ಮಣಿಕಾಂತ್ ಬರೆದಿದ್ದಾರೆ: ನಿನ್ನಾ ರೂಪು ಎದೆಯ ಕಲಕಿ..

ಎ ಆರ್ ಮಣಿಕಾಂತ್
ಚಿತ್ರ: ಪರಸಂಗದ ಗೆಂಡೆತಿಮ್ಮ. ಗೀತರಚನೆ: ದೊಡ್ಡರಂಗೇಗೌಡ
ಸಂಗೀತ: ರಾಜನ್-ನಾಗೇಂದ್ರ, ಗಾಯನ: ಎಸ್. ಜಾನಕಿ
ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ
ನಿನ್ನಾ ನೋಟ ಕೂಡಿದಾಗ ಕಂಡೇ ಅನುರಾಗ            ||ಪ||
ಮನಸಿನಾ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ
ಹೃದಯದಾ ಕುಲುಮೆಯಾಗೆ ನೂರು ಬಯಕೆ ಮಿಡಿದೈತೆ
ನಿನ್ನಾ ಕಾಣುವ ಭಾವ ಬೆಳೆದು ನನ್ನಾ ಕನಸೂ ಕಡೆದೈತೆ           ||1||
ತೆರೆಯದಾ ಬಯಕೆ ಬಾನು ದೂರದೂರ ಸರಿದೈತೆ
ಹರೆಯದಾ ಹಂಬಲ ಗಂಗೆ ಬಾಗಿ ಬಳುಕೀ ನಡೆದೈತೆ
ನಿನ್ನಾ ಸ್ನೇಹಕೆ ಬಾಳು ನಲಿದು ಆಸೆ ಗಂಧ ಹರಡೈತೆ   ||2||
ಮರೆಯದಾ ಮೋಹ ಉಕ್ಕಿ ತೇಲಿ ತೇಲಿ ಮಾರೆದೈತೆ
ಇಂಗದಾ ದಾಹ ಬೇಗೆ ಕಾದು ಕಾದೂ ಕರೆದೈತೆ
ನಿನ್ನಾ ಸೇರುವ ರಾಗ ರಂಗಿಗೆ ನನ್ನಾ ಮನಸೂ ತೆರೆದೈತೆ ||3||
ಎಪ್ಪತ್ತರ ದಶಕದ ಸೂಪರ್ ಹಿಟ್ ಸಿನಿಮಾಗಳಲ್ಲಿ ಮಾರುತಿ ಶಿವರಾಂ ನಿರ್ದೇಶನದ `ಪರಸಂಗದ ಗೆಂಡೆತಿಮ್ಮ’ ಕೂಡ ಒಂದು. ಆ ಚಿತ್ರದ `ನೋಟದಾಗೆ ನಗೆಯಾ ಮೀಟಿ’ `ತೇರಾ  ಏರಿ ಅಂಬರದಾಗೆ ನೇಸರು ನಗುತಾನೆ…’ ಹಾಡುಗಳಂತೂ ಮನೆಮನೆಯ ಮಾತಾಗಿಹೋದವು. ಚಿತ್ರ ತೆರೆಕಂಡ ಹದಿನೈದು ವರ್ಷಗಳ ನಂತರವೂ ವಾರಕ್ಕೆ ಮೂರು ಬಾರಿಯಾದರೂ `ಗೆಂಡೆ ತಿಮ್ಮ’ದ ಹಾಡುಗಳು ಮೆಚ್ಚಿನ ಚಿತ್ರಗೀತೆಗಳಾಗಿ ಪ್ರಸಾರವಾಗುತ್ತಿದ್ದವು ಅಂದರೆ -ಆ ಹಾಡುಗಳು ಸೃಷ್ಟಿಸಿದ ಕ್ರೇಜ್ ಎಂಥದಿತ್ತೋ ಊಹಿಸಿಕೊಳ್ಳಿ.
`ಪರಸಂಗದ ಗೆಂಡೆತಿಮ್ಮ’ದಲ್ಲಿ- `ತೇರಾಏರಿ…’ ಹಾಡಿನಷ್ಟೇ ಜನಪ್ರಿಯವಾದ ಇನ್ನೊಂದು ಹಾಡೆಂದರೆ -`ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ…’ ಏಕಕಾಲಕ್ಕೆ ಸುಂದರ ಭಾವಗೀತೆ ಹಾಗೂ ಪ್ರೇಮಗೀತೆಯಾಗುವ ಹೆಚ್ಚುಗಾರಿಕೆ ಈ ಹಾಡಿನದ್ದು.
`ಪರಸಂಗದ ಗೆಂಡೆತಿಮ್ಮ’ ಚಿತ್ರದಲ್ಲಿ ಈ ಹಾಡು ಕೇಳಿಬರುವ ಸಂದರ್ಭವನ್ನೂ ಇಲ್ಲಿ ಹೇಳಿಬಿಡಬೇಕು: ಮೈಸೂರಿಗೆ ಸಮೀಪದ ಒಂದು ಹಳ್ಳಿ. ಅಲ್ಲಿನ ಜನರು, ಅವರ ಬದುಕು-ಈ ಎರಡೂ ನವ ನಾಗರೀಕತೆಯಿಂದ ದೂರ ದೂರ. `ಗೆಂಡೆತಿಮ್ಮ’ ಚಿತ್ರದ್ದು  60ರ ದಶಕದ ಕಥೆ. ಹಾಗಾಗಿ ಅಂದಿನ ಸಂದರ್ಭಕ್ಕೆ ಹೊಕ್ಕಳು ಕಾಣುವಂತೆ  ಸೀರೆ ಉಡುವುದು, ಬೈತಲೆ ತೆಗೆದು ತಲೆ ಬಾಚುವುದು, ಸ್ನೋ ಹಾಕಿಕೊಂಡು ಘಂಘಮಾ ಎನ್ನುವುದು… ಇದೆಲ್ಲ `ಕ್ರಾಂತಿಕಾರಕ’ ವಿಷಯಗಳೇ.
ಇಂಥ `ವಾತರಾವಣ’ದ ಮಧ್ಯೆಯೇ ಇರುವ ಹಳ್ಳಿಯಲ್ಲೇ `ಗೆಂಡೆತಿಮ್ಮ’ ಇರುತ್ತಾನೆ.  ಅವನು ಒಂದು ಬುಟ್ಟಿಯೊಂದಿಗೆ ಮೈಸೂರಿಗೆ ಹೋಗಿ ಅಲ್ಲಿಂದ ಗೃಹೋಪಯೋಗಿ ವಸ್ತುಗಳೊಂದಿಗೆ ಹೆಂಗಸರಿಗೆಂದು- ಸ್ನೋ, ಪೌಡರ್, ಬ್ರಾ, ಪೆಟ್ಟಿಕೋಟ್ ಗಳನ್ನೂ  ತರುತ್ತಾನೆ, ಹಾಗೆ ತಂದವನು ತನ್ನೂರಿನ ಹಿರಿಯ ಹೆಂಗಸರ ಮುಂದೆ ನಿಂತು- `ಅವೋವ್, ಇದೆಲ್ಲಾ ಹೊಸಾ ಫ್ಯಾಶನ್ನು. ಪ್ಯಾಟೆ ಬಳ್ಗಿರೋ ಹೆಂಗಸ್ರೆಲ್ಲಾ ಇವನ್ನು ಹಾಕ್ಕೋತಾರೆ. ಈ ಪೌಡ್ರು, ಸ್ನೋ ಹಾಕ್ಕಂಡ್ರೆ ಅದರ ಘಮಲು ಮನೆ ತುಂಬಾ ಹರಡಿಕೊಳ್ತೈತೆ. ಇದೆಲ್ಲಾನೂ ಹಾಕ್ಕಂಡ್ರೆ ನೀವೂ ಚಂದಾಗಿ ಕಾಣ್ತೀರಿ. ಯಜಮಾನ್ರಿಗೂ ಖುಷಿಯಾಯ್ತದೆ. ಹಾಕ್ಕೊಳ್ಳಿ’ ಎಂದು ಪುಸಲಾಯಿಸುತ್ತಾನೆ. ಅಷ್ಟೇ ಅಲ್ಲ , ನವ ನಾಗರಿಕತೆಯಿಂದ ಮೈಲಿ ದೂರವಿದ್ದ ತನ್ನೂರ ಹೆಣ್ಣುಮಕ್ಕಳನ್ನು `ಬದಲಾಯಿಸುವಲ್ಲಿ’ ಯಶಸ್ವಿಯೂ ಆಗುತ್ತಾನೆ ! ಇಂಥ ಗೆಂಡೆತಿಮ್ಮನಿಗೆ, `ಸಿಟಿ’ಯಲ್ಲೇ ಬೆಳೆದ, ಓದಿಕೊಂಡ, ಶಿಸ್ತು, ಅಚ್ಚುಕಟ್ಟು ತನವೂ ಗೊತ್ತಿದ್ದ, ಸ್ವಲ್ಪ  ಜಿಚಿಣ ಮನೋಭಾವದ ಮರಂಕಿ ಎಂಬ ಚೆಲುವೆ, ಹೆಂಡತಿಯಾಗಿ ಬರುತ್ತಾಳೆ.
ವಿಪರ್ಯಾಸವೆಂದರೆ, ತನ್ನ ಊರಿನ ಎಲ್ಲರನ್ನೂ `ನಾಗರಿಕತೆ’ಯ ಹೊಸದಿಕ್ಕಿಗೆ ತಿರುಗಿಸಿದ ಗೆಂಡೆತಿಮ್ಮ, ತಾನು ಮಾತ್ರ ಹಳ್ಳಿಗಮಾರನಾಗಿಯೇ ಉಳಿದುಹೋಗುತ್ತಾನೆ. ಗಂಡನ ಈ ವರ್ತನೆಯಿಂದ ಮರಂಕಿ ಪೆಚ್ಚಾಗುತ್ತಾಳೆ. ಗಂಡನೊಂದಿಗೆ ಹಾಗಿರಬೇಕು, ಹೀಗಿರಬೇಕು ಅವನನ್ನು ಹೇಗೆಲ್ಲಾ ಮುದ್ದು ಮಾಡಬೇಕು, ಅವನ ಬಾಹುಗಳಲ್ಲಿ ಕರಗಿಹೋಗಬೇಕು, ಅವನು ಹಿಡಿಯಲು ಬಂದಾಗ ಸಿಗದೆ ತಪ್ಪಿಸಿಕೊಳ್ಳಬೇಕು, ಅವನನ್ನು ಕಾಡಬೇಕು, ಕೆಣಕಬೇಕು ಎಂದೆಲ್ಲಾ ಕನಸು ಕಂಡಿದ್ದವಳಿಗೆ, ಗಂಡ ಸರಸಕ್ಕೇ ಬಾರದ್ದನ್ನು ಕಂಡು ಸಂಕಟವಾಗುತ್ತದೆ. ಮನಸೆಂಬುದು ಹುಚ್ಚು ಕುದುರೆಯಂತೆ ಬೇರೆ `ಏನನ್ನೋ’ ಬಯಸುತ್ತದೆ. ಹೀಗಿದ್ದಾಗಲೇ, ಆಕೆಗೆ ಆ ಊರಿನ ಶಿಕ್ಷಕ `ಶಿವಣ್ಣ’ನ ಪರಿಚಯವಾಗುತ್ತದೆ. ಸುಶಿಕ್ಷಿತ ಎಂಬ ಕಾರಣಕ್ಕೆ ಆತನಿಗೆ ವಿಪರೀತ ಮರ್ಯಾದೆ ಕೊಡುವ ಗೆಂಡೆತಿಮ್ಮನೇ ಆತನನ್ನು ಮನೆಗೆ ಕರೆತರುತ್ತಾನೆ. ಹೆಂಡತಿಗೆ ಪರಿಚಯಿಸುತ್ತಾನೆ. ಮೊದಲ ನೋಟದಲ್ಲೇ ಮರಂಕಿಗೂ, ಮೇಷ್ಟ್ರು  ಶಿವಣ್ಣನಿಗೂ `ಆಸೆ’ ಶುರುವಾಗುತ್ತದೆ.
ಇದೇನೂ ಗೊತ್ತಿಲ್ಲದ ಅಮಾಯಕ ಗೆಂಡೆತಿಮ್ಮ, ಒಂದು ಸಂದರ್ಭದಲ್ಲಿ ಹಬ್ಬಕ್ಕೆ ತವರುಮನೆಗೆ ಹೊರಟ ಹೆಂಡತಿಯನ್ನು ಅದೇ ಊರಿನವನಾದ ಶಿವಣ್ಣ ಮೇಸ್ಟ್ರ ಜತೆ ಕಳಿಸುತ್ತಾನೆ. ಆಕಸ್ಮಿಕವಾಗಿ ಸಿಕ್ಕ ಸ್ವಾತಂತ್ರ್ಯದಿಂದ ಖುಷಿಯಾದ ಮರಂಕಿ- ಶಿವಣ್ಣ, ಹೋಟೆಲಿನಲ್ಲಿ, ಸಿನಿಮಾ ಥಿಯೇಟರಿನಲ್ಲಿ  ಬಸ್ಸಿನಲ್ಲಿ `ಒತ್ತಿಕೊಂಡೇ’ ಕೂತು ಖುಷಿಪಡುತ್ತಾರೆ. ಕಡೆಗೊಮ್ಮೆ ರಾತ್ರಿ ವೇಳೆಯಲ್ಲಿ ಅವರು ಊರಿಗೆ ಹೋಗುವ ಹಾದಿಯಲ್ಲಿ ಆಕಸ್ಮಿಕವಾಗಿ (?!) ಎಡವಿ ಪರಸ್ಪರರನ್ನು ತಬ್ಬಿಕೊಂಡಾಗಲೇ-ಮರಂಕಿಯ ಮನದಾಳದ ಪಿಸುಮಾತಿನಂತೆ-`ನಿನ್ನಾ ರೂಪು ಎದೆಯ ಕಲಕಿ’ ಹಾಡು ಕೇಳಿಬರುತ್ತದೆ. ಈ ಸಂದರ್ಭದಲ್ಲೇ ಪ್ರೇಮಿಗಳಿಬ್ಬರ ಸಮಾಗಮವೂ ಆಗಿ ಹೋಗುತ್ತದೆ.
`ಪರಸಂಗದ ಗೆಂಡೆತಿಮ್ಮ’ ಚಿತ್ರದ ಎಲ್ಲ ಹಾಡುಗಳ ಹಿಂದಿದ್ದವರು -ದೊಡ್ಡರಂಗೇಗೌಡ. ಅದು ಅವರಿಗೆ ಮೊದಲ ಸಿನಿಮಾ. ಆ ಸಂದರ್ಭದಲ್ಲಿ ಆರ್.ಎನ್. ಜೆ., ಉದಯಶಂಕರ್ ಹಾಗೂ ವಿಜಯನಾರಸಿಂಹ, ಖ್ಯಾತಿಯ ಉತ್ತುಂಗದಲ್ಲಿದ್ದರು. ಅವರುಗಳಷ್ಟೇ ಚನ್ನಾಗಿ ಹಾಡು ಬರೆಯಲೇಬೇಕಾದ ಸವಾಲು ದೊಡ್ಡರಂಗೇಗೌಡರ ಮುಂದಿತ್ತು. ಚಿತ್ರರಂಗ ಸೇರಿದರೆ `ಕವಿ’ಗಳ ಸತ್ವ ಕಡಿಮೆಯಾಗುತ್ತದೆ ಎಂದೇ ಹಲವರು ನಂಬಿದ್ದ ಕಾಲ ಅದು. ಜತೆಗೆ, ಹಾಡಿನ ಮೊದಲು ಹಾಗೂ ಕೊನೆಯಲ್ಲಿ ಪ್ರಾಸ ಬರುವಂತೆ ನೋಡಿಕೊಂಡರೆ ಆಯ್ತು. ಅದೇ ಚಿತ್ರಗೀತೆಯಾಗುತ್ತದೆ ಎಂಬ ಟೀಕೆ ಕೂಡ ಆ ದಿನಗಳಲ್ಲಿ ಚಾಲ್ತಿಯಲ್ಲಿತ್ತು. ಇದೆಲ್ಲ ಗೊತ್ತಿದ್ದೂ `ಕವಿ’ ದೊಡ್ಡರಂಗೇಗೌಡರು ಚಿತ್ರರಂಗಕ್ಕೆ ಬಂದರು. ಆಗ ಕೆಲವರು- `ದೊಡ್ರಂಗೇಗೌಡ್ರು, ಹಚ್ಕೊಂಡ್ರು ಪೌಡ್ರು’ ಎಂದು ಕುಹಕವಾಡಿದರು ಕೂಡ.
ಚಿತ್ರಸಾಹಿತಿಯಾಗಿ ತಾವು ಆರಂಗೇಟ್ರಂ ಶುರುಮಾಡಿದ ದಿನಗಳನ್ನು ಗೌಡರು ನೆನಪಿಸಿಕೊಳ್ಳುವುದು ಹೀಗೆ: ಆಗ ಚಿತ್ರರಂಗಕ್ಕೆ ನಾನು ಹೊಸಬ. ಹಾಗಿದ್ದರೂ ನನ್ನ ಕವನಗಳನ್ನು, ಭಾವಗೀತೆಗಳನ್ನು ಓದಿ ಮೆಚ್ಚಿಕೊಂಡಿದ್ದ  ನಿದರ್ೇಶಕ ಮಾರುತಿ ಶಿವರಾಂ ಹಾಗೂ ಅವರ ಸಹಾಯಕರಾಗಿದ್ದ ಕೆ.ವಿ. ಜಯರಾಂ ಎಲ್ಲ ಹಾಡುಗಳನ್ನೂ ನನ್ನಿಂದಲೇ ಬರೆಸುವ `ರಿಸ್ಕ್’ ತಗೊಂಡಿದ್ದರು. ಹೊಸಬನಾದ ನನ್ನನ್ನು ಅನುಮಾನದಿಂದಲೇ ಒಪ್ಪಿಕೊಂಡ ರಾಜನ್-ನಾಗೇಂದ್ರ ಜೋಡಿ-`ನೋಟದಾಗೆ ನಗೆಯಾ ಮೀಟಿ’ ಹಾಡಿಗೆ ಭರ್ತಿ ಹದಿನೈದು ಪಲ್ಲವಿ ಬರೆಸಿದ್ರು. ಮುಂದೆ ನಾನು `ತೇರಾ ಏರಿ ಅಂಬರದಾಗೆ…’ ಹಾಡು ಬರೆದ ನಂತರ ರಾಜನ್-ನಾಗೇಂದ್ರರಿಗೆ ನನ್ನ ಸಾಮಥ್ರ್ಯದ ಬಗ್ಗೆ  ನಂಬಿಕೆ ಬಂತು. ಮರಂಕಿ ಹಾಗೂ ಶಿವಣ್ಣ ಮೇಸ್ಟ್ರು ಊರಿಗೆ ಹೋಗುವ ಹಾದಿಯಲ್ಲಿ ಒಂದು ಹಾಡು ಹಾಕೋಣ. ಅದು ಮರಂಕಿಯ ಮನದ ಪಿಸುಮಾತಿನಂತೆ; ಅತೃಪ್ತ ಹೆಣ್ಣೊಬ್ಬಳ ಸ್ವಗತದಂತೆ, ಮನಸು ಗೆದ್ದವನಿಗೆ ನೀಡುವ ಆಹ್ವಾನದಂತೆ ಇರಲಿ. ಹೇಳಿ ಕೇಳಿ ಅವರದು ಅನೈತಿಕ ಸಂಬಂಧ. ಹಾಗಾಗಿ ಈ ಹಾಡಿನ ಪ್ರತಿ ಚರಣದಲ್ಲೂ  ಮೋಹ, ಪ್ರೇಮ, ಕಾಮ, ವಿರಹ, ತಹತಹವೆಲ್ಲ ಸೇರಿಕೊಳ್ಳಲಿ. ಅದು ಏಕಕಾಲಕ್ಕೆ ಪ್ರೇಮಗೀತೆ ಹಾಗೂ ಭಾವಗೀತೆಯೂ ಆಗಿರಲಿ ಎಂದರಂತೆ.
`ಸರಿ, ನೀವು ಹೇಳಿದಂತೆಯೇ ಬರೀತೇನೆ’ ಎಂದರು ದೊಡ್ಡರಂಗೇಗೌಡ. ಈ ಮಾತುಕತೆ ನಡೆದದ್ದು ಚೆನ್ನೈನ ಸ್ವಾಗತ್ ಹೋಟೆಲಿನಲ್ಲಿ. ಅಲ್ಲಿ ಕೂತೇ ಇಡೀ ಸಂದರ್ಭವನ್ನು ಕಣ್ಮುಂದೆ ತಂದುಕೊಂಡ ಗೌಡರು  ಸ್ವಗತದಲ್ಲಿಯೇ ಹೀಗಂದುಕೊಂಡರಂತೆ: ಮರಂಕಿ ಹಳ್ಳೀಲಿರ್ತಾಳೆ. ಶಿವಣ್ಣ ಮೇಸ್ಟ್ರನ್ನು ಅಲ್ಲಿಯೇ ನೋಡ್ತಾಳೆ. ಮರು ಕ್ಷಣದಿಂದಲೇ ಅವಳ ಎದೆಯಲ್ಲಿ ಪ್ರೇಮರಾಗ ಮಿಡಿಯತೊಡಗುತ್ತದೆ. ಅವನನ್ನು ಕಂಡಾಗ ಅವಳಿಗೆ ಏನನ್ನಿಸಿತು ಎಂಬುದನ್ನು ಈ ಹಾಡಲ್ಲಿ ಹೇಳಬೇಕು. ಹಳ್ಳಿಯ ಭಾಷೆಯಲ್ಲಿ ಆಸೆಯನ್ನು ಚಿಲುಮೆಗೂ, ಕಾಮವನ್ನು ಕುಲುಮೆಗೂ ಹೋಲಿಸಿದರೆ ಚೆಂದ. ಆಗ ಅದು ಎಲ್ಲರನ್ನೂ ತೀವ್ರವಾಗಿ ತಟ್ಟುತ್ತದೆ. ಮನುಷ್ಯರ ಆಸೆಗಳಿಗೆ ಕೊನೆಯೇ ಇಲ್ಲ. ಅವು ಆಕಾಶದಷ್ಟು ಎತ್ತರಕ್ಕೆ ಬೆಳೀತಾನೇ ಇರ್ತವೆ ಎಂದೆಲ್ಲ ಹಳ್ಳಿಯ ಜನ ಮಾತಾಡುವುದುಂಟು. ಹಾಗೆಯೇ ಕನಸುಗಳು ಮನದೊಳಗೆ ಕಣ್ಣಾಮುಚ್ಚಾಲೆ ಆಡ್ತವೆ ಎಂಬುದನ್ನು `ಕನಸು ಕಡೆದಂಗೆ’ ಆಗ್ತಾ ಇದೆ ಎನ್ನುವುದುಂಟು. ಇದನ್ನೆಲ್ಲ ಹಾಡಿನಲ್ಲಿ ತಂದರೆ ಚನ್ನಾಗಿರುತ್ತೆ…’
ಸ್ವಾಗತ್ ಹೋಟೆಲಿನಲ್ಲಿ ಕೂತು ಹೀಗೆಲ್ಲ ಅಂದಾಜು ಮಾಡಿಕೊಂಡ ಗೌಡರು, ಪಲ್ಲವಿಯನ್ನು ವಿಶಿಷ್ಟ ಸಾಲುಗಳಿಂದ ಆರಂಭಿಸಬೇಕು ಅಂದುಕೊಂಡರಂತೆ. ಆಗಲೇ- ನಿನ್ನ ರೂಪವನ್ನು ನನ್ನ ಕಂಗಳಲ್ಲಿ ತುಂಬಿಕೊಂಡು ಪುನೀತನಾದೆ’ ಎಂಬ ಪ್ರೇಮಿಯೊಬ್ಬನ `ಅವತ್ತಿನ ಡೈಲಾಗ್’ ನೆನಪಾಯಿತಂತೆ. ತಕ್ಷಣವೇ ಅದನ್ನು ಹೆಣ್ಣೊಬ್ಬಳ ಎದೆಯ ರಾಗವಾಗಿಸಿದ ಗೌಡರು `ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ’ ಎಂದು ಬರೆದರು. ಹೀಗೆ, ಅವನ ರೂಪವನ್ನೇ ಅವಳು ಕಣ್ತುಂಬಿಕೊಂಡಾಗ ಅವನು ಸುಮ್ಮನಿರ್ತಾನಾ? ನೋಟಕ್ಕೆ ನೋಟ ಬೆರೆಸುತ್ತಾನೆ. ಅವನ ನೋಟದ ತೀಕ್ಷ್ಣತೆ ಎದುರಿಸಲಾಗದೆ ಅವಳು ತಲೆತಗ್ಗಿಸುವುದರೊಳಗೆ ಕಣ್ಣು ಹೊಡೆದಿರುತ್ತಾನೆ. `ನಿನ್ಮೇಲೆ ನಂಗೆ ಆಸೆಯಿದೆ, ಪ್ರೀತಿಯಿದೆ,  ಮೋಹವಿದೆ’ ಎಂದೆಲ್ಲಾ ಕಣ್ಣಲ್ಲೇ ಹೇಳಿಬಿಟ್ಟಿರುತ್ತಾನೆ. ಆ ಸಂದರ್ಭದಲ್ಲಿ ಹುಡುಗಿಯರು ತಮ್ಮ ಧ್ವನಿಗೆ ಒಂದಿಷ್ಟು  ವಯ್ಯಾರ, ನಾಚಿಕೆ, ಸಡಗರವನ್ನೆಲ್ಲ ತುಂಬಿಬಿಡುತ್ತಾರೆ ಅನ್ನಿಸಿದಾಗ- `ನಿನ್ನಾ ನೋಟ ಕೂಡಿದಾಗ ಕಂಡೆ ಅನುರಾಗ’ ಎಂದು ಬರೆದರಂತೆ. ಜತೆಗೆ, ಪ್ರತಿ ಚರಣ ಬರೆಯುವಾಗಲೂ ಅಲ್ಲಿನ ಸಾಲುಗಳಲ್ಲೂ ಅತೃಪ್ತ ಹೆಣ್ಣೊಬ್ಬಳ ಆಸೆ ಹಾಡಾಗಿ ಮೊರೆಯುವಂತೆ ನೋಡಿಕೊಂಡರಂತೆ. ಮುಂದೆ, ಹಾಡಿನ ರೆಕಾಡರ್ಿಂಗ್ ಸಂದರ್ಭದಲ್ಲಿ ಈ ಹಾಡಿನ ಸಂದರ್ಭ ಮತ್ತು ಅದು ನೀಡುವ ಅರ್ಥ ತಿಳಿದ ಎಸ್. ಜಾನಕಿ- `ನೋಟ’ ಎಂಬುದನ್ನು ಸ್ವಲ್ಪ ಎಳೆದಂತೆ ಹಾಡಿದರು. ಹಾಗೆಯೇ `ಕಂಡೇ ಅನುರಾಗ’ ಎಂಬುದನ್ನು ಎರಡೆರಡು ಸಲ ಹೇಳಿಬಿಟ್ಟರು. ಅಷ್ಟೇ ಅಲ್ಲ, ಮೊದಲ ಸಲ ಬೆರಗಿನ ಭಾವವೂ, ಎರಡನೇ ಬಾರಿ ನಾಚಿಕೆಯೊಂದಿಗೆ ಅನುರಾಗವೂ ಸೇರಿಕೊಳ್ಳುವಂತೆ ನೋಡಿಕೊಂಡರು !
ಪರಿಣಾಮ ಏನಾಗಿದೆಯೆಂದರೆ- ಮೂವತ್ತು ವರ್ಷಗಳ ನಂತರವೂ ಈ ಹಾಡು ಹದಿಹರೆಯದ ಎಲ್ಲ ಬೆಡಗಿಯರ ಮನದ ಪಲ್ಲವಿಯಾಗಿಯೇ ಉಳಿದುಹೋಗಿದೆ. ಅಷ್ಟು ಸಾಕಲ್ಲವೆ?

‍ಲೇಖಕರು avadhi

December 10, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Radhika

    Generally in reality shows, SPB or other judges talk about how a song/tune was formed. You’re really taking all pains to record facts so well. Please bring out a book of all these articles on movie songs.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: