೆ- ಅಂಥವರನ್ನು ಏನು ಮಾಡಬೇಕು ಎಂಬುದೂ ಒಂದು ಆವೇಶದ ಮಾತಾಗಿಯೇ ಬರಬೇಕು. ಯಾರೇ ಅಕಾರಕ್ಕೆ ಬಂದರೂ ಬಡವರ ಕಷ್ಟಕ್ಕೆ ಸ್ಪಂದಿಸುವುದಿಲ್ಲ ಎಂಬುದೂ ಹಾಡಿನ ಸಾಲಲ್ಲಿ ಇರಬೇಕು ಅಂದುಕೊಂಡರಂತೆ. ನಂತರದ ಹತ್ತೇ ನಿಮಿಷದಲ್ಲಿ ಹಾಡು ರೆಡಿ!
ಹೀಗೆ, ಜನಾರ್ದನ ಹೋಟೆಲಿನ ಪ್ರಶಾಂತ ವಾತಾವರಣದಲ್ಲಿ, ಹತ್ತು ನಿಮಿಷದ ಏಕಾಂತದಲ್ಲಿ `ಸರ್ವಕಾಲಕ್ಕೂ ಸಲ್ಲುವಂಥ, ಯುವಜನತೆಯ ಮನದೊಳಗಿನ ರೊಚ್ಚನ್ನು ವಿವರಿಸುವಂಥ ಹಾಡೊಂದು ಸೃಷ್ಟಿಯಾಗಿ ಹೋಯಿತು.
***
ಎಂಥ ಕಾಕತಾಳೀಯವೋ ನೋಡಿ; ಈ ಹಾಡು ಬರೆದು ಆಗಲೇ 25 ವರ್ಷಗಳಾಗಿವೆ. (ಅಂದರೆ ಈ ಹಾಡಿಗೆ ಈಗ ರಜತ ಮಹೋತ್ಸವದ ಸಂಭ್ರಮ!?) ಈ ಹಾಡಿನಲ್ಲಿರುವ ಸಾಲುಗಳೆಲ್ಲ ಇಂದಿಗೆ ಹೆಚ್ಚು ಪ್ರಸ್ತುತ ಎನ್ನಿಸುವಂತಿವೆ. ಈಗ ಕನರ್ಾಟಕವನ್ನು, ಅಷ್ಟೇ ಅಲ್ಲ, ಇಂಡಿಯಾವನ್ನು ಅಭಿವೃದ್ಧಿ ಪಥದಲ್ಲಿ ನಾಗಾಲೋಟದಲ್ಲಿ ಸಾಗುತ್ತಿರುವ ನಾಡು ಎಂದೆಲ್ಲ ಬಣ್ಣಿಸಲಾಗುತ್ತಿದೆ. ಆದರೆ, ಅಕ್ಕಿಗೇ ಪರದಾಟ. ಬೇಳೆ, ಸಕ್ಕರೆಯ ಬೆಲೆ ಗಗನಕ್ಕೇರಿದೆ. ಹೀಗಿದ್ದರೂ ಕೆಲವೊಮ್ಮೆ `ಸ್ಟಾಕ್ ಇಲ್ಲ’ ಎಂಬ ಬೋಡರ್ು ಬೇರೆ? ಇಂಥ ಸಂದರ್ಭದಲ್ಲೊ  ನಮ್ಮನ್ನು ಆಳುವ ಜನ ಆರಾಮಾಗೇ ಇದ್ದಾರೆ. ಅವರನ್ನು ಕಂಡಾಗಲೆಲ್ಲ  ರಕ್ತ ಕುದಿಯುತ್ತದೆ. `ಗಜೇಂದ್ರ’ ಚಿತ್ರದ ನಾಯಕನಂತೆಯೇ ಹಾಡುವ ಆಸೆಯಾಗುತ್ತದೆ.
ಹೇಳಿ, ಈ ಹಾಡಿನ ಮಹತ್ವವನ್ನು ಇನ್ನೂ ವಿವರಿಸಬೇಕೆ?

‍ಲೇಖಕರು avadhi

February 9, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This