ಮಣಿಕಾಂತ್ ಬರೆದಿದ್ದಾರೆ: ತೇರು ಹೊಂಟೈತವ್ವ ತಂಗಿ..

ಎ  ಆರ್  ಮಣಿಕಾಂತ್
ಚಿತ್ರ: ಕೊಟ್ರೇಶಿ ಕನಸು. ಗೀತೆರಚನೆ: ಎಚ್. ಎಸ್. ವೆಂಕಟೇಶ ಮೂರ್ತಿ
ಸಂಗೀತ: ಸಿ. ಅಶ್ವತ್ಥ್ , ಗಾಯನ: ಪುತ್ತೂರು ನರಸಿಂಹನಾಯಕ್, ರತ್ನಮಾಲಾ ಪ್ರಕಾಶ್
ತೇರು ಹೊಂಟೈತವ್ವ ತಂಗಿ ತೇರು ಹೊಂಟೈತೆ
ಏಳು ಮಲೆಯ ರಂಗಸ್ವಾಮಿ ತೇರು ಹೊಂಟೈತೆ ||ಪ||
ಮೂಡಲ ಗಿರಿಯ ಮಣೆಯ ಮೇಲೆ ರಂಗನ ತಂದು ನಿಲ್ಲಿಸಿ
ಅವ್ವಗೋಪಿ ಎಣ್ಣೆ ಒತ್ತಿ ನಿನ್ನ ಕೂಸ ಒಲಿಸಿ
ಚಂದ ಮಾಡುತಿದ್ದರವ್ವ ಕಂದನಿಗೆ ಗೋವಿಂದನಿಗೆ ||1||
ಹತ್ತೂ ನದಿಯ ನೀರು ತಂದು ಮುತ್ತೈದೇರು ನಗುತ
ನೆತ್ತಿಯ ಮೇಲೆ ಎರೆಯಿರವ್ವ ಮುತ್ತಿನ ಮಣಿಯ ಸಹಿತ
ಚಂದ ಮಾಡುತಿದ್ದರವ್ವ ಕಂದನಿಗೆ ಗೋವಿಂದನಿಗೆ ||2||
ಗಲ್ಲ ಹಿಡಿದು ತಲೆಯ ಬಾಚಿ ತಿಲಕ ತಿದ್ದಿ ತೀಡಿ
ಬೆಳ್ಳನೆಟಕೆ ತೆಗೆದಳವ್ವ ಗೋಪಿ ನೋಡಿ ನೋಡಿ
ಚಂದ ಮಾಡುತಿದ್ದರವ್ವ ಕಂದನಿಗೆ ಗೋವಿಂದನಿಗೆ ||3||
ಮಧುರೆಗೆ ಹೋಗಿ ಬಾರೋ ಕಂದ ಇದಿರು ಹೊಳೆಯ ಈಜಿ
ಹಿರಿಯರ ಹರಕೆ ಶಿರದಲ್ಲಿರಲಿ ನವಿಲು ಗರಿಯ ಜೋಡಿ
ಚಂದ ಮಾಡುತ್ತಿದ್ದರವ್ವ ಕಂದನಿಗೆ ಗೋವಿಂದನಿಗೆ ||4||
ಒಂದು ಸಮುದಾಯದ ನೋವು, ಸಡಗರ, ರೀತಿ- ರಿವಾಜು, ಎದೆಯಾಳದ ಪಿಸುಮಾತುಗಳನ್ನು ಆ ಜನಾಂಗದವರೇ ಬರೆದರೆ, ಅದು ವಾಸ್ತವಕ್ಕೆ ಹತ್ತಿರವಾಗಿರುತ್ತದೆ; ಸಹಜವಾಗಿರುತ್ತದೆ ಎಂಬ ಮಾತಿದೆ. ಶಿವರಾಮ ಕಾರಂತರ `ಚೋಮನ ದುಡಿ’ಯಲ್ಲಿ ಬರುವ ದಲಿತ ಸಮುದಾಯದ ಚಿತ್ರಣಕ್ಕಿಂತ ಹೆಚ್ಚು ಆಪ್ತವಾದ ಭಾಷೆ ಮತ್ತು ಭಾವನೆ ಸಿದ್ಧಲಿಂಗಯ್ಯನವರ `ಊರು ಕೇರಿ’ ಹಾಗೂ ದೇವನೂರ ಮಾಹಾದೇವ ಅವರ `ಒಡಲಾಳ’ ಕಾದಂಬರಿಗಳಲ್ಲಿದೆ. ಅಂದರೆ, `ಚೋಮನದುಡಿ’ಯಲ್ಲಿ ಕಾರಂತರಿಗೆ ಭಾಷೆಯ ಮೇಲಿನ ಹಿಡಿತ ಸಿದ್ಧಿಸಿದೆ, ಹಾಗೆಯೇ ದಲಿತರ ಸಂಕಷ್ಟಕ್ಕೆ ಕನ್ನಡಿಹಿಡಿಯುವ ಪ್ರಯತ್ನವೂ ಸಫಲವಾಗಿದೆ. ಆದರೆ, ಆ ಕಾದಂಬರಿಯಲ್ಲಿ `ಎಲ್ಲ ಇದ್ದರೂ ಏನೋ ಸ್ವಲ್ಪ ಕೊರತೆ’ ಎಂಬ ಭಾವ ಎಲ್ಲರನ್ನೂ ಕಾಡುತ್ತದೆ. ನಮ್ಮದಲ್ಲದ ಸಮಾಜ, ಸಮುದಾಯದ ಬಗ್ಗೆ ಬರೆಯಲು ಹೊರಟಾಗ ಪ್ರತಿಯೊಬ್ಬ ಲೇಖಕನಿಗೂ ಎದುರಾಗುವ ಸಮಸ್ಯೆ ಇದು.
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ `ಕೊಟ್ರೇಶಿ ಕನಸು’ ಚಿತ್ರದ `ತೇರು ಹೊಂಟೈತವ್ವ ತಂಗಿ ತೇರು ಹೊಂಟೈತೆ…’ ಗೀತೆಯ ಬಗ್ಗೆ ಬರೆಯುವ ಸಂದರ್ಭದಲ್ಲಿ ಇದೆಲ್ಲ ನೆನಪಾಯಿತು. 1994ರಲ್ಲಿ ತೆರೆಕಂಡ, ನಾಗತಿಹಳ್ಳಿಯವರಿಗೆ ರಾಷ್ಟ್ರಪ್ರಶಸ್ತಿಯ ಗರಿ ತೊಡಿಸಿದ ಸಿನಿಮಾ ಕೊಟ್ರೇಶಿ ಕನಸು. ಈ ಸಿನಿಮಾದ ಮೂಲ ಕಥೆ ಸಾಹಿತಿ ಕುಂ. ವೀರಭದ್ರಪ್ಪ ಅವರದು. ಅಸಮಾನತೆಯ ಹುದಲಿನಲ್ಲಿ ಮುಳುಹೋಗಿದ್ದ ದಲಿತ ಕುಟುಂಬದ `ಕೊಟ್ರ’ ಎಂಬ ಹುಡುಗ, ಹೈಸ್ಕೂಲಿಗೆ ಸೇರುವ ಸಂದರ್ಭವನ್ನು ವಿವರಿಸುವ ಕಥೆ ಅದು. ಇವತ್ತಿಗೂ ನಮ್ಮ ಹಳ್ಳಿಗಳಲ್ಲಿ ಗಟ್ಟಿಯಾಗಿಯೇ ಬೇರೂರಿರುವ ಜಾತಿ ಪದ್ಧತಿ, ದಲಿತ ಕುಟುಂಬಗಳಲ್ಲಿ ಪೆಡಂಬೂತದಂತೆ ಉಳೆದಿರುವ ಮೂಢನಂಬಿಕೆ, ಕಂದಾಚಾರ, ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವ ದಲಿತರ ಅತಂತ್ರ ಮನಃಸ್ಥಿತಿ… ಮುಂತಾದುವನ್ನೆಲ್ಲ ಕಥೆಯಲ್ಲಿ ತುಂಬ ಪರಿಣಾಮಕಾರಿಯಾಗಿ ಹೇಳಿದ್ದರು ಕುಂ.ವೀ. ಅಂದಹಾಗೆ, ಅವರ ಕಥೆಯ ಹೆಸರು-`ಕೊಟ್ರ ಹೈಸ್ಕೂಲಿಗೆ ಸೇರಿದ್ದು…’
ಈ ಕಥೆಯನ್ನು ಸಿನಿಮಾ ಮಾಡಲು ಹೊರಟ ನಾಗತಿಹಳ್ಳಿ, ಗೀತೆರಚನೆಯ ಹೊಣೆ ಹೊರಿಸಿದ್ದು ಕವಿ ಎಚ್.ಎಸ್.ವಿ ಅವರಿಗೆ. ಜತೆಗೆ, ತಾವೂ ಹಾಡು ಬರೆದರು ನಾಗತಿಹಳ್ಳಿ. ಆ ಸಂದರ್ಭದಲ್ಲಿ ನಾಗತಿಹಳ್ಳಿಯವರ ಆಯ್ಕೆಯ ಬಗ್ಗೆ ಹಲವರು ಸಂದೇಹಿಸಿದ್ದರು. ದಲಿತ ಕುಟುಂಬದ ತಳಮಳವನ್ನು, ಸಂಭ್ರಮದ ಘಳಿಗೆಯನ್ನು ಆ ಸಮುದಾಯದವರಲ್ಲದ ಎಚ್.ಎಸ್.ವಿ ಸಮರ್ಥವಾಗಿ ಹಾಡಾಗಿಸಬಲ್ಲರೆ ಎಂಬುದು ಹಲವರ ಪ್ರಶ್ನೆಯಾಗಿತ್ತು. ಆದರೆ, ಎಲ್ಲರ ನಿರೀಕ್ಷೆ ಮೀರಿ ಸೂಪರ್ಬ್ ಎಂಬಂಥ ಹಾಡುಗಳನ್ನು ಬರೆದರು ಎಚ್.ಎಸ್.ವಿ. ಅಂಥ ಹಾಡುಗಳ ಪೈಕಿ-`ತೇರು ಹೊಂಟೈತವ್ವ ತಂಗಿ…’ ಕೂಡ ಒಂದು.
ಚಿತ್ರದಲ್ಲಿ ಈ ಹಾಡು ಬರುವ ಸಂದರ್ಭ ಹೀಗಿದೆ: ಶಿಕ್ಷಣದಿಂದ ದೂರದೂರದೂರವೇ ಉಳಿದಿದ್ದ ದಲಿತರ ಕೇರಿಯಲ್ಲಿ, ಕೊಟ್ರ ಎಂಬ ಹುಡುಗನೊಬ್ಬ ಏಳನೇ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸಾಗುತ್ತಾನೆ. ಹುಡುಗ ಬುದ್ಧಿವಂತನಿದ್ದಾನೆ. ಅವನನ್ನು ಮುಂದಕ್ಕೆ ಓದಿಸಿ ಎಂದು ಶಾಲೆಯ ಅಧ್ಯಾಪಕರೂ ಹೇಳುತ್ತಾರೆ. ಆದರೆ, ಆ ಊರಿನಲ್ಲಿ ಹೈಸ್ಕೂಲು ಇರುವುದಿಲ್ಲ. ಕೊಟ್ರ ಹೈಸ್ಕೂಲಿಗೆ ಸೇರಬೇಕೆಂದರೆ ಸಿಟಿಗೆ ಹೋಗಬೇಕು. ಕೊಟ್ರ ಓದಲಿಕ್ಕೆಂದು ಸಿಟಿಗೆ ಹೋಗ್ತಾನೆ ಎಂದು ತಿಳಿದಾಗ ದಲಿತರ ಕೇರಿಗೆ ಕೇರಿಯೇ ಸಂಭ್ರಮಿಸುತ್ತದೆ. ಅವನೊಬ್ಬ ಓದಿ ಒಳ್ಳೆಯ ಕೆಲಸ ಹಿಡಿದರೆ ಇಡೀ ಸಮುದಾಯಕ್ಕೆ ಒಳಿತಾಗುತ್ತದೆ ಎಂಬ ನಂಬಿಕೆ ಅವರದು. ಹಾಗಾಗಿ, ಕೊಟ್ರ ಸಿಟಿಗೆ ಹೋಗುವ ದಿನ ಅವನನ್ನು ದಲಿತ ಕೇರಿಯ ಹೆಂಗಸರೆಲ್ಲ ಹಾರೈಸುತ್ತಾರೆ. ಮದುವೆ ಗಂಡಿಗೆ ಶಾಸ್ತ್ರ ಮಾಡುತ್ತಾರಲ್ಲ? ಅಂಥದೇ ಸಡಗರದಲ್ಲಿ ಕೊಟ್ರನಿಗೆ ಸ್ನಾನ ಮಾಡಿಸುತ್ತಾರೆ. ಹರಳೆಣ್ಣೆ ಮೆತ್ತಿ ತಲೆ ಬಾಚುತ್ತಾರೆ. ಯಾರೋ ಕ್ರಾಪು ತೆಗೆಯುತ್ತಾರೆ. ಇನ್ಯಾರೋ ಪೌಡರ್ ಹಾಕುತ್ತಾರೆ. ಸಿಂಗಾರ ಬಂಗಾರಗೊಂಡ ಹುಡುಗನಿಗೆ ದೃಷ್ಟಿಯಾದೀತೆಂದು ಒಬ್ಬರು ನಟಿಕೆ ತೆಗೆದರೆ, ಇನ್ನೊಬ್ಬರು -ಸಿಟಿಯೊಳಗೆ ಹುಶಾರು ಮಗಾ’ ಎಂದು ಎಚ್ಚರಿಸುತ್ತಾರೆ. ಹೀಗೆ ಇಡೀ ಕೇರಿಯ ಜನರೆಲ್ಲ `ಕೊಟ್ರ’ನನ್ನು ಕಳಿಸಿಕೊಡುವ ಸಂಭ್ರಮ-ಸಂಕಟದಲ್ಲಿ ಇದ್ದಾಗಲೇ ಈ ಹಾಡು ವೃಂದಗಾನದಂತೆ ಕೇಳಿಬರುತ್ತದೆ: `ತೇರು ಹೊಂಟೈತವ್ವಾ ತಂಗೀ ತೇರು ಹೊಂಟೈತೆ/ಏಳು ಮಲೆಯ ರಂಗಸ್ವಾಮಿ ತೇರು ಹೊಂಟೈತೆ…’
`ಸರ್, ಈ ಹಾಡನ್ನು ನೀವು ಹೇಗೆ ಬರೆದಿರಿ? ನಿಮ್ಮದಲ್ಲದ ಸಾಮಾಜಿಕ ಸಂದರ್ಭವನ್ನು ಹೇಗೆ ಆವಾಹಿಸಿಕೊಂಡಿರಿ ಎಂಬ ಪ್ರಶ್ನೆಗೆ ಉತ್ತರವಾಗಿ ಎಚ್.ಎಸ್.ವಿ. ಅವರು ಹೇಳಿದ್ದಿಷ್ಟು.
ನಾನು ಹುಟ್ಟಿದ್ದು ಅರೆಮಲೆನಾಡಿನ ಒಂದು ಹಳ್ಳಿಯಲ್ಲಿ. ನಮ್ಮೂರು ದಾವಣಗೆರೆ ಸಮೀಪದ ಹೊದಿಗೆರೆ. ಶಿವಮೊಗ್ಗ ಕೂಡ ನಮಗೆ ಹತ್ತಿರವಿತ್ತು. ಒಂದು ಕಡೆಯಲ್ಲಿ ಕಲ್ಲು ಬಂಡೆಗಳಿಂದ ಕೂಡಿದ ಚಿನ್ನೂಲಾದ್ರಿ ಪರ್ವತ ಶ್ರೇಣಿ, ಇನ್ನೊಂದು ಕಡೆಯಲ್ಲಿ ಕುಕ್ಕೋಡಮ್ಮನ ಗುಡ್ಡ, ಸಹ್ಯಾದ್ರಿಯ ಹಸಿರು ಬೆಟ್ಟಗಳ ಸಾಲು ಸಾಲು, ಎರಡನ್ನೂ ನೋಡುತ್ತಾ ಬೆಳೆದವನು ನಾನು. ನಮ್ಮೂರಲ್ಲಿ ಇದ್ದುದು ಎರಡೇ ನಮ್ಮವರ ಮನೆ, ಹೀಗಾಗಿ ಬಾಲ್ಯದ ದಿನಗಳಲ್ಲಿ `ನಮ್ಮವರು’ ಅನಿಸಿಕೊಂಡವರೆಲ್ಲ ನಮ್ಮವರಲ್ಲದವರೇ. ಹಾಗಾಗಿ ಎಲ್ಲ ಸಮುದಾಯದವರ ಸುಖ-ದುಃಖವನ್ನೂ, ಭಾಷೆಯ ಒಳಗುಟ್ಟುಗಳನ್ನೂ ಅರಿಯುವ ಸುಸಂದರ್ಭ ನನ್ನ ಪಾಲಿಗೆ ಬಂತು. ಮಸೀದಿಯಲ್ಲಿ ಚೀಟಿ ಕಟ್ಟಿಸಿಕೊಳ್ಳುತ್ತಾ, ಕೆಂಚಮ್ಮನ ಗುಡಿಯಲ್ಲಿ ತಾಯತ ತೂಗಿಕೊಳ್ಳುತ್ತಾ, ಈಶ್ವರನ ಗುಡಿಯ ಮುಂದೆ ಜೋಡು ಅಟ್ಟದಲ್ಲಿ ಕೂತು ಗೊಂಬೆ ಮೇಳ ನೋಡುತ್ತಾ, ಕೆಳಗೇರಿಯಲ್ಲಿ ಹರಿದ ಹಳದಿ ನೀರು ದಾಟುತ್ತಾ ನಾನು ಬೆಳೆದೆ. ಹೀಗಾಗಿ ಎಲ್ಲವನ್ನೂ ಒಳಗೊಳ್ಳುವುದು ನನಗೆ ಸಹಜವಾಯಿತು. ದೇವರ ದಯೆಯಿಂದ ನಾನು ಮಡಿಗಾರಿಕೆಯಲ್ಲಿ ಬೆಳೆಯಲಿಲ್ಲ. ಮೈ- ಮನಸು ನಿಜವಾಗಿಯೂ ಬೆಳೆಯುವುದು ಮೈಲಿಗೆಯಲ್ಲೇ. `ಮುಟ್ಟ ಬೇಡ’ ಎನ್ನುವುದಕ್ಕಿಂತ ಮುಟ್ಟಿಬಿಡುವುದೇ ಬಾಲ್ಯದಲ್ಲಿ ನಮಗೆ ರೋಚಕ ಆಟವಾಗಿತ್ತು. ಕಾಗೆ ಎಂಜಲು ಮಾಡಿಕೊಂಡು ನನ್ನ ವಾರಿಗೆಯ ಹಲವು ಜಾತಿಯ ಹುಡುಗರು ಜತೆಯಲ್ಲಿ ಮಾವಿನಕಾಯಿ ತಿನ್ನುತ್ತಿದ್ದೆವು…
ಹೀಗೆ, ಯಾವುದು ಸ್ವ, ಯಾವುದು ಪರ ಎಂಬುದೇ ಗೊತ್ತಾಗದಂಥ ಪರಿಸರದಲ್ಲಿ ನಾನು ಬೆಳೆದೆ. ಊರಲ್ಲಿ ಯಾರೋ ಸತ್ತರೆ, ಅವತ್ತು ಇಡೀ ಊರಿಗೇ ಸೂತಕದ ಛಾಯೆ ಕವಿದಿರುತ್ತಿತ್ತು. ಗೌಡರ ಮನೆಯಲ್ಲಿ ಮದುವೆಯಾದರೆ, ಊರೊಟ್ಟಿನ ಎಲ್ಲರಿಗೂ ಅಲ್ಲಿಯೇ ಊಟದ ವ್ಯವಸ್ಥೆಯಿರುತ್ತಿತ್ತು. ನಮ್ಮೂರಲ್ಲಿ ವರ್ಷಕ್ಕೊಮ್ಮೆ ಅಲಾಬಿ ಹಬ್ಬ ಮಾಡುತ್ತಿದ್ದರು. ಆಗ ನಮ್ಮ ಊರಲ್ಲಿದ್ದ ಜಬ್ಬರ್ ಸಾಬರು ತಮ್ಮ ಮಂದಿಯನ್ನು ಮುಂದಿಟ್ಟುಕೊಂಡು ಮನೆಮನೆಗೂ ಸಕ್ಕರೆ ಬೀರಲಿಕ್ಕೆ ಬರುತ್ತಿದ್ದರು. ಮಸೀದಿಗೆ ಹರಸಿಕೊಂಡವರು, ಗಂಡು ಮಗುವಾದರೆ, ಅದಕ್ಕೆ ಬಾಬಣ್ಣ ಎಂದು ಹೆಸರಿಟ್ಟು ಕೋಮು ಸಾಮರಸ್ಯ ಮೆರೆಯುತ್ತಿದ್ದರು. ದಲಿತ ಕುಟುಂಬದ ಹುಡುಗರಂತೂ ಬಾಲ್ಯದಲ್ಲಿ ನನಗೆ ಸಂಜೆಯ ಆಟದ ಜತೆಗಾರರಾಗಿದ್ದರು.
ಹೀಗೆ, ಎಲ್ಲ ಸಮುದಾಯದ, ಸಂಕಟ, ಸಿಡಿಮಿಡಿ, ಸಂಭ್ರಮವನ್ನೂ ಪ್ರತ್ಯಕ್ಷ ಕಂಡಿದ್ದೆ ನಾದ್ದರಿಂದ `ಕೊಟ್ರೇಶಿ ಕನಸು’ ಚಿತ್ರಕ್ಕೆ ಹಾಡು ಬರೆಯಲು ಸಮಸ್ಯೆ ಅನ್ನಿಸಲಿಲ್ಲ. ಕಥೆ ಓದಿದ ನಂತರ ಬಾಲ್ಯದ ದಿನಗಳಲ್ಲಿ ನಮ್ಮ ಊರಲ್ಲಿದ್ದ ದಲಿತ ಕುಟುಂಬಗಳ ಕಷ್ಟದ ಬದುಕು ಕಣ್ಮುಂದೆ ಬಂತು. ಅದನ್ನು ಜತೆಗಿಟ್ಟುಕೊಂಡೇ ಹಾಡು ಬರೆಯಲು ಕುಳಿತೆ. ದಲಿತ ಕುಟುಂಬಗಳು ಅನಕ್ಷರಸ್ಥರಾದ ಕಾರಣದಿಂದಲೇ ಹತ್ತಾರು ಕಷ್ಟಗಳನ್ನು ಎದುರಿಸಿವೆ.
ಹೀಗಿರುವಾಗ ಅದೇ ಸಮುದಾಯದ ಹುಡುಗನೊಬ್ಬ ಚನ್ನಾಗಿ ಓದುತ್ತಿದ್ದಾನೆ ಅಂದರೆ, ಆ ವರ್ಗದಲ್ಲಿ ಒಂದು ಬದಲಾವಣೆಯ ಪಥ ನಿಮರ್ಾಣವಾದ ಹಾಗೆ ಆಗುತ್ತೆ ಅನ್ನಿಸ್ತು. ಈ ಹೊಸ ಹಾದಿಯಲ್ಲಿ ಆ ಹುಡುಗ ರಥದ ಹಾಗೆ ಹೋಗ್ತಾನೆ ಅನ್ನಿಸ್ತು. ಅದನ್ನೇ `ತೇರು ಹೊಂಟೈತೆ’ ಎಂಬ `ರೂಪಕ’ ಬಳಸಿ ಹೇಳಿದೆ. ದಲಿತ ಕುಟುಂಬಗಳು ಅಸಮಾನತೆಯ ಮಧ್ಯೆ, ಕಂದಾಚಾರಗಳ ಮಧ್ಯೆ ಬದುಕುತ್ತವೆ ಎಂಬುದಕ್ಕೆ ಸೂಚ್ಯವಾಗಿ `ಏಳು ಮಲೆ’ ಎಂಬುದನ್ನು ಬಳಸಿದೆ. ಇದೇ ಸಂದರ್ಭದಲ್ಲಿ ನನಗೆ `ಶ್ರೀ ಕೃಷ್ಣ ಬೃಂದಾವನದಿಂದ ಮಥುರೆಗೆ ಹೋಗುವ ಸಂದರ್ಭ ನೆನಪಾಯಿತು. ಅಲ್ಲಿಯೂ ಅಷ್ಟೆ. ಕೃಷ್ಣನನ್ನು ಊರ ಜನರೆಲ್ಲ ಮುದ್ದು ಮಾಡಿ, ಎಚ್ಚರಿಕೆ ನೀಡಿ, ಹಾರೈಸಿ, ಕಳಿಸಿಕೊಡುತ್ತಾರೆ. ಅಲ್ಲಿ ಕೃಷ್ಣ ಗೊಲ್ಲರ ಹುಡುಗ. ಕೊಟ್ರ ದಲಿತರ ಹುಡುಗ. ಜನಪದದಲ್ಲಿ `ಏಳು ಮಲೆಯ ರಂಗಸ್ವಾಮಿಯ ತೇರು’ ಅಂದರೆ ಕೃಷ್ಣನ ರಥ ಎಂದೂ ಅರ್ಥವಿದೆ. ಕೃಷ್ಣ-ಕೊಟ್ರ ಇಬ್ಬರೂ `ಬದಲಾವಣೆ’ಗೆ ಒಂದು ನೆಪ ಅನಿಸಿದ್ದರಿಂದ ಆ ಸಾಲಿನ ಬಗ್ಗೆ ತುಂಬ ಖುಷಿಯಾಯಿತು.
ಮುಂದೆ ಕೃಷ್ಣನೊಂದಿಗೆ ಕೊಟ್ರನನ್ನೂ ಜತೆಗಿಟ್ಟುಕೊಂಡು, ಬಾಲ್ಯದ ಅನುಭವಗಳೊಂದಿಗೆ ತೇಲುತ್ತಾ, ಖುಷಿ ಪಡುತ್ತಾ ಇಡೀ ಸಂದರ್ಭವನ್ನು ಅನುಭವಿಸಿಕೊಂಡು ಹಾಡು ಬರೆದೆ. ಹಳ್ಳಿಯ ಜನ ತಮ್ಮ ಮಕ್ಕಳನ್ನು ಬಗೆ ಬಗೆಯಲ್ಲಿ ಸಿಂಗರಿಸಿ, ಈಗ ಕೃಷ್ಣನ ಥರಾ ಕಾಣ್ತಾನೆ, ಈಗ ರಾಮನ ಥರಾ ಕಾಣ್ತಾನೆ ಎಂದು ಖುಷಿ ಪಡ್ತಾರೆ ತಾನೆ? ಕ್ಷಣಕ್ಕೊಮ್ಮೆ ದೃಷ್ಟಿ ನಿವಾಳಿಸಿ ಲಟಿಕೆ ತೆಗೆಯುತ್ತಾರೆ ತಾನೆ? ಅದನ್ನೆಲ್ಲ ನೆನಪು ಮಾಡಿಕೊಂಡು ಹಾಡು ಬರೆದೆ. ಪರಿಣಾಮ, ಕೊಟ್ರ ನನ್ನವನಾದ. ಕೃಷ್ಣ ಜತೆಗಾರನಾದ. ಹಾಡು ಬರೆಯುತ್ತ ಹೋದಂತೆ ನನ್ನನ್ನು ಕಾಡಿದ, ಕುಣಿಸಿದ , ಕಡೆಗೆ, ಎಲ್ಲರವನ್ನೂ ಆಗಿಬಿಟ್ಟ. ಪರಿಣಾಮ, ನಾನೂ ಗೆದ್ದೆ, ಕೊಟ್ರನೂ ಗೆದ್ದ… ಇಷ್ಟು ಹೇಳಿ, ಸಂಭ್ರಮದಿಂದಲೇ ಸುಮ್ಮನಾದರು ಎಚ್. ಎಸ್. ವೆಂಕಟೇಶ ಮೂರ್ತಿ.

‍ಲೇಖಕರು avadhi

January 22, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This