ಮಣಿಕಾಂತ್ ಬರೆದಿದ್ದಾರೆ: ಬಂಗಾರದ ಮನುಷ್ಯ

ಎ ಆರ್ ಮಣಿಕಾಂತ್
ನಗುನಗುತಾ ನಲೀ ನಲೀ…
ಚಿತ್ರ: ಬಂಗಾರದ ಮನುಷ್ಯ.  ಗೀತೆರಚನೆ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಜಿ.ಕೆ. ವೆಂಕಟೇಶ್  ಗಾಯನ: ಪಿ.ಬಿ. ಶ್ರೀನಿವಾಸ್
ನಗುನಗುತಾ ನಲೀ ನಲೀ ಏನೇ ಆಗಲಿ
ಎಲ್ಲಾ ದೇವನಾ ಕಲೆಯೆಂದೇ ನೀ ತಿಳಿ
ಅದರಿಂದಾ ನೀ ಕಲೀ, ನಗುನಗುತಾ ನಲೀ ನಲೀ ಏನೇ ಆಗಲಿ ||ಪ||
ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲೂ ರಸದೌತಣ
ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ, ಹೂಗಳು ಬಿರಿದಾಗ  ||ಅ.ಪ||
ತಾಯಿ ಒಡಲಿನ ಕುಡಿಯಾಗಿ ಜೀವನ
ಮೂಡಿ ಬಂದು ಚೇತನ, ತಾಳಲೆಂದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳೆದಾಗ  ||1||
ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಮುಂದೆ ಯೌವನ ಮದುವೆ ಬಂಧನಾ
ಎಲ್ಲೆಲ್ಲೂ ಹೊಸ ಜೀವನ, ಅಹ ಎಲ್ಲೆಲ್ಲೂ ಹೊಸ ಜೀವನ
ಜತೆಯದು ದೊರೆತಾಗ, ಮೈಮನ ಮರೆತಾಗ  ||2||
ಏರು ಪೇರಿನ ಗತಿಯಲ್ಲಿ ಜೀವನ
ಸಾಗಿಮಾಗಿ ಹಿರಿತನ, ತಂದಿತಯ್ಯ ಮುದಿತನ
ಅದರೊಳು ಹೊಸದಾದ ರುಚಿ ಇದೆ ಸವಿ ನೋಡ  ||3||

ಕನ್ನಡ ಚಿತ್ರರಂಗದ `ದೆಸೆ’ಯನ್ನು ತಿರುಗಿಸಿದ ಚಿತ್ರ `ಬಂಗಾರದ ಮನುಷ್ಯ’. ಟಿ.ಕೆ. ರಾಮರಾವ್ ಅವರ ಮಿನಿ ಕಾದಂಬರಿ ಆಧರಿಸಿದ ಈ ಚಿತ್ರ  ನಿದರ್ೇಶಿಸಿದವರು ಸಿದ್ದಲಿಂಗಯ್ಯ. ಒಂದೇ ಚಿತ್ರಮಂದಿರದಲ್ಲಿ ಸತತ ಎರಡು ವರ್ಷ ಕಾಲ ಓಡಿದ್ದು `ಬಂಗಾರದ ಮನುಷ್ಯ’ದ ದಾಖಲೆ. ಐದಾರು ವರ್ಷಗಳ ನಂತರ ಎರಡನೇ ಬಾರಿಗೆ ಬಿಡುಗಡೆ ಮಾಡಿದರೆ, ಆಗಲೂ ಹೌಸ್ಫುಲ್ ಪ್ರದರ್ಶನದಲ್ಲಿ ನೂರು ದಿನ ಓಡಿದ್ದು; ತೊಂಬತ್ತರ ದಶಕದಲ್ಲಿ ಮೂರನೇ ಬಾರಿಗೆ ಬಿಡುಗಡೆ ಮಾಡಿದರೆ ಆಗ ಮತ್ತೊಮ್ಮೆ ನೂರು ದಿನಗಳ ಪ್ರದರ್ಶನ ಕಂಡದ್ದು `ಬಂಗಾರದ ಮನುಷ್ಯ’ ಚಿತ್ರದ ಹೆಚ್ಚುಗಾರಿಕೆ.
`ಬಂಗಾರದ ಮನುಷ್ಯ’ ಚಿತ್ರದ ಒಟ್ಟು ಗೀತೆಗಳ  ಪೈಕಿ ಒಂದು ಕೈಮೇಲು ಎಂಬಂತಿರುವುದು `ನಗುನಗುತಾ ನಲೀ ನಲೀ…’ ಹಾಡು. ಈ ಗೀತೆಯ ಹಿಂದಿದ್ದವರು ಹುಣಸೂರು ಕೃಷ್ಣಮೂತರ್ಿ ಯವರು. `ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು…’ ಹಾಡಿನ ಹಿಂದಿದ್ದವರೂ ಇವರೇ. ಉಳಿದ ಹಾಡುಗಳ ಹಿಂದೆ ಚಿ. ಉದಯಶಂಕರ್ ಹಾಗೂ ಆರ್. ಎನ್.ಜೆ. ಇದ್ದರು. ಅಂದ ಹಾಗೆ, ನಗುನಗುತಾ ನಲೀ ನಲೀ.. ಗೀತೆ ಸೃಷ್ಟಿಯಾದ ಸಂದರ್ಭವನ್ನು ವಿವರಿಸಿದ್ದು ನಿದರ್ೇಶಕ ಭಾರ್ಗವ. `ಬಂಗಾರದ ಮನುಷ್ಯ’ಕ್ಕೆ ಸಹ ನಿದರ್ೇಶಕರಾಗಿದ್ದ ಭಾರ್ಗವ, ಹುಣಸೂರು ಕೃಷ್ಣಮೂತರ್ಿಯವರ ತಮ್ಮನ ಮಗ.  ಹಾಡು ಹುಟ್ಟಿದ ಕ್ಷಣದ ಕಥೆಯನ್ನು ಭಾರ್ಗವ ಅವರಿಂದಲೇ ಕೇಳೋಣ, ಬನ್ನಿ…
***
`ಬಂಗಾರದ ಮನುಷ್ಯ’ದ ಕಥೆ ಸಿದ್ದಲಿಂಗಯ್ಯ ಅವರಿಗೆ ತುಂಬಾ ಹಿಡಿಸಿತ್ತು. ಆ ಚಿತ್ರದ ದೃಶ್ಯೀಕರಣದ ಬಗ್ಗೆ ಅವರಿಗೆ ನೂರೆಂಟು ಕನಸುಗಳಿದ್ದವು, ಆಸೆಗಳಿದ್ದವು. ಒಂದೊಂದು ದೃಶ್ಯ ಹೀಗ್ ಹೀಗೇ ಬರಬೇಕು ಎಂದು ಅವರಿಗೊಂದು ಅಂದಾಜಿತ್ತು. ಚಿತ್ರತಂಡ ದವರೊಂದಿಗೆ; ಗೀತೆ ರಚನೆಕಾರರೊಂದಿಗೆ ಅದನ್ನು ಮುಕ್ತವಾಗಿ ಹೇಳಿಕೊಂಡಿದ್ದರು. ಈ ಚಿತ್ರದಲ್ಲಿ ನಾಯಕನ ಪ್ರವೇಶ ಮೊದಲ ದೃಶ್ಯದಲ್ಲೇ ಆಗುತ್ತದೆ. ಅವನು ಪಟ್ಟಣದಿಂದ ರೈಲಿನಲ್ಲಿ ಬಂದು ತನ್ನ ಊರಿನ ನಿಲ್ದಾಣದಲ್ಲಿ ಇಳಿಯುತ್ತಾನೆ. ನಿಲ್ದಾಣದಿಂದ ಊರಿಗೆ ಬರುವ ಹಾದಿಯಲ್ಲಿ ಕಥಾನಾಯಕ ಸಂಭ್ರಮದಿಂದ ಹಾಡಿಕೊಂಡು, ಕುಣಿದಾಡಿಕೊಂಡು ಬರುವಂತೆ ಚಿತ್ರೀಕರಣ ನಡೆಸೋಣ. ವರ್ಷಗಳ ಕಾಲ ಪಟ್ಟಣದಲ್ಲಿದ್ದು ನಂತರ ಹುಟ್ಟೂರಿಗೆ  ಬರುವ  ಪ್ರತಿಯೊಬ್ಬ ರಿಗೂ, ಊರಿನ ಬದಲಾದ ಸನ್ನಿವೇಶ ಹಾಗೂ ಆ ಮಣ್ಣಿನ ಆತ್ಮೀಯ ಸೆಳೆತ ಕಂಡು ತುಂಬಾ ಖುಷಿಯಾಗುತ್ತೆ. ಈ ಸಂದರ್ಭವನ್ನು ಡೈಲಾಗ್ಗಳಲ್ಲಿ ವಿವರಿಸುವುದಕ್ಕಿಂತ ಒಂದು ಹಾಡಾಗಿಸಿ ಹೇಳೋಣ ಅಂದರು ಸಿದ್ದಲಿಂಗಯ್ಯ.
ಅವರ ಮಾತಿಗೆ ಎಲ್ಲರ ಸಹಮತವಿತ್ತು ನಿಜ. ಆದರೆ ಅಲ್ಲಿ ಒಂದು ತೊಡಕೂ ಇತ್ತಿ. ಏನೆಂದರೆ -ಹೆಚ್ಚಿನ ಸಂದರ್ಭಗಳಲ್ಲಿ ಸಿನಿಮಾ ಪ್ರಾರಂಭವಾಗುವುದೇ ಟೈಟಲ್ ಮ್ಯೂಸಿಕ್ನಿಂದ. ಇದು ಮೂರ್ನಾಲ್ಕು ನಿಮಿಷ ಇರುತ್ತದೆ. ಈ ಸಂದರ್ಭದಲ್ಲಿ ಸಿನಿಮಾದ ಹೆಸರು, ನಟ-ನಟಿ, ಕಲಾವಿದರು, ತಾಂತ್ರಿಕ ವರ್ಗದವರು… ಹೀಗೆ ಚಿತ್ರಕ್ಕಾಗಿ ದುಡಿದ ಸಕಲೆಂಟು ಮಂದಿಯ ಹೆಸರುಗಳನ್ನೂ ತೋರಿಸಲಾಗುತ್ತದೆ. ಕಡೆಯದಾಗಿ ನಿದರ್ೇಶಕನ ಹೆಸರು ಕಾಣಿಸಿಕೊಳ್ಳುವುದರೊಂದಿಗೆ ಟೈಟಲ್ ಮ್ಯೂಸಿಕ್ ಮುಗಿಯುತ್ತದೆ. ನಂತರದ ಕ್ಷಣದಲ್ಲಿಯೇ ಸಿನಿಮಾದ ಮೊದಲ ದೃಶ್ಯ ಶುರುವಾ ಗುತ್ತದೆ.
ಹೆಚ್ಚಿನ ಸಂದರ್ಭದಲ್ಲಿ  ಟೈಟಲ್ ಮ್ಯೂಸಿಕ್ನ ಹಿಂದೆಯೇ ಹಾಡು ಬಂದರೆ ಜನರಿಗೆ ಅದು ಹಿಡಿಸುವುದಿಲ್ಲ.  ಹಾಗೆಂದೇ, ಮೊದಲ ದೃಶ್ಯದಲ್ಲೇ ಹಾಡು ಹಾಕಲು ನಿದರ್ೇಶಕರೂ ಯೋಚಿಸು ವುದಿಲ್ಲ. ಆದರೆ, ಹಾಡಿನ ಮೂಲಕವೇ `ಬಂಗಾರದ ಮನುಷ್ಯ’ದ ಕಥೆ ಆರಂಭವಾಗಬೇಕೆಂದು ಸಿದ್ದಲಿಂಗಯ್ಯ ತೀಮರ್ಾನಿಸಿದ್ದರು. `ಒಂದು ಬಾರಿ ರಿಸ್ಕ್ ತಗೊಳ್ಳೋಣ’ ಎಂದಿದ್ದರು. ಮುಂದುವರಿದು- ಈ ಹಾಡಿನಲ್ಲಿ `ಪರಿಸರ, ಪ್ರಕೃತಿ, ತಾಯಿಯ ಮಮತೆ, ಮಾನವ ಬದುಕಿನ ಸೃಷ್ಟಿಚಕ್ರ, ಬಾಲ್ಯ, ಯೌವನ, ಬೆಳವಣಿಗೆಯ ಪರಿ, ಸಂಸಾರದ ನೋವು- ನಲಿವು, ಜೀವ ನಾನುಭವ, ಏರು ಪೇರಿನ ಜೀವನ… ಹೀಗೆ ಸೃಷ್ಟಿಯೇ ಮೇಳೈಸಿದ ರೀತಿ ಯಲ್ಲಿ ಹಾಡು ಇರ ಬೇಕೆಂದು ನನ್ನಾಸೆ ಎಂದವರೇ, ಹುಣ ಸೂರು ಕೃಷ್ಣಮೂತರ್ಿ ಯವರತ್ತ ತಿರುಗಿ – `ಸಾರ್, ಈ ಸಂದ ರ್ಭಕ್ಕೆ ನೀವು ಹಾಡು ಬರೆಯಬೇಕು’ ಎಂದರು.
`ಸರಿ’ ಎಂದು ಒಪ್ಪಿಕೊಂಡ ಹುಣಸೂರು ಕೃಷ್ಣಮೂತರ್ಿಯವರು ಮದ್ರಾಸಿನ ತಮ್ಮ ಮನೆಯಲ್ಲಿ ಕುಳಿತು ಇಡೀ ಸಂದರ್ಭವನ್ನು ಆವಾಹಿಸಿಕೊಂಡರು. ಒಂದು ಹಾಡಿನಲ್ಲಿ ಇಡೀ ಬದುಕಿನ ಕಥೆ ಇರಬೇಕು ಎಂದರೆ, ಪ್ರಾಸದ ಹಂಗಿಗೆ ಬೀಳದೆ ಅದನ್ನು ಭಿನ್ನವಾಗಿ ಬರೆಯಬೇಕು ಎಂದುಕೊಂಡರು. ನಂತರ ತಮ್ಮ ಅಚ್ಚುಮೆಚ್ಚಿನ 555 ಸಿಗರೇಟು ಸೇದುತ್ತಾ ಸೇದುತ್ತಾ ಪಲ್ಲವಿ ಬರೆದೇಬಿಟ್ಟರು.
ಆ ಚಿತ್ರದಲ್ಲಿ ನಾಯಕ, ಪದವಿ ಮುಗಿಸಿರುತ್ತಾನೆ. ಸರಕಾರಿ ನೌಕರಿಯ ಹಂಗಿಗೆ ಬೀಳದೆ ಊರಲ್ಲಿಯೇ  ಸ್ವತಂತ್ರವಾಗಿ ಬದುಕ ಬೇಕು. ಯಾವ ಸಂದರ್ಭದಲ್ಲೂ ಹಿಂಜರಿಯಬಾರದು ಎಂಬುದೇ ಅವನ ನಿಲುವಾಗಿರುತ್ತದೆ. ಇದನ್ನೇ ಮನದಲ್ಲಿಟ್ಟುಕೊಂಡು `ನಗುನಗುತಾ ನಲೀ ನಲೀ, ಏನೇ ಆಗಲಿ’ ಎಂದು ಬರೆದಿದ್ದರು ಹುಣಸೂರು. ಒಳಿತು ಕೆಡುಕು ಯಾವುದೇ ಆದರೂ `ಎಲ್ಲವೂ ದೇವರ  ಲೀಲೆ. ದೇವ್ರು ನಮ್ಮನ್ನ ಪರೀಕ್ಷೆ ಮಾಡ್ತಾ ಇದಾನೆ ಎಂದು ಹಳ್ಳಿಯ ಜನ ಹೇಳ್ತಾ ಇರ್ತಾರೆ ಎಂಬುದನ್ನು ನೆನಪು ಮಾಡಿಕೊಂಡು ಪಲ್ಲವಿಯ ಎರಡನೇ ಸಾಲಿನಲ್ಲಿ `ಎಲ್ಲಾ ದೇವರ ಕಲೆಯೆಂದೇ ನೀ ತಿಳಿ, ಅದರಿಂದಾ ನೀ ಕಲೀ…’ ಎಂದು ಬರೆದರು.
ಹೀಗೆ ಯಾವುದೋ ಲಹರಿಗೆ ಬಿದ್ದವರಂತೆ ಹಾಡು ಬರೀತಿದ್ದರಲ್ಲ? ಆಗ ಒಂದು ತಮಾಷೆ ನಡೆಯಿತು. ಜೀವನದ ಒಂದೊಂದೇ ಹಂತವನ್ನು ಹಾಡಾಗಿಸಿದಾಗ ಮೊದಲ ಚರಣದ ಧಾಟಿಯಲ್ಲಿ ಎರಡನೆಯದು ಬರಲಿಲ್ಲ. ಎರಡನೇ ಚರಣದಂತೆ ಮೂರನೆಯದು ಇರಲಿಲ್ಲ. ಆದರೆ, ಕಡೆಯ ಚರಣಕ್ಕೂ ಮೊದಲ ಚರಣಕ್ಕೂ ಪದಗಳ ಜೋಡಣೆಯಲ್ಲಿ ಸಾಮ್ಯ ಬಂತು. ಈ ಹೊಸ ಪ್ರಯೋಗದ ಬಗ್ಗೆ ಹುಣಸೂರು ಅವರು ಸಂಕೋಚದಿಂದಲೇ ಡಾ. ರಾಜ್ ಅವರ ಸೋದರ ವರದಪ್ಪ ಹಾಗೂ ಚಿ. ಉದಯಶಂಕರ್ ಅವರಲ್ಲಿ ಹೇಳಿಕೊಂಡರು. ಅವರು- `ಈ ಹೊಸ ಪ್ರಯೋಗ ತುಂಬಾ ಚನ್ನಾಗಿದೆ. ಮುಂದುವರಿಸಿ ಸಾರ್’ ಎಂದರು. ಆನಂತರದಲ್ಲಿ ಈ ಮೂವರೂ ಚಚರ್ಿಸುತ್ತಾ ಹೋದಂತೆಲ್ಲ ಹಾಡು ್ಠಟಛಚಠಿಛಿ ಆಗುತ್ತಾ ಹೋಯಿತು. ಕಡೆಗೊಮ್ಮೆ ಹಾಡಿಗೆ ಫೈನಲ್ ಟಚ್ನೀಡಿ, ಅದನ್ನು ಸಂಗೀತ ನಿದರ್ೇಶಕ ಜಿ.ಕೆ. ವೆಂಕಟೇಶ್ ಅವರಿಗೆ ನೀಡಿದಾಗ ಅವರು `ಸಾಹಿತ್ಯ ತುಂಬಾ ಚನ್ನಾಗಿದೆ. ಹೀಗೇ ಇರಲಿ. ಸಾಮಾನ್ಯವಾಗಿ ಎಲ್ಲ ಚಿತ್ರಗಳಲ್ಲೂ ಎಲ್ಲ ಚರಣಗಳಿಗೂ ಒಂದೇ ಟ್ಯೂನ್ ಇರುತ್ತೆ, ಇಲ್ಲಿ ಆ ನಿಯಮ ಮುರಿಯೋಣ. ಒಂದೊಂದು ಚರಣಕ್ಕೆ ಒಂದೊಂದು ಟ್ಯೂನ್ ಹಾಕ್ತೇನೆ’ ಅಂದರು. ಹಾಗೇ ಮಾಡಿದರು.
ಈ ಹಾಡಿನ ಚಿತ್ರೀಕರಣ ನಡೆದದ್ದು ಚಿಕ್ಕಮಗಳೂರಿಗೆ ಸಮೀಪದ ಕಳಸಾಪುರದಲ್ಲಿ ಎರಡನೇ ಚರಣ: `ತಾಯಿ ಮಡಿಲಿನ ಕುಡಿಯಾಗಿ ಜೀವನ…’ ಎಂದು ಶುರುವಾಗುತ್ತದಲ್ಲ? ಆಗ ಶೂಟಿಂಗ್ ನಡೆವ ಸ್ಥಳದಲ್ಲಿ ಜಲ್ಲಿಕಲ್ಲು ಒಡೆಯುವ ಕಾಮರ್ಿಕರೂ ಇದ್ದರು. ಚಿತ್ರೀಕರಣ ನಡೆಯುತ್ತಿದ್ದಾಗಲೇ ಒಂದು ಮಗು, ಹಸಿವಿಂದ ಕಂಗಾಲಾಗಿ ದುಡುದುಡನೆ ಅಮ್ಮನ ಕಡೆಗೆ ಓಡಿಬಂತು. ಆ ಮಗುವಿನ ತಾಯಿ, ತನ್ನ ಆಯಾಸ ಮರೆತು ಸರಸರನೆ ಬಂದು ಮಗು ಎತ್ತಿಕೊಂಡಳು. ನಂತರ ಅಲ್ಲಿಯೇ ಕುಳಿತು ಎದೆಹಾಲು ಕುಡಿಸಿದಳು. ನಿಜ ಹೇಳಬೇಕೆಂದರೆ ಅಂಥದೊಂದು ದೃಶ್ಯ ಚಿತ್ರಿಸುವ ಐಡಿಯಾ ಮೊದಲು ಇರಲೇ ಇಲ್ಲ. ಆದರೆ ಅದೊಂದು ಅಪರೂಪದ ಸಂದರ್ಭ ಅಚಾನಕ್ಕಾಗಿ ಒದಗಿ ಬಂತು. ಈ ಸಂದರ್ಭವನ್ನೂ ಅಳವಡಿಸಿಕೊಂಡರೆ ಹಾಡಿನ ಸೊಗಸು ಹೆಚ್ಚುತ್ತದೆ ಎಂದುಕೊಂಡ  ಸಿದ್ದಲಿಂಗಯ್ಯನವರು ಛಾಯಾಗ್ರಾಹಕರಿಗೆ ಸೂಚನೆ ನೀಡಿ ತುಂಬ ಆಪ್ತವಾಗಿ ಆ ದೃಶ್ಯವನ್ನು ಚಿತ್ರಿಸಿಕೊಂಡರು. ಆ ದೃಶ್ಯದಲ್ಲಿ ಜೀವಂತಿಕೆ ಇದೆ. ಏಕೆಂದರೆ -ಅದು ಬದುಕೇ ಚಿತ್ರವಾದ ಸಂದರ್ಭ.
ಮುಂದೆ,  ಮನುಷ್ಯ ಜೀವನದ ಅಷ್ಟೂ  ಸಂಭ್ರಮ, ಸಂಕಟದ ಚಿತ್ರಣ ನೀಡುವ ಯೌವನ, ಮದುವೆ ಹಾಗೂ ಮುಪ್ಪಿನ ದೃಶ್ಯ ತೋರಿಸಲು ನಿರ್ಧರಿಸಿದರು ಸಿದ್ದಲಿಂಗಯ್ಯ.
ಒಬ್ಬ ಮನುಷ್ಯ ಮುದುಕ ಆಗೋದ್ರೊಳಗೆ ಅವನಿಗೆ ಮೊಮ್ಮಕ್ಕಳು ಬಂದಿರ್ತವೆ. ಹಾಗಾಗಿ ಅವರೊಂದಿಗೆ ಆಟವಾಡಿಕೊಂಡು ಎಂಜಾಯ್ ಮಾಡಬೇಕೇ ಹೊರತು ಮುಪ್ಪು ಬಂತೆಂದು ಒಳಗೊಳಗೇ ಕೊರಗ ಬಾರದು ಎಂಬುದನ್ನು ಅದ್ಭುತವಾಗಿ ತೆರೆಯ ಮೇಲೆ  ತೋರಿದರು ಸಿದ್ದಲಿಂಗಯ್ಯ.  ಅವರ ಕಲ್ಪನೆಯನ್ನೂ ಮೀರಿ ಅದ್ಭುತ, ಪರಮಾದ್ಭುತ ಎಂದು ಉದ್ಗರಿಸುವಂತೆ ಡಾ. ರಾಜ್ಕುಮಾರ್ ಅಭಿನಯಿಸಿದರು. ಹೀಗೆ, ತನ್ನ ಊರಿನ ಜನರಿಗೆ ಬದುಕಿನ ಕಥೆ ಹೇಳಿದ ನಾಯಕ ಮನೆಗೆ ಬಂದರೆ, ಅಲ್ಲಿ ಭಾವನ ಸಾವು ಅವನನ್ನು ಸ್ವಾಗತಿಸುತ್ತದೆ. ಅಂದರೆ, ಬದುಕಲ್ಲಿ ಎಲ್ಲವೂ ಮುಗಿದಿದೆ ಅಂದುಕೊಂಡರೂ  ಕೊನೆಯಲ್ಲಿ ಮರಣ ಎಂಬು ದೊಂದು ಇರುತ್ತದೆ ಎಂದು ತಿಳಿಸಲು ಈ ದೃಶ್ಯ ತಂದರು ಸಿದ್ದಲಿಂಗಯ್ಯ… ಅವರ ಆಲೋಚನೆಗಳಿಗೆ, ಈ ಹಾಡು ಹುಟ್ಟಿದ ಕ್ಷಣಕ್ಕೆ ಸಾಕ್ಷಿಯಾಗಿ ಇದ್ದೆ ಎಂಬ ಹೆಮ್ಮೆ ನನ್ನದು…
ಇಷ್ಟು ಹೇಳಿ ಕ್ಷಣ ಮೌನವಾದ ಭಾರ್ಗವ- ಇನ್ನೊಂದ್ಸಲ ಸಿಕ್ಕಿ. ಆಗ ಬಭ್ರುವಾಹನ ಹಾಡಿನ ಒಂದು ಕಥೆ ಹೇಳ್ತೀನಿ ಅಂದು, ಬೀಳ್ಕೊಟ್ಟರು.

‍ಲೇಖಕರು avadhi

March 6, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This