ಮಣಿಕಾಂತ್ ಬರೆದಿದ್ದಾರೆ: ನೀನಾ ಭಗವಂತಾ..

6213_1079515355773_1462958320_30205965_5660699_n1ಚಿತ್ರ: ಎ ಆರ್ ಮಣಿಕಾಂತ್

ತ್ರಿವೇಣಿ. ಗೀತೆರಚನೆ: ಹಂಸಲೇಖ

ಸಂಗೀತ: ಉಪೇಂದ್ರಕುಮಾರ್. ಗಾಯನ: ಜಿ. ಬಾಲಕೃಷ್ಣ.

ಸಿರಿನಂದನಾ, ಏನ ಕೇಳಲಿ ನಾ

ಓ ದಯಾಳು, ಬರಿದು ಬಾಳು

ಕರುಣಿಸೋ ನಗುಜೀವನಾ, ಸಿರಿನಂದನಾ

ಜನನ ಮರಣಾ ಬಾಳಪಥದಿ ಹರಿಸಿ ಸಾಗುವೆ ವಿನಾ

ನೀನಾ ಭಗವಂತಾ

ಜಗಕುಪಕರಿಸಿ ನನಗಪಕರಿಸೋ

ಜಗದೋದ್ಧಾರಕ ನೀನೇನಾ, ನೀನೇನಾ ||ನೀನಾ||

ಗೋರ್ಕಲ್ಲಿಗೆ ಗುಡಿ ಮಂದಿರ ನೂರು

ಮಾಡಿದ ನರನಿಗೆ ನೆಲೆಯಿಲ್ಲ

ಹೂ ಸೌಗಂಧವ ಲೇಪಿಸಿ ಹಾಡಿ

ಕರೆದರು ಕರುಣಿಸೆ ಕೃಪೆಯಿಲ್ಲ ||ನೀನಾ||

ನಶ್ವರ ಭೋಗದ ಆಸೆ ಕಡಲಲಿ

ತೇಲಿಸಿ ಮುಳುಗಿಸಲೇಕಯ್ಯ

ಅಂತರ ತಿಳಿಯದೆ ಪಾಲಿಸುವವಗೆ

ದೈವೋತ್ತಮ ಬಿರುದೇಕಯ್ಯ ||ನೀನಾ||

ಕರುಣೆ ಮಮತೆ ತೋರಿ ನಿಜದಿ

ಕಲಕಿ ಕದಡುವೆ ಮನ

ಇರುವೆ ಎಲ್ಲಿ ಶೂನ್ಯ ಜಗದಿ

ಪ್ರಸರಿಸೋ ಶಾಂತಿ ತಾ… ಸಿರಿನಂದನಾ… ||ನೀನಾ||

2007072750820101

ಚಿತ್ರಸಾಹಿತಿಯಾಗುವ ಕನಸು ಕಂಡ ವ್ಯಕ್ತಿಗೆ, ಅದೇ ಮೊದಲಿಗೆ ಹಾಡು ಬರೆಯುವ ಅವಕಾಶ ಸಿಕ್ಕರೆ ಆತ ಏನು ಮಾಡ್ತಾನೆ ಹೇಳಿ? ಮೊದಲಿಗೆ, ಮನೆ ದೇವರಿಗೆ ನಮಿಸುತ್ತಾನೆ. `ದೇವ್ರೇ, ಒಳ್ಳೆಯದು ಮಾಡಪ್ಪಾ’ ಎಂದು ಪ್ರಾಥರ್ಿಸುತ್ತಾನೆ. ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸುತ್ತಾನೆ. ಕಾಣಿಕೆ ಹಾಕುತ್ತಾನೆ. ಇಷ್ಟೆಲ್ಲ ಆದ ಮೇಲೆ ಶ್ರದ್ಧಾಭಕ್ತಿಯಿಂದ ಬರೆಯಲು ಕೂರುತ್ತಾನೆ. ಹಾಳೆಯ ಮೇಲೆ- ಶ್ರೀ/ಶ್ರೀಮಾತಾ ಎಂದೋ; ರಾಘವೇಂದ್ರಾಯ ನಮಃ/ಮಂಜುನಾಥಾಯ ನಮಃ/ಶ್ರೀ ವೆಂಕಟೇಶ್ವರ ಪ್ರಸನ್ನ ಎಂದೋ ಬರೆದು ನಂತರವೇ ಮುಂದುವರಿಯುತ್ತಾನೆ. ಆದರೆ, ಇವತ್ತು ಕನ್ನಡದ ನಂಬರ್ ಒನ್ ಗೀತರಚನೆಕಾರ ಎನಿಸಿಕೊಂಡಿರುವ ಹಂಸಲೇಖ ಅವರು, ದೇವರನ್ನು ಬಯ್ಯುವ ಹಾಡಿನಿಂದಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಎಂದರೆ ನಂಬುತ್ತೀರಾ?

ನಂಬಲೇಬೇಕು. ಏಕೆಂದರೆ ಇದು ನಿಜ.

ಹಂಸಲೇಖ ಅವರ ಒರಿಜಿನಲ್ ಹೆಸರು ಜಿ. ಗಂಗರಾಜು. ಜಿ. ಫಾರ್ ಗೋವಿಂದರಾಜು. ಇದು ತಂದೆಯ ಹೆಸರು. ಗಂಗರಾಜು ಅವರಿಗೆ ಅವರ ಗುರುಗಳೊಬ್ಬರು ಹಂಸದಂಥ ವಿನ್ಯಾಸ ಹೊಂದಿದ್ದ ಪೆನ್ ಒಂದನ್ನು ಉಡುಗೊರೆಯಾಗಿ ನೀಡಿದರಂತೆ. ಅದನ್ನು ಅಮೂಲ್ಯ ವಸ್ತು ಎಂಬಂತೆ ಇಟ್ಟುಕೊಂಡಿದ್ದ ಗಂಗರಾಜು, ತುಂಬ ಮಹತ್ವದ್ದನ್ನು ಬರೆಯಬೇಕು ಅನ್ನಿಸಿದಾಗ ಅದೇ ಪೆನ್ ಬಳಸುತ್ತಿದ್ದರು. ಮುಂದೆ, ಚಿತ್ರಸಾಹಿತಿ ಆಗಬೇಕು ಅಂದುಕೊಂಡಾಗ, ಒರಿಜಿನಲ್ ಹೆಸರಿನ ಬದಲು ಒಂದು ಕಾವ್ಯನಾಮ ಇದ್ದರೆ ಚೆಂದ ಅಂದುಕೊಂಡರು ಗಂಗರಾಜು. ಆಗಲೇ, ಮೇಸ್ಟ್ರು ಉಡುಗೊರೆಯಾಗಿ ಕೊಟ್ಟಿದ್ದ ಪೆನ್ನು ಹಾಗೂ ಅದರಲ್ಲಿ ಬರೆಯುವಾಗ ಉಂಟಾಗುವ ಅವ್ಯಕ್ತ ಆನಂದ ನೆನಪಾಯಿತು. ತಕ್ಷಣವೇ `ಹಂಸಲೇಖ’ ಎಂಬುದನ್ನೇ ತಮ್ಮ ಕಾವ್ಯನಾಮ ಮಾಡಿಕೊಳ್ಳಲು ನಿರ್ಧರಿಸಿದರು ಗಂಗರಾಜು. ಮುಂದಿನದು ಇತಿಹಾಸ…

Hamsalekha_Photoಹಂಸಲೇಖ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ರವಿಚಂದ್ರನ್ ನಿದರ್ೇಶನದ `ಪ್ರೇಮಲೋಕ’ದ ಮೂಲಕ ಎಂದು ಈಗಲೂ ಹಲವರು ಭಾವಿಸಿದ್ದಾರೆ. ಆದರೆ ವಾಸ್ತವ ಏನೆಂದರೆ, ಹಂಸಲೇಖ ಚಿತ್ರರಂಗ ಪ್ರವೇಶಿಸಿದ್ದು ಎಪ್ಪತ್ತರ ದಶಕದಲ್ಲಿ ತೆರೆಕಂಡ `ತ್ರಿವೇಣಿ’ ಚಿತ್ರದ ಮೂಲಕ. ಇವತ್ತು ಈ ಅಂಕಣದಲ್ಲಿದೆಯಲ್ಲ? ಅದೇ ಹಂಸಲೇಖ ಬರೆದ ಮೊದಲ ಹಾಡು.

ಅದ್ಸರಿ, ಹಂಸಲೇಖ ಅವರಿಗೆ ದೇವರ ಮೇಲೆ ಯಾಕೆ ಸಿಟ್ಟು? `ನೀನಾ ಭಗವಂತಾ?’ ಎಂದು ಬರೆಯುವಾಗ ಅವರಿಗೆ ಹೆದರಿಕೆ ಆಗಲಿಲ್ವ? ಮೊದಲ ಸಿನಿಮಾದಲ್ಲೇ ಅವರು ದೇವರಿಗೇ ತಗುಲಿಕೊಂಡಿದ್ದಾದರೂ ಏಕೆ? ಈ ಹಾಡು ಬರೆದಾಗ ಹಂಸಲೇಖ ಅವರ ಪರಿಸ್ಥಿತಿ ಹೇಗಿತ್ತು? ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಅದೊಮ್ಮೆ ಹಂಸಲೇಖ ಹೀಗೆ ಉತ್ತರಿಸಿದ್ದರು:

ಇವತ್ತು ಎಲ್ಲಿ ಹೋದರೂ ಕೂಡ ಜನ ನನ್ನನ್ನು ಗುರುತಿಸ್ತಾರೆ. ಪ್ರೀತಿಸ್ತಾರೆ. ಆರಾಸ್ತಾರೆ. ಗೌರವಿಸ್ತಾರೆ. ಬಿಡಪ್ಪಾ, ಈಗ ಹಂಸಲೇಖ ಸ್ಟಾರ್ ಆಗಿದಾರೆ ಅಂತಾರೆ. ಎಲ್ಲವೂ ನಿಜ. ಆದರೆ, ನಾನು ಈ ಸ್ಥಿತಿಗೆ ರಾತ್ರೋರಾತ್ರಿ ಬಂದವನಲ್ಲ. ವಿಪರೀತ ಕಷ್ಟಪಟ್ಟಿದೀನಿ. ನನ್ನ ಪ್ರತಿಭೆಗೆ ತಕ್ಕ ಅವಕಾಶ ಸಿಗಲಿಲ್ಲವಲ್ಲ ಅಂಥ ತುಂಬಾ ಕೊರಗಿದ್ದೀನಿ. ಯಾರಿಗೂ ಕಾಣದಂತೆ ಕಣ್ಣೀರು ಹಾಕಿದ್ದೀನಿ…

… ನಾನು ನಮ್ಮ ತಂದೆತಾಯಿಗಳಿಗೆ ಹದಿನಾಲ್ಕನೇ ಮಗ. ನಮ್ಮದು `ಗೀತಾ ಪವರ್ ಪ್ರೆಸ್’ ಎಂದು ಒಂದು ಪ್ರೆಸ್ ಇತ್ತು. ನಾವೆಲ್ಲ ಕಂಪೋಸಿಂಗ್, ಪ್ರಿಂಟಿಂಗ್ ಮಾಡುತ್ತಿದ್ದರೂ ಸಂಗೀತ, ನಾಟಕದ ಗೀಳು ಅಂಟಿಸಿಕೊಂಡಿದ್ದೆವು. ನಾಟಕ ಬರೆಯುವುದು, ಅದಕ್ಕೆ ಸಂಗೀತ ನಿದರ್ೇಶನ ಮಾಡುವುದು, ನಾಟಕ ಆಡಿಸುವುದು, ಆಕರ್ೆಸ್ಟ್ರಾ ತಂಡ ಕಟ್ಟಿಕೊಂಡು ನಾಡಿನುದ್ದಕ್ಕೂ ಸಂಚರಿಸುವುದು… ಇದೇ ನನ್ನ ಪೂಣರ್ಾವ ಕಾಯಕವಾಗಿತ್ತು. ಈ ಸಂದರ್ಭದಲ್ಲಿಯೇ `ಲಂಕೇಶ್ ಪತ್ರಿಕೆ’ಯಲ್ಲಿ ನೌಕರಿಗಿದ್ದ ನನ್ನಣ್ಣ ಜಿ. ಬಾಲಕೃಷ್ಣ, ಅಕರ್ೆಸ್ಟ್ರಾದ ಹಾಡುಗಾರನಾಗಿ ತುಂಬಾ ಜನಪ್ರಿಯತೆ ಗಳಿಸಿದ್ದರು. ನಮ್ಮ ನಾಟಕಗಳ ಬಗ್ಗೆ, ಆಕರ್ೆಸ್ಟ್ರಾದ ಬಗ್ಗೆ, ನಮ್ಮ ಕಮಿಟ್ಮೆಂಟ್ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನೇ ಹೇಳ್ತಿದ್ರು. ಆದರೆ ಕಲೆಕ್ಷನ್ ಮಾತ್ರ ಇರ್ತಿರಲಿಲ್ಲ. ಪರಿಣಾಮ, ನಾಟಕ ಆಡಿದ ನಂತರ ಉಪವಾಸ ಮಲಗಿದ ದಿನಗಳಿಗೆ ಲೆಕ್ಕವಿಲ್ಲ…

… ಈ ಸಂಕಟದ ದಿನಗಳಲ್ಲಿ ಉಳಿದೆಲ್ಲರಂತೆಯೇ ನಾನೂ ಸಹ ದೇವರಲ್ಲಿ ಬೇಡುತ್ತಿದ್ದೆ. ನನ್ನ ಸಂಕಟಗಳನ್ನೆಲ್ಲ ಪರಿಹರಿಸು ಭಗವಂತಾ ಎಂದು ಹರಕೆ ಕಟ್ಟಿಕೊಂಡಿದ್ದೆ. ಒಂದೆರಡು ಸಂದರ್ಭದಲ್ಲಿ ಉಪವಾಸ ಮಾಡಿದ್ದೆ. ಆದರೆ, ಯಶಸ್ಸೆಂಬುದು ಕೈ ಹಿಡಿಯಲೇ ಇಲ್ಲ. ಇಂಥ ಸಂದರ್ಭದಲ್ಲಿ ಸಹಜವಾಗಿಯೇ ದೇವರ ಮೇಲೆ ಸಿಟ್ಟು ಬಂತು. ಹೀಗಿದ್ದಾಗಲೇ ಎಂ.ಎನ್. ಪ್ರಸಾದ್ ನಿದರ್ೇಶನದ `ತ್ರಿವೇಣಿ’ ಚಿತ್ರಕ್ಕೆ ಹಾಡು ಬರೆಯಲು ಕರೆ ಬಂತು. ಆ ಚಿತ್ರಕ್ಕೆ ಉದಯಕುಮಾರ್-ಕಲ್ಪನಾ ತಾರಾಗಣವಿತ್ತು. ಕುಂದಾನಿ ಸತ್ಯನ್, ನಾಡಿಗೇರ ಕೃಷ್ಣರಾಯರು ಹಾಗೂ ಡಾ. ಎಸ್. ಲಲಿತಾ ಸಂಭಾಷಣೆ ಬರೆಯುತ್ತಿದ್ದರು. ಸಂಗೀತ ನಿದರ್ೇಶನದ ಹೊಣೆಯನ್ನು ಉಪೇಂದ್ರಕುಮಾರ್ ಹೊತ್ತಿದ್ದರು. `ತ್ರಿವೇಣಿ’ ಚಿತ್ರದ ನಿಮರ್ಾಪಕ ರಾಜ್ಗೋಪಾಲ್, ನನ್ನ ತಂಡ ಪ್ರದಶರ್ಿಸಿದ ಹಲವು ನಾಟಕಗಳನ್ನು ನೋಡಿದ್ದರು. ಸಂಭಾಷಣೆ ಮತ್ತು ಹಾಡುಗಳಲ್ಲಿ ನಾವು ಡೋಂಟ್ಕೇರ್ ಎಂಬಂಥ ಭಾಷೆ ಬಳಸುತ್ತಿದ್ವಿ. ಅದು ರಾಜಗೋಪಾಲ್ರನ್ನು ತುಂಬಾ ಇಂಪ್ರೆಸ್ ಮಾಡಿತ್ತು. ಅವರು ಸೀದಾ ನನ್ನ ಬಳಿ ಬಂದು- `ನಮ್ಮ ಹೊಸ ಸಿನಿಮಾದ ನಾಯಕ ದೈವಭಕ್ತ ಆಗಿರ್ತಾನೆ. ಆದರೂ ಅವನಿಗೆ ಹತ್ತಾರು ಕಷ್ಟಗಳು ಕೈಹಿಡೀತವೆ. ಪರಿಣಾಮ, ಅವನಿಗೆ ದೇವರ ಮೇಲೆ ನಂಬಿಕೇನೇ ಹೋಗಿಬಿಡುತ್ತೆ. ನಾನು ಇಷ್ಟೆಲ್ಲ ಕಷ್ಟಪಡ್ತಾ ಇದ್ರೂ ನಿನಗೆ ಕರುಣೇನೇ ಬರಲಿಲ್ವಲ್ಲ? ನೀನೇನಾ ದೇವರು ಎಂದು ಸಿಡಿಮಿಡಿಯಿಂದ ಕೇಳ್ತಾನೆ. ಈ ಸಂದರ್ಭಕ್ಕೆ ಒಂದು ಹಾಡು ಬೇಕು ಬರೀತೀಯಾ?’ ಅಂದ್ರು.

ನಿಜ ಹೇಳಬೇಕೆಂದರೆ ಆಗ-`ತ್ರಿವೇಣಿ’ ಚಿತ್ರದ ನಾಯಕನ ಪರಿಸ್ಥಿತಿಯಲ್ಲೇ ನಾನಿದ್ದೆ. ಹಾಡು ಬರೆಯಲು ತಕ್ಷಣ ಒಪ್ಪಿಕೊಂಡೆ. ಸಂಗೀತ ನಿದರ್ೇಶಕ ಉಪೇಂದ್ರಕುಮಾರ್ ಬಳಿ ಬಂದಾಗ ಅವರು- `ನೀವು ಮೊದಲು ಹಾಡು ಬರೀತೀರೋ ಅಥವಾ ಟ್ಯೂನ್ ಕೇಳಿಸಿಕೊಳ್ತೀರೋ’ ಅಂದರು. `ನಾನು ಎರಡಕ್ಕೂ ರೆಡಿ ಸಾರ್’ ಅಂದೆ. `ಹೌದಾ? ಹಾಗಾದ್ರೆ ಹಾಡು ಬರೀರಿ’ ಅಂದ್ರು ಉಪೇಂದ್ರಕುಮಾರ್. ತಕ್ಷಣ ನಾನು- `ಸಾರ್, ಹಾರ್ಮೋನಿಯಂ ಕೊಡಿ ಅಂದೆ’. ಈ ಮಾತು ಕೇಳಿ ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯವಾಯಿತು. ಯಾಕೆಂದರೆ, ಚಿತ್ರಸಾಹಿತಿ ಅನ್ನಿಸಿಕೊಂಡವನು, ಅದೂ ಏನು? ಅದೇ ಮೊದಲ ಬಾರಿ ಹಾಡು ಬರೆಯಲು ಹೊರಟವನು ಸಂಗೀತದ ಬಗ್ಗೇನೂ ತಿಳ್ಕೊಂಡಿದಾನೆ ಎನ್ನೋದೇ ಆ ಬೆರಗಿಗೆ ಕಾರಣವಾಗಿತ್ತು.

ಹಾರ್ಮೋನಿಯಂ ತೆಗೆದುಕೊಂಡವನೇ ಒಂದೆರಡು ನಿಮಿಷ ನನಗೆ ಹೊಳೆದ ರಾಗಗಳನ್ನು ನುಡಿಸಿದೆ. ನಂತರ, ನನ್ನ ಬೇಸರ, ಹತಾಶೆ, ಆಗಿದ್ದಾಗ್ಗೆ ಕೈಹಿಡಿಯುತ್ತಿದ್ದ ಸಂಕಟ, ಕರುಣೆ ತೋರದ ದೇವರು… ಹೀಗೆ ಎಲ್ಲವನ್ನೂ ನೆನಪು ಮಾಡಿಕೊಂಡೆ. ಜಗತ್ತಿಗೇ ಒಳ್ಳೇದು ಮಾಡುವ ದೇವರು ನನಗೆ ಯಾಕೆ ಒಳ್ಳೇದು ಮಾಡಲಿಲ್ಲ ಅನ್ನಿಸ್ತು. ಹಿಂದೆಯೇ, ನನ್ನ ಕಥೆ ಹಾಗಿರಲಿ, ದೇವರಿಗೆ ಗುಡಿ ಕಟ್ಟುವ ಮನುಷ್ಯರಿಗೂ ನೆಲೆ ಇರೋದಿಲ್ಲವಲ್ಲ ಅನ್ನಿಸಿಬಿಡ್ತು. ಇದನ್ನೆಲ್ಲ ಸೇರಿಸಿ, ಹಾಡಲ್ಲಿ ದೇವರನ್ನು ಕೆಣಕಬೇಕು ಅನ್ನಿಸ್ತು. ತಕ್ಷಣವೇ- `ನೀನಾ ಭಗವಂತಾ…’ ಎಂದು ಬರೆದೆ. ಪೂತರ್ಾ ಹಾಡು ಬರೆದು ಉಪೇಂದ್ರಕುಮಾರ್ಗೆ ಕೊಟ್ಟಾಗ, ದೇವರ ಮೇಲೆ ಸಿಟ್ಟಿಗೆದ್ದ ಮನುಷ್ಯ ಅವನನ್ನು ಹಂಗಿಸದೆ ಬಿಡಲಾರ ಅನ್ನಿಸ್ತು. ಅದನ್ನೇ ಉಪೇಂದ್ರಕುಮಾರ್ ಅವರಿಗೆ ಹೇಳಿ, ಪಲ್ಲವಿ ಮುಗಿದ ತಕ್ಷಣ, `ನೀನೇನಾ, ನೀನೇನಾ ಭಗವಂತಾ?’ ಎಂದು ಅಣಕಿಸುವಂತೆ ಹಾಕಿಕೊಳ್ಳಿ ಸಾರ್’ ಅಂದೆ. ಅವರು ಹಾಗೇ ಮಾಡಿದ್ರು.

ಮುಂದೆ, ಎರಡನೇ ಚರಣದಲ್ಲಿ ಉಪೇಂದ್ರಕುಮಾರ್ ಪಾಶ್ಚಾತ್ಯ ಸಂಗೀತದ ರಾಗ ಬಳಸಿದ್ರು, ತಕ್ಷಣವೇ ಅದನ್ನು ಗುರುತಿಸಿದೆ. ಅವರು ಬೆರಗಾಗಿ- `ನಿಂಗೆ ಪಾಶ್ಚಾತ್ಯ ಸಂಗೀತವೂ ಗೊತ್ತಾ?’ ಎಂದರು. `ಹೌದು ಸಾರ್’ ಅಂದೆ. ಈ ಮಾತಿಂದ ಅವರಿಗೆ ನನ್ನ ಮೇಲೆ ವಿಶ್ವಾಸ ಹೆಚ್ಚಿತು. ನಂತರ ಇಬ್ಬರೂ ಚಚರ್ಿಸುತ್ತಾ ಹಾಡು ಮುಗಿಸಿದ್ವಿ.

ಈ ಹಾಡನ್ನು ತಾರಕಕ್ಕೆ ಹೋಗಿ ಹಾಡಬೇಕಿತ್ತು. ಯಾರಿಂದ ಹಾಡಿಸುವುದು ಎಂದಾಗ ಎಲ್ಲರೂ `ಘಂಟಸಾಲ’ ಅವರ ಹೆಸರು ಸೂಚಿಸಿದ್ರು. ಆದ್ರೆ ಈ ಹಾಡನ್ನು- ಮನೇಲಿದ್ದ ನಮ್ಮಣ್ಣನೇ ಅದ್ಭುತವಾಗಿ ಹಾಡ್ತಾನೆ ಅನ್ನಿಸ್ತು. ಅದನ್ನೇ ಉಪೇಂದ್ರಕುಮಾರ್ ಅವರಿಗೆ ಹೇಳಿದೆ. ಅಣ್ಣನಿಗೆ ದುಂಬಾಲು ಬಿದ್ದು ಅವನನ್ನೇ ಕಕರ್ೊಂಡು ಹೋಗಿ ಹಾಡಿಸ್ದೆ. ಅದ್ಭುತವಾಗಿ ಹಾಡಿದ.ಹಾಡು, ಸೂಪರ್ ಹಿಟ್ ಆಯ್ತು. ದೇವರನ್ನು ಬಯ್ದು ಬರೆದ್ರೆ ಬೇಗ ಫೇಮಸ್ ಆಗಬಹುದು ಎಂಬ ಸರಳ ಸತ್ಯ ಕೂಡ ನನಗೆ ಅರ್ಥವಾಯ್ತು. ನಮ್ಮ ಅಣ್ಣನಿಗೆ ವರ್ಷದ ಗಾಯಕ ಪ್ರಶಸ್ತಿ ಬಂತು. ಆದ್ರೆ ಸಿನಿಮಾ ಡುಮ್ಕಿ ಹೊಡೀತು…’

* * *

ಮುಂದೊಂದು ದಿನ ಇದೇ ಹಂಸಲೇಖ ಕನ್ನಡದ ನಂಬರ್ಒನ್ ಗೀತರಚನೆಕಾರ ಅನ್ನಿಸಿಕೊಂಡರು. ಖ್ಯಾತಿಯ ಗೌರಿಶಂಕರವನ್ನೇರಿದರು. ಆಗ ಹಿರಿಯ ಪತ್ರಕರ್ತ ಎ.ಎಸ್. ಮೂತರ್ಿಯವರು ಅದೂ ಇದೂ ಹರಟುತ್ತ- ಹಿಂದೆ ಕಷ್ಟದಲ್ಲಿದ್ದಾಗ `ನೀನಾ ಭಗವಂತಾ?’ ಎಂದು ಬರೆದಿದ್ರಿ, ಈ ಖುಷಿಯ ಕ್ಷಣದಲ್ಲಿ ಕೇಳಿದ್ರೆ ಏನೆಂದು ಬರೀತಿದ್ರಿ? ಎಂದು ಕೇಳಿದರಂತೆ. ಅದಕ್ಕೆ ಹಂಸಲೇಖ ಜೋರಾಗಿ ನಕ್ಕು ಹೀಗೆಂದರು: ಈ ಸಂದರ್ಭದಲ್ಲಾದರೆ – ನೀನೇ ಭಗವಂತಾ ಎಂದು ಬರೆದು ಅವನ ಮಹಿಮೇನ ಹೊಗಳಿಬಿಡ್ತಿದ್ದೆ…

‍ಲೇಖಕರು avadhi

September 13, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

3 ಪ್ರತಿಕ್ರಿಯೆಗಳು

 1. Berlinder

  ನನಗಪಕರಿಸೋ – ಗೀತೆಯಲ್ಲಿ ಆ ಮಾತಿನ ಭಾವಾರ್ಥವೇನು?
  ಅಪಕಾರ = ಅಹಿತ, ಕೇಡು, ಕೆಡುಕು, ಕೆಟ್ಟದ್ದು, ಮೊದಲಾದ ಅನರ್ಥಗಳುಂಟು.
  “ಬಾಳಿನಲ್ಲಿ ನನಗೆ ಕೆಡುಕು ಮಾಡು” ಎಂದು ದೇವರನ್ನು ಪ್ರಾರ್ಥಿಸುವರಾರು?
  ವಿಶೀ.

  ಪ್ರತಿಕ್ರಿಯೆ
  • Pradeep Bellave

   Hello Berlinder, here is a brief reply. Full song goes like “Jagakupakarisi Nanagapakariso Jagadoddharaka Neenena..” So the protagonist here is questioning the God and not inviting keduku for himself!

   ಪ್ರತಿಕ್ರಿಯೆ
 2. sritri

  ಮಣಿಯವರೆ, ಈ ಹಾಡನ್ನು ಹಂಸ್ ಮತ್ತು ಗೀತಪ್ರಿಯ ಇಬ್ರೂ ಸೇರಿ ಬರೆದಿದಾರೆ ಅಂತ ಎಲ್ಲೋ ಓದಿದ್ದೆ. ನಿಜವಲ್ವಾ ಅದು ಹಾಗಾದ್ರೆ?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: