ಮಣಿಕಾಂತ್ ಬರೆಯುತ್ತಾರೆ:ನಟನ ವಿಶಾರದ ನಟಶೇಖರಾ…


ನಟನ ವಿಶಾರದ ನಟಶೇಖರಾ…
ಚಿತ್ರ : ಮಲಯ ಮಾರುತ ಗೀತ ರಚನೆ : ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ : ವಿಜಯ ಭಾಸ್ಕರ್ ಗಾಯನ : ಕೆ.ಜೆ. ಯೇಸುದಾಸ್
ನಟನ ವಿಶಾರದ ನಟಶೇಖರಾ…
ಸಂಗೀತ ಸಾಹಿತ್ಯ ಗಂಗಾಧರಾ ||ಪ||
ನವವಿಧ ವಿನ್ಯಾಸ.. ನವರಸ ನವಲಾಸ್ಯ
ನವಕಾವ್ಯ ಕಾರಣ… ನವಚೇತನಾ
ನವಕೋಟಿ ಲೀಲಾ… ವಿನೋದ ವಿಲಾಸ
ನವಭಾವನಾನಂದ… ಗೌರೀವರ ||೧||
ಅಷ್ಟಾಂಗ ಯೋಗಶೀಲ… ಅದ್ವೈತ ತತ್ವಲೋಲ
ಇಷ್ಟಾರ್ಥ ಸಿದ್ಧಿಮೂಲ… ಅಧ್ಯಾತ್ಮ ತತ್ವಮೂಲ
ಸಕಲ ಮಂತ್ರ ನಿಖಿಲ ತಂತ್ರ… ಅಖಿಲ ಯಂತ್ರ ಸಂಚಿತ
ಏಕಮೇವ ಅದ್ವಿತೀಯ… ಲೋಕ ಲೋಕ ಪೂಜಿತ
ವಿಶ್ವನಾಥ ವಿಶ್ವರೂಪ… ವಿಶ್ವೇಶ್ವರ ವಿರೂಪಾಕ್ಷ
ಪಾಹಿಮಾಂ, ತ್ರಾಹಿಮಾಂ… ಪರಮೇಶ್ವರ ಫಾಲಾಕ್ಷ ||೨||
ಕಣಗಾಲ್ ಪ್ರಭಾಕರ ಶಾಸ್ತ್ರಿಯವರು ಖ್ಯಾತಿಯ ತುತ್ತ ತುದಿಯಲ್ಲಿದ್ದ ಸಂದರ್ಭ ಅದು. ಆಗ ಪತ್ರಕರ್ತರೊಬ್ಬರು ಕೇಳಿದ್ದರು : ‘ಸರ್, ನೀವು ಚಿತ್ರರಂಗಕ್ಕೆ ಬಂದದ್ದು ಹೇಗೆ ಮತ್ತು ಯಾಕೆ? ಚಿತ್ರ ಸಾಹಿತಿಯಾಗಲು ನಿಮಗೆ ಪ್ರೇರಣೆ, ಪ್ರೋತ್ಸಾಹ ನೀಡಿದವರು ಯಾರು?’

ಈ ಪ್ರಶ್ನೆಗೆ ಶಾಸ್ತ್ರಿಗಳು ಹೀಗೆ ಉತ್ತರಿಸಿದ್ದು : ‘ಕಲೆ ನನ್ನ ರಕ್ತದಲಿತ್ತು. ಕಲಾಮಾತೆ ನನ್ನನ್ನು ಕೈ ಬೀಸಿ ಕರೆದಳು. ಪರಿಣಾಮವಾಗಿ, ಕನ್ನಡ ತಾಯಿ ಭುವನೇಶ್ವರಿಯ ಸೇವೆಗೆ ನಾನು ಕಂಕಣಕಟ್ಟಿ ನಿಂತೆ’ ಎಂದೆಲ್ಲ ಬೊಗಳೆ ಹೊಡೆಯುವುದು ನನ್ನ ಜಾಯಮಾನಕ್ಕೆ ಒಗ್ಗುವುದಿಲ್ಲ. ವಾಸ್ತವ ಏನೆಂದರೆ, ನನ್ನ ಬಾಲ್ಯದ ಬದುಕು ತುಂಬ ಕಷ್ಟದ್ದಿತ್ತು. ಭಿಕ್ಷಾನ್ನ, ವಾರಾನ್ನಗಳು ಬೇಸರ ತಂದಿದ್ದವು.
ಬಡತನದ ಬೇಗೆಯನ್ನು ತಡೆಯುವುದು ಅಸಾಧ್ಯವಾಗಿತ್ತು. ಇಂಥ ಸಂದರ್ಭದಲ್ಲಿ ಚಿತ್ರರಂಗಕ್ಕೆ ಬಂದರೆ ಒಂದಿಷ್ಟು ಸಂಪಾದನೆ ಸಾಧ್ಯವೇನೋ ಅನ್ನಿಸಿತು. ಹಾಗಾಗಿ, ೧೯೩೯ರಲ್ಲಿ, ಎಡಿಟಿಂಗ್ ರೂಂಬಾಯ್ ಆಗಿ ಚಿತ್ರರಂಗ ಪ್ರವೇಶಿಸಿದೆ. ಅದಕ್ಕೂ ಮುಂಚೆ ನಾಟಕ ಬರೆದು, ಆಡಿಸಿ ಅಭ್ಯಾಸವಿತ್ತು. ಚಿತ್ರರಂಗ ಪ್ರವೇಶಿಸಿದ ೧೭ ವರ್ಷಗಳ ನಂತರ ‘ಭಾಗ್ಯೋದಯ’ ಚಿತ್ರದ ಮೂಲಕ ಚಿತ್ರ ಸಾಹಿತಿ ಅನ್ನಿಸಿಕೊಂಡೆ.

ಆದರೆ, ನನಗೆ ನಿಜವಾಗಿ ಬ್ರೇಕ್ ಸಿಕ್ಕಿದ್ದು ‘ರತ್ನಗಿರಿ ರಹಸ್ಯ’ ಚಿತ್ರದ ಮೂಲಕ. ನನ್ನಲ್ಲಿ ಸಾಹಿತ್ಯದ ಆಸೆ ಹುಟ್ಟಿಸಿ, ಪ್ರೋತ್ಸಾಹಿತಿದವರು ಅ.ನ. ಕೃಷ್ಣರಾವ್. ನಾನು ಚಿತ್ರ ಸಾಹಿತಿಯಾಗಿ ದೊಡ್ಡ ಹೆಸರು ಮಾಡಲು ಕಾರಣರಾದವರು ಬಿ.ಆರ್. ಪಂತುಲು…’
ಕನ್ನಡ ಚಿತ್ರರಂಗ ಎಂದೆಂದೂ ಮರೆಯಲಾಗದಂಥ ಪ್ರಣಯ ಗೀತೆಗಳನ್ನು ಬರೆದವರು ಪ್ರಭಾಕರಶಾಸ್ತ್ರಿ. ‘ಸಾಕ್ಷಾತ್ಕಾರ’ ಚಿತ್ರದ ‘ಜನ್ಮ ಜನ್ಮದಾ ಅನುಬಂಧ’, ‘ಒಲವೆ ಜೀವನ ಸಾಕ್ಷಾತ್ಕಾರ’, ‘ರತ್ನಗಿರಿ ರಹಸ್ಯ’ ಚಿತ್ರದ ‘ಅಮರಾ ಮಧುರಾ ಪ್ರೇಮ’, ‘ಶ್ರೀ ಕೃಷ್ಣದೇವರಾಯ’ದ ‘ತಿರುಪತಿ ಗಿರಿವಾಸ ಶ್ರೀ ವೆಂಕಟೇಶ’, ‘ನನ್ನ ತಮ್ಮ’ದ ‘ಇದೇ ಹೊಸ ಹಾಡು, ಹೃದಯ ಸಾಕ್ಷಿ ಹಾಡು, ಹೃದಯಾಸೆ ಭಾಷೆ ಈ ಹಾಡು’, ‘ಕುಲವಧು’ ಚಿತ್ರದ ‘ಒಲವಿನಾ ಪ್ರಿಯಲತೆ ಅವಳದೇ ಚಿಂತೆ…’, ‘ಶುಭಮಂಗಳ’ ಚಿತ್ರದ ‘ಶುಭಮಂಗಳಾ ಸುಮುಹೂರ್ತವೇ ಶುಭವೇಳೆ…’ ಹೀಗೆ ಶಾಸ್ತ್ರಿಗಳು ರಚಿಸಿದ ಮಧುರ ಹಾಡುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಸ್ವಲ್ಪ ಸೋಮಾರಿತನ, ಸ್ವಲ್ಪ ಉಡಾಫೆ, ವಿಪರೀತದ ಸ್ವಾಭಿಮಾನ ಮತ್ತು ಅತಿಯಾದ ಸಿಟ್ಟು- ಇವು ಶಾಸ್ತ್ರಿಯವರ ಕೆಟ್ಟ ಗುಣಗಳು. ಸಂಭಾಷಣೆ, ಗೀತರಚನೆಯ ಸಂದರ್ಭದಲ್ಲಿ ತಾವು ಬರೆದಿದ್ದನ್ನು ಒಂದಿಷ್ಟು ಬದಲಾಯಿಸಲೂ ಅವರು ಒಪ್ಪುತ್ತಿರಲಿಲ್ಲವಂತೆ. ಒಂದೆರಡು ಸಂದರ್ಭದಲ್ಲಿ , ಬದಲಾವಣೆಗಳನ್ನು ಸೂಚಿಸಿದ ನಿರ್ದೇಶಕರ ಮುಖಕ್ಕೇ ಸ್ಕ್ರಿಪ್ಟ್‌ನ ಹಾಳೆಗಳನ್ನು ರಪ್ಪನೆ ಎಸೆದು- ‘ಇಂಥ ಹಸ್ತಕ್ಷೇಪ ಸಹಿಸಿಕೊಂಡು ನಾನು ಮುಂದುವರಿಯಲಾರೆ’ ಎಂದು ಹೇಳಿ ಎದ್ದು ಬರುತ್ತಿದ್ದರಂತೆ. ಶಾಸ್ತ್ರಿಗಳ ಈ ಗುಣದಿಂದಾಗಿ ಈ ಕಡೆ ಕನ್ನಡ ಚಿತ್ರರಂಗಕ್ಕೂ ‘ಲಾಸ್’ ಆಯಿತು. ಆ ಕಡೆ ಶಾಸ್ತ್ರಿಗಳಿಗೂ ಅವಕಾಶಗಳ ಕೊರತೆ ಕಾಡಿತು.
ಇಂಥ ಜಬರ್‌ದಸ್ತ್ ಹಿನ್ನಲೆಯ ಪ್ರಭಾಕರ ಶಾಸ್ತ್ರಿಗಳು, ಪುಟ್ಟಣ್ಣ ಕಣಗಾಲ್ ಅವರ ಸ್ವಂತ ಅಣ್ಣ. ‘ಮಲಯ ಮಾರುತ’ ಚಿತ್ರಕ್ಕಾಗಿ ಅವರು ಬರೆದ ‘ನಟನ ವಿಶಾರದ ನಟಶೇಖರಾ…’ ಹಾಡಿನ ಕಥೆ ಹೇಳುವ ಮೊದಲು ಪೂರ್ವ ಪೀಠಿಕೆಯ ರೂಪದಲ್ಲಿ ಇಷ್ಟೆಲ್ಲ ಹೇಳಬೇಕಾಯಿತು. ಈಗ, ‘ಮಲಯ ಮಾರುತ’ ಚಿತ್ರದಲ್ಲಿ ಈ ಹಾಡು ಬರುವ ಸಂದರ್ಭ ತಿಳಿಯೋಣ ಬನ್ನಿ.
ಕಥಾನಾಯಕನ ಹೆಸರು ವಿಶ್ವ. ಅವನ ಗುರುಗಳು ಹೆಸರಾಂತ ಸಂಗೀತಗಾರರು. ಅಪ್ರತಿಮ ಗಾಯಕರು. ಅವರಲ್ಲಿ ಶಿಷ್ಯವೃತ್ತಿ ಆರಂಭಿಸಿದ ಕೆಲವೇ ದಿನಗಳಲ್ಲಿ, ಗುರು ಪುತ್ರಿ ಶಾರದೆ, ನಾಯಕನಲ್ಲಿ ಪ್ರೇಮ ಭಿಕ್ಷೆ ಬೇಡುತ್ತಾಳೆ. ಗುರು ಪುತ್ರಿಯ ಈ ಬೇಡಿಕೆಯಿಂದ ಶಾಕ್‌ಗೆ ಒಳಗಾದ ಕಥಾನಾಯಕ ಗುರುವಿನ ಆಶ್ರಮದಿಂದ ಬಂದುಬಿಡುತ್ತಾನೆ.
ಕೆಲದಿನಗಳ ನಂತರ, ಆಕಸ್ಮಿಕವಾಗಿ ಗುರುಗಳು ತೀರಿ ಹೋಗುತ್ತಾರೆ. ಶ್ರೀರಂಗಪಟ್ಟಣದ ಗೋಸಾಯಿಘಾಟ್‌ನಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ವಿಷಯ ತಿಳಿದ ಕಥಾನಾಯಕ ಅಲ್ಲಿಗೆ ಧಾವಿಸಿ ಬರುತ್ತಾನೆ. ಅಷ್ಟರೊಳಗೆ ಅಂತ್ಯ ಸಂಸ್ಕಾರ ಆಗಿ ಹೋಗಿರುತ್ತದೆ.
ಕಡೆಗೂ ಗುರುಗಳ ಅಂತಿಮ ದರ್ಶನ ಸಾಧ್ಯವಾಗಲಿಲ್ಲವಲ್ಲ ಎಂಬ ಸಂಕಟದಿಂದ ಆತ ಗೋಳಾಡುತ್ತ ಬಿದ್ದು ಹೊರಳಾಡುತ್ತಿರುತ್ತಾನೆ. ಇದೇ ಸಂದರ್ಭದಲ್ಲಿ ಗುರುಗಳ ಆತ್ಮ ಅವನಿಗೆ ಗೊತ್ತಿಲ್ಲದಂತೆ ಇವನೊಳಗೆ ಸೇರಿಕೊಳ್ಳುತ್ತದೆ. ಆಗ, ಹಾಡುಗಾರಿಕೆಯೇ ಗೊತ್ತಿಲ್ಲದ ಕಥಾನಾಯಕ ಮೈಮರೆವಿನ ಮಧ್ಯೆಯೇ ಸುಶ್ರಾವ್ಯವಾಗಿ ಹಾಡಲು ಆರಂಭಿಸುತ್ತಾನೆ.
ಈ ಘಟನೆ ನಡೆದ ಒಂದೆರಡು ದಿನಗಳಲ್ಲಿಯೇ ನೃತ್ಯಗಾತಿಯೊಬ್ಬಳ ಕಾರ್ಯಕ್ರಮ ಇರುತ್ತದೆ. ಆಕೆಯ ನೃತ್ಯಕ್ಕೆ ಹಾಡಬೇಕಿದ್ದ ನಟುವಾಂಗ ಕಲಾವಿದ, ಕುಡಿದು, ಬಿದ್ದು ಆಸ್ಪತ್ರೆ ಸೇರಿರುತ್ತಾನೆ. ಅವನ ಜಾಗಕ್ಕೆ ಯಾರಾದರೂ ಗಾಯಕರನ್ನು ಕೂರಿಸಿ ಕಾರ್ಯಕ್ರಮ ಮುಂದುವರಿಸಬೇಕು ಅಂದುಕೊಂಡ ನರ್ತಕಿಯ ಕಡೆಯ ಜನರಿಗೆ, ಎರಡು ದಿನಗಳ ಹಿಂದೆ ಕಥಾನಾಯಕನ ಗಾಯನ ಕೇಳಿದ್ದ ಜನ ಆ ವಿಷಯ ಹೇಳುತ್ತಾರೆ. ಆ ಗಾಯಕ ಇಲ್ಲೇ ಎಲ್ಲೋ ಇರಬೇಕು ಎಂದೂ ಸೇರಿಸುತ್ತಾರೆ.
ಆಗ ಅವಸರದಲ್ಲಿಯೇ ಆತನನ್ನು ಹುಡುಕುವ ನಾಯಕಿ ಕಡೆಯ ಜನ, ನಾಯಕನನ್ನು ನೃತ್ಯ ಕಾರ್ಯಕ್ರಮದ ಜಾಗಕ್ಕೆ ತಂದು ಕೂರಿಸಿ- ಈಗ ಹಾಡಲು ಶುರು ಮಾಡಿ ಅನ್ನುತ್ತಾರೆ.
ಈ ದಿಢೀರ್ ಬೆಳವಣಿಗೆಯಿಂದ ತಬ್ಬಿಬ್ಬಾದ ನಾಯಕ ನನಗೆ ಹಾಡಲು ಬರೋದಿಲ್ಲ ಅನ್ನುತ್ತಾನೆ. ಎದುರಿಗಿದ್ದವರು ಈ ಮಾತು ಒಪ್ಪದೆ, ನೀನು ಹಾಡಲು ಶುರು ಮಾಡಬೇಕಾದರೆ, ಹಾರ್ಮೋನಿಯಂ, ತಬಲಾ, ವೀಣೆ, ಗಿಟಾರ್… ಯಾ ಆವುದು ಬೇಕೋ ಕೇಳು, ತಂದುಕೊಡ್ತೇವೆ. ಈ ಕಾರ್ಯಕ್ರಮ ನಡೀಬೇಕಾದ್ರೆ ನೀನು ಹಾಡಲೇಬೇಕು ಅನ್ನುತ್ತಾರೆ. ಈ ಮಾತುಗಳಿಂದ ಮತ್ತಷ್ಟು ಕಂಗಾಲಾಗುವ ಕಥಾನಾಯಕ, ಎದುರಿಗಿದ್ದ ನಟರಾಜನ ವಿಗ್ರಹವನ್ನೇ ದೈನ್ಯದಿಂದ ನೋಡುತ್ತಾನೆ. ಆ ಕ್ಷಣವೇ ಮೈಯಲ್ಲಿ ಮಿಂಚು ಹರಿದಂತಾಗುತ್ತದೆ. ಆಗಲೇ, ಗುರುಗಳ ಸ್ವರ ಇವನ ಕೊರಳು ತುಂಬಿಕೊಳ್ಳುತ್ತದೆ. ಮರುಕ್ಷಣವೇ ಇವನು ಶಾರದೆಯೇ ಮೆಚ್ಚುವಂತೆ ಮೈ ಮರೆತು ಹಾಡುತ್ತಾನೆ : ‘ನಟನ ವಿಶಾರದ ನಟಶೇಖರಾ…’
ನಟ ವಿಷ್ಣುವರ್ಧನ್ ಅವರು ಸಂಗೀತಗಾರನಾಗಿ ಅದ್ಭುತ ಅಭಿನಯ ನೀಡಿರುವ ಚಿತ್ರ ‘ಮಲಯ ಮಾರುತ’. ಸಿ.ವಿ.ಎಲ್. ಶಾಸ್ತ್ರಿ ನಿರ್ಮಾಣದ ಈ ಚಿತ್ರ ನಿರ್ದೇಶಿಸಿದವರು ಕೆ.ಎಸ್.ಎಸ್. ಸ್ವಾಮಿ (ರವೀ). ‘ನಟನ ವಿಶಾರದ ನಟಶೇಖರಾ…’ ಹಾಡು ಸೃಷ್ಟಿಯಾದ ಬಗೆಯನ್ನು ರವೀ ಅವರು ವಿವರಿಸಿದ್ದು ಹೀಗೆ.
ಇದು ೧೯೬೫ರ ಮಾತು. ಆಗ ಕನ್ನಡ ಚಿತ್ರರಂಗದ ಸಮಸ್ತ ಚಟುವಟಿಕೆಗಳೂ ಮದ್ರಾಸ್‌ನಲ್ಲಿ ನಡೆಯುತ್ತಿದ್ದವು. ಜಿ.ವಿ. ಅಯ್ಯರ್, ಬಿ.ಆರ್. ಪಂತುಲು, ಕು.ರಾ.ಸೀ, ಹುಣಸೂರು ಕೃಷ್ಣಮೂರ್ತಿ ಮುಂತಾದವರೆಲ್ಲ ಸಕ್ರಿಯರಾಗಿದ್ದ ಸಂದರ್ಭ ಅದು. ಇಂಥ ವೇಳೆಯಲ್ಲಿ ರಾಜ್‌ಕುಮಾರ್ ಅವರನ್ನು ನಾಯಕರನ್ನಾಗಿ ಇಟ್ಟುಕೊಂಡು ‘ಸತಿಶಕ್ತಿ’ ಎಂಬ ಚಿತ್ರ ನಿರ್ಮಿಸಿ, ನಿರ್ದೇಶಿಸಲು ಪ್ರಭಾಕರ ಶಾಸ್ತ್ರಿಗಳು ನಿರ್ಧರಿಸಿದರು. ಪರಿಪೂರ್ಣ ಸಿದ್ಧತೆ ಇಲ್ಲದ ಕಾರಣ ಆ ಸಿನಿಮಾದ ಕೆಲಸ ಕುಂಟುತ್ತಾ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಶಾಸ್ತ್ರಿಗಳು, ಟಿ.ಜಿ. ಲಿಂಗಪ್ಪ, ವಿಜಯ ಭಾಸ್ಕರ್ ಹಾಗೂ ನಾನು ಒಂದೆಡೆ ಸೇರಿ ಸಿನಿಮಾದ ಬಗ್ಗೆ ಚರ್ಚಿಸುತ್ತಿದ್ದೆವು.
ಹೀಗೇ ಒಂದು ದಿನ ಸೇರಿದಾಗ- ‘ಈಗ ಹೇಗಿದ್ರೂ ನಾವೆಲ್ಲ ಬಿಡುವಾಗಿದ್ದೀವಿ. ಹೀಗೆ ಸುಮ್ನೇ ಕೂತು ಪಟ್ಟಾಂಗ ಹೊಡೆಯೋ ಬದಲು ಒಂದು ಹಾಡಿನ ಕಂಪೋಸಿಂಗ್ ಯಾಕೆ ಮಾಡಬಾರ್‍ದು ಎಂದರು ಲಿಂಗಪ್ಪ. ಹಿಂದೆಯೇ, ನಾಟ್ಯದ ಸಂದರ್ಭಕ್ಕೆ ಹೊಂದುವಂಥ ಹಾಡು ಬರೆದರೆ ಚೆಂದ ಎಂದೂ ಸೇರಿಸಿದರು. ಈ ಮಾತಿಗೆ ಒಪ್ಪಿದ ಶಾಸ್ತ್ರಿಗಳು ಈ ಹಾಡಿನ ಸಾಲುಗಳನ್ನು ಹೇಳುತ್ತಾ ಹೋದರು. ನಾನು ಅವರು ಹೇಳಿದ್ದನ್ನೆಲ್ಲ ಬರೆದಿಟ್ಟುಕೊಂಡೆ. ಹನ್ನೆರಡು ಸಾಲುಗಳ ಈ ಹಾಡು ಅಂತಿಮ ರೂಪು ಪಡೆಯಲು ಒಂದು ವಾರ ಕಾಲ ಬೇಕಾಯ್ತು.
ಶಾಸ್ತ್ರೀಯ ಹಾಡು, ನಾಟ್ಯದ ಹಾಡು, ಶಿವಸ್ತುತಿಯ ಹಾಡು ಹಾಗೂ ಜಾನಪದ ಧಾಟಿಗೂ ಹೊಂದುವಂಥ ಹಾಡು… ಈ ಎಲ್ಲ ಆಯಾಮವನ್ನೂ ಹೊಂದಿದ್ದ ಗೀತೆ ಇದು. ಇದನ್ನು ೧೯೬೫ರಲ್ಲಿ ಬರೆದಿದ್ದು ನಿಜ. ಆದರೆ, ಯಾವ ಚಿತ್ರದಲ್ಲೂ ಬಳಸಿರಲಿಲ್ಲ. ಮುಂದೆ ೧೯೮೫ರಲ್ಲಿ ‘ಮಲಯ ಮಾರುತ’ ನಿರ್ದೇಶಿಸಿದೆ ನೋಡಿ; ಆಗ ಕಥಾನಾಯಕ ಮೊದಲು ಹಾಡುವ ಸಂದರ್ಭಕ್ಕೆ ಈ ಹಾಡು ಬಳಸಿದರೆ ಚೆಂದ ಅನಿಸಿತು.
ಏಕೆಂದರೆ, ಆ ಸಂದರ್ಭಕ್ಕೆ ಭಕ್ತಿ ಭಾವ ಮತ್ತು ತಾಳ ಮೇಳ ಎರಡೂ ಬೇಕಿತ್ತು. ಶಾಸ್ತ್ರಿಗಳಿಗೆ ವಿಷಯ ತಿಳಿಸಿದೆ. ಧಾರಾಳವಾಗಿ ಬಳಸಿಕೊಳ್ಳಯ್ಯ ಎಂದರು. ಮುಂದೆ ವಿಜಯ ಭಾಸ್ಕರ್ ಅವರು ‘ಮಾಲಕೌಂಸ್’ ರಾಗದಲ್ಲಿ ಈ ಹಾಡಿಗೆ ರಾಗ ಸಂಯೋಜನೆ ಮಾಡಿದರು. ಯೇಸುದಾಸ್ ಒಂದೊಂದು ಭಾವವನ್ನೂ ಅನುಭವಿಸಿ ಹಾಡಿಬಿಟ್ಟರು. ಪರಿಣಾಮ, ಆ ಹಾಡನ್ನು ಕನ್ನಡಿಗರು ಮಾತ್ರವಲ್ಲ, ಪರಶಿವನೂ ಮೆಚ್ಚಿಕೊಂಡ…
ಹೀಗೆ, ಹಾಡಿನ ಕಥೆ ಹೇಳಿ ಮುಗಿಸುತ್ತಲೇ, ಶಾಸ್ತ್ರಿಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಭಕ್ತಿಭಾವದಿಂದ ಕೈಮುಗಿದರು ಕೆ.ಎಸ್.ಎಲ್. ಸ್ವಾಮಿ.

‍ಲೇಖಕರು avadhi

September 24, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

೧ ಪ್ರತಿಕ್ರಿಯೆ

 1. mukundachiplunkar

  aha.
  after reading these details , i wondered how saraswathi imbibed into
  prabhakar shastri!
  good. good.

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ mukundachiplunkarCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: