ಮಣಿಕಾಂತ್ ಬರೆಯುತ್ತಾರೆ: ಅಪರಾತ್ರಿಯಲ್ಲಿ ಚಂದ್ರನನ್ನು ನೋಡಿ ಬರೆದ ಹಾಡು

-ಎ ಆರ್ ಮಣಿಕಾಂತ್

ಬಾನಿಂದ ಬಾ ಚಂದಿರ…

ಚಿತ್ರ:   ಕಂಠಿ.       ಗೀತೆರಚನೆ: ಕವಿರಾಜ್
ಸಂಗೀತ:  ಗುರುಕಿರಣ್.      ಗಾಯನ: ಸೋನು ನಿಗಮ್

ಪ್ರೀತಿಯಲ್ಲೂ ಯುದ್ಧದಲ್ಲೂ ಸರಿ ತಪ್ಪು ಇಲ್ಲ ಎಲ್ಲೂ
ಏನಾದರೂ ತಪ್ಪಾದರೂ ಕ್ಷಮಯಾಧರಿತ್ರಿ ನಾರಿ
ನಾ ಹೇಳಬೇಕೆ ಸಾರಿ?

ಬಾನಿಂದ ಬಾ ಚಂದಿರ ಈ ಭೂಮಿಯೆ ಸುಂದರ
ಈ ಪ್ರೀತಿ ಎಲ್ಲಾ ಮೇಲೆ ಇಲ್ಲಾ
ಬಾ ಇಲ್ಲಿ ಪ್ರೀತೀಲಿ ತೇಲೋ ||ಪ||

ಪ್ರೀತೀಲಿ ಎಲ್ಲರೂ ಒಂಥರಾ ಮೂರ್ಖರು
ಮಾತು ನೂರಿದ್ದರೂ ಆಡದ ಮೂಕರು
ಬರಿ ಕಣ್ಣಲ್ಲೇ ಬರೆದು ಓಲೆ
ನೋಡುನೋಡುತ್ತಲೇ ಎಲ್ಲ ಹೇಳೋ ಕಲೆ
ಪ್ರೀತಿಗೆ ಕೊಟ್ಟೋರು ಯಾರೋ     ||೧||

ಪ್ರೀತಿಯ ಅಂದವಾ ಕಾಣದ ಅಂಧರು
ಮೋಹದ ಪ್ರೀತಿಯ ಕುರುಡು ಅಂತಂದರು
ಎರಡು ಕಣ್ಣು ಕಡಿಮೆ ಏನು
ಒಂದು ನೂರಾದರೂ ಕೊಡಲಿ ಆ ದೇವರೂ
ಹೋಗೋಣ ಸೇರೋಣ ಬಾರೋ     ||೨||

‘ನೂರು ಹಾಡುಗಳಿಗೆ ಕನ್ನಡಿ ಹಿಡಿದಿದ್ದೀರಿ. ಆ ಹಾಡುಗಳ ಹಿಂದಿದ್ದ ನೂರು ಕಥೆಗಳನ್ನು ನಮಗೆ ಕೇಳಿಸಿದ್ದೀರಿ. ಅಭಿನಂದನೆ’ ಎರಡು ವಾರಗಳ ಹಿಂದೆ ಬೆಳಗ್ಗೆ ಬೆಳಗ್ಗೆಯೇ ಹೀಗೊಂದು ಎಸ್ಸೆಮ್ಮೆಸ್ ಕಳುಹಿಸಿದವರು ಹಾಸ್ಯ ಬರಹಗಾರ ವೈ.ಎನ್. ಗುಂಡೂರಾವ್. ಅರೆ, ಆಗಲೇ ನೂರು ವಾರ ಕಳೆದುಹೋಯ್ತಾ ಎಂಬ ಅಚ್ಚರಿಯಲ್ಲಿ ಉಳಿದಿದ್ದಾಗಲೇ ಓದುಗರೊಬ್ಬರು ಹೀಗೊಂದು ಸಂದೇಶ ಕಳುಹಿಸಿದ್ದರು: ‘ಕಂಠಿ’ ಚಿತ್ರದಲ್ಲಿ ‘ಬಾನಿಂದ ಬಾ ಚಂದಿರ’ ಎಂಬ ಹಿಟ್ ಗೀತೆಯೊಂದಿದೆ. ಮುಂದಿನ ವಾರ ಆ ಹಾಡಿನ ಬಗ್ಗೆ ಸಾಧ್ಯವಾದ್ರೆ ಬರೀರಿ. ಬಹುಶಃ ಆ ಹಾಡಿನ ಹಿಂದೆ ಒಂದು ಕಥೆ ಇದ್ದೇ ಇದೆ ಎಂಬ ಅನುಮಾನ ನನ್ನದು. ಈ ಸಂಬಂಧವಾಗಿ ಹಾಡು ಬರೆದವರನ್ನು ಒಮ್ಮೆ ಸಂಪರ್ಕಿಸಲು ಪ್ರಯತ್ನಿಸಿ…’
ಇದಾಗಿ ನಾಲ್ಕೇ ದಿನಗಳ ನಂತರ ಗೀತರಚನೆಕಾರ ಕವಿರಾಜ್ ಆಕಸ್ಮಿಕವಾಗಿ ಸಿಕ್ಕರು. ಆ ಹಾಡಿನ ಹಿಂದೆ ಒಂದು ಕಥೆ ಇದೆಯಂತಲ್ರೀ, ಹೇಳ್ತೀರಾ? ಎಂದರೆ…‘ಓ ಅದಾ ಸಾರ್… ಹೇಳ್ತೇನೆ, ಹೇಳ್ತೇನೆ’ ಎನ್ನುತ್ತಾ ಶುರು ಮಾಡಿಯೇ ಬಿಟ್ಟರು ಕವಿರಾಜ್.  ಅದು ಹೀಗೆ…
***
‘ಅವು ೨೦೦೩-೦೪ನೇ ಇಸವಿಯ ದಿನಗಳು. ನಾನು ಆಗಷ್ಟೇ ಗಾಂನಗರಕ್ಕೆ ಎಂಟ್ರಿ ಕೊಟ್ಟಿದ್ದೆ. ‘ಕರಿಯ’ ಚಿತ್ರಕ್ಕೆ ‘ನಿನ್ನಲಿ ನಾನಿಲ್ಲ’ ಹಾಡು ಬರೆದಿದ್ದೆ. ಅದು ನನ್ನ ಮೊದಲ ಹಾಡು. ಹಾಡು ಹಿಟ್ ಆಗಿತ್ತು. ಅದರ ಹಿಂದೆಯೇ ಒಂದೆರಡು ಚಿತ್ರಗಳಿಗೂ ಹಾಡು ಬರೆದಿದ್ದೆ. ಮೆಡಿಕಲ್ ರೆಪ್ರೆಸೆಂಟೇಟಿವ್ ಕೆಲಸವನ್ನೂ ಮಾಡುತ್ತಿದ್ದೆ. ಮುಂದೆ ಚಿತ್ರ ಸಾಹಿತಿಯಾಗಿಯೇ ಉಳಿಯುವುದೋ ಅಥವಾ ಮೆಡಿಕಲ್ ರೆಪ್ ಕೆಲಸದಲ್ಲಿ ಮುಂದುವರಿಯುವುದೋ ಎಂದು ಗೊತ್ತಾಗದೆ ನಾನು ಗೊಂದಲದಲ್ಲಿದ್ದ ದಿನಗಳವು.
ಅಂಥದೇ ಒಂದು ದಿನ ನನ್ನ ಗಾಡ್‌ಫಾದರ್ ಆಗಿದ್ದ ಮತ್ತು ಈಗಲೂ ಆಗಿರುವ ಗುರುಕಿರಣ್ ಅವರನ್ನು ನೋಡಬೇಕು ಅನ್ನಿಸಿತು. ಅವರು ಗಾಂನಗರದ ಹೋಟೆಲ್ ಸಾಮ್ರಾಟ್‌ನಲ್ಲಿ ಸುದೀಪ್ ಅಭಿನಯದ ‘ಪಾರ್ಥ’ ಚಿತ್ರಕ್ಕೆ ಟ್ಯೂನ್ ಕಂಪೋಸಿಂಗ್‌ಗೆ ಕುಳಿತಿದ್ದಾರೆ ಎಂದು ಗೊತ್ತಿತ್ತು. ಅಲ್ಲಿಗೇ ಹೋದೆ. ನನ್ನನ್ನು ಕಂಡವರೇ ಒಂದು ಟ್ಯೂನ್ ಕೇಳಿಸಿ -‘ ಇದಕ್ಕೆ ಡಮ್ಮಿ ಲಿರಿಕ್ (ತಾತ್ಕಾಲಿಕವಾಗಿ ಹಾಡಲು ಅನುಕೂಲವಾಗುವಂತೆ ಬರೆದುಕೊಳ್ಳುವ ಸಾಹಿತ್ಯ) ಬೇಕು. ಬರೆದುಕೊಡು’ ಎಂದರು. ದಿಢೀರ್ ಆಹ್ವಾನದಿಂದ ನಾನು ಫೆಚ್ಚಾದೆ. ಏಕೆಂದರೆ, ನಾನು ಹಾಗೇ ಸುಮ್ಮನೆ ‘ಹಾಯ್’ ಹೇಳಿ ಹೋಗಲೆಂದು ಬಂದಿದ್ದೆನೇ ವಿನಃ ಹಾಡು ಬರೆಯುವ ಉದ್ದೇಶದಿಂದ ಬಂದಿರಲಿಲ್ಲ. ಆದರೂ ಈ ಕೆಲಸ ನನ್ನಿಂದ ಆಗೋದಿಲ್ಲ ಎಂದು ಹೇಳಲು ಮನಸ್ಸು ಬರಲಿಲ್ಲ.
ತಕ್ಷಣವೇ ಹಾಡಿನ ಸಂದರ್ಭ ಕೇಳಿದೆ. ನಂತರ ‘ಈ ಪ್ರೀತಿ ಒಂಥರಾ ಕಚಗುಳಿ’ ಎಂದು ಮೊದಲ ಸಾಲು ಬರೆದುಕೊಟ್ಟೆ. ಅದನ್ನು ಕಂಡು ಗುರುಕಿರಣ್ ‘ವೆರೀ ಗುಡ್’ ಎಂದು ಉದ್ಗರಿಸಿದರು. ನಂತರ ಒಂದೊಂದೇ ಸಾಲಿನ ಟ್ಯೂನ್ ಹೇಳತೊಡಗಿದರು. ಅದೇನು ಮಾಯೆಯೊ ಕಾಣೆ, ಅವತ್ತು ನಿಮಿಷ ನಿಮಿಷಕ್ಕೂ ಹೊಸ ಸಾಲು ಹುಟ್ಟುತ್ತಿತ್ತು. ನಾನು ಬರೆದು ಕೊಟ್ಟದ್ದನ್ನೆಲ್ಲ ಒಟ್ಟಾಗಿಸಿ ಕಡೆಗೊಮ್ಮೆ ಇಡೀ ಹಾಡನ್ನು ಸುದೀಪ್‌ಗೆ ಓದಿ ಹೇಳಿದರು ಗುರುಕಿರಣ್. ಸುದೀಪ್ ತುಂಬಾ ಖುಷಿಯಿಂದ ನನ್ನ ಹೆಗಲು ತಟ್ಟಿ- ಇದೇ ಮೊದಲ ಬಾರಿಗೆ ಗುರುಕಿರಣ್ ಅವರ ಟ್ಯೂನ್ ಅನ್ನು ಸಾಹಿತ್ಯ ಓವರ್‌ಟೇಕ್ ಮಾಡಿದೆ. ಕೀಪ್ ಇಟ್ ಅಪ್’ ಎಂದರು.
ನಂತರದ ಕೆಲವೇ ದಿನಗಳಲ್ಲಿ ಮುರುಳಿ-ರಮ್ಯಾ ತಾರಾಗಣದ ‘ಕಂಠಿ’ಚಿತ್ರ ಸೆಟ್ಟೇರಿತು. ಅದಕ್ಕೆ ಸಂಗೀತ ನಿರ್ದೇಶನದ ಜವಾಬ್ದಾರಿ, ಗುರುಕಿರಣ್ ಹೆಗಲಿಗೆ ಬಿತ್ತು. ನೋಡ ನೋಡುತ್ತಲೇ ಹಾಡುಗಳ ಕಂಪೋಸಿಂಗ್ ಶುರುವಾಯಿತು. ನಿರ್ದೇಶಕರು ಒಂದು ಸನ್ನಿವೇಶ ವಿವರಿಸಿದರು: ‘ನಾಯಕ ನಾಯಕಿಯ ಪ್ರೀತಿ ಗಿಟ್ಟಿಸಲು ತರಹೇವಾರಿಯಲ್ಲಿ ಪ್ರಯತ್ನಿಸುತ್ತಿರುತ್ತಾನೆ. ಇವನ ಪ್ರಯತ್ನಗಳತ್ತ ಆಕೆ ತಿರುಗಿ ಕೂಡಾ ನೋಡಿರುವುದಿಲ್ಲ. ಅಂಥ ಸಂದರ್ಭದಲ್ಲಿ ಅವಳನ್ನು ಒಲಿಸಿಕೊಳ್ಳಲು ಅವನು ಒಂದು ಹಾಡು ಅದಾಗಿರ ಹೇಳಬೇಕು. ನಾಯಕಿಯಲ್ಲೂ ಪ್ರೀತಿಯೆಡೆಗೆ  ಆಕರ್ಷಣೆ ಹುಟ್ಟುವಂಥ ಒಂದು ಹಾಡು ಬೇಕು…’
ನಿರ್ದೇಶಕರು ಮಾತು ಮುಗಿಯುತ್ತಿದ್ದಂತೆಯೇ ನನ್ನತ್ತ ತಿರುಗಿದ ಗುರುಕಿರಣ್- ‘ಈ ಸಂದರ್ಭಕ್ಕೆ ನೀನೇ ಹಾಡು ಬರೆದುಬಿಡು’ ಎಂದರು. ಹಿಂದೆಯೇ ಒಂದು ಹೊಸಾ ಟ್ಯೂನ್ ಕೇಳಿಸಿದರು. ಅಷ್ಟಕ್ಕೇ ಸುಮ್ಮನಾಗದೆ -ಈ ಹಿಂದೆ  ‘ಈ ಪ್ರೀತಿ ಒಂಥರಾ ಕಚಗುಳಿ’ ಎಂದು ಬರೆದಿದ್ದೆಯಲ್ಲ? ಅದೇ ಥರಾ ಈ ಹಾಡನ್ನೂ ಬರೆದು ಕೊಡು. ಈ ಹಾಡಿನಲ್ಲಿ  ಬಂದಿದ್ದಂಥ ನವಿರು ಭಾವಗಳೇ ಈ ಹಾಡಲ್ಲೂ ಇರಲಿ ಎಂದರು.

ಹೀಗೆ ಹೊಸ ಹಾಡು ಬರೆಯಲು ಅವಕಾಶ ನೀಡಿದ ಗುರುಕಿರಣ್ ಎರಡು ಷರತ್ತುಗಳನ್ನೂ ವಿಸಿದ್ದರು. ಹಾಡಿನ ಮೊದಲ ಸಾಲಲ್ಲಿ ಏಳು ಅಕ್ಷರ ಇರಬೇಕು ಎಂಬುದು ಮೊದಲ ಷರತ್ತು. ಮೊದಲ ಹಾಗೂ ನಾಲ್ಕನೇ ಅಕ್ಷರ ಒಂದೇ ಆಗಿರಬೇಕು ಎಂಬುದು ಎರಡನೇ ಷರತ್ತು.
‘ಸರಿ’ ಸರ್ ಎಂದೆ. ನಂತರ-ಬರೆಯುತ್ತೇನೆ ಎಂದು ಒಪ್ಪಿಕೊಂಡದ್ದಾಗಿದೆ. ಏನಾಗುತ್ತದೋ ನೋಡಿಯೇ ಬಿಡೋಣ ಎಂದು ಕಡೆಗೊಂದು ದಿನ ಹಾಡು ಬರೆಯಲು ಕೂತೆ. ಬರೆದೂ ಬರೆದೂ ಹಾಳೆಗಳು ತುಂಬಿದವು. ಪೆನ್ನಿನ ಇಂಕು ಖಾಲಿಯಾಯಿತು. ಆದರೆ ಆ ಟ್ಯೂನ್‌ಗೆ ಹೊಂದುವಂಥ ಸಾಹಿತ್ಯ ಸಿಗಲೇ ಇಲ್ಲ.
ಈ ಒದ್ದಾಟದಲ್ಲಿಯೇ ಒಂದು ತಿಂಗಳು ಕಳೆದುಹೋಯಿತು. ನಿರ್ದೇಶಕ, ನಿರ್ಮಾಪಕರು ಬೇಗ ಹಾಡಿನ ಕಂಪೋಸಿಂಗ್ ಮುಗಿಸಿ ಎಂದು ಒತ್ತಡ ಹೇರತೊಡಗಿದರು. ದಿನ ಕಳೆದಂತೆಲ್ಲಾ ನನಗೆ ಭಯವಾಗತೊಡಗಿತು. ಈ ಹಾಡನ್ನು ಬರೆಯಲು ನನ್ನಿಂದ ಸಾಧ್ಯವಿಲ್ಲ ಎಂಬ ಭಾವ ಕಾಡತೊಡಗಿತು. ಒಂದು ದಿನ ಧೈರ್ಯಮಾಡಿ ಇದನ್ನೇ ಗುರುಕಿರಣ್‌ಗೆ ಹೇಳಿಬಿಟ್ಟೆ: ‘ನನ್ನಿಂದ ಸಾಧ್ಯವಾಗೋದಿಲ್ಲ ಅನ್ನಿಸ್ತಿದೆ. ಬೇರೆ ಯಾರಿಂದಲಾದ್ರೂ ಬರೆಸಿ ಸಾರ್’ ಅಂದೆ.
ನನ್ನ ತಳಮಳ ಗುರುಕಿರಣ್‌ಗೆ ಅರ್ಥವಾಯಿತು. ಅವರು ನನ್ನ ಹೆಗಲು ತಟ್ಟಿ ಹೇಳಿದರು: ಈ ಹಾಡು ಬರೆಯೋ ಸಾಮರ್ಥ್ಯ ನಿನಗೆ ಖಂಡಿತ ಇದೆ. ಈ ಕೆಲಸ ನನ್ನಿಂದ ಸಾಧ್ಯವಿಲ್ಲ  ಅನ್ನೋ ವಿಷಯವನ್ನು ಮನಸಿಂದ ತೆಗೆದುಹಾಕು. ಹೆಚ್ಚು ತಲೆಕೆಡಿಸ್ಕೋಬೇಡ. ನೆಮ್ಮದಿಯಾಗಿ ಕೂತು ಹಾಡು ಬರಿ’ ಅಂದರು.
ಅದು ಬೇಸಿಗೆಯ ಕಾಲ. ಆಗ ನಾನಿದ್ದುದು ಯಲಹಂಕದಲ್ಲಿ. ಅಲ್ಲಿ ನಮ್ಮ ಚಿಕ್ಕಪ್ಪ ವಾಸುದೇವ್ ಅವರ ಮನೆಯಿತ್ತು. ಅದೊಂದು ರಾತ್ರಿ ಟೆರೇಸ್ ಮೇಲೆ ಹಾಸಿಗೆ ಹಾಸಿಕೊಂಡು ಮಲಗಿದ್ದೆ. ತಲೆ ತುಂಬಾ ಹಾಡನ್ನು ಹೇಗೆ ಶುರುಮಾಡಲಿ ಎಂಬ ಯೋಚನೆಯೇ ತುಂಬಿಕೊಂಡಿತ್ತು. ಹೀಗೆ ಯೋಚಿಸುತ್ತಿದ್ದಾಗಲೇ ಯಾವುದೋ ವೇಳೆಯಲ್ಲಿ ನಿದ್ರೆ ಆವರಿಸಿಕೊಂಡಿತ್ತು.
ರಾತ್ರಿ ಯಾವುದೋ ಸಮಯದಲ್ಲಿ ಎಚ್ಚರವಾಯಿತು. ಗಡಿಯಾರ ನೋಡಿದರೆ, ಆಗಲೇ ರಾತ್ರಿ ಎರಡೂವರೆ! ಅಂಗಾತ ಮಲಗಿದ್ದವನು ಒಮ್ಮೆ ಆಗಸವನ್ನೇ ದಿಟ್ಟಿಸಿದೆ. ನನ್ನ ಅದೃಷ್ಟಕ್ಕೆ ಅವತ್ತು ಹುಣ್ಣಿಮೆ. ಪೂರ್ಣಚಂದ್ರ, ಫುಟ್‌ಬಾಲ್‌ಗಿಂತ ದೊಡ್ಡ ಗಾತ್ರದಲ್ಲಿ ಕಣ್ಣಿಗೆ ರಾಚುತ್ತಿದ್ದ. ಆ ಸುಂದರ ದೃಶ್ಯ ಕಂಡೊಡನೆ ಆ ಅಪರಾತ್ರಿಯಲ್ಲೂ ನನ್ನ ಕಲ್ಪನಾ ಲಹರಿಗೆ ಕಿಡಿ ಹೊತ್ತಿಕೊಂಡಿತು. ಚಂದಿರನೆಂಬ ಚೆಂದುಳ್ಳಿ ಚೆಲುವನನ್ನು ಭೂಮಿಗೆ ಕರೆಯುವ ಮನಸ್ಸಾಯಿತು.
ಆ ಕ್ಷಣಕ್ಕೆ ನನಗೆ ನಾನೇ ಒಂದು ಪ್ರಶ್ನೆ ಕೇಳಿಕೊಂಡೆ. ಏನೆಂದರೆ- ಚಂದಿರನನ್ನು ಯಾಕಾದರೂ ಭೂಮಿಗೆ ಕರೆಯಬೇಕು? ಆತ ನೀಲಾಕಾಶದಲ್ಲಿ ಕೋಟ್ಯಂತರ ತಾರೆ, ಚುಕ್ಕಿಗಳ ಮಧ್ಯೆ ಹಾಯಾಗಿದ್ದಾನೆ. ಅದನ್ನೆಲ್ಲ ಬಿಟ್ಟು ಭೂಮಿಗೆ ಬರಬೇಕು ಅಂದರೆ, ಚಂದ್ರಲೋಕದಲ್ಲಿ ಇಲ್ಲದ ಏನೋ ಒಂದು ವಿಶೇಷ ಭೂಮಿಯಲ್ಲಿರಬೇಕು. ಆಗ ಮಾತ್ರ ಆಮಿಷ ತೋರಿ ಅವನನ್ನು ಕರೆಯಬಹುದು ಅನ್ನಿಸಿತು. ಚಂದ್ರಲೋಕದಲ್ಲಿ ಇಲ್ಲದ್ದು ಮಹತ್ವದ್ದು ಅನಿಸಿದ್ದು ಭೂಮಿಯಲ್ಲಿ ಏನಿದೆ ಎಂದು ಮತ್ತೆ ಮತ್ತೆ ನನಗೆ ನಾನೇ ಪ್ರಶ್ನೆ ಹಾಕಿಕೊಂಡಾಗ ಹೊಳೆದದ್ದು-ಪ್ರೀತಿ!
ಆ ಖುಷಿಯಲ್ಲಿಯೇ ‘ಹೋಯ್ ಚಂದ್ರಮಾ, ನಿನ್ನ ಲೋಕದಲ್ಲಿ ಏನೆಲ್ಲಾ ಇರಬಹುದು. ಆದರೆ ಪ್ರೀತಿ ಇಲ್ಲ. ಪ್ರೀತಿಗಿಂತ ಮಧುರವಾದುದು ಈ ಜಗತ್ತಿನಲ್ಲಿ ಬೇರೊಂದಿಲ್ಲ. ಹಾಗಾಗಿ ಬೇಗ ಬಾ ಇಲ್ಲಿಗೆ’ ಎಂದು ಕರೆಯುವಾ ಅಂದುಕೊಂಡೆ. ಆಗಲೇ ನನ್ನೊಳಗೆ ಹೊಸ ಸಾಲು ಹುಟ್ಟಿತು. ‘ಬಾನಿಂದ ಬಾ ಚಂದಿರ…’
ಮುಂದೆ ಚಂದ್ರನನ್ನು ಭೂಮಿಗೆ ಕರೆಯುವ ಯೋಚನೆಯನ್ನು ಅಂಗೈಲಿ ಹಿಡಿದುಕೊಂಡೇ ಒಂದೊಂದೇ ಸಾಲು ಬರೆದೆ. ನಿಜ ಹೇಳಬೇಕೆಂದರೆ, ನಾನು ಬರೆದದ್ದು ಚಂದ್ರನನ್ನು ನೋಡಿಕೊಂಡು. ಆದರೆ, ಆ ಸಾಲುಗಳು ನಾಯಕ, ನಾಯಕಿಗೆ ಪ್ರೀತಿಯ ಮಹಾತ್ಮೆ ತಿಳಿಸುವಂತೆಯೂ ಇದ್ದವು. ಆ ಅಪರಾತ್ರಿಯಲ್ಲೇ ಇಡೀ ಹಾಡು ಬರೆದು ಮುಗಿಸಿದೆ.
ಬೆಳಗ್ಗೆ ಆರು ಗಂಟೆಯಾದ ತಕ್ಷಣವೇ ಗುರುಕಿರಣ್ ಅವರಿಗೆ ಪೋನ್ ಮಾಡಿದೆ. ಬಹುಶಃ ಸಂತೋಷದಿಂದ ಕಿರುಚಿದೆ ಅನ್ನಬೇಕೇನೋ… ನನ್ನ ಧ್ವನಿಯಲ್ಲಿದ್ದ ಸಡಗರದಿಂದಲೇ ಹಾಡು ಸಿದ್ಧವಾಗಿದೆ ಎಂದು ಅವರಿಗೆ ಅರ್ಥವಾಗಿತ್ತು. ‘ಸರಿ, ನೀನು ಹೇಳ್ತಾ ಹೋಗು ಎಂದರು. ‘ಬಾನಿಂದ ಬಾ ಚಂದಿರ’ ಎಂದಾಕ್ಷಣ ಸೂಪರ್ಬ್ ಎಂದು ಉದ್ಗರಿಸಿದರು. ನಂತರ, ಇಡೀ ಹಾಡು ಹೇಳಿ ಮುಗಿಸಿದಾಗ- ಅದ್ಭುತವಾಗಿ ಬರೆದಿದೀಯ. ಈಗಲೇ ಬಂದುಬಿಡು.

ಸಿಂಗರ್ ಕರೆಸಿ ಹಾಡಿಸಿ ಬಿಡೋಣ’ ಎಂದರು. ನನಗೋ ಈ ಮಾತು ಕೇಳಿ ಸ್ವರ್ಗಕ್ಕೆ ಮೂರೇ ಗೇಣು. ಲಗುಬಗೆಯಿಂದಲೇ ಸ್ಟುಡಿಯೋಕ್ಕೆ ಹೋದೆ. ಅಲ್ಲಿ ಕೆಲವೊಂದು ತಿದ್ದುಪಡಿ ಮಾಡಿದ ಗುರುಕಿರಣ್, ತಾವೇ ಟ್ರಾಕ್‌ನಲ್ಲಿ ಹಾಡಿದರು. ಮುಂದೆ ಈ ಹಾಡಿಗೆ ಸೋನು ನಿಗಮ್ ದನಿ ಸೇರಿಸಿದರು ನೋಡಿ; ಆಗ ಹಾಡೆಂಬ ಹಾಡು ಚಂದಿರನಂತೆ, ಬೆಳದಿಂಗಳಿನಂತೆ ಅಮರವಾಯಿತು, ಮಧುರವಾಯಿತು…
ಖುಷಿಯಿಂದ ಮಾತು ಮುಗಿಸಿದರು ಕವಿರಾಜ್

]]>

‍ಲೇಖಕರು avadhi

July 10, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

4 ಪ್ರತಿಕ್ರಿಯೆಗಳು

 1. ರಂಜಿತ್

  ನಿಜವಾಗಲೂ ಚಂದ ರಾಗವಿರುವ ಮಧುರ ಸಾಹಿತ್ಯ, ಒಳ್ಳೆಯ ಕೊರಿಯೋಗ್ರಫಿ ಇರುವ ಹಾಡು ಅದು!

  ಪ್ರತಿಕ್ರಿಯೆ
 2. sritri

  ಸುಂದರ ಹಾಡು! ಹಾಡು ಹುಟ್ಟಿದ ಕಥೆಯೂ ಸುಂದರವಾಗಿದೆ!
  ಲೇಖನದಲ್ಲಿ ಎಲ್ಲಾ ಕಡೆ ಧಿ ಮಾಯವಾಗಿದೆ. ಬಹುಷಃ ಫಾಂಟುಗಳ ತರಲೆ ಇರಬೇಕು:) ಶ್ರೀಲಿಪಿನಾ?

  ಪ್ರತಿಕ್ರಿಯೆ
 3. Savitri

  Naanu Kanti film nodirunu haadu arthavagiralilla. Scenes adharada mele haadina bhavavannu artha madikollalu try madidde. Ivathu Avadhiya moolaka e song odi bahala khushiyaytu. Thanks.

  ಪ್ರತಿಕ್ರಿಯೆ
 4. ಟಿ.ಕೆ.ಗಂಗಾಧರ ಪತ್ತಾರ

  ಕವಿರಾಜ್ ಹಾಡು ನೋಡಿ ಹಳೆಯದೊಂದು-ಯಾರು ಬರದದ್ದೆಂದು ನೆನಪಿಲ್ಲ-ಚುಟುಕು ನೆನಪಾಯ್ತು-
  “ಹುಚ್ಚ, ಪ್ರೇಮಿ, ಕವಿ”-
  ಈ ಮೂವರೂ ಒಂದೇ
  ಹುಚ್ಚ ಕಲ್ಲು ತೂರುತ್ತಾನೆ!
  ಪ್ರೇಮಿ ಕಲ್ಲಾಗುತ್ತಾನೆ!!
  ಕವಿ ಕಲ್ಲು ನುಡಿಸುತ್ತಾನೆ!!!
  -ಹಾಗೆ ಕಲ್ಲು ನುಡಿಸುವ ಶಕ್ತಿ ಕವಿರಾಜ್, ಜಯಂತ ಕಾಯ್ಕಿಣಿ ಮತ್ತು ಯೋಗಿರಾಜ್ ಭಟ್ಟರವರ ಲೇಖನಿಗಳಿಗಿದೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: