ಮಣಿಕಾಂತ್ ಬರೆಯುತ್ತಾರೆ:ಮೈಸೂರು ಮಹಾತ್ಮೆ ಸಾರುವ ಈ ಹಾಡು ಹುಟ್ಟಿದ್ದು ಬೆಂಗ್ಳೂರಲ್ಲಿ!

  ಕೂರೋಕ್ ಕುಕ್ರಳ್ಳಿ ಕೆರೆ… ಚಿತ್ರ: ನೆನಪಿರಲಿ. ಸಾಹಿತ್ಯ-ಸಂಗೀತ: ಹಂಸಲೇಖ ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಕೋರಸ್ ಮಾತು: ಅರೆ ಯಾರ್ರೀ ಹೆದರ್ಕೊಳ್ಳೋರು, ಬೆದರ್ಕೊಳ್ಳೋರು ಪೇಚಾಡೋರು, ಪರದಾಡೋರು, ಮರಗಳ ಮರೇಲಿ ಮಾತಾಡೋರು, ಹಳೇ ರಾಜರ ಅಪ್ಣೆ ಇದ್ರೂ, ಪ್ರೀತಿ ಮಾಡೋಕ್ ಜಾಗಗಳಿದ್ರೂ ಕದ್ದು ಮುಚ್ಚಿ ಓಡಾಡ್ತೀರಲ್ರೀ… ಬನ್ರೀ, ನೋಡ್ರೀ, ನಾನ್ ಲವ್ ಮಾಡೋ ಸ್ಟೈಲ್ ಸ್ವಲ್ಪ ಕಲೀರೀ. ಕೂರೋಕ್ ಕುಕ್ರಳ್ಳಿ ಕೆರೆ ವಾ…ವಾ… ತೇಲೋಕ್ ಕಾರಂಜಿ ಕೆರೆ ವಾ… ವಾ… ಲವ್ವಿಗೇ ಈ ಲವ್ವಿಗೇ ಚಾಮುಂಡಿಬೆಟ್ಟ ಇದೆ, ಕನ್ನಂಬಾಡಿ ಕಟ್ಟೆ ಇದೆ ಲವ್ವಿಗೇ, ನಂ ಲವ್ವಿಗೇ ಈ ಭಯ ಬಿಸಾಕಿ ಲವ್ಮಾಡಿ, ಲವ್ ಮಾಡಿ, ಲವ್ ಮಾಡಿ ಈ ದಿಗಿಲ್ ದಬ್ಬಾಕಿ ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ. ||ಪ|| ಬಲಮುರಿಲಿ ಪೂಜೆ ನೆಪ, ಎಡ್ಮುರಿಲಿ ಜಪತಪ ಲವ್ವಿಗೇ, ನಿರ್ವಿಘ್ನ ಲವ್ವಿಗೇ ನಾರ್ತಿನಲ್ಲಿ ಶ್ರೀರಂಗ್ಪಟ್ಣ, ಸೌತಿನಲ್ಲಿ ನಂಜನ್ಗೂಡು ಪೂಜೆಗೇ ಲವ್ ಪೂಜೆಗೇ ಈ ಭಯ ಬಿಸಾಕಿ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ ಈ ದಿಗಿಲ್ ದಬ್ಬಾಕಿ ಲವ್ ಮಾಡಿ ಲವ್ ಮಾಡಿ, ಲವ್ ಮಾಡಿ. ||೧|| ಗಲಾಟೇನೇ ಇಲ್ಲ ಬನ್ರೀ ಗಂಗೋತ್ರಿಯಲಿ ಮನಸು ಬಿಚ್ಕೊಳ್ರೀ ಮರ ಮರ ಮರದ ಮರೇಲೀ ಅರಮನೇಲಿ ಅಡ್ಡಾಡುತ ಮೂಡು ತಗೊಳ್ರೀ ರಾಜನ್ ಥರಾನೆ ಲವ್ವಲ್ಲಿ ದರ್ಬಾರ್ ಮಾಡ್ಬಿಡ್ರೀ ಹೇ, ರಂಗನ್ತಿಟ್ಟು ನೋಡಿಬಿಟ್ಟು ಹಾಡ್ರಿ ಮುತ್ತಿಟ್ಟು ಮುಡುಕುತೊರೇಲ್ ಮನಸು ಕೊಡ್ರಿ ಕಣ್ಣಲ್ ಕಣ್ಣಿಟ್ಟು ಕಾಳಿದಾಸನೇ ಇಲ್ ರಸ್ತೆ ಆಗವ್ನೆ ಪ್ರೀತಿ ಮಾಡೊರ್ಗೆ ಸರಿ ದಾರಿ ತೋರ್ತಾನೆ ಕೆಆರ್ಎಸ್ನಲ್ ಕೆಫೆ ಮಾಡಿ, ಬ್ಲಪಿನಲ್ಲಿ ಬಫೆ ಮಾಡಿ ಲವ್ವಿಗೇ ರಿಚ್ ಲವ್ವಿಗೇ ದುಡ್ಡಿದ್ರೆ ಲಲಿತ ಮಹಲ್ ಇಲ್ದಿದ್ರೆ ಒಂಟಿಕೊಪ್ಪಲ್ ಲವ್ವಿಗೇ ಈ ಲವ್ವಿಗೇ ಈ ಭಯ ಬಿಸಾಕಿ ಲವ್ ಮಾಡಿ ಲವ್ ಮಾಡಿ ಲವ್ ಮಾಡಿ ಈ ದಿಗಿಲ್ ದಬ್ಬಾಕಿ ಲವ್ ಮಾಡಿ, ಲವ್ಮಾಡಿ, ಲವ್ ಮಾಡಿ ||೨|| ಜಾತಿ ಬಿಟ್ರೂ ಸುಖ ಪಡ್ಬೇಕ್ ಪ್ರೀತಿ ಮಾಡಮ್ಮಾ ನಾಳೆ ಆಗೋದು ಇಂದೇ ಆಗಿ ಹೋಗ್ಲಮ್ಮ ಕದ್ದು ಮುಚ್ಚಿ ಪ್ರೀತಿ ಮಾಡೋದ್ ಕಳ್ಳ ಲವ್ವಮ್ಮ ಸತ್ಯ ಹೇಳಮ್ಮ, ನಿಜ್ವಾದ್ ಪ್ರೀತಿ ಮಾಡಮ್ಮ ಜಾತಿ ಸುಡೋ ಯಂತ್ರ ಕಿಡಿ ಪ್ರೀತಿ ಕಣಮ್ಮಾ ಮನುಜಮತ, ವಿಶ್ವಪಥ ಅಂತ ಹೇಳಮ್ಮ ತೀರ್ಥಹಳ್ಳಿಲಿ ಕುವೆಂಪು ಹುಟ್ಟಿದ್ರು ವಿಶ್ವಪ್ರೇಮನಾ ಮೈಸೂರಿಗ್ ತಂದ್ ಕೊಟ್ರು ಮೈಸೂರು ಕೂಲಾಗಿದೆ, ಬೃಂದಾವನ ಗ್ರೀನಾಗಿದೆ ಲವ್ವಿಗೇ, ಸ್ವೀಟ್ಲವ್ವಿಗೇ ನರಸಿಂಸ್ವಾಮಿ ಪದ್ಯ ಇದೆ, ಅನಂತ್ಸ್ವಾಮಿ ವಾದ್ಯ ಇದೆ ಸಾಂಗಿಗೇ, ಲವ್ ಸಾಂಗಿಗೆ ಈ ಭಯ ಬಿಸಾಕಿ ಲವ್ ಮಾಡಿ ಲವ್ ಮಾಡಿ ಲವ್ ಮಾಡಿ ಈ ದಿಗಿಲ್ ದಬ್ಬಾಕಿ ಲವ್ಮಾಡಿ ಲವ್ ಮಾಡಿ ಲವ್ ಮಾಡಿ ||೩|| ‘ನೆನಪಿರಲಿ’ ಸಿನಿಮಾದ ಈ ಸಂದರ್ಭ ನೆನಪಿಸಿಕೊಳ್ಳಿ: ‘ಅವನು’ ಅವಳನ್ನು ಪ್ರೀತಿಸುತ್ತಿರುತ್ತಾನೆ. ಬೇಗ ಮದುವೆ ಆಗಬೇಕು ಅನ್ನೋದು ‘ಅವನ’ ಆಸೆ. ಆದರೆ, ಹುಡುಗಿಯ ಮನೆಯ ಜನ ಈ ಲವ್ವಿನ ವಿಷಯವೇ ಗೊತ್ತಿರದೆ ಸುಮ್ಮನಿರುತ್ತಾರೆ. ಆಗ ಹೀರೋ ಒಂದು ಪ್ಲಾನ್ ಮಾಡುತ್ತಾನೆ; ತನ್ನ ಗೆಳೆಯನನ್ನು ಕರೆದು ನಾಯಕಿಯ ಹಿಂದೆ ಬೀಳುವಂತೆ ಹೇಳುತ್ತಾನೆ. ಮಗಳು ಒಬ್ಬ ಹುಡುಗನೊಂದಿಗೆ ಓಡಾಡುತ್ತಿದ್ದಾಳೆ ಎಂದು ಗೊತ್ತಾದರೆ, ಅವಳ ಮನೆಯವರು ಬೇಗ ಮದುವೆ ಮಾಡಲು ನಿರ್ಧರಿಸುತ್ತಾರೆ ಎಂಬುದು ‘ಅವನ’ ದೂರಾಲೋಚನೆ. ಗೆಳೆಯನ ಸೂಚನೆಯಂತೆ, ಹೀರೋ ‘ಅವಳ’ ಹಿಂದೆ ಬೀಳುತ್ತಾನೆ. ಈ ಸಂದರ್ಭದಲ್ಲಿಯೇ ಅವನ ಮನದ ರಾಗವಾಗಿ, ಹಾಡಾಗಿ, ಮಾತಾಗಿ, ಪಿಸುದನಿಯಾಗಿ, ಕೋರಿಕೆಯಾಗಿ, ಈ ಹಾಡು ಶುರುವಾಗುತ್ತದೆ: ಕೂರೋಕ್ ಕುಕ್ರಳ್ಳಿ ಕೆರೆ, ವಾ..ವಾ.., ತೇಲೋಕ್ ಕಾರಂಜಿ ಕೆರೆ ವಾ…ವಾ… ಈ ಹಾಡು ಹುಟ್ಟಿದ ಕತೆಯನ್ನು ಹಂಸಲೇಖಾ ವಿವರಿಸಿದ್ದು ಹೀಗೆ: ‘ನೆನಪಿರಲಿ’ ಚಿತ್ರದ ಸಂದರ್ಭ ವಿವರಿಸಿದ ರತ್ನಜ-‘ಗುರುಗಳೇ, ಈ ಜಾಗಕ್ಕೆ ಒಂದು ಸೂಪರ್ಹಿಟ್ ಆಗುವಂಥ ಹಾಡೇ ಬೇಕು’ ಎಂದ. ಹಿಂದೆಯೇ ಒಂದೆರಡು ವೆಸ್ಟರ್ನ್ ಟ್ಯೂನ್ಗಳ ಉದಾಹರಣೆ ಕೊಟ್ಟಿದ್ದ. ಅವು ಮೆಲೋಡಿ ಟ್ಯೂನ್ಸ್. ಸ್ವಲ್ಪ ಡಿಫರೆಂಟ್ ಆಗಿದ್ದವು. ಅಂದರೆ, ಎರಡೋ ಮೂರೋ ಸಾಲು ಹಾಡಿದ ನಂತರ ತಕ್ಷಣವೇ ಕೋರಸ್ ದನಿ ಶುರುವಾಗುವ ಧಾಟಿ ಅದು. ಈ ಹೊಸಾ ಸ್ಟೈಲ್ ನನಗೂ ಇಷ್ಟ ಆಯ್ತು. ಹೀಗಿದ್ದಾಗಲೇ, ಹಾಡನ್ನು ಮೈಸೂರಲ್ಲಿ ಶೂಟ್ ಮಾಡ್ತೀನಿ ಸಾರ್ ಅಂದ ರತ್ನಜ. ಮೈಸೂರಲ್ಲಿ ಯಾವ್ಯಾವ ಜಾಗದಲ್ಲಿ ಶೂಟ್ ಮಾಡ್ತಿಯಯ್ಯ ಎಂದೆ. ಅವನು- ‘ಕುಕ್ರಳ್ಳಿ ಕೆರೆ, ಕಾರಂಜಿ ಕೆರೆ, ಗೋಪಾಲ್ ಸ್ವಾಮಿ ಬೆಟ್ಟ, ಅರಮನೆ ಸುತ್ತಾಮುತ್ತ ಅಂತ ನಾಲ್ಕಾರು ಜಾಗ ಹೇಳ್ದ. ನನ್ನೊಳಗಿನ್ನೂ ಆಗಷ್ಟೇ ಕೇಳಿದ್ದ ವೆಸ್ಟರ್ನ್ ಮೆಲೋಡಿ ಸಾಂಗ್ನ ರಾಗವೇ ಕಾಡುತ್ತಿತ್ತು. ರತ್ನಜ- ಕುಕ್ರಳ್ಳಿ ಕೆರೆ, ಕಾರಂಜಿ ಕೆರೆ ಅಂದ ನೋಡಿ: ಆ ಕ್ಷಣದಲ್ಲೇ ಹಾಡಿನ ಮೊದಲ ಸಾಲು ಹುಟ್ಟೇ ಬಿಡ್ತು: ‘ಕೂರಕ್ ಕುಕ್ರಳ್ಳಿ ಕೆರೆ ವಾವಾ, ತೇಲೋಕ್ ಕಾರಂಜಿ ಕೆರೆ ವಾವಾ…’ ಈ ಗುಟ್ಟನ್ನು ನನ್ನೊಳಗೇ ಇಟ್ಟುಕೊಂಡು ರತ್ನಜನಿಗೆ ಹೇಳ್ದೆ: ‘ನೀನು ಮೊದ್ಲು ಮೈಸೂರ್ನ ಒಂದು ರೌಂಡ್ ಹೊಡಿ. ಅಲ್ಲಿ ನಿನಗೆ ಕಾಣಿಸೋ ಮುಖ್ಯವಾದ ಜಾಗಗಳ ಹೆಸರು ಬರ್ಕೊಂಡು ಬಾ’. ರತ್ನಜ, ಎರಡು ದಿನ ಪೂರ್ತಾ ಮೈಸೂರು ಸುತ್ತಿ, ಮೂರನೇ ದಿನ ನೂರಕ್ಕೂ ಹೆಚ್ಚು ಸ್ಥಳಗಳ ಹೆಸರು ಬರೆದು ನನಗೆ ಕೊಟ್ಟ. ಮೈಸೂರಿಗೆ ಸಮೀಪದ ಕನ್ನಂಬಾಡಿ ನಮ್ಮ ಪೂರ್ವಿಕರ ಊರು. ಜತೆಗೆ, ಚಿತ್ರರಂಗಕ್ಕೆ ಬರೋಕಿಂತ ಮುಂಚೆ ನಮ್ಮದೊಂದು ಆರ್ಕೆಸ್ಟ್ರಾ ಟೀಮ್ ಇತ್ತು. ಆಗ ಮೈಸೂರಿನ ಪ್ರತಿಯೊಂದು ಏರಿಯಾದಲ್ಲೂ ನಾವು ಕಾರ್ಯಕ್ರಮ ಕೊಟ್ಟಿದ್ವಿ. ರತ್ನಜ ಪಟ್ಟಿ ಮಾಡಿಕೊಂಡು ಬಂದ ಸ್ಥಳಗಳ ಹೆಸರು ನೋಡ್ತಿದ್ದಂಗೇ ಹಳೆಯದೆಲ್ಲಾ ನೆನಪಾಯ್ತು. ಆನಂತರದಲ್ಲಿ ಒಂದೊಂದೇ ಜಾಗದ ಹೆಸರು ತಗೊಂಡು ಬೆಂಗಳೂರಿನ ನನ್ನ ಮನೇಲಿ ಕೂತು ಹಾಡು, ಕೋರಸ್, ಹಾಡು- ಕೋರಸ್ ಧಾಟಿಯಲ್ಲಿ ಬೆಳೆಸ್ತಾ ಹೋದೆ. ನೋಡ್ತಿದ್ದ ಹಾಗೇ ಮೂರು ಚರಣಗಳು ಸಿದ್ಧವಾಗಿಹೋದವು. ಆದ್ರೆ ನನ್ನ ಮುಂದೆ ಇನ್ನೂ ಮೂರು ಚರಣಕ್ಕೆ ಆಗುವಷ್ಟು ಹೆಸರುಗಳು ಉಳಿದಿದ್ವು. ಯಾವ ಚರಣ ಕೈ ಬಿಡಲಿ ಎಂದು ನನಗೇ ಗೊಂದಲವಾಗುವಷ್ಟರ ಮಟ್ಟಿಗೆ ಹಾಡು ಚನ್ನಾಗಿ ಬಂತು. ಮುಂದೆ ಟ್ಯೂನ್ ಮತ್ತು ಸಂಗೀತ ಕೂಡ ಅದ್ಭುತ ಅನ್ನುವಂಥಾದ್ದೇ ಸಿಕ್ತು. ಹೌದಲ್ವಾ, ಇದು ಲವ್ ಸಾಂಗ್, ಪ್ರತಿ ಮೂರು ಸಾಲು ಮುಗೀತಿದ್ದ ಹಾಗೇ-‘ಲವ್ವಿಗೇ… ಲವ್ವಿಗೇ’ ಅನ್ನೋ ಪದ ಬರುತ್ತೆ. ನಿಮಗೆ ಆಶ್ಚರ್ಯ ಆಗಬಹುದು. ಈ ಹಾಡಿನಲ್ಲಿ ಬರುವ ಹೆಚ್ಚಿನ ಸ್ಥಳಗಳು ಲವರ್ ಸ್ಪಾಟ್ ಅಲ್ವೇ ಅಲ್ಲ! ಆದ್ರೂ ಈ ಜಾಗಗಳ ಹೆಸರು ಬಳಸಿಕೊಂಡೆ. ಇದೂ ಒಂಥರಾ ಟ್ರಿಕ್ಕು. ಒಂದಷ್ಟು ಜಾಗಗಳ ಹೆಸರು ಹೇಳಿ ಇದೆಲ್ಲಾ, ಲವರ್ ಸ್ಪಾಟ್ ಅನ್ನೋ ಭಾವನೆ ಹುಟ್ಟುಹಾಕೋದು, ಒಂದು ರೀತೀಲಿ, ಆ ಕ್ಷಣದ ಮಟ್ಟಿಗೆ, ಸುಳ್ಳನ್ನೇ ಸತ್ಯವೆಂದು ನಂಬಿಸೋದು ನಮ್ಮ ಉದ್ದೇಶ ಆಗಿತ್ತು. ಅದು ಯಶಸ್ವಿಯೂ ಆಯ್ತು. ರತ್ನಜ ಮತ್ತು ಅನೂಪ್ ಸೀಳನ್ ನನ್ನ ಪ್ರೀತಿಯ ಶಿಷ್ಯರು. ಅನೂಪ್ ಕೋ. ಚನ್ನಬಸಪ್ಪನವರ ಮೊಮ್ಮಗ ಅವನಿಗೆ ಒಳ್ಳೆಯ ಕಂಠವಿತ್ತು. ಅವನಿಂದ ಟ್ರ್ಯಾಕ್ನಲ್ಲಿ ಹಾಡಿಸ್ತಿದ್ದೆ. ಈ ಹೊಸ ಹಾಡನ್ನು ಟ್ರ್ಯಾಕ್ನಲ್ಲಿ ಮಾತ್ರವಲ್ಲ, ಸಿನಿಮಾದಲ್ಲೂ ಅವನಿಂದಲೇ ಹಾಡಿಸ್ಬೇಕು ಎನ್ನೋದು ನನ್ನ ಆಸೆಯಾಗಿತ್ತು. ಈ ಸಂದರ್ಭದಲ್ಲೇ ಕೆಪಿಟಿಸಿಎಲ್ನವರಿಗೆ ಒಂದು ಕಾರ್ಯಕ್ರಮ ಕೊಡಬೇಕಾಗಿ ಬಂತು. ಅದಕ್ಕೆ ಎಸ್ಪಿ, ಹರಿಹರನ್ ಕೂಡಾ ಬಂದಿದ್ರು. ಆ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಅನೂಪ್ನಿಂದ ‘ಕೂರೋಕ್ ಕುಕ್ರಳ್ಳಿ ಕೆರೆ’ ಹಾಡಿಸಿಬಿಟ್ಟೆ. ಸಾಂಪ್ರದಾಯಿಕ ಕೊಡವರ ವೇಷದಲ್ಲಿ ವೇದಿಕೆಗೆ ಬಂದಿದ್ದ ಅನೂಪ್- ಅವತ್ತು ಅದ್ಭುತವಾಗಿ ಹಾಡಿದ. ಜನ ಚಪ್ಪಾಳೆ ಹೊಡೆದು, ಒನ್ಸ್ಮೋರ್ ಕೂಗಿ, ಹುಚ್ಚೆದ್ದು ಕುಣಿಯತೊಡಗಿದರು. ಬ್ಯಾಕ್ ಸ್ಟೇಜ್ನಲ್ಲಿದ್ದ ಹರಿಹರನ್, ಎಸ್ಪಿ ಮುಂತಾದವರೆಲ್ಲ ಸ್ಟೇಜ್ಗೆ ಬಂದು, ಈ ಹೊಸ ಹಾಡು, ಅದು ಉಂಟುಮಾಡಿದ್ದ ಸಂಚಲನ, ಆ ಹಾಡಿನ ಪದಗಳಲ್ಲಿದ್ದ ಜೋಷ್ ಕಂಡು ದಂಗಾಗಿಬಿಟ್ರು. ಇದು ಯಾವ ಸಿನಿಮಾದ ಹಾಡು? ಏನ್ಕತೆ? ಎಂದೆಲ್ಲಾ ಕೇಳಿದರು. ತಮಾಷೆಯೆಂದರೆ, ಆಗಿನ್ನೂ ‘ನೆನಪಿರಲಿ’ ಚಿತ್ರದ ಅಡಿಯೋ ಬಿಡುಗಡೆಯಾಗಿರಲಿಲ್ಲ. ಅಷ್ಟೇ ಅಲ್ಲ, ಹಾಡು ಕೂಡ ಫೈನಲ್ ಆಗಿರಲಿಲ್ಲ! ಬೇಸರದ ವಿಷಯ ಕೇಳಿ. ಕೆಪಿಟಿಸಿಎಲ್ ಕಾರ್ಯಕ್ರಮ ಮುಗಿದ ಕೆಲವೇ ದಿನಗಳಲ್ಲಿ ಅನುಪ್ನ ವರ್ತನೆಯೇ ಬದಲಾಯಿತು. ಆತ ಅಹಂಕಾರದಿಂದ ಮಾತಾಡುವುದು, ಅಶಿಸ್ತಿನಿಂದ ವರ್ತಿಸುವುದು ಎಲ್ಲರ ಗಮನಕ್ಕೂ ಬಂತು. ಗುರುಗಳನ್ನು ಗೌರವಿಸದ ಅನೂಪ್ನಂಥ ವ್ಯಕ್ತಿಯಿಂದ ನನ್ನ ಸಿನಿಮಾದಲ್ಲಿ ಹಾಡಿಸಲಾರೆ ಎಂದು ರತ್ನಜ ಪಟ್ಟು ಹಿಡಿದರು. ಆಗ ಕೂಡ ಅನೂಪ್ನ ವರ್ತನೆಯಲ್ಲಿ ಬದಲಾವಣೆ ಕಾಣಲಿಲ್ಲ. ಆಗ, ನಮ್ಮ ಪ್ರಾಜೆಕ್ಟ್ನಿಂದ ಆತನ ಹೆಸರನ್ನು ಅನಿವಾರ್ಯವಾಗಿ ಕಿತ್ತು ಹಾಕಿದೆವು. ಅದೇ ಹಾಡನ್ನು ಎಸ್ಪೀಬಿ ಅವರಿಂದ ಹಾಡಿಸುವ ನಿರ್ಧಾರಕ್ಕೆ ಬಂದೆವು. ಯಾವ ಹಾಡೇ ಆಗಿರಲಿ, ಅದನ್ನು ಅದ್ಭುತವಾಗಿ ಹಾಡುವ ಮಹಾನ್ ಗಾಯಕ ಎಸ್ಪಿ. ಹಾಡು ಕೈ ಸೇರಿದ ಕೂಡಲೇ ತಮ್ಮೆಲ್ಲಾ ಜೋಷ್ನೊಂದಿಗೆ ಅವರು ರೆಡಿಯಾದರು. ಆಗ ಇಡೀ ಹಾಡಿನ ಫೋರ್ಸ್ನ ಒಂದಿಷ್ಟು ಹೆಚ್ಚಿಸಬೇಕು ಅನ್ನಿಸ್ತು. ಹೇಳಿ ಕೇಳಿ ಇದು ಪಡ್ಡೆ ಹುಡುಗರ ಹಾಡು ತಾನೆ? ಹಾಗಾಗಿ ಹಾಡಿಗೂ ಮುನ್ನ ಒಂದಿಷ್ಟು ಮಾತಿರಲಿ ಅಂದುಕೊಂಡು ಒಂದಿಷ್ಟು ತಮಾಷಿ ಮಾತು ಸೇರಿಸ್ದೆ. ಹೊಸ ಅವತಾರದ ಹಾಡು ಕಂಡು, ಒಮ್ಮೆ ಕಣ್ಣು ಮಿಟುಕಿಸಿ ನಕ್ಕು, ಖುಷಿ ಪಟ್ಟು ಎದೆ ತುಂಬಿ ಹಾಡಿದರು ಎಸ್ಪಿ. ಪರಿಣಾಮ- ಆ ಹಾಡು ಮೈಸೂರಿನ ಪಾಲಿಗೆ ನಾಡಗೀತೆಯೇ ಆಗಿಹೋಯ್ತು…. ಇಷ್ಟನ್ನೂ ಸಡಗರದಿಂದಲೇ ಹೇಳಿದ ಹಂಸಲೇಖ, ಕಡೆಗೆ ಹೀಗೊಂದು ಸ್ಪಷ್ಟೀಕರಣ ಕೊಟ್ಟರು. ಕುವೆಂಪು ಹುಟ್ಟಿದ್ದು ಕುಪ್ಪಳ್ಳಿಯಲ್ಲಿ ನಿಜ. ಆದರೆ ಒಂದು ಸಂಸ್ಕೃತಿಕ ಕೇಂದ್ರ ಎಂಬ ಅರ್ಥ ಬರಲಿ ಅಂದುಕೊಂಡೇ ನಾನು ತೀರ್ಥಹಳ್ಳೀಲಿ ಕುವೆಂಪು ಹುಟ್ಟಿದ್ರು ಅಂತ ಬಳಸಿದ್ದೇನೆ…]]>

‍ಲೇಖಕರು avadhi

August 13, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This