ಮಣಿಕಾಂತ್ ಬರೆದಿದ್ದಾರೆ: ಬಾ ಮಳೆಯೇ ಬಾ…

ಎ ಆರ್ ಮಣಿಕಾಂತ್
ಚಿತ್ರ: ಆಕ್ಸಿಡೆಂಟ್:  ಗೀತೆರಚನೆ: ಬಿ.ಆರ್. ಲಕ್ಷ್ಮಣರಾವ್
ಸಂಗೀತ: ರಿಕ್ಕಿಕೇಜ್. ಗಾಯಕ: ಸೋನು ನಿಗಮ್

ಬಾ ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು
ನಲ್ಲೆ  ಬರಲಾಗದಂತೆ
ಅವಳಿಲ್ಲಿ ಬಂದೊಡನೆ ಬಿಡದೇ ಬಿರುಸಾಗಿ ಸುರಿ
ಹಿಂದಿರುಗಿ ಹೋಗದಂತೆ, ನಲ್ಲೆ ಹಿಂದಿರುಗಿ ಹೋಗದಂತೆ  ||ಪ||

ಓಡು ಕಾಲವೇ ಓಡು, ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ,
ಅವಳಿಲ್ಲಿ ಬಂದೊಡನೆ ನಿಲ್ಲು ಕಾಲವೇ ನಿಲ್ಲು
ತೆಕ್ಕೆ ಸಡಿಲಾಗದಂತೆ, ನಮ್ಮ ತೆಕ್ಕೆ ಸಡಿಲಾಗದಂತೆ  ||1||

ಬೀಸು ಗಾಳಿಯೇ ಬೀಸು ನನ್ನೆದೆಯ ಆಸೆಗಳ
ನಲ್ಲೆ ಹೃದಯಕೆ ತಲುಪಿಸು
ಹಾಸು ಹೂಗಳ ಹಾಸು ಅವಳು ಬಹ ದಾರಿಯಲಿ
ಕಲ್ಲುಗಳ ತಾಗದಂತೆ, ಪಾದ… ಕಲ್ಲುಗಳ ತಾಗದಂತೆ   ||2||

ಬೀರು ದೀಪವೆ ಬೀರು, ನಿನ್ನ ಹೊಂಬೆಳಕಲಿ
ನೋಡುವೆನು ನಲ್ಲೆ ರೂಪ
ಆರು ಬೇಗನೆ ಆರು ಶೃಂಗಾರ ಶಯ್ಯೆಯಲಿ
ನಾಚಿ ನೀರಾಗದಂತೆ, ನಲ್ಲೆ …ನಾಚಿ ನೀರಾಗದಂತೆ   ||3||

ಅದು 1984ರ ಮಾತು. ಸಿ. ಅಶ್ವತ್ಥ್ ರಾಗಸಂಯೋಜನೆಯ ಭಾವಗೀತೆಗಳ ಕೆಸೆಟ್ `ಕೆಂಗುಲಾಬಿ’ ಆಗಷ್ಟೇ ಬಿಡುಗಡೆ ಯಾಗಿತ್ತು. ಎಲ್ಲೆಲ್ಲೂ ಆ ಕೆಸೆಟ್ ಕುರಿತೇ ಮಾತು. ಅದೇ ಚಚರ್ೆ. ಇದರಿಂದ ಖುಷಿಯಾದ ಕೆಸೆಟ್ ಕಂಪನಿಯವರು ಅಂಥದೇ ಮತ್ತೊಂದು  ಕೆಸೆಟ್ ಮಾಡಿಕೊಡಿ ಎಂದರಂತೆ. ಈ ಆಹ್ವಾನದಿಂದ ಖುಷಿಯಾದ ಅಶ್ವತ್ಥ್, 1985ರಲ್ಲಿ ಕವಿಗಳಾದ ಬಿ.ಆರ್. ಲಕ್ಷ್ಮಣ ರಾವ್ ಹಾಗೂ ಎಚ್.ಎಸ್. ವೆಂಕಟೇಶಮೂತರ್ಿಯವರನ್ನು ಭೇಟಿಮಾಡಿ- `ಸರ್, ಒಂದು ಹೊಸ ಕೆಸೆಟ್ ಮಾಡೋಕೆ ಹೊರಟಿ ದ್ದೇನೆ. ಗಝಲ್ ಮಾದರಿಯ ಹಾಡು ಬರೆದುಕೊಡಿ’ ಎಂದರು.
ಈ ಮಾತಿಗೆ ಒಪ್ಪಿದ ಎಚ್.ಎಸ್.ವಿ ಹಾಗೂ ಲಕ್ಷ್ಮಣರಾವ್, ತಲಾ ಮೂರು ಹಾಡುಗಳನ್ನು ಬರೆದುಕೊಟ್ಟರಂತೆ. ಅದರಲ್ಲಿ `ಬಾ ಮಳೆಯೇ ಬಾ…’ ಎಂಬ ಪ್ರೇಮಗೀತೆಯೂ ಒಂದು. ಹೀಗೆ ತಯಾರಾದ ಕೆಸೆಟ್ಹೆಸರು ಮಧುಮಾಲಾ. ಆ ಕೆಸೆಟ್ನಲ್ಲಿ `ಬಾ ಮಳೆಯೇ ಬಾ’ ಗೀತೆಯನ್ನು ಬಸಂತ್ರಾಗದಲ್ಲಿ ಹಾಡಿದ್ದರು ಅಶ್ವತ್ಥ್.
ಮುಂದೆ, 1990ರಲ್ಲಿ ಮೈಸೂರು ಅನಂತಸ್ವಾಮಿಯವರು ಇದೇ ಹಾಡನ್ನು ಉದಯ ರವಿಚಂದ್ರ ರಾಗದಲ್ಲಿ ಹಾಡಿದರು. (ಹಿಂದಿಯಲ್ಲಿ ಅದಕ್ಕೆ ಧನಿರಾಗ ಎಂಬ ಹೆಸರಿದೆ.) ಅನಂತಸ್ವಾಮಿಯವರ ಸಿರಿ ಕಂಠದ ಬಗ್ಗೆ ಹೇಳುವುದೇನಿದೆ? ಹಾಡು, ಎಲ್ಲರ ನಿರೀಕ್ಷೆ ಮೀರಿ ಜನಪ್ರಿಯ ವಾಯಿತು.
ಸ್ವಾರಸ್ಯ ಕೇಳಿ: 80 ಹಾಗೂ 90ರ ದಶಕದಲ್ಲಿ ಆ ದಿನಗಳ ಇಬ್ಬರು ಮಹಾನ್ಗಾಯಕರ ಸಿರಿಕಂಠದಿಂದ ಹೊಮ್ಮಿ ಜನಮನಗೆದ್ದಿದ್ದ  ಈ ಹಾಡು, ಮೂರು ವರ್ಷಗಳ ಹಿಂದೆ ತೆರೆಕಂಡ ರಮೇಶ್ ಅರವಿಂದ್ ಅಭಿನಯ-ನಿದರ್ೇಶನದ `ಆ್ಯಕ್ಸಿಡೆಂಟ್’ ಚಿತ್ರದಲ್ಲೂ  ಬಳಕೆಯಾ ಯಿತು. ಸಿನಿಮಾದಲ್ಲಿ  ಈ ಹಾಡಿಗೆ ದನಿಯಾದ `ಸೋನು ನಿಗಮ್’ ಕೂಡ ಈ ಹಾಡಿನ ಖ್ಯಾತಿಯನ್ನು ಅಂಗೈಲಿ ಹಿಡಿದೆತ್ತಿದರು. ಪರಿ ಣಾಮ, ಹಾಡು ಮಧುರವಾಯಿತು.
ಅಂದಹಾಗೆ, ಈ ಮಳೆಯ ಹಾಡು ನಟ ರಮೇಶ್ ಅರವಿಂದ್ ಅವರಿಗೆ ದಕ್ಕಿದ್ದು ಕೂಡ ತೀರಾ ಆಕಸ್ಮಿಕ ಸಂದರ್ಭದಲ್ಲಿ. ಅದು ಹೇಗೆ ಎಂದು ತಿಳಿಯುವ ಮುನ್ನ, `ಆ್ಯಕ್ಸಿಡೆಂಟ್’ ಚಿತ್ರದಲ್ಲಿ ಈ ಹಾಡಿನ  ಸಂದ ರ್ಭವನ್ನು ನೆನಪುಮಾಡಿಕೊಳ್ಳೋಣ. ಆ ಸನ್ನಿವೇಶ ಹೀಗಿದೆ: ನಾಯಕಿ ತೀರಿಕೊಂಡಿರುತ್ತಾಳೆ. ಅವಳ ನೆನಪಿನಲ್ಲಿ ಸಂಕಟದಿಂದ, ನೋವಿನಿಂದ, ದುಃಖದಿಂದ ನಾಯಕ ಹಾಡುತ್ತಾನೆ. ಅವಳು ಜತೆಗಿಲ್ಲದ ಮೇಲೆ ಈ ಬದುಕಿಗೊಂದು ಅರ್ಥವಿದೆಯೆ ಎಂಬ ಭಾವದಲ್ಲಿ ನಾಯಕನ  ಮನದ ವೇದನೆಯೆಲ್ಲಾ ಈ ಹಾಡಲ್ಲಿ ಹೊರಹೊಮುತ್ತದೆ…’
ಆ್ಯಕ್ಸಿಡೆಂಟ್ ಚಿತ್ರದ ಸಂಭಾಷಣೆಕಾರ ರಾಜೇಂದ್ರ ಕಾರಂತ್. ಅವರಿಗೆ ಈ ಸಂದರ್ಭ ವಿವರಿಸಿದ  ರಮೇಶ್ ಅರವಿಂದ್- `ಈ ಸನ್ನಿವೇಶಕ್ಕೆ ಹೊಂದುವಂತೆ ನೀವೇ ಒಂದು ಹಾಡು ಬರೆದುಬಿಡಿ’ ಎಂದರಂತೆ. ಅದಕ್ಕೆ ಅಸಮ್ಮತಿ ಸೂಚಿಸಿದ ರಾಜೇಂದ್ರ ಕಾರಂತ್- `ಬೇಡ ಸಾರ್, ಬಿ.ಆರ್. ಲಕ್ಷ್ಮಣರಾವ್ ಅವರ ಒಂದು ಹಾಡಿದೆ. ಅದನ್ನು ಬಳಸಿಕೊಳ್ಳೋಣ. ಈ ಸಿನಿಮಾದ ಸಂದರ್ಭಕ್ಕೆ ಅದು ಅಚ್ಚುಕಟ್ಟಾಗಿ ಹೊಂದಿಕೊಳ್ಳುತ್ತೆ’ ಅಂದರಂತೆ.
ಮುಂದೆ ಸಿನಿಮಾದ ಕೆಲಸದಲ್ಲಿ `ಬ್ಯುಸಿ’ಯಾದರು ರಮೇಶ್. ಈ ಮಧ್ಯೆ ಅವರನ್ನು ನಿದರ್ೇಶಕ ಚನ್ನಗಂಗಪ್ಪ  ಅವರು ಭೇಟಿಯಾಗಿದ್ದರು. ಅದೂ ಇದೂ ಮಾತಾಡುತ್ತಾ -`ಸಾರ್, ಜನ ಈಗಲೂ ಕೂಡ ಹಳೆಯ ಹಾಡುಗಳೇ ಚೆಂದ ಅನ್ನುತ್ತಾರೆ. ನಮ್ಮ ಹೊಸ ಸಿನಿಮಾದ ಹಾಡುಗಳನ್ನು ಜನ ಮೆಚ್ಚುವಂತಾಗಬೇಕು. ಮಧುರ ಗೀತೆಗಳನ್ನು ಕೇಳಿಸಬೇಕು ಅನ್ನೋದು ನನ್ನಾಸೆ’ ಎಂದರಂತೆ ರಮೇಶ್. ಅದಕ್ಕೆ ಸಹಮತ ತೋರಿದ ಚನ್ನಗಂಗಪ್ಪ, `ನನ್ನಲ್ಲಿ ಒಂದು  ಭಾವಗೀತೆಗಳ ಕೆಸೆಟ್ ಇದೆ. ಅದು ತುಂಬಾ ಚೆನ್ನಾಗಿದೆ. ಅದನ್ನು ಕಳಿಸಿಕೊಡ್ತೀನಿ. ಕೇಳಿ ನೋಡಿ. ನಿಮಗೆ  ಒಂದೆರಡು ಹಾಡು ಇಷ್ಟವಾಗಬಹುದು. ಅದನ್ನು ಸಿನಿಮಾದಲ್ಲಿ ಬಳಸಲು ಆಗುತ್ತಾ ನೋಡಿ’ ಎಂದರಂತೆ.
ಕೆಲ ದಿನಗಳ ನಂತರ, ಚನ್ನಗಂಗಪ್ಪ  ಅವರ ಕಡೆಯಿಂದ ಸಿ. ಅಶ್ವತ್ಥ್  ರಾಗ ಸಂಯೋಜನೆಯ ಪ್ರೇಮಗೀತೆಗಳ ಸಿ.ಡಿ. ಒಂದು ಬಂತು. ಕುತೂಹಲ ದಿಂದಲೇ ಆ ಕೆಸೆಟ್ಗೆ ಕಿವಿಯಾದ ರಮೇಶ್ ಅವರನ್ನು  ಒಂದು ಹಾಡು ಇನ್ನಿಲ್ಲದಂತೆ ಕಾಡಿಬಿಟ್ಟಿತು. ಅದೇ `ಬಾ ಮಳೆಯೇ ಬಾ…’. ಅದನ್ನು ಅಶ್ವತ್ಥ್ ಪ್ರೇಮಗೀತೆಯಾಗಿ ಹಾಡಿದ್ದರು ನಿಜ. ಆದರೆ ಅದು ರಮೇಶ್ ಅವರಿಗೆ ಬೇರೊಂದು ತೆರನಾಗಿ ಭಾಸವಾಯಿತಂತೆ. ಅದನ್ನೇ ರಾಜೇಂದ್ರಕಾರಂತ್ ಅವರಿಗೂ ಹೇಳಿದಾಗ-`ಸಾರ್, ನಾನು ಮೊದಲು ಹೇಳಿದ್ದೆ ನೋಡಿ, ಆ ಹಾಡು ಇದೇನೇ….’ ಎಂದರಂತೆ.
ನಂತರ ಬಿ.ಆರ್. ಲಕ್ಷ್ಮಣರಾವ್ ಅವರನ್ನು ಫೋನ್ನಲ್ಲಿ  ಸಂಪಕರ್ಿ ಸಿದ ರಮೇಶ್ ಅರವಿಂದ್-`ನಿಮ್ಮ ಹಾಡು ನನಗೆ ವಿಷಾದಗೀತೆಯ ಹಾಗೂ ಕೇಳಿಸ್ತಾ ಇದೆ. ನನ್ನ ನಿದರ್ೇಶನದ ಆ್ಯಕ್ಸಿಡೆಂಟ್ ಸಿನಿಮಾದ ಒಂದು ಸನ್ನಿವೇಶಕ್ಕೆ ಅದು ತುಂಬ ಚೆನ್ನಾಗಿ ಹೊಂದಿಕೆ ಆಗುತ್ತೆ ಅನ್ನಿಸ್ತಿದೆ. ನೀವು ಒಪ್ಪಿಗೆ ಕೊಟ್ರೆ ಅದನ್ನು ವಿಷಾದ ಗೀತೆಯಾಗಿ ಬಳಸಿಕೊಳ್ತೇವೆ’ ಎಂದರಂತೆ. ಒಂದು ಹಾಡು ಒಬ್ಬೊಬ್ಬರಿಗೆ ಒಂದೊಂದು ತೆರನಾಗಿ ಕೇಳಿಸಿದ ಪರಿಗೆ ಬೆರಗಾದ ಲಕ್ಷ್ಮಣರಾವ್- ಹಾಡು ಬಳಸಲು  ಒಪ್ಪಿಗೆ ಕೊಟ್ಟರು. ಭಾವಗೀತೆ ಪ್ರಕಾರದಲ್ಲಿ ದೊರಕಿರುವ ಖ್ಯಾತಿಯೇ ಈ ಹಾಡಿಗೆ ಚಿತ್ರಗೀತೆಯಾಗಿಯೂ ಸಿಗುವಂತೆ ಮಾಡಬೇಕು ಎಂದು ಕೊಂಡ ರಮೇಶ್, ಸಂಗೀತ ನಿದರ್ೇಶಕ  ರಿಕ್ಕಿ ಕೇಜ್ ಅವರನ್ನು ಕರೆದು -`ಈ ಹಾಡು ನಿಮಗೊಂದು ಸವಾಲು ಇದಕ್ಕೆ ಹೊಸ ಆಯಾಮ ನೀಡಬೇಕಾದ್ದು ನಿಮ್ಮ ಜವಾಬ್ದಾರಿ’ ಎಂದರಂತೆ. ಸವಾಲಿಗೆ ಒಪ್ಪಿದ ರಿಕ್ಕಿ, ಹಾಡಿಗೆ ಭೀಮ್ಪಲಾಸ್ ರಾಗದಲ್ಲಿ ಸ್ವರ ಪ್ರಸ್ತಾರ ಹಾಕಿಬಿಟ್ಟರು.
***
ಈ ಹಾಡಿನ ಚಿತ್ರೀಕರಣವಾಯಿತಲ್ಲ? ಅದು ಇನ್ನೊಂದು ಸ್ವಾರಸ್ಯದ ಕಥೆ. ಹೇಳಿ ಕೇಳಿ ಇದು ನೋವಿನ ಹಾಡು. ಸಂಕಟದ ಹಾಡು. ದುಃಖದ ಹಾಡು. ಭಾವ  ತೀವ್ರತೆಯ ಹಾಡು. ಎದೆಯಾಳದ ನೋವಿಗೆ ಕನ್ನಡಿ ಹಿಡಿಯುವ ಹಾಡು. ಇಂಥ ಹಾಡನ್ನು ಶಿವನಸಮುದ್ರ ಫಾಲ್ಸ್ನಲ್ಲಿ ಚಿತ್ರೀಕರಿಸುವ ಮಹದಾಸೆ ರಮೇಶ್ ಅವರಿಗಿತ್ತು. ಮಳೆಗಾಲದ ಒಂದು ದಿನ, ಲೊಕೇಶನ್ ನೋಡಲು ಹೋಗಿ ಚಿತ್ರೀಕರಣದ ದಿನವನ್ನು ಪಕ್ಕಾಮಾಡಿಕೊಂಡು ಬಂದರು ರಮೇಶ್. ಹಾಡು ಶುರುವಾದಾಗ ನಾಯಕ ಜಲಪಾತದ ಕೆಳಗಿರಬೇಕು. ಮೇಲಿಂದ ಧುಮ್ಮಿಕ್ಕುವ ನೀರು ಅವನ ವೇದನೆಯನ್ನು,  ಕಂಬನಿಯನ್ನು ಸಂಕೇತಿಸಬೇಕು ಎಂಬುದು ರಮೇಶ್ ಅವರ ಐಡಿಯಾ ಆಗಿತ್ತು. ಉಳಿದೆಲ್ಲ ಭಾಗಗಳ ಚಿತ್ರೀಕರಣ ಮುಗಿಸಿಕೊಂಡು ಕೊನೆಯ ದಿನ ವಿಶೇಷ ಮುತುವಜರ್ಿಯಿಂದ ಈ ಹಾಡಿನ ಚಿತ್ರೀಕರಣ ನಡೆಸೋಣ ಎಂದುಕೊಂಡರು. ಉಳಿದ ಭಾಗದ ಚಿತ್ರೀಕರಣ ಮುಗಿಯಲು ಎರಡು ತಿಂಗಳು ಬೇಕಾಯಿತು.
ಕಡೆಗೊಂದು ದಿನ ಇಡೀ ಚಿತ್ರತಂಡದೊಂದಿಗೆ ಶಿವನ ಸಮುದ್ರಕ್ಕೆ ಹೋದ ರಮೇಶ್  ಅರವಿಂದ್, ಎದುರು ಕಂಡ ದೃಶ್ಯ ನೋಡಿ ಶಾಕ್ಹೊಡೆದವರಂತೆ ನಿಂತುಬಿಟ್ಟರು. ಏಕೆಂದರೆ, ಆ ವೇಳೆಗೆ ಮಳೆಗಾಲ ಮುಗಿದು ಹೋಗಿದ್ದರಿಂದ ಅಲ್ಲಿ ಜಲಪಾತವೇ ಕಣ್ಮರೆಯಾಗಿತ್ತು. ಮುಂದೇನು ಮಾಡುವುದೆಂದು ತಿಳಿಯದೆ ಚಿಂತಾಕ್ರಾಂತರಾಗಿ ನಿಂತಿದ್ದಾಗಲೇ -ರಮೇಶ್ ಅವರಿಗೆ ಒಂದು ಐಡಿಯಾ ಬಂತು. `ನಾಯಕ-ನಾಯಕಿ ಹಾಡುವ ಗೀತೆಯಾದರೆ, ಜಲಪಾತ, ಮಳೆ, ಪ್ರಪಾತವೆಲ್ಲ ಬೇಕು. ಇದು ವಿಷಾದಗೀತೆ ತಾನೆ? ಹಾಗಾಗಿ ಖಾಲಿ ಖಾಲಿ ಉಳಿದಿರುವ ಬಂಡೆಗಳ ಮಧ್ಯೆ ಅನಾಥನಂತೆ ಕಾಣುವ ನಾಯಕನನ್ನು ನಿಲ್ಲಿಸಿ ಹಾಡು ಕೇಳಿಸಿದರೆ ಹೇಗೆ?’ ಈ ಐಡಿಯಾ ಎಲ್ಲರಿಗೂ ಒಪ್ಪಿಗೆಯಾಯಿತು. ಶೂಟಿಂಗೂ ನಡೆಯಿತು.
ಹಾಡಿನ ಎರಡನೇ ಚರಣದಲ್ಲಿ `ಬೀಸು ಗಾಳಿಯೇ ಬೀಸು’ ಎಂಬ ಸಾಲಿದೆ. ಆ ಸಾಲು ಕೇಳಿ ಬಂದಾಗ ಒಂದೊಂದೇ ತರಗೆಲೆಗಳು ನಾಯ ಕನ ಮುಖಕ್ಕೆ ಬಡಿದಂತೆ, ಆ ಸಂದರ್ಭದಲ್ಲಿ ನಾಯಕ ನೋವಿಂದ ಮುಖ ಚಿಕ್ಕದು ಮಾಡಿ ನಿಂತಂತೆ ಚಿತ್ರಿಸಬೇಕಿತ್ತು. ಈ ಚರಣವನ್ನು ರಾಮನಗರದ ಹತ್ತಿರವಿದ್ದ ಆಲದಮರದ ಬಳಿ ಚಿತ್ರೀಕರಿಸಲು ನಿರ್ಧರಿಸಲಾಗಿತ್ತು. ಐದಾರು ಮೂಟೆಗಳಷ್ಟು ಒಣಗಿದ ಎಲೆಗಳನ್ನು ತರಿಸಿ ಎಂದು ಸಹ ನಿದರ್ೇಶಕರಿಗೆ ಹೇಳಿದರೆ ಅವರು-`ಎಲೆಗಳಿಗೇನು ಬರ ಸಾರ್? ಆಲದ ಮರದ ಕೆಳಗೆ ರಾಶಿ ಬಿದ್ದಿರ್ತವೆ ಬನ್ನಿ’ ಅಂದರಂತೆ.
ನಂತರ, ಮೊದಲು ಆಲದ ಮರದ ಕೆಳಗಿದ್ದ ಎಲೆಗಳನ್ನು ಒಟ್ಟುಮಾಡಿದ್ದಾಯಿತು. ಆನಂತರ, ದೊಡ್ಡದಾದ ಗಾಳಿ ಬೀಸುವ ಯಂತ್ರ ತರಿಸಿ, ನಾಯಕನ ಕಡೆಗೆ ಎಲೆಗಳು ತೂರಿ ಹೋಗುವಂತೆ ಫ್ಯಾನನ್ನು ಆನ್ ಮಾಡಲಾಯಿತು. ಚಿತ್ರೀಕರಣ ಶುರುವಾಯಿತು. ಯಾರೂ ಗಮನಿಸದಿದ್ದ ಸಂಗತಿಯೆಂದರೆ, ಆಲದ ಎಲೆಗಳಲ್ಲಿ ಕಟ್ಟಿರುವೆಗಳಿದ್ದವು! ಫ್ಯಾನ್ ಗಾಳಿಗೆ ತೂರಿಬಂದು ಹೀರೋ ಪಾತ್ರಧಾರಿ ರಮೇಶ್ ಮುಖಕ್ಕೆ ಬಡಿದ ತಕ್ಷಣ ಅವು ಕೆನ್ನೆ, ಕಿವಿ, ಕಣ್ಣಿನ ರೆಪ್ಪೆ, ಹಣೆ…. ಹೀಗೆ ಎಲ್ಲೆಂದರಲ್ಲಿ  ಕಚ್ಚಿಕೊಂಡು ಬಿಡುತ್ತಿದ್ದವು. ನಂತರ ಕಚ್ಚಲು ಆರಂಭಿಸುತ್ತಿದ್ದವು! ದೂರದಲ್ಲಿದ್ದ ಚಿತ್ರತಂಡದವರಿಗೆ ಇದೇನೂ ಗೊತ್ತಿಲ್ಲ.  ನೋವಿಂದ ರಮೇಶ್ ಮುಖ ಕಿವಿಚಿದರೆ ಅವರೆಲ್ಲ  ರಮೇಶ್ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಹಾಗಾಗಿ ದೃಶ್ಯ ತುಂಬ ಅದ್ಭುತವಾಗಿ ಬರ್ತಾ ಇದೆ ಅಂದುಕೊಂಡರಂತೆ. ಈಗ ಸಂಕಟ ಹೇಳಿಕೊಂಡರೆ ಸುಮ್ನೇ ಫಜೀತಿ ಎಂದುಕೊಂಡ ರಮೇಶ್, ನೋವು ನುಂಗಿಕೊಂಡು ನಟಿಸಿದರಂತೆ. ಪರಿಣಾಮ, ಆ ದೃಶ್ಯ ಸನ್ನಿವೇಶದ ತೀವ್ರತೆಯನ್ನು ಹೆಚ್ಚಿಸಿತು.
ನಂತರ ಆಕ್ಸಿಡೆಂಟ್ ಸಿನಿಮಾ ನೋಡಿದ ಲಕ್ಷ್ಮಣರಾವ್-`ಈ ಹಾಡನ್ನು ಚಿತ್ರೀಕರಿಸಿರುವ ರೀತಿ ಸೊಗಸಾಗಿದೆ. ನನ್ನ ಹಾಡಿಗೆ ಒಂದು ಹೊಸ ಆಯಾಮ ದೊರಕಿದೆ’ ಎಂದು ಸಂಭ್ರಮಿಸಿದರಂತೆ.

‍ಲೇಖಕರು avadhi

February 13, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: