ಮಣಿಕಾಂತ್ ಬರೆಯುತ್ತಾರೆ:ಈತನೀಗ ವಾಸುದೇವನು…

ಈತನೀಗ ವಾಸುದೇವನು… ಚಿತ್ರ: ಭಕ್ತ ಕನಕದಾಸ. ಗೀತೆ ರಚನೆ: ಹುಣಸೂರು ಕೃಷ್ಣಮೂರ್ತಿ ಸಂಗೀತ: ಎಂ. ವೆಂಕಟರಾಜು, ಗಾಯನ: ಪಿ.ಬಿ. ಶ್ರೀನಿವಾಸ್ ಈತನೀಗ ವಾಸುದೇವನು ಲೋಕದೊಡೆಯ, ಈತನೀಗ ವಾಸುದೇವನು ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ ದಾಸಗೊಲಿದು ತೇರಾ ನೇರಿ ತೇಜಿ ಪಿಡಿದು ನಡೆಸಿದಾತ ಈತನೀಗ ವಾಸುದೇವನು ||ಪ|| ಧನುಜೆಯಾಳ್ದ ನಣ್ಣನಯ್ಯನ, ಪಿತನ ಮುಂದೆ ಕೌರವೇಂದ್ರನ ಅನುಜೆಯಾಳಿದವನ ಶಿರವ ಕತ್ತರಿಸುತಾ ಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದಾ ರುಕ್ಮನ ಅನುಜೆಯಾಳಿದವನ ಮೂರ್ತಿಯನ್ನು ನೋಡಿರೋ ||೧|| ಕ್ರೂರನಾದ ಫಣಿಪ ಬಾಣ ತರಣಿಜನು ನಿರೀಕ್ಷಿಸಿ ಆಗ ವೀರನೆಚ್ಚೆಯಸುಗೆ ಒಪ್ಪಿ ತನ್ನು ವೀಕ್ಷಿಸಿ ಧಾರಿಣಿಯ ಪದದೊಳಂಗಿ ಚರಣ ಭಜಕನರನ ಕಾಯ್ದಾ ಭಾವಕಲ್ಪ ನಾದದೇವ ಈತ ನೋಡಿರೋ ||೨|| ವ್ಯೋಮಕೇಶಯಿಪ್ಪ ದೆಸೆಯ ಆ ಮಹಾಮಹಿಮೆಯುಳ್ಳ ಸಾಮಜವನು ಏರಿ ಬರುವ ಶಕ್ತಿಯ ನೀಕ್ಷಿಸಿ ಪ್ರೇಮದಿಂದ ಉರವನೊಡ್ಡಿ ಡಿಂಗರಿಗನ ಕಾಯ್ದ ಸಾರ್ವಭೌಮ ಬಡದಾದಿಕೇಶವನ ನೋಡಿರೋ ||೩||

ಸಿನಿಮಾಗಳಲ್ಲಿ ನಾಯಕ, ನಾಯಕಿ, ಖಳನಟರು, ಪೋಷಕ ಪಾತ್ರಧಾರಿಗಳಿಗೆ ಇರುವಷ್ಟೇ ಪ್ರಾಮುಖ್ಯತೆ ಪ್ರಾಣಿಗಳಿಗೂ ಉಂಟು. ಒಂದು ವೇಳೆ ಚಿತ್ರದಲ್ಲಿ ನಾಯಿಯೋ, ಕುದುರೆಯೋ, ಆನೆಯೋ ಅಥವಾ ಹಾವೋ ಪ್ರಮುಖ ಪಾತ್ರ ವಹಿಸಿತು ಅಂದುಕೊಳ್ಳಿ; ಆಗ ಅವುಗಳ ಯೋಗಕ್ಷೇಮವನ್ನು ನಿರ್ಮಾಪಕರು ತುಂಬಾ ಚನ್ನಾಗಿ ನೋಡಿಕೊಳ್ಳಬೇಕು.

ಅರ್ಧಭಾಗದಷ್ಟು ಚಿತ್ರೀಕರಣ ಮುಗಿದುಹೋಗಿದ್ದ ಸಂದರ್ಭದಲ್ಲಿ ಮುಖ್ಯ ಪಾತ್ರದಲ್ಲಿದ್ದ ನಾಯಿಗೆ ಕಾಲು ಮುರಿದುಹೋದರೆ ಅಥವಾ ಆನೆಗೆ ಅನಾರೋಗ್ಯ ಉಂಟಾದರೆ, ಆ ಸಂದರ್ಭದಲ್ಲಿ ಚಿತ್ರತಂಡದವರ ಪೀಕಲಾಟವನ್ನು ಹೇಳುವುದೇ ಬೇಡ.

ಈ ವಿಷಯಕ್ಕೆ ಸಂಬಂಸಿದಂತೆ ಒಂದೆರಡು ಸ್ವಾರಸ್ಯಕರ ಸಂಗತಿಗಳಿವೆ, ಕೇಳಿ : ಅದು ‘ಸಂಪತ್ತಿಗೆ ಸವಾಲ್’ ಚಿತ್ರೀಕರಣದ ಸಂದರ್ಭ. ‘ಯಾರೇ ಕೂಗಾಡಲಿ ಊರೇ ಹೋರಾಡಲಿ’ ಹಾಡಿನ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಈ ಹಾಡಿಗೆಂದೇ ಒಂದು ಕಟ್ಟುಮಸ್ತಾದ ಎಮ್ಮೆಯನ್ನು ಹುಡುಕಲಾಗಿತ್ತು, ಮೊದಲ ದಿನ ಪಲ್ಲವಿಯನ್ನು ಮಾತ್ರ ಚಿತ್ರೀಕರಿಸಲು ಸಾಧ್ಯವಾಯಿತು. ಚರಣಗಳನ್ನು ನಾಳೆ ಶೂಟ್ ಮಾಡೊಣ ಎಂದು ನಿರ್ಧರಿಸಿದ್ದೂ ಆಯಿತು. ಆ ದಿನಗಳಲ್ಲೂ ಕೂಡ ಶೂಟಿಂಗ್ ನೋಡಲು ಜನ, ಜಾತ್ರೆಗೆ ಬಂದಂತೆಯೇ ಬಂದಿದ್ದರು. ಅಂದು ಸಂಜೆ ಎಮ್ಮೆಯ ಮಾಲೀಕನಿಗೆ ದುರಾಸೆ ಹೆಗಲೇರಿತು. ಆತ ಎಮ್ಮೆಯೊಂದಿಗೆ ಸೀದಾ ಪಕ್ಕದ ಊರಿಗೆ ಹೋದ. ಅಲ್ಲಿದ್ದ ಜನರ ಮುಂದೆ- ‘ ಇದು ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ನಟಿಸಿರುವ ಎಮ್ಮೆ. ಇದರ ಮೇಲೆ ಸವಾರಿ ಮಾಡ್ತಾನೇ ರಾಜಣ್ಣ ಅವರು ಹಾಡು ಹೇಳಿರೋದು. ನಾನು ಇದನ್ನು ಮಾರುವುದೆಂದು ತೀರ್ಮಾನಿಸಿದ್ದೇನೆ. ಇಷ್ಟ ಇದ್ದವರು ತಗೋಬಹುದು’ ಅಂದ. ಡಾ. ರಾಜ್ ಕುಮಾರ್ ಅವರು ಸವಾರಿ ಮಾಡಿರುವ ಎಮ್ಮೆ ಅಂದಾಕ್ಷಣ ಅದನ್ನು ಖರೀದಿಸಲು ಪೈಪೋಟಿಯೇ ಶುರುವಾಯಿತು. ಕಡೆಗೆ ಶ್ರೀಮಂತನೊಬ್ಬ ಅದನ್ನು ದುಬಾರಿ ಬೆಲೆಗೆ ಕೊಂಡುಕೊಂಡ. ಮರುದಿನ ಚಿತ್ರೀಕರಣ ತಂಡದವರೆಲ್ಲ ಶೂಟಿಂಗ್ ಸ್ಪಾಟ್‌ಗೆ ಬಂದಿದ್ದಾರೆ. ಆದರೆ ಎಮ್ಮೆ ಹಾಗೂ ಅದರ ಯಜಮಾನ ಪತ್ತೆಯಿಲ್ಲ. ವಿಚಾರಿಸಿ ನೋಡಿದಾಗ ಎಲ್ಲ ವಿಷಯ ತಿಳಿಯಿತು. ದುಡ್ಡು ಜೇಬು ತುಂಬಿತ್ತಲ್ಲ, ಅದೇ ಕಾರಣಕ್ಕೆ ಎಮ್ಮೆಯ ಮಾಲೀಕ ಕಣ್ಮರೆಯಾಗಿದ್ದ ಆಗ, ಅನಿವಾರ್ಯವಾಗಿ ಬೇರೊಂದು ಎಮ್ಮೆ ಹುಡುಕಿ, ದೃಶ್ಶೀಕರಣದಲ್ಲಿ ಒಂದಿಷ್ಟು ಬದಲಾವಣೆ ಮಾಡಿ ಶೂಟಿಂಗ್ ಮಾಡಲಾಯಿತು. ಬೇಕಿದ್ದರೆ ಹುಷಾರಾಗಿ ಗಮನಿಸಿ ನೋಡಿ, ‘ ಯಾರೇ ಕೂಗಾಡಲಿ’ ಹಾಡಿನಲ್ಲಿ ಪಲ್ಲವಿ ಹಾಡುವ ಸಂದರ್ಭದಲ್ಲಿ ಇರುವ ಎಮ್ಮೆಗೂ ಚರಣ ಹಾಕುವ ಸಂದರ್ಭದಲ್ಲಿ ಇರುವ ಎಮ್ಮೆಗೂ ವ್ಯತ್ಯಾಸ ತುಂಬ ಸ್ವಷ್ಟವಾಗಿ ಕಾಣುತ್ತದೆ. ಸಿನಿಮಾಗಳಲ್ಲಿ ವಾಣಿಗಳ ಪ್ರಾಮುಖ್ಯತೆಗೆ ಸಂಬಂಸಿದಂತೆ ಇನ್ನೊಂದು ಉದಾಹರಣೆ ಹೇಳಬಹುದು. ಅಬ್ಬಯ್ಯ ನಾಯ್ಡು ಅವರು ‘ ತಾಳಿಯ ಭಾಗ್ಯ’ ಸಿನಿಮಾ ನಿರ್ಮಿಸುತ್ತಿದ್ದ ಸಂದರ್ಭ. ಆ ಚಿತ್ರದಲ್ಲಿ ಒಂದು ನಾಯಿ ಪ್ರಮುಖ ಪಾತ್ರ ನಿರ್ವಹಿಸಿತ್ತು. ಶೂಟಿಂಗ್ ಸಂದರ್ಭದಲ್ಲಿ ಆಕಸ್ಮಿಕವಾಗಿ ಗಾಯವಾಯ್ತು ನೋಡಿ, ಆ ನಂತರದಲ್ಲಿ ಅದು ಚೇತರಿಸಿಕೊಳ್ಳಲು ಭರ್ತಿ ಐದು ದಿನ ಹಿಡಿದವು. ಅದುವರೆಗೂ ಚಿತ್ರತಂಡದವರೆಲ್ಲ ಕಾಯಲೇ ಬೇಕಾಗಿ ಬಂದಿತ್ತು. ‘ಭಕ್ತ ಕನಕದಾಸ’ ಚಿತ್ರದ ‘ ಈತನೀಗ ವಾಸುದೇವನು’ ಹಾಡು ಹುಟ್ಟಿದ ಸಂದರ್ಭ ವಿವರಿಸುವ ಮುನ್ನ ಪ್ರಾಸಂಗಿಕವಾಗಿ ಇಷ್ಟೆಲ್ಲ ವಿವರ ಹೇಳಬೇಕಾಯಿತು. ಈಗ ‘ ಕನಕದಾಸ’ ಚಿತ್ರದ ವಿಷಯಕ್ಕೆ ಬರೋಣ. ಶ್ರೇಷ್ಟ ಚಿತ್ರವೆಂದು ರಾಷ್ಟ್ರಪತಿಗಳ ಪದಕ ಹಾಗೂ ಕೇಂದ್ರ ಸರಕಾರದ ಪ್ರಶಸ್ತಿ ಪಡೆದುಕೊಂಡ ಚಿತ್ರ ‘ ಭಕ್ತ ಕನಕದಾಸ’. ವೈ.ಆರ್ ಸ್ವಾಮಿ ಅವರ ನಿರ್ದೇಶನದ ಈ ಚಿತ್ರಕ್ಕೆ ಹುಣಸೂರು ಕೃಷ್ಣಮೂರ್ತಿಯವರು ಸಾಹಿತ್ಯ ಒದಗಿಸಿದ್ದರು. ಹುಣಸೂರು ಅವರಿಗೆ ಜಾನಪದ ವಿದ್ವಾಂಸ ಕರೀಂ ಖಾನ್ ಸಹಾಯಕರಾಗಿದ್ದರು. ನಿರ್ಮಾಪಕ ನಾಯ್ಡು ಹಾಗೂ ಸಂಗೀತ ನಿರ್ದೇಶಕ ಎ.ಎಂ. ವೆಂಕಟರಾಜು ಅವರಿಗೆ ಇದೇ ಮೊದಲ ಚಿತ್ರ. ಡಾ. ರಾಜ್ ಅವರಿಗಾಗಿ ಪಿ.ಬಿ. ಶ್ರೀನಿವಾಸ್ ಅವರು ಹಾಡಲು ಆರಂಭಿಸಿದ್ದು ಕೂಡ ಈ ಚಿತ್ರದಿಂದಲೇ ಎಂಬುದು ಇನ್ನೊಂದು ವಿಶೇಷ. ಈಗ, ‘ ಈತನೀಗ ವಾಸುದೇವನು’ ಹಾಡಿನ ಸಂದರ್ಭ ನೆನಪಿಸಿಕೊಳ್ಳಿ. ಕನಕದಾಸ, ಶ್ರೀಕೃಷ್ಣನ ಪರಮಭಕ್ತ. ಅವನ ಭಕ್ತಿಯ ಬಗ್ಗೆ ಗುರುಗಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಈ ಕಾರಣದಿಂದಲೇ ಮಂಗಳಾರತಿ ತೆಗೆದುಕೊಳ್ಳಲು ಗುಡಿಯೊಳಗೆ ಬರುವಂತೆ ಸೂಚಿಸುತ್ತಾರೆ. ಹೀನ ಕುಲದ ಕನಕನನ್ನು ಗುಡಿಯೊಳಗೆ ಸೇರಿಸಬಾರದು ಎಂದು ಅಲ್ಲಿದ್ದ ಹಿರಿಯ ಬ್ರಾಹ್ಮಣರು ವಾದಿಸುತ್ತಾರೆ. ಅಷ್ಟಕ್ಕೇ ಸುಮ್ಮನಾಗದೆ- ಕನಕದಾಸನ ಬಗ್ಗೆ ಅಷ್ಟೊಂದು ಪ್ರಶಂಸೆ ಮಾಡ್ತಾ ಇದೀರ. ಅವನು ಅಷ್ಟೊಂದು ದೊಡ್ಡ ಭಕ್ತನಾಗಿದ್ದರೆ, ಮಂಗಳಾರತಿಯ ವೇಳೆಗೆ ಭಗವಂತನನ್ನೇ ಇಲ್ಲಿಗೆ ಕರೆಸಲಿ ಎಂದು ಸವಾಲು ಹಾಕುತ್ತಾರೆ. ವಿನೀತಭಾವದಿಂದಲೇ ಈ ಸವಾಲು ಸ್ವೀಕರಿಸುತ್ತಾನೆ ಕನಕ. ಮರುದಿನ ಮಂಗಳಾರತಿಯ ವೇಳೆಗೆ ದೇವಾಲಯದ ಹೊರಗೆ ಢಕ್ಕೆ ಬಾರಿಸುತ್ತಾ ಭಗವಂತನನ್ನು ಪ್ರಾರ್ಥಿಸುತ್ತಾನೆ. ಆಗ ಶ್ವಾನದ ರೂಪದಲ್ಲಿ ದರ್ಶನ ನೀಡುವ ಕೃಷ್ಣ, ಅದೇ ರೂಪದಲ್ಲಿ ಸೀದಾ ದೇಗುಲದೊಳಕ್ಕೆ ಬರುತ್ತಾನೆ. ಇದನ್ನು ಕಂಡಾಕ್ಷಣ- ‘ಅಯ್ಯಯ್ಯೋ, ನಾಯಿಬಂತು, ಓಡ್ಸಿ, ಓಡ್ಸಿ’ ಎಂದು ಎಲ್ಲರೂ ಬೊಬ್ಬೆ ಹಾಕುತ್ತಾರೆ. ಅದನ್ನು ಓಡಿಸುತ್ತಾರೆ. ನಂತರ ಭಗವಂತನ ಧ್ಯಾನದಲ್ಲಿ ಮೈಮರೆತು ಕುಳಿತಿದ್ದ ಕನಕನ ಬಳಿ ಬಂದು -ಎಲ್ಲಪ್ಪಾ ನಿನ್ನ ಭಗವಂತ?’ ಎಂದು ಪ್ರಶ್ನಿಸುತ್ತಾರೆ. ‘ಅವನು ನಾಯಿಯ ರೂಪದಲ್ಲಿ ಬಂದಿದ್ದನಲ್ಲ’ ಎಂದು ಮುಗ್ಧವಾಗಿ ಹೇಳುತ್ತಾನೆ ಕನಕದಾಸ. ಅದಕ್ಕೆ ಬ್ರಾಹ್ಮಣರು- ಓಹ್, ನಾವು ಅಜ್ಞಾನಿಗಳು. ಹಾಗಾಗಿ, ನಮ್ಮಿಂದ ಭಗವಂತನನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಆದ್ದರಿಂದ , ನಿನ್ನ ಭಗವಂತನನ್ನು ಮತ್ತೆ ನಾಳೆ ಮಂಗಳಾರತಿಯ ವೇಳೆಗೆ ಕರೆಸು ಎಂದು ವ್ಯಂಗ್ಯವಾಡುತ್ತಾರೆ. ಈ ಸವಾಲಿಗೂ ವಿನಯದಿಂದಲೇ ಒಪ್ಪಿಗೆ ನೀಡುವ ಕನಕದಾಸ, ಮರುದಿನ ಮಂಗಳಾರತಿಯ ವೇಳೆಯಲ್ಲಿ ಪ್ರಾರ್ಥಿಸಿದಾಗ, ಹಾವಿನ ರೂಪದಲ್ಲಿ ದರ್ಶನ ಕೊಡುತ್ತಾನೆ ಕೃಷ್ಣ. ಈ ಹಾವು ಸೀದಾ ಗರ್ಭಗುಡಿಗೇ ಬಂದಾಗ, ಅಲ್ಲಿದ್ದ ಬ್ರಾಹ್ಮಣರೆಲ್ಲ ಹೆದರಿ ಪರಾರಿಯಾಗುತ್ತಾರೆ. ದೇಗುಲದಲ್ಲಿ ಗುರುಗಳು ಹಾಗೂ ಪುರಂದರ ದಾಸರು ಮಾತ್ರ ಉಳಿಯುತ್ತಾರೆ. ಗುರುಗಳು ಕೃಷ್ಣನ ರೂಪದಲ್ಲಿ ಬಂದ ಹಾವಿಗೆ ಹಾಲು ಕೊಡುತ್ತಾರೆ. ಪುರಂದರ ದಾಸರು ಸಂತೋಷದಿಂದ ಕೈ ಮುಗಿಯುತ್ತಾರೆ. ಈ ಸಂದರ್ಭದಲ್ಲಿ ತನ್ನ ಕೋರಿಕೆಯನ್ನು ಮನ್ನಿಸಿ ಎರಡನೇ ಬಾರಿಗೂ ದರ್ಶನ ನೀಡಿದ ಇಷ್ಟದೈವವನ್ನು ಕಂಡು ಕನಕದಾಸ ಮೈಮರೆತು, ಭಾವಪರವಶನಾಗಿ ಹಾಡುವ ಗೀತೆಯೇ- ‘ ಈತನೀಗ ವಾಸುದೇವನು… ‘ ಈ ಹಾಡಿನ ಚಿತ್ರೀಕರಣ ನಡೆದದ್ದು ಚೆನ್ನೈನ ವಾಹಿನಿ ಸ್ಟುಡಿಯೋದಲ್ಲಿ. ಹಾಡಿನುದ್ದಕ್ಕೂ ಹಾವು ಹೆಡೆ ಎತ್ತಿಕೊಂಡೇ ಇರುತ್ತದೆ. ಈ ಸಂದರ್ಭ ನೈಜವಾಗಿ ಬರಲೆಂದು ಹಾವಾಡಿಗನೊಬ್ಬನನ್ನು ಕರೆಸಲಾಗಿತ್ತು. ಹಾವು ಸದಾ ಹೆಡೆ ಬಿಚ್ಚಿರುವಂತೆ ನೋಡಿಕೊಳ್ಳಲು ಅವನಿಗೆ ಸೂಚನೆಯನ್ನು ನೀಡಲಾಗಿತ್ತು. ನಂತರ ಪಲ್ಲವಿಯ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಕರೆಂಟು ಹೋಯಿತು.! ಆಗ, ಈಗಿನಂತೆ ಜನರೇಟರ್ ವ್ಯವಸ್ಥೆ ಇರಲಿಲ್ಲ. ಹಾಗಾಗಿ, ಕರೆಂಟ್ ಬರುವವರೆಗೂ ಎಲ್ಲರೂ ಕಾದು ಕೂತರು. ಎಷ್ಟೋ ಹೊತ್ತಿನ ನಂತರ ಕಡೆಗೊಮ್ಮೆ ಕರೆಂಟು ಬಂತು. ಮತ್ತೊಮ್ಮೆ ಕರೆಂಟು ಹೋದರೆ ಫಜೀತಿ ಆಗುತ್ತದೆ ಎಂದುಕೊಂಡು ಎಲ್ಲರೂ ಗಡಿಬಿಡಿಯಿಂದಾಗಿ ಚಿತ್ರೀಕರಣಕ್ಕೆ ಸಿದ್ಧವಾದರು. ಆದರೆ, ಹಾವು ನಾಪತ್ತೆಯಾಗಿಬಿಟ್ಟಿತ್ತು. ಕರೆಂಟ್ ಹೋದ ನಂತರ ಯಾರೂ ಅದರ ಬಗ್ಗೆ ಯೋಚಿಸಿರಲೇ ಇಲ್ಲ. ನಂತರ, ಇಡೀ ಚಿತ್ರತಂಡದವರೆಲ್ಲ ಸ್ಟುಡಿಯೋದ ಮೂಲೆ ಮೂಲೆಯನ್ನೂ ಹುಡುಕಿದರು. ಹಾವು ಪತ್ತೆಯಾಗಲೇ ಇಲ್ಲ. ಆಗ ಹುಣಸೂರು ಕೃಷ್ಣಮೂರ್ತಿಯವರು- ‘ ಹಾವಿನ ರೂಪದಲ್ಲಿ ತೆರೆಯ ಮೇಲೆ ಕಾಣಬೇಕಿರುವ ಭಗವಂತ ಹೇಗೆಲ್ಲ ಆಟ ಆಡಿಸ್ತಾನೆ ನೋಡ್ರಪ್ಪ’ ಎಂದು ತಮಾಷೆ ಮಾಡಿದರು. ಈ ವೇಳೆಗೆ ಕಂಗಾಲಾಗಿದ್ದ ಹಾವಾಡಿಗ-‘ ಸ್ವಾಮಿ, ನಂಗೆ ನಿಮ್ಮ ಸಿನಿಮಾ ಬ್ಯಾಡ, ನಿಮ್ಮ ಕಾಸೂ ಬ್ಯಾಡ, ನನ್ನ ಹಾವನ್ನು ವಾಪಸ್ ಕೊಟ್ಟುಬಿಡಿ. ಅದಿಲ್ಲದಿದ್ರೆ ನನ್ನ ಬದುಕು ನಡೆಯಲ್ಲ’ ಎಂದು ಬೊಬ್ಬೆ ಹೊಡೆಯತೊಡಗಿದನಂತೆ. ಊಹುಂ, ಒಡೆಯನ ಕಣ್ಣೀರು ಕಂಡಾಗಲೂ ಹಾವು ಪ್ರತ್ಯಕ್ಷವಾಗಲಿಲ್ಲ! ಆ ದಿನಗಳಲ್ಲಿ ಯೂನಿವ್ಯಾಕ್ಸ್ ಎಂಬ ಸಂಗೀತ ಸಾಧನವಿತ್ತು. ಅದರಲ್ಲಿ ೮-೯ ಬಗೆಯ ಸಂಗೀತ ನುಡಿಸಬಹುದಿತ್ತು. ಈ ವಾದನ ನುಡಿಸಲು ಹನುಮಂತಾಚಾರ್ ಎಂಬುವವರಿಗೆ ಮಾತ್ರ ಗೊತ್ತಿತ್ತು. ಎಲ್ಲ ಕಡೆ ಹುಡುಕಿದರೂ ಹಾವು ಸಿಗದಿದ್ದರಿಂದ ಅನುಮಾನಗೊಂಡ ಹನುಮಂತಾಚಾರ್, ಸೀದಾ ಹೋಗಿ ಯೂನಿವ್ಯಾಕ್ಸ್ ವಾದನ ನೋಡಿದರೆ- ಅಲ್ಲಿ ಸಿಂಬಿ ಸುತ್ತಿಕೊಂಡು ಆರಾಮವಾಗಿ ಮಲಗಿದೆ ನಾಗರಹಾವು! ಬಹುಶಃ ಶೂಟಿಂಗ್ ಸಂದರ್ಭದಲ್ಲಿ ಐದಾರು ಶಾಟ್‌ಗಳಿಗಾಗಿ ಒಂದೇ ಸಮನೆ ಹರಿದಾಡಿ, ಪ್ರಖರ ಬೆಳಕು ಎದುರಿಸಿ ಸುಸ್ತಾಗಿದ್ದರಿಂದ ಹೀಗೆ ಮಾಡಿತ್ತೇನೋ. ಆರಾಮಾಗಿ ಮಲಗಿದ್ದ ಹಾವನ್ನು ಕಂಡದ್ದೇ ತಡ, ಚಿತ್ರತಂಡದವರೆಲ್ಲ ಶ್ರೀಕೃಷ್ಣ ಪರಮಾತ್ಮನನ್ನು ಕಂಡಷ್ಟೇ ಸಂತೋಷದಿಂದ ಹುರ್ರಾ ಎಂದು ಕೇಕೆ ಹಾಕಿದರಂತೆ. ನಂತರ, ಹಾವಿನ ಆಟದಲ್ಲಿ ಸಾಂಗವಾಗಿ ಮೊಳಗಿತು ವಾಸುದೇವನ ಹಾಡು…. ಮುಂದೆ, ಈ ಹಾಡು ರೇಡಿಯೋದಲ್ಲಿ ಕೇಳಿಬಂದಾಗಲೆಲ್ಲ ಹಾವಿನ ಆಟವನ್ನು ನೆನಪು ಮಾಡಿಕೊಂಡು ಮುಗುಳ್ನಗುತ್ತಿದ್ದರಂತೆ ಕರೀಂಖಾನ್.]]>

‍ಲೇಖಕರು avadhi

August 23, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This