ಮಣಿಕಾಂತ್ ಬರೆಯುತ್ತಾರೆ: ಅಳ್ಳಿ ಅಲ್ಲಮ್ಮ..ಹಳ್ಳಿ ಹಳ್ಳಿ..

ಎ ಆರ್ ಮಣಿಕಾಂತ್

551

ಚಿತ್ರ: ಬಿಳೀಹೆಂಡ್ತಿ

ಗೀತೆ ರಚನೆ: ವಿಜಯನಾರಸಿಂಹ

ಗಾಯನ: ಕಸ್ತೂರಿ ಶಂಕರ್, ವಾಣಿ ಜಯರಾಂ

ಸಂಗೀತ: ವಿಜಯಭಾಸ್ಕರ್

ರಂಗೇನಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟು

ರಂಗಾದ ರಂಗೇಗೌಡ ಮೆರೆದಿದ್ದ

ರಂಗೇನಹಳ್ಳಿಯಾಗೆ ಸಿಂಗಾರಿ ಸೀತೆ ಹಂಗೆ

ಬಂಗಾರಿ ರಂಗಿ ಮೈ ಅರಳಿತ್ತು //ಪ//

ನಕ್ಕಾ ನಕ್ಷತ್ರಾದಂಥಾ ಚೊಕ್ಕಾದ ರಂಗೀನ್ ಕಂಡಾ

ತಕ್ಕಾದ ಹೆಂಡ್ತಿ ಅಂದ ರಂಗೇಗೌಡ

ತನಗೆ ತಕ್ಕಾದ ಹೆಂಡ್ತಿ ಅಂದ ರಂಗೇಗೌಡ

ರಂಗೀಯ ಕೈಯ ಮ್ಯಾಗೆ ರಂಗ ಭಾಷೆಯ ಕೊಟ್ಟ

ಸಂಗಾತಿ ನೀನೆ ಅಂತ ಆಣೆ ಇಟ್ಟ

ಬಾಳ ಸಂಗಾತಿ ನೀನೆ ಅಂತ ಆಣೆ ಇಟ್ಟ //1//

ಭಾರೀ ಹಡ್ಗಾನೇರಿ ದೂರಾ ದೇಸಾಸುತ್ತಿ

ಊರ್ಗೇನೆ ಸಿರಿ ತರ್ತೀನ್ ಅಂತ ಹೊರಟ

ರಂಗ, ಊರ್ಗೇನೆ ಸಿರಿ ತರ್ತೀನಿ ಅಂತ ಹೊರಟ

ವರ್ಷಾ ವರ್ಷಾ ಕಾದು ಬರ್ತಾನೆ ರಂಗ ಅಂತ

ಅತ್ತು ಅತ್ತು ಕಣ್ಣು ಬಾತೋಯ್ತು

ರಂಗಿ, ಅತ್ತು ಕಣ್ಣೀರ್ ಕೆರೆ ಬತ್ತೋಯ್ತು //2//

ಬಂದಾ ರಂಗಾ ಬಂದಾ, ತಂದಾ ಬೇರೊಂದು ಹೆಣ್ಣಾ

ಮೋಜಾಗಿ ಮದುವೆ ನಡೆದೋಯ್ತು

ಬಲು ಸೋಕಾಗಿ ಸೋಬ್ನ ಆಗೋಯ್ತು

ಮದುವೇನಾ ನೋಡಿ ರಂಗಿ ಮನದಾಗೆ ದುಃಖ ನುಂಗಿ

ಮನಸಾರೆ ಜೋಡಿನಾ ಹರಸಿದ್ಲು

ಮನೆದ್ಯಾವ್ರೆ ಕಾಪಾಡು ಅಂತಿದ್ಲು //3//

cinima_8ಎಪ್ಪತ್ತರ ದಶಕದ ಮಧ್ಯಭಾಗದಿಂದ ಎಂಬತ್ತರ ದಶಕದ ಮಧ್ಯಭಾಗದವರೆಗೂ ಚಿತ್ರಗೀತೆ ಪ್ರೇಮಿಗಳನ್ನು ಜ್ವರದಂತೆ ಕಾಡಿದ ಹಾಡೆಂದರೆ `ಬಿಳೀಹೆಂಡ್ತಿ’ ಚಿತ್ರದ `ರಂಗೇನ ಹಳ್ಳಿಯಾಗೆ…’ ಅವತ್ತಿನ ಸಂದರ್ಭಗಳಲ್ಲಿ ರೇಡಿಯೊದಲ್ಲಿ ಬೆಳಗ್ಗೆ ವಾರ್ತೆಯ ನಂತರ ಅಥವಾ ಸಂಜೆ ಮೆಚ್ಚಿನ ಚಿತ್ರಗೀತೆಗಳ ಪ್ರಸಾರದ ವೇಳೆಯಲ್ಲಿ ಕಾರ್ಯಕ್ರಮ ಉದ್ಘೋಷಕರು- ಈಗ `ಬಿಳೀ ಹೆಂಡ್ತಿ’ ಚಿತ್ರದ ಗೀತೆ ಎಂದೆರ ಸಾಕು- ಮೊದಲ ಎರಡು ಸಾಲುಗಳನ್ನು ಕೇಳಲೆಂದು ಎಲ್ಲರೂ ಕಾತರದಿಂದಲೇ ರೇಡಿಯೋ ಎದುರು ಕೂರುತ್ತಿದ್ದರು. ಮೊದಲ ಸಾಲುಗಳನ್ನು ಕೇಳಲೇಬೇಕೆಂಬ ಆಸೆ ಹೊತ್ತವರ ಸಾಲಿನಲ್ಲಿ ಆಗಷ್ಟೇ ಕೆಲಸ ಮುಗಿಸಿ ಬಂದ ಅಪ್ಪ ಇರುತ್ತಿದ್ದ. ಈ ಹಾಡು ಕೇಳಲೆಂದೇ ಸರಭರನೆ ಎಲ್ಲ ಕೆಲಸ ಮುಗಿಸಿರುತ್ತಿದ್ದ ಅಮ್ಮ ಇರುತ್ತಿದ್ದಳು. ಆಗಷ್ಟೇ ಶಾಲೆಯಿಂದ ಬಂದಿರುತ್ತಿದ್ದ ತಮ್ಮ-ತಂಗಿ ಇರುತ್ತಿದ್ದರು. ಹಾಡುವವರು ರೇಡಿಯೋ ಒಳಗಿಂದ ಕಾಣಿಸುತ್ತಾರೇನೋ ಎಂಬಂತೆ ರೇಡಿಯೋವನ್ನೇ ನೋಡುತ್ತ ಕೂತಿರುತ್ತಿದ್ದ ಐದಾರು ಮಂದಿ ಕೂಡ ಮೊದಲ ಸಾಲು ಕೇಳಲೆಂದೇ ಮೈಯೆಲ್ಲ ಕಣ್ಣಾಗಿ ಕಾದಿರುತ್ತಿದ್ದರು. ಆಗಲೇ ಶುರುವಾಗುತ್ತಿತ್ತು ಹಾಡು…

`ರಂಗೇನ ಹಳ್ಳಿಯಾಗೆ…’

`ಅಳ್ಳಿಯಲ್ಲಮ್ಮ… ಹಳ್ಳಿ, ಹಳ್ಳಿ…’

`ರಂಗೇನಹಳ್ಳಿಯಾಗೆ… ರಂಗೇನಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟು ರಂಗಾದ ರಂಗೇಗೌಡ ಮೆರೆದಿದ್ದ…’

ಈ ಮೊದಲ ಸಾಲುಗಳನ್ನು ಕೇಳಿ ಬಿಟ್ಟರೆ, ಅವತ್ತಿನ ಮಟ್ಟಿಗೆ ಇಡೀ ದಿನ ಉಲ್ಲಾಸವೆಂಬುದು ಜತೆಗಿರುತ್ತಿತ್ತು ಎಂದೇ ಅರ್ಥ! ಹೀಗೆ, ಹಾಡು ಕೇಳಿದವರೆಲ್ಲ ಅದನ್ನು ತಮ್ಮ ಜತೆಗಾರರಿಗೆ ವಿವರಿಸಿ ಹೇಳುತ್ತಾ- `ಅಳ್ಳಿಯಲ್ಲಮ್ಮ, ಹಳ್ಳಿ ಹಳ್ಳಿ’ ಎನ್ನೋ ಸಾಲು ಎಷ್ಟೊಂದು ಚೆಂದಕ್ಕಿದೆಯಲ್ವ ಎಂದು ಸಂತೋಷ ಹಂಚಿಕೊಳ್ಳುತ್ತಿದ್ದರು.

ಹೀಗೆ, ಒಂದು ಹಾಡಿಗಿಂತ ಆ ಹಾಡಿನ ಒಂದು ಸಾಲನ್ನೇ, ಅಲ್ಲಲ್ಲ ಒಂದು ಪದವನ್ನೇ ಹೈಲೈಟ್ ಮಾಡಿದ್ದು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಹೆಚ್ಚುಗಾರಿಕೆ. ಈಗ ಕೂಡ ಆಕಸ್ಮಿಕವಾಗಿ `ರಂಗೇನಹಳ್ಳಿಯಾಗೆ…’ ಹಾಡು ಪ್ರಸಾರವಾದರೆ, ಮನಸ್ಸು ತಕ್ಷಣವೇ ಹಾಡಿನ ಮೊದಲ ಸಾಲನ್ನೇ ಕೇಳಲು ಹವಣಿಸುತ್ತದೆ; ಅದು ಈ ಹಾಡಿನ ಮಾಧುರ್ಯ ಇಂದಿಗೂ ಬತ್ತಿಲ್ಲ ಎಂಬ ಮಾತಿಗೆ ಸಾಕ್ಷಿ.

ಉಳಿದವರ ಮಾತಿರಲಿ; ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೇ `ರಂಗೇನಹಳ್ಳಿಯಾಗೆ’ ಹಾಡಿನ ಬಗ್ಗೆ ತುಂಬ ಮೋಹವಿತ್ತು. ಚಿತ್ರ ತೆರೆ ಕಂಡ ಸಂದರ್ಭದಲ್ಲಿ ಈ ಸಂಬಂಧವಾಗಿ ಅವರು ಹೀಗೆ ವಿವರಣೆ ನೀಡಿದ್ದರು: `ಬಿಳೀ ಹೆಂಡ್ತಿ’ ಸಿನಿಮಾದಲ್ಲಿ ಕಥಾನಾಯಕ ಅಮೆರಿಕಕ್ಕೆ ಹೋಗಿ ವಿದೇಶಿ ಹುಡುಗಿಯನ್ನು ಮದುವೆ ಮಾಡಿಕೊಂಡು ಬೆಂಗಳೂರಿನ ತನ್ನ ಮನೆಗೆ ಬರುತ್ತಾನೆ. ಅವಳಿಗೆ ಇಲ್ಲಿನ ಪರಿಸರ ಹೊಸದು. ಬೆಂಗಳೂರಿನ ಮನೆಯಲ್ಲಿ, ಕಥಾನಾಯಕನನ್ನು ಮೊದಲು ಪ್ರೀತಿಸಿದ ಶಾರದಾ ಎಂಬ ಕಥಾನಾಯಕಿ ಇರುತ್ತಾಳೆ. ಅವಳಿಗೆ, ತಾನು ಮದುವೆಯಾಗಬೇಕೆಂದಿದ್ದ ಹುಡುಗನನ್ನು ಈ ವಿದೇಶಿ ಹುಡುಗಿ ಮದುವೆಯಾದಳಲ್ಲ ಎಂಬ ನೋವು ಇರುತ್ತದೆ. ತನ್ನ ಹೃದಯದಲ್ಲಿದ್ದ ಆ ನೋವನ್ನು ವಿದೇಶಿ ಹುಡುಗಿಗೆ ಹೇಳಬೇಕೆನ್ನುವ ಆಸೆ ಶಾರದಳದ್ದು. ಆದರೆ ಅದನ್ನು ನೇರವಾಗಿ ಹೇಳಿಬಿಟ್ಟರೆ ತಪ್ಪಾಗುತ್ತದೆ ಎನಿಸಿದಾಗ, ಮದುವೆಯಾಗಿ ಮನೆಗೆ ಬಂದಾಕೆಗೆ ಒಂದು ಹಾಡು ಹೇಳಿಕೊಟ್ಟರೆ ಹೇಗೆ ಎಂಬ ಯೋಚನೆ ಬರುತ್ತದೆ ಶಾರದೆಗೆ. ಏಕಕಾಲಕ್ಕೆ ತನ್ನ ಮನದ ನೋವನ್ನೂ ಹೇಳಿದಂತಾಗಬೇಕು, ಅದೇ ಸಂದರ್ಭದಕ್ಕೆ ವಿದೇಶಿ ಹುಡುಗಿಗೆ ಒಂದು ಹಾಡು ಹೇಳಿಕೊಟ್ಟಂತೆಯೂ ಆಗಬೇಕು ಎಂದುಕೊಂಡ ಆಕೆ, ಹಾಡಿನ ನೆಪದಲ್ಲಿ ತನ್ನ ಸಂಕಟದ ಅನಾವರಣಕ್ಕೆ ದಾರಿ ಕಂಡುಕೊಳ್ಳುತ್ತಾಳೆ! ಆಗಲೇ ಶುರುವಾಗುತ್ತದೆ ಈ ಅಮರಾ ಮಧುರಾ ಗೀತೆ: ರಂಗೇನಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟು…

1970-80ರ ದಿನಗಳಲ್ಲಿ ಚಿತ್ರರಂಗದ ಎಲ್ಲ ಚಟುವಟಿಕೆಗಳೂ ನಡೆಯುತ್ತಿದ್ದುದು ಮದ್ರಾಸಿನಲ್ಲಿ ನಿಜ. ಆದರೆ, ಸಂಭಾಷಣೆ, ಹಾಡುಗಳೆಲ್ಲ ಸಿದ್ಧವಾಗುತ್ತಿದ್ದುದು ಕರ್ಣಾಟಕದ ಪರಿಸರದಲ್ಲೇ. ಅದರಲ್ಲೂ ಪುಟ್ಟಣ್ಣ ಕಣಗಾಲ್ ಥರದ ನಿರ್ದೇಶಕರು ಸಂಗೀತ ನಿರ್ದೇಶಕರು ಹಾಗೂ ಗೀತೆ ರಚನೆಕಾರರನ್ನು ಜತೆಗಿಟ್ಟುಕೊಂಡು ಯಾವುದಾದರೂ ಪ್ರಶಾಂತ ತಾಣಕ್ಕೆ ಪಿಕ್ನಿಕ್ ಹೋಗಿಬಿಡುತ್ತಿದ್ದರು. ಅಲ್ಲಿ ಮತ್ತೆ ಸಿನಿಮಾ ಕುರಿತು ಧ್ಯಾನಿಸುತ್ತಾ ಹಾಡು ಬರೆಸಲು; ಬರೆದ ಹಾಡಿಗೆ ರಾಗ ಸಂಯೋಜಿಸಲು ನಿಲ್ಲುತ್ತಿದ್ದರು. ಅದರಲ್ಲೂ ಸಂಗೀತ ನಿರ್ದೇಶಕರು ಹಾಗೂ ಗೀತೆರಚನೆಕಾರರನ್ನು ಒಂದಿಷ್ಟು ಹೆಚ್ಚಿಗೆ ಹೊಗಳಿದರೆ ಅಷ್ಟರ ಮಟ್ಟಿಗಿನ ಒಳ್ಳೆಯ ಕೆಲಸ ತೆಗೆಯಬಹುದು ಎಂದು ಚೆನ್ನಾಗಿ ತಿಳಿದಿದ್ದ ಪುಟ್ಟಣ್ಣ ಕಣಗಾಲ್, ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರೊಂದಿಗೆ ಮಾತಿಗೆ ನಿಂತರೆ- `ನಾನು ಅಕ್ಬರ್ ಬಾದಶಹ, ನೀನೇ ತಾನ್ಸೇನ್!’ ಎನ್ನುತ್ತಿದ್ದರು. ಜತೆಗಿರುವಾತ ಜೀವದ ಗೆಳೆಯ ವಿಜಯ ನಾರಸಿಂಹ ಆಗಿದ್ದರೆ- `ನಾನು ಭೋಜರಾಜ, ನೀವು ಮಹಾಕವಿ ಕಾಳೀದಾಸ… ಹುಂ, ಬರೀರಿ ಕವಿಗಳೇ, ಈ ಪುಟ್ಟಣ್ಣ ಒಪ್ಪುವಂಥ ಹಾಡು ಬರೀರಿ’ ಎಂದು ಹುರಿದುಂಬಿಸುತ್ತಿದ್ದರು.

`ಬಿಳೀಹೆಂಡ್ತಿ’ ಚಿತ್ರಕ್ಕೆ ಹಾಡು ಬರೆಸುವ ಸಂದರ್ಭದಲ್ಲಿ ಕೆ.ಆರ್.ಎಸ್.ಗೆ ಸಮೀಪವಿದ್ದ ಒಂದು ಹೋಟೆಲಿನಲ್ಲಿ ರೂಂ ಪಡೆದುಕೊಂಡು ಪುಟ್ಟಣ್ಣ- `ನೋಡೋ ವಿಜಯಾ, ನಿನಗೇ ಗೊತ್ತಿರುವ ಹಾಗೆ ನಾನು ಸಂಪ್ರದಾಯವಾದಿ, ನಮ್ಮ ದೇಶ, ನಮ್ಮ ಭಾಷೆ, ನಮ್ಮ ಪರಿಸರ, ನಮ್ಮ ಭಾವನೆಗಳು, ನಮ್ಮ ತ್ಯಾಗ… ಈ ಎಲ್ಲವನ್ನೂ ಒಳಗೊಂಡಿರುವ ನಮ್ಮ ಸಂಸ್ಕೃತಿ ತುಂಬಾ ದೊಡ್ಡದು. ನಮ್ಮಲ್ಲಿಗೆ ಬಂದವರು, ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಗೌರವಿಸಿ ಬದುಕಬೇಕು ಅನ್ನುವವ ನಾನು. `ಬಿಳೀ ಹೆಂಡ್ತಿ’ ಚಿತ್ರದಲ್ಲಿ ನಮ್ಮ ಭಾಷೆಯ ಒಂದು ಹಾಡನ್ನು ಅಮೆರಿಕದ ಹುಡುಗಿಯಿಂದ ಹಾಡಿಸಬೇಕು ಅನ್ನೋದು ನನ್ನ ಆಸೆ. ನಾಳೆಯೋ, ನಾಡಿದ್ದೋ ನನ್ನ ಸಿನಿಮಾ ಅಮೆರಿಕದಲ್ಲಿ ಪ್ರದರ್ಶಿತವಾದರೆ, ಭಾರತೀಯರ ತ್ಯಾಗ, ಸಂಸ್ಕೃತಿ ಎಂಥಾದ್ದು ಎಂಬುದನ್ನು ಅಲ್ಲಿನ ಜನ ಒಂದು ಹಾಡಿಂದಲೇ ತಿಳಿದುಬಿಡಬೇಕು. ಅಂಥದೊಂದು ಹಾಡು ಬರಿ’ ಅಂದರಂತೆ.

***

ಪುಟ್ಟಣ್ಣ ಅವರೇನೋ `ಹೀಗ್ ಹೀಗೆ, ಒಂದು ಹಾಡು ಬರೆದುಕೊಡಯ್ಯ. ಅದು ಭಾರತದ ಹುಡುಗಿಯೊಬ್ಬಳು ಅಮೆರಿಕದ ಹುಡುಗಿಯೊಬ್ಬಳಿಗೆ ಹೇಳಿಕೊಡುವ ಮಾದರಿಯಲ್ಲಿರಲಿ’ ಅಂದುಬಿಟ್ಟರು. ಆದರೆ, ಆ ಹಾಡನ್ನು, ಅದರಲ್ಲೂ ಮುಖ್ಯವಾಗಿ ಪಲ್ಲವಿಯನ್ನು ಹೇಗೆ ಶುರುಮಾಡುವುದು ಎಂಬುದೇ ವಿಜಯ ನಾರಸಿಂಹ ಅವರಿಗೆ ಸಮಸ್ಯೆಯಾಯಿತಂತೆ. ಹೀಗಿದ್ದಾಗಲೇ, ಒಂದು ಕಥೆಯನ್ನು ಹಾಡಿನ ರೂಪದಲ್ಲಿ ಹೇಳಿಕೊಟ್ಟರೆ ಹೇಗೆ ಎಂಬ ದಿವ್ಯ ಯೋಚನೆಯೊಂದು ವಿಜಯ ನಾರಸಿಂಹ ಅವರಿಗೆ ಬಂತಂತೆ. ತಕ್ಷಣವೇ `ರಂಗೇನಹಳ್ಳಿಯಾಗೆ…’ ಎಂದು ಶುರುವಿಟ್ಟುಕೊಂಡಿದ್ದಾರೆ. ನಂತರ, ಹಳ್ಳಿಯ ಕಥೆ ಅಂದ ಮೇಲೆ ಹುಡುಗ ಹುಡುಗಿಗೆ ಭಾಷೆ ಕೊಡುವುದು, ಪ್ರೀತಿಯ ನಾಟಕ ಆಡುವುದು, ನಂತರ ತುಂಬಾ ದುಡ್ಡು ಸಂಪಾದಿಸಿಕೊಂಡು ಬರ್ತೀನಿ ಎಂದು ಹೇಳಿ ದೇಶಾಂತರ ಹೋಗಿಬಿಡುವುದು, ಎಷ್ಟೋ ದಿನಗಳ ನಂತರ, ಬೇರೆ ಊರಿನ ಹುಡುಗಿಯೊಂದಿಗೆ ಊರಿಗೆ ಮರಳಿ ಬರುವುದು… ಇದೆಲ್ಲ ನಮ್ಮ ಬಹುಪಾಲು ಹಳ್ಳಿಗಳಲ್ಲಿ ನಡೆವ ಕಥೆಯೇ ಅಂದುಕೊಂಡರಂತೆ. ಯಾವಾಗ, ಸಿನಿಮಾದ ಕಥೆಗೂ, ನಿಜ ಬದುಕಿನಲ್ಲಿ ನಡೆವ ಕಥೆಗೂ ತಾಳೆಯಾಗುತ್ತಿದೆ ಅನ್ನಿಸಿತೋ, ಆ ಕ್ಷಣದಿಂದಲೇ ಒಂದೊಂದೇ ಹೊಸ ಸಾಲುಗಳು ವಿಜಯ ನಾರಸಿಂಹ ಅವರ ಬಳಿಗೆ ಒಂದೊಂದೇ ಹೆಜ್ಜೆಯಿಡುತ್ತಾ ಬಂದುಬಿಟ್ಟವು. ಕಡೆಗೆ- ತನ್ನ ಹುಡುಗನಿಗೆ ಮದುವೆಯಾಗಿದ್ದು; ಮೊದಲ ರಾತ್ರಿಯ ಶಾಸ್ತ್ರ ಕೂಡ ಮುಗಿದು ಹೋಗಿದ್ದು ತಿಳಿದು ಕಥಾನಾಯಕೆ- ತನ್ನ ದುರಾದೃಷ್ಟಕ್ಕೆ ಒಳಗೇ ದುಃಖಿಸುತ್ತ-ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಕೆ ಹಾರೈಸುತ್ತ; ಎಲ್ಲರ ಒಳಿತಿಗಾಗಿ ಮನೆ ದೇವರನ್ನು ಪ್ರಾರ್ಥಿಸುವುದರೊಂದಿಗೆ ಹಾಡು ಮುಕ್ತಾಯವಾಗುವಂತೆ ನೋಡಿಕೊಂಡರು ವಿಜಯನಾರಸಿಂಹ.

ಹೀಗೆ, ಹಾಡು ಬರೆದು ಮುಗಿಸಿದ ನಂತರ ಮತ್ತೆ ಪುಟ್ಟಣ್ಣ, ವಿಜಯಭಾಸ್ಕರ್, ವಿಜಯ ನಾರಸಿಂಹ ಜೋಡಿ ಚರ್ಚೆಗೆ ಕೂತರಂತೆ. ಹಾಡಿನ ಮೊದಲ ಸಾಲಿನಲ್ಲೇ ಏನೋ ವಿಶೇಷ ಆಕರ್ಷಣೆ ಇರಬೇಕು ಎಂದ ಪುಟ್ಟಣ್ಣ, ಇವಳೇನೋ ಕನ್ನಡದಲ್ಲಿ ಹಾಡು ಹೇಳಿಕೊಡ್ತಾಳೆ. ಅವಳಿಗೆ ತಕ್ಷಣವೇ ನಾಲಿಗೆ ತಿರುಗಬೇಕಲ್ಲ? ಒಂದು ಹಾಡನ್ನು ವಿದೇಶಿ ಹುಡುಗಿಯೊಬ್ಬಳು ಮೊದಲ ಬಾರಿಗೇ ಹಾಗೆ ಸ್ಪಷ್ಟವಾಗಿ ಹೇಳೋದು ಅಸಾಧ್ಯ. ಹಾಗಾಗಿ ಮೊದಲು ತಪ್ಪು ಉಚ್ಛಾರ ಬರಲಿ. ನಂತರ ಕಥಾನಾಯಕಿ ಅದನ್ನು ತಿದ್ದಿದ ಹಾಗಿರಲಿ ಎಂದರಂತೆ. ಈ ಮಾತು ಕೇಳಿ- ವಾಹ್ ವಾಹ್, ಬ್ರಿಲ್ಲಿಯಂಟ್ ಐಡಿಯಾ ಎಂದು ಉದ್ಗರಿಸಿದ ವಿಜಯ ಭಾಸ್ಕರ್- ಕವಿಗಳೇ ಇರುವ ಪದದಲ್ಲೇ ಸ್ವಲ್ಪ ಟ್ವಿಸ್ಟ್ ಇಡೋಣ’ ಅಂದರಂತೆ. ನಂತರದ ಐದೇ ನಿಮಿಷದಲ್ಲಿ `ರಂಗೇನ ಅಳ್ಳಿಯಾಗೆ…’ ಅಳ್ಳಿಯಲ್ಲಮ್ಮ… ಹಳ್ಳಿ ಹಳ್ಳಿ…’ ಎಂಬ ದಿವ್ಯ ಸಾಲು ಹಾಡಿನ ಪಲ್ಲವಿಯಲ್ಲಿ ಸೇರಿಕೊಂಡಿತು.

***

ಹಾಗೊಂದು ಹಾಡು ಬರೆದದ್ದೇನೋ ಆಯ್ತು. ನಂತರ ಅದನ್ನು ಹಾಡಿಸಿದರಲ್ಲ? ಅದು ಇನ್ನೊಂದು ಕಥೆ. ಈ ಹಾಡು ಹಾಡಿಸಲು ಕನ್ನಡತಿ ಕಸ್ತೂರಿ ಶಂಕರ್ ಅವರನ್ನೇನೋ ಪುಟ್ಟಣ್ಣ ಕಣಗಾಲ್ ಆಯ್ಕೆ ಮಾಡಿದರು. ಆದರೆ ಅವರಿಗೆ ಮೊದಲೇ ಹೇಳಿದ್ದರಂತೆ: `ನೋಡಮ್ಮಾ, ನಿನ್ನ ಧ್ವನಿ ಆರತಿಯ ಧ್ವನಿಗೆ ಹೊಂದಾಣಿಕೆಯಾದರೆ ಮಾತ್ರ ಹಾಡಿಸ್ತೀನಿ. ಇಲ್ಲ ಅಂದ್ರೆ ಇಲ್ಲ. ಈಗ ಮಾದ್ರಾಸಿಗೆ ಕರ್ಕೊಂಡು ಹೋಗ್ತಾ ಇರೋದು ವಾಯ್ಸ್ ಟೆಸ್ಟ್ ಗೆ ಅಂತ ನೆನಪಿರಲಿ…’

ಈ ಕರಾರಿಗೆ ಒಪ್ಪಿದ ಕಸ್ತೂರಿ ಶಂಕರ್, ಮದ್ರಾಸಿನಲ್ಲಿ ಮೊದಲ ಎರಡು ಸಾಲು ಹಾಡಿದ್ದು ಕೇಳಿ ಪುಟ್ಟಣ್ಣ ಖುಷಿಯಾದರು. `ಅಳ್ಳಿಯಲ್ಲಮ್ಮ, ಹಳ್ಳಿ… ಹಳ್ಳಿ’ ಎಂಬ ಸಾಲನ್ನು ಮನಸ್ಸಿಗೆ ನಾಟುವಂತೆ ಹೇಳಿ ಎಂದು ತಾಕೀತು ಮಾಡಿದರು. ನಂತರ ಹಾಡಿನ ರೆಕಾರ್ಡಿಂಗ್ ಮುಗಿದ ಮೇಲೆ, ತುಂಬ ಚನ್ನಾಗಿ ಹಾಡಿದೆಯಮ್ಮ. ಈ ಚಿತ್ರದಲ್ಲಿ ಇನ್ನೊಂದು ಹಾಡಿದೆ. ಅದನ್ನೂ ನೀನೇ ಹಾಡಿಬಿಡು ಅಂದರಂತೆ! ಅದೇ-ಯಾವ ತಾಯಿಯು ಪಡೆದ ಮಗಳಾದರೇನು?’

ಇದನ್ನು ನೆನಪು ಮಾಡಿಕೊಂಡು ಕಸ್ತೂರಿ ಶಂಕರ್ ಹೇಳುತ್ತಾರೆ: ಪುಟ್ಟಣ್ಣ ಕಣಗಾಲರ ಸ್ಪರ್ಶದಲ್ಲಿ ಅಂಥದೊಂದು ಮಾಂತ್ರಿಕತೆ ಇತ್ತು. ಹಾಗಾಗಿ ಹಾಡುಗಳೆಲ್ಲ ಅಮರವಾದವು, ಮಧುರವಾದವು ಮತ್ತು ಒಂದೊಂದು ಹಾಡೂ ಒಂದೊಂದು ಕಥೆಯನ್ನು ತಮ್ಮೊಳಗೇ ಉಳಿಸಿಕೊಂಡವು…’

ತುಂಬ ಸತ್ಯದ ಮಾತೆಂದರೆ ಇದೇ… ಅಲ್ಲವೆ?

‍ಲೇಖಕರು avadhi

July 9, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

4 ಪ್ರತಿಕ್ರಿಯೆಗಳು

 1. mayura

  As usual a brilliant article from Manikanth.
  Great Job. Can you also please write more about our great music directors M Rangarao, Vijayabhaskar, G K Venkatesh, Upendrakumar.

  Thanks

  Mayura

  ಪ್ರತಿಕ್ರಿಯೆ
 2. ಸುಬ್ರಾವ್

  ಮಣಿಕಾಂತ್ ನಿಮ್ಮ ಲೇಖನದ ಟೈಟಲ್ ನಲ್ಲಿ “ಹಲ್ಲಿ ಅಲ್ಲಮ್ಮಾ ಹಳ್ಳಿ ಹಳ್ಳಿ…” ಅಂತ ಇರಬೇಕಿತ್ತು.

  ಪ್ರತಿಕ್ರಿಯೆ
 3. Prashanth M

  ಈ ಹಾಡು ಕೇಳೋವಾಗ ಮೊದಲ ಎರಡು ಸಾಲು ಕೇಳಲಿಲ್ಲ ಅಂದ್ರೆ ಎನೋ ಕಳೆದುಕೊಂಡಂತಹ ಅನುಭವವಾಗುತ್ತೆ… ಬಹಳ ಚೆನ್ನಾಗಿ ಬರೆದಿದ್ದೀರ….
  ಈ ಹಾಡು ಕೇಳಿ ಬಹಳ್ ದಿನಗಳಗಿದ್ವು… ನೆನಪಿಸಿದ್ದಕ್ಕೆ ಧನ್ಯವಾದಗಳು… ಇಗೋ ಹೊರಟೆ ಹಾಡು ಕೇಳೋದಿಕ್ಕೆ,,, 🙂

  ಪ್ರತಿಕ್ರಿಯೆ
 4. ಕಂಡಕ್ಟರ್ ಕಟ್ಟಿಮನಿ 45E

  ಮತ್ತೊಂದು ಹಾಡಿನ ಜಾಡು ತುಂಬಾ ಇಷ್ಟವಾಯಿತು.
  ಕಂಡಕ್ಟರ್ ಕಟ್ಟಿಮನಿ 45E

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: