ಮಣಿಕಾಂತ್ ಬರೆದಿದ್ದಾರೆ: ಚಂದಕ್ಕಿಂತ ಚೆಂದ ನೀನೆ ಸುಂದರ..

6213_1079515355773_1462958320_30205965_5660699_n

-ಎ ಆರ್ ಮಣಿಕಾಂತ್

ಚಿತ್ರ: ಸ್ಪರ್ಶ  ಗೀತರಚನೆ: ಇಟಗಿ ಈರಣ್ಣ.

ಸಂಗಿಇತ: ಹಂಸಲೇಖ  ಗಾಯನ: ಪಂಕಜ್ ಉದಾಸ್

sparsha

ಚಂದಕ್ಕಿಂತ ಚೆಂದ ನೀನೆ ಸುಂದರ…

ಚೆಂದಕ್ಕಿಂತ ಚೆಂದ ನೀನೇ ಸುಂದರ

ನಿನ್ನ ನೋಡ ಬಂದ ಬಾನಚಂದಿರ

ಅಂದ ಚೆಂದವು ನೀನೇ ಅಂದೆನು

ಚೆಂದ ಅಂದ ಅಂದ ಚೆಂದ

ಚೆಂದುಳ್ಳಿ ಚೆಲುವೆ ಓ ನನ್ನ ಒಲವೆ ||ಪ ||

ನಗುವ ಹೂ ನಗೆ ನಗುವ ಆ ಬಗೆ

ನಗುವೇ ನಾಚಿತು ನಾಚಿ ನಕ್ಕಿತು

ನಗುವ ಈ ಬಗೆ ಬೇಕು ಹೂವಿಗೆ

ಕಲಿಸು ಹೂವಿಗೆ ನಿನ್ನ ಹೂ ನಗೆ

ನಗುವೆ ಅಂದ ನಗುವೆ ಚಂದ

ಈ ನಗುವೆ ಚೆಂದ ನಿನ ನಗುವೆ ಅಂದ ||1||

ಪ್ರೇಮದ ಅರ್ಥವ ಹುಡುಕುತ ನಿಂತೆನು

ನಿನ್ನಯ ಸ್ಪರ್ಶದಿ ಅರ್ಥವಾ ಕಂಡೆನು

ಅರಳು ಮಲ್ಲಿಗೆ ಅರಳಿ ನಿಂತಿತು

ನನ್ನೀ ಹೃದಯದಿ ಪ್ರೇಮವರಳಿತು

ಇಲ್ಲು ನೀನೆ ಎಲ್ಲೂ ನೀನೆ

ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೆ ||2||

ನನ್ನ ಉಸಿರಲಿ ನಿನ್ನ ಹೆಸರಿದೆ

ನಿನ್ನ ಹೆಸರಲೆ ನನ್ನ ಉಸಿರಿದೆ

ನಿನ್ನ ಹೆಸರಲೇ ಉಸಿರು ಹೋಗಲಿ

ಉಸಿರು ಉಸಿರಲಿ ಹೆಸರೇ ನಿಲ್ಲಲಿ

ನೀನೇ ಉಸಿರು ನೀನೇ ಹೆಸರು

ಓ ನನ್ನ ಉಸಿರೆ ಬಾ ಬಾರೇ ಹಸಿರೆ ||3||

ಎರಡು ತಿಂಗಳ ಹಿಂದೆ ಓದುಗಮಿತ್ರರೊಬ್ಬರು ಫೋನ್ ಮಾಡಿ ಆಗ್ರಹದ ದನಿಯಲ್ಲಿ ಹೇಳಿದರು: `ಸ್ಪರ್ಶ’ ಚಿತ್ರದ `ಚಂದಕಿಂತ ಚಂದ ನೀನೇ ಸುಂದರ’ ಹಾಡಿನ ಬಗ್ಗೆ ಬರೀರಿ ಸಾರ್. ಈ ಹಾಡಿನ ಬಗ್ಗೆ ಬರೀತೀರ ಅಂತಾನೇ ಇನ್ಮೇಲೆ ಪ್ರತಿ ಗುರುವಾರ ಕಾಯ್ತಾ ಇರ್ತೀವಿ. ನಿರಾಸೆ ಮಾಡಬೇಡಿ…’

ಆ ಹಾಡು ಬರೆದವರು ಕವಿ ಇಟಗಿ ಈರಣ್ಣ ಎಂದು ಗೊತ್ತಿತ್ತು. ಆದರೆ ಅವರ ಪರಿಚಯವಿರಲಿಲ್ಲ. ಅವರ ಫೋನ್ ನಂಬರ್ ಇರಲಿಲ್ಲ. ವಿಳಾಸವೂ ಇರಲಿಲ್ಲ. ಅವರು ಬರೆದ ಹಾಡಿನ ಹಿಂದೆ `ಒಂದು ಕಥೆ ಇದೆಯೋ ಇಲ್ಲವೋ’ ಎಂದು ಗೊತ್ತೂ ಇರಲಿಲ್ಲ. ಆದರೆ ಈ ಹಾಡು ಕೇಳಿದಾಗೆಲ್ಲ ಸಂತೋಷದಿಂದ ಕುಣಿಯುವ ಆಸೆಯಾಗುತ್ತಿತ್ತು. ರೇಡಿಯೊದಲ್ಲಿ, ಟಿ.ವಿ.ಯಲ್ಲಿ ಆವಾಗಾವಾಗ ಈ ಹಾಡು ಕೇಳಿದರೆ, ಮರುಕ್ಷಣವೇ ಒನ್ಸ್ಮೋರ್ ಎಂದು ಕೂಗುವ ಮನಸಾಗುತ್ತಿತ್ತು.

ನಂತರದ ದಿನಗಳಲ್ಲಿ ಈ ಹಾಡು ಹಳೆಯ ಗೆಳತಿಯ ಪಿಸುಮಾತಿನಂತೆ, ಗೆಜ್ಜೆ ಸದ್ದಿನಂತೆ, ಮುಗುಳ್ನಗುವಿನಂತೆ, ಹುಸಿಮುನಿಸಿನಂತೆ, `ಅವಳ’ ಮೈಯ ಘಮದಂತೆ ಬಿಡದೆ ಕಾಡಿದಾಗ- ಪ್ರಿಯ ಮಿತ್ರ ಧನಂಜಯ ಕುಲಕಣರ್ಿಯವರಿಗೆ ಎಲ್ಲವನ್ನೂ ಹೇಳಿಕೊಂಡೆ. `ಈ ಹಾಡು ಬರೆದವರನ್ನು ಹೇಗಾದ್ರೂ ಪತ್ತೆಹಚ್ಚಬೇಕಲ್ಲ? ಸಹಾಯ ಮಾಡಿ ಸಾರ್’ ಎಂದು ಕೇಳಿಕೊಂಡೆ.

ಅವರು ಮರುಕ್ಷಣವೇ- `ಏ ದಡ್ಡಾ, ನಮ್ಮ ಇಟಗಿ ಈರಣ್ಣೋರು ಗೊತ್ತಿಲ್ವೇನು ನಿನಗ? ಇಲ್ಲೇ ಹೊಸಪ್ಯಾಟ್ಯಾಗ ಲೆಕ್ಚರರ್ ಆಗ್ಯಾರ. ಮುಂದಿನ ವಾರ ನಾನೇ ಹೋಗಿ ಮಾತಾಡಿಸಿಕೊಂಡು ಬರ್ತೇನೆ. ಆ ಹಾಡು ಹುಟ್ಟಿದ ಸಮಯಕ್ಕ ಒಂದು ಕಥೀ ಅಂತೇನಾದ್ರೂ ಇದ್ರ ಅದನ್ನೂ ಕೇಳಿಕೊಂಡು ಬರ್ತೇನಂತ. ನೀ ಆರಾಮಿರು’ ಎಂದರು. ಅಷ್ಟೇ ಅಲ್ಲ; ಮೂರು ವಾರಗಳ ನಂತರ ಇಟಗಿ ಈರಣ್ಣ ಅವರನ್ನು ಕಂಡು ಎಲ್ಲ ವಿವರ ಪಡೆಯುವಲ್ಲಿ ಯಶಸ್ವಿಯಾಗಿಯೂಬಿಟ್ಟರು.

ಇಲ್ಲಿ ಇಟಗಿ ಈರಣ್ಣ ಅವರ ಬಗ್ಗೆ ನಾಲ್ಕು ಮಾತು: ಮೆಲು ಮಾತು, ಮಗು ಮನಸು, ಸರಳತೆ, ಸಜ್ಜನಿಕೆಗೆ ಇನ್ನೊಂದು ಹೆಸರಾಗಿರುವ ಈರಣ್ಣ ಬಳ್ಳಾರಿ ಜಿಲ್ಲೆ ಹಿರೇಹಡಗಲಿಯವರು. ಅನಿವಾರ್ಯ ಕಾರಣಗಳಿಂದ ಬಾಲ್ಯದಲ್ಲಿಯೇ ಮುಂಬಯಿ ತಲುಪಿ, ಅಲ್ಲಿನ ರೈಲು ನಿಲ್ದಾಣದಲ್ಲಿ ಚಿಕ್ಕಪುಟ್ಟ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸ ಮುಂದುವರಿಸಿದ ಅವರು, ಹಿಂದಿ, ಉದರ್ು, ಮರಾಠಿ, ಬಂಗಾಳಿ, ಇಂಗ್ಲಿಷ್, ಭೋಜ್ಪುರಿ, ಬಿಹಾರಿ ಭಾಷೆಗಳಲ್ಲಿ ಎಕ್ಸ್ಪಟರ್್ ಎನ್ನಿಸಿಕೊಂಡರು. ಮುಂದೆ, ಕನ್ನಡ ಎಂ.ಎ. ಓದಲೆಂದು ಧಾರವಾಡಕ್ಕೆ ಬಂದಾಗ, ಅವರ ಬದುಕಿನ ದಿಕ್ಕೇ ಬದಲಾಯಿತು. ವರಕವಿ ಬೇಂದ್ರೆಯವರಿಂದ ತುಂಬ ಪ್ರಭಾವಿತರಾಗಿದ್ದ ಈರಣ್ಣ, ಬೇಂದ್ರೆಯವರಂತೆಯೇ ಪದಗಳೊಂದಿಗೆ ಸರಸವಾಡುವ ಕಲೆಯಲ್ಲಿ ಪಳಗಿದರು. ಗಜಲ್ ರಚನೆಗೆ ಮುಂದಾದರು. ಪ್ರೇಮ, ಸ್ನೇಹ, ವಿಷಾದವನ್ನು ಗಜಲ್ಗಳಲ್ಲಿ ಮಾಲೆಯಂತೆ ಪೋಣಿಸಿಕೊಟ್ಟು ಕೆಲವೇ ದಿನಗಳಲ್ಲಿ `ಗಜಲ್ ಈರಣ್ಣ’ ಎಂದೇ ಹೆಸರಾಗಿಹೋದರು.

ಇಂಥ ಈರಣ್ಣನವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಹೇಗೆ? `ಸ್ಪರ್ಶ’ ಚಿತ್ರಕ್ಕೆ ಹಾಡು ಬರೆದದ್ದು ಹೇಗೆ ಎಂಬ ಕುತೂಹಲದ ಪ್ರಶ್ನೆಗೆ ಈರಣ್ಣ ಅವರು ಉತ್ತರಿಸಿದ್ದು ಹೀಗೆ:

`ನಾನು ಪಿಕ್ಚರ್ ನೋಡೋದು ಬಿಟ್ಟು 25 ವರ್ಷ ಆತು. ಇಂಥ ನಾನು `ಸ್ಪರ್ಶ’ ಸಿನಿಮಾಕ್ಕ ಹಾಡುಬರೆದದ್ದು ಎಷ್ಟು ಖರೇನೋ ಅಷ್ಟ ಆಕಸ್ಮಿಕಾನೂ ಹೌದು. ಈ ಸಂದರ್ಭ ಒದಗಿಬಂದದ್ದು ಹೀಂಗ- ಸುನೀಲ್ಕುಮಾರ್ ದೇಸಾಯಿ ಅವರು, ಶಾಯರಿಗಳನ್ನು ಇಟಗೊಂಡೇ ಒಂದು ಸಿನಿಮಾ ಮಾಡಬೇಕಂತ ನಿಧರ್ಾರ ಮಾಡಿದರಂತ. ಈ ನೆಪದಾಗ ಕನ್ನಡದೊಳಗೆ ಅಷ್ಟು ಚಂದಾಗಿ ಶಾಯರಿ ಬರೆಯೋರು ಯಾರದಾರ ಅಂತ ಹುಡುಕಾಟಕ್ಕ ಶುರುಮಾಡ್ಯಾರ. ಆಗ ಯಾರೋ ಪುಣ್ಯಾತ್ಮರು ದೇಸಾಯಿ ಅವರಿಗ ನನ್ನ ಹೆಸರನ್ನು ಹೇಳಿದ್ರಂತ. ಇದೆಲ್ಲ 1999ರ ಮಾತು. ಆಗಿನ್ನೂ ಈಗಿನ ಥರಾ ಮೊಬೈಲ್ ಫೋನಿನ ಹಾವಳಿ ಇರಲಿಲ್ಲ. ನನ್ನ ಹೆಸರು ಹೇಳಿದ್ದವರು- `ಈರಣ್ಣ ಬಳ್ಳಾರಿ ಸೀಮ್ಯಾಗ ಅದಾರ. ಅವರು ಕಾಲೇಜಿನ್ಯಾಗ ಲೆಕ್ಚರರ್ ಆಗ್ಯಾರ ನೋಡ್ರಿ’ ಎಂದಿದ್ದರಂತೆ. ಅದನ್ನೇ ಹಿಡಕೊಂಡ ದೇಸಾಯಿಯವರು, ಬಳ್ಳಾರಿ, ಹೊಸಪೇಟೆ, ವಿಜಯನಗರ ಕಾಲೇಜು… ಇಲ್ಲೆಲ್ಲ ಹುಡುಕಿ, ಕಡೆಗೂ ನನ್ನನ್ನು ಹಿಡಿದೇಬಿಟ್ಟರು. `ಸ್ಪರ್ಶ’ ಹೆಸರಿನ ಸಿನಿಮಾ ತಗೀತಿದೀನ್ರಿ ಸರ. ನನಗ ನಮನಮೂನಿ ಶಾಯರಿ ಬೇಕ್ರಿ’ ಎಂದರು.

ಅವರ ಮಾತಿಗೆ ಒಪ್ಪಿಕೊಂಡೆ. ಸೀದಾ ಬೆಂಗಳೂರಿಗೆ ಬಂದೆ. ನಟ ಸುದೀಪ್, ತಮ್ಮ ಮನೆಯ ಪಕ್ಕದ ಮನೆಯಲ್ಲೇ ಉಳಿಯಲಿಕ್ಕೆ ವ್ಯವಸ್ಥೆ ಮಾಡಿದ್ರು. ಸಿನಿಮಾದ ಕೆಲಸ ಶುರುವಾಯ್ತು. ದೇಸಾಯಿಯವರು ಯಾವ ಸಂದರ್ಭಕ್ಕ ಬೇಕಂತಾರೋ ಆಗೆಲ್ಲ ಒಂದು ಶಾಯರಿ ಬರೆದು ಕೊಡ್ತಿದ್ದೆ. ಟೈಮು ಸಿಕ್ಕಾಗ ನಾವಿಬ್ರೂ ಅದೂ ಇದೂ ಅಂತ ಹರಟಿಕೊಂತಾ ಕೂಡತಿದ್ವಿ. ಅದೊಂದು ದಿನ ದೇಸಾಯರು- `ಸರ್, ಈ ಸಿನಿಮಾಕ್ಕ ನೀವೊಂದು ಹಾಡನ್ನು ಯಾಕೆ ಬರೀಬಾರ್ದು?’ ಎಂದರು. `ಅದಕ್ಕೇನಂತ್ರೀ ಸರ, ಬರೀತೇನರೀ. ಸನ್ನಿವೇಶ ಹೇಳ್ರಿ’ ಎಂದೆ. ಆಗ ದೇಸಾಯಿ ಅವರು- `ನಾಯಕ, ನಾಯಕಿ ಊಟಿಗೆ ಕುಟುಂಬ ಸಮೇತ ಹೋಗಿರ್ತಾರೆ. ಅಲ್ಲಿ ಕುಟುಂಬದವರ ಕಣ್ತಪ್ಪಿಸಿ ಇಬ್ಬರೇ ಬೇರೆ ಹೋಗಿರುತ್ತಾರೆ. ಆಗ ಸಿಕ್ಕ ಏಕಾಂತದಲ್ಲಿ ನಾಯಕಿಗೆ ತನ್ನ ಪ್ರೀತಿಯನ್ನು ವಿವರಿಸುತ್ತಾ ನಾಯಕ ಹೇಳುವ ಹಾಡು ಇದಾಗಬೇಕು. ಕಣ್ಣಿಗೆ ಕಾಣದ ವಸ್ತುಗಳ ವರ್ಣನೆ ಈ ಹಾಡಲ್ಲಿ ಬರಬೇಕು. ಇದನ್ನು ಪಂಕಜ್ ಉದಾಸ್ ಕೈಲಿ ಹಾಡಿಸಬೇಕು ಅಂತ ಆಸೆಯಿದೆ’ ಅಂದರು.

`ಪಂಕಜ್ ಉದಾಸ್ ಹಾಡ್ತಾರೆ ಅಂದಮೇಲೆ ಅದು ಗಜಲ್ ಥರಾ ಇರಲಿ ಸರ್’ ಎಂದೆ. ದೇಸಾಯಿ ಒಪ್ಪಿದರು. ಹಿಂದೆಯೇ- `ಈ ಹಾಡಿಗೆ ಹಂಸಲೇಖಾ ಆಗಲೇ ಟ್ಯೂನ್ ಮಾಡಿದ್ದಾರೆ. ವಾರದಲ್ಲಿ ಪಂಕಜ್ ಉದಾಸ್ ಬರ್ತಾರೆ. ಅಷ್ಟರೊಳಗೆ ಹಾಡು ಬೇಕು’ ಅಂದರು. ನಂತರದ ನಾಲ್ಕೈದು ದಿನ ಅದೆಷ್ಟೇ ತಲೆಕೆಡಿಸಿಕೊಂಡರೂ ಹಾಡಿನ ಒಂದೇ ಒಂದು ಸಾಲೂ ಹೊಳೆಯಲಿಲ್ಲ. ಪಂಕಜ್ ಉದಾಸ್ ಬರೋಕೆ ಇನ್ನು ಒಂದೇ ದಿನ ಬಾಕಿಯಿತ್ತು. ಈ ಹಾಡಿನ ಸಾಲೇ ಹೊಳೀತಿಲ್ಲ. ಏನ್ಮಾಡೋದು ಎಂದು ಅದೊಂದು ರಾತ್ರಿ ಬೆಂಗಳೂರಿನ ಮಹಡಿ ಮನೆಯ ಟೆರೇಸ್ನಲ್ಲಿ ನಿಂತು ಚಿಂತಿಸುತ್ತಿದ್ದಾಗ- ಪಕ್ಕದ ಮನೆಯ ಹೆಂಗಸೊಬ್ಬಳು ಅಳುತ್ತಿದ್ದ ಮಗುವನ್ನು ಎತ್ತಿಕೊಂಡು ಅದಕ್ಕೆ ಆಗಸದ ಚಂದ್ರನನ್ನು ತೋರಿಸುತ್ತಾ- `ನೀನು ಚಿನ್ನ, ನೀನು ಬಂಗಾರ, ನೀನೇ ಅಪರಂಜಿ, ಸುಮ್ನಿರು ಕಂದಾ’ ಎಂದಳು. ಹಿಂದೆಯೇ `ಚಂದ್ರನಿಗಿಂತ ನೀನೇ ಚಂದಕ್ಕಿದೀಯ ಚಿನ್ನಾ’ ಎಂದು ಮುದ್ದಾಡಿದಳು. ತಕ್ಷಣವೇ ನಮ್ಮ ಮನೆಯಲ್ಲಿ ಹಿಂದೊಮ್ಮೆ ನಡೆದ ಘಟನೆ ನೆನಪಿಗೆ ಬಂತು. ಅದೊಂದು ರಾತ್ರಿ ಚಂದ್ರನ ಬೆಳಕು ಹೆಂಚಿನ ಮನೆಯ ಕಿಂಡಿಯಿಂದ ಮಲಗಿದ್ದ ನನ್ನ ಮಗನ ಮೇಲೆ ಬಿತ್ತು. ಅದನ್ನು ಕಂಡು ನನ್ನ ಹೆಂಡತಿ- `ನೋಡ್ರಿ, ಹಾಲು ಬೆಳದಿಂಗಳಾಗ ನನ್ ರಾಜ ಎಷ್ಟು ಮುದ್ದಾಗಿ ಕಾಣ್ಲಿಕ್ಕತ್ತಾನ ನೋಡ್ರಿ’ ಎಂದು ಖುಷಿಯಿಂದ ಉದ್ಗರಿಸಿದ್ದಳು.

ಆ ಕ್ಷಣವೇ ಹಾಡಿನ ಮೊದಲ ಸಾಲು ಹೊಳೆಯಿತು. `ಚಂದ್ರನಿಗಿಂತ ನೀನೇ ಚಂದಕ್ಕಿದೀಯ ನಿನ್ನನ್ನು ನೋಡಿ ಅವನು ಓಡ್ತಾ ಇದಾನೆ ನೋಡು ಕಂದಾ’ ಎಂದ ಆ ತಾಯಿಯ ಮಾತೇ ಹಾಡಿನ ಮೊದಲೆರಡು ಸಾಲಾಗಲಿ ಎಂದುಕೊಂಡು- `ಚಂದಕಿಂತ ಚಂದ ನೀನೆ ಸುಂದರಾ ನಿನ್ನ ನೋಡಬಂದ ಬಾನ ಚಂದಿರ’ ಎಂದು ಬರೆದೆ. ಈ ಹಾಡನ್ನು ಹೀರೊ-ಹೀರೊಯಿನ್ರ ಪ್ರೇಮಕ್ಕೆ ಹಿನ್ನೆಲೆಯಾಗಿ ಬಳಸಲಾಗಿದೆ ನಿಜ. ಆದರೆ, ಇಡೀ ಹಾಡನ್ನು ನಾನು ತಾಯಿ-ಮಗುವಿನ ಭಾವನಾತ್ಮಕ ಸಂಬಂಧವನ್ನು ಹಿನ್ನೆಲೆಯಾಗಿ ಇಟ್ಟುಕೊಂಡೇ ಬರೆದೆ. ಇಡೀ ಹಾಡಿನಲ್ಲಿ ಹುಡುಕಿ ನೋಡಿದರೆ `ಚೆಂದುಳ್ಳಿ ಚೆಲುವೆ’ ಎಂಬ ಪದವೊಂದಿದೆ. ನಾಯಕಿಗೆ ಅನ್ವಯಿಸುವಂಥ ಪದ ಇದೊಂದೇ ಅನ್ನಬಹುದೇನೊ…

ಹಾಡು ಬರೆದದ್ದೇನೋ ಆಯ್ತು. ಮರುದಿನವೇ ರೆಕಾಡರ್ಿಂಗ್. ಪಂಕಜ್ ಉದಾಸ್ ಸಡಗರದಿಂದಲೇ ಬಂದರು. ಅವರಿಗೆ ಹಾಡಿನ ಅರ್ಥ, ಪದಗಳ ಏರಿಳಿತದ ಬಗ್ಗೆ ಹೇಳಿಕೊಡುವ ಜವಾಬ್ದಾರಿ ನನ್ನದಾಯ್ತು. ಆಗ ಒಂದು ತಮಾಷೆ ನಡೆಯಿತು. ಎರಡನೇ ಚರಣದಲ್ಲಿ `ಎಲ್ಲೆಲ್ಲೂ ನೀನೆ’ ಎಂಬ ಸಾಲು ಬರುತ್ತದೆ. ಅದನ್ನು ಸ್ವಲ್ಪ ದೀರ್ಘವಾಗಿ ಹೇಳಬೇಕು ಎಂದು ಪಂಕಜ್ ಉದಾಸ್ಗೆ ತಿಳಿಸಿದೆ. ಅವರಿಗೆ ಸರಿಯಾಗಿ ಅರ್ಥವಾಗಲಿಲ್ಲ `ಎಲ್ಲೆಲ್ಲು’ `ಎಲೆಲು’ ಎಂದೇ ಹೇಳುತ್ತಿದ್ದರು. `ಸರ್, ಹೀಗಲ್ಲ’ ಎಂದೆ. `ನಂಗೆ ಅರ್ಥ ಆಗುವ ಹಾಗೆ ಹೇಳಿಕೊಡಿ, ಪ್ಲೀಸ್’ ಎಂದರು. ಆಗ ಇಂಗ್ಲಿಷಿನ ಔಔಖಿ ಅಕ್ಷರಗಳನ್ನು ಬರೆದು- `ಇದನ್ನು ಸ್ವಲ್ಪ ಒತ್ತಿ, ವೇಗವಾಗಿ ಹೇಳಿ ಸರ್’ ಎಂದೆ. ಸರಿ ಎಂದ ಅವರು ಮೇಲಿಂದ ಮೇಲೆ ಹೇಳುತ್ತ ಕಲಿತೇಬಿಟ್ಟರು…

* * *

ಮುಂದೆ ಈ ಹಾಡಿಗೆ ರಾಜ್ಯ ಸರಕಾರದ ಪ್ರಶಸ್ತಿ ಬಂತು. ಆಗ ಪ್ರಶಸ್ತಿ ಸ್ವೀಕರಿಸಿದ ಈರಣ್ಣ, ಸರಸರನೆ ಕ್ಯಾಮರಾಮನ್ ವೇಣು ಅವರ ಬಳಿ ಬಂದು- `ವೇಣು ಅವರೆ, ಈ ಹಾಡನ್ನು ಅದ್ಭುತವಾಗಿ ತೆರೆಯ ಮೇಲೆ ತೋರಿಸಿದವರು ನೀವು. ಪ್ರಶಸ್ತಿ ನಿಮಗೆ ಬರಬೇಕಿತ್ರೀ’ ಎನ್ನುತ್ತಾ ಭಾವುಕರಾದರು. ವಿಪರ್ಯಾಸ ನೋಡಿ, ಇಂಥ ಮಗುಮನಸ್ಸಿನ ಅಪರೂಪದ ಕವಿಯನ್ನು ನಮ್ಮ ನಿಮರ್ಾಪಕ-ನಿದರ್ೇಶಕರು ನಂತರ ತಮಾಷೆಗೂ ಕರೆಯಲಿಲ್ಲ. ನೆನಪು ಮಾಡಿಕೊಳ್ಳಲೂ ಇಲ್ಲ.

ವಿಪರ್ಯಾಸವಲ್ಲವೆ?

‍ಲೇಖಕರು avadhi

September 4, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This