ಮಣಿಕಾಂತ್ ಬರೆದಿದ್ದಾರೆ: ಹಾಡು ಬರೀತೀನಿ, ಹಾಡಲು ಬರಲ್ಲ…

6213_1079515355773_1462958320_30205965_5660699_n11ಎ ಆರ್ ಮಣಿಕಾಂತ್

ಚಿತ್ರ: ಪರಮೇಶಿ ಪ್ರೇಮ ಪ್ರಸಂಗ. ಗೀತೆರಚನೆ: ಎಂ.ಎನ್. ವ್ಯಾಸರಾವ್.

ಸಂಗೀತ: ಜಿ.ಕೆ. ವೆಂಕಟೇಶ್. ಗಾಯನ: ಎಸ್ಪೀಬಿ-ಎಸ್. ಜಾನಕಿ.

ಉಪ್ಪಿಲ್ಲ ಮೆಣಸಿಲ್ಲ, ತರಕಾರಿ ಏನಿಲ್ಲ

ಎಣ್ಣಿಲ್ಲ ಬೆಣ್ಣಿಲ್ಲ, ಕಾಯನ್ನು ತಂದಿಲ್ಲ

ಏನ್ಮಾಡಲಿ ನಾನು ಏನ್ಮಾಡಲಿ ||ಪ||

ಉಪ್ಪಿಲ್ಲ ಇಂಗಿಲ್ಲ, ಕರಿಬೇವು ಸೊಪ್ಪಿಲ್ಲ

ಸೊಪ್ಪಿಲ್ಲ, ಮೆಂತ್ಯವಿಲ್ಲ, ದಾಲ್ಚಿನ್ನಿ ಚೂರಿಲ್ಲ

ಏನ್ಮಾಡಲಿ ನಾನು ಏನ್ಮಾಡಲಿ

ಹೇಳಮ್ಮ ಏನ್ಮಾಡಲೀ, ಸುತ್ತೂರ ಸಿಂಗಾರಿ ಸುರಸುಂದರೀ ||ಅ.ಪ||

`ರಮಾಮಣಿ, ಎಲ್ಲೆಲ್ಲಿ ಏನೇನಿದೆ ಅಂತ ಸ್ವಲ್ಪ ಹೇಳೆ

ನನ್ನ ಕೈಗೆ ಏನೂ ಸಿಕ್ತಾ ಇಲ್ವಲ್ಲೆ?’

`ನಾಕನೆ ಸಾಲಲ್ಲಿ ಜೀರಿಗೆ ಡಬ್ಬ, ಮೂರ್ನೇ ಸಾಲಲ್ಲಿ ಸಾಸ್ವೆ ಡಬ್ಬ

ಅಲ್ಲಿ ನೋಡಪ್ಪ, ಮುಂಚೆ ಬೇಳೆ ಹಾಕಪ್ಪ’

`ಏನೇನೇನೇನೂ ಏನೂ?’

`ಅಯ್ಯೋ, ಮುಂಚೆ ಬೇಳೆ ಹಾಕ್ರಿ’

`ಬೇಳೆ ಇಲ್ಲಿದೆಯಾ?’

`ಅದ್ರಲ್ಲಿ ಹುಳ ಇದೆ, ಸ್ವಲ್ಪ ಆರಿಸಿ ಹಾಕ್ರಿ’

`ಬರೀ ಆಲೂಗೆಡ್ಡೆ ಈರುಳ್ಳಿ ಇದೆ, ಸಾಕೇನೆ?’

`ಅಯ್ಯೋ, ಕೈಗೆ ಸಿಕ್ಕಿದ್ದು ಹಾಕಿ, ಏನೋ ಒಂದು ಮಾಡ್ರಿ’

ನೀರು ಕುದೀತಾ ಇದೆ, ಬೇಗ ನೀರು ಹಾಕ್ರಿ

ಹಾಗೇ ಒಗ್ಗರಣೇನೂ ಹಾಕ್ಕೊಳ್ರೀ  ||1||

`ಮೈಮುಟ್ಟದಂತೆ ನೀನಲ್ಲಿ ಕೂತೆ

ಪ್ರಾರಬ್ಧ ನಾನೇ ಕೈ ಹೆಚ್ಚಿಕೊಂಡೆ’

`ಬಳಿಯಿದ್ದರೇನು, ಬರಲಾರೆ ನಾನು

ಮನಸೆಲ್ಲಾ ಅಲ್ಲೇ, ಮನದಾಸೆ ಬಲ್ಲೆ’

`ರಗ್ಗಿಲ್ಲ ದಿಂಬಿಲ್ಲ, ಜತೆಯಲ್ಲಿ ನೀನಿಲ್ಲ

ಏನ್ಮಾಡಲಿ ನಾನು ಏನ್ಮಾಡಲಿ’

ಹೇಳಮ್ಮ ಏನ್ಮಾಡಲೀ, ಸುತ್ತೂರ ಸಿಂಗಾರಿ ಸುರಸುಂದರೀ ||2||

`ಸ್ನಾನಕ್ಕೆ ಮುಂಚೆ ಕಾಡದಂತೆ, ಕದ್ದು ಹೊಂಚು ಹಾಕದಂತೆ

ನೀರು ಹಾಕಪ್ಪ, ಸೀರೆ ಟವೆಲ್ಲು ನೀಡಪ್ಪ’

`ಮೈ ಮಂಚ ಕಾದು ಬೆಂಡಾಗಿ ಹೋದೆ

ಮೈ ತುಂಬಿ ಬಂದು ಆರೈಕೆ ಮಾಡೆ’

`ಹುಸಿ ಕೋಪ ತಳ್ಳಿ, ಸಂತೋಷ ತಾಳಿ

ಸಿಹಿ ಮಾತನಾಡಿ, ಆಫೀಸ್ಗೆ ಹೋಗಿ’

`ತೋಳನ್ನು ಬಳಸಿಲ್ಲ, ಸಿಹಿಮುತ್ತು ಕೊಟ್ಟಿಲ್ಲ

ಏನ್ಮಾಡಲಿ, ನಾನು ಏನ್ಮಾಡಲಿ?’

`ಹೋಗಪ್ಪ ಆಫೀಸಿಗೇ, ಪುಟ್ನಾಳ ಪರಮೇಶಿ ಬಸ್ಸ್ಟಾಪಿಗೇ

ಪುಟ್ನಾಳ ಪರಮೇಶಿ ಬಸ್ಸ್ಟಾಪಿಗೇ’ ||3||

Ramesh_Bhat_300

ಹೆಂಡತಿ `ತಿಂಗಳ ರಜೆ’ಯ ಸಂಕಟದಲ್ಲಿ ಇರ್ತಾಳೆ. ಅಂಥ ಸಂದರ್ಭದಲ್ಲಿ ಗಂಡ ಅನ್ನೋ ಮಹರಾಯ ಅಡುಗೆ ಮನೆಗೆ ಬರ್ತಾನೆ. ಅದೂ ಹೇಗೆ ಅಂತೀರ? `ತಿಂಡಿ ಮಾಡಬೇಕು ತಾನೆ? ಮಾಡ್ತೀನಿ ಬಿಡೆ. ಅದೆಲ್ಲಾ ನನಗೆ ಗೊತ್ತಿಲ್ಲ ಅನ್ಕೊಂಡಿದೀಯ? ಬಿಸಿಬೇಳೆ ಬಾತನ್ನೇ ಮಾಡ್ತೀನಿ. ನೋಡ್ತಾ ಇರು…’ ಹೀಗೆಂದು ಬಡಾಯಿ ಕೊಚ್ಚಿಕೊಂಡೇ ಅಡುಗೆ ಮನೆಗೆ ನುಗ್ಗುವ ಗಂಡನಿಗೆ, ಯಾವ್ಯಾವ ಪದಾರ್ಥ ಎಲ್ಲೆಲ್ಲಿದೆ? ಹೇಗಿದೆ ಎಂಬುದೇ ಗೊತ್ತಾಗುವುದಿಲ್ಲ. ಬೇಗ ತಿಂಡಿ ತಯಾರಿಸಿ, ಹೆಂಡತಿಗೆ ಸ್ನಾನಕ್ಕೆ ಬಿಸಿನೀರು ಹಾಕಿ, ತಾನೂ ಸ್ನಾನ ಮುಗಿಸಿ, ತಿಂಡಿ ತಿಂದು, ಬಟ್ಟೆ ಇಸ್ತ್ರಿ ಮಾಡಿಕೊಂಡು ಬೇಗನೆ ಮನೆಬಿಟ್ಟು, ಬಸ್ ಹಿಡಿದು, ಆಫೀಸಿಗೆ ಹೊರಡಬೇಕು ಎಂದುಕೊಂಡು ಅಡುಗೆ ಮನೆಗೆ ಬಂದವನು- ಯಾವ ಪದಾರ್ಥವೂ ಕೈಗೆ ಸಿಗದೆ ಹೋದಾಗ `ಉಪ್ಪಿಲ್ಲ, ಮೆಣಸಿಲ್ಲ, ತರಕಾರಿ ಏನಿಲ್ಲ…’ ಎಂದು ಹಾಡಲು ಶುರುಮಾಡುತ್ತಾನೆ. ಹೀಗೆ ಹಾಡುತ್ತ, ಅಡುಗೆ ಮನೆಯಲ್ಲಿ ಮಾತ್ರವಲ್ಲ `ಹೆಂಡತಿಯ ಮೂರು ದಿನದ ರಜೆಯಿಂದ’ ತನ್ನ ನಿತ್ಯದ ರೂಟೀನ್ನಲ್ಲಿ ಆಗಿರುವ ಫಜೀತಿಗಳನ್ನೂ ಹೇಳಿಕೊಳ್ಳುತ್ತಾನೆ.

ಶಂಕರ್ನಾಗ್ ಅವರ-ಚಿತ್ರಕಥೆ, ರಮೇಶ್ ಭಟ್ ನಿದರ್ೇಶನದ `ಪರಮೇಶಿ ಪ್ರೇಮ ಪ್ರಸಂಗ’ ಸಿನಿಮಾ ನೋಡಿದವರಿಗೆಲ್ಲ ಈ ದೃಶ್ಯ ನೆನಪಿರುತ್ತದೆ. ಒಂದು ರೀತಿಯಲ್ಲಿ ಮನೆಮನೆಯ ಕಥೆಯಂತಿರುವ; ಎಲ್ಲ ಗಂಡಂದಿರ ಖಾಸ್ಬಾತ್ನಂತಿರುವ ಈ ಹಾಡು ಬರೆದವರು ಎಂ.ಎನ್. ವ್ಯಾಸರಾವ್. `ಸರ್, ಈ ಹಾಡನ್ನು ಎಲ್ಲಿ ಬರೆದಿರಿ? ಹೇಗೆ ಬರೆದಿರಿ? ಎಷ್ಟು ದಿನದಲ್ಲಿ ಬರೆದಿರಿ? ಸ್ವಂತ ಅನುಭವವನ್ನೇ ಹಾಡಾಗಿಸಿದ್ದೀರೋ ಹೇಗೆ?’ ಎಂದು ಕೇಳಿದರೆ- `ಅಯ್ಯೋ, ಅದೊಂದು ದೊಡ್ಡ ಕಥೆ’ ಎಂದು ವ್ಯಾಸರಾವ್ ಆರಂಭಿಸಿಯೇಬಿಟ್ಟರು. ಮುಂದಿನದನ್ನು ಅವರ ಮಾತಲ್ಲೇ ಕೇಳೋಣವಾಗಲಿ:

ಇದು 1985ರ ಮಾತು. ಅದೊಂದು ದಿನ ನಟ ಶಂಕರ್ನಾಗ್ ಫೋನ್ ಮಾಡಿ- `ಸರ್, ಪರಮೇಶಿ ಪ್ರೇಮ ಪ್ರಸಂಗ ಅನ್ನೋ ಸಿನಿಮಾ ಮಾಡ್ತಿದೀವಿ. ಅದಕ್ಕೆ ನೀವು ಹಾಡು ಬರೀಬೇಕು’ ಅಂದ್ರು. ಒಪ್ಪಿದೆ. ಮೊದಲ ಭೇಟಿಯಲ್ಲೇ ಕತೆ ಹೇಳಿದ್ರು. ಹಾಡು ಬರೆಯಬೇಕಾದ ಸಂದರ್ಭವನ್ನೂ ವಿವರಿಸಿದ್ರು. `ಹಾಡು ಕೇಳಿದ್ರೆ ಎಲ್ರಿಗೂ ಅವರವರ ಮನೆಯ ಫಜೀತಿ ನೆನಪಾಗಬೇಕು. ಹೀರೋನ ಸಂಕಟ ನೋಡಿ ನಗುವಂತಿರಬೇಕು. ಅಂಥ ಹಾಡು ಕೊಡಿ ಸಾರ್’ ಅಂದ್ರು. ಒಪ್ಪಿಕೊಂಡೆ. ನಂತರ- `ರೇಸ್ಕೋಸರ್್ ಬಳಿ ಇರುವ ಜನಾರ್ದನ ಹೋಟೆಲಿನಲ್ಲಿ ರೂಂ ಮಾಡಿದ್ದೇನೆ. ಅಲ್ಲಿ ಸಂಗೀತ ನಿದರ್ೇಶಕ ಜಿ.ಕೆ. ವೆಂಕಟೇಶ್ ಇದ್ದಾರೆ. ಅವರನ್ನು ಭೆಟಿ ಮಾಡಿ. ಅವರು ಟ್ಯೂನ್ ಕೇಳಿಸ್ತಾರೆ. ನಂತರ ಹಾಡು ಬರೀರಿ’ ಅಂದರು. `ಸರಿ’ ಎಂದು ಬ್ಯಾಂಕ್ಗೆ ರಜೆ ಹಾಕಿ, ಕವಿ ದೊಡ್ಡರಂಗೇಗೌಡ ಅವರೊಂದಿಗೆ ಜನಾರ್ದನ ಹೋಟೆಲ್ಗೆ ಹೋದೆ. ರೂಂ ಬಾಗಿಲೇನೋ ತೆರೆದಿತ್ತು. ಕಾಫಿ-ತಿಂಡಿ, ಊಟದ ವ್ಯವಸ್ಥೆ ಕೂಡ ಇತ್ತು. ಆದರೆ, ಇಡೀ ದಿನ ಕಾದರೂ ಜಿ.ಕೆ. ವೆಂಕಟೇಶ್ ಬರಲಿಲ್ಲ. ಕಡೆಗೆ ಬೇಜಾರಾಗಿ ಎದ್ದು ಬಂದೆ. ಮರುದಿನ ಬೆಳಗ್ಗೆ ಹತ್ತು ಗಂಟೆಗೇ ಹೋಟೆಲ್ಗೆ ಹೋದೆ. ಆ ವೇಳೆಗಾಗಲೇ ಜಿ.ಕೆ. ವೆಂಕಟೇಶ್ ನಾಪತ್ತೆ. ಸಂಜೆಯಾದರೂ ಆಸಾಮಿ ಬರಲಿಲ್ಲ. ಮರುದಿನ ಇದೇ `ಶೋ’ ರಿಪೀಟ್ ಆಯ್ತು.

ಒಂದು ಕಡೇಲಿ ಮೂರು ದಿನದ ರಜೆ ವೇಸ್ಟ್ ಆಯ್ತಲ್ಲ ಎಂಬ ಸಿಟ್ಟು, ಇನ್ನೊಂದು ಕಡೇಲಿ ಈ ಜಿ.ಕೆ. ವೆಂಕಟೇಶ್ ಕೈಗೇ ಸಿಗುತ್ತಿಲ್ಲ ಎಂಬ ಬೇಸರ! ಕಡೆಗೆ ಶಂಕರ್ನಾಗ್ ಅವರಿಗೆ ಹೇಳಿದೆ: `ನೋಡಪ್ಪ, ಕಾಯೋದಕ್ಕೂ ಒಂದು ಮಿತಿ ಇರ್ತದೆ. ಬನ್ನಿ ಅಂತ ಕರೆಯೋದು, ಆಮೇಲೆ ಕೈಗೇ ಸಿಗದೆ ಓಡಿಹೋಗೋದು. ಹೀಗೆ ಮಾಡಿದ್ರೆ ಹೇಗೆ?’

ಸಿಡಿಸಿಡಿ ಅನ್ನುವಂತಿದ್ದ ನನ್ನ ಮಾತು ಕೇಳಿ ಶಂಕರ್ಗೆ ನಡೆದಿರೋದು ಅರ್ಥವಾಯ್ತು. `ಸ್ವಲ್ಪ ಹೊತ್ತು ಇರಿ ಸಾರ್. ಈಗ ಬಂದೆ’ ಅಂದವರೇ ಹೊರಗೆ ಹೋದರು. ಆ ಕಡೆಯಿಂದ ಜಿ.ಕೆ. ವೆಂಕಟೇಶ್ ಜತೆಗೇ ಬಂದರು. ನನ್ನನ್ನು ಕಂಡ ಜಿ.ಕೆ.ವಿ. `ನೋಡಪ್ಪ ವ್ಯಾಸರಾವ್, ನನಗೆ ಇಲ್ಲಿ ಫ್ರೆಂಡ್ಸ್ ವಿಪರೀತ. ಮೂರು ದಿನದಿಂದ ಅವರ ಜತೆ ರೇಸ್ಗೆ ಹೋಗ್ತಿದ್ದೆ. ಅಲ್ಲಿ ದುಡ್ಡು ಕಳಕೊಂಡಿದ್ದೇ ಆಯ್ತು. ಈಗ ನಾನಂತೂ ಲಾಸ್ನಲ್ಲಿದ್ದೀನಿ. ಟೆನ್ಶನ್ನಲ್ಲಿದೀನಿ. ಯಾವ ಟ್ಯೂನ್ ಮಾಡೋಕೂ ಈಗ ಮನಸ್ಸಾಗ್ತಾ ಇಲ್ಲ. ತಲೇನೇ ಓಡ್ತಾ ಇಲ್ಲ. ಒಂದು ಕೆಲ್ಸ ಮಾಡು. ನೀನೇ ಒಮ್ಮೆ ಮದ್ರಾಸ್ಗೆ ಬಂದುಬಿಡು. ಅಲ್ಲಿ ಟ್ಯೂನ್ ಹೇಳ್ತೇನೆ’ ಅಂದ್ರು. ಶಂಕರ್ನಾಗ್ ಕೂಡ- `ಹಾಗೇ ಮಾಡಿ ಸಾರ್’ ಅಂದುಬಿಟ್ರು.

ಮೂರು ದಿನ ಕಾಯಿಸಿದರಲ್ಲ ಅಂತ ಮೊದಲೇ ಸಿಟ್ಟಿತ್ತು ನೋಡಿ, ಆ ಕಾರಣದಿಂದಲೇ ತುಸು ಬೇಸರದಿಂದಲೇ ಹೇಳಿದೆ: `ಈಗಾಗಲೇ ಮೂರು ದಿನ ಹಾಳಾಗಿದೆ. ಇರಲಿ. ನಾನು ಮದ್ರಾಸ್ಗೆ ಬರ್ತೇನೆ. ಆದ್ರೆ ಶನಿವಾರ, ಭಾನುವಾರ ಆದ್ರೆ ಮಾತ್ರ ಬರ್ತೀನಿ. ಏನೇ ಆದ್ರೂ ಸೋಮವಾರ ನಾನು ಬೆಂಗಳೂರಲ್ಲಿ ಇರಬೇಕು’. ಶಂಕರ್ ಹಾಗೂ ಜಿ.ಕೆ.ವಿ. ಇಬ್ರೂ `ಸರಿ’ ಎಂದ್ರು.

ವಾರದ ಬಳಿಕ ಶಂಕರ್ನಾಗ್ ಫೋನ್ ಮಾಡಿ, ಮದ್ರಾಸಿನ ಪಾಮ್ ಗ್ರೋ ಹೋಟೆಲಿಗೆ ಬರುವಂತೆ ಸೂಚಿಸಿದರು. ಶನಿವಾರ ಬೆಳಗ್ಗೆಯೇ ಮದ್ರಾಸ್ಗೆ ಹೋದೆ. ಅಲ್ಲಿ ಜಿ.ಕೆ. ವೆಂಕಟೇಶ್, ರಮೇಶ್ ಭಟ್ ಹಾಗೂ ಶಂಕರ್ನಾಗ್ ಕಾಯುತ್ತಿದ್ದರು. ಇವತ್ತು ಕೆಲಸ ಮುಗಿಸೋಣ ಅಂದುಕೊಂಡೇ ಕೂತೆವು. ಆದರೆ ನಂತರ ನಡೆದದ್ದೆಲ್ಲ ಬರೀ ಕಾಡುಹರಟೆ. ಬೆಳಗ್ಗೆ ಕಳೆದು, ಮಧ್ಯಾಹ್ನ ಮುಗಿದು, ಸಂಜೆಯಾಯ್ತು. ಉಹುಂ, ಜಿ.ಕೆ. ವೆಂಕಟೇಶ್ ಒಂದೇ ಒಂದು ಟ್ಯೂನನ್ನೂ ಕೊಡಲಿಲ್ಲ. ನನಗೋ ಕೋಪ ಒತ್ತರಿಸಿಕೊಂಡು ಬರುತ್ತಿತ್ತು. ತಕ್ಷಣವೇ ಶಂಕರ್ನಾಗ್ಗೆ ಹೇಳಿದೆ: `ನೋಡಪ್ಪ, ಈ ಮಾತಿಂದ ನೀನು ಬೇಜಾರು ಮಾಡ್ಕೋಬೇಡ. ನಂಗೆ ನಾಳೆ ಸಂಜೆ ಆರು ಗಂಟೆಯತನಕ ಮಾತ್ರ ಟೈಂ ಇದೆ. ಅಷ್ಟರೊಳಗೆ ಟ್ಯೂನ್ ಮಾಡದಿದ್ರೆ ನಾನು ಹಾಡು ಬರೆಯೊಲ್ಲ. ಬೆಂಗಳೂರಿಗೆ ಹೋಗಿಬಿಡ್ತೇನೆ…’

ನಾನು ಇಷ್ಟೆಲ್ಲ ಹಾರಾಡಿದ್ರೂ ಪ್ರಯೋಜನವಾಗಲಿಲ್ಲ. ಭಾನುವಾರವೂ ಬಹುಪಾಲು ಹಾಗೇ ಕಳೆಯಿತು. ಸಂಜೆ ಐದು ಗಂಟೆ ಆಗುತ್ತಿದ್ದಂತೆ ನಾನು ಬೆಂಗಳೂರಿಗೆ ಮರಳಲು ತಯಾರಾಗತೊಡಗಿದೆ. ಆಗ ಸರಸರನೆ ಬಳಿ ಬಂದ ಜಿ.ಕೆ.ವಿ.- `ನೋಡಪ್ಪ, ಯಾಕೋ ಟ್ಯೂನ್ ಕೊಡೋಕೆ ಆಗ್ತಾ ಇಲ್ಲ. ನೀನೇ ಒಂದು ಟ್ಯೂನ್ ಕೊಡಪ್ಪ’ ಅಂದ್ರು. ಈ ಮಾತು ಕೇಳಿ ಆ ಗಡಿಬಿಡಿಯಲ್ಲೂ ನಗುಬಂತು. ನಕ್ಕು ಹೇಳಿದೆ: `ಸಾರ್, ನಾನು ಹಾಡು ಬರೀತೀನಿ ಅಷ್ಟೆ. ಆದ್ರೆ ಹಾಡಲು ಬರಲ್ಲ. ಹಾಗಿರುವಾಗ ಟ್ಯೂನ್ ಎಲ್ಲಿಂದ ತರಲಿ?’ ಎಂದೆ. ಆಗ ಜಿ.ಕೆ.ವಿ.- `ಹಾಗಲ್ಲ ಕಣಯ್ಯ, ನಿನಗೆ ಇಷ್ಟವಾಗಿರುವ ಯಾವುದಾದ್ರೂ ಜಾನಪದ ಗೀತೆ ಹಾಡು. ಅದನ್ನು ಕೇಳಿದಾಗ ಯಾವುದಾದ್ರೂ ಟ್ಯೂನ್ ಹೊಳೆಯಬಹುದು’ ಅಂದರು.

ತಕ್ಷಣವೇ ನನಗೆ ನೆನಪಾದದ್ದು- ಬಾರಯ್ಯ ಬೆಳದಿಂಗಳೇ… ಹಾಡು. ಬೇಸರವನ್ನು ಅಂಗೈಲಿ ಹಿಡಿದೇ ಹಾಡಿದೆ. ಆ ಹಾಡಿಗೆ ತಲೆದೂಗಿದ ಜಿ.ಕೆ.ವಿ. ಛಕ್ಕನೆ ಚಿಟಿಕೆ ಹೊಡೆದು -`ವಾಹ್, ತುಂಬಾ ಚೆನ್ನಾಗಿದೆ ಕಣಯ್ಯ. ಇದೇ ಟ್ಯೂನ್ ಇಟ್ಕೊಂಡು ಹಾಡು ಬರಿ’ ಅಂದರು.

ಸರಿ, ಟ್ಯೂನ್ ಸಿಕ್ಕ ಹಾಗಾಯ್ತಲ್ಲ, ಹಾಡು ಬರೀಬೇಕು ಅಂದುಕೊಂಡೆ. ತಕ್ಷಣವೇ ಸಿನಿಮಾದ ನಾಯಕ ನೆನಪಾದ. ಅವನ ಪಾಲಿಗೆ `ಅವಳೇ’ ಸುಂದರಾಂಗಿ ತಾನೆ ಅನ್ನಿಸ್ತು. ಹಾಗೆಂದುಕೊಂಡ ಮರುಕ್ಷಣವೇ- `ಸುತ್ತೂರ ಸಿಂಗಾರಿ ಸುರಸುಂದರೀ’ ಎಂಬ ಸಾಲೂ ಹೊಳೆಯಿತು. ಅದನ್ನೇ ಜಿ.ಕೆ.ವಿ. ಅವರಿಗೆ ಹೇಳಿದೆ. ಅವರು ತುಂಬ ಖುಷಿಯಾಗಿ `ಗುಡ್, ಗುಡ್’ ಎಂದು ಉದ್ಗರಿಸಿ, ಮುಂದಿನ ಹದಿನೈದು ನಿಮಿಷದಲ್ಲಿ  ಟ್ಯೂನ್ ಕಂಪೋಸ್ ಮಾಡಿದ್ರು. ನಂತರದ ಹದಿನೈದು ನಿಮಿಷದಲ್ಲಿ ನಾನೂ ಹಾಡು ಬರೆದು ಮುಗಿಸಿದೆ. ಸಂಜೆ 5-10ಕ್ಕೆ ಶುರುವಾದ ಹಾಡು ಸೃಷ್ಟಿಯ ಕೆಲಸ, 5.50ಕ್ಕೆ ಮುಗಿದುಹೋಯ್ತು. ಆರು ಗಂಟೆಗೆ ನಾನು ಬೆಂಗಳೂರಿಗೆ ಹೊರಡಲು ಲಗ್ಗೇಜ್ ಎತ್ತಿಕೊಂಡೆ. ಆ ಕ್ಷಣದ ಖುಷಿಗೆ ಸಾಕ್ಷಿಯಾಗಿದ್ದ ಶಂಕರ್ನಾಗ್, ರಮೇಶ್ ಭಟ್ ಹಾಗೂ ಜಿ.ಕೆ. ವೆಂಕಟೇಶ್ ಕಂಗಳಲ್ಲಿ ಆನಂದಬಾಷ್ಪವಿತ್ತು…’

ಇಷ್ಟು ಹೇಳಿ ಛಕ್ಕನೆ ಮಾತು ನಿಲ್ಲಿಸಿದರು ವ್ಯಾಸರಾವ್. ಹಳೆಯದೆಲ್ಲ ನೆನಪಾಗಿ ಅವರಿಗೆ ಖುಷಿಯಾಗಿತ್ತು. ಕಡು ಬೇಸರದ ಮಧ್ಯೆಯೇ ಕಚಗುಳಿ ಇಡುವಂಥ ಹಾಡು ಸೃಷ್ಟಿಯಾಯ್ತು ಎಂಬುದಕ್ಕೆ ಸಾಕ್ಷಿಯೂ ದೊರಕಿತ್ತು!

‍ಲೇಖಕರು avadhi

September 18, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

4 ಪ್ರತಿಕ್ರಿಯೆಗಳು

 1. Guruprasad

  ಪ್ರೀತಿಯ ಮಣಿಕಾಂತ
  ನಮ್ಮ ಬಾಲ್ಯದ, ಹರಯದ ಮೆಚ್ಚಿನ, ಹುಚ್ಚಿನ ಹಾಡುಗಳ ಹುಟ್ಟು ಹೇಗಾಯ್ತು ಎಂದು ವಿಸ್ತಾರವಾಗಿ ಮಂಡಿಸಿ, ನಮನ್ನೆಲ್ಲ “ಒಂತರಾ” ಲೋಕಕ್ಕೆ, ಆ ನಾಸ್ಟಾಲ್ಜಿಯಕ್ಕೆ ಕರಕೊಂಡುಹೋಗುತ್ತಿರುವುದಕ್ಕೆ ನಿಮಗೆ ವಂದನೆಗಳು.
  ಗುರುಪ್ರಸಾದ ಕಾಗಿನೆಲೆ

  ಪ್ರತಿಕ್ರಿಯೆ
 2. usdesai

  ಇದು ಅನ್ಯಾಯ ಮಣಿಕಾಂತ್ ಈ ಹಾಡು ಹಾಡಿದವರು ರಾಜ್ ಕುಮಾರ್ ಭಾರತಿ ಹಾಗೂ ಎಸ್ಪಿ ಶೈಲಜಾ
  ಎಸ್ಪಿಬಿ ಈ ಹಾಡು ಹಾಡಿಲ್ಲ ವಿಕ ದಲ್ಲೂ ತಪ್ಪಾಗಿತ್ತು…!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: