ಮಣಿಕಾಂತ್ ಬರೆಯುತ್ತಾರೆ:ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ…

ಗೆಣೆಕಾರ ಅಂದಾಗ ರೋಮಾಂಚನ, ಯಜಮಾನ ಅಂದಾಕ್ಷಣ ಬೇಸರ!ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ… ಚಿತ್ರ: ತ್ರಿಶೂಲ. ಗೀತೆ ರಚನೆ: ಜಾನಪದ ಸಂಗೀತ: ಕಲ್ಯಾಣ್ ವೆಂಕಟೇಶ್.  ಗಾಯನ: ಮಂಜುಳಾ ಗುರುರಾಜ್ ಕುಂತ್ರೆ ನಿಂತ್ರೆ ಅವನ್ದೆ  ಧ್ಯಾನಜೀವಕ್ಕೆಲ್ರಿ ಸಮಾಧಾನಅವನ್ಗೆ ಎಂಥಾ ಬಿಗುಮಾನಅವನೇ ನನ್ನ ಗೆಣೆಕಾರ, ಅವನೇ ನನ್ನ ಯಜಮಾನ ||ಪ|| ಇಂದ್ರಲೋಕ್ದಾಗಿಲ್ಲ ಕಣ್ರಿ ಚಂದ್ರ ಲೋಕ್ದಾಗಿಲ್ಲ ಕಣ್ರಿಈ ಮೂರು ಲೋಕ್ದಾಗಿಲ್ಲ ಕಣ್ರಿಅವನೇ ನನ್ನಾ ಗೆಣೆಕಾರ, ಅವನೆ ನನ್ನ ಯಜಮಾನ ||೧|| ರೂಪ್ದಲ್ಲವ್ನು ಇಂದ್ರ ಕಣ್ರಿ, ರೂಪ್ದಲ್ಲವ್ನು ಚಂದ್ರ ಕಣ್ರಿಕೇರಿಗವ್ನೂ ಒಬ್ನೆ ಕಣ್ರಿಅವನೇ ನನ್ನಾ ಗೆಣೆಕಾರ, ಅವನೇ ನನ್ನ ಯಜಮಾನ ||೨|| ಜಾತ್ರೇಲವ್ನ ಕಂಡೆ ಕಣ್ರಿ, ಛತ್ರಿ ಮುಚ್ಚಿ ನಿಂತೆ ಕಣ್ರಿಪಕ್ಕಕ್ಕೆ ಬಂದೂ ನಿಂತ ಕಣ್ರೀ,ನನ್ ಪಕ್ಕಕ್ಕೆ ಬಂದೂ ನಿಂತ ಕಣ್ರಿಅವ್ನೇ ನನ್ನಾ ಗೆಣೆಕಾರ, ಅವನೇ ನನ್ನಾ ಯಜಮಾನ ||೩|| ಮಲ್ಲಿಗೆ ಹೂವು ತಂದ ಕಣ್ರಿ, ತುರುಬಿನಲ್ಲಿ ಇಟ್ಟ ಕಣ್ರಿಮೈಯೆಲ್ಲಾ ಝಂ ಝುಂ ಅಂತು ಕಣ್ರೀಅವನೇ ನನ್ನ ಗೆಣೆಕಾರ, ಅವನೇ ನನ್ನಾ ಯಜಮಾನ ||೪|| ಸಿನಿಮಾ ಬಿಡುಗಡೆಗೆ ಒಂದು ಅಥವಾ ಎರಡು ತಿಂಗಳು ಬಾಕಿಯಿದೆ ಅನ್ನುವಾಗಲೇ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯುತ್ತದೆ. ಹಾಡುಗಳನ್ನು ಕೇಳಿ ಜನರು ಚಿತ್ರದ ಬಗ್ಗೆ ಕುತೂಹಲ ಬೆಳೆಸಿಕೊಳ್ಳಲಿ ಎಂಬುದು ಆಡಿಯೋ ರಿಲೀಸಿಂಗ್ ಕಾರ್ಯಕ್ರಮದ ಹಿಂದಿರುವ ಉದ್ದೇಶ. ನಿರ್ಮಾಪಕ-ನಿರ್ದೇಶಕರ ಈ ತಂತ್ರ ದಶಕಗಳ ಹಿಂದೆ ಹೆಚ್ಚಿನ ಸಂದರ್ಭಗಳಲ್ಲಿ ‘ಕ್ಲಿಕ್’ ಆಗುತ್ತಿತ್ತು.  

ಮಧುರ ಗೀತೆಗಳ ಮೋಡಿಗೆ ಮರುಳಾಗುತ್ತಿದ್ದ ಜನ ಅವುಗಳ ದೃಶ್ಯೀಕರಣವನ್ನು ತೆರೆಯ ಮೇಲೂ ನೋಡುವ ಮಹದಾಸೆಯಿಂದ ಚಿತ್ರಮಂದಿರಗಳಿಗೆ ಬರುತ್ತಿದ್ದರು. ಪರಿಣಾಮ, ಹಾಡುಗಳ ಕಾರಣದಿಂದಲೇ ಒಂದೆರಡು ವಾರ ಸಿನಿಮಾಗಳು ಭರ್ಜರಿಯಾಗಿ ಓಡುತ್ತಿದ್ದವು. ಕಾಲಕ್ರಮೇಣ, ಒಂದೊಂದೇ ಹೊಸ ಸಿನಿಮಾಗಳ, ಹೊಸ ಹಾಡುಗಳು ಬರುತ್ತಿದ್ದಂತೆಯೇ ಹಳೆಯ ಹಾಡುಗಳು ತೆರೆಯಮರೆಗೆ ಸರಿಯುತ್ತಿದ್ದವು. ಮತ್ತೆ ಅವುಗಳನ್ನು ಕೇಳಬೇಕು ಅನ್ನಿಸಿದರೆ, ಆಕಾಶವಾಣಿಯ ಮೊರೆ ಹೋಗಬೇಕಿತ್ತು. ಮೆಚ್ಚಿನ ಚಿತ್ರಗೀತೆಗಳ ವಿಭಾಗಕ್ಕೆ ಪತ್ರ ಬರೆಯಬೇಕಿತ್ತು.ಇದೆಲ್ಲಾ ಎರಡು ದಶಕಗಳ ಹಿಂದಿನ ವಸ್ತುಸ್ಥಿತಿಯ ವಿವರಣೆ. ಆ ಸಂದರ್ಭದಲ್ಲಿಯೇ ಒಂದು ಹಾಡು, ಸತತ ಎರಡು ದಶಕದ ಕಾಲ ಜ್ವರದಂತೆ, ಹಳೆಯ ಪ್ರೇಮದಂತೆ, ಅವಳ ನೆನಪಿನಂತೆ, ಮಾಗದ ಗಾಯದಂತೆ ನೂರಲ್ಲ, ಸಾವಿರವಲ್ಲ, ಲಕ್ಷ ಲಕ್ಷ ಜನರನ್ನು ಕಾಡಿತು ಮತ್ತು ಈಗಲೂ ಕಾಡುತ್ತಿದೆ! ವಿಪರ್‍ಯಾಸವೆಂದರೆ, ನಿರ್ಮಾಪಕರು ಆಕಸ್ಮಿಕವಾಗಿದ್ದ ನಿಧನರಾದ ಕಾರಣದಿಂದ ಈ ಹಾಡನ್ನು ಒಳಗೊಂಡಿರುವ ಸಿನಿಮಾ ಬಿಡುಗಡೆ ಆಗಲೇ ಇಲ್ಲ! ಹಾಗಿದ್ದರೂ ಈ ಹಾಡು ಸಿನಿಮಾದ ಹೆಸರನ್ನೂ ಮೀರಿ ಜನಪ್ರಿಯವಾಗಿದೆ. ಈ ಹಾಡಿಗೆ ಮರುಳಾದವರ ಪಟ್ಟಿಯಲ್ಲಿ ಪಡ್ಡೆ ಹುಡುಗರಿದ್ದಾರೆ. ಮಧ್ಯ ವಯಸ್ಸಿನವರಿದ್ದಾರೆ, ಮುಪ್ಪಾನು ಮುದುಕರೂ ಇದ್ದಾರೆ! ಆಕಾಶವಾಣಿಯ ಮೆಚ್ಚಿನ ಚಿತ್ರಗೀತೆಗಳ ವಿಭಾಗದಲ್ಲಿ, ವಿವಿಧ ಭಾರತಿಯಲ್ಲಿ ಈ ಹಾಡು ಕೇಳಿಸಿದರೆ ಸಾಕು: ಸಂತೆಯೊಳಗೆ ನಿಂತಿದ್ದರೂ ಕುಣಿಯುವ ಆಸೆಯಾಗುತ್ತದೆ. ಮಿಂಚಿನಂಥ, ಮಾಟದಂಥ, ಮಾಯದಂಥ ಆ ಹಾಡು ಹೀಗೆ ಶುರುವಾಗುತ್ತದೆ: ‘ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ, ಜೀವಕ್ಕಿಲ್ಲ ಸಮಾಧಾನ, ಅವನಿಗೆ ಎಂಥಾ ಬಿಗುಮಾನ, ಅವನೆ ನನ್ನಾ ಗೆಣೆಕಾರ…’ನಟ ಶಂಕರ್‌ನಾಗ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟದ್ದು ‘ಮಾಲ್ಗುಡಿ ಡೇಸ್’. ಈ ಧಾರಾವಾಹಿ ನಿರ್ಮಾಣದಲ್ಲಿ ಶಂಕರ್‌ಗೆ ಹೆಗಲು ಕೊಟ್ಟಿದ್ದವರು ಟಿ.ಎನ್. ನರಸಿಂಹನ್. ಹೀಗೆ, ಮಾಲ್ಗುಡಿಯ ನೆಪದಲ್ಲಿ ಮನೆಮನೆ ತಲುಪುವ ಮೊದಲು ಅಂದರೆ ೧೯೮೩-೮೪ ಬಾಲಾಜಿ ಸಿಂಗ್ ನಿರ್ಮಾಣದ ‘ತ್ರಿಶೂಲ’ ಎಂಬ ಸಿನಿಮಾ ನಿರ್ದೇಶಿಸಿದ್ದರು ನರಸಿಂಹನ್. ಆ ಸಿನಿಮಾಕ್ಕೆ ಸುಂದರರಾಜ್ ಮತ್ತು ಅವಿನಾಶ್ ನಾಯಕರು. ‘ತ್ರಿಶೂಲ’ ಸಿನಿಮಾಕ್ಕೆ  ಕುಂತ್ರೆ ನಿಂತ್ರೆ ಗೀತೆಯನ್ನು ಬಳಸಬೇಕಾಗಿ ಬಂದ ಸಂದರ್ಭ ಹಾಗೂ ಹಾಡಿನ ಚಿತ್ರೀಕರಣದ ವೇಳೆ ನಡೆದ ಸ್ವಾರಸ್ಯಗಳನ್ನು ನಟ ಸುಂದರರಾಜ್ ವಿವರಿಸಿದ್ದು ಹೀಗೆ:‘ಇಬ್ಬರು ಗೆಳೆಯರು, ಒಬ್ಬಳನ್ನೇ ಪ್ರೀತಿಸುವ ಕಥೆ ‘ತ್ರಿಶೂಲ’ ಚಿತ್ರದ್ದು. ಗೆಳೆಯರ ಪಾತ್ರದಲ್ಲಿ ನಾನು ಮತ್ತು ಅವಿನಾಶ್ ಇದ್ದೆವು. ಅವಿನಾಶ್‌ಗೆ ಇದು ಮೊದಲ ಸಿನಿಮಾ. ಅವರ ನಿಜ ನಾಮಧೇಯ ರವಿ. ಚಿತ್ರರಂಗಕ್ಕೆಂದೇ ಅವರ ಹೆಸರನ್ನು ಅವಿನಾಶ್ ಎಂದು ಬದಲಿಸಲಾಯಿತು. ಈ ಸಿನಿಮಾದಲ್ಲಿ ನನಗೆ ಪೊಲೀಸ್ ಇನ್ಸ್‌ಪೆಕ್ಟರ್  ಪಾತ್ರವಿತ್ತು. ಗೆಳೆಯನೂ ‘ಅವಳನ್ನೇ’ ಪ್ರೀತಿಸುತ್ತಿರುವ ವಿಷಯ ತಿಳಿದು, ಇನ್ಸ್‌ಪೆಕ್ಟರ್ ‘ತ್ಯಾಗರಾಜ’ ಆಗುತ್ತಾನೆ. ಬೇರೊಂದು ಊರಿಗೆ ಟ್ರಾನ್ಸ್‌ಪುರ್ ಮಾಡಿಸಿಕೊಂಡು ಹೋಗಿಬಿಡುತ್ತಾನೆ. ಈ ಮಧ್ಯೆ ನಾಯಕಿ ಹಾಗೂ ಗೆಳೆಯ ಮದುವೆಯಾಗುತ್ತಾರೆ. ಒಂದಷ್ಟು ದಿನಗಳ ನಂತರ ಇನ್ಸ್‌ಪೆಕ್ಟರ್‌ಗೆ ಮತ್ತೆ ಅದೇ ಊರಿಗೆ ವರ್ಗವಾಗುತ್ತದೆ. ಹಿಂದೊಮ್ಮೆ ಪ್ರಿಯಕರನಾಗಿದ್ದವನು ಮತ್ತೆ ಅದೇ ಊರಿಗೆ ವಾಪಸಾಗಿದ್ದಾನೆ ಎಂದು ತಿಳಿದಾಗ ನಾಯಕಿಗೆ ಸಂತೋಷವಾಗುತ್ತದೆ ನಿಜ. ಆದರೆ, ಆ ವೇಳೆಗಾಗಲೇ ಅವಳ ಮೈ- ಮನದ ತುಂಬ ಗಂಡನೇ ತುಂಬಿಹೋಗಿರುತ್ತಾನೆ. ಇಂಥ ಸಂದರ್ಭದಲ್ಲಿ ಗಂಡನನ್ನು ನೆನೆದು ನಾಯಕಿ ತುಂಬ ಸಂಭ್ರಮದಿಂದ ಹಾಡುತ್ತಾ ಮೈಮರೆಯಬೇಕು…ಈ ಸಂದರ್ಭಕ್ಕೆ ಯಾವ ಹಾಡು ಹಾಕುವುದು ಎಂದು ನರಸಿಂಹನ್ ತುಂಬಾ ತಲೆಕೆಡಿಸಿಕೊಂಡರು. ಆಗಲೇ ಅವರಿಗೆ ‘ಕುಂತ್ರೆ ನಿಂತ್ರೆ ಅವನ್ದೇ ಧ್ಯಾನ…’ ಹಾಡು ನೆನಪಾಯಿತು. ಅದು ಆಗಲೇ ಜನಪದ ಗೀತೆಯಾಗಿ ಜನಪ್ರಿಯವಾಗಿತ್ತು. ಹಾಗಾಗಿ ಸಿನಿಮಾಕ್ಕೂ ಅದೇ ಟ್ಯೂನ್ ಉಳಿಸಿಕೊಂಡರು. ಸಂಗೀತದಲ್ಲಿ ಅಲ್ಪ ಸ್ವಲಪ ಬದಲಾವಣೆ ಮಾಡಿಕೊಂಡು, ಸಂಗೀತ ನಿರ್ದೇಶನದ ಹೊಣೆಯನ್ನು ಕಲ್ಯಾಣ್ ವೆಂಕಟೇಶ್ ಅವರಿಗೆ ವಹಿಸಿದರು. (ಮುಂದೆ ಇವರು- ಸಂಗೀತರಾಜಾ ಎಂಬ ಹೆಸರಿಂದ ಖ್ಯಾತರಾದರು)ಚಾಮುಂಡಿ ಬೆಟ್ಟ ಹಾಗೂ ಬಲಮುರಿಯ ಆಸುಪಾಸಿನಲ್ಲಿ ಎರಡು ರಾತ್ರಿ ಹಾಗೂ ಒಂದು ಹಗಲಿನಲ್ಲಿ ಈ ಹಾಡು ಚಿತ್ರೀಕರಿಸಲು ನಿರ್ಧರಿಸಲಾಗಿತ್ತು. ಇದು ನಾಯಕಿ ಹೇಳುವ ಹಾಡು ನಿಜ. ಅವಳು ಗಂಡನ ನೆನಪಲ್ಲಿ ಹಾಡುತ್ತಿರುವಾಗಲೇ ಅಲ್ಲಿ ಪ್ರಿಯಕರನ ನೆನಪೂ ಬಂದುಹೋಗುತ್ತಿರುತ್ತದೆ. ಈ ಸಂದರ್ಭದಲ್ಲಿ ಪ್ರಿಯಕರನ ಪಾತ್ರಧಾರಿಯಾದ ನಾನೂ ನರ್ತಿಸಬೇಕಿತ್ತು. ಸ್ಟೆಪ್ಸ್ ಹಾಕಬೇಕಿತ್ತು. ಸಡಗರದಿಂದಲೇ ನಾನು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ. ಹೀಗೆ ಶೂಟಿಂಗ್ ನಡೆಯುತ್ತಿದ್ದ ವೇಳೆಯಲ್ಲೇ ಕೆಂಗೇರಿಯಲ್ಲಿ  ಒಂದು ನಾಟಕದಲ್ಲಿ ಅಭಿನಯಿಸಲೂ ಒಪ್ಪಿಕೊಂಡಿದ್ದೆ. ಅದನ್ನು ತಪ್ಪಿಸುವಂತಿರಲಿಲ್ಲ. ಹಾಗಾಗಿ, ಶೂಟಿಂಗ್ ಮುಗಿದಾಕ್ಷಣ ಕೆಂಗೇರಿ ತಲುಪಿಕೊಂಡು ನಾಟಕದಲ್ಲಿ ಪಾತ್ರ ಮಾಡಿದೆ. ಮರುದಿನ ಬೆಳಗ್ಗೆ ಹನ್ನೊಂದು ಗಂಟೆಯ ವೇಳೆಗೆ ಮೈಸೂರಲ್ಲಿದ್ದ ಚಿತ್ರತಂಡ ಸೇರಿಕೊಂಡಿದ್ದೆ ಆ ಸಂದರ್ಭದಲ್ಲಿ ಶೇವಿಂಗ್ ಮಾಡಿಕೊಳ್ಳುತ್ತಿದ್ದ ನಿರ್ಮಾಪಕ ಬಾಲಾಜಿಸಿಂಗ್, ಧಡಕ್ಕನೆ ಎದ್ದು ಕೈ ಮುಗಿದರು. ನಾನು ಗಾಬರಿಯಿಂದ ‘ಯಾಕೆ ಸಾರ್, ಏನಾಯ್ತು, ಎಂದರೆ- ‘ಸುಂದ್ರೂ, ನೀನು ನಮ್ಮ ಸಿನಿಮಾದ ಹೀರೋ. ನೀನೇ ನಾಟಕ, ಬೆಂಗಳೂರು ಅಂತ ಹೋಗಿಬಿಟ್ರೆ ಇಲ್ಲಿ ತೊಂದರೆ ಆಗುತ್ತೆ. ಅರ್ಥ ಮಾಡಿಕೊಳ್ಳಪ್ಪ’ ಅಂದರು-‘ ಸಾರ್, ನಿರ್ದೇಶಕರ ಒಪ್ಪಿಗೆ ಪಡೆದೇ ನಾಟಕದಲ್ಲಿ ಪಾತ್ರ ವಹಿಸಲು ಹೋಗಿದ್ದೆ. ಈಗ ಶೂಟಿಂಗ್‌ಗೆ ರೆಡಿಯಾಗೇ ಬಂದಿದೀನಿ’ ಅಂದೆ. ‘ಸರಿ, ನೀನು ನಾಟಕದಲ್ಲೂ ಅಭಿನಯಿಸು. ಇಲ್ಲಿ ಕೂಡಾ ಮಿಂಚು. ನಿನಗೆ ಅನುಕೂಲ ಆಗಲಿ ಅಂತ ರಾತ್ರಿಯ ಶೂಟಿಂಗ್ ರದ್ದು ಮಾಡಿ, ಅದನ್ನು ಬೆಳಗ್ಗೆಯೇ ಚಿತ್ರೀಕರಿಸ್ತೇನೆ ಎಂದರು ಬಾಲಾಜಿ ಸಿಂಗ್. ಹಾಗೆಯೇ ಮಾಡಿದರು ಕೂಡಾ…’ಹಳೆಯ ದಿನಗಳನ್ನು  ಆ ಸಂದರ್ಭವನ್ನು, ಆಗ ನಟ- ನಿರ್ಮಾಪಕರ ಮಧ್ಯೆ ಇದ್ದ ಬಾಂಧವ್ಯವನ್ನು  ಆ ಸಂದರ್ಭದಲ್ಲಿ ಹೀಗೆಲ್ಲ ನೆನಪಿಸಿಕೊಂಡ ಸುಂದರರಾಜ್, ಅದೇ ಸಂದರ್ಭದಲ್ಲಿ ನಟಿ ರೂಪಾದೇವಿ ಅವರೊಂದಿಗೂ ನಾಲ್ಕು ಮಾತಾಡುವ ಅವಕಾಶ ಕಲ್ಪಿಸಿದರು. ಸದ್ಯ ಹೈದರಾಬಾದ್‌ನಲ್ಲಿರುವ ರೂಪಾದೇವಿ ಅವರು ಹೇಳಿದ ಮಾತುಗಳಿವು: ‘ತ್ರಿಶೂಲ’ ಸಿನಿಮಾದ ಶೂಟಿಂಗ್ ಒಂದು ಪಿಕ್‌ನಿಕ್ ಥರಾ ಇತ್ತು. ಪ್ರಿಯತಮ ಹಾಗೂ ಪತಿಯ ನೆನಪಲ್ಲಿ ಮೈಮರೆತು ಕುಣಿದು ಹಾಡಬೇಕು ಎಂದು ನಿರ್ದೇಶಕರು ಹೇಳಿದ್ದರು. ಆ ಹಾಡನ್ನು ಕೇಳುತ್ತಿದ್ದಂತೆಯೇ ನನಗೂ ಕುಣಿಯುವ ಉಮ್ಮೇದಿ ಬಂದು ಬಿಡ್ತು. ಹಾಗಾಗಿ ನನಗೇ ಅರಿವಿಲ್ಲದಂತೆ ನಾನು ಪಾತ್ರದೊಳಗೆ ಸೇರಿಹೋಗಿದ್ದೆ ಎಂದು ನಕ್ಕರು ರೂಪಾದೇವಿ.‘ಮುಪ್ಪಾನು ಮುದುಕಿಗೂ ಅವಳ ಹರೆಯ, ಪ್ರೇಮ ಮತ್ತು ಪ್ರಿಯತಮ ನೆನಪಾಗುವಂತೆ ಈ ಗೀತೆಯನ್ನು ಮಾದಕವಾಗಿ ಹಾಡಿದವರು ಮಂಜುಳಾ ಗುರುರಾಜ್. ಈ ಗೀತೆ ಹಾಡಿದಾಗ, ನಿಮ್ಮ ಅನುಭವ ಏನು ಮೇಡಂ ಎಂಬ ಪ್ರಶ್ನೆಗೆ ಅವರು ಹೇಳಿದ್ದು: ‘ಮದ್ರಾಸಿನ ಜೆಮಿನಿ ಸ್ಟುಡಿಯೋದಲ್ಲಿ ಮೂವತ್ತಕ್ಕೂ ಹೆಚ್ಚು ವಾದ್ಯಗಾರರ ಮಧ್ಯೆ ನಿಂತು ಈ ಹಾಡು ಹಾಡಿದೆ. ಹಾಡಿನ ಮಧ್ಯೆ ‘ಶಿಳ್ಳೆ’ಯ ಸದ್ದು ಬರುತ್ತೆ. ಆರ್ಕೆಸ್ಟ್ರಾ ಮಂದಿ ನಾನು ಹಾಡ್ತಾ ಇದ್ದಾಗಲೇ ಶಿಳ್ಳೆ ಹೊಡೀತಿದ್ರು. ಆಗೆಲ್ಲ ನಗುಬರ್‍ತಿತ್ತು ನಿಜ. ಅದನ್ನು ತೋರ್ಪಡಿಸದೆ ಹಾಡಿದೆ. ಅಂಥದೊಂದು ಮಧುರ ಗೀತೆಗೆ ದನಿಯಾದೆನಲ್ಲ ಎಂಬ ಸಂತಸ ನನ್ನದಿದೆ…’ಅಂದ ಹಾಗೆ, ಈ ಹಾಡಲ್ಲಿ ಗೆಣೆಕಾರ ಎಂಬುದನ್ನು ಕೇಳಿದಾಗ ರೋಮಾಂಚನವಾಗುತ್ತದೆ. ಅವನೇ ನನ್ನಾ ಯಜಮಾನ ಎಂದಾಗ ಮಾತ್ರ ಬೇಜಾರಾಗುತ್ತದೆ. ಯಾಕೋ…]]>

‍ಲೇಖಕರು avadhi

October 14, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This