ಮಣಿಕಾಂತ್ ಬರೆಯುತ್ತಾರೆ: ಇದೇನ ಸಭ್ಯತೆ, ಇದೇನ ಸಂಸ್ಕೃತಿ

ನಿಶ್ಶಬ್ದದ ಹಿಂದಿನ ಶಬ್ದವನ್ನು ಜನ ಚಪ್ಪಾಳೆ ಹೊಡೆದು ಸ್ವಾಗತಿಸಿದ್ದರು! ಎ ಆರ್ ಮಣಿಕಾಂತ್ ಇದೇನ ಸಂಸ್ಕೃತಿ, ಇದೇನ ಸಭ್ಯತೆ… ಚಿತ್ರ:  ಮಣ್ಣಿನ ಮಗ, ಗೀತೆ ರಚನೆ: ಗೀತಪ್ರಿಯ ಸಂಗೀತ: ವಿಜಯಭಾಸ್ಕರ್, ಗಾಯನ: ಪಿ. ಸುಶೀಲ ಇದೇನ ಇಂದು ಸತ್ಯತೆ ಇದೇನ ನಮ್ಮ ಜಾಗೃತಿ ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ            ||ಪ|| ಎನಿತೊ ದೇಶಭಕ್ತರು ಹರಿಸಿ ತಮ್ಮ ನೆತ್ತರು ದಾಸ್ಯದಿಂದ ನಮ್ಮನು ಬಿಡಿಸಿ ಅಮರರಾದರು ಅಮರ ರಾಮರಾಜ್ಯದ ಕನಸ ಕಂಡೆವೆಂದು ಬರಿಯ ಭೇದ ಭಾವವ ಕಾಣುತಿಹೆವು ಇಂದು             ||೧|| ದೇಶವನ್ನು ಕಾಯುತಿಹರು ಗಡಿಗಳಲ್ಲಿ ಯೋಧರು ನಮಗೆ ಅನ್ನ ನೀಡಲು ದುಡಿಯುತಿಹ ರೈತರು ಅವರ ತ್ಯಾಗ ದುಡಿಮೆಯ ಪರಿವೆ ನಮಗೆ ಇಲ್ಲ ಗಾಂ ನೆಹರು ಶಾಸ್ತ್ರಿಯನ್ನು ನಾವು ಮರೆತೆವಲ್ಲ?         ||೨|| ದೇಶದ ಸಮಸ್ಯೆಗಳು ಇರಲು ಕೋಟಿ ಕೋಟಿ ಅದನು ಮರೆತು ಸಾಗಿದೆ ಫ್ಯಾಷನ್ನಿನ ಪೈಪೋಟಿ ಹಲವರಿಗೆ ಕುಡಿಯಲು ಗಂಜಿಗೂ ಗತಿ ಇಲ್ಲ ತಿಂದು ತೇಗಿ ಕೆಲವರು ಅನ್ನ ಎಸೆವರಲ್ಲ ಮಾನ ಮುಚ್ಚಿಕೊಳ್ಳಲು ಕೆಲವರಿಗೆ ಬಟ್ಟೆ ಇಲ್ಲ ಪೂರ್ತಿ ಮೈ ಮುಚ್ಚಲು ಕೆಲವರಿಗೆ ಮನಸಿಲ್ಲ             ||೩|| ಹೆಣ್ಣನ್ನು ಪೂಜ್ಯ ಭಾವದಿಂದ ಕಂಡ ದೇಶ ನಮ್ಮದು. ಹೆಣ್ಣೆಂದರೆ-ದುರ್ಗಿ, ಕಾಳಿಮಾತೆ, ಚಾಮುಂಡಿ ಎಂದೆಲ್ಲ ಪೂಜಿಸಿದ ನಾಡು ನಮ್ಮದು. ಸಂಸ್ಕೃತಿ, ಸಂಪ್ರದಾಯ ಪಾಲನೆ, ಆಚಾರ-ವಿಚಾರಗಳ ಮಾತು ಬಂದಾಗ ನಮ್ಮ ದೇಶದ ಹೆಂಗಸರ ಔದಾರ್ಯ, ತ್ಯಾಗ ಹಾಗೂ ಅರ್ಪಣಾ ಮನೋಭಾವವನ್ನು ಉದಾಹರಿಸುವ ನಾಡು ನಮ್ಮದು. ಆದರೆ, ಈಚೀಚಿನ ದಿನಗಳಲ್ಲಿ ಎಲ್ಲವೂ ಬದಲಾಗಿಹೋಗಿದೆ. ಪಾಶ್ಚಾತ್ಯ ಜೀವನ ಶೈಲಿಗೆ ಜನ ಮರುಳಾಗಿದ್ದಾರೆ. ಅವರಂತೆಯೇ ಬದುಕಲು ಹಾತೊರೆಯುತ್ತಿದ್ದಾರೆ. ಸಿಗರೇಟು ಸೇದುವುದು ಈಗಿನ ಕಾಲದ ಅದೆಷ್ಟೋ ಹುಡುಗಿಯರಿಗೆ ಫ್ಯಾಷನ್ ಆಗಿ ಹೋಗಿದೆ. ‘ಗುಂಡು’ ಹಾಕುವುದು ಹವ್ಯಾಸವಾಗಿದೆ.  ಅಂಗಾಂಗವೆಲ್ಲ ಎದ್ದು ಕಾಣುವಂತೆ ಬಟ್ಟೆ ತೊಡುವುದು ತುಂಬಾ ಜನಕ್ಕೆ ಅಭ್ಯಾಸವಾಗಿ ಹೋಗಿದೆ. ಇದನ್ನೆಲ್ಲ ಕಂಡಾಗ- ‘ ಅಂಥ ಬೆಡಗಿಯರ ಮುಂದೆ ನಿಂತು- ‘ ಇದೇನ ಸಂಸ್ಕೃತಿ, ಇದೇನ ಸಭ್ಯತೆ’ ಎಂದು ಪ್ರಶ್ನಿಸಬೇಕು ಅನಿಸುತ್ತದೆ. ಇವತ್ತಿನ ಸಂದರ್ಭಕ್ಕೆ ಹೆಚ್ಚು ಪ್ರಸ್ತುತ ಎನಿಸುವ ‘ ಇದೇನ ಸಂಸ್ಕೃತಿ ಇದೇನ ಸಭ್ಯತೆ’ ಹಾಡು ಮಣ್ಣಿನ ಮಗ ಚಿತ್ರದ್ದು. ಈ ಚಿತ್ರದ ಕೆಲವು ವಿಶೇಷಗಳನ್ನು ಗಮನಿಸಿ: ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೈ ಜವಾನ್, ಜೈ ಕಿಸಾನ್ ಘೋಷಣೆಯ ಲೋಕೋಕ್ತಿಯನ್ನು ಸಮೀಕರಿಸಿ ತಯಾರಾದ ಚಿತ್ರ ‘ಮಣ್ಣಿನ ಮಗ’. ರಾಜ್ಯಪ್ರಶಸ್ತಿ ಹಾಗೂ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡ ಹೆಚ್ಚುಗಾರಿಕೆ ಈ ಚಿತ್ರದ್ದು. ಅಷ್ಟೇ ಅಲ್ಲ, ೧೯೬೮ರ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ಏಕಕಾಲಕ್ಕೆ ಎರಡು ಚಿತ್ರಮಂದಿರಗಳಲ್ಲಿ (ಕಪಾಲಿ ಮತ್ತು ಭಾರತ್) ತೆರೆಕಂಡು, ಎರಡೂ ಕಡೆ ನೂರು ದಿನ ಓಡಿದ ಮೊದಲ ಚಲನಚಿತ್ರ ಎಂಬ ಇನ್ನೊಂದು ಹೆಚ್ಚುಗಾರಿಕೆ ಕೂಡ ‘ಮಣ್ಣಿನ ಮಗ’ ಚಿತ್ರದ್ದು. ‘ಅದೊಂದು ಹಳ್ಳಿ. ದುಡಿಮೆಯೇ ಬದುಕು ಎಂದುಕೊಂಡಿದ್ದ ಅಲ್ಲಿನ ಕೆಲವರಿಗೆ ಪಟ್ಟಣದ ಬದುಕಿನ ವ್ಯಾಮೋಹ ಅಮರಿಕೊಳ್ಳುತ್ತದೆ. ಅವರು, ನಗರ ಜೀವನದ ಬೆಡಗು ಹುಡುಕಿಕೊಂಡು ವಲಸೆ ಬರುತ್ತಾರೆ, ಮತ್ತೊಂದು ಕಡೆಯಲ್ಲಿ ವಿದ್ಯಾವಂತರಾದ ಯುವಕರು ಕೂಡಾ ಹಳ್ಳಿಯನ್ನು ಮರೆಯುತ್ತಾರೆ. ಪರಿಣಾಮ, ಅವಿದ್ಯಾವಂತರು ಹಾಗೂ ಮುಗ್ಧರು ಮಾತ್ರ ಹಳ್ಳಿಯಲ್ಲಿ ಉಳಿಯುತ್ತಾರೆ. ಇಂಥ ಸಂದರ್ಭದಲ್ಲಿ, ಪರಿಸ್ಥಿತಿಯ ದುರ್ಲಾಭ ಪಡೆಯುವ ಶ್ರೀಮಂತರು ಅಮಾಯಕರನ್ನು ಬಗೆಬಗೆಯಲ್ಲಿ ಶೋಷಿಸುತ್ತಾರೆ. ಇದನ್ನು ಪ್ರಶ್ನಿಸಿ ಕಥಾನಾಯಕ, ನ್ಯಾಯಕ್ಕಾಗಿ ಸಿಡಿದೇಳುತ್ತಾನೆ…’ ಇದಿಷ್ಟು ಮಣ್ಣಿನ ಮಗ ಚಿತ್ರದ ಕಥೆ. ಮತ್ತೊಂದು ಸ್ವಾರಸ್ಯ ಕೇಳಿ : ಈ ಚಿತ್ರ ಬಿಡುಗಡೆಯಾದಾಗ ಅದಕ್ಕೆ ತೆರಿಗೆ ವಿನಾಯಿತಿಯ ಸೌಲಭ್ಯ ದಕ್ಕಿರಲಿಲ್ಲ. ಚಿತ್ರ ತೆರೆಕಂಡ ದಿನದಿಂದಲೇ ತಂಡೋಪತಂಡವಾಗಿ ಬಂದು ನೋಡಿದ ಜನ, ಸದಾಶಯ ಹೊಂದಿರುವ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು. ಚಿತ್ರರಸಿಕರೇ ಬೀದಿಗಿಳಿದು ಸಿನಿಮಾ ಒಂದಕ್ಕೆ ತೆರಿಗೆ ವಿನಾಯ್ತಿ ಕೊಡಿಸಿದ ಉದಾಹರಣೆ ಮತ್ತೊಂದಿರಲಾರದೇನೋ… ಇಂಥ ಹಿನ್ನೆಲೆಯ ‘ಮಣ್ಣಿನ ಮಗ’ ಚಿತ್ರದಲ್ಲಿ ‘ಇದೇನ ಸಂಸ್ಕೃತಿ, ಇದೇನ ಸಭ್ಯತೆ’ ಬಳಸಿದ್ದಾದರೂ ಏಕೆ? ಚಿತ್ರದಲ್ಲಿ ತುಂಬ ನಿಧಾನವಾಗಿ ಕೇಳಿಬರುವ ಈ ಹಾಡು ಹುಟ್ಟಿದ ಸಂದರ್ಭದ ಹಿನ್ನೆಲೆಯಾದರೂ ಏನು? ಇವತ್ತಿನ ಸಂದರ್ಭಕ್ಕೆ ಹೆಚ್ಚು ಪ್ರಸ್ತುತ ಎನಿಸುವಂಥ ಆ ಹಾಡನ್ನು ನಲವತ್ತೆರಡು ವರ್ಷಗಳ ಹಿಂದೆಯೇ ಹೇಗೆ ಬರೆದರು ಗೀತಪ್ರಿಯ? ಈ ಹಾಡು ಬರೆದ ಸಂದರ್ಭದಲ್ಲಿ ಅವರ ಮನದಲ್ಲಿದ್ದ ಸಂಗತಿಗಳಾದರೂ ಯಾವುವು? ಇಂಥವೇ ಕುತೂಹಲದ ಪ್ರಶ್ನೆಗಳಿಗ ಗೀತಪ್ರಿಯ ಅವರು ಉತ್ತರಿಸಿದ್ದು ಹೀಗೆ: ‘ಪರಕೀಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ಸಂಸ್ಕೃತಿಯನ್ನು ಅವಹೇಳನ ಮಾಡುವ ಪ್ರವೃತ್ತಿ ೧೯೬೮ರ ವೇಳೆಯಲ್ಲೇ ಆರಂಭವಾಗಿತ್ತು. ಪಾರ್ಟಿಯ ನೆಪದಲ್ಲಿ ತುಂಡು ಉಡುಗೆ, ಸ್ಲೀವ್‌ಲೆಸ್ ರವಿಕೆ ತೊಟ್ಟು ಮೈ ಪ್ರದರ್ಶಿಸುವ ಚಾಳಿ ಶುರುವಾಗಿತ್ತು. ಒಂದೆಡೆ ಬಡವರು ತುತ್ತು ಅನ್ನಕ್ಕೆ ಪರದಾಡುತ್ತಿದ್ದರು. ಇನ್ನೊಂದು ಕಡೆಯಲ್ಲಿ ಶ್ರೀಮಂತರ ಮದುವೆಗಳಲ್ಲಿ ಬಡಿಸಿದ ಅನ್ನ ಅರ್ಧಕ್ಕರ್ದ ಎಲೆಯಲ್ಲೇ ಉಳಿಯುತ್ತಿತ್ತು. ತುತ್ತು ಅನ್ನದ ಆಸೆಯಿಂದ ಮದುವೆ ಮನೆಗೆ ಹೋದ ನಿರ್ಗತಿಕರು, ಭಿಕ್ಷುಕರನ್ನು ಬೆತ್ತ ತೋರಿಸಿ ಓಡಿಸಲಾಗುತ್ತಿತ್ತು… ‘ಕೂಡಿ ಬಾಳೋಣ, ಹಂಚಿಕೊಂಡು ತಿನ್ನೋಣ’ ಎಂಬಂಥ ಸಂಸ್ಕೃತಿ ನಮ್ಮದು. ಹಾಗೆಯೇ, ಹೆಣ್ಣನ್ನು ಪೂಜ್ಯ ಭಾವನೆಯಿಂದ ಕಾಣುವ ದೇಶ ನಮ್ಮದು. ಇದನ್ನು ಅರಿತು ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂದು ಎಲ್ಲರಿಗೂ ಚೀರಿ ಹೇಳಬೇಕು ಅನಿಸುತ್ತಿತ್ತು. ಬಹಿರಂಗವಾಗಿ ಹೀಗೆ ಹೇಳಿದರೆ ನನ್ನ ಮಾತು ಯಾರನ್ನೂ ತಟ್ಟುವುದಿಲ್ಲ. ಅದರ ಬದಲಿಗೆ ಸಿನಿಮಾದಲ್ಲಿ ಒಂದು ಹಾಡಿನ ಮೂಲಕ ಈ ವಿಷಯ ಹೇಳಬಹುದು ಅನ್ನಿಸಿತು… ಮುಂದೆ ‘ಮಣ್ಣಿನ ಮಗ’ ಚಿತ್ರ ಆರಂಭಿಸಿದೆನಲ್ಲ? ಆಗ ಈ ವಿಷಯವನ್ನೇ ನನ್ನ ಹಿತೈಷಿಗಳೂ, ಸಂಗೀತ ನಿರ್ದೇಶಕರೂ ಆಗಿದ್ದ ವಿಜಯ ಭಾಸ್ಕರ್ ಅವರೊಂದಿಗೆ ಹೇಳಿಕೊಂಡೆ. ‘ಹೊಕ್ಕಳು ಕಾಣಿಸುವಂತೆ ಸೀರೆ ಉಡೋದು, ಮೊಣಕಾಲು ಕಾಣ್ಸೋ ಥರಾ ಬಟ್ಟೆ ಹಾಕೋದು, ಹೆಂಗಸರೂ ಕುಡಿಯೋದು, ಸಿಗರೇಟು ಸೇದೋದು, ಪಾರ್ಟಿಗಳಲ್ಲಿ ಮೈಮರೆತು ಕುಣಿಯೋದು… ಹೀಗೆಲ್ಲ ಮಾಡ್ತಾರಲ್ಲ? ಇದ್ಯಾವ ಸಂಸ್ಕೃತಿ, ಇದು ಸಭ್ಯತೇನಾ ಸಾರ್? ಒಂದು ವೇಳೆ ಆ ಭಾರತ ಮಾತೆ ನಿಜವಾಗ್ಲೂ ಜೀವ ತಳೆದು ಬಂದ್ರೆ ಇವನ್ನೆಲ್ಲ ಕಂಡು ಅದೆಷ್ಟು  ನೊಂದ್ಕೋತಾಳೋ…’ ಎಂದೆಲ್ಲ ಹೇಳಿದೆ. ಈ ಭಾವವನ್ನೆಲ್ಲ ಸೇರಿಸಿ ಒಂದು ಹಾಡು ಬರೀತೀನಿ ಸಾರ್ ಎಂದೂ ಸೇರಿಸಿದೆ. ‘ನಿಮ್ಮ ಐಡಿಯಾ ತುಂಬಾ ಚನ್ನಾಗಿದೆ. ಬರೀರಿ ಬರೀರಿ’ ಎಂದರು ವಿಜಯ ಭಾಸ್ಕರ್. ಅವತ್ತೇ ‘ಇದೇನ ಸಂಸ್ಕೃತಿ ಇದೇನ ಸಭ್ಯತೆ’ ಹಾಡು ಬರೆದೆ. ಈ ಹಾಡು ಬಳಕೆಗೆ ಹೀಗೊಂದು ಸನ್ನಿವೇಶ ಸೃಷ್ಟಿಸಿಕೊಂಡೆ: ಕಥಾನಾಯಕಿಯ ಬಂಧುಗಳ ಹುಟ್ಟುಹಬ್ಬದ ಪಾರ್ಟಿ ಇರುತ್ತದೆ. ಆ ಪಾರ್ಟಿಗೆ ಹಳ್ಳಿಯಿಂದ ಬಂದಿದ್ದ ಕಥಾನಾಯಕನನ್ನೂ ಆಹ್ವಾನಿಸಿರುತ್ತಾಳೆ ನಾಯಕಿ. ಆ ಪಾರ್ಟಿಯಲ್ಲಿ ಹೆಣ್ಣು ಮಕ್ಕಳು ಅರೆಬರೆ ಬಟ್ಟೆ ಧರಿಸಿ ಎಗ್ಗು ಸಿಗ್ಗಿಲ್ಲದೆ ಕುಣಿಯುತ್ತಿರುತ್ತಾರೆ. ಅದನ್ನು ಕಂಡ ನಾಯಕಿ ಬೇಸರಗೊಂಡು-‘ನಿಲ್ಲಿಸಿ’ ಅನ್ನುತ್ತಾಳೆ. ನಂತರವೇ ಹಾಡು ಶುರುವಾಗುತ್ತದೆ: ಇದೇನ ಸಂಸ್ಕೃತಿ, ಇದೇನ ಸಭ್ಯತೆ…’ ಕಥಾನಾಯಕಿ ಪಾರ್ಟಿಗೆ ಬರುತ್ತಾಳಲ್ಲ? ಆಗ ಎಲ್ಲವೂ ಪಾಶ್ಚಾತ್ಯ ಸಂಗೀತದ ಧಾಟಿಯಲ್ಲೇ ನೃತ್ಯ ನಡೆಯುತ್ತದೆ. ಅದನ್ನು ಕಂಡ ನಾಯಕ ಬೇಸರ ಹಾಗೂ ಸಿಟ್ಟಿಂದ ‘ನಿಲ್ಲಿಸಿ’ ಎನ್ನಬೇಕು. ತಕ್ಷಣವೇ ಡ್ಯಾನ್ಸ್ ಹಾಗೂ ಹಿನ್ನೆಲೆ ಸಂಗೀತ ನಿಂತುಹೋಗಿ ಪಾರ್ಟಿಯಲ್ಲಿದ್ದ ಅಷ್ಟೂ ಜನರ ಮುಖವನ್ನು ಕ್ಲೋಸಪ್‌ನಲ್ಲಿ ತೋರಿಸಬೇಕು. ನಂತರದ ಹತ್ತು ಸೆಕೆಂಡ್‌ಗಳು ನಿಶ್ಶಬ್ದ ನಿಶ್ಶಬ್ದ. ಆ ನಿಶ್ಶಬ್ದದ ಅಲೆಗಳನ್ನು ಭೇದಿಸಿ- ‘ಇದೇನ ಸಭ್ಯತೆ’ ಹಾಡು ಶುರುವಾಗಬೇಕು ಎಂಬುದು ನನ್ನ ಕಲ್ಪನೆಯಾಗಿತ್ತು. ಸಂಕಲನ ಕಾರರಾಗಿದ್ದ ಬಾಲ್. ಜಿ. ಯಾದವ್ ಹಾಗೂ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರೊಂದಿಗೆ ಇದನ್ನೆಲ್ಲ ಹೇಳಿಕೊಂಡೆ. ‘ನಿಲ್ಲಿಸಿ’ ಎಂದು ನಾಯಕಿ ಕೂಗಿದ ನಂತರ ನಿಶ್ಶಬ್ದವೇ ಇರಲಿ ಸರ್ ಎಂದು ವಿನಂತಿಸಿಕೊಂಡೆ. ಈ ಹಾಡಿಗೆ ನಿಧಾನಗತಿಯಲ್ಲಿ ಸಾಗುವ ಟ್ಯೂನ್ ಬೇಕು ಎಂದು ಕೇಳಿಕೊಂಡೆ. ಐದು ನಿಮಿಷಗಳ ಅವಯ ಈ ಹಾಡಿಗೆ, ನಾಲ್ಕು ದಿನ ಯೋಚಿಸಿ, ಒಂದು ಅಪರೂಪದ ಟ್ಯೂನ್ ಕೊಟ್ಟರು ವಿಜಯ ಭಾಸ್ಕರ್. ಈ ಟ್ಯೂನ್ ಕೇಳಿದ ಹಲವರು ಮೂಗು ಮುರಿದರು. ‘ ಇಷ್ಟೊಂದು ನಿಧಾನಗತಿಯ ಹಾಡು ಕೇಳಿದ್ರೆ ಜನ ಥಿಯೇಟರಿನಲ್ಲೇ ನಿದ್ದೆ ಮಾಡಿ ಬಿಡ್ತಾರೆ’ ಎಂದರು. ಹಾಡು ಶುರುವಾಗುತ್ತಿದ್ದಂತೆಯೇ ಜನ ಥಿಯೇಟರಿನಿಂದ ಹೊರಗೆ ಹೋಗ್ತಾರೆ ನೋಡಿ ಎಂದು ಭವಿಷ್ಯ ಹೇಳಿದರು. ಹಾಡಿಗೂ ಮೊದಲು ನಿಶ್ಶಬ್ದವಿದೆಯಲ್ಲ? ಅದನ್ನು ತಪ್ಪಾಗಿ ಭಾವಿಸಿ, ಪ್ರೊಜೆಕ್ಷನ್ ರೂಂನತ್ತ ತಿರುಗಿ ‘ಸೌಂಡ್ ಕೊಡೋ’ ಎಂದು ಕಿರುಚ್ತಾರೆ ಜನ ಎಂದೆಲ್ಲ ಮಾತಾಡಿದರು. ಆದರೆ, ಈ ಹಾಡಿನ ಬಗ್ಗೆ, ಅದು ಉಂಟುಮಾಡಬಹುದಾದ ಪರಿಣಾಮದ ಬಗ್ಗೆ ನನಗೆ ನಂಬಿಕೆಯಿತ್ತು. ಹಾಗಾಗಿ ಕಾಲೆಳೆಯುವ ಯಾರೊಬ್ಬರ ಮಾತಿಗೂ ನಾನು ತಲೆಕೆಡಿಸಿಕೊಳ್ಳಲಿಲ್ಲ. ಚಿತ್ರದ ನಾಯಕಿಯಾಗಿದ್ದ ಕಲ್ಪನಾ, ಹಾಡಿನ ಸಂದರ್ಭದಲ್ಲಿ ಮನೋಜ್ಞವಾಗಿ ನಟಿಸಿದರು. ಇಷ್ಟೆಲ್ಲ ಆದ ನಂತರವೂ ಆ ನಿಶ್ಶಬ್ದದ ಸಂದರ್ಭದಲ್ಲಿ ಜನ ಕೂಗಾಡುವರೇನೋ ಎಂಬ ಅಳುಕು ಇದ್ದೇ ಇತ್ತು. ಆದರೆ, ಆಗಿದ್ದೇ ಬೇರೆ: ‘ನಿಲ್ಲಿಸಿ’ ಎಂಬ ಆರ್ಭಟದ ನಂತರದ ಹತ್ತು ಸೆಕೆಂಡು ನಿಶ್ಶಬ್ದ ನೆಲೆಸಿದಾಗ- ಅರೆ, ಶಬ್ದವೇ ಇಲ್ಲವಲ್ಲ ಎಂದುಕೊಂಡು ಪ್ರೇಕ್ಷಕರು ಹಿಂದೆ ಮುಂದೆ ನೋಡುತ್ತಿದ್ದಾಗಲೇ- ಇದೇನ ಸಂಸ್ಕೃತಿ, ಇದೇನ ಸಭ್ಯತೆ’ ಹಾಡು ಶುರುವಾಯಿತಲ್ಲ? ಆಗ ರೋಮಾಂಚನಗೊಂಡ ಪ್ರೇಕ್ಷಕರು, ಈ ಹೊಸ ತಂತ್ರವನ್ನು ಚಪ್ಪಾಳೆ ಹೊಡೆದು ಸ್ವಾಗತಿಸಿದರು. ಪರಿಣಾಮವಾಗಿ ಹಾಡು ಮಧುರವಾಯಿತು. ಸಿನಿಮಾ ಅಮರವಾಯಿತು. ಇಷ್ಟು ಹೇಳಿ, ಸಂತೃಪ್ತಿಯಿಂದ ನಕ್ಕರು ಗೀತಪ್ರಿಯ.]]>

‍ಲೇಖಕರು avadhi

June 12, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

2 ಪ್ರತಿಕ್ರಿಯೆಗಳು

 1. prakash hegde

  ಈಗತಾನೆ ಈ ಹಾಡು ಕೇಳಿದೆ…
  ಹಾಗು ನಿಮ್ಮ ವಿರಣೆಯನ್ನೂ ಓದಿದೆ..
  ಮನಸ್ಸೆಲ್ಲ ಭಾರವಾಯಿತು…
  ಅವರು ಅಂದು ಹೇಳಿದ ಮಾತುಗಳು..
  ಇಂದಿಗೂ ಅನ್ವಯಿಸುತ್ತದೆ ಅಲ್ವಾ ?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: