ಮಣಿಕಾಂತ್ ಬರೆದಿದ್ದಾರೆ: ಸುತ್ತಮುತ್ತಲು ಸಂಜೆ ಕತ್ತಲು

ಎ  ಆರ್  ಮಣಿಕಾಂತ್
ಚಿತ್ರ: ಪರಾಜಿತ
ಗೀತೆರಚನೆ: ಶ್ಯಾಮಸುಂದರ ಕುಲಕರ್ಣಿ

ಸಂಗೀತ: ರಾಜನ್-ನಾಗೇಂದ್ರ. ಗಾಯನ: ಎಸ್.ಪಿ. ಶೈಲಜ
ಸುತ್ತಮುತ್ತಲು ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯಮುಟ್ಟಲು
ಇಲ್ಲೆ ಬಂತು ಸ್ವರ್ಗಾ
ಎಲ್ಲ ಓಲಾಡುವಾ, ಎಲ್ಲ ತೇಲಾಡುವಾ
ಕುಣಿಯೋಣ, ನಲಿಯೋಣ, ಮತ್ತೇರೀ ||ಪ||
ನಿನ್ನೆಯ ನಾಳೆಯ ಚಿಂತೆ ನಮಗೇಕೆ ಇಂದು
ಜಾರುವ ಮುನ್ನವೆ ಸವಿಯೋಣ ತಾರುಣ್ಯವನ್ನು
ಕಣ್ಣಿಗೆ ಹಬ್ಬವು ಇಂದು ಈ ಅಂದ ಚೆಂದ
ಬಿಟ್ಟರೆ ಸಿಗದು ಇನ್ನೆಲ್ಲೂ ಇಂಥ ಆನಂದ
ಅತ್ತ ಇತ್ತ ಓಡುವಂಥ ಚಿತ್ತವನ್ನು ಕಟ್ಟಿ ಇಟ್ಟು ನಲಿವಾ  ||1||
ಹೆಣ್ಣು ಗಂಡಿನ ಬೇಧ ಇಲ್ಲೆಲ್ಲೂ ಇಲ್ಲ
ಮತ್ತಲ್ಲೇ ಮೋಜಿನ ಮಧುವ ಹೀರೋಣ ನಾವೆಲ್ಲ
ಚಿಮ್ಮಿದೆ ಹೊಮ್ಮಿದೆ ಆಸೆ ನಮ್ಮಲ್ಲಿ ಇಂದು
ತಂದಿದೆ ಯೌವನ ಎಲ್ಲ ಸಂತೋಷ ನಮಗಿಂದು
ಕಣ್ಣಿನಲ್ಲಿ ಕಣ್ಣನಿಟ್ಟು ಲಜ್ಜೆ ಬಿಟ್ಟು ಹೆಜ್ಜೆ ಇಟ್ಟು ಕುಣಿವಾ   ||2||
ಕನ್ನಡಿಗರು ಎಂದೆಂದೂ ಮರೆಯಲಾಗದಂಥ ಚಿತ್ರಗಳನ್ನು ನಿರ್ದೇಶಿಸಿದವರು ಸಿದ್ಧಲಿಂಗಯ್ಯ. ಬಂಗಾರದ ಮನುಷ್ಯ, ಭೂಲೋಕದಲ್ಲಿ ಯಮರಾಜ, ಬಿಳಿಗಿರಿಯ ಬನದಲ್ಲಿ, ಭೂತಯ್ಯನ ಮಗ ಅಯ್ಯು, ನ್ಯಾಯವೇ ದೇವರು, ಕೂಡಿ ಬಾಳಿದರೆ ಸ್ವರ್ಗಸುಖ, ಹೇಮಾವತಿ, ಪ್ರೇಮಪರ್ವ, ಅಜೇಯ… ಇಂಥವೇ  ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿದ್ದು ಸಿದ್ಧಲಿಂಗಯ್ಯನವರ ಹೆಗ್ಗಳಿಕೆ. ತಮ್ಮ ಪ್ರತಿಯೊಂದು ಚಿತ್ರದಲ್ಲೂ ಸಮಾಜಕ್ಕೆ ಒಂದು ಸಂದೇಶ ನೀಡುತ್ತಿದ್ದ ಸಿದ್ಧಲಿಂಗಯ್ಯನವರು, ಚಿತ್ರರಂಗಕ್ಕೆ ಹೊಸಬರನ್ನು ಪರಿಚಯಿಸುವುದರಲ್ಲಿ ಸದಾ ಮುಂದಿದ್ದವರು. ದಶಕದ ಹಿಂದೆ ತೆಲುಗು ಚಿತ್ರರಂಗದ ಸ್ಟಾರ್ ಖಳನಾಯಕ ಎನಿಸಿಕೊಂಡ ಚರಣ್ರಾಜ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದು ಇದೇ ಸಿದ್ಧಲಿಂಗಯ್ಯ.
80ರ ದಶಕದಲ್ಲಿ ಎಲ್ಲರನ್ನು ಒಂದು ಗುಂಗಿನಂತೆ ಕಾಡಿದ ಕ್ಯಾಬರೆ ಹಾಡು `ಪರಾಜಿತ’ ಚಿತ್ರದ `ಸುತ್ತಮುತ್ತಲು ಸಂಜೆ ಕತ್ತಲು…’ ಈ ಚಿತ್ರದ ನಿರ್ದೇಶಕರು ಇದೇ ಸಿದ್ಧಲಿಂಗಯ್ಯ. (ಚರಣ್ ರಾಜ್ ಬೆಳ್ಳಿತೆರೆಗೆ ಬಂದದ್ದೇ ಈ ಚಿತ್ರದಿಂದ) ಈ ಕ್ಯಾಬರೆ ಹಾಡು ಬರೆದವರು ಶ್ಯಾಮಸುಂದರ ಕುಲಕರ್ಣಿ. ಚಿತ್ರರಂಗದ ಮಂದಿಯಿಂದ ಆಜಾತ ಶತ್ರು ಎಂದು ಕರೆಸಿಕೊಂಡ ಕುಲಕರ್ಣಿಯವರು ಮೂಲತಃ ಪತ್ರಕರ್ತರು. ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಹಾಗೂ ಸಿನಿಮಾ ರಂಜನೆ ವಿಭಾಗದ ಮುಖ್ಯಸ್ಥರಾಗಿ ಇಪ್ಪತ್ತು ವರ್ಷ ದುಡಿದ ಕುಲಕರ್ಣಿಯವರು, ನಂತರದ ಹತ್ತು ವರ್ಷ `ತರಂಗ’ ಪತ್ರಿಕೆಯ ಸಿನಿಮಾ ಪ್ರತಿನಿಯೂ ಆಗಿದ್ದರು.
ಕುಲಕರ್ಣಿಯವರು ಹಾಡು ಬರೆದ ಮೊದಲ ಸಿನಿಮಾದ ಹೆಸರು `ಛಲಗಾರ’. ಈ ಚಿತ್ರಕ್ಕೆ ಅವರು, ಸೂರ್ಯೋದಯದ ಚೆಲುವನ್ನು ವಣರ್ಿಸುವ-`ಮೂಡಣದಾ ರವಿ, ಮೂಡಲು ಮಮತೆಯಲೀ..’ ಎಂಬ ಹಾಡು ಬರೆದರು.ಕುಲಕರ್ಣಿಯರು ಮೆಲುಮಾತಿನ, ಮಗು ಮನಸ್ಸಿನ ಭಾವಜೀವಿ. ದನಿ ಎತ್ತರಿಸಿ ಮಾತನಾಡಿ ಅವರಿಗೆ ಅಭ್ಯಾಸವೇ ಇಲ್ಲ. ಧೂಮಪಾನದಿಂದ ಅವರು ದೂರ ದೂರ. ಇಂಥ ಹಿನ್ನೆಲೆಯಿದ್ದರೂ  ಅವರು ಎಂಥವರನ್ನೂ ಒಂದು ಗುಂಗಾಗಿ ಕಾಡುವಂಥ-`ಸುತ್ತ ಮುತ್ತಲೂ ಸಂಜೆ ಕತ್ತಲು/ ಮೆತ್ತ ಮೆತ್ತಗೆ ಮೈಯ ಮುಟ್ಟಲು ಇಲ್ಲೆ ಬಂತು ಸ್ವರ್ಗಾ….’ ಎಂಬ ಕ್ಯಾಬರೆ ಹಾಡು ಬರೆದರು.
ಕುತೂಹಲವಿದ್ದುದೇ ಅಲ್ಲಿ. ಕುಲಕಣರ್ಿಯವರು ಈ ಹಾಡನ್ನು ಹೇಗೆ ಬರೆದರು? ಈ ಹಾಡು ಕೇಳುತ್ತಿದ್ದರೆ ಸಾಕು, ನಾವೇ ಕ್ಯಾಬರೆಯಲ್ಲಿ ಕೂತಿದ್ದೇವೇನೋ; ಈ ಹಾಡು ಹೇಳಿಕೊಂಡು ವಯ್ಯಾರದ ಹೆಣ್ಣೊಬ್ಬಳು ಕುಣಿಯುತ್ತಿದ್ದಾಳೇನೋ! ಅವಳನ್ನು ಆಗೊಮ್ಮೆ ಈಗೊಮ್ಮೆ ಆಕಸ್ಮಿಕವಾಗಿ (?!) ಮುಟ್ಟಿ ನಾವೂ ಮತ್ತೇರಿಸಿಕೊಂಡು ಹಗುರಾಗುತ್ತಿದ್ದೇವೇನೊ ಅನ್ನಿಸುತ್ತದೆ. ಹೀಗಿರುವಾಗ, ಈ ಹಾಡು ಬರೆವಾಗ ಕುಲಕರ್ಣಿಯವರ ಮನಃಸ್ಥಿತಿ ಹೇಗಿತ್ತು? ಇಡೀ ಸನ್ನಿವೇಶವನ್ನು ಅವರು ಹೇಗೆ ಆವಾಹಿಸಿಕೊಂಡರು?
ಇಂಥವೇ ಕುತೂಹಲದ ಪ್ರಶ್ನೆಗಳೊಂದಿಗೆ ಎದುರು ನಿಂತಾಗ ಕುಲಕರ್ಣೀಯವರು ಹೇಳಿದ್ದಿಷ್ಟು: ಅದೊಂದು ದಿನ ಸಿದ್ಧಲಿಂಗಯ್ಯನವರು ಕರೆ ಕಳಿಸಿದರು. ಮದ್ರಾಸಿಗೆ ಹೋದೆ, ಅಲ್ಲಿ `ಪರಾಜಿತ’ ಚಿತ್ರದ ಕಥೆ ಹೇಳಿದ ಸಿದ್ದಲಿಂಗಯ್ಯ-` ನೋಡಿ ಕುಲಕರ್ಣಿಯವರೇ, ಸಿನಿಮಾ ಅನ್ನೋದು ಒಂದು ಸಂತೆ ಇದ್ದ ಹಾಗೆ. ಅಲ್ಲಿಗೆ ಎಲ್ಲ ಬಗೆಯ ಜನರೂ ಬರುತ್ತಾರೆ. ಅವರಿಗೆ ಬೇಕಿರುವುದನ್ನು ಕೊಂಡೊಯ್ಯುತ್ತಾರೆ. ಆದ್ದರಿಂದ ಒಂದು ಸಿನಿಮಾದಲ್ಲಿ ಹಾಡು, ನೃತ್ಯ, ಪೈಟ್, ಕಥೆ, ಕಣ್ಣೀರು… ಹೀಗೆ ಎಲ್ಲವೂ ಇರಬೇಕು. ನಿಮಗೆ ಇಷ್ಟೆಲ್ಲಾ ವಿವರಿಸಿ ಹೇಳಿದ್ದು ಯಾಕೆ ಗೊತ್ತಾಯ್ತಾ? `ಪರಾಜಿತ’ ಚಿತ್ರಕ್ಕೆ ಒಂದು ಕ್ಯಾಬರೆ ಹಾಡು ಬೇಕು. ಅದನ್ನು ನೀವೇ ಬರೆಯಬೇಕು ಎಂದರು. ಹಿಂದೆಯೇ ತಮ್ಮ ಚಿತ್ರದ ಸಂಗೀತ ನಿರ್ದೇಶಕರಾದ ರಾಜನ್-ನಾಗೇಂದ್ರ ಅವರನ್ನು ಪರಿಚಯಿಸಿದರು.
ರಾಜನ್-ನಾಗೇಂದ್ರ ಆ ಕಾಲಕ್ಕೆ ದೊಡ್ಡ ಹೆಸರು ಮಾಡಿದ್ದವರು. ನಾನೋ ಇಂಡಸ್ಟ್ರೀಗೇ ಹೊಸಬ. ಹೀಗಿರುವಾಗ ಅವರ ಮುಂದೆ ಕೂತು ಹಾಡು ಬರೆಯಲು ಫಜೀತಿ ಆಗುತ್ತೆ ಅನ್ನಿಸಿತು. ಅದನ್ನೇ ಸಿದ್ಧಲಿಂಗಯ್ಯ ಅವರಿಗೆ ಹೇಳಿದೆ. ಅವರು- `ಅವಸರವೇನಿಲ್ಲ. ನೀವು ಬೇಕಾದ್ರೆ ಇಪ್ಪತ್ತು ದಿನ ಟೈಂ ತಗೊಳ್ಳಿ. ಆದರೆ  ಒಂದು ಒಳ್ಳೆಯ ಹಾಡು ಕೊಡಿ’ ಎಂದರು.  ಒಂದು ಹಾಡು ಬರೆಯಲು ಇಪ್ಪತ್ತು ದಿನ ತಗೊಳ್ಳೋದು ಒಳ್ಳೆಯ ಲಕ್ಷಣವಲ್ಲ ಅನ್ನಿಸ್ತು. ಹಾಗಾಗಿ, ಅಷ್ಟೆಲ್ಲ ಸಮಯ ಬೇಕಲ್ಲ ಸಾರ್. ಇವತ್ತೇ ಬರೀತೇನೆ ಅಂದೆ. `ಸರಿ. ನಾಳೆ ಬೆಳಗ್ಗೆ ರೆಕಾರ್ಡಿಂಗ್ ಇದೆ. ಅಷ್ಟರೊಳಗೆ ನೀವು ಹಾಡು ಕೊಟ್ಟರೆ ಸಾಕು ಎಂದರು ಸಿದ್ಧಲಿಂಗಯ್ಯ.
ನಂತರದ ಕ್ಷಣಗಳಲ್ಲಿ ಎಲ್ಲರೂ ವಿಷಯ ಮರೆತವು. ನಾವು ಠಿಕಾಣಿ ಹೂಡಿದ್ದುದು ಮದ್ರಾಸಿನ ಸ್ವಾಗತ್ ಹೋಟೆಲಿನಲ್ಲಿ.  ಬಾಲ್ಕನಿಯಲ್ಲಿ ಮಾತಾಡುತ್ತಾ ಕೂತಿದ್ದಾಗಲೇ ಹೊತ್ತು ಕಳೆದು ಹೋಯಿತು.  ಆದರೆ, ಬೆಳಗಿಂದ ನನ್ನೊಳಗೆ ಹಾಡಿನ ಸಾಲು ಹುಟ್ಟಿರಲೇ ಇಲ್ಲ. ಹಾಗಾಗಿ,  ಅದು ಸೂರ್ಯಾಸ್ತದ ಹೊತ್ತು. ಮುಳುಗುತ್ತಿದ್ದ ಸೂರ್ಯನನ್ನೇ ನೋಡುತ್ತಿದ್ದ ನಾನು-ಸಾರ್, ಸೂರ್ಯ ಮುಳುಗ್ತಾ ಇದಾನೆ, ಸುತ್ತಮುತ್ತಲೂ ಸಂಜೆ ಕತ್ತಲು ಆಗ್ತಾ ಇದೆ. ನಾನೂ ಕತ್ತಲಲ್ಲಿ ಇದೀನಿ. ಏನೂ ಕಾಣಿಸ್ತಾ ಇಲ್ಲ. ಹಾಡು ಬರೆಯಲು ಏನೂ ತೋಚುತ್ತಾ ಇಲ್ಲ..! ಎಂದೆ.
ತಕ್ಷಣವೇ ರಾಜನ್ ಹೇಳಿದರು: `ಅರರೆ, ಸುತ್ತಮುತ್ತಲು ಸಂಜೆ ಕತ್ತಲು… ಈ ಪದಗಳ ಬಹಳ ಚನ್ನಾಗಿವೆ ಕಣ್ರೀ. ನೀವು ಈ ಜಾಡಿನಲ್ಲಿಯೇ ಮುಂದುವರಿಯಿರಿ. ಒತ್ತಕ್ಷರಗಳನ್ನು ಇಟ್ಟುಕೊಂಡೇ ಹಾಡು ಬರೀರಿ. ಇಲ್ಲಿನತನಕ ಯಾರೂ ಇಂಥ ಪ್ರಯೋಗ ಮಾಡಿಲ್ಲ. ಹಾಗಾಗಿ ಇದು ಹೊಸ ಪ್ರಯೋಗ ಆಗುತ್ತೆ’ ಎಂದರು. ರಾಜನ್ರ ಸಲಹೆಗೆ ಒಪ್ಪಿಕೊಂಡೆ ನಿಜ. ಆದರೆ ಒತ್ತಕ್ಷರಗಳನ್ನು ಬಳಸಿ ಹಾಡು ಬರೀಬೇಕು ಎಂಬುದು ನೆನಪಾದಾಗ ನಾನೇ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಹಾಗಾಯ್ತು’ ಎಂದುಕೊಂಡು ಒದ್ದಾಡಿಹೊದೆ….ಮರುದಿನವೇ ಹಾಡುಗಳ ರೆಕಾರ್ಡಿಂಗ್ ಇತ್ತು. ಆಗ ಈಗಿನಂತೆ ಹೆಚ್ಚಿನ ತಾಂತ್ರಿಕ ಸೌಲಭ್ಯ ಇರಲಿಲ್ಲ. ಹಾಗಾಗಿ ಗಾಯಕರು, ಸಂಗೀತ ನಿರ್ದೇಶಕರು, ಆರ್ಕೆಸ್ಟ್ರಾದವರು ಒಂದು ದಿನ ಜತೆಯಾಗಿ ಸೇರಿ ರೆಕಾರ್ಡಿಂಗ್ ಮುಗಿಸುತ್ತಿದ್ದರು. ಒಂದು ವೇಳೆ ನಾನು ಬರೆಯದೇ ಹೋದರೆ, ಅವಕಾಶ ಕೈ ತಪ್ಪುತ್ತಿತ್ತು ಅಥವಾ ಈ ಒಂದು ಹಾಡಿಗಾಗಿಯೇ ಬೇರೊಂದು ದಿನ ರೆಕಾರ್ಡಿಂಗ್ ನಡೆಯಬೇಕಿತ್ತು. ಇದನ್ನು ತಪ್ಪಿಸಲು ರಾತ್ರಿ ಹಾಡು ಬರೆದೇ ಬಿಡಬೇಕು ಎಂದು ನಿರ್ಧರಿಸಿದೆ. ಬರೆಯಬೇಕಿದ್ದುದು ಕ್ಯಾಬರೆ ಹಾಡು ತಾನೆ? ಹಾಗಾಗಿ ಕ್ಯಾಬರೆಯಲ್ಲಿ ಕುಣಿಯುವ ಹುಡುಗಿ ಹೇಗೆಲ್ಲಾ ಹಾಡಬಹುದು, ಮಾತಾಡಬಹುದು ಎಂದೆಲ್ಲಾ ಯೋಚಿಸಿದೆ. ಕ್ಯಾಬರೆಗೆ ಹೋಗಿ ಬಂದಿದ್ದ ಗೆಳೆಯರು ಹೇಳಿದ್ದನ್ನೆಲ್ಲ ನೆನಪಿಗೆ ತಂದುಕೊಂಡೆ. ನಂತರ ಹಾಡನ್ನು ಹೇಗೆ ಮುಂದುವರಿಸಬೇಕೆಂದು ಅಂದಾಜು ಮಾಡಿಕೊಂಡೆ.
ನಂತರದ ತಮಾಷೆ ಕೇಳಿ: ಅವತ್ತು ನನ್ನೊಂದಿಗೇ ರೂಂನಲ್ಲಿ ಜತೆಗಿದ್ದವರು ನಿರ್ದೇಶಕ ಸಿದ್ಧಲಿಂಗಯ್ಯ. ಅವರಿಗೆ ಸ್ವಲ್ಪ ಹುಶಾರಿರಲಿಲ್ಲ. ಹಾಗಾಗಿ `ದೀಪ ಆರಿಸಿ ಕುಲಕರ್ಣಿಯವರೇ. ಇಲ್ಲ ಅಂದ್ರೆ ನನಗೆ ನಿದ್ರೆ ಬರೊಲ್ಲ’ ಎಂದು ತಾಕೀತು ಮಾಡಿದರು. ನನಗೋ ಬೇಗ ಹಾಡು ಬರೆದು ಮುಗಿಸುವ ತವಕ. ಆದರೆ, ಸಿದ್ಧ ಲಿಂಗಯ್ಯ ಅವರ ಮಾತಿಗೆ ಎದುರು ಹೇಳಲಾಗದೆ ಲೈಟ್ ಆರಿಸಿದೆ. ನಂತರ ಪೆನ್ನು-ಪ್ಯಾಡ್ ತಗೊಂಡು ಬಾತ್ರೂಮ್ಗೆ ಹೋದೆ.  ಅಲ್ಲಿ ಹತ್ತಿಪ್ಪತ್ತು ನಿಮಿಷ ನಿಂತು ಕೊಂಡೇ ಹಾಡು ಬರೆದು ಮುಗಿಸುವ ಆಸೆ ನನ್ನದಿತ್ತು. ಆದರೆ, ನನ್ನ ದುರಾದೃಷ್ಟಕ್ಕೆ, ಬಾತ್ರೂಮ್ನಲ್ಲಿ ಒಂದು ಕಿಂಡಿಯಿತ್ತು. ಅದರ ಮೂಲಕ ಬಾತ್ರೂಮ್ ಲೈಟ್ನ ಬೆಳಕು ನೇರವಾಗಿ ಸಿದ್ಧಲಿಂಗಯ್ಯನವರ ಮುಖಕ್ಕೇ ಬೀಳುತ್ತಿತ್ತು. ಬೆಳಕು ಬಿದ್ದ ಮರುಕ್ಷಣವೇ ಅವರು-`ದೀಪ ಆರಿಸಿ ಕುಲಕರ್ಣಿಯವರೇ…` ಅಂದರು.
ಬೇರೆ ದಾರಿಯೇ ಇರಲಿಲ್ಲ. ದೀಪ ಆರಿಸಿದೆ. ಆದರೆ, ಹಾಡು ಬರೆಯಲೇಬೇಕಿತ್ತು. ಹಾಗಾಗಿ ರೂಮಿನಿಂದ ಹೊರಗೆ ಬಂದೆ. ಹೋಟೆಲಿನ ಮುಂದೆ ಕಾಫಿ, ಟೀ ಮಾರುವ ಕಾರಿಡಾರ್ಗೆ ಬಂದೆ. ಅಲ್ಲಿನ  ಮಂದ ಬೆಳಕಿನಲ್ಲಿಯೇ- ಕ್ಯಾಬರೆ ಹೇಗಿರಬಹುದು ಎಂದು ಅಂದಾಜು ಮಾಡಿಕೊಂಡು ಒಂದೊಂದೇ ಸಾಲು ಬರೆಯುತ್ತಿದ್ದೆ. ಆದರೆ ಅಲ್ಲಿಯೂ ಕಾಟ ತಪ್ಪಲಿಲ್ಲ. ನಾನು ರಾತ್ರಿ ಹನ್ನೊಂದು ಗಂಟೆಯಲ್ಲಿ ಪ್ಯಾಡ್ ಮೇಲೆ ಏನೋ ಬರೆಯುತ್ತಿದ್ದುದನ್ನು ನೋಡಿ ನನ್ನನ್ನು ಗೂಢಚಾರ ಎಂದು ತಿಳಿದೋ ಏನೋ, ಆ ಹೋಟೆಲಿನ ಕಾವಲುಗಾರ ಅನುಮಾನದಿಂದಲೇ ಹತ್ತಿರ ಬಂದ. ನನ್ನ ಕುಲ-ಗೋತ್ರ ವಿಚಾರಿಸಿದ. ನಂತರ, ಏನು ಬರೀತಾ ಇದೀರಿ ಎಂದು ಕೇಳಿದ. ನಾನು ಉತ್ತರಿಸುವ ಮೊದಲೇ-`ಇಲ್ಲಿ ಹೀಗೆಲ್ಲ ಮಾಡುವಂತಿಲ್ಲ. ನಿಮ್ಮ ರೂಂಗೆ ಹೋಗಿ’ ಅಂದೇಬಿಟ್ಟ. ಹೇಳಿ ಕೇಳಿ ಅದು ಬೇರೆ ಊರು. ಹಾಗಾಗಿ ಮರುಮಾತನಾಡುವಂತಿರಲಿಲ್ಲ. ಹೀಗಾಗಿ ಅವಸರದಲ್ಲೇ ಹಾಡಿನ ಚರಣ ಬರೆದುಕೊಂಡು ರೂಂಗೆ ಬಂದು ಮಲಗಿದೆ.
ಬೆಳಗ್ಗೆ ರೆಕಾರ್ಡಿಂಗ್ ಸಂದರ್ಭದಲ್ಲಿ ರಾಜನ್-ನಾಗೇಂದ್ರರಿಗೆ ಹಾಡು ತೋರಿಸಿದೆ. ಅವರು ತುಂಬ ಖುಷಿಪಟ್ಟರು. ಎಸ್.ಪಿ. ಶೈಲಜಾ ಅವರಿಂದ ಹಾಡಿಸಿಯೂ ಬಿಟ್ಟರು. ಹಾಡು ಕೇಳಿ ಸಿದ್ಧಲಿಂಗಯ್ಯ ಅದೆಷ್ಟು ಖುಷಿ ಪಟ್ಟರು ಅಂದರೆ `ನನಗೆ ತುಂಬಾ ಖುಷಿಯಾಗಿದೆ. ಈ ಖುಷೀನ ಜತೆಯಾಗಿ ಹಂಚಿಕೊಳ್ಳೋಣ’ ಎಂದರು. ನಂತರ ಅಲ್ಲಿದ್ದ ದೊಡ್ಡರಂಗೇಗೌಡರನ್ನೂ ಕರೆದುಕೊಂಡು `ಸಿರಿಸಿರಿಮುವ್ವ’ ಎಂಬ ತೆಲುಗು ಸಿನಿಮಾ ತೋರಿಸಿದರು. ಹಿಂದೆಯೇ ಒಂದು ಹೋಟೆಲಿಗೆ ಕರೆದೊಯ್ದು ಅಲ್ಲಿ ವಿಶೇಷವಾಗಿ ಸಿಗುತ್ತಿದ್ದ ಮಸಾಲಾ ಹಾಲು ಕುಡಿಸಿದರು.
ಹೀಗೆ, ಹಳೆಯ ಮಧುರ ಕ್ಷಣವನ್ನು ಮತ್ತೆ ಮತ್ತೆ ನೆನೆಯುತ್ತಾ, ಮಗುವಿನಂತೆ ನಕ್ಕು ಸುಮ್ಮನಾದರು ಕುಲಕರ್ಣಿ.

‍ಲೇಖಕರು avadhi

January 29, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: