ಮಣಿಕಾಂತ್ ಬರೆದಿದ್ದಾರೆ: ಎಂದೂ ಕಾಣದ ಬೆಳಕ ಕಂಡೆ…

ಎ ಆರ್ ಮಣಿಕಾಂತ್

ಚಿತ್ರ: ಭೂಲೋಕದಲ್ಲಿ ಯಮರಾಜ. ಗೀತೆರಚನೆ: ದೊಡ್ಡರಂಗೇಗೌಡ

ಸಂಗೀತ: ಸಿ. ಅಶ್ವತ್ಥ್. ಗಾಯನ: ಎಸ್.ಪಿ.ಬಿ-

ಅವಳು: ಎಂದೂ ಕಾಣದ ಬೆಳಕ ಕಂಡೆ

ಒಂದು ನಲ್ಮೆಯ ಹೃದಯ ಕಂಡೆ

ನಿನ್ನಿಂದ ಬಾಳ ಮಧುರ ರಾಗ ಇಂದು ಮೂಡಿದೇ        ||ಪ||

ಅವನು: ಎಂದೂ ಕಾಣದ ನಗೆಯಾ ಕಂಡೆ

ಚಂಡಿ ಹುಡ್ಗಿ ಚೆಲುವಾ ಕಂಡೆ

ಮಾವನ ಮಗಳು ಮನಮೆಚ್ಚಿ ಬರಲು ಸ್ವಗರ್ಾನೆ ಸಿಕ್ಕೈತೆ       ||ಅ.ಪ||

ಅವಳು : ಕೆಡುವ ದಾರಿ ತುಳಿದಿರಲು ಬಂದು ನೆಲೆ ಕಾಣಿಸಿದೆ

ನನ್ನ ತಪ್ಪು ನೂರಿರಲು ಮರೆತು ನೀನು ಮನ್ನಿಸಿದೆ

ಹೊಂಗನಸು ತುಂಬಿ ಬಂದು ಕಣ್ಣ ತೆರೆಸಿದೆ

ಎಂದೆಂದಿಗೂ ನಿನ್ನ ಜತೆ ನಾನು ಬಾಳುವೆ, ನಾನು ಬಾಳುವೇ     ||1||

ಅವನು: ಯಾವ್ದೇ ಕಷ್ಟ ಬರದಂಗೆ ನೋಡ್ಕೊತೀನಿ ಹೂವಿನಂಗೆ

ಕೇಳು ನಿಂಗೆ ಬೇಕಾದಂಗೆ ತಂದ್ಕೊಡ್ತೀನಿ ಮರೀದಂಗೆ

ಏಸೋ ದಿನ ಕಂಡಾ ಕನ್ಸೂ ಕೂಡಿ ಬಂದೈತೆ

ಹಾಲಿನಗೆ ಬೆಣ್ಣೆಯಂತೆ ಪ್ರೀತಿ  ಬೆರೆತೈತೆ, ಪ್ರೀತಿ ಬೆರೆತೈತೇ    ||2||

ಅವನು ಹಳ್ಳಿ ಹೈದ. ಅವನ ಸೋದರ ಮಾವನ ಮನೆ ಬೆಂಗಳೂರಲ್ಲಿರುತ್ತೆ. ಮಾವನಿಗೆ ಮುದ್ದಾದ ಮಗಳಿರುತ್ತಾಳೆ. ಕಾಲೇಜು ಕಲಿಯುತ್ತಿರುತ್ತಾಳೆ. ಈ ಹಳ್ಳಿ ಹೈದ, ಮಾವನ ಮನೆಯ ಅಡ್ರೆಸ್ ಚೀಟಿಯೊಂದಿಗೆ ಬೆಂಗಳೂರಿಗೆ ಬರುತ್ತಾನೆ. ಮನೆ ಹುಡುಕಿಕೊಂಡು ಹೊರಟವನಿಗೆ ಆಕಸ್ಮಿಕವಾಗಿ ಮಾವನ ಮಗಳೇ ಸಿಗುತ್ತಾಳೆ. ಪರಸ್ಪರ ಪರಿಚಯ ಇಬ್ಬರಿಗೂ ಇರುವುದಿಲ್ಲ. ಈ ಭೂಪ, ಅವಳಲ್ಲಿಯೇ ಅಡ್ರೆಸ್ ವಿಚಾರಿಸುತ್ತಾನೆ. ಈ ಹಳ್ಳಿ ಹೈದನ ವೇಷ, ಅವನ ಅಸಡಾ ಒಸಡಾ ಮಾತು; ಅವನಿಗಿರುವ ನೆಂಟಸ್ತಿಕೆಯ ಹಿನ್ನೆಲೆ ಕೇಳಿ ಕಸಿವಿಸಿಗೊಂಡ ಆಕೆ, ಬೇಕೆಂದೇ ಅವನಿಗೆ ತಪ್ಪು ಅಡ್ರೆಸ್ ಹೇಳುತ್ತಾಳೆ. ದಾರಿ ತಪ್ಪಿಸುತ್ತಾಳೆ. ಇವನು, ಒಂದಿಡೀ ದಿನ ಎಲ್ಲೆಲ್ಲೋ ಅಲೆದಾಡಿ ಕಡೆಗೂ ಮಾವನ ಮನೆಗೆ ಬಂದು ನೋಡಿದರೆ, ದಾರಿ ತಪ್ಪಿಸಿದ ಬೆಡಗಿ ಅಲ್ಲಿಯೇ ಇರುತ್ತಾಳೆ.

ಹೇಳಿ ಕೇಳಿ ಮಾವನ ಮಗಳಲ್ಲವೆ? ಅದೇ ಕಾರಣಕ್ಕೆ ಈ ಹಳ್ಳಿ ಹೈದನಿಗೆ ಮೊದಲ ನೋಟದಲ್ಲೇ ಪ್ರೀತಿ ಶುರುವಾಗುತ್ತದೆ. ಅವಳಿಗೋ, ಇವನ ನೆರಳು ಕಂಡರೂ ಆಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ, ಆ ಮಾವನ ಮಗಳಿಗೆ ತನ್ನ ಸಹಪಾಠಿಯೊಬ್ಬನ ಮೇಲೆ ಒಲವಿರುತ್ತದೆ. ಆದರೆ, ಸಹಪಾಠಿಯದು ಕಪಟ ಪ್ರೀತಿ ಎಂಬುದು ಇವಳಿಗೆ ಗೊತ್ತಿರುವುದಿಲ್ಲ.

ಇಂಥ ಸಂದರ್ಭದಲ್ಲಿ ಮಾವನ ಮಗಳ ಮನಸು ಗೆಲ್ಲಲೆಂದು ಈ ಹಳ್ಳಿಹೈದ ಬಗೆಬಗೆಯಲ್ಲಿ ಪ್ರಯತ್ನಿಸುತ್ತಾನೆ. ಇವನದು ಪರಿಶುದ್ಧ ಮನಸ್ಸು. ಶುಶುದ್ಧ ಪ್ರೀತಿ. ಇವೆಲ್ಲಾ ಅವಳಿಗೆ ಅರ್ಥವಾಗುವುದೇ ಇಲ್ಲ. ಹೀಗಿರುವಾಗಲೇ ಸಹಪಾಠಿಯೊಂದಿಗೆ ಹೊರಗೆ ಹೋಗಿದ್ದಾಗ, ಆತ ಅತ್ಯಾಚಾರಕ್ಕೆ ಪ್ರಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ನುಗ್ಗಿ ಬಂದ ಹಳ್ಳಿ ಹೈದ, ಆ ಸಹಪಾಠಿಗೆ ನಾಲ್ಕು ಒದ್ದು, ಮಾವನ ಮಗಳ ಮಾನ ಕಾಪಾಡುತ್ತಾನೆ. ಅದುವರೆಗೂ ಮಾವನ ಮಗಳು ಮಾಡಿದ ಅವಮಾನ, ಹೆಜ್ಜೆ ಹೆಜ್ಜೆಗೂ ಹಂಗಿಸಿದ ರೀತಿ, ಅವಳ ಸೊಕ್ಕು, ಕರುಣೆಯನ್ನೇ ಅರಿಯದ ಮನಸ್ಸು… ಇದೆಲ್ಲದರ ಪರಿಚಯವಿದ್ದರೂ ಅವಳನ್ನು ಪ್ರೀತಿಸುತ್ತಾನೆ. ಗೌರವಿಸುತ್ತಾನೆ. ಆರಾಸುತ್ತಾನೆ. ಈವರೆಗೂ ನಿನ್ನ ಬದುಕಲ್ಲಿ ಆಗಿಹೋಗಿದ್ದೆಲ್ಲ ಒಂದು ಕೆಟ್ಟ ಕನಸು ಎಂದು ತಿಳ್ಕೋ ಎಂದು ಬುದ್ಧಿ ಹೇಳುತ್ತಾನೆ.

ಹಳ್ಳಿಹುಡುಗನ ಈ ನಿಷ್ಕಪಟ ಮನಸ್ಸು ಕಂಡು ಅವಳಿಗೆ ಕಣ್ತುಂಬಿ ಬರುತ್ತದೆ. ಅವನನ್ನು ಅವನ ಪ್ರೀತಿಯನ್ನು ದೊಡ್ಡ ಸಂಭ್ರಮದಿಂದ ಒಪ್ಪಿಕೊಳ್ಳುತ್ತಾಳೆ. ಆ ಸಡಗರದಲ್ಲೇ ಈ ಹಾಡು ಶುರುವಾಗುತ್ತದೆ: ` ಎಂದೂ ಕಾಣದ ಬೆಳಕ ಕಂಡೆ/ ಒಂದು ನಲ್ಮೆಯ ಹೃದಯ ಕಂಡೆ…’

1979ರಲ್ಲಿ ತೆರೆಕಂಡ `ಭೂಲೋಕದಲ್ಲಿ ಯಮರಾಜ’ ಚಿತ್ರದ ಗೀತೆ ಇದು. ಜೈನ್ ಕಂಬೈನ್ಸ್ ಲಾಂಛನದಲ್ಲಿ ತಯಾರಾದ ಈ ಚಿತ್ರ ನಿಮರ್ಿಸಿದವರು ಎನ್. ವೀರಾಸ್ವಾಮಿ ನಿದರ್ೇಶನದ ಹೊಣೆ ಹೊತ್ತಿದ್ದವರು ಸಿದ್ಧಲಿಂಗಯ್ಯ. ಈ ಚಿತ್ರದ ನಾಯಕ ಹಳ್ಳಿಯವನು. ಹಾಗಾಗಿ ಅವನು ಹಾಡುವ ಗೀತೆಗಳೂ  ಗ್ರಾಮ್ಯ ಭಾಷೆಯಲ್ಲಿರಬೇಕು. ಅಂಥವರಿಂದ ಹಾಡು ಬರೆಸಬೇಕು. ಜಾನಪದ ಗೀತೆಗಳಿಗೆ ನೀಡುವಂಥ ಸಂಗೀತ ಈ ಹಾಡುಗಳಿಗೆ ಇರಬೇಕು ಅಂದುಕೊಂಡರಂತೆ ಸಿದ್ಧಲಿಂಗಯ್ಯ. ಈ ಸಂದರ್ಭದಲ್ಲಿ ಅವರಿಗೆ ತಕ್ಷಣ ಹೊಳೆದ ಹೆಸರು ದೊಡ್ಡರಂಗೇಗೌಡ ಅವರದು. ಆಗಷ್ಟೇ `ಪರಸಂಗದ ಗೆಂಡೆತಿಮ್ಮ’ ಚಿತ್ರದ ಹಾಡುಗಳು ಎಲ್ಲರನ್ನೂ ಮೋಡಿ ಮಾಡಿದ್ದವು. ಇದನ್ನು ನೆನಪಿಸಿಕೊಂಡ ಸಿದ್ಧಲಿಂಗಯ್ಯ, ತಮ್ಮ ಹೊಸ ಚಿತ್ರಕ್ಕೆ ಗೀತೆ ರಚಿಸಲು ಗೌಡರೇ ಸರಿ ಅಂದುಕೊಂಡರು. ಅದನ್ನು ದೊಡ್ಡರಂಗೇಗೌಡರಿಗೆ ತಿಳಿಸಿಯೂ ಬಿಟ್ಟರು.

ಇಷ್ಟಾದ ಮೇಲೆ ಸಂಗೀತ ನಿದರ್ೇಶನದ ಹೊಣೆಯನ್ನು ಯಾರಿಗೆ ವಹಿಸುವುದು ಎಂದು ಚಡಪಡಿಕೆ ಶುರುವಾಯಿತು. ಆಗಲೇ ಡಾ. ರಾಜ್ ಅವರ ಸೋದರ ವರದಪ್ಪ ಅವರೊಂದಿಗೆ ಬೆಂಗಳೂರಿನ ಕೈಲಾಶ್ ಚಿತ್ರಮಂದಿರದಲ್ಲಿ ನಡೆಯುತ್ತಿದ್ದ `ಸ್ಪಂದನ’ ಸಿನಿಮಾಕ್ಕೆ ಹೋದರು ಸಿದ್ಧಲಿಂಗಯ್ಯ. ಆ ಚಿತ್ರದಲ್ಲಿ `ಎಂಥಾ ಮರುಳಯ್ಯ ಇದು ಎಂಥಾ ಮರುಳೂ…’ ಗೀತೆ ಕೇಳಿದ ನಂತರ, ಈ ಹಾಡಿಗೆ ಅಪರೂಪದ ಸಂಗೀತ ಒದಗಿಸಿರುವ ಅಶ್ವತ್ಥ್ ಅವರನ್ನೇ ಹಿಡಿದುಕೊಳ್ಳೋಣ. ಜಾನಪದ ಶೈಲಿಯಲ್ಲಿ ರಾಗ ಸಂಯೋಜಿಸುವುದು ಅವರಿಂದ ಖಂಡಿತ ಸಾಧ್ಯ ಅಂದುಕೊಂಡರಂತೆ. ನಂತರ, ತಮ್ಮಿಬ್ಬರಿಗೂ ಆಪ್ತರಾಗಿದ್ದ ಕೃಷ್ಣರಾಜು ಎನ್ನುವವರ ಮೂಲಕ ಅಶ್ವತ್ಥ್ಗೆ ವಿಷಯ ತಿಳಿಸಿ, ಒಮ್ಮೆ ನಿಮರ್ಾಪಕರಾದ ವೀರಾಸ್ವಾಮಿಯವರನ್ನು ಭೇಟಿ ಮಾಡಲು ಸೂಚಿಸಿದರಂತೆ.

ಆ ಭೇಟಿಯ ಸಂದರ್ಭವನ್ನು ಅದೊಮ್ಮೆ ಅಶ್ವತ್ಥರೇ ಹೀಗೆ ವಣರ್ಿಸಿದ್ದರು. `ಗೆಳೆಯ ಕೃಷ್ಣರಾಜುವಿನ ಸಲಹೆಯಂತೆ ವೀರಾಸ್ವಾಮಿ ಅವರ ಬಳಿಗೆ ಹೋದೆ. ಜತೆಯಲ್ಲಿ ದೊಡ್ಡರಂಗೇಗೌಡ ಹಾಗೂ ಕೃಷ್ಣ ರಾಜು ಇದ್ದರು. ವೀರಾಸ್ವಾಮಿಗಳು 555 ಸಿಗರೇಟು ಹಚ್ಚಿಕೊಂಡು ಒಂದು ಧಮ್ ಎಳೆದು ಹೇಳಿದರು: ನೋಡಿ ಇವರೇ, ನಮ್ಮ ಹೊಸ ಸಿನಿಮಾದಲ್ಲಿ ನಾಲ್ಕು ಹಾಡುಗಳಿರ್ತವೆ. ಒಂದೊಂದು ಹಾಡಿಗೆ ನೀವು ತಲಾ ಮೂರು ಟ್ಯೂನ್ ಕೊಡಬೇಕು. ಅದರಲ್ಲಿ ಬೆಸ್ಟ್ ಅನ್ನಿಸೋದನ್ನ ನಾವು ಆರಿಸಿಕೊಳ್ತೀವಿ. ಆಯ್ತಾ? ಈಗ ಹೊರಡಿ. ಟ್ಯೂನ್ ಮಾಡ್ಕೊಂಡು ಬನ್ನಿ…’

ಅಲ್ಲಿಂದ ಬರುತ್ತಿರುವಾಗ ನಾನು ಹೇಳಿದೆ:  `ಇಲ್ಲಿ  ಕೇಳ್ರಿ. ಇದು ನನ್ನ ಕೈಲಿ ಆಗದ ಕೆಲಸ. ನನಗೆ ಒಂದು ಹಾಡಿಗೆ ಒಂದು ಟ್ಯೂನ್ ಹಾಕಿ ಅಭ್ಯಾಸ. ಒಂದೊಂದು ಹಾಡಿಗೆ ಎರಡು-ಮೂರು ಟ್ಯೂನ್ ಮಾಡೋದು ನನಗೆ ಆಗಿಬರೊಲ್ಲ. ನನ್ನನ್ನು ಬಿಟ್ಟುಬಿಡಿ. ಬೇರೆಯವರನ್ನು ಸೆಲೆಕ್ಟ್ ಮಾಡಿಕೊಳ್ಳಲು ಅವರಿಗೆ ಹೇಳಿಬಿಡಿ’  ಅಂದೆ.

ಈ ಸಂದರ್ಭದಲ್ಲಿ ದೊಡ್ಡ ರಂಗೇಗೌಡರು ನನಗೆ ಧೈರ್ಯ ತುಂಬಿ ಹೇಳಿದರು: ನೋಡಿ ಅಶ್ವತ್ಥ್,  ಇದು ದೊಡ್ಡ ಬ್ಯಾನರ್ನ ಚಿತ್ರ. ಇದನ್ನು ಕೈ ಬಿಡಬೇಡಿ. ಒಳ್ಳೆಯ ಅವಕಾಶವನ್ನು ಕಳ್ಕೋಬೇಡಿ. ಒಂದು ಕೆಲ್ಸ ಮಾಡೋಣ. ನಾನು ಹಾಡು ಬರೆದು ಕೊಡ್ತೇನೆ. ನೀವು ರಾಗ ಸಂಯೋಜಿಸಿ ಆಮೇಲೆ ಏನಾಗುತ್ತೋ ನೋಡಿಕೊಳ್ಳೋಣ….’

ಮುಂದೆ ಏನಾಯಿತು ಎಂಬ ಪ್ರಶ್ನೆಗೆ ದೊಡ್ಡರಂಗೇಗೌಡರು ಉತ್ತರಿಸಿದ್ದು ಹೀಗೆ: `ನಾಯಕ ಹಳ್ಳಿಗಮಾರ. ನಾಯಕಿ ಬೆಂಗಳೂರಿನ ಬೆಡಗಿ. ಅವಳು ನಾಯಕನಿಗೆ ಕೃತಜ್ಞತೆ ಸೂಚಿಸುವ ರೀತಿಯಲ್ಲಿ ಹಾಡಿರಬೇಕು. ಸ್ವಲ್ಪ ಹದ್ದುಮೀರಿದಂತಿದ್ದ ತನ್ನ ನಡವಳಿಕೆಯ ಬಗ್ಗೆ ಗೊತ್ತಿದ್ದೂ ಅವನು ಪ್ರೀತಿಸಲು ಒಪ್ಪಿದ್ದು ಇವಳಿಗೆ ಮಹತ್ವದ್ದಾಗಿ ಕಂಡಂತೆ  ಸಾಲುಗಳಿರಬೇಕು. ಇವಳು ಕೃತಜ್ಞತೆಯ ಭಾವದಲ್ಲಿ ಹಾಡಿದರೆ, ಅವನು ಮಾವನ ಮಗಳು ಒಪ್ಪಿದ್ದೇ ಸ್ವರ್ಗಸುಖಕ್ಕೆ ಸಮಾನ ಎಂದು ಹೇಳುವಂತೆ ಹಾಡಿನ ಸಾಲುಗಳಿರಬೇಕು. ಅವನು ಹಾಡುವಾಗ ಗ್ರಾಮ್ಯ ಭಾಷೆಯೂ, ಅವಳು ಹಾಡುವಾಗ ನಗರದ ನವಿರು ಭಾಷೆಯೂ ಬರಬೇಕು…’

ಹೀಗೆಲ್ಲ  ಅಂದಾಜು ಮಾಡಿಕೊಂಡೇ ಆನಂದರಾವ್ ಸರ್ಕಲ್ನಲ್ಲಿದ್ದ ಟೂರಿಸ್ಟ್ ಹೋಟೆಲ್ಗೆ ಬಂದೆ. ಜತೆಯಲ್ಲಿ ಅಶ್ವತ್ಥ್ ಇದ್ದರು.  ತಬಲಾ ವಾದಕನೂ ಇದ್ದ. ಹೋಟೆಲಿನಲ್ಲಿ ಚಂದೂಲಾಲ್ ಜೈನ್, ಸಿದ್ದಲಿಂಗಯ್ಯ ಹಾಗೂ ವರದಪ್ಪ ಸೇರಿಕೊಂಡರು. ಆ ವೇಳೆಗೆ, ಬಂಗಾರದ ಮನುಷ್ಯ ಚಿತ್ರದಿಂದ ಮನೆಮಾತಾಗಿದ್ದರು ಸಿದ್ದಲಿಂಗಯ್ಯ. ಅವರನ್ನು ನಾನೂ ಆರಾಸುತ್ತಿದ್ದೆ. ಅವರ ನಿದರ್ೇಶನದ ಚಿತ್ರಕ್ಕೆ ಹಾಡು ಬರೆದ ಅವಕಾಶ ಸಿಕ್ಕಿದ್ದು ದೊಡ್ಡ ಗೌರವ ಎಂದುಕೊಂಡಿದ್ದೆ. ಆ ಸಂದರ್ಭದಲ್ಲಿಯೇ ಸಿದ್ಧಲಿಂಗಯ್ಯ ಹೇಳಿದರು : `ನೋಡಿ ಗೌಡ್ರೆ, ಸಾಮಾನ್ಯವಾಗಿ ಡ್ಯುಯೆಟ್ ಸಾಂಗ್ ಅಂದ್ರೆ ಅದರಲ್ಲಿ ಗಂಡು-ಹೆಣ್ಣಿನ ಭಾಷೆ ಒಂದೇ ಆಗಿರುತ್ತದೆ. ಆ ನಂಬಿಕೆಯನ್ನು ನಾವು ಮುರಿಯೋಣ. ಕಲಿತ ನಾಯಕಿ ಮತ್ತು ಕಲಿಯದ ನಾಯಕನಿಗೆ ಹೊಂದುವಂಥ ಸಾಲುಗಳ ಹಾಡು ಬರೀರಿ…’

ಸಿದ್ದಲಿಂಗಯ್ಯನವರ ಈ ಮಾತು ಕೇಳುತ್ತಿದ್ದಂತೆಯೇ ಮಿಂಚಿನಂತೆ ಹೊಸ ಸಾಲೊಂದು ಹೊಳೆಯಿತು. ಅದೇ-`ಎಂದೂ ಕಾಣದ ಬೆಳಕ ಕಂಡೆ…’ ಇದಿಷ್ಟನ್ನೂ ಬರೆದು ಅತ್ವತ್ಥ್ಗೆ ತೋರಿಸಿದೆ. ಅದಕ್ಕೂ ಮುಂಚೆಯೇ ಹಾಡಿನ ಸಂದರ್ಭ ಹೇಳಿದ್ದಾಗ, ಅಶ್ವತ್ಥ್ ಒಂದು ಟ್ಯೂನ್ ಕೇಳಿಸಿದ್ದರು.  ಈಗ ಹಾಡಿನ ಸಾಲು ಕಂಡಾಕ್ಷಣ ಅವರ ಮುಖ ಅರಳಿತು. ತಕ್ಷಣವೇ ಅವರು-`ಸಾರ್, ನನಗೂ ಒಂದು ಬೆಳಕು ಕಾಣಿಸಿತು’ ಎಂದು ಉದ್ಗರಿಸಿದರು. ಹಿಂದೆಯೇ ಒಂದು ಒಳ್ಳೆಯ ಟ್ಯೂನ್ ಹಾಕಿಬಿಟ್ಟರು. ಅಕ್ಕ ಪಕ್ಕದಲ್ಲಿದ್ದ ಚಂದೂಲಾಲ್ ಜೈನ್, ಸಿದ್ದಲಿಂಗಯ್ಯ, ವರದಪ್ಪ ಅವರ ಪ್ರೋತ್ಸಾಹ, ಮೆಚ್ಚುಗೆಯ ಮಧ್ಯೆಯೇ ಹಾಡು ಮುಂದುವರೆಯಿತು. ಒಂದೊಂದೇ ಹೊಸ ಸಾಲು ಸೇರಿಕೊಳ್ಳುತ್ತಾ ಹೋಯಿತು.

ಈ ಹಾಡಿನಲ್ಲಿ ನಾಯಕ ಹೇಳುವ ಕೆಲವು ಸಾಲುಗಳು-ಉದಾಹರಣೆಗೆ -`ಯಾವ್ದೇ ಕಷ್ಟ ಬರದಂಗೆ, ನೋಡ್ಕೊತೀನಿ ಹೂವಿನಂಗೆ/ ಕೇಳು ನಿಂಗೆ ಬೇಕಾದಂಗೆ ತಂದ್ಕೊಡ್ತೀನಿ ಮರೀದಂಗೆ…’ ಮುಂತಾದವು ನನ್ನ ಹೆಂಡತಿಗೆ ನಾನು ಹೇಳಬೇಕಿದ್ದ ಮಾತುಗಳೇ ಆಗಿದ್ದವು. ಏಕೆಂದರೆ ಆಗಷ್ಟೇ ನಾನು ಅಪ್ಪ- ಅಮ್ಮನ ವಿರೋಧ ಲೆಕ್ಕಿಸದೆ ಆರ್ಯ ಸಮಾಜದಲ್ಲಿ ಮದುವೆಯಾಗಿದ್ದೆ. ಈ ಸಂದರ್ಭದಲ್ಲಿ ಸಹಜವಾಗಿಯೇ ನನ್ನ ಪತ್ನಿ ಗಾಬರಿಯಾಗಿದ್ದಳು. ಅವಳಿಗೆ ಧೈರ್ಯ ಹೇಳಬೇಕಿತ್ತು. ನನ್ನ ಮನದ ಭಾವನೆಯನ್ನೆಲ್ಲ ಅವಳೆದುರು ತೆರೆದಿಡಬೇಕಿತ್ತು. ಅದೆಲ್ಲವನ್ನೂ ಹಾಡಿನಲ್ಲಿ ತಂದೆ. ಕಡೆಗೊಮ್ಮೆ ಹಾಡು ಮುಗಿಸಿದ ನಂತರ ಅಶ್ವತ್ಥ್ ಹಾಡಲು ಶುರುಮಾಡಿದರು. ಅವರ ಸೂಚನೆಯನ್ನೇ ಅನುಸರಿಸುತ್ತಾ ತಬಲಾದವನು ಸಾಥ್ ಕೊಟ್ಟ. ಹಾಡು ಮತ್ತು ಅದಕ್ಕೆ ಹಾಕಿದ್ದ ಟ್ಯೂನ್ ಎಲ್ಲರಿಗೂ ಒಪ್ಪಿಗೆಯಾಯಿತು. ಈ ಖುಷಿಯಲ್ಲಿಯೇ-`ಯೌವನಾ, ಮೋಜಿನಾ’ ಎಂಬ ಕ್ಯಾಬರೆ ಹಾಡನ್ನೂ ಬರೆದು ಮುಗಿಸಿದೆ. ಅದಕ್ಕೂ ಟ್ಯೂನ್ ಮಾಡಿದ್ದಾಯ್ತು’.

***

ಇಷ್ಟಾದ ಮೇಲೆ, ಎಲ್ಲರೂ ವೀರಾಸ್ವಾಮಿಯವರ ಆಫೀಸಿಗೆ ಹೋಗಿದ್ದಾರೆ. ಟ್ಯೂನ್ ರೆಡೀನಾ ಅಂತ ಕೇಳಿದರೆ-ಟ್ಯೂನ್ ಜತೆಗೆ ಹಾಡೂ ರೆಡಿ ಅಂದಿದ್ದಾರೆ. `ಜತೆಯಲ್ಲಿ ಆಕರ್ೆಸ್ಟ್ರಾ ಟೀಂ ಇಲ್ಲದ್ದು ಕಂಡ ವೀರಾಸ್ವಾಮಿ-` ಏನ್ರೀ, ಒಬ್ರೇ ಬಂದಿದೀರಲ್ರಿ ಅಶ್ವತ್ಥ್? ಆಕರ್ೆಸ್ಟ್ರಾ ಎಲ್ಲಿ? ವಾದ್ಯದೊಂದಿಗೆ ಹಾಡು ಕೇಳಿ ನಂಗೆ ಅಭ್ಯಾಸ. ಸುಮ್ನೇ ನೀವು ಹಾಡೋದನ್ನ ಕೇಳ್ಬೇಕಾ ಎಂದು ರೇಗಿದ್ದಾರೆ. ಆಗ ಸಿದ್ಧಲಿಂಗಯ್ಯ- ಒಂದು ಸತರ್ಿ ಟ್ಯೂನ್ ಕೇಳಿ ಸಾರ್. ಆಮೇಲೆ ಮಾತು’ ಅಂದರಂತೆ.

ನಂತರ ಅಶ್ವತ್ಥ್ `ಎಂದೂ ಕಾಣದ ಬೆಳಕ ಕಂಡೆ’ ಹಾಡಿದ್ದಾರೆ. ಆ ಹಾಡು, ಅದರ ಟ್ಯೂನ್ ಹಾಗೂ ಅಶ್ವತ್ಥ್ ಗಾಯನಕ್ಕೆ ಮರುಳಾದ ವೀರಾಸ್ವಾಮಿ-`ಭೇಷ್ ಭೇಷ್, ನಿಮ್ಮ ಹಾಡಿಗೆ ಯಾವ ಸಂಗೀತದ ಹಿನ್ನೆಲೆಯೂ ಬೇಕಿಲ್ಲ, ತುಂಬ ಚನ್ನಾಗಿದೆ’ ಅಂದರಂತೆ. ಈ ಸಂದರ್ಭ ನೆನೆದುಕೊಂಡು ಆಗಾಗ್ಗೆ ಅಶ್ವತ್ಥ್ ಹೇಳುತ್ತಿದ್ದರು-`ಅದು ಎಂಥ ಇಕ್ಕಟ್ಟಿನ ಪರಿಸ್ಥಿತಿ ಗೊತ್ತೇನ್ರೀ? ವೀರಾಸ್ವಾಮಿಯವರು ಮೂರು ಟ್ಯೂನ್ ಕೇಳಿದ್ರು. ನಾನು ಎರಡನೇ ಟ್ಯೂನ್ ಕೂಡ ಮಾಡಿಕೊಂಡು ಹೋಗಿರಲಿಲ್ಲ!’ ಬೈಛಾನ್ಸ್, ಇನ್ನೊಂದು ಟ್ಯೂನ್ ಹೇಳಪ್ಪ ಅಂದಿದ್ರೆ ಏನ್ಮಾಡಬೇಕಿತ್ತು ಹೇಳಿ….’

‍ಲೇಖಕರು avadhi

April 3, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

೧ ಪ್ರತಿಕ್ರಿಯೆ

  1. armanikanth

    ee haadannu s..p avarondige haadiruvavaru VANI JAYARAM…lekhana da modala saalinalli ee hesaru bittu hogide…dayamaadi gamanisabekaagi vinanthi,…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: