ಮಣಿಕಾಂತ್ ಬರೆದಿದ್ದಾರೆ: ಮಂಗಳದಾ ಈ ಸುದಿನ ಮಧುರವಾಗಲಿ

6213_1079515355773_1462958320_30205965_5660699_n11112ಎ ಆರ್ ಮಣಿಕಾಂತ್

 

ಮಂಗಳದಾ ಈ ಸುದಿನ…
ಚಿತ್ರ: ನಾ ಮೆಚ್ಚಿದ ಹುಡುಗ. ಗೀತೆರಚನೆ: ಆರ್.ಎನ್. ಜಯಗೋಪಾಲ್
ಗಾಯನ: ಎಸ್. ಜಾನಕಿ. ಸಂಗೀತ: ವಿಜಯಭಾಸ್ಕರ್.
ಮಂಗಳದಾ ಈ ಸುದಿನ ಮಧುರವಾಗಲಿ
ನಿಮ್ಮೊಲವೆ ಈ ಮನೆಯ ನಂದಾದೀಪವಾಗಲಿ ||ಪ||
ಅನುರಾಗದ ರಾಗಮಾಲೆ ನಿಮ್ಮದಾಗಲಿ
ಅಪಸ್ವರದ ಛಾಯೆ ಎಂದೂ ಕಾಣದಾಗಲಿ
ಶ್ರುತಿಯೊಡನೆ ಸ್ವರ ತಾಳ ಲೀನವಾಗಲಿ
ಶುಭ ಗೀತೆ ಮಿಡಿಯಲೀ ||1||
ತಂದೆ-ತಾಯಿ ದಾರಿ ತೋರೊ ಕಣ್ಣುಗಳೆರಡು
ಅವರ ಪ್ರೇಮ ದೂರವಾಗೆ ಮಕ್ಕಳು ಕುರುಡು
ಮಮತೆ ಇರುವ ಮನೆಯೆ ಸದಾ ಜೇನಿನಗೂಡು
ಅದೇ ಶಾಂತಿಯ ಬೀಡು ||2||
ಈ ಸೋಜಿಗಕ್ಕೆ ಏನೆಂದು ಹೆಸರಿಡಬೇಕೋ ಅರ್ಥವಾಗುತ್ತಿಲ್ಲ. ಏಕೆಂದರೆ, ಕಾಡುವ ಹಾಡುಗಳ ಹಿಂದೆ ನಿಂತಾಗಲೆಲ್ಲ ಒಂದಲ್ಲ ಒಂದು `ಬೆರಗಿನ ಕಥೆ’ ಪ್ರತ್ಯಕ್ಷವಾಗುತ್ತಲೇ ಇದೆ. ಈ ಕಥೆಗಳ ಹಿಂದೆ ಸಂಭ್ರಮವಿದೆ, ಸಂಕಟವಿದೆ. ಹುಸಿಮುನಿಸಿದೆ. ಜಗಳವಿದೆ. ತಮಾಷೆಯಿದೆ. ಟೀಕೆ-ಟಿಪ್ಪಣಿಯಿದೆ. ಎಲ್ಲಕ್ಕಿಂತ ಮಿಗಿಲಾಗಿ, ನಂಬಲಾಗದಂಥ `ನಿಜ’ವಿದೆ.
ಸ್ವಾರಸ್ಯವೆಂದರೆ, ಹೀಗೆ ತಮ್ಮೊಳಗೇ ಒಂದು `ಗುಟ್ಟು’ ಇಟ್ಟುಕೊಂಡಿರುವ ಹಾಡುಗಳು ಬೆಳ್ಳಿತೆರೆಯ ಮೇಲೆ ಕೇವಲ ಐದಾರು ನಿಮಿಷಗಳ ಮಟ್ಟಿಗೆ ಮಾತ್ರ ಕಾಣಿಸಿಕೊಳ್ಳುತ್ತವೆ. ಯಾವುದೋ ಒಂದು ಸನ್ನಿವೇಶಕ್ಕೆ ಪೂರಕವಾಗಿ ಬಳಕೆಯಾಗುತ್ತವೆ. ಸಿನಿಮಾ ನೋಡಿದವರೆಲ್ಲ ಸಹಜವಾಗಿಯೇ ಹಾಡು ಬರುವ ಸಂದರ್ಭವನ್ನಷ್ಟೇ ನೆನಪು ಮಾಡಿಕೊಳ್ಳುತ್ತಾರೆ. ಸಿನಿಮಾ ನೋಡಿ ಹಿಂತಿರುಗಿದ ನಂತರವೂ ಆ ಹಾಡೆಂಬುದು ಗೆಳತಿಯ ಪಿಸುಮಾತಿನಂತೆ, ಕಂದನ ಮುಗುಳ್ನಗೆಯಂತೆ, `ಅವನ’ ನಿಟ್ಟುಸಿರ ಬಿಸಿಯಂತೆ, ಬಿಟ್ಟೂ ಬಿಡದೆ ನೆನಪಾದರೆ- ಈ ಹಾಡು `ಇಂಥ’ ಸಂದರ್ಭದಲ್ಲಿ ಸೃಷ್ಟಿಯಾಗಿರಬಹುದೇನೋ ಎಂದು ಜನ ಅಂದಾಜು ಮಾಡಿಕೊಳ್ಳುತ್ತಾರೆ. ಆದರೆ, ಸಿನಿಮಾದ ಸಂದರ್ಭಕ್ಕೂ, ಹಾಡು ಬರೆದಾಗಿನ ಕ್ಷಣಕ್ಕೂ ರವಷ್ಟೂ ಸಂಬಂಧವಿಲ್ಲ ಎಂದು ಮುಂದೆಂದೋ ಆಕಸ್ಮಿಕವಾಗಿ ಗೊತ್ತಾದಾಗ- `ಅರೆ, ಇದೆಲ್ಲಾ ನಿಜಾನಾ? ಹಾಡುಗಳು ಹುಟ್ಟುವ ಸಂದರ್ಭ ಹೀಗೆಲ್ಲ ಇರ್ತದಾ’ ಎಂದು ಅಚ್ಚರಿಯಿಂದ ಉದ್ಗರಿಸುತ್ತಾರೆ.
* * *
ದಶಕಗಳ ಹಿಂದೆ ಗೃಹಪ್ರವೇಶದ ಸಂದರ್ಭದಲ್ಲಿ; ಮದುವೆಯ ವಾಷರ್ಿಕೋತ್ಸವದಲ್ಲಿ, ಹುಟ್ಟುಹಬ್ಬದ ಸಂದರ್ಭದಲ್ಲಿ ತಪ್ಪದೇ ಕೇಳಿಬರುತ್ತಿದ್ದ ಹಾಡು `ಮಂಗಳದಾ ಈ ಸುದಿನ ಮಧುರವಾಗಲಿ…’ ಆರ್.ಎನ್. ಜಯಗೋಪಾಲ್ ಬರೆದ ಈ ಹಾಡು `ನಾ ಮೆಚ್ಚಿದ ಹುಡುಗ’ ಚಿತ್ರದ್ದು. ಈ ಹಾಡಿಗೆ, ಈಗ ಕಿವಿಯಾದರೂ ಏನೋ ಸಂತೋಷವಾಗುತ್ತದೆ. ಅವಿಭಕ್ತ ಕುಟುಂಬದ ಕಲ್ಪನೆಯೇ ನಾಶವಾಗುತ್ತಿರುವ; ಅಪ್ಪ-ಅಮ್ಮಂದಿರನ್ನು ಮರೆತು ಬದುಕಲು ಮಕ್ಕಳು ಮುಂದಾಗುತ್ತಿರುವ ಈ ದಿನಗಳಲ್ಲಿ ಈ ಹಾಡಿನ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಅನಿಸುತ್ತದೆ. ಸಂತೆಯಲ್ಲಿ ಅಡ್ಡಾಡುವವನನ್ನು ಕೂಡ ಮೈಮರೆತು ಕೇಳುವಂತೆ ಮಾಡುವ ಈ ಗೀತೆ ಗದ್ದಲದ ಮಧ್ಯೆಯೇ, ಗಡಿಬಿಡಿಯಲ್ಲೇ ಕೇವಲ ನಾಲ್ಕೇ ನಿಮಿಷದ ಅವಯಲ್ಲಿ ಅರಳಿಕೊಂಡದ್ದು ಅಂದರೆ ಅಚ್ಚರಿಪಡಬೇಡಿ. ಈ ಹಾಡಿನ ಹಿಂದಿರುವ ಕಥೆಯ ವಿವರಣೆ ಹೀಗೆ:
ಆರ್.ಎನ್. ಜಯಗೋಪಾಲ್ ಅವರ ತಂದೆಯ ಹೆಸರು ಆರ್. ನಾಗೇಂದ್ರರಾವ್. ಚಿತ್ರರಂಗದಲ್ಲಿ ಅರೆನ್ನಾರ್, ರಾಯರು, ನಾಗೇಂದ್ರರಾಯರು ಎಂದೆಲ್ಲಾ ಅವರಿಗೆ ಹೆಸರಿತ್ತು. ಕನ್ನಡದ ಮೊದಲ ವಾಕ್ಚಿತ್ರ `ಸತಿ ಸುಲೋಚನ’ದಲ್ಲಿ ಖಳನಾಗಿ ಮೆರೆದ ನಾಗೇಂದ್ರರಾವ್, ನಲವತ್ತರ ದಶಕದಲ್ಲಿಯೇ ಕನ್ನಡ ಚಿತ್ರರಂಗಕ್ಕೆ `ವೈಭವ’ದ ಬೆಸುಗೆ ಹಾಕಿದವರು. ಈ ಕಾರಣದಿಂದಲೇ ಅವರನ್ನು ಕನ್ನಡ ಚಿತ್ರರಂಗದ ಭೀಷ್ಮ ಎಂದೂ ಕರೆಯುವುದುಂಟು.
ಇಂಥ ಹಿನ್ನೆಲೆಯ ನಾಗೇಂದ್ರರಾಯರಿಗೆ 70 ವರ್ಷ ತುಂಬಿದ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಅಭಿನಂದಿಸಲು ಮುಂಬಯಿಯಲ್ಲಿ ಬ್ಯಾಂಕ್ ಮೆನೇಜರ್ ಆಗಿದ್ದ , ರಾಯರ ಅಭಿಮಾನಿ ಅನಂತ ಭಟ್ (ಮುಂದೆ ಇವರ ಮಗಳನ್ನೇ ಆರ್.ಎನ್.ಜೆ. ಮದುವೆಯಾದರು.) ಎಂಬುವರು ನಿರ್ಧರಿಸಿದರು. ನಂತರದ ಕೆಲವೇ ದಿನಗಳಲ್ಲಿ ಮುಂಬಯಿಯ ಷಣ್ಮುಗಾನಂದ ಹಾಲ್ನಲ್ಲಿ ಕಾರ್ಯಕ್ರಮಕ್ಕೆ ಮುಹೂರ್ತ ನಿಗದಿಪಡಿಸಿದ್ದೂ ಆಯಿತು. ಕಾರ್ಯಕ್ರಮಕ್ಕೆ ಆರೆನ್ನಾರ್ ಕುಟುಂಬದವರು ಮಾತ್ರವಲ್ಲ, ಸಂಗೀತ ನಿದರ್ೇಶಕ ವಿಜಯಭಾಸ್ಕರ್, ನಿದರ್ೇಶಕ ಲಕ್ಷ್ಮೀನಾರಾಯಣ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಿದ್ದರು.
ಈಗಿನಂತೆ, 60ರ ದಶಕದಲ್ಲೂ ಮುಂಬಯಿಯಲ್ಲಿ ತೀರಾ ಅಪರೂಪಕ್ಕೆ ಎಂಬಂತೆ ಕನ್ನಡದ ಕಾರ್ಯಕ್ರಮಗಳು ನಡೆಯುತ್ತಿದ್ದವು. ಬಹಳಷ್ಟು ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಕೊರತೆ ಇರುತ್ತಿತ್ತು. ಆದರೆ, ನಾಗೇಂದ್ರರಾವ್ ಅವರ ಖ್ಯಾತಿ ಎಂಥದಿತ್ತೆಂದರೆ, ಇರುವೆ ನುಸುಳಲೂ ಜಾಗವಿಲ್ಲ ಎಂಬಂತೆ ಷಣ್ಮುಗಾನಂದ ಹಾಲ್ನಲ್ಲಿ ಜನಸಂದಣಿಯಿತ್ತು. ಎಲ್ಲರೂ ರಾಯರನ್ನು ಹೊಗಳುವವರೇ. ಎಲ್ಲರೂ ಅವರ ಹಾರೈಕೆಗಾಗಿ ಹಂಬಲಿಸುವವರೇ. ಈ ಸಂದರ್ಭದಲ್ಲಿ ಮನರಂಜನೆಗೆಂದು ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಎಂಬಂತೆ ಅವತ್ತು ವಿಜಯಭಾಸ್ಕರ್ ಪಿಯಾನೋ ನುಡಿಸಿದರು. ಆರ್.ಎನ್. ಜಯಗೋಪಾಲ್ ವಯೋಲಿನ್ ಹಿಡಿದು `ಸಾಥ್’ ಕೊಟ್ಟರು.
ಸಂಗೀತ ಕಾರ್ಯಕ್ರಮ ಮುಗಿದ ನಂತರ ರಾಯರ ಅಭಿಮಾನಿಗಳು ಒಬ್ಬೊಬ್ಬರೇ ವೇದಿಕೆಗೆ ಬಂದು ರಾಯರಿಗೆ ಹಾರ-ಶಾಲು ಹೊದಿಸಿ ಗೌರವಿಸತೊಡಗಿದರು. ಈ ಸಂದರ್ಭದಲ್ಲಿಯೇ ನಾಗೇಂದ್ರರಾವ್-ರತ್ನಾಬಾಯಿ ದಂಪತಿಯನ್ನು ಒಟ್ಟಾಗಿ ಕೂರಿಸಿ ಪರಸ್ಪರರಿಗೆ ಹಾರ ಹಾಕಿಸುವ ಸಂಭ್ರಮವೂ ನಡೆಯಿತು. ಈ ವೇಳೆಗಾಗಲೇ ಪೂರ್ವನಿಧರ್ಾರಿತ ಮನರಂಜನಾ ಕಾರ್ಯಕ್ರಮಗಳೆಲ್ಲವೂ ಮುಗಿದು ಹೋಗಿದ್ದವು. ಜನ ಒಬ್ಬೊಬ್ಬರೇ ಹಾರ ಹಾಕುತ್ತಿರುವಾಗ ಉಳಿದವರು ಸುಮ್ಮನೇ ಕೂತಿದ್ದರೆ ಅವರಿಗೂ ಬೋರ್ ಆಗಬಹುದು. ಅವರ ಖುಷಿಗೆಂದೇ ಒಂದು ಹಾಡು ಬರೆದರೆ ಹೇಗೆ ಎಂಬ ಐಡಿಯಾ ಆರ್.ಎನ್.ಜೆ. ಅವರಿಗೆ ಬಂತು. ತಕ್ಷಣವೇ ವಿಜಯಭಾಸ್ಕರ್ ಬಳಿ ಹೋಗಿ- `ಸಾರ್, ಹೀಗೆ ಮಾಡಿದ್ರೆ ಹೇಗೆ?’ ಎಂದರು. `ಬಹಳ ಒಳ್ಳೇ ಐಡಿಯಾ. ಬೇಗ ಬರೀರಿ. ನಾನು ಮ್ಯೂಸಿಕ್ ಕಂಪೋಸ್ ಮಾಡ್ತೇನೆ’ ಎಂದರು ವಿಜಯಭಾಸ್ಕರ್.
ಆ ಸಮಾರಂಭದ ಗಿಜಿಗಿಜಿಯನ್ನೆಲ್ಲ ಒಂದರೆಕ್ಷಣ ಮರೆತು, ಏನು ಬರೆಯಲಿ? ಹೇಗೆ ಆರಂಭಿಸಲಿ ಎಂದು ಯೋಚಿಸಿದರು. ಆಗಲೇ ಅವರಿಗೆ- ವೇದಿಕೆಯಲ್ಲಿ ನವ ವಧೂ-ವರರಂತೆ ಕೂತಿದ್ದ ತಂದೆ-ತಾಯಿ ಕಾಣಿಸಿದರು. ಅಷ್ಟೆ. ಆ ಕ್ಷಣದ ಮಟ್ಟಿಗೆ ಅವರಿಗೆ ಹಾಡು ಬರೆಯಬೇಕೆಂಬ ಸಂಗತಿಯೇ ಮರೆತುಹೋಯಿತು. ನಾಚುತ್ತಾ ಕೂತಿರುವ ಅಮ್ಮ, ಹೆಮ್ಮೆಯಿಂದ ಬೀಗುತ್ತಿರುವ ತಂದೆಯ ಮೊಗವನ್ನು ಕಂಡವರೇ- ಆ ಕ್ಷಣದ ಖುಷಿಯೇ ನಮ್ಮ ಬದುಕಿಡೀ ಇರಲಿ, ತಾಯ್ತಂದೆಯ ಒಲುಮೆ ನಮ್ಮನ್ನು ಸದಾ ಕಾಪಾಡಲಿ, ಗೆಳೆಯರು, ಬಂಧುಗಳು, ಅಭಿಮಾನಿಗಳ ಪ್ರೀತಿಯಿಂದ ನಮ್ಮ ಮನೆ ತುಂಬಿಹೋಗಲಿ. ಅದು ನಂದಗೋಕುಲದಂತಿರಲಿ ಎಂದು ನಿಂತಲ್ಲಿಯೇ ಭಾವುಕರಾಗಿ ಪ್ರಾಥರ್ಿಸಿದರು ಜಯಗೋಪಾಲ್.
ಸ್ವಾರಸ್ಯವೆಂದರೆ, ಆಗಲೇ – `ಊರ ಜಾತ್ರೆಯಲ್ಲಿ ಸದ್ದು ಮಾಡದೇ ಬಂದು ಕೈ ಎಳೆದು ಆಪ್ತಮಿತ್ರನೊಬ್ಬ ಶಾಕ್ ಕೊಡುತ್ತಾನಲ್ಲ? ಹಾಗೆ- `ಮಂಗಳದಾ ಈ ಸುದಿನ ಮಧುರವಾಗಲಿ’ ಎಂಬ ದಿವ್ಯ ಸಾಲೊಂದು ಆರ್.ಎನ್. ಜೆ.ಯವರ ಕೈ ಹಿಡಿಯಿತು. ಆಗಲೇ, ಮತ್ತೆ ಮತ್ತೆ ತಂದೆ-ತಾಯಿಯನ್ನೇ ನೋಡುತ್ತ `ನಿಮ್ಮೊಲವೆ ಈ ಮನೆಯ ನಂದಾದೀಪವಾಗಲಿ’ ಎಂಬ ಇನ್ನೊಂದು ಸಾಲನ್ನು ಬರೆದೇಬಿಟ್ಟರು ಜಯಗೋಪಾಲ್.
ಮುಂದೆ, ಸಮಾರಂಭಕ್ಕೆ ಬಂದವರೆಲ್ಲ ಹಾರೈಕೆಯನ್ನೂ, ಕಿವಿಮಾತನ್ನೂ ಒಟ್ಟಿಗೇ ಹೇಳಿದಂತಿರುವ ಸಾಲು ಬೇಕು ಅನ್ನಿಸಿತು. ಆಗ `ಅನುರಾಗದ ರಾಗ ಮಾಲೆ ನಿಮ್ಮದಾಗಲಿ/ ಅಪಸ್ವರದಾ ಛಾಯೆ ಎಂದೂ ಕಾಣದಾಗಲಿ’ ಎಂದು ಬರೆದರು! ಆ ನಂತರದಲ್ಲಿ ಹಾಡೆಂಬುದು ಒಲವಿನ ಯಮುನಾ ನದಿಯಂತೆ ಬೆಳೆಯುತ್ತಾ ಹೋಯಿತು. `ಮನರಂಜನೆಯ ಏಕೈಕ ಉದ್ದೇಶದಿಂದ ಕೇವಲ ನಾಲ್ಕೇ ನಿಮಿಷದಲ್ಲಿ ಹಾಡು ಬರೆದ ಜಯಗೋಪಾಲ್, ನಂತರ ಅದನ್ನು ವಿಜಯಭಾಸ್ಕರ್ ಅವರಿಗೆ ದಾಟಿಸಿದರು. ನಿಂತ ನಿಲುವಿನಲ್ಲೇ ಅದಕ್ಕೆ ಟ್ಯೂನ್ ಮಾಡಿದ ವಿಜಯಭಾಸ್ಕರ್, ಸಮಾರಂಭದಲ್ಲಿ ಅದನ್ನು ಮಧುರವಾಗಿ ಹಾಡಿ, ಎಲ್ಲರ ಚಪ್ಪಾಳೆ ಗಿಟ್ಟಿಸಿದರು.
ಇದಿಷ್ಟೂ ನಡೆದದ್ದು 1966ರಲ್ಲಿ.
ಆರು ವರ್ಷಗಳ ನಂತರ, ಅಂದರೆ 1972ರಲ್ಲಿ ವಾದಿರಾಜ್-ಜವಾಹರ್ ನಿಮರ್ಾಣ-ನಿದರ್ೇಶನದ `ನಾ ಮೆಚ್ಚಿದ ಹುಡುಗ’ ಚಿತ್ರ ಆರಂಭವಾಯಿತು. ಅದಕ್ಕೆ ಚಿತ್ರಕಥೆ-ಸಂಭಾಷಣೆ-ಗೀತೆರಚನೆಯ ಹೊಣೆ ಜಯಗೋಪಾಲ್ ಹೆಗಲೇರಿತು. ಒಂದೆರಡು ದಿನಗಳ ನಂತರ ಆರ್.ಎನ್.ಜೆ. ಬಳಿ ಬಂದ ವಾದಿರಾಜ್- `ಸಾರ್, ಚಿತ್ರದಲ್ಲಿ ಒಂದು ಪಾತ್ರ ಮಾಡಬೇಕೆಂಬ ಮನಸಾಗಿದೆ. ನಿದರ್ೇಶನ-ನಟನೆ ಎರಡನ್ನೂ ನಿಭಾಯಿಸೋದು ನನ್ನಿಂದ ಕಷ್ಟ. ಹಾಗಾಗಿ ನಿದರ್ೇಶನದ ಹೊಣೆಯನ್ನೂ ನೀವೇ ಹೊತ್ಕೊಳ್ಳಿ’ ಎಂದರಂತೆ. ಪರಿಣಾಮ, ಆರ್.ಎನ್.ಜೆ. ನಿದರ್ೇಶಕನೂ ಆದರು.
ಇಂಗ್ಲಿಷ್ ಲೇಖಕ ವೈದ್ಯನಾಥನ್ ಅವರ `ಇಂಡಿಯನ್ ಡಿಯರ್ಸ್’ ಹೆಸರಿನ ಕಥೆ ಆಧರಿಸಿದ ಚಿತ್ರ `ನಾ ಮೆಚ್ಚಿದ ಹುಡುಗ’. ಅದರಲ್ಲಿ ಅಶ್ವತ್ಥ್-ಲೀಲಾವತಿ ಕುಟುಂಬದ ಹಿರಿಯರ ಪಾತ್ರದಲ್ಲಿದ್ದರು. ಅವರ ದಾಂಪತ್ಯಕ್ಕೆ 25 ವರ್ಷ ತುಂಬಿದಾಗ ಅಭಿನಂದಿಸಲೆಂದು ಕುಟುಂಬದ ಎಲ್ಲ ಸದಸ್ಯರೂ ಬಂದಿರುತ್ತಾರೆ. ಅವರ ಸಮ್ಮುಖದಲ್ಲಿ ಕಥಾನಾಯಕಿ ಕಲ್ಪನಾ ಹಾಡಲು ಒಂದು ಗೀತೆ ಬೇಕು…
ಈ ವಿಷಯವಾಗಿ ಚಚರ್ೆಗೆ ಕೂತಾಗ ಆರ್ಎನ್ಜೆಯವರಿಗೆ ತಕ್ಷಣವೇ ಮುಂಬಯಿಯ ಸಮಾರಂಭ, ಆ ಗಡಿಬಿಡಿಯ ಮಧ್ಯೆಯೇ ತಾವು ಬರೆದ ಹಾಡು, ಅದನ್ನು ವಿಜಯಭಾಸ್ಕರ್ ಹಾಡಿದ ಧಾಟಿ, ಅದಕ್ಕೆ ಪ್ರತಿಕ್ರಿಯೆಯಾಗಿ ಬಂದ ಚಪ್ಪಾಳೆಯ ಸದ್ದು ನೆನಪಾಯಿತು. ಅದನ್ನೇ ವಾದಿರಾಜ್ ಅವರಿಗೆ ಹೇಳಿದರು. ಆರ್.ಎನ್.ಜೆ. ಪ್ರತಿಭೆಯ ಮೇಲೆ ಅಪಾರ ವಿಶ್ವಾಸ ಹೊಂದಿದ್ದ ವಾದಿರಾಜ್- `ನಿಮ್ಮ ಮಾತಿಗೆ ನಾನು ಯಾವತ್ತಾದ್ರೂ ಇಲ್ಲ ಅಂದಿದೀನಾ ಸಾರ್? ಅಗತ್ಯವಾಗಿ ಅದೇ ಹಾಡು ಬಳಸೋಣ’ ಎಂದರು.
ಮುಂದೆ, ಅಲ್ಪಸ್ವಲ್ಪ ಬದಲಾವಣೆ ಮಾಡಿ ಹಾಡಿಗೆ `ಹೊಸ ಟಚ್’ ನೀಡಿದರು ಜಯಗೋಪಾಲ್. ದೇವತೆಗಳೂ ಒಪ್ಪುವಂತೆ ಆ ಹಾಡಿಗೆ ದನಿಯಾದ ಎಸ್. ಜಾನಕಿ, ಆ ಮೂಲಕ `ಮಂಗಳದಾ ಈ ಸುದಿನ’ವನ್ನು ಮನೆಮನೆಯ ಹಾಡಾಗಿಸಿಬಿಟ್ಟರು.
ಈಗ ಹೇಳಿ, ಮುಂಬಯಿಯಲ್ಲಿ ಆಕಸ್ಮಿಕವಾಗಿ ಹುಟ್ಟಿಕೊಂಡ ಗೀತೆಯೊಂದು ಈಗಲೂ `ಅಮರಗೀತೆ’ಯಾಗಿಯೇ ಉಳಿದಿದೆಯಲ್ಲ? ಅದು ಸ್ವಾರಸ್ಯವಲ್ಲವೆ, ಸೋಜಿಗವಲ್ಲವೆ?

‍ಲೇಖಕರು avadhi

November 6, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Ganesh Shenoy

    Mani is really doing a fabulous job by digging into our Kannada film land’s geology and bringing for us from the mines of its memories the silvers, gold, and diamonds in the form of these unforgettable and ever-lovable and adorable songs. Hats off Mani! Do keep it up! We need and expect more from your excavations.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: