ಮಣಿಕಾಂತ್ ಬರೆಯುತ್ತಾರೆ:ಈ ಟಚ್ಚಲಿ ಏನೋ ಇದೆ..

6213_1079515355773_1462958320_30205965_5660699_n

-ಎ ಆರ್ ಮಣಿಕಾಂತ್

ಚಿತ್ರ: ಧಮ್. ಗೀತೆರಚನೆ: ಡಾ. ನಾಗೇಂದ್ರಪ್ರಸಾದ್.

ಗಾಯಕಿ: ಲಕ್ಷ್ಮಿ. ಸಂಗೀತ: ಗುರುಕಿರಣ್

ಈ ಟಚ್ಚಲಿ ಏನೋ ಇದೆ

ಕಣ್ಣಂಚಲಿ ಸುಳಿಮಿಂಚಿದೆ

ಮನದಾ ಮರದಾ ಕೋಗಿಲೆ ಕುಹೂ ಎಂದಿದೆ

ಮೊದಲಾ ತೊದಲೇ ಹಾಡಾಗಿದೆ ||ಪ||

ತೇಲಾಡಿದೆ, ಓಲಾಡಿದೆ

ಎದೆತಾಳವು ಜೋರಾಗಿದೆ

ಕಾಯಾಗದೆ ಹಣ್ಣಾಗಿದೆ

ಈ ಜೀವವು ನೀರಾಗಿದೆ

ಈ ಮೋಹದಾ ದಾಸೋಹದಾ

ದಾಸಾನುದಾಸಿ ಆದೆ ನಾ ||1||

ಈ ಹಾಟರ್ಿಗೆ ಏನಾಗಿದೆ?

ಮಾತಿಲ್ಲದೆ ಬೇಜಾರಿದೆ

ಸಾಕಾಗಿದೆ, ಬೇಕಾಗಿದೆ

ಈ ತಲ್ಲಣ ಹಾಯಾಗಿದೆ

ಈ ಶೀತಲಾ ಕೋಲಾಹಲಾ

ಹಾಲಾಗಿ ಮೇರೆ ಮೀರಿದೆ ||2||

fr2

ಗೀತೆರಚನೆಕಾರ ನಾಗೇಂದ್ರಪ್ರಸಾದ್ ಅಂದರೆ, ಈಗಲೂ ಎಲ್ಲರಿಗೂ ನೆನಪಾಗುವುದು- `ಕೆಂಚಾಲೋ ಮಂಚಾಲೋ ಹೆಂಗವ್ರ್ಲಾ ನಿಮ್ಮ ಡವ್ಗಳೂ’ ಎಂಬ ಗೀತೆಯೇ. ನಾಲ್ಕು ವರ್ಷದ ಹಿಂದೆ `ಪಡ್ಡೆಗಳ ಪಾಲಿನ ರಾಷ್ಟ್ರಗೀತೆ’ ಎಂದೇ ಹೆಸರಾಗಿದ್ದ ಆ ಹಾಡು, ನಾಗೇಂದ್ರಪ್ರಸಾದ್ ಅವರಿಗೆ ಇನ್ನಿಲ್ಲದ ಜನಪ್ರಿಯತೆಯನ್ನು ತಂದುಕೊಟ್ಟಿತು. ಅಷ್ಟೇ ಅಲ್ಲ, `ಮೀಟರ್ ಇರುವ’ ಹಾಡುಗಳ ಬರಹಗಾರ ಎಂಬ ಹಣೆಪಟ್ಟಿ ನಾಗೇಂದ್ರಪ್ರಸಾದ್ಗೆ ಅಂಟಿಸಿಕೊಳ್ಳುವುದಕ್ಕೂ ಕಾರಣವಾಯಿತು.

ಈಗ್ಗೆ ಹತ್ತು ವರ್ಷಗಳ ಹಿಂದೆ, ಕೆ.ವಿ. ಜಯರಾಂ ನಿದರ್ೇಶನದ `ಗಾಜಿನ ಮನೆ’ ಚಿತ್ರಕ್ಕೆ `ಬೇವು ಬೆಲ್ಲ ಹಂಚಿಕೊಂಡೆ’ ಎಂಬ ಹಾಡು ಬರೆಯುವ ಮೂಲಕ ಚಿತ್ರರಂಗಕ್ಕೆ ಬಂದವರು ನಾಗೇಂದ್ರಪ್ರಸಾದ್. ಅದಕ್ಕೂ ಹಿಂದೆ ಅವರು ಆಯುವರ್ೇದಿಕ್ ಡಾಕ್ಟರಾಗಿದ್ದರು. ಆರಂಭದ ದಿನಗಳಲ್ಲಿ ಚಿತ್ರರಂಗದ ಮಂದಿಯಿಂದ ಅಂಥ ಪ್ರೋತ್ಸಾಹವೇನೂ ಸಿಗದೆ ಹೋದಾಗ, 2004ರಲ್ಲಿ `ಅಮ್ಮ’ ಹೆಸರಿನ ಆಲ್ಬಂ ಹೊರತಂದರು. ಅವರಲ್ಲಿ ಅಮ್ಮನ ಪ್ರೀತಿ, ಮಮತೆ, ವಾತ್ಸಲ್ಯ ಕುರಿತ ಎಂಟು ಹಾಡುಗಳಿದ್ದವು. ಒಂದೊಂದು ಹಾಡಿಗೆ ಒಬ್ಬರಂತೆ ಎಂಟು ಮಂದಿ ಸಂಗೀತ ನಿದರ್ೇಶಕರು ಸಂಗೀತ ನಿದರ್ೇಶನ ಮಾಡಿದ್ದರು.

ಅಂದಹಾಗೆ, ಕನ್ನಡ ಚಿತ್ರಗೀತೆಯ ಪರಂಪರೆಗೇ ಹೊಸದು ಎಂಬಂಥ ಪದಪ್ರಯೋಗದೊಂದಿಗೆ ಹೊಸತನದ ಗೀತೆರಚನೆಗೆ ಕೈಹಾಕಿ ಗೆದ್ದವರು ನಾಗೇಂದ್ರಪ್ರಸಾದ್. ಆ ಗೀತೆಯೇ- `ಈ ಟಚ್ಚಲಿ ಏನೋ ಇದೆ!’ ಸ್ವಾರಸ್ವವಿರುವುದೇ ಈ ಸಾಲಿನಲ್ಲಿ. ಏಕೆಂದರೆ- ಇಲ್ಲಿ ಕನ್ನಡ ಲಿಪಿಯ ಇಂಗ್ಲಿಷ್ ಪದವಿದೆ. ಖಟ್ಠ್ಚಜ ಎಂಬ ಇಂಗ್ಲಿಷ್ ಪದದೊಂದಿಗೆ ‘ಅಲ್ಲಿ’ ಎಂಬುದೂ ಸೇರಿಕೊಂಡು `ಟಚ್ಚಲಿ’ ಆಗಿದೆ. ಇದಕ್ಕೆ ಪ್ರಾಸವಾಗಿ, ಎರಡನೇ ಸಾಲಿನಲ್ಲಿ `ಕಣ್ಣಂಚಲಿ’ ಎಂಬ ರೂಪಕವನ್ನು ತಂದುಕೂರಿಸಿ ಇಡೀ ಹಾಡಿಗೇ ಒಂದು ಸುವರ್ಣ ಚೌಕಟ್ಟು ಹಾಕಿಬಿಟ್ಟಿದ್ದಾರೆ ನಾಗೇಂದ್ರಪ್ರಸಾದ್. ಈ ಕಾರಣದಿಂದಲೇ ಅದನ್ನೊಂದು ವಿಶಿಷ್ಟ ಗೀತೆ ಎಂದೇ ಗುರುತಿಸಲಾಗುತ್ತಿದೆ.

ಅದರರ್ಥ, ಕನ್ನಡದಲ್ಲಿ ಇಂಗ್ಲಿಷ್ ಪದ ಬಳಕೆಯ ಹಾಡುಗಳು ಬಂದಿರಲಿಲ್ಲ ಎಂದಲ್ಲ. ಈ ಹಿಂದೆ ಬೆಸುಗೆ ಚಿತ್ರಕ್ಕಾಗಿ ಆರ್.ಎನ್. ಜಯಗೋಪಾಲ್ ಅವರು ಇಡೀ ಹಾಡನ್ನೇ ಇಂಗ್ಲಿಷ್ನಲ್ಲಿ ಬರೆದಿದ್ದರು. ಹಾಗೆಯೇ ಚಿ. ಉದಯಶಂಕರ್ ಅವರು ಡಾ. ರಾಜ್ ಅಭಿನಯದ `ಹಾವಿನ ಹೆಡೆ’ ಚಿತ್ರಕ್ಕಾಗಿ- `ಮೈ ನೇಮ್ ಈಸ್ ರಾಜ್, ವಾಟ್ ಈಸ್ ಯುವರ್ ನೇಮ್ ಪ್ಲೀಸ್…’ ಎಂಬ ಹಾಡು ಬರೆದಿದ್ದರು. ಗಮನಿಸಬೇಕಾದ ಸಂಗತಿಯೆಂದರೆ- ಆರ್ಎನ್ಜೆ ಹಾಗೂ ಉದಯಶಂಕರ್ ಅವರ ಗೀತೆಗಳಲ್ಲಿ ಇಡೀ ಹಾಡು ಅಥವಾ ಒಂದೆರಡು ಸಾಲುಗಳು ಸಂಪೂರ್ಣ ಇಂಗ್ಲಿಷ್ಮಯವಾಗಿದ್ದವು. ಆದರೆ, ನಾಗೇಂದ್ರಪ್ರಸಾದ್ ಮಾಡಿರುವ ಚಮತ್ಕಾರ ಏನೆಂದರೆ- ಹಾಡಿನ ಮೊದಲ ಸಾಲಲ್ಲಿಯೇ `ಟಚ್ಚಲಿ’ ಎಂಬ ಪದ ಬಳಸಿದ್ದಾರೆ. ಆ ಮೂಲಕ ಒಂದು ಕುತೂಹಲ ಹುಟ್ಟಿಸಿದ್ದಾರೆ. ಮುಂದೆ, ಅದೇ ಹಾಡಿನಲ್ಲಿ `ಈ ಹಾಟರ್ಿಗೆ ಏನಾಗಿದೆ?’ ಎಂದೂ ಬರೆಯುವ ಮೂಲಕ ಹದಿಹರೆಯದವರ ಎದೆಬಡಿತ ಹೆಚ್ಚುವಂತೆ; ಹಾಡು ಕೇಳುವವರೂ ಒಂದೆರಡು ಕ್ಷಣ ರೋಮಾಂಚನಕ್ಕೆ ಈಡಾಗುವಂತೆ ಮಾಡಿಬಿಟ್ಟಿದ್ದಾರೆ.

a_Rakshita21

`ಇಂಥದೊಂದು ಹಾಡು ಬರೆದ ಸಂದರ್ಭದಲ್ಲಿ ನಾಗೇಂದ್ರಪ್ರಸಾದ್ ಅವರ ಮನಸ್ಥಿತಿ ಹೇಗಿತ್ತು? ಅವರು ಈ ಹಾಡು ಬರೆಯಲು ಕಾರಣವಾದ ಸಂದರ್ಭ ಯಾವುದು? ಇದೇನಾದರೂ ಸ್ವಂತ ಅನುಭವವೇ ಹೇಗೆ? `ಹೌದು’ ಅನ್ನುವುದಾದರೆ `ಒಂದು ಹಾಡನ್ನೇ ಬರೆಯುವಷ್ಟರಮಟ್ಟಿಗಿನ `ಟಚ್’ ಕೊಟ್ಟ ಆ ಬೆಡಗಿಯಾದರೂ ಯಾರು? ಅಂಥದೊಂದು `ಟಚ್’ ಸಿಕ್ಕ ನಂತರವಾದರೂ, ನಾಗೇಂದ್ರಪ್ರಸಾದ್ಗೆ- ಕೆಲವೇ ಕ್ಷಣದ ಮಟ್ಟಿಗಾದರೂ ಏನೂ ಆಗಲಿಲ್ಲವಾ?’ ಇಂಥದೇ ಕೌತುಕದ ಪ್ರಶ್ನೆಗಳಿಗೆ ಸ್ವತಃ ನಾಗೇಂದ್ರಪ್ರಸಾದ್ ಅವರೇ ಉತ್ತರಿಸಿದ್ದು ಹೀಗೆ:

ಕನಕಪುರ ಶ್ರೀನಿವಾಸ್ ನಿಮರ್ಾಣದ, ಸುದೀಪ್-ರಕ್ಷಿತಾ ಮುಖ್ಯ ಪಾತ್ರಗಳಲ್ಲಿದ್ದ `ಧಮ್’ ಚಿತ್ರದ ಸಿದ್ಧತೆ ನಡೆದಿತ್ತು. ನಿದರ್ೇಶನದ ಹೊಣೆಯನ್ನು ಎಂ.ಎಸ್. ರಮೇಶ್ ಹೊತ್ತಿದ್ದರು. ಚಿತ್ರಕತೆಯ ಜತೆಗೆ ಸಹ ನಿದರ್ೇಶನಕ್ಕೆ ರಾಜಶೇಖರ್ ಅವರಿದ್ದರು. ಅದೊಂದು ದಿನ ರಾಜಶೇಖರ್ ನನ್ನನ್ನು ಮಾರೇನಹಳ್ಳಿಯಲ್ಲಿದ್ದ ಸಂಗೀತ ನಿದರ್ೇಶಕ ಗುರುಕಿರಣ್ ಅವರ ಮನೆಗೆ ಕರೆದೊಯ್ದರು. ಅಲ್ಲಿ ಚಿತ್ರದ ಬಗ್ಗೆ ವಿವರಿಸಿ, ಒಂದು ಹಾಡು ಬರೆಯಲು ಸೂಚಿಸಿದರು. ಆಗಲೇ ಗುರುಕಿರಣ್ ಅವರು, ಟ್ಯೂನ್ ಕೇಳಿಸಿದರು. ಯುವ ಪೀಳಿಗೆಯವರು ಗುರುತಿಸುವಂಥ; ಅದರಲ್ಲೂ `ಹೂವೂ ಚೆಲುವೆಲ್ಲಾ ನಂದೆಂದಿತು’ ಹಾಗೂ `ಹಸಿರು ಗಾಜಿನ ಬಳೆಗಳೆ…’ ಥರದ ಹಾಡುಗಳನ್ನು ಬರೆಯಬೇಕೆಂದು ನನಗೆ ತುಂಬ ಆಸೆಯಿತ್ತು. ಅಂಥದೊಂದು ಪ್ರಯತ್ನವನ್ನು ಈ ಸಿನಿಮಾದಲ್ಲೇ ಮಾಡಬೇಕು ಅಂದುಕೊಂಡೆ. ಹೀಗೆ ಯೋಚಿಸುತ್ತಿದ್ದಾಗಲೇ-`ಧಮ್’ ಚಿತ್ರದಲ್ಲಿ, ಪ್ರೀತಿಸುವ ವಿಷಯ ಪರಸ್ಪರರಿಗೆ ಗೊತ್ತಾದ ನಂತರ- ನಾಯಕ, ನಾಯಕಿಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೋಗುವ ದೃಶ್ಯವಿತ್ತು. ಈ ಸಂದರ್ಭದಲ್ಲಿ ಗೆಳೆಯನ ಮೊದಲ ಸ್ಪರ್ಶದಿಂದ ಉಂಟಾದ ಪುಳಕದ ಬಗ್ಗೆಯೇ ಒಂದು ಹಾಡು ಬರೆದು ಅದನ್ನು ನಾಯಕಿಯಿಂದ ಹೇಳಿಸಿದರೆ ಹೇಗೆ ಎಂಬ ಯೋಚನೆ ಬಂತು. ಅದನ್ನೇ, ರಾಜಶೇಖರ್, ರಮೇಶ್ ಹಾಗೂ ಗುರುಕಿರಣ್ಗೆ ಹೇಳಿದೆ. ಅವರೆಲ್ಲ `ಒಳ್ಳೇ ಐಡಿಯಾ. ಹಾಡು ಬರೀರಿ’ ಅಂದರು.

`ಸರಿ, ಸರಿ’ ಎಂದು ಹಾಡು ಬರೆಯಲು ಕುಳಿತೆ ನಿಜ. ಜಪ್ಪಯ್ಯಾ ಅಂದರೂ ಒಂದು ಪದವೂ ಹೊಳೆಯಲಿಲ್ಲ. ಆ ಸಂದರ್ಭದಲ್ಲಿಯೇ ಹತ್ತಿರ ಬಂದ ರಾಜಶೇಖರ್- `ರೀ ಪ್ರಸಾದ್, ನಿಮ್ಗೆ ಮೇಲಿಂದ ಮೇಲೆ ಫೋನ್ಗಳು ಬರ್ತಾನೇ ಇರ್ತವೆ ತಾನೆ? ಹಾಗೆ ಫೋನ್ ಮಾಡೋರ ಪೈಕಿ ಹುಡುಗಿಯರೇ ಜಾಸ್ತಿ ಅನ್ನೋದು ನನ್ನ ಅನುಮಾನ. ಹೀಗೆ ಫೋನ್ ಮಾಡಿದವರ ಪೈಕಿ ಹಲವರು ನಿಮ್ಮ ಕನಸಿಗೂ ಬರಬಹುದು. ಅವರು ಕನಸಲ್ಲಿ ಬಂದು ಹಾಗೇ ಸುಮ್ನೆ `ಟಚ್’ ಕೊಡಬಹುದು. ಆಗ ನಿಮ್ಗೆ ಏನನ್ನಿಸ್ತದೆ ರೀ? ಅದನ್ನೆಲ್ಲ ನೆನಪಿಸಿಕೊಂಡು ಹಾಡು ಬರೀರೀ’ ಎಂದು ರೇಗಿಸಿದರು.

ಆ ಕ್ಷಣದಲ್ಲಿಯೇ ಅಚಾನಕ್ಕಾಗಿ `ಈ ಸ್ಪರ್ಶದಿ ಏನೋ ಇದೆ’ ಎಂಬ ಸಾಲು ಹೊಳೆಯಿತು. ಅದನ್ನೇ ಗುರುಕಿರಣ್ ಹಾಗೂ ರಮೇಶ್ ಅವರಿಗೆ ಬರೆದು ತೋರಿಸಿದೆ. ಅವರಿಬ್ಬರೂ-`ಈ ಸಾಲು ಚೆನ್ನಾಗಿದೆ ನಿಜ. ಆದ್ರೆ ಪಂಚ್ ಇಲ್ಲ. ಬೇರೆ ಪದ ಹಾಕೋಕೆ ಸಾಧ್ಯವಾ ನೋಡಿ’ ಅಂದ್ರು. ನಂತರದ ಐದು ನಿಮಿಷ ತಲೆಕೆಡಿಸಿಕೊಂಡರೂ ಏನೂ ಹೊಳೆಯಲಿಲ್ಲ. ಬೇಜಾರಾಯಿತು. ಎದ್ದು ಹೊರಬಂದು ಗೇಟ್ ಬಳಿ ನಿಂತೆ. `ಈ ಸಾಲಲ್ಲಿ ಪಂಚ್ ಇಲ್ಲ’ ಎಂಬ ಗುರುಕಿರಣ್, ರಮೇಶ್ರ ಮಾತು ನೆನಪಾಯಿತು. ಪಂಚ್ ಇರಬೇಕು ಅಂದರೆ- ಇಂಗ್ಲಿಷ್ ಪದವನ್ನೇ ಯಾಕೆ ಬಳಸಬಾರದು ಅನ್ನಿಸಿತು. ಆಗಲೇ `ಸ್ಪರ್ಶ’ಕ್ಕೆ ಬದಲಾಗಿ `ಈ ಟಚ್ಚಲಿ ಏನೋ ಇದೆ’ ಎಂದು ನನ್ನಷ್ಟಕ್ಕೆ ನಾನೇ ಗುನುಗಿಕೊಂಡೆ. ಇದನ್ನು ರಮೇಶ್ ಹಾಗೂ ಗುರುಕಿರಣ್ಗೆ ಹೇಳುವುದು ಹೇಗೆ ಎಂದು ಚಡಪಡಿಸುತ್ತಿದ್ದಾಗ, ಅವರೇ ಬಂದು-`ಏನಾದ್ರೂ ಹೊಳೆಯಿತಾ’ ಎಂದರು.

ನಾನು ಸಂಕೋಚದಿಂದ- ಒಂದು ಪದ ಹೊಳೆದಿದೆ. ಅದನ್ನು ಕೇಳಿ ನೀವು ನಗಬಾರದು, ತಪ್ಪು ತಿಳಿಯಬಾರದು’ ಎಂದು ಮೊದಲೇ ವಿನಂತಿಸಿ- `ಈ ಟಚ್ಚಲಿ ಏನೋ ಇದೆ, ಕಣ್ಣಂಚಲಿ ಸುಳಿಮಿಂಚಿದೆ’ ಎಂದು ಹೇಳಿದೆ. ಗುರುಕಿರಣ್ ಮತ್ತೆ ಮತ್ತೆ ಆ ಸಾಲನ್ನೇ ಗುನುಗಿಕೊಂಡು `ತುಂಬಾ ಚೆನ್ನಾಗಿದೆ ರೀ. ಮುಂದುವರಿಸಿ’ ಅಂದರು.

ಈ ಮಾತು ಕೇಳಿದ್ದೇ- ನಿರಾಳ ಅನ್ನಿಸ್ತು. ಆಗಲೇ, ಪಲ್ಲವಿಯಲ್ಲಿ ಕಂಗ್ಲಿಷ್ ಪದ ಇರುವುದರಿಂದ ಚರಣವನ್ನು ಕನ್ನಡಪದಗಳಿಂದಲೇ ತುಂಬಿಸಬೇಕು ಅಂದುಕೊಂಡೆ. ಆದರೆ, ಎರಡನೇ ಚರಣಕ್ಕೆ ಬಂದಾಗ- ನಾಯಕಿ, ಸ್ವಲ್ಪ ಬಿಡುಬೀಸು ಸ್ವಭಾವದವಳು ಹಾಗೂ ಕಾಲೇಜು ಮೆಟ್ಟಿಲು ಹತ್ತಿದವಳು ಎಂಬುದು ನೆನಪಿಗೆ ಬಂತು. ಅಷ್ಟೆಲ್ಲ ಓದಿದವಳು ಮಾತಿನ ಮಧ್ಯೆ, ಹಾಡಿನ ಮಧ್ಯೆ ಇಂಗ್ಲಿಷ್ ಹೊಡೀದೇ ಇರ್ತಾಳಾ ಅನ್ನಿಸ್ತು. ತಕ್ಷಣವೇ ಎರಡನೇ ಚರಣದ ಮೊದಲ ಸಾಲಿನಲ್ಲಿ `ಈ ಹಾಟರ್ಿಗೆ ಏನಾಗಿದೆ?’ ಎಂಬ ಸಾಲು ಸೇರಿಸಿದೆ.

ಹೀಗೆ, ಒಂದೊಂದೇ ಸಾಲನ್ನು ಅಂದಾಜು ಮಾಡಿಕೊಂಡು ಬರೆಯುತ್ತಿದ್ದಾಗಲೇ- ಬೈಕ್ನಲ್ಲಿ ಪ್ರಿಯತಮನೊಂದಿಗೆ ಕೂತ ಹುಡುಗಿಯ ಮನಸ್ಥಿತಿ ಹೇಗಿರುತ್ತದೆಂದು ಕಲ್ಪಿಸಿಕೊಂಡೆ. ಹೌದು; ಆ ಕ್ಷಣದಲ್ಲಿ ಅವಳಿಗೆ ಅವನೊಂದಿಗೇ ಇರಬೇಕೆಂಬ ಆಸೆಯಿರುತ್ತದೆ. ಜತೆಗೇ ಅವನು ಏನಾದರೂ ಮಾಡಿಬಿಡಬಹುದು(?) ಎಂಬ ಭಯವಿರುತ್ತದೆ. ಸಂಕೋಚವಿರುತ್ತದೆ ಹಾಗೂ ತಮ್ಮನ್ನು ಪರಿಚಯದ ಯಾರಾದರೂ ಕಂಡರೆ ಗತಿ ಏನು ಎಂಬ ಗಾಬರಿಯಿರುತ್ತದೆ. ಅದೆಲ್ಲ ಇದ್ದರೂ ಅವನ ಪ್ರೀತಿಗಾಗಿ-ದಾಸೋಹ ನಡೆಸುವ ಮಂದಿ ಇರುತ್ತಾರಲ್ಲ? ಆ ಸ್ಥಿತಿಗೇ ಬಂದಿರುತ್ತಾಳೆ. ಅವನನ್ನು ಪ್ರೀತಿಸುತ್ತಿದ್ದೇನೆ ಎಂದು ಅರ್ಥವಾದ ತಕ್ಷಣ- ಪೂವರ್ಾಪರ ತಿಳಿಯುವ ಮೊದಲೇ ಅವನೊಂದಿಗೆ ಬದುಕುವ ನಿಧರ್ಾರಕ್ಕೆ ಬಂದಿರುತ್ತಾಳೆ ಹುಡುಗಿ. ಅದೇ ಕಾರಣದಿಂದ ಅವನು ಹೇಳಿದಂತೆಲ್ಲ ಕೇಳುತ್ತಾಳೆ. ಇದನ್ನೆಲ್ಲ ನೆನಪು ಮಾಡಿಕೊಂಡು `ಕಾಯಾಗದೆ ಹಣ್ಣಾಗಿದೆ’ `ಈ ಮೋಹವಾ ದಾಸೋಹದಾ ದಾಸಾನುದಾಸಿ ಆದೆ ನಾ’ ಎಂಬ ಸಾಲುಗಳನ್ನೂ ಬರೆದೆ.

ಹೀಗೆ ರೂಪುಗೊಂಡ ಹಾಡು ಎಲ್ಲರಿಗೂ ಇಷ್ಟವಾಯಿತು. ವಿಶೇಷ ಹಾಡು ಅನಿಸಿದ್ದರಿಂದ ಯಾರಾದರೂ ಹೊಸಬರಿಂದ ಹಾಡಿಸಿ ಸರ್ ಎಂದೆ. ಪರಿಣಾಮ, ಲಕ್ಷ್ಮಿ ಎಂಬ ಬಾಲೆ ಈ ಹಾಡಿಗೆ ದನಿಯಾದಳು. ಹಾಡು ಹಿಟ್ ಆಯಿತು. ಎಲ್ಲರೂ `ಈ ಮೋಹದ ದಾಸೋಹದ…’ ಸಾಲನ್ನು ಮತ್ತೆ ಮತ್ತೆ ಉಲ್ಲೇಖಿಸಿ `ನೀವು ಕವಿ ಕಣ್ರೀ’ ಎಂದು ಶಹಭಾಷ್ಗಿರಿ ನೀಡಿದರು. ಆ ಮಾತು ಕೇಳಿದಾಗ- ಪೆನ್ ಹಿಡಿದದ್ದು ಸಾರ್ಥಕ ಅನ್ನಿಸಿತು…

ಇಷ್ಟು ಹೇಳಿ, ಉಳಿದಿದ್ದೇನೂ ಇಲ್ಲ ಎಂಬಂತೆ ಅಡ್ಡಡ್ಡ ತಲೆಯೊಗೆದು ಕೈಕುಲುಕಿದ ನಾಗೇಂದ್ರಪ್ರಸಾದ್ ತಕ್ಷಣವೇ ಹೇಳಿಬಿಟ್ಟನು: `ಈ ಟಚ್ಚಲಿ ಏನೋ ಇದೆ…’

`ಇಲ್ಲ ಸ್ವಾಮೀ’ ಅನ್ನಲು ಮನಸ್ಸು ಬರಲಿಲ್ಲ.

‍ಲೇಖಕರು avadhi

August 14, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

2 ಪ್ರತಿಕ್ರಿಯೆಗಳು

 1. mayura

  Manikanth,

  Chi Udayashankar has also written a song for Operation Diamond Racket, “If you come today” completely in English. You missed this point.

  ಪ್ರತಿಕ್ರಿಯೆ
 2. Berlinder

  ಸ್ಪರ್ಶ

  ಗೂಢಭಾವ ಪಡೆದಿದೆ ಆ ಶಬ್ದ ’ಸ್ಪರ್ಶ’
  ಗಾಢಭಾವ ವೈಭವ ಇನಿಸೆ ನಾದ ಹರ್ಷ.
  ತಡೆಯಲಾಗದ ಸುಪ್ತ ಕೌತುಕ ಆ ಪದದಲಿ,
  ಹೊಡೆವುದಾಗ ಹೃದಯ ತಮಟೆ ಮೋದದಲಿ.
  *
  ಸಗ್ಗದೇಣಿ ಇಳಿದು ಬಂದತೆ ಆ ಮಾತು
  ಸೊಗವಾಣಿ ಸುಳಿದು ಬರುವಂತೆ ಆ ಸೃತಿ
  ದೇವಭಾಷೆಯ ಪ್ರಧಾನ ನುಡಿಮುತ್ತು
  ಭಾವವೈಕರಿಯ ಪ್ರಸರಿಪ ಪದದ ಜ್ಯೋತಿ
  *
  ’ಸ್ಪರ್ಶ’ವೆನೆ ಮನ ತಳಮಳಿಸಿ ಕುಣಿವುದು,
  ಆಕರ್ಷವಾಣಿ ತಲ್ಲಣಿಸಿ ತನು ತಣಿವುದು.
  ರತಿಪ್ರೇಮ ಸೃತಿರಾಗ ಕೂಡುವ ಸಂಭೋಗ
  ಮತಿಸೋಮ ಅತಿಪ್ರಭಾವ ನೀಡುವ ಬೆಳಗ!
  *
  ’ಸ್ಪರ್ಶ’ ಮಾತಲಿ ಹುದುಗಿದೆ ಭಾವಸರೋವರ
  ವಿಮರ್ಷಿಸೆ ಪರಮಾರ್ಥ ಉದುಗಿ ಮನೋಹರ
  ಮನೋದಯದಿ ಮುತ್ತಿ ಪ್ರೇಮ ಮಥನ
  ಮನಮರೆವ ತನುಕ್ರಾಂತಿ ಪರಮ ಚೇತನ!
  *
  ’ಸ್ಪರ್ಶ’ ಶಬ್ದದಲೆಂಥಾ ಪ್ರಭಲ ಭಾವಸಂಪತ್ತು
  ಮರೆಸೆ ಇಳೆಯ ವಾಸ್ತವ ಚಿಂತೆಯ ಹೊತ್ತು
  ನೆನಪಿಗೆ ಸೆಳೆದು ಇನಿಯಳ ಪ್ರೇಮಮಿಲನ,
  ಸನಿಹಕಿಳಿದು ಪರಮಪ್ರೇಮಗಳ ಚಲನ!
  *
  ಅಂಥಾ ಸೊಗಸಾದ ಮಾತು ತಿರಾಕರಿಸಿ,
  ಎಂಥಾ ಭಾವರೋಗ ಉದಿಸಿ ನಿರಾಕರಿಸಿ,
  ಸವಿಗನ್ನಡಕೆ ಹಾಳು ಪರಭಾಷೆಯ ಗೋಳು,
  ಶ್ರೀಕನ್ನಡ ಕೊಲ್ಲು ಮಾಡಿ ಮಹಾನುಡಿಪಾಳು.
  *
  ನೀಚಭಾವದ ಪರನುಡಿ ಪೋಣಿಸಿ ’ಟಚ್ಚು’,
  ಅದಾವ ಮತಿಗತ ಮೈಮರೆತ ಹುಚ್ಚು?
  ಅದರೊಳು ಕಂಡೊಬ್ಬ ಅವುದೋ ’ಪಂಚು’,
  ಅಲ್ಪಮತಿಯ ಚ್ಯುತಿಯ ಕನ್ನಡಕೆ ಚುಚ್ಚು.
  *
  ಆ ಪರಮಾತು ಕೇಳಿ ಮನಕಾಗಿ ನೆನಪು
  “ಡೋಂಟ್ ಟಚ್ಚ್” ಪಲಕಗಳ ಬೆದರಿಕೆ,
  ಶಿವಪೂಜೆಯಲಿ ಕರಡಿ ಬಿಟ್ಟಂತೆ ತಪ್ಪು,
  ಸುರಸೌಂದರ್ಯ ಹಾಡಿಗೆ ಜೋಡಿಸಿ ಬೆರಕೆ!
  *
  ಎಂಥಾ ಸೊಗಸಿನ ಹಾಡಿಗೆ ಮುಡಿಸಿ
  ಮನ್ಮಥನಿಗೆ ಕಹಿಕಸಾಯ ಕುಡಿಸಿ
  ಪೂರ್ಣಿಮರಾತ್ರಿ ಮೋಡಗಳ ಮುಚ್ಚು,
  ಅಂತೆನಿಸಿತು ಮೂಡ ಬೆರಕೆಮಾತು ’ಟಚ್ಚು’!
  *
  ಪ್ರಿಯ ಮಣಿಕಾಂತ್ ಕಾವ್ಯ ರಚನೆಗೆ ನಮನ,
  ದಿವ್ಯ ಭಾವದ ಶ್ರವ್ಯ ರಾಗದ ಸೂರೆ ತನುಮನ.
  ಶ್ರೇಯ ಶ್ರೀಮಂತ ಭಾವಗಾನ ತಲ್ಲಣ ಕುಣಿಸಿ
  ಹೃದಯ ಕ್ರಾಂತಿ ಆನಂದ ತಾರಣ ತಣಿಸಿ.
  *
  ನಿಮ್ಮ ಹಾಡಿನೊಡನೆ ಮನವೆನ್ನ ತೂರಾಡಿದೆ,
  ಜೋಡಿ ಮಾತುಗಳ ಚಂದ ಪೋಣಿಕೆಯ ಅಂದ
  ಶಿಶುಮಾತೆನ್ನ ಗುರುತಿಸಿ ತಿಳಿಸೆ: ’ಜೋರಾಗಿದೆ’.
  ಭ್ರಮರಕದು ಮಕರಂದ, ನನಗಾನಂದವಾಗಿದೆ!
  *
  ಸವಿಗನ್ನಡ ಗೆಲ್ಗೆ! ನಮಿಸುವೆ ನಿಮಗೆ,
  ಸುಶ್ರಾವ್ಯ ಮಾತು ’ಸ್ಪರ್ಶ’ ದೊಳಗೆ
  ಸುಪ್ತಾರ್ಥವುಂಟು ತಿಣುಕಿದಷ್ಟೂ
  ತಿಳಿದು ಬರುವುದು ಮಹಾನಿಘಂಟು!
  *
  ವಿಜಯಶೀಲ
  *

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ mayuraCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: