ಮಣಿಕಾಂತ್ ಬರೆದಿದ್ದಾರೆ-ಬೆಸುಗೆ ಚಿತ್ರದ ಕಥೆ

ಎ ಆರ್ ಮಣಿಕಾಂತ್
ಯಾವ ಹೂವು ಯಾರ ಮುಡಿಗೊ…
ಚಿತ್ರ ಬೆಸುಗೆ. ಗೀತೆರಚನೆ: ಶ್ಯಾಮಸುಂದರ ಕುಲಕಣರ್ಿ
ಸಂಗೀತ: ವಿಜಯಭಾಸ್ಕರ್, ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ

ಯಾವ ಹೂವು ಯಾರ ಮುಡಿಗೊ
ಯಾರ ಒಲವು ಯಾರ ಕಡೆಗೊ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೊ       ||ಪ||
ಮುಖದಿ ಒಂದು ಭಾವನೆ, ಕಣ್ಣಲೇನೊ ಕಾಮನೆ
ಒಂದು ಮನದ ಯೋಚನೆ ಒಂದು ಮನಕೆ ಸೂಚನೆ
ಯಾರು ಅರಿಯಲಾರರು, ಯಾರ ಪಾಲು ಯಾರಿಗೋ ||1||
ಒಂದು ಸುಮವು ಅರಳಿತು, ದುಂಬಿಯನ್ನು ಒಲಿಸಿತು
ಮೋಹಪಾಶ ಎಸೆಯಿತು ಒಂದು ಪಾಠ ಕಲಿಸಿತು
ಇಂಥ ಪಾಠ ಕಲಿಸಲು, ಗುರುವು ಯಾರು ಯಾರಿಗೊ ||2||
ಎಂದೊ ಹುಟ್ಟಿದಾಸೆಯು, ಇಂದು ಮನವ ತಟ್ಟಿತು
ಮನದ ಕದವ ತೆರೆಯಲು ಬೇರೆ ಗುರಿಯ ಮುಟ್ಟಿತು
ಯಾರು ಹೇಳಬಲ್ಲರು, ಯಾರ ಪಯಣ ಎಲ್ಲಿಗೊ       ||3||

ಅದು 1991ರ ಮಾತು. ಫಣಿ ರಾಮಚಂದ್ರ ನಿದರ್ೇಶನದ `ಒಂದು ಸಿನಿಮಾ ಕಥೆ’ ಚಿತ್ರದ ಮುಹೂರ್ತ ನಡೆಯುವುದಿತ್ತು. ಆ ಚಿತ್ರಕ್ಕೆ ಕಥೆ ಬರೆದಿದ್ದವರು ಶ್ಯಾಮಸುಂದರ ಕುಲಕಣರ್ಿ. ಅವತ್ತು ಪತ್ರಕರ್ತರೊಂದಿಗೆ ಮಾತಿಗೆ ಕೂತ ಚಿ. ಉದಯಶಂಕರ್,  ಸಂಭ್ರಮದಿಂದ ಹೇಳಿದ್ದರು. `ಯಾವ ಹೂವು ಯಾರ ಮುಡಿಗೊ, ಯಾರ ಒಲವು ಯಾರ ಕಡೆಗೊ…’ ಹಾಡು ನೆನಪಿದೆ ತಾನೆ?  ಆ ಹಾಡಲ್ಲಿರೋ ಒಂದೊಂದು ಸಾಲೂ ಅನನ್ಯ ಅನ್ನುವಂಥಾದ್ದು. ಇದು ನನ್ನ ಮೆಚ್ಚಿನ ಹಾಡು. ಇಂದಿಗೂ ಆ ಹಾಡು ಕೇಳಿದಾಗ ನಾನು ಪುಳಕಗೊಳ್ಳುತ್ತೇನೆ. ರೋಮಾಂಚನಗೊಳ್ಳುತ್ತೇನೆ. ಒಂದು ರಾಗದಂತೆ, ಒಂದು ಗುಂಗಿನಂತೆ ಎಲ್ಲರನ್ನೂ ಕಾಡುವ ಶಕ್ತಿ ಈ ಹಾಡಿಗಿದೆ. ಇಂಥದೊಂದು ಅಪರೂಪದ ಗೀತೆ ಬರೆದವರು ನಮ್ಮ ಶ್ಯಾಮ ಸುಂದರ ಕುಲಕಣರ್ಿ. `ಯಾವ ಹೂವು ಯಾರ ಮುಡಿಗೊ…’ ಎಂಬಂಥ ಅಪರೂಪದ, ಅನನ್ಯ ಸಾಲುಗಳು ಅವರಿಗೆ ಮಾತ್ರ ಹೊಳೆದವು. ನಮಗ್ಯಾರಿಗೂ ಅವು ಹೊಳೆಯಲಿಲ್ಲ…’
ಕನ್ನಡ ಚಿತ್ರರಂಗದ ಶ್ರೇಷ್ಠ ಗೀತೆ ರಚನೆಕಾರ ಎನಿಸಿಕೊಂಡಿದ್ದ ಚಿ. ಉದಯಶಂಕರ್ ಅವರಿಂದಲೇ ಭೇಷ್ ಭೇಷ್ ಎನಿಸಿಕೊಂಡದ್ದು ಕುಲಕಣರ್ಿಯವರ ಹೆಗ್ಗಳಿಕೆ. ಹಲವರ ಮನದ ನೋವಿಗೆ, ತಳಮಳಕ್ಕೆ, ಸಂಕಟಕ್ಕೆ ಕನ್ನಡಿ ಹಿಡಿಯುವಂಥ; ಮನಸು ಮನಸುಗಳ ಪಿಸುಮಾತೇ ಆಗುವಂಥ `ಯಾವ ಹೂವು ಯಾರ ಮುಡಿಗೊ…’ ಹಾಡು ಗೀತಪ್ರಿಯ ನಿದರ್ೇಶನದ `ಬೆಸುಗೆ’ ಚಿತ್ರದ್ದು.
ಒಂದು ವಿಶೇಷವೆಂದರೆ, ಈ ಹಾಡಿನಲ್ಲಿ ಕೇವಲ ಪದಗಳಿಲ್ಲ. ಪ್ರಾಸಕ್ಕೆಂದೇ ಸೃಷ್ಟಿಯಾದ ಸಾಲುಗಳಿಲ್ಲ. ಒಣ ವೇದಾಂತವಿಲ್ಲ. ಉಪದೇಶವಿಲ್ಲ. ಪ್ರಾರ್ಥನೆಯಿಲ್ಲ. ವೇದನೆಯಿಲ್ಲ. ಆವೇಶದ ಮಾತುಗಳಿಲ್ಲ. ಆದೇಶವೂ ಇಲ್ಲ.  ಬದಲಿಗೆ, ಬದುಕೆಂದರೆ ಏನು? ಎಂಬ ಪ್ರಶ್ನೆಗೆ ಎಲ್ಲರೂ ಒಪ್ಪುವಂಥ ಉತ್ತರವಿದೆ. ಪ್ರೀತಿಯ ವಿಷಯವಾಗಿ ಹಲವರ ಬದುಕು ಹೇಗೆಲ್ಲ ಬದಲಾಗುತ್ತದೆ ಎಂಬುದರ ಸರಳ ನಿರೂಪಣೆಯಿದೆ. ವಿಯಾಟದ ಮುಂದೆ ನಾವೆಲ್ಲ ದಾಳಗಳು ಎಂಬ ಮಾತಿಗೆ ಸಾಕ್ಷಿಯಿದೆ. ಪ್ರೀತಿಯ ವಿಷಯದಲ್ಲಿ ಎಲ್ಲರ ಮನಸ್ಸುಗಳಿರುವ ಇನ್ನೊಂದು ಮುಖದ ಖಡಕ್ ಪರಿಚಯಿವಿದೆ. ಬದುಕಲ್ಲಿ ಆಕಸ್ಮಿಕವಾಗಿ ಬಂದುಹೋಗುವ ತಿರುವುಗಳು, ನಮ್ಮ ಲೆಕ್ಕಾಚಾರವನ್ನೆಲ್ಲ ಬುಡಮೇಲು ಮಾಡಿಬಿಡುತ್ತವೆ ಎಂಬುದರ ಪ್ರಾಮಾಣಿಕ ಉಲ್ಲೇಖವಿದೆ.
ಹೌದಲ್ಲವಾ? ಪ್ರೀತಿಯ ಹೊಳೆಗೆ ಬಿದ್ದವರಲ್ಲಿ ಹೆಚ್ಚಿನವರು ಜತೆಯಾಗಿ ಬದುಕುವ ಆಸೆ ಹೊಂದಿರುತ್ತಾರೆ. ಹಲವರಂತೂ ತಮ್ಮ ಪ್ರೀತಿಯ ಮಧ್ಯೆ ಜಾತಿಯ ತಡೆಗೋಡೆ ಎದ್ದು ನಿಲ್ಲಬಹುದು ಎಂಬ ಅಂಜಿಕೆಯಿಂದ ಸ್ವಜಾತಿಯವರನ್ನೇ ಪ್ರೀತಿಸಿರುತ್ತಾರೆ. ಸಂಬಂಗಳನ್ನು ಪ್ರೀತಿಸಿದರೆ ಮುಂದೊಂದು ದಿನ ಮದುವೆಯ ಪ್ರಸ್ತಾಪ ಬಂದರೆ ಬಂಧುಗಳೆಲ್ಲರ ಬೆಂಬಲ ಸಿಗುತ್ತದೆ ಎಂದೂ ಹಲವರು ಲೆಕ್ಕ ಹಾಕಿರುತ್ತಾರೆ. ಬಡವರ ಹುಡುಗ/ ಹುಡುಗಿಯನ್ನು ಪ್ರೀತಿಸಿದರೆ, ಅವರ ಕಡೆಯಿಂದ ಪ್ರಬಲ ಪ್ರತಿರೋಧವಂತೂ ಬರುವುದಿಲ್ಲ. ಹಾಗಾಗಿ ಮದುವೆಯಾಗುವುದು ಸುಲಭ ಎಂದು ಒಂದಷ್ಟು ಜನ ಅಂದುಕೊಂಡಿರುತ್ತಾರೆ. ಕೆಲವು ಸಂದರ್ಭಗಳಲ್ಲಂತೂ ಆಕಸ್ಮಿಕವಾಗಿ ಪರಿಚಯವಾದವರನ್ನು ತುಂಬಾ ಹಚ್ಚಿಕೊಂಡು ಅವರನ್ನು ಒಂದು ನೆಲೆಗೆ ತಂದು, ಆ ನಂತರ `ನನ್ನನ್ನೇ ಮದುವೆಯಾಗ್ತೀರಾ’ ಎಂದು ಕೇಳಬೇಕಾದ ಪರಿಸ್ಥಿತಿ ಕೂಡ (ಇಲ್ಲಿ ಮಾತುಗಳು ಹಾಗೂ ಪಾತ್ರಗಳು ಅದಲು ಬದಲಾಗಬಹುದು!) ಹಲವರ ಬದುಕಿನಲ್ಲಿ ಬಂದುಬಿಡುತ್ತದೆ.
ವಿಪರ್ಯಾಸವೆಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಇಂಥ ಲೆಕ್ಕಾಚಾರಗಳೆಲ್ಲ ಉಲ್ಟಾ ಹೊಡೆದಿರುತ್ತವೆ. ನಾವು ಯಾರನ್ನೋ ತುಂಬಾ ತುಂಬಾ ತುಂಬಾ ಪ್ರೀತಿಸಿರುತ್ತೇವೆ. ವಿಷಾಧವೆಂದರೆ `ಅವರು’ ಅಷ್ಟೇ ಆಸೆಯಿಂದ ನಮ್ಮನ್ನಲ್ಲ, ಮತ್ಯಾರನ್ನೋ ಇಷ್ಟಪಟ್ಟಿರುತ್ತಾರೆ! ಆ ಮತ್ತೊಬ್ಬರು, ಬೇರೆ ಯಾರದೋ ಒಪ್ಪಿಗೆಗೆ ಕಾದು ನಿಂತಿರುತ್ತಾರೆ!  ಹಾಗಾಗಿ ಬಹಳಷ್ಟು ಸಂದರ್ಭಗಳಲ್ಲಿ ಹೆಚ್ಚಿನವರ ಬದುಕಿನಲ್ಲಿ ಪ್ರೀತಿಯ ಗುಲಾಬಿ ಅರಳುವ ಮುನ್ನವೇ ಮುದುಡಿಹೋಗಿರುತ್ತದೆ. ಅಥವಾ, ನಮ್ಮ ಕನಸಿನ ಗುಲಾಬಿ ಇನ್ಯಾವುದೋ ಮನೆಯಲ್ಲಿ  ಬೆಳದಿಂಗಳ ಕಂಪು ಸೂಸಿರುತ್ತದೆ, ಇಂಥ ಸಂದರ್ಭದಲ್ಲಿ ನೋವಿನಿಂದ ದಗ್ಧಗೊಂಡ ಎಲ್ಲರಿಗೂ ಪದೇ ಪದೆ ನೆನಪಾಗುವ ಸಾಲುಗಳಿವು: ಯಾವ ಹೂವು ಯಾರ ಮುಡಿಗೊ ಯಾವ ಒಲವು ಯಾರ ಕಡೆಗೊ…’
ಈ ಅಪರೂಪದ ಹಾಡು ಹುಟ್ಟಿದ ಸಂದರ್ಭ ಅರಿಯುವ ಮುನ್ನ `ಬೆಸುಗೆ’ ಚಿತ್ರದಲ್ಲಿ ಈ ಹಾಡು ಬರುವ ಸಂದರ್ಭ ತಿಳಿಯುವುದು ಉಚುತ. ಆ ಚಿತ್ರದಲ್ಲಿ ಶ್ರೀನಾಥ್- ಮಂಜುಳಾ-ಜಯಲಕ್ಷ್ಮಿ ಮುಖ್ಯಪಾತ್ರದಲ್ಲಿದ್ದಾರೆ. ಈ ಇಬ್ಬರು ನಾಯಕಿಯರ ಪೈಕಿ ಜಯಲಕ್ಷ್ಮಿಗೆ ಶ್ರೀನಾಥ್ ಮೇಲೆ ಕಣ್ಣು. ಶ್ರೀನಾಥ್ಗಾದರೋ ಮಂಜುಳಾ ಮೇಲೆ ಆಸೆ. ಆದರೆ, ಮಂಜುಳಾಗೆ  ಶ್ರೀನಾಥ್ ಮಾತಿಗೆ ಹೇಗೆ ಉತ್ತರಿಸಬೇಕೋ ಗೊತ್ತಾಗದೆ ಗೊಂದಲ ಜತೆಗೆ ನಾನು ಶ್ರೀನಾಥ್ನನ್ನು ಪ್ರೀತಿಸುತ್ತೇನೆ ಎಂದು ಜಯಲಕ್ಷ್ಮಿ ಬಹಿರಂಗವಾಗಿ ಹೇಳಿಕೊಂಡಿರುತ್ತಾಳೆ. ಹೀಗಿರುವಾಗ ಏನೂ ಹೇಳಲಾಗದ ತಾಕಲಾಟ.
ಹೀಗಿರುವಾಗಲೇ ಜಯಲಕ್ಷ್ಮಿಯ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯುತ್ತದೆ. ಆ ಸಂದರ್ಭದಲ್ಲಿ ತನ್ನ ಮನಸಿನ ದುಗುಡವನ್ನೆಲ್ಲ ಈ ಹಾಡಿನ ಮೂಲಕ ತೋಡಿಕೊಳ್ಳುತ್ತಾರೆ ಶ್ರೀನಾಥ್. ಬದುಕಲ್ಲಿ, ಎಲ್ಲವೂ ನಾವು ಅಂದುಕೊಂಡಂತೆಯೇ ಆಗುವುದಿಲ್ಲ ಎಂದು ಹೇಳುತ್ತಲೇ, ನನ್ನ ಆಯ್ಕೆ ಎಂದೆಂದಿಗೂ ನೀನೇ ಎಂದೂ ಈ ಹಾಡಿನ ಮೂಲಕವೇ ಮಂಜುಳಾಗೆ ಹೇಳಿಬಿಡುತ್ತಾರೆ.
ಈ ಮಧುರ ಗೀತೆಯನ್ನು ಹೇಗೆ ಬರೆದಿರಿ ಎಂಬ ಪ್ರಶ್ನೆಗೆ ಶ್ಯಾಮಸುಂದರ ಕುಲಕಣರ್ಿಯವರು ಉತ್ತರಿಸಿದ್ದು ಹೀಗೆ: `ಬೆಸುಗೆ’ ಚಿತ್ರದ ನಿದರ್ೇಶನ ಗೀತಪ್ರಿಯ ಅವರದ್ದು. ತಮ್ಮ ಸಿನಿಮಾದ ಹಾಡುಗಳಲ್ಲಿ ವೈವಿಧ್ಯತೆ ಇರಲಿ ಎಂಬ ಆಸೆಯಿಂದಲೇ ಗೀತಪ್ರಿಯ ಅವರು ಮೂರ್ನಾಲ್ಕು ಮಂದಿಯಿಂದ ಹಾಡು ಬರೆಸುತ್ತಿದ್ದರು. ಜತೆಗೆ, ತಾವೂ ಬರೆಯುತ್ತಿದ್ದರು! ಪರಿಣಾಮ, ಅವರಿಗಿಂತ ನಾನು ಚನ್ನಾಗಿ ಬರೆಯಬೇಕೆಂಬ ಹಟ ಪ್ರತಿಯೊಬ್ಬ ಗೀತರಚನೆಕಾರನಿಗೂ ತಂತಾನೇ ಬಂದುಬಿಡುತ್ತಿತ್ತು. ಈ ಸ್ಪಧರ್ೆಯ ಒಟ್ಟು ಪರಿಣಾಮವೆಂದರೆ, ಚಿತ್ರದ ಎಲ್ಲ ಹಾಡುಗಳೂ ಒಂದಕ್ಕಿಂತ ಒಂದು ಇಂಪಾಗಿರುತ್ತಿದ್ದವು.
`ಬೆಸುಗೆ’ ಚಿತ್ರದ ಗೀತರಚನೆಯ ಕೆಲಸ ನಡೆದದ್ದು ಮದ್ರಾಸಿನ ಸ್ವಾಗತ್ ಹೋಟೆಲಿನ ರೂಂ. ನಂ. 108ರಲ್ಲಿ. ಅಲ್ಲಿಗೆ ಹಾಡು ಬರೆಯಲೆಂದು ಚಿ. ಉದಯಶಂಕರ್, ವಿಜಯ ನಾರಸಿಂಹ, ಆರ್.ಎನ್.ಜೆ. ಕೂಡ ಬಂದಿದ್ದರು. ಗೀತಪ್ರಿಯ ಹಾಗೂ ಸಂಗೀತ ನಿದರ್ೇಶಕ ವಿಜಯಭಾಸ್ಕರ್ ಕೂಡ ಅಲ್ಲಿದ್ದರು. ಎಲ್ಲರಿಗೂ ಅವರು ಬರೆಯಬೇಕಿರುವ ಹಾಡು ಮತ್ತು ಆ ಹಾಡು ಬರುವ ಸಂದರ್ಭವನ್ನು ವಿವರಿಸಿದ ಗೀತಪ್ರಿಯ-`ನೀವು ಏನಾದರೂ ಬರೆದುಕೊಳ್ಳಿ. ಆದರೆ ನಿಮ್ಮಗಳ ಹಾಡುಗಳಲ್ಲಿ `ಬೆಸುಗೆ’ ಎಂಬ ಪದವನ್ನು ಮಾತ್ರ ಬಳಸಬೇಡಿ. ಆ ಪದದ ಕಾಪಿರೈಟ್ನನ್ನದು…’ ಎಂದರು.
`ಸರಿ ಸರ್, ನೀವು ಹೇಳಿದಂತೆಯೇ ಆಗಲಿ’ ಎಂದು ಎಲ್ಲರ ಪರವಾಗಿ ಹೇಳಿದರು ಉದಯಶಂಕರ್. ನಂತರ ನಾಲ್ವರೂ ಟೇಬಲ್ನ ನಾಲ್ಕೂ ಮೂಲೆಗೆ ಕೂತು ಬರೆಯತೊಡಗಿದೆವು. ಆಗ ಉದಯಶಂಕರ್-ಯಾಕೋ ಸ್ವಲ್ಪ  ಇಕ್ಕಟ್ಟು  ಅನ್ನಿಸ್ತಿದೆ ಕಣ್ರೀ. ನಾನು ಕೆಳಗೆ ಕೂತು ಬರೀತೀನಿ. ಪ್ರಾಥಮಿಕ ಶಾಲೆಯಲ್ಲಿ ನೆಲದ ಮೇಲೆ ಕೂತು ಬರೆದು ನನಗೆ ಅಭ್ಯಾಸವಿದೆ’ ಅಂದರು. ಹಾಗೇ ಮಾಡಿದರು.
ವಿಜಯಭಾಸ್ಕರ್, ನನಗೆ ಮೊದಲೇ ಟ್ಯೂನ್ ಕೇಳಿಸಿದ್ದರು. ಆ ಟ್ಯೂನ್ ಗುನುಗುತ್ತಲೇ ಇಡೀ ಸಂದರ್ಭವನ್ನು ನೆನಪು ಮಾಡಿಕೊಂಡೆ. ಹುಟ್ಟುಹಬ್ಬ, ಮದುವೆ, ನಿಶ್ಚಿತಾರ್ಥ… ಇಂಥ ಸಮಾರಂಭಗಳು ಎಲ್ಲಿಯೇ ನಡೆಯಲಿ, ಅಲ್ಲೆಲ್ಲ  ಎಲ್ಲರ ಕಣ್ಣೂ ಹುಡುಗಿಯರ, ಅದರಲ್ಲೂ ಪ್ರಾಯದ ಹುಡುಗಿಯರ ಮೇಲೇ ಇರುತ್ತೆ. ತುಂಬು ಪ್ರಾಯದ ಕಾರಣಕ್ಕೆ ಆ ಹುಡುಗಿಯರೂ ಆಗಷ್ಟೇ ಅರಳಿದ ಹೂವಿನಂತೆ ಕಾಣ್ತಾ ಇರ್ತಾರೆ. ಇಂಥ ಸಂದರ್ಭದಲ್ಲಿ  ಯುವಕರು-`ಅವಳನ್ನು’ ಒಲಿಸಿಕೊಂಡರೆ ಹೇಗೆ ಎಂದು; ಹಿರಿಯರು ಈ ಹುಡುಗಿಯನ್ನು ತಮ್ಮ ಕಡೆಯವರಿಗೆ ತಂದುಕೋ ಹೇಗೆ ಎಂದು ಲೆಕ್ಕ ಹಾಕಿಬಿಡುತ್ತಾರೆ. ಆದರೆ, ಹೆಚ್ಚಿನ ಸಂದರ್ಭದಲ್ಲಿ ಅಂದುಕೊಂಡದ್ದೆಲ್ಲ ನಿಜವಾಗುವುದಿಲ್ಲ ಅನ್ನಿಸಿತು. ಇಂಥದೊಂದು ಯೋಚನೆ ಮನಸ್ಸಿಗೆ ಬಂದಾಕ್ಷಣವೇ ಹಾಡಿನ ಮೊದಲ ಸಾಲು ಹೊಳೆಯಿತು. ಅದನ್ನು ಬರೆದುಕೊಂಡೆ.
ನಂತರ, ಎರಡನೇ ಚರಣಕ್ಕೆ ಬಂದಾಗ-`ಒಂದು ಹೂವು ಅರಳಿತು’ ಎಂದು ಬರೆದಿದ್ದೆ. ಆ ಕ್ಷಣದಲ್ಲೇ ಬೆಸುಗೆ ಚಿತ್ರದಲ್ಲಿ ನಾಯಕಿಯ ಹೆಸರು `ಸುಮ’ ಎಂಬುದು ನೆನಪಿಗೆ ಬಂತು. ತಕ್ಷಣವೇ ಚರಣದ ಸಾಲನ್ನು `ಒಂದು ಸುಮವು ಅರಳಿತು’ ಎಂದು ಬದಲಿಸಿಕೊಂಡೆ. ಮುಂದೆ ನಾನು ಕಂಡಿದ್ದ, ಕೇಳಿದ್ದ ಭಗ್ನಪ್ರೇಮದ ವೇದನೆಯೆಲ್ಲಾ ಹಾಡಾಗಿ ಅರಳುತ್ತಾ ಹೋಯಿತು…. ಈಗ, ಬೆಸುಗೆ ಚಿತ್ರ ತೆರೆಕಂಡು 35 ವರ್ಷ ಕಳೆದು ಹೋಗಿದೆ. ಆದರೂ ಆ ಹಾಡಿನ ಜನಪ್ರಿಯತೆ ಹಾಗೆಯೇ ಇದೆ… ಹೀಗೆ ಹೇಳುತ್ತಾ ಭಾವಪರವಶರಾಗಿ ಮೌನವಾದರು ಕುಲಕಣರ್ಿ.
***
ಈ ಹಾಡು ಸೃಷ್ಟಿಸಿದ ಸಂಚಲನದ ಬಗ್ಗೆಯೂ ಇಲ್ಲಿ ನಾಲ್ಕು ಮಾತು ಹೇಳಬೇಕು. ಈ ಹಾಡು ಕೇಳಿದ ತಮಿಳಿನ ನಿಮರ್ಾಪಕರೊಬ್ಬರು, ನನಗೂ ಇದೇ ಹಾಡಿನ ಟ್ಯೂನ್ ಮತ್ತು ಸಾಹಿತ್ಯ ಬೇಕು ಎಂದು ವಿಜಯಭಾಸ್ಕರ್ ಅವರಿಗೆ ದುಂಬಾಲು ಬಿದ್ದರಂತೆ. ನಂತರ ಕುಲಕಣರ್ಿಯವರ ಹಾಡನ್ನೇ ತಮಿಳಿಗೂ ಅನುವಾದ ಮಾಡಿಸಿಕೊಂಡರಂತೆ. ಈ ವಿಷಯವನ್ನು ಕುಲಕಣರ್ಿಯವರಿಗೆ ಹೇಳಿದ ವಿಜಯಭಾಸ್ಕರ್, ತಮಿಳಿನ ಹಾಡನ್ನು ಹಾಡಿಯೂ ತೋರಿಸಿದರಂತೆ!
ಮತ್ತೊಂದು ತಮಾಷೆ ಕೇಳಿ: ಸುದೀಪ್ ನಾಯಕನಾಗಿದ್ದ `ಸ್ಪರ್ಶ’ ಚಿತ್ರ ನಿದರ್ೇಶಿಸಿದವರು ಸುನೀಲ್ಕುಮಾರ್ ದೇಸಾಯಿ. ಅವರು, ಗೀತೆರಚನೆಕಾರ ಆರ್.ಎನ್.ಜೆ. ಯವರ ಬಳಿ ಬಂದು ಹೇಳಿದರಂತೆ: `ಸಾರ್, ಈ ಹಿಂದೆ ನೀವು-ಯಾರ ಹೂವು ಯಾರ ಮುಡಿಗೊ’ ಎಂಬ ಫೆಂಟಾಸ್ಟಿಕ್ ಹಾಡು ಬರೆದಿದ್ದೀರ. ಅಂಥದೇ ಹಾಡು ನನಗೀಗ ಬೇಕು. ಆ ಸಾಲುಗಳನ್ನೇ ನೀವು ಬಳಸಿದ್ರೂ ಪರವಾಗಿಲ್ಲ’ ಅಂದರು.
ಈ ಮಾತಿನಿಂದ ತಬ್ಬಿಬ್ಬಾದ ಆರ್.ಎನ್. ಜೆ. `ದೇಸಾಯಿಯವರೆ, ಅದು ಫೆಂಟಾಸ್ಟಿಕ್ ಹಾಡು ಅನ್ನೋದೇನೋ ನಿಜ. ಆದರೆ, ಅದನ್ನು ಬರೆದದ್ದು ನಾನಲ್ಲ. ಅದು ಶ್ಯಾಮಸುಂದರ ಕುಲಕಣರ್ಿಯವರ ರಚನೆ’ ಅಂದರಂತೆ. ಅದಕ್ಕೆ ದೇಸಾಯಿ `ಸರಿಸರ್. ನನಗೆ ಅಂಥ ಹಾಡೇ ಬೇಕು’ ಎಂದರಂತೆ.
ಕಡೆಗೊಮ್ಮೆ ಆರ್.ಎನ್.ಜೆ.-` ಬರೆಯದ ಮೌನದ ಕವಿತೆ ಹಾಡಾಯಿತು’ ಎಂಬ ಹೊಸ ಹಾಡನ್ನೇ ಬರೆದುಕೊಟ್ಟರು. ಅದರಲ್ಲಿ `ಕುಲಕಣರ್ಿಯವರ -`ಯಾವ ಹೂವು ಯಾರ ಮುಡಿಗೊ’ ಎಂಬ ಸಾಲನ್ನೂ ಉಳಿಸಿಕೊಂಡರು!
ಈಗ ಹೇಳಿ, ಕಾಡುವ ಹಾಡುಗಳು ತೆರೆದಿಡುವ ಅಚ್ಚರಿಗಳಿಗೆ ಎಣೆಯುಂಟೆ?

‍ಲೇಖಕರು avadhi

March 30, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

೧ ಪ್ರತಿಕ್ರಿಯೆ

 1. udayadharmasthala

  ಒಳಗಿನವು ಹೊರಗಾಗುವಾಗ
  ಹೊರಗಿನವು ಒಳಗಾಗುತ್ತವೆ |
  ’ಮತ್ತು’ಗಳು ಮೆತ್ತಗಾಗುವಾಗ
  ಮುತ್ತುಗಳು ತುತ್ತುಗಳಾಗುತ್ತವೆ|
  ನೋಡಬೇಕೆಂಬ ’ಕಾಡು’ಗಳು
  ಕೂಡಿದಾಗ ಹಾಡುತ್ತವೆ |
  ಹೀಗಾಗುವುದಕ್ಕೆ ಹೆಸರು ’ಅರಳು’ ಅಂತ |
  ಹೇಗಾದರೂ ಉಳಿಸಿದರೆ ಅಂತದ್ದೆಲ್ಲ ನಮದು,ಸ್ವಂತ |

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: