ಮಣಿಕಾಂತ್ ಬರೆದಿದ್ದಾರೆ: ಕೈಲಾಸಂ ಕನ್ನಡ ತಂದರು ಹಂಸಲೇಖ!

ಎ ಆರ್ ಮಣಿಕಾಂತ್
ಚಿತ್ರ: ಕಲಿಯುಗ ಭೀಮ  ಗಾಯನ:  ಎಸ್.ಪಿ. ಬಾಲಸುಬ್ರಹ್ಮಣ್ಯಂ
ಸಾಹಿತ್ಯ-ಸಂಗೀತ:  ಹಂಸಲೇಖ

ಹ್ಯಾಪಿ ಬರ್ತ್ ಡೇ ಟು ಯೂ, ಹ್ಯಾಪಿ ಬರ್ತ್ ಡೇ ಟು ಯೂ
ಹ್ಯಾಪಿ ಬರ್ತ್ ಡೇ ಟು ಯೂ ಮೈ ಸನ್ ಇಂಡಿಯಾ, ಹ್ಯಾಪಿ ಬರ್ತ್ ಡೇ ಟು ಯೂ
ಈ ತಾಯಿಯ ಹಾರ್ಟು ಮೌಂಟ್ ಎವರೆಸ್ಟು
ಆ ಶಿಖರದ ಹೈಟು ತಿಳಿದವರೆಷ್ಟು  ||ಪ||
ಕೈ ತುತ್ತು ಕೊಟ್ಟೋಳೆ ಐ ಲವ್ಯೂ ಮೈ ಮದರ್ ಇಂಡಿಯಾ, ಮದರ್ ಇಂಡಿಯಾ
ಯಾವತ್ತೂ ಕಾಯೋಳೆ ಐ ಡೋಂಟ್ ಲೀವ್, ಮೈ ಮದರ್ ಇಂಡಿಯಾ ಮದರ್ ಇಂಡಿಯಾ
ತಾಯಿಗೆ ಮಿಗಿಲಾದ ಗಾಡ್ ಇಲ್ಲ ಅಂತ ನಂಬಿರೋ ಸನ್ ಇಂಡಿಯಾ
ಬಾಯಿಗೆ ತುತ್ತಿಟ್ಟ  ಮಮ್ಮಿಗೆ ಪ್ರಾಣ ನೀಡುವೆ ನೀ ಕಂಡೆಯಾ  ||ಅ.ಪ||
ಫುಡ್ ಇಲ್ದೆ ಕ್ಲಾತ್ ಇಲ್ದೆ ನಿಂತಿದ್ದೆ ನಾನು ಫುಟ್ಪಾತ್ನಲ್ಲೊಂದು ದಿನ
ಕಣ್ಣಿದ್ದೂ ನೋಡದೆ ಹೋದರು ಫುಡ್ಡು ಕ್ಲಾತ್ ಇದ್ದ ಎಷ್ಟೋ ಜನ
ಮುಚ್ಚಿದ್ದ ಕಣ್ಣಿನ ಮೇಲಿದ್ದ ನೋವ ಮುಟ್ಟಿತ್ತು ಒಂದು ಕೈ
ಅತ್ತಿದ್ದ ಕೆನ್ನೆಗೆ ಮೆತ್ತಿದ್ದ ಬಿಸಿ ಕಂಬಿನಿ ಒರೆಸಿದ ಕೈ
ಕೊಡುಗೈ ದೇವರನ್ನು ನಾನೆಂದೂ ಕಾಣೆ
ನನಗೆ ನೀನೇ ದೈವವು ನನ್ನಾ ಆಣೆ  ||1||
ಬೆಡ್ಡಿಲ್ದೆ ಬ್ಲಡ್ ಇಲ್ದೆ ಮಲಗಿದ್ದೆ ನಾನು ಸರಕಾರಿ ಆಸ್ಪತ್ರೇಲಿ
ನಮ್ಮಮ್ಮ ಅಲ್ಲಿಗೆ ಬರ್ದಿದ್ರೆ ನನ್ ಬಾಡಿ ಷೋಕೇಸಲ್ಲಿ
ಬಂದಳೋ ನಮ್ಮಮ್ಮ ಬಂದಳೋ ಎಲ್ಲಾ ದೇವರ ನಡುಗಿಸಲು
ಪ್ರೀತಿಯ ಔಷಧ ಬಾಡಿಗೆ ಕೊಟ್ಟು ಮಗನನ್ನು ಬದುಕಿಸಲು
ಅಮ್ಮಾ ಎಂಬ ಮಾತಲಿ ಇದೆಯೋ ಮೆಡಿಸನ್
ಮಗನೇ ಎಂದ ಕೂಡಲೇ ಲೈಫೋ ಮೈಸನ್ ||2||
ಹ್ಯಾಂಡ್ ಕೆಸರಾದರೆ ತಾನೆ ನಮ್ಮ ಮೌತ್ ಮೊಸರಾಗುವುದು
ವರ್ಕೇ ವರ್ಶಿಪ್ ಎಂದರೆ ಸುತ್ತೋ ಗ್ಲೋಬಲಿ ಹೆಸರುಳಿಯುವುದು
ದೇವರು ಕೊಟ್ಟಿದ್ದ ಹಂಚದೆ ಕೂಡಿಟ್ಟರೆ ತಪ್ಪು ಮಗಾ
ಬಡವರ ಸೇವೆಯೆ ಪೂಜೆಯು ಎಂದ ಮಮ್ಮಿಗೆ ಜೈಜೈ ಈಗ
ನಾನೇ ಕರುವು ಆದರೆ ಅವಳೆ ಹಸುವು
ಅಮ್ಮಾ ಎಂದ ಕೂಡಲೇ ಇರದೂ ಹಸಿವು ||3||

ಖಳನಟನಾಗಿ ಚಿತ್ರರಂಗಕ್ಕೆ ಬಂದು ಜನಪ್ರಿಯ ನಾಯಕ ರಾದವರಲ್ಲಿ ಪ್ರಭಾಕರ್ ಕೂಡ ಒಬ್ಬರು. ಅಭಿಮಾನಿಗಳಿಂದ `ಟೈಗರ್’ ಎಂದು ಕರೆಸಿಕೊಂಡ ಹೆಗ್ಗಳಿಕೆ ಅವರದು. ಖಳನಾಯಕನಾಗಿದ್ದ ದಿನಗಳಲ್ಲಿ ಕೂಡ, ಅವರು ತೆರೆಯ ಮೇಲೆ ಕಂಡರೆ ಸಾಕು-ಶಿಳ್ಳೆ ಹಾಕಿ, ಚಪ್ಪಾಳೆ ಹೊಡೆದು ಸಂಭ್ರಮಿಸುವ ಜನರಿದ್ದರು. ಫೈಟಿಂಗ್ನ ಸಂದರ್ಭಗಳಲ್ಲಂತೂ ಪ್ರಭಾಕರ್ ಪಡೆದಷ್ಟು ಶಿಳ್ಳೆ, ಚಪ್ಪಾಳೆಗಳನ್ನು ಬಹುಶಃ ಇನ್ಯಾವ ನಾಯಕರೂ ಪಡೆದಿಲ್ಲವೇನೋ. ಅವರು,  ಹಣೆಯ ಮೇಲಿನ ಕೂದಲನ್ನು ಒಮ್ಮೆ ಕುಣಿಸಿ, ಎಡಗೆನ್ನೆಯ ಮಾಂಸವನ್ನು ಒಮ್ಮೆ ಅದುರಿಸಿ, ವ್ಯಂಗ್ಯವಾಗಿ ನಕ್ಕು, ಕರಾಟೆಯ ಆ್ಯಕ್ಷನ್ಗೆ ಬಂದು ನಿಂತರೆ ಸಾಕು; ಥಿಯೇಟರಿನಲ್ಲಿದ್ದ ಜನ `ಹೋ’ ಎಂದು ಚೀರುತ್ತಿದ್ದರು. ಭರ್ಜರಿ ಅಂಗಸೌಷ್ಠವ ಹೊಂದಿದ್ದ ಪ್ರಭಾಕರ್, ಅದೇ ಕಾರಣಕ್ಕೆ ಯುವಕರ ಪಾಲಿನ ರೋಲ್ಮಾಡೆಲ್ ಆಗಿದ್ದರು.
ಇಂಥ ಹಿನ್ನೆಲೆಯ ಪ್ರಭಾಕರ್ಗೆ ಬ್ರೇಕ್ ಸಿಕ್ಕಿದ್ದು 1982ರಲ್ಲಿ ತೆರೆಕಂಡ ಅಬ್ಬಾಯಿನಾಯ್ಡು ನಿರ್ಮಾಣದ `ಚೆಲ್ಲಿದ ರಕ್ತ’ ಚಿತ್ರದಿಂದ. ಆ ಚಿತ್ರದ ಪೋಷಕ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ ಪ್ರಭಾಕರ್, ಅವಕಾಶ ಸಿಕ್ಕರೆ ನಾನೂ ನಾಯಕನಾಗಿ ಮಿಂಚಬಲ್ಲೆ ಎಂಬುದಕ್ಕೆ ಸಾಕ್ಷಿ ಒದಗಿಸಿದರು. ಆ ನಂತರದಲ್ಲಿ ಒಂದೊಂದೇ ಒಳ್ಳೆಯ ಪಾತ್ರಗಳು ಪ್ರಭಾಕರ್ಗೆ ಸಿಕ್ಕುತ್ತಾ ಹೋದವು. ಮುಂದೆ ಪ್ರಭಾಕರ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ  `ಮುತ್ತೈದೆ ಭಾಗ್ಯ’ ಚಿತ್ರ ಶತದಿನೋತ್ಸವ ಆಚರಿಸಿತು. ಮಾತ್ರವಲ್ಲ, ಪ್ರಭಾಕರ್ಗೆ ಪೊಲೀಸ್ ಅಕಾರಿಯ ಪಾತ್ರಗಳು ಕಾಯಂ ಆಗುವಂತೆ ಮಾಡಿತು.
ಹೀಗೆ, ಯಶಸ್ಸಿನ ಒಂದೊಂದೇ ಮೆಟ್ಟಿಲೇರಿಬಂದ ಪ್ರಭಾಕರ್ ಮುಂದೆ ತಾವೇ ಕಥೆ ಬರೆದರು. ಚಿತ್ರಕಥೆ ಬರೆದರು. ನಿರ್ಮಾಪಕರಾದರು. ನಿರ್ದೇಶನವನ್ನೂ ಮಾಡಿ ಗೆದ್ದರು. ಸ್ವಾರಸ್ಯವೆಂದರೆ, ಡಿಶುಂಡಿಶುಂ ಪಾತ್ರಗಳಿಗೆ ಹೆಸರಾಗಿದ್ದ ಪ್ರಭಾಕರ್ ಅವರ ಚಿತ್ರಗಳಲ್ಲಿ ಸೆಂಟಿಮೆಂಟ್ಗೂ ಅಷ್ಟೇ ಪ್ರಾಧಾನ್ಯವಿರುತ್ತಿತ್ತು.
`ಕಲಿಯುಗ ಭೀಮ’ ಚಿತ್ರದ `ಕೈ ತುತ್ತು ಕೊಟ್ಟೋಳೆ ಐ ಲವ್ಯೂ’ ಹಾಡಿನ ಬಗ್ಗೆ ಬರೆಯುವ ಮುನ್ನ ಹೀಗೆಲ್ಲ ಪ್ರಭಾಕರ್ ಅವರ ಪಾತ್ರ ಪರಿಚಯ ಮಾಡಬೇಕಾಯಿತು. ಕನ್ನಡ ಮತ್ತು ಇಂಗ್ಲಿಷ್ ಪದಗಳ ಸಮಾನ ಮಿಶ್ರಣದಂತಿರುವ ಈ ಹಾಡು ಚಿತ್ರದಲ್ಲಿ ಬರುವ ಸಂದರ್ಭ ಹೀಗಿದೆ:  ಅವನೊಬ್ಬ  ಹಾಲುಗಲ್ಲದ ಅನಾಥ. ಅವನಿಗೆ ತಾಯಿ ಯೊಬ್ಬಳು ಆಶ್ರಯ ಕೊಡುತ್ತಾಳೆ. ಸ್ವಂತ ಮಗನಿಗಿಂತ ಹೆಚ್ಚಾಗಿ ಸಾಕುತ್ತಾಳೆ. ಆತ ಮದುವೆಯ ವಯಸ್ಸಿಗೆ ಬಂದಾಗ ಕೂಡ ಚಿಕ್ಕ ಮಗುವನ್ನು ಉಪಚರಿಸುವಂತೆಯೇ ಆದರಿಸುತ್ತಾಳೆ. ವರ್ಷ ವರ್ಷವೂ ತಪ್ಪದೆ ಬರ್ತ್ ಡೇ ಮಾಡುತ್ತಾಳೆ. ಒಂದು ಸಂದರ್ಭದಲ್ಲಿ ಆತ ಕೇಡಿಗಳೊಂದಿಗೆ ಫೈಟ್ ಮಾಡಿ ಪೆಟ್ಟು ಮಾಡಿಕೊಂಡು ಬಂದಿರುತ್ತಾನೆ. ಅವತ್ತೇ ಅವನ ಬತರ್್ಡೇ ಇರುತ್ತದೆ. ಈ ತಾಯಿ, ಮನೆಯಲ್ಲಿ ಕೇಕ್ ಹಾಗೂ ಬಗೆ ಬಗೆಯ ತಿಂಡಿ ಮಾಡಿಟ್ಟುಕೊಂಡು ಮಗನಿಗಾಗಿ ಕಾಯುತ್ತಿರುತ್ತಾಳೆ. ಆತ ಬಂದ ತಕ್ಷಣ ಕೇಕ್ ತಿನ್ನಿಸಿ, ದೃಷ್ಟಿ  ತೆಗೆದು, ಪುಟ್ಟ ಮಗುವಿನಂತೆ ಚಪ್ಪಾಳೆ ಹೊಡೆದು ಹ್ಯಾಪಿ ಬರ್ತ್ ಡೇ ಹೇಳುತ್ತಾಳೆ. ಅನಾಥನಾದ ತನ್ನನ್ನು ಹೆತ್ತಮ್ಮನಿಗಿಂತ ಹೆಚ್ಚಾಗಿ ಸಾಕಿದ ಆ ತಾಯಿಯ ವಾತ್ಸಲ್ಯ ಕಂಡು ನಾಯಕ ಹಾಡುತ್ತಾನೆ: `ಕೈ ತುತ್ತು ಕೊಟ್ಟೋಳೆ ಐ ಲವ್ಯೂ…’
`ಇಂಥದೊಂದು ಹಾಡು ಬರೆಸಲು ಪ್ರಭಾಕರ್ ಅವರಿಗೆ ಇದ್ದ  ಪ್ರೇರಣೆಯಾದರೂ ಏನು ಎಂಬ ಪ್ರಶ್ನೆಗೆ ಅವರ ಸುಪುತ್ರ ವಿನೋದ್ ಪ್ರಭಾಕರ್ ಹೇಳಿದ್ದಿಷ್ಟು: `ನಮ್ಮ ಡ್ಯಾಡಿಗೆ ಅವರ ಮಮ್ಮೀನ ಕಂಡ್ರೆ ತುಂಬಾ ಪ್ರೀತಿಯಿತ್ತು. ಗೌರವವಿತ್ತು. ಅಮ್ಮನ ಮಾತೇ ವೇದವಾಕ್ಯ ಅಂತ ನಮ್ಮ ಡ್ಯಾಡಿ ನಂಬಿದ್ದರು. ಅದಕ್ಕೆ ಒಂದು ಉದಾಹರಣೆ ಕೇಳಿ: ವೃತ್ತಿಯಿಂದ ನಮ್ಮ ಅಜ್ಜಿ ನರ್ಸ್ ಆಗಿದ್ದರು. ಅದೊಂದು ದಿನ ಚಿಕ್ಕವನಿದ್ದ ಮಗನಿಗೆ  ನಾನು ಬರೋ ತನಕ ಎಲ್ಲೂ ಹೋಗಬೇಡ. ಇಲ್ಲೇ ಇರು ಎಂದು ಹೇಳಿ ಆಸ್ಪತ್ರೆಗೆ ಹೋದರಂತೆ ಅಜ್ಜಿ. ಅಲ್ಲಿನ ಕೆಲಸ ಮುಗಿಸಿ ಹಿಂದಿರುಗೋ ವೇಳೆಗೆ ಸಂಜೆಯಾಗಿ ಹೋಗಿದೆ. ನಾನು ಬರೋ ತನಕ ಎಲ್ಲೂ ಹೋಗಬೇಡ ಅಂದಿದ್ದರಲ್ಲ? ಅದೇ ಕಾರಣಕ್ಕೆ ಪ್ರಭಾಕರ್ ಸಂಜೆಯವರೆಗೂ ನಿಂತಲ್ಲಿಂದ ಅಲುಗಾಡಿರಲಿಲ್ಲವಂತೆ…`ಕಲಿಯುಗ ಭೀಮ’ ಚಿತ್ರ ತಯಾರಿಕೆಯ ಸಂದರ್ಭದಲ್ಲಿ ಅಮ್ಮನ ಮಮತೆಯ ಕಥೆಯನ್ನೆಲ್ಲ ಹಂಸಲೇಖಾ ಅವರಿಗೆ ಹೇಳಿ ಡ್ಯಾಡಿ ಹಾಡು ಬರೆಸಿದರು…’
ಇದಿಷ್ಟೂ ವಿನೋದ್ ಪ್ರಭಾಕರ್ ಹೇಳಿಕೆ. ತುಂಬಾ ಅಪರೂಪದ್ದು ಎನ್ನುವಂಥ, ಎದೆಯಾಳ ದಿಂದ ಬಂದ ಸಿಹಿಜೇನಿನಂಥ, ದೇಶಭಕ್ತಿ ಗೀತೆಯಂತೆಯೂ ಕಾಣುವಂಥ ಈ ಹಾಡು ಬರೆವಾಗ `ಸ್ವರ ಗಾರುಡಿಗ’ ಹಂಸಲೇಖಾ ಅವರು ಮಾಡಿಕೊಂಡ ತಯಾರಿ ಎಂಥಾದ್ದು? ಅವರೊಳಗೆ ಈ ಹಾಡಿನ ಅದ್ಭುತ ಸಾಲುಗಳು ಹೇಗೆ ಸೃಷ್ಟಿಯಾದವು ಎಂಬ ಕುತೂಹಲದ ಪ್ರಶ್ನೆಗೆ ಹಂಸಲೇಖಾ ಅವರು ಹೇಳಿದ್ದಿಷ್ಟು.
`ಪ್ರಭಾಕರ್-ನಾನು ಹಳೇ ಫ್ರೆಂಡ್ಸು. ಅದೊಮ್ಮೆ `ಬೆಂಗಳೂರು ಭೂತ’ ಎಂಬ ಸಿನಿಮಾ ತಯಾರಾಗ್ತಾ ಇತ್ತು. ಅದಕ್ಕೆ ಸಂಭಾಷಣೆ ಬರೆಯೋ ಕೆಲಸ ನನ್ನದಾಗಿತ್ತು. ಅವನಿಗೆ ಯಥಾಪ್ರಕಾರ ವಿಲನ್ ರೋಲ್ ಇತ್ತು. ಆಗಿಂದ್ಲೂ ನಾವು ಗುಡ್ ಫ್ರೆಂಡ್ಸ್ ಆಗಿದ್ವಿ. ಜತೆಯಾಗಿ ಫೋಟೊ ತೆಗೆಸಿಕೊಂಡಿದ್ವಿ. ಆತ ನನ್ನನ್ನು `ರಾಜ್’ ಅಂತಿದ್ದ. ದಾದಾ ಎಂದು ಕರೀತಿದ್ದ. ವಾದ್ಯಾರೇ ಎಂದು ಹೇಳಿ ಗೌರವಿಸ್ತಿದ್ದ. ನಾನು ಅವನನ್ನ `ಪ್ರಭಾ’ ಅಂತಿದ್ದೆ. ಮುಂದೆ ಆತನದೇ ನಿದರ್ೇಶನದ `ಕಲಿಯುಗ ಭೀಮ’ದ ಕೆಲಸ ಶುರುವಾಯಿತಲ್ಲ? ಆಗ ಅದೊಂದು ದಿನ ಬೆಂಗಳೂರಿನ ರೇಸ್ವ್ಯೂ ಹೋಟೆಲಿಗೆ ನಿರ್ಮಾಪಕರೊಂದಿಗೆ ಬಂದ. ಬಂದವನೇ-`ದಾದಾ, ನನ್ನ ಹೊಸ ಸಿನಿಮಾಕ್ಕೆ ಸಾಹಿತ್ಯ-ಸಂಗೀತ ನಿಮ್ಮದು. ನನಗೆ ಒಂದು ಹಿಟ್ ಸಾಂಗ್ ಕೊಡಿ’ ಅಂದ. ಒಪ್ಪಿಕೊಂಡೆ. ನಂತರ, ಹಾಡಿನ ಸಂದರ್ಭ ವಿವರಿಸಿದ. ಪ್ರಭಾಕರ್ ಬಗ್ಗೆ ಇಲ್ಲಿ ಒಂದು ಮಾತು ಹೇಳಬೇಕು. ಆತ ಕನ್ನಡ, ಇಂಗ್ಲಿಷ್, ತೆಲುಗು, ತಮಿಳು…. ಹೀಗೆ ಎಲ್ಲಾ ಭಾಷೇನ ಮಿಕ್ಸ್ ಮಾಡಿಕೊಂಡು ಮಾತಾಡ್ತಿದ್ದ. ಭಾಷಣ ಹೊಡೀತಿದ್ದ. `ಪ್ರಭಾ, ನಾನೂ ನಿನ್ನ ಥರಾ ಭಾಷೇನ ಮಿಕ್ಸ್ ಮಾಡಿ ಹಾಡು ಬರೀತೀನಿ’ ಅಂದೆ. `ಸರಿ ಗುರುಗಳೇ, ಹಾಗೇ ಮಾಡಿ’ ಅಂದ.
ತಕ್ಷಣವೇ ನನಗೆ ಟಿ.ಪಿ. ಕೈಲಾಸಂ ನೆನಪಾದರು. ಅವರ ಇಂಗ್ಲಿಷ್ಗ್ ನ್ನಡದ ಮಾತುಗಳು ನೆನಪಾದವು. ಅಂಥ ಮಾತುಗಳಿಂದಲೇ ಹಾಡು ಕಟ್ಟೋಣ ಎಂದುಕೊಂಡೆ. ಅನಾಥನನ್ನು ಸ್ವಂತ ತಾಯಿಗಿಂತ ಹೆಚ್ಚಾಗಿ ಬೆಳೆಸುವ ತಾಯಿಯ ಪ್ರೀತಿ ಹಿಮಾಲಯದ ಎತ್ತರಕ್ಕಿಂತ ಮಿಗಿಲಾದುದು ಅನ್ನಿಸ್ತು. ಅದನ್ನೇ ಕೈಲಾಸಂ ಕನ್ನಡದಲ್ಲಿ ಬರೆದೆ. ಅನಾಥ ಮಕ್ಕಳ ಸಂಕಟವನ್ನೆಲ್ಲ ಹಾಡೊಳಗೆ ತಂದೆ. ಮುಂದೆ `ಬೆಡ್ಡಿಲ್ದೆ ಬ್ಲಡ್ ಇಲ್ದೆ ಮಲಗಿದ್ದೆ….’ ಎಂದು ಬರೆದ ಚರಣವನ್ನು ನೋಡಿ ಪ್ರಭಾಕರ್ ತುಂಬಾ ಖುಷಿಪಟ್ಟ. ನೋಡ ನೋಡುತ್ತಲೇ ಹಾಡು ಬರೆದಾಯ್ತು. ನಂತರದ ಅರ್ಧಗಂಟೇಲಿ ಟ್ಯೂನ್ ಮಾಡಿದ್ದೂ ಆಯ್ತು. `ಗುರುಗಳೇ, ಇದನ್ನು ಯಾರಿಂದ ಹಾಡಿಸಲಿ?’ ಅಂದ. ಎಸ್.ಪಿ. ಅವರಿಂದಲೇ ಹಾಡಿಸು ಅಂದೆ. ಒಪ್ಪಿಕೊಂಡ. ನಂತರ ಟ್ರ್ಯಾಕ್ ರೆಕಾರ್ಡ್ ಮಾಡಿಸ್ದೆ.
ಟ್ರ್ಯಾಕ್ ಕೇಳಿ ಎಸ್ಪಿ ತುಂಬಾ ಖುಷಿಯಾದರು. ನಂಗೆ ಅರ್ಧ ಗಂಟೆ ಟೈಂ ಕೊಡಿ. ಒಂದೇ ಟೇಕ್ನಲ್ಲಿ ಹಾಡ್ತೀನಿ ಅಂದ್ರು. ಅವರು ರೆಕಾರ್ಡಿಂಗ್ ರೂಂನಲ್ಲಿ ಇದ್ದಾಗಲೇ ಹೊರಗೆ, ನನ್ನನ್ನು ಸಂದರ್ಶಿಸಲು ಡಾ. ವಿಜಯಮ್ಮ ಬಂದಿದ್ದರು. ಅವರ ಒಂದು ಪ್ರಶ್ನೆಗೆ-`ಮುಂದಿನ ಐದು ವರ್ಷದಲ್ಲಿ ಐನೂರು ಜನ ವಾದ್ಯಗಾರರನ್ನು ತಯಾರು ಮಾಡ್ತೀನಿ’ ಎಂದು ಉತ್ತರಿಸಿ, -ನೀವು ಐದು ನಿಮಿಷ ರೆಸ್ಟ್ ತಗೊಳ್ಳಿ ಎಂದೆ. ಹಿಂದೆಯೇ ಆಗತಾನೆ ರೆಕಾರ್ಡ್ ಆಗಿದ್ದ ಟ್ರಾಕ್ ಹಾಕಿದೆ. ಪೂರ್ತಾ ಹಾಡು ಬಂತು. ತುಂಬಾ ಖುಷಿಯಿಂದ-`ಥ್ಯಾಂಕ್ಸ್ ‘ ಅಂದೆ. ವಿಜಯಮ್ಮ ಬೆರಗಾಗಿ-`ಅರೆ, ನೀವು ಯಾರಿಗೆ ಥ್ಯಾಂಕ್ಸ್ ಹೇಳಿದ್ರಿ’ ಅಂದರು. `ಎಸ್ಪಿ’ಗೆ ಅಂದೆ. ಅವರು ಎಲ್ಲಿದ್ದಾರಪ್ಪಾ ಅಂದ್ರು, `ಒಳಗಿದ್ದಾರೆ. ಈಗ ಕೇಳಿದ ಹಾಡು ಅವರು ಹಾಡಿದ್ದೇ. ಈಗ ತಾನೇ ಹಾಡಿದ್ದು’ ಎಂದೆ.
ಸ್ಟುಡಿಯೋದೊಳಗೆ ನಾನು ಮಾಡಿಕೊಂಡಿದ್ದ ಹಾಡಿನ ಧ್ವನಿಮುದ್ರಣದ ಬಗ್ಗೆ ಅವರಿಗೆ ಮೊದಲೇ ಹೇಳಿರಲಿಲ್ಲ. ಹಾಗಾಗಿ -ತಮ್ಮ ಕಣ್ಮುಂದೆಯೇ ಮಧುರ ಗೀತೆಯೊಂದು ಸೃಷ್ಟಿಯಾದ ಬಗ್ಗೆ ತಿಳಿದು ವಿಜಯಮ್ಮ ಬೆರಗಾಗಿದ್ದರು. ಅದೇ ಸಂದರ್ಭದಲ್ಲಿ-ಈ ಹಾಡಲ್ಲಿ ಇಂಗ್ಲಿಷ್ ಪದಗಳ ಬಳಕೆ ಜಾಸ್ತಿ ಆಯ್ತು ಅಲ್ವ ಎಂದರು. ಇದೇ ವೇಳೆಗೆ ಹೊರಬಂದ ಎಸ್ಪಿ- `ಸಾಹಿತ್ಯ ಅದ್ಭುತವಾಗಿದೆ. ಒಂದು ಹಾಡಲ್ಲಿ ಎರಡು ಭಾಷೆಯ ಪದಗಳು ಹೀಗೆ ಹದವಾಗಿ ಬೆರೆತಿದ್ದುದನ್ನು ನಾನು ಹಿಂದೆಂದೂ ಕಂಡಿರಲಿಲ್ಲ. ಯು ಆರ್ ಗ್ರೇಟ್’ ಎಂದರು. ಮುಂದೆ, ಹಾಡು ಸೂಪರ್ ಹಿಟ್ ಆಯ್ತು.
ಆ ಮೇಲಿನ  ಸ್ವಾರಸ್ಯ ಕೇಳಿ: ಈ ಹಾಡಲ್ಲಿ ಇಂಗ್ಲಿಷ್ ಪದಗಳ ಬಳಕೆ ಅತಿಯಾಯ್ತು ಎಂಬ ಟೀಕೆ ಶುರುವಾಯ್ತು. ಬ್ರಾಹ್ಮಣ ಸಮುದಾಯದವರು ಈ ಹಾಡಿನ ಸಾಹಿತ್ಯದ ಬಗ್ಗೆ ಪ್ರಶ್ನಿಸಿ  ನಟ ಸಿ.ಆರ್. ಸಿಂಹ ಅವರ ನೇತೃತ್ವದಲ್ಲಿ ಒಂದು ವಿಚಾರ ಸಂಕಿರಣವನ್ನೇ ಏರ್ಪಡಿಸಿದ್ರು. ಕನ್ನಡದ ಹಾಡಲ್ಲಿ ಇಂಗ್ಲಿಷ್ ಪದಗಳ ಅತಿ ಬಳಕೆ ಸರಿಯೇ ಅಂದರು. `ಈ ಹಾಡು ಬರೆಯಲು ನನಗೆ ಟಿ.ಪಿ. ಕೈಲಾಸಂ ಅವರ ಮಾತುಗಳೇ ಸ್ಫೂರ್ತಿ ಒದಗಿಸಿವೆ. ಟಿಪಿಕಲ್  ಟಿಪಿ  ಕೈಲಾಸಂ ಅನ್ನೋ ನಾಟಕ ಮಾಡುವ ಸಿಂಹ ಅವರು ಹೀಗೆ ಅಡ್ಡ ಪ್ರಶ್ನೆ ಕೇಳಬಹುದೇ?’ ಅಂದೆ. ಆಗ ನನ್ನ ವಾದವನ್ನು ಸಿಂಹ ಕೂಡ ಒಪ್ಪಿಕೊಂಡ್ರು… ಹಾಡನ್ನು ಮೆಚ್ಚಿಕೊಂಡರು…
ಇಷ್ಟು ಹೇಳಿ ಮೌನವಾದರು ಹಂಸಲೇಖ.

‍ಲೇಖಕರು avadhi

March 15, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

೧ ಪ್ರತಿಕ್ರಿಯೆ

 1. kavitha

  Dear Manikanth
  Nice Article,
  Can you please write about how the song “Madikeri Sipaiyee” came about. This is one of Hamsalekha’s melodious songs
  Regards,
  kavitha

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: